ಮೈಸೂರು, ಮಾರ್ಚ್ 26, 2026: ಭಾರತೀಯ ವಿಚಾರಧಾರೆಯು ನಿರಂತರವಾದ ಜ್ಞಾನಪ್ರವಾಹ. ಯಾವ ಚಿಂತನೆ ಸಾವಿರಾರು ವರ್ಷಗಳಿಂದ ನಾಗರಿಕತೆಯ ಭಾಗವಾಗಿ ಬಂದಿದೆಯೋ ಅದು ಇಂದಿಗೂ ಸಮಯಕ್ಕೆ ಅನುಸಾರ ಅದರ ರೂಪವನ್ನು ಬದಲಿಸಿಕೊಳ್ಳುತ್ತಾ ಸಾಗುತ್ತಿದೆ. ಯಾವುದೇ ತತ್ತ್ವಕ್ಕೆ ಒಂದು ಕೃತಿರೂಪವಿರುತ್ತದೆ. ಭಾರತೀಯ ವಿಶ್ವದರ್ಶನವನ್ನು ಲೋಕಭಾಷೆಯಲ್ಲಿ ನೀಡಬೇಕು. ಸಾಮಾನ್ಯ ಜನರೂ ಅದನ್ನು ಅಳವಡಿಸಿಕೊಳ್ಳುವಂತಾಗಬೇಕು ಎಂದು ಕೇಂದ್ರ ಉನ್ನತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.
ಪ್ರಜ್ಞಾ ಪ್ರವಾಹ ಕರ್ನಾಟಕದ ವತಿಯಿಂದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾದ ‘ಏಕಾತ್ಮ ಮಾನವ ದರ್ಶನ : ಭಾರತದ ವಿಶ್ವದೃಷ್ಟಿ’ ವಿಚಾರ ಸಂಕಿರಣದ ಎರಡನೇ ದಿನದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವಿಂದು ಪಬ್ಲಿಕ್ ಪಾಲಿಸಿ ಬಗ್ಗೆ ಮಾತನಾಡುವುದನ್ನು ನೂರಾರು ವರ್ಷಗಳ ಹಿಂದೆಯೇ ಮೈಸೂರಿನ ಸಂಸ್ಥಾನ ಅವುಗಳ ಕುರಿತು ಯೋಚಿಸಿ ಕಾರ್ಯರೂಪಕ್ಕೆ ತಂದಾಗಿತ್ತು. ದೀನ ದಯಾಳ ಉಪಾಧ್ಯಾಯರು ಏಕಾತ್ಮ ಮಾನವ ದರ್ಶನದಲ್ಲಿ ಮಾನವನ ಸಮಗ್ರತೆಯನ್ನು ಗುರುತಿಸಿದ್ದರು. ಅದರ ಆಧಾರಿತವಾಗಿಯೇ ಹಲವು ಯೋಜನೆಗಳನ್ನೂ ಕೇಂದ್ರ ಸರ್ಕಾರದ ವತಿಯಿಂದ ರೂಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು 2047ರ ಹೊತ್ತಿಗೆ ವಿಕಸಿತ ಭಾರತವನ್ನಾಗಿಸಬೇಕು ಎಂದು ಕರೆಕೊಟ್ಟಿದ್ದಾರೆ ಎಂದರು.
ಭಾರತೀಯತೆಗೆ ಹಾನಿ ಮಾಡಿದ್ದು ಮೆಕಾಲೆ ನೀಡಿದ ಶಿಕ್ಷಣ ಪದ್ಧತಿ. ಸ್ವಾತಂತ್ರ್ಯ ನಂತರವೂ ಮೆಕಾಲೆ ಭಿತ್ತಿದ ಮಾನಸಿಕತೆ ದೇಶಕ್ಕೆ ಹಾನಿ ಮಾಡಿದೆ. ಶಿಕ್ಷಣದ ಪ್ರಣಾಳಿಕೆ ಪದವಿ ಮತ್ತು ಸರ್ಟಿಫಿಕೆಟ್ ಕೇಂದ್ರಿತವಾಗಿದೆ. ಅದನ್ನು ಭಾರತೀಯ ವಿಚಾರದ ಯೋಚನಾ ಲಹರಿಯ ಅನ್ವಯ ಕಾರ್ಯರೂಪಕ್ಕೆ ತರಬೆಕು. ಅದಕ್ಕಾಗಿ ನಮ್ಮ ವಿಚಾರ ಮತ್ತು ಚಿಂತನಾ ಲಹರಿಯನ್ನು ಮಾತೃಭಾಷೆಯಲ್ಲೆ ಶಿಕ್ಷಣ ನೀಡುವ ಮೂಲಕ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಮತ್ತು ಸೃಜನಾತ್ಮಕತೆಯನ್ನು ತುಂಬುವ ಮೂಲಕ ಸಮೃದ್ಧಗೊಳಿಸಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಶೋಧಕ ಡಾ. ಎಂ ಎಸ್ ಚೈತ್ರ ಶಿಕ್ಷಣ ಕ್ಷೇತ್ರದಲ್ಲಿ ಭಾರತೀಯ ವಿಷಯಗಳ ಕುರಿತು ತಿಳಿಸುವ ಮತ್ತು ಶಿಕ್ಷಣ ಕ್ಷೇತ್ರದ ನಿರ್ವಸಾಹತೀಕರಣ ಸುಲಭದ ಕೆಲಸವಲ್ಲ. ಏಕೆಂದರೆ ಅವುಗಳನ್ನು ಮಕ್ಕಳಿಗೆ ತಲುಪಿಸುವ ಶಿಕ್ಷಕರು ಮತ್ತು ತರಗತಿ ಶಿಕ್ಷಣದ ಕುರಿತು ಇಲ್ಲಿಯವರೆಗೂ ನಾವು ಗಂಭೀರವಾಗಿ ಯೋಚಿಸಿಲ್ಲ. ಶಿಕ್ಷಕರನ್ನು ಮತ್ತು ತರಗತಿ ಶಿಕ್ಷಣದಲ್ಲಾಗಬೇಕಾದ ಬದಲಾವಣೆಯ ಕುರಿತು ಯೋಚಿಸಬೇಕಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗೆ ತನ್ನಂತೆ ತಾನಿದ್ದು ಕಲಿಯುವ ವಾತವಾರಣವನ್ನು ಕಲ್ಪಿಸುವುದಕ್ಕೆ ಸಾಧ್ಯಗುತ್ತದೆಯೇ ಎನ್ನುವುದನ್ನು ಚಿಂತಿಸಬೇಕು. ನಮ್ಮ ಶೈಕ್ಷಣಿಕ ಸಾಂಸ್ಥಿಕ ಸೋಲಿನ ಕುರಿತು ಮರುಚಿಂತನೆ ಅಗತ್ಯ. ನಮ್ಮ ರಾಷ್ಟ್ರದ ಶಿಕ್ಷಣ ಪದ್ಧತಿಯ ತಳಹದಿ ಗುರಶಿಷ್ಯ ಪರಂಪರೆ. ಅದರ ಆಧಾರದ ಮೇಲೆಯೇ ನಮ್ಮ ಸಂಸ್ಥೆಗಳನ್ನು ಭಾರತೀಯಕರಣಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ಹಲಸೆ, ಡಾ. ಶ್ಯಾಮಪ್ರಸಾದ್ ಮುಖರ್ಜಿ ಸಂಶೋಧನಾ ಫೌಂಡೇಶನ್ ನ ಟ್ರಸ್ಟಿ ಎಂ ಮದನ್ ಗೋಪಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಗತ್ತಿನ ಪರಂಪರೆಗೆ ಭಾರತದ ಶ್ರೇಷ್ಠ ಕೊಡುಗೆ ಪುರುಷಾರ್ಥಗಳು : ಶತಾವಧಾನಿ ಆರ್ ಗಣೇಶ್
ಮೈಸೂರು: ಪುರುಷಾರ್ಥಗಳು ವೈಶ್ವಿಕವಾಗಿದ್ದರೂ ತಪ್ಪಾಗಿ ನಿರೂಪಿಸಲಾಗಿದೆ ಮತ್ತು ಸರಿಯಾಗಿ ಪ್ರತಿನಿಧಿಸಲಾಗಿಲ್ಲ. ಮೈಸೂರಿನ ಖ್ಯಾತ ವಿದ್ವಾಂಸರಾದ ಹಿರಿಯಣ್ಣ ಅವರು ಎಲ್ಲಾ ಮೌಲ್ಯಗಳ ನಿಜವಾದ ಸಾರ ಪುರುಷಾರ್ಥಗಳು. ಭಾರತೀಯ ತತ್ತ್ವಶಾಸ್ತ್ರವೆನ್ನುವುದು ಮೌಲ್ಯಗಳ ಅಧ್ಯಯನ ಎಂದು ಹೇಳಿದ್ದಾರೆ. ಪುರುಷಾರ್ಥಗಳು ಜಗತ್ತಿನ ಪರಂಪರೆಗೆ ಭಾರತದ ಶ್ರೇಷ್ಠ ಕೊಡುಗೆ ಎಂದು ವಿದ್ವಾಂಸ ಶತಾವಧಾನಿ ಡಾ.ಆರ್.ಗಣೇಶ್ ಹೇಳಿದರು.

ಪ್ರಜ್ಞಾ ಪ್ರವಾಹ ಕರ್ನಾಟಕದ ವತಿಯಿಂದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾದ ‘ಏಕಾತ್ಮ ಮಾನವ ದರ್ಶನ : ಭಾರತದ ವಿಶ್ವದೃಷ್ಟಿ’ ವಿಷಯದ ಕುರಿತಾದ ವಿಚಾರ ಸಂಕಿರಣದ ಎರಡನೇ ದಿನದ ಮೊದಲನೇ ಅವಧಿಯಲ್ಲಿ ಅವರು ಮಾತನಾಡಿದರು.
ಪುರುಷಾರ್ಥ ಎನ್ನುವುದು ಪ್ರತಿಯೊಬ್ಬರಲ್ಲೂ ಅಡಗಿರುವ ಚೈತನ್ಯ, ಪ್ರಜ್ಞೆ. ಪುರ ಎಂದರೆ ದೇಹ. ದೇಹದೊಳಗೆ ವಾಸಿಸುವುದು ‘ಪುರುಷ’. ಹಾಗಾಗಿ ಲಿಂಗಬೇಧವಿಲ್ಲದೇ ಎಲ್ಲರೂ ಪುರುಷರೇ. ಜೀವವಿರುವ ಎಲ್ಲವೂ ಪುರುಷ. ಯಾವುದು ಈ ವಾತಾವರಣದಲ್ಲಿ ಕೆಲಸ ಮಾಡಲು ಪ್ರೇರಣೆಯನ್ನು ನೀಡುತ್ತದೆಯೋ ಅದುವೇ ಪ್ರಕೃತಿ ಎಂದರು.
ಸಮಾನತೆಯ ಕುರಿತು ಎಲ್ಲಾ ಕಡೆ ಚರ್ಚೆಯಾಗುತ್ತಿರುವಾಗ ‘ಪುರುಷಾರ್ಥ’ ಎನ್ನುವುದು ಪುರುಷ ಪ್ರಧಾನ ವಿಷಯವಾಗುವುದಿಲ್ಲವೇ? ಎನ್ನುವ ಪ್ರಶ್ನೆಯನ್ನು ಅನೇಕರು ಎತ್ತುತ್ತಾರೆ. ಇದು ಭಾರತೀಯ ಪರಂಪರೆಯನ್ನು ಇತರರು ಮತ್ತು ನಮ್ಮವರೇ ಹೇಗೆ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎನ್ನುವುದನ್ನು ತಿಳಿಸುತ್ತದೆ. ಆದರೆ ಇಂತಹ ಪ್ರಶ್ನೆಗಳಿಗೆ ಸಮರ್ಥವಾದ ಉತ್ತರವನ್ನೂ ನೀಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಪುರುಷಾರ್ಥಗಳು ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ತತ್ತ್ವಗಳನ್ನು ಹೊಂದಿವೆ. ಸನಾತನ ಧರ್ಮದಲ್ಲಿ ಆಸೆ ಪಾಪವಲ್ಲ. ಅದು ಮೌಲ್ಯಯುತವಾಗಿರಬೇಕು. ಅರಿಷಡ್ ವರ್ಗದಲ್ಲೂ ಕಾಮದ ಉಲ್ಲೇಖವಾಗುತ್ತದೆ. ಧರ್ಮದ ಚೌಕಟ್ಟಿನಲ್ಲಿದ್ದರೆ ಅದು ಪುರುಷಾರ್ಥ. ಧರ್ಮದ ಚೌಕಟ್ಟಿಲ್ಲದೇ ಇದ್ದರೆ ಅದು ಅರಿಷಡ್ವರ್ಗದ ಮೊದಲ ವಿಷಯವಾಗುತ್ತದೆ. ಧರ್ಮವೆನ್ನುವುದು ವೈಶ್ವಿಕ ಕಲ್ಪನೆ, ಅದು ರಿಲಿಜನ್ ನೊಂದಿಗೆ ಯಾವ ಸಂಬಂಧವನ್ನೂ ಹೊಂದಿಲ್ಲ. ಧರ್ಮ ಎನ್ನುವುದನ್ನು ರಿಲಿಜನ್ ಎಂದು ಅನುವಾದಿಸಿರುವುದು ಸನಾತನ ಧರ್ಮಕ್ಕೆ ಮಾಡಿರುವ ಘೋರ ಅಪಚಾರ ಎಂದರು.
ಧರ್ಮದ ವಿರುದ್ಧವಲ್ಲದ ಆಸೆ ಪಾಲಿಸಬಹುದಾದ ಮೌಲ್ಯವಾಗುತ್ತದೆ, ಧರ್ಮದ ವಿರುದ್ಧವಾದ ಆಸೆ ಶೋಚನೀಯ ಶತ್ರುವಾಗುತ್ತದೆ. ಗಳಿಸಿದ ತೃಪ್ತಿಯ ವ್ಯವಸ್ಥೆಯನ್ನು ಅರ್ಥವೆನ್ನುತ್ತೇವೆ. ಅರ್ಥ ಮತ್ತು ಕಾಮದ ಎಲ್ಲಾ ಆಯಾಮವನ್ನು ಬೆಳಗುವ ಕೈದೀವಿಗೆಯಾಗಿ ಧರ್ಮ ಕಾರ್ಯನಿರ್ವಹಿಸುತ್ತದೆ. ಸಾಕ್ಷಾತ್ಕಾರದ ಸ್ಥಿತಿಯೇ ಮೋಕ್ಷ.
ಪ್ರಜ್ಞಾಪ್ರವಾಹದ ಯುವ ಆಯಾಮದ ಕರ್ನಾಟಕ ಉತ್ತರ ಪ್ರಾಂತ ಸಂಯೋಜಕ ಪುನೀತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚಿತಿ ಮತ್ತು ವಿರಾಟ್ ಒಳಗೊಂಡ ರಾಷ್ಟ್ರಕ್ಕೆ ಗೆಲುವು ನಿಶ್ಚಿತ: ಜೆ ನಂದಕುಮಾರ್
ಮೈಸೂರು: ಭಾರತೀಯ ಇತಿಹಾಸವನ್ನು ಗಮನಿಸಿದಾಗ ನಾವು ಬಳಸುವ ಪದಗಳ ಕುರಿತಾದ ಸ್ಪಷ್ಟತೆ ನಮ್ಮಲ್ಲಿಲ್ಲ. ವೈಚಾರಿಕ ವಲಯದಲ್ಲಿ ನಾವು ಬಳಸುವ ಪ್ರತಿ ಪದದ ಕುರಿತೂ ಸ್ಪಷ್ಟತೆ ನಮಗಿರಬೇಕು. ಇಲ್ಲದಿದ್ದರೆ ವಸಾಹತುಶಾಹಿಗಳು ಮಾಡಿದಂತೆಯೇ ಆ ಪದಗಳ ಕುರಿತು ತಪ್ಪು ವ್ಯಾಖ್ಯಾನವನ್ನು ಇತರರು ಮಾಡುತ್ತಾರೆ. ಎಂದು ಪ್ರಜ್ಞಾಪ್ರವಾಹದ ಅಖಿಲ ಭಾರತೀಯ ಸಂಯೋಜಕ ಜೆ ನಂದಕುಮಾರ್ ಹೇಳಿದರು.

ಪ್ರಜ್ಞಾ ಪ್ರವಾಹ ಕರ್ನಾಟಕದ ವತಿಯಿಂದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾದ ‘ಏಕಾತ್ಮ ಮಾನವ ದರ್ಶನ : ಭಾರತದ ವಿಶ್ವದೃಷ್ಟಿ’ ವಿಚಾರ ಸಂಕಿರಣದ ಎರಡನೇ ದಿನದ ಎರಡನೇ ಅವಧಿಯಲ್ಲಿ ಚಿತಿ, ವಿರಾಟ್ ಮತ್ತು ರಾಷ್ಟ್ರವಿಷಯದ ಕುರಿತು ಅವರು ಮಾತನಾಡಿದರು.
ರಾಷ್ಟ್ರವನ್ನು ಅರ್ಥೈಸಿಕೊಳ್ಳಲು ಯಾವ ದೃಷ್ಟಿಕೋನದಲ್ಲಿ ನಾವು ನೋಡುತ್ತೇವೆ ಎನ್ನುವುದನ್ನು ಮೊದಲು ನೋಡಬೇಕು ಎನ್ನುವುದನ್ನು ದೀನ ದಯಾಳ ಉಪಾಧ್ಯಾಯರು ತಿಳಿಸಿದ್ದಾರೆ. ರಾಷ್ಟ್ರವನ್ನು ಏಕಾತ್ಮತೆಯ ದೃಷ್ಟಿಕೋನದಲ್ಲಿ ನೋಡಬೇಕು ಎಂದು ತಿಳಿಸಿದ್ದಾರೆ. ವಿಶ್ವವೆಲ್ಲ ಇರುವುದು ಒಂದೇ ಆತ್ಮ ಎನ್ನುವ ಭಾವ ಏಕಾತ್ಮತೆ ಎಂದು ನುಡಿದರು.
ರಾಷ್ಟ್ರ ಎನ್ನುವುದು ನೇಷನ್ ಗೆ ಸಂವಾದಿ ಅಲ್ಲ. ನೇಷನ್ ಎನ್ನುವುದು ಜೈವಿಕ-ಭೂವೈಜ್ಞಾನಿಕ ಪದ. ಆದರೆ ರಾಷ್ಟ್ರ ಎನ್ನುವುದು ಜನ್ಮ ಅಥವಾ ಜನ್ಮಸ್ಥಳಕ್ಕೆ ಸೀಮಿತವಾದದ್ದಲ್ಲ. ಅದು ಸಾಂಸ್ಕೃತಿಕ, ನಾಗರಿಕತೆಯ ಮತ್ತು ಆಧ್ಯಾತ್ಮಿಕತೆಯ ವ್ಯಾಪ್ತಿಯನ್ನು ಹೊಂದಿದೆ. ಅದರ ಅರ್ಥ ನಮ್ಮನ್ನು ಸಾಕ್ಷಾತ್ಕಾರಗೊಳಿಸುವ, ಸ್ವತಂತ್ರಗೊಳಿಸುವ, ಸ್ವಚ್ಛಗೊಳಿಸುವ ಉಪಕರಣ. ಚಿತಿ ಎನ್ನುವುದು ರಾಷ್ಟ್ರದ ಆತ್ಮ ಎಂದು ದೀನ ದಯಾಳರು ತಿಳಿಸುತ್ತಾರೆ. ಚಿತಿ ಎನ್ನುವುದು ಒಂದು ರಾಷ್ಟ್ರದ ಒಟ್ಟೂ ಸಂಭಾವ್ಯ ಶಕ್ತಿಯಾದರೆ ವಿರಾಟ್ ಅದರ ಚಲನಶಕ್ತಿ. ಚಿತಿ ಸುಪ್ತವಾಗಿದ್ದರೆ ರಾಷ್ಟ್ರ ಮುನ್ನಡೆಯುವುದಿಲ್ಲ ಮತ್ತು ಶತ್ರುಗಳ ವಿರುದ್ಧ ಗೆಲ್ಲಲಾಗುವುದಿಲ್ಲ. ರಾಷ್ಟ್ರದ ಶತ್ರುಗಳ ವಿರುದ್ಧ ಹೋರಾಡಲು ಬೇಕಾದ ಪ್ರಾಣಶಕ್ತಿಯೇ ವಿರಾಟ್. ಚಿತಿ ಮತ್ತು ವಿರಾಟ್ ಒಳಗೊಂಡ ರಾಷ್ಟ್ರ ಬದುಕುವುದಕ್ಕೆ ಮತ್ತು ಗೆಲ್ಲುವುದಕ್ಕೆ ಸಾಧ್ಯ ಎಂದರು.
ಪ್ರಜ್ಞಾ ಪ್ರವಾಹದ ಕರ್ನಾಟಕ ಉತ್ತರ ಪ್ರಾಂತ ಸಹಸಂಯೋಜಕ ಕೆ ಎನ್ ಪಾಟಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೂರನೇ ಅವಧಿ ವ್ಯಷ್ಟಿ-ಸೃಷ್ಟಿ-ಪರಮೇಷ್ಠಿ ವಿಷಯದ ಕುರಿತು ಚಿನ್ಮಯ ಮಿಷನ್ ಸ್ವಾಮಿ ಅನುಕೂಲಾನಂದರು ಮಾತನಾಡಿದರೆ, ಪ್ರೊ. ನೀರಜಾ ಗುಪ್ತಾ ಅವರು, ಧಾರ್ಮಿಕ ಸಾಮಾಜಿಕ ಸಂಸ್ಥೆಗಳು ನಮ್ಮ ನಾಗರಿಕತೆಯ ನಿರಂತರತೆ ಕುರಿತು ಮಾತನಾಡಿದರು. ನಾಲ್ಕನೇ ಅವಧಿಯಲ್ಲಿ ನಡೆದ ಲೋಕಸಂಗ್ರಹ ವಿಷಯದ ಕುರಿತ ಫಲಕ ಚರ್ಚೆಯಲ್ಲಿ ವೇದ ವಿಜ್ಞಾನ ಗುರುಕುಲ, ಸಿದ್ಧಾರೂಢ ಮಠ ಹಾಗೂ ಬಿಹಾರ ರಾಜ್ಯದ ಜಬುವಾ ಗ್ರಾಮವಿಕಾಸ ಕಾರ್ಯ ಯೋಜನೆಯ ಕೇಸ್ ಸ್ಟಡಿ ಕುರಿತು ವಿಷಯ ಮಂಡಿಸಲಾಯಿತು. ಡಾ. ಪುನೀತರಾಜ್ ನಿರ್ವಹಿಸಿದರು. ಇವುಗಳ ಜೊತೆಗೆ ಯಕ್ಷಗಾನ, ಮಂಟೆಸ್ವಾಮಿ ಹಾಡುಗಳು, ಕಂಸಾಳೆ, ಭರತನಾಟ್ಯ, ರಾಮಾಯಣದ ಕುರಿತು ನೃತ್ಯರೂಪಕಗಳು ನಡೆದವು.

ಕಾರ್ಯಕ್ರಮದಲ್ಲಿ ‘Book of Abstracts’ ಮತ್ತು ‘Photo Album of International Conference on Swaraj’ ಅನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಜ್ಞಾಪ್ರವಾಹದ ಅಖಿಲ ಭಾರತೀಯ ಟೋಳಿ ಸದಸ್ಯ ರಘುನಂದನ, ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಡಾ. ಪ್ರದೀಪ ಭಾರದ್ವಾಜ, ಕರ್ನಾಟಕ ಉತ್ತರ ಪ್ರಾಂತ ಸಂಯೋಜಕ ಡಾ. ನಿರಂಜನ ಪೂಜಾರ್ ಉಪಸ್ಥಿತರಿದ್ದರು.