ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರು ದಿನಗಳ ಅಖಿಲ ಭಾರತೀಯ ಪ್ರಾಂತ ಪ್ರಚಾರಕ್ ಬೈಠಕ್ ಬೆಳಗಾವಿಯಲ್ಲಿ ಶುಭಾರಂಭಗೊಂಡಿದೆ. ಬೈಠಕ್ ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಎಲ್ಲಾ ಸಹಸರಕಾರ್ಯವಾಹರು, ಕಾರ್ಯವಿಭಾಗಗಳ ಅಖಿಲ ಭಾರತೀಯ ಪ್ರಮುಖರು, ಸಹ ಪ್ರಮುಖರು, ಕಾರ್ಯಕಾರಿಣಿ ಸದಸ್ಯರು, ಕ್ಷೇತ್ರೀಯ ಪ್ರಚಾರಕರು, ಸಹ ಕ್ಷೇತ್ರೀಯ ಪ್ರಚಾರಕರು, ಎಲ್ಲಾ 46 ಪ್ರಾಂತಗಳ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಸಂಘ ಪ್ರೇರಿತ ವಿವಿಧ ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿಗಳು ಉಪಸ್ಥಿತರಿದ್ದಾರೆ.
ಬೈಠಕ್ ನಲ್ಲಿ ಮಾರ್ಚ್ 2026ರ ನಂತರ ವಿಭಿನ್ನ ಸ್ತರಗಳಲ್ಲಿ ಸಂಪನ್ನಗೊಂಡ ಸಂಘದ ಪ್ರಶಿಕ್ಷಣ ವರ್ಗಗಳ ವೃತ್ತಾಂತ ಹಾಗೂ ಶಾಖೆಯ ಸ್ತರದಲ್ಲಿ ಕಾರ್ಯಯೋಜನೆಯ ಕ್ರಿಯಾನ್ವಯದ ದೃಷ್ಟಿಯಿಂದ ವಿಸ್ತಾರವಾಗಿ ಚರ್ಚೆ ನಡೆಯಲಿದೆ. ಸಂಘ ಶತಾಬ್ದಿಯ ನಿಮಿತ್ತ ನಡೆದ ಶಾಖಾ ಕಾರ್ಯವಿಸ್ತಾರದ ಕುರಿತು ವರದಿ ಮತ್ತು ಮುಂದಿನ ಶಾಖಾ ವಿಸ್ತಾರದ ಯೋಜನೆಗಳ ಕುರಿತು ಚರ್ಚೆ ನಡೆಯಲಿದೆ. ಜೊತೆಗೆ ಸಂಘ ಶತಾಬ್ದಿಯ ನಿಮಿತ್ತ ಸಂಪನ್ನಗೊಂಡ ಕಾರ್ಯಕ್ರಮಗಳ ವರದಿ ಮತ್ತು ನಿಧಾರಿತ ಉಳಿದ ಕಾರ್ಯಕ್ರಮಗಳ ಕುರಿತು ಯೋಜನೆ, ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರ 2026-27ರ ಪ್ರವಾಸದ ಯೋಜನೆ ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಸಂಘ ಶತಾಬ್ದಿಯ ಉಳಿದ ಕಾರ್ಯಕ್ರಮಗಳು ಮುಂದಿನ ವಿಜಯದಶಮಿ ಉತ್ಸವ (20 ಅಕ್ಟೋಬರ್, 2026) ದ ವರೆಗೆ ನಡೆಯಲಿದೆ.