ಶುದ್ಧಿ ಆಂದೋಲನದ ಪ್ರಖರ ನಾಯಕ ಸ್ವಾಮಿ ಶ್ರದ್ಧಾನಂದ
ಸ್ವಾತಂತ್ರ್ಯ ಸೇನಾನಿ, ಶಿಕ್ಷಣತಜ್ಞ, ಸಮಾಜ ಸುಧಾರಕ, ಧರ್ಮ ಪ್ರಚಾರಕ ಹಾಗೂ ಶುದ್ಧಿ ಆಂದೋಲನದ ಪ್ರಖರ ನಾಯಕರಾಗಿದ್ದ ಸ್ವಾಮಿ ಶ್ರದ್ಧಾನಂದ ಅವರ ಬಲಿದಾನಕ್ಕೆ 100 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಅವರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತದೆ. ಪಂಜಾಬ್ನ ಜಲಂಧರ್ ಜಿಲ್ಲೆಯ ತಲವನ್ ಗ್ರಾಮದಲ್ಲಿ ಜನಿಸಿದ ಸ್ವಾಮೀಜಿಯವರು ಸನ್ಯಾಸ ದೀಕ್ಷೆ ಸ್ವೀಕರಿಸಿದ ನಂತರ ಸಮಾಜ ಜಾಗರಣದ ವಿವಿಧ ಕಾರ್ಯಗಳಲ್ಲಿ ತೊಡಗಿಸಿಕೊಂಡರು.
ಭಾರತೀಯ ಶಿಕ್ಷಣ ವ್ಯವಸ್ಥೆಯ ಮೇಲೆ ಬ್ರಿಟಿಷರಿಂದ ಬಿದ್ದ ಕೊಡಲಿಪೆಟ್ಟನ್ನು ಧೈರ್ಯದಿಂದ ಎದುರಿಸುವ ಉದ್ದೇಶದಿಂದ ಹರಿದ್ವಾರ ಪ್ರದೇಶದಲ್ಲಿ ಗುರುಕುಲ ಕಾಂಗಡಿ ಸ್ಥಾಪಿಸಿದರು. ಭಾರತೀಯ ಶಿಕ್ಷಣದ ದೃಷ್ಟಿಕೋನದ ಆಧಾರದ ಮೇಲೆ ಅದನ್ನು ಪರ್ಯಾಯ ಶಿಕ್ಷಣ ಸಂಸ್ಥೆಯಾಗಿ ಅಭಿವೃದ್ಧಿಪಡಿಸಿದರು. ಭಾರತೀಯ ಸಂಸ್ಕೃತಿ, ವೇದಗಳ ಸಹಿತ ಸಮಸ್ತ ಭಾರತೀಯ ವಾಜ್ಮಯ ಹಾಗೂ ಆಧುನಿಕ ಸಮಕಾಲೀನ ವಿಷಯಗಳ ಅಧ್ಯಯನದ ಜೊತೆಗೆ ಸ್ವಾತಂತ್ರ್ಯ ಚಳವಳಿಯಲ್ಲಿಯೂ ಗುರುಕುಲ ಕಾಂಗಡಿಯು ಉಲ್ಲೇಖನೀಯ ಪಾತ್ರ ವಹಿಸಿತು.
ತಪ್ಪು ಕಲ್ಪನೆಗಳು ಮತ್ತು ಸಾಮಾಜಿಕ ಪೂರ್ವಗ್ರಹಗಳ ಕಾರಣದಿಂದ ಹಿಂದುಳಿದ ವರ್ಗಗಳ ಜನರಿಗೆ ಕೇರಳದ ವೈಕಂ ಶಿವಮಂದಿರ ಪ್ರವೇಶಿಸುವುದಷ್ಟೇ ಅಲ್ಲದೆ, ದೇವಾಲಯದ ಸುತ್ತಮುತ್ತಲಿನ ಸಾರ್ವಜನಿಕ ರಸ್ತೆಗಳಲ್ಲಿ ಸಂಚರಿಸುವುದಕ್ಕೂ ನಿರ್ಬಂಧ ಹೇರಲಾಗಿತ್ತು. ಈ ತಾರತಮ್ಯದ ವಿರುದ್ಧ ವೈಕಂನಲ್ಲಿ ಐತಿಹಾಸಿಕ ಆಂದೋಲನ ನಡೆಯಿತು. ರಾಷ್ಟ್ರೀಯ ದೃಷ್ಟಿಯಿಂದ ಮಹತ್ವದ್ದಾಗಿದ್ದ ಈ ಆಂದೋಲನದಲ್ಲಿ ಸ್ವಾಮಿ ಶ್ರದ್ಧಾನಂದ ಅವರು ಸ್ವತಃ ಭಾಗವಹಿಸಿದ್ದರು. ಈ ಮಹತ್ವದ ಕಾರ್ಯಕ್ಕಾಗಿ ಅವರು ಶ್ರೀ ನಾರಾಯಣ ಗುರುಗಳನ್ನೂ ಭೇಟಿಯಾಗಿದ್ದರು. ಸಾಮಾಜಿಕ ಅನಿಷ್ಟ ಪದ್ಧತಿಗಳ ನಿರ್ಮೂಲನೆಗಾಗಿ ಅವರು ನಡೆಸಿದ ಸಕ್ರಿಯ ಪ್ರಯತ್ನಗಳ ಹಿನ್ನೆಲೆಯಲ್ಲಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನೂ ಒಳಗೊಂಡಂತೆ ಅನೇಕರು ಅವರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳ ಮಹಾನ್ ಹಿತೈಷಿ ಎಂದು ಪರಿಗಣಿಸಿದ್ದರು.
ಸ್ವಾತಂತ್ರ್ಯ ಚಳವಳಿಯಲ್ಲಿ ಸಮಾಜ ಜಾಗೃತಿಗಾಗಿ ಅವರು ‘ಸದ್ಧರ್ಮ ಪ್ರಚಾರ’, ‘ತೇಜ್’, ‘ವೀರ ಅರ್ಜುನ್’ ಮತ್ತು ‘ಲಿಬರೇಟರ್’ ಎಂಬ ಪತ್ರಿಕೆಗಳನ್ನು ಆರಂಭಿಸಿ, ಬ್ರಿಟಿಷರ ಸುಳ್ಳು, ಕಪಟ ಹಾಗೂ ಸಂಚುಗಳನ್ನು ಬಯಲಿಗೆಳೆಯುವ ಮೂಲಕ ನಿರ್ಭೀತ, ದೃಢ ಮತ್ತು ತತ್ತ್ವನಿಷ್ಠ ಪತ್ರಿಕೋದ್ಯಮಕ್ಕೆ ಮಾದರಿಯಾದರು.
ವಿವಿಧ ಪ್ರತಿಕೂಲ ಪರಿಸ್ಥಿತಿಗಳು ಹಾಗೂ ತಪ್ಪು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳ ಕಾರಣದಿಂದ ಹಿಂದು ಸಮಾಜವು ನಿರಂತರವಾಗಿ ಮತಾಂತರಕ್ಕೆ ಒಳಗಾಗುತ್ತಿತ್ತು. ಮತಾಂತರಗೊಂಡವರು ಪುನಃ ಹಿಂದು ಧರ್ಮಕ್ಕೆ ಮರಳಲು ಅವಕಾಶಗಳೂ ನಿರ್ಬಂಧಿತವಾಗಿದ್ದವು. ಇಂತಹ ಸಂದರ್ಭದಲ್ಲಿ ಸ್ವಾಮೀಜಿಯವರು ಶುದ್ಧಿ ಆಂದೋಲನದ ಮೂಲಕ ಮತಾಂತರಗೊಂಡ ಹಿಂದೂಗಳನ್ನು ಮರಳಿ ತಮ್ಮ ಧರ್ಮಕ್ಕೆ ಕರೆತರುವ ಕಾರ್ಯವನ್ನು ಆರಂಭಿಸಿದರು. ಮೋಪ್ಲಾ ನರಮೇಧದ ನಂತರ ಶುದ್ಧಿ ಆಂದೋಲನದ ಮೂಲಕ ಕೇರಳ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸಾವಿರಾರು ಜನರ ಘರ್ವಾಪಸಿ ಕಾರ್ಯವನ್ನು ನಡೆಸಿದರು.
ಪುರುಷಾರ್ಥ ಮತ್ತು ಪರಮಾರ್ಥದ ಮೌಲ್ಯಗಳನ್ನು ತಮ್ಮ ಕಾರ್ಯಗಳ ಮೂಲಕ ಪರಿಣಾಮಕಾರಿಯಾಗಿ ಪ್ರತಿಪಾದಿಸುತ್ತಿದ್ದ ಸ್ವಾಮೀಜಿಯವರ ಪ್ರಯತ್ನಗಳಿಂದ ವಿಚಲಿತನಾದ ಮತಾಂಧ ವ್ಯಕ್ತಿ ಅಬ್ದುಲ್ ರಶೀದ್ ಎಂಬಾತ 1926ರ ಡಿಸೆಂಬರ್ 23ರಂದು ದೆಹಲಿಯಲ್ಲಿ ಅವರನ್ನು ಹತ್ಯೆಗೈದನು.
ಕರ್ತವ್ಯನಿಷ್ಠೆ ಮತ್ತು ಕರ್ಮಶೀಲತೆಯ ಪ್ರೇರಣಾಪುರುಷರಾದ ಸ್ವಾಮಿ ಶ್ರದ್ಧಾನಂದ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತದೆ. ಅವರ ಜೀವನಕಾರ್ಯದಿಂದ ಪ್ರೇರಣೆ ಪಡೆದು ಧರ್ಮರಕ್ಷಣೆಗಾಗಿ ಸದಾ ಸಕ್ರಿಯವಾಗಿರಲು ಸಂಕಲ್ಪ ಕೈಗೊಳ್ಳುವಂತೆ ಎಲ್ಲರಿಗೂ ಕರೆ ನೀಡುತ್ತದೆ.