ರಾಷ್ಟ್ರೀಯ ಸ್ವಯಂಸೇವಕ ಸಂಘ
ಅಖಿಲ ಭಾರತೀಯ ಕಾರ್ಯಕಾರಿ ಮಂಡಲ ಬೈಠಕ್ ನಿರ್ಣಯಗಳು – ಯುಗಾಬ್ದ 5121 ಬೆಂಗಳೂರು 14 ಮಾರ್ಚ 2020
ನಿರ್ಣಯ – 1
ಭಾರತದ ಸಂವಿಧಾನವನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ವಿಸ್ತರಿಸಿದ್ದು ಮತ್ತು ಅದರ ಪುನಾರಚನೆ – ಒಂದು ಶ್ಲಾಘನೀಯ ಹೆಜ್ಜೆ
ಭಾರತದ ಸಂವಿಧಾನವನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ವಿಸ್ತರಿಸಿದ ಕ್ರಮ ಮತ್ತು ತದನಂತರ ಸಂವಿಧಾನದ ಅನುಚ್ಛೇದ ೩೭೦ ನ್ನು ಸನ್ಮಾನ್ಯ ರಾಷ್ಟ್ರಪತಿಗಳ ಆದೇಶಗಳ ಮೂಲಕ ನಿಷ್ಕ್ರಿಯಗೊಳಿಸಿ, ಉಭಯ ಸಂಸತ್ತಿನ ಅನುಮೋದನೆ ಪಡೆದ ಶ್ಲಾಘನೀಯ ಕ್ರಮವನ್ನು ರಾಷ್ಟೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿಣಿ ಮಂಡಳಿಯು (ಅಭಾಕಾಮಂ) ಹೃದಯಪೂರ್ವಕವಾಗಿ ಸ್ವಾಗತಿಸುತ್ತದೆ. ಜಮ್ಮು ಕಾಶ್ಮೀರ ರಾಜ್ಯವನ್ನು, ಜಮ್ಮು ಕಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಪುನರ್ವಿಂಗಡಿಸಿದ ಕ್ರಮವೂ ಸಹ ಅತ್ಯಂತ ಶ್ಲಾಘನೀಯವಾದದ್ದು. ಈ ದಿಟ್ಟ ಮತ್ತು ಐತಿಹಾಸಿಕ ನಿರ್ಣಯವನ್ನು ಕೈಗೊಂಡ ಕೇಂದ್ರ ಸರಕಾರವನ್ನು ಮತ್ತು ಈ ಕ್ರಮವನ್ನು ಬೆಂಬಲಿಸಿ ರಾಷ್ಟೀಯ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಪ್ರಬುದ್ಧತೆಯನ್ನು ತೋರಿದ ಎಲ್ಲ ರಾಜಕೀಯ ಪಕ್ಷಗಳನ್ನೂ ಅಭಾಕಾಮಂ ಅಭಿನಂದಿಸುತ್ತದೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳು ಮತ್ತವರ ಸಹೋದ್ಯೋಗಿಗಳು ತೋರಿದ ಮುತ್ಸದ್ದಿತನ ಮತ್ತು ರಾಜಕೀಯ ಇಚ್ಛಾಶಕ್ತಿ ಸಹ ಶ್ಲಾಘನೀಯವಾದದ್ದು,
ಸಂವಿಧಾನದ ಪ್ರತಿಯೊಂದೂ ನಿಬಂಧನೆಯೂ ಸಮಸ್ತ ಭಾರತಕ್ಕೆ ಅನ್ವಯಿಸಬೇಕಿತ್ತಾದರೂ, ದೇಶ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದ ದುರಾಕ್ರಮಣದ ವಿಶೇಷ ಪರಿಸ್ಥಿತಿ ಒದಗಿಬಂದಿದ್ದರಿಂದ ತಾತ್ಕಾಲಿಕ ಕ್ರಮವಾಗಿ ಅನುಚ್ಛೇದ ೩೭೦ ನ್ನು ಸಂವಿಧಾನಕ್ಕೆ ಸೇರಿಸಲಾಗಿತ್ತು. ನಂತರಲ್ಲಿ, ಈ ತಾತ್ಕಾಲಿಕ ಅನುಚ್ಛೇದ ೩೭೦ ನ್ನು ನೆಪವಾಗಿಟ್ಟುಕೊಂಡು, ಸಂವಿಧಾನದ ಅನೇಕ ಅನುಚ್ಛೇದಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಒಂದೋ ಅನ್ವಯಿಸಲಿಲ್ಲ ಅಥವಾ ಮೊಟಕುಗೊಳಿಸಿ ಅನ್ವಯಿಸಲಾಯಿತು. ನಂತರದಲ್ಲಿ ರಾಷ್ಟ್ರಪತಿಗಳ ಆದೇಶದ ಮುಖಾಂತರ, ಹಿಂಬಾಗಿಲಿನಿಂದ ೩೫ಎ ಅನುಚ್ಛೇದವನ್ನು ಸಂವಿಧಾನದಲ್ಲಿ ಸೇರಿಸಿ, ಪ್ರತ್ಯೇಕತೆಯ ಬೀಜಗಳನ್ನು ಬಿತ್ತಲಾಯಿತು. ಈ ಸಾಂವಿಧಾನಿಕ ಅಸಮಂಜಸತೆಗಳಿಂದಾಗಿ, ಈ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಇತರೆ ಹಿಂದುಳಿದ ವರ್ಗದವರು (ಒಬಿಸಿಗಳು), ಗೂರ್ಖಾಗಳು, ಮಹಿಳೆಯರು, ಸ್ವಚ್ಛತಾ ಕರ್ಮಿಗಳು, ಪಶ್ಚಿಮ ಪಾಕಿಸ್ತಾನದಿಂದ ಬಂದು ಸೆಲೆಸಿದ ನಿರಾಶ್ರಿತರೂ ಸೇರಿದಂತೆ ಮುಂತಾದವರು ನೇರಾನೇರ ತಾರತಮ್ಯವನ್ನು ಅನುಭವಿಸುತ್ತಿದ್ದರು. ಜಮ್ಮು ಮತ್ತು ಲಡಾಖ್ ಪ್ರದೇಶಗಳು ರಾಜ್ಯ ವಿಧಾನಸಭೆಯಲ್ಲಿ ಯಥೋಚಿತ ಪ್ರಾತಿನಿಧ್ಯ, ತಮ್ಮ ಪಾಲಿನ ಸಂಪನ್ಮೂಲಗಳ ಹಂಚಿಕೆಯನ್ನು ಪಡೆಯುತ್ತಿರಲಿಲ್ಲ; ಇದಲ್ಲದೇ, ನೀತಿ ನಿರ್ಧರಣೆಯ ಪ್ರಕ್ರಿಯೆಯಲ್ಲಿ ಈ ಪ್ರದೇಶಗಳಿಗೆ ಯಾವುದೇ ದನಿಯಿರಲಿಲ್ಲ. ಈ ರೀತಿಯ ತಪ್ಪು ನೀತಿಗಳಿಂದಾಗಿ, ರಾಜ್ಯದಲ್ಲಿ ಮೂಲಭೂತವಾದ ಮತ್ತು ಭಯೋತ್ಪಾದನೆ ತಾಂಡವವಾಡುತ್ತಿದ್ದವು ಮತ್ತು ರಾಷ್ಟೀಯ ಶಕ್ತಿಗಳು ಸಂಪೂರ್ಣ ನಿರ್ಲಕ್ಷಿತವಾಗಿದ್ದವು.
ಮೇಲ್ಕಾಣಿಸಿದ ಈ ದಿಟ್ಟ ನಿರ್ಧಾರಗಳು ಕೈಗೊಂಡು ಜಾರಿಗೊಳಿಸಿದ್ದರಿಂದಾಗಿ ಅನೇಕ ಸಾಂವಿಧಾನಿಕ ಅಸಮರ್ಪಕತೆಗಳನ್ನು ನಿವಾರಿಸಿದಂತಾಗಿದೆ ಎಂಬುದಾಗಿ ಅಭಾಕಾಮಂ ಧೃಡ ವಿಶ್ವಾಸವನ್ನು ವ್ಯಕ್ತಪಡಿಸುತ್ತದೆ. ಸಂವಿಧಾನದ ಪ್ರಸ್ತಾವನೆಯಲ್ಲಿರುವ ‘ಭಾರತದ ಜನರಾದ ನಾವು’ ಎಂಬ ಸಂವಿಧಾನ ರಚಕಾರರ ಸದಾಶಯವನ್ನು ಸಾಕಾರಗೊಳಿಸಿರುವ ಈ ನಿರ್ಧಾರಗಳು ಒಂದು ದೇಶ- ಒಂದು ಜನ ಎಂಬ ಕಲ್ಪನೆಯನ್ನು ನಿಜಗೊಳಿಸಿವೆ. ಜಮ್ಮು ಕಾಶ್ಮೀರ ರಾಜ್ಯದ (ಮೂರು ಭಾಗಗಳಾಗಿ) ಮರುರಚನೆ, ಈ ಪ್ರದೇಶಗಳ ಸಮಸ್ತ ವಿಭಾಗಗಳ ಜನರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ನವೀನ ಅವಕಾಶಗಳನ್ನು ಕಲ್ಪಿಸಿದೆಯೆಂದು ಅಭಾಕಾಮಂ ವಿಶ್ವಾಸ ವ್ಯಕ್ತಪಡಿಸುತ್ತದೆ. ರಾಜ್ಯದ ಮರುವಿಂಗಡಣೆ, ಲಡಾಖ್ ಭಾಗದ ಜನರ ದೀರ್ಘಕಾಲೀನ ಆಶಯಗಳನ್ನು ಸಾಕಾರಗೊಳಿಸಿ, ಲಡಾಖ್ ಭಾಗದ ಸರ್ವತೋಮುಖ ಅಭಿವೃದ್ಧಿಗೆ ನಾಂದಿಯಾಗಿದೆ. ಇಲ್ಲಿನ ನಿರಾಶ್ರಿತರು ಮತ್ತು ಸ್ಥಳಾಂತರಿತರ ನಿರೀಕ್ಷೆಗಳನ್ನೂ ಶೀಘ್ರವಾಗಿ ಪರಿಗಣಿಸಲಾಗುವುದು ಎಂಬುದಾಗಿ ಅಭಾಕಾಮಂ ಆಶಿಸುತ್ತದೆ. ಕಾಶ್ಮೀರದ ಹಿಂದು ನಿರಾಶ್ರಿತರ ಸುರಕ್ಷಿತ ಮತ್ತು ಗೌರವಯುತ ಪುನರ್ವಸತಿಕರಣದ ಪ್ರಕ್ರಿಯೆಯನ್ನು ಶೀಘ್ರವಾಗಿ ಕೈಗೊಳ್ಳಬೇಕೆಂದು ಅಭಾಕಾಮಂ ಆಗ್ರಹಿಸುತ್ತದೆ.
ಕಾಶ್ಮೀರದ ಅಂದಿನ ರಾಜ ಹರಿ ಸಿಂಗ್ ಭಾರತದೊಂದಿಗೆ ಏಕೀಕರಣ ಸಂಧಿ (Instrument of Accession) ಸಹಿ ಹಾಕಿದಾಗಲೇ ಭಾರತದ ಏಕೀಕರಣದ ಪ್ರಕ್ರಿಯೆ ಸಂಪೂರ್ಣಗೊಂಡಿತ್ತು. ಆದರೂ, ಅನುಚ್ಛೇದ ೩೭೦ ರ ದುರ್ಬಳಕೆಯಿಂದಾಗಿ ಉದ್ಭವವಾದ ಸಮಸ್ಯೆಗಳನ್ನು ನಿವಾರಿಸಲು ಮತ್ತು ಸಂವಿಧಾನ, ರಾಷ್ಟ್ರಧ್ವಜಗಳ ಗೌರವವನ್ನು ಕಾಪಾಡಿ, ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡಲು ಡಾ. ಶ್ಯಾಮಪ್ರಸಾದ್ ಮುಖರ್ಜಿ ಮತ್ತು ಪ್ರೇಮನಾಥ ಡೋಗ್ರಾರ ನೇತೃತ್ವದಲ್ಲಿ ಪ್ರಜಾ ಪರಿಷತ್ ಆಂದೋಲನಕಾರರು ಮತ್ತು ರಾಷ್ಟ್ರೀಯವಾದಿ ಶಕ್ತಿಗಳು ಹೋರಾಡಿದರು. ಈ ಎಪ್ಪತ್ತು ವರ್ಷಗಲ್ಲಿ ಜಮ್ಮು ಕಾಶ್ಮೀರದ ರಾಷ್ಟ್ರೀಯವಾದಿ ಶಕ್ತಿಗಳು ದೇಶದ ಉಳಿದ ಭಾಗದ ರಾಷ್ಟ್ರೀಯವಾದಿಗಳೊಂದಿಗೆ ಸೇರಿಕೊಂಡು, ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆಯ ವಿರುದ್ಧದ ನಮ್ಮ ನಿರಂತರ ಹೋರಾಟದಲ್ಲಿ ಬಹಳಷ್ಟು ಜನರು ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ. ದೇಶದ ಸಾವಿರಾರು ಸೈನಿಕರು ಮತ್ತು ರಕ್ಷಣಾ ದಳದ ಸಿಬ್ಬಂದಿಗಳು ತಮ್ಮ ಅಪ್ರತಿಮ ಸಾಹಸವನ್ನು ತೋರಿ ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡಲೋಸುಗ ತಮ್ಮ ಪ್ರಾಣಗಳನ್ನು ಅರ್ಪಿಸಿದ್ದಾರೆ. ಇವರೆಲ್ಲರಿಗೂ, ಅಭಾಕಾಮಂ ತನ್ನ ಕೃತಜ್ಞತಾಪೂರ್ವಕ ಗೌರವ ನಮನಗಳನ್ನು ಅರ್ಪಿಸುತ್ತದೆ.
ದೇಶದ ಸಮಸ್ತ ಜನತೆ ತಮ್ಮೆಲ್ಲ ರಾಜಕೀಯ ಭೇದಗಳನ್ನು ಬದಿಗಿಟ್ಟು, ಸಂವಿಧಾನದ ಆಶಯಗಳು ಮತ್ತು ಸಾರ್ವಭೌಮತ್ವವನ್ನು ಕಾಪಾಡಲು, ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಗಟ್ಟಿಗೊಳಿಸುತ್ತ, ಜಮ್ಮು ಕಾಶ್ಮೀರ ಮತ್ತು ಲಡಾಖ್ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಅಭಾಕಾಮಂ ಕರೆನೀಡುತ್ತದೆ. ಹಾಗೆಯೇ, ಕೇಂದ್ರ ಸರಕಾರ ಈ ಭಾಗದ ಜನಮನದ ಸಮಸ್ತ ಆತಂಕಗಳನ್ನು ನಿವಾರಿಸಿ, ಯೋಗ್ಯ ಮತ್ತು ಪರಿಣಾಮಕಾರಿ ಆಡಳಿತವನ್ನು ಕೊಟ್ಟು ಅವರ ಸರ್ವತೋಮುಖಿ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ಕರೆ ನೀಡುತ್ತದೆ.
ನಿರ್ಣಯ – 2
ರಾಮ ಜನ್ಮಸ್ಥಾನದಲ್ಲಿ ಮಂದಿರ ನಿರ್ಮಾಣ – ರಾಷ್ಟ್ರೀಯ ಅಭಿಮಾನದ ಸಂಕೇತ
ಘನತೆವೆತ್ತ ಸರ್ವೋಚ್ಚ ನ್ಯಾಯಾಲಯದ ಒಮ್ಮತದ ನಿರ್ಣಯವು ಅಯೋಧ್ಯೆಯ ಸಂಪೂರ್ಣ ದೇಶದ ಅಭಿಲಾಷೆಯ ಅನುಸಾರವಾಗಿ ರಾಮ ಜನ್ಮಸ್ಥಾನದಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಇದ್ದ ಎಲ್ಲ ಅಡೆತಡೆಗಳನ್ನು ನಿವಾರಿಸಿದೆ ಎನ್ನುವುದು ಅಖಿಲ ಭಾರತೀಯ ಕಾರ್ಯಕಾರಿ ಮಂಡಲದ ಅಭಿಪ್ರಾಯವಾಗಿದೆ. ರಾಮ ಜನ್ಮಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 9, 2019ರಂದು ಘನತೆವೆತ್ತ ಸರ್ವೋಚ್ಚ ನ್ಯಾಯಾಯಲ ನೀಡಿದ ತೀರ್ಪು ನ್ಯಾಯಿಕ ಇತಿಹಾಸದಲ್ಲೇ ಮಹತ್ವದ ನಿರ್ಣಯವಾಗಿದೆ. ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ತಂದೊಡ್ಡಲಾದ ಅಡೆತಡೆಗಳ ಹೊರತಾಗಿಯೂ ಸರ್ವೋಚ್ಚ ನ್ಯಾಯಾಲಯದ ಗೌರವಾನ್ವಿನ ನ್ಯಾಯಮೂರ್ತಿಗಳು ನೀಡಿದ ಅತ್ಯಂತ ಸಮತೋಲನದಿಂದ ಕೂಡಿದ ತೀರ್ಪು ಅವರ ಸರಿಸಮವಿಲ್ಲದ ತಾಳ್ಮೆ ಮತ್ತು ಸೂಕ್ಷ್ಮ ಒಳನೋಟವನ್ನು ಪ್ರಮಾಣೀಕರಿಸುತ್ತದೆ. ಈ ಐತಿಹಾಸಿಕ ತೀರ್ಪಿಗಾಗಿ ಅಭಾಕಾಮಂ ಘನತೆವೆತ್ತ ಸರ್ವೋಚ್ಚ ನ್ಯಾಯಾಲಯವನ್ನು ಅಭಿನಂದಿಸುತ್ತದೆ.
ರಾಮಜನ್ಮಸ್ಥಾನದ ಪರವಾಗಿ ಸಾಕ್ಷ್ಯಗಳನ್ನು ಮತ್ತು ವಾದಗಳನ್ನು ಸಮರ್ಪಣೆ ಮತ್ತು ಬದ್ಧತೆಯಿಂದ ವಿದ್ವತ್‌ಪೂರ್ಣವಾಗಿ ಮಂಡಿಸಿದ ವಕೀಲರುಗಳು ಅತ್ಯಂತ ಶ್ಲಾಘನೆಗೆ ಅರ್ಹರಾಗಿದ್ದಾರೆ. ಸಮಾಜದ ಯಾವ ವರ್ಗವೂ ಈ ತೀರ್ಪನ್ನು ಗೆಲುವು ಅಥವಾ ಸೋಲು ಎಂದು ಸ್ವೀಕರಿಸದೇ, ಇದು ರಾಷ್ಟ್ರದ, ನ್ಯಾಯ ವ್ಯವಸ್ಥೆಯ ಮತ್ತು ಸಂವಿಧಾನದ ಗೆಲುವು ಎಂದು ಒಪ್ಪಿಕೊಂಡಿದ್ದು ಸಂತಸದ ಸಂಗತಿಯಾಗಿದೆ. ತೀರ್ಪಿನ ಕುರಿತು ಪ್ರಬುದ್ಧವಾಗಿ ಪ್ರತಿಸ್ಪಂದಿಸಿದ್ದಕ್ಕಾಗಿ ಅಭಾಕಾಮಂ ದೇಶದ ಎಲ್ಲ ನಾಗರಿಕರನ್ನು ಅಭಿನಂದಿಸುತ್ತದೆ.
“ಶ್ರೀರಾಮ ಜನ್ಮಸ್ಥಾನ ಮಂದಿರ”ಕ್ಕಾಗಿನ ಸಂಘರ್ಷವು ವಿಶ್ವದ ಇತಿಹಾಸಲ್ಲೇ ಹಿರಿದು ಮತ್ತು ಸುದೀರ್ಘವಾದ ಹೋರಾಟವಾಗಿದೆ. 1528ರಿಂದ ನಿರಂತರ ನಡೆದು ಬಂದ ಈ ಸಂಘರ್ಷದಲ್ಲಿ ಲಕ್ಷಾಂತರ ರಾಮಭಕ್ತರು ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ. ಕೆಲವು ಸಮಯದಲ್ಲಿ ಈ ಹೋರಾಟವು ಶ್ರೇಷ್ಠ ವ್ಯಕ್ತಿಗಳಿಂದ ಸ್ಪೂರ್ತಿ ಪಡೆದರೆ ಹಲವು ಸಂದರ್ಭದಲ್ಲಿ ಇದು ಸ್ವಯಂಪ್ರೇರಿತವಾಗಿತ್ತು. 1950ರಲ್ಲಿ ಪ್ರಾರಂಭಗೊಂಡ ಕಾನೂನಾತ್ಮಕ ಹೋರಾಟ ಮತ್ತು 1983ರಿಂದ ಆರಂಭಗೊಂಡ ಸಾಮೂಹಿಕ ಚಳುವಳಿ ಯಶಸ್ವಿ ಮುಕ್ತಾಯವರೆಗೆ ಮುಂದುವರಿದುಕೊಂಡು ಬಂದವು. ವಿಶ್ವದ ಇತಿಹಾಸದ ಈ ಶ್ರೇಷ್ಠ ಚಳುವಳಿಯು ಅನೇಕ ಮಹಾನ್ ವ್ಯಕ್ತಿಗಳ ದಣಿವರಿಯದ ಮತ್ತು ಸಮರ್ಪಿತ ಪ್ರಯತ್ನದಿಂದಾಗಿ ಯಶಸ್ಸಿನ ಶಿಖರವನ್ನು ತಲುಪಿತು. ಅಂತಹ ಎಲ್ಲ ಜ್ಞಾತ ಮತ್ತು ಅಜ್ಞಾತ ಹುತಾತ್ಮರಿಗೆ ಕೃತಜ್ಞತಾಪೂರ್ವಕ ಗೌರವಗಳನ್ನು ಸಮರ್ಪಿಸುವುದು ಆದ್ಯ ಕರ್ತವ್ಯ ಎಂದು ಅಭಾಕಾಮಂ ಭಾವಿಸುತ್ತದೆ.
ತೀರ್ಪು ಪ್ರಕಟವಾದ ನಂತರ ಸಮಾಜದ ಎಲ್ಲ ವರ್ಗಗಳ ಮತ್ತು ಮಾನಸಿಕತೆಗಳ ವಿಶ್ವಾಸವನ್ನು ಗೆಲ್ಲುವುದು ಮತ್ತು ಅವರು ಇದನ್ನು ಸದ್ಭಾವನೆಯಿಂದ ಸ್ವೀಕರಿಸುವಂತೆ ಸಿದ್ಧಗೊಳಿಸುವುದು ಸರ್ಕಾರದ ಮುಂದಿದ್ದ ಗಂಭೀರ ಕಾರ್ಯ. ತಾಳ್ಮೆ ಮತ್ತು ಸ್ಥೈರ್ಯದ ಮೂಲಕ ಎಲ್ಲ ವರ್ಗಗಳ ವಿಶ್ವಾಸವನ್ನು ಗಳಿಸಿದ ಕೇಂದ್ರ ಸರ್ಕಾರ ಮತ್ತು ಪ್ರಸ್ತುತ ರಾಜಕೀಯ ನೇತೃತ್ವವನ್ನು ಅಭಾಕಾಮಂ ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.
ಸರ್ವೋಚ್ಚ ನ್ಯಾಯಾಯಲದ ಸೂಚನೆಯಂತೆ ಮತ್ತು ರಾಮಭಕ್ತರ ಅಭಿಲಾಷೆಯಂತೆ, ‘ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ’ ಎನ್ನುವ ಹೆಸರಿನ ಹೊಸ ಟ್ರಸ್ಟ್ ಅನ್ನು ಸರ್ಕಾರದ ನಿಯಂತ್ರಣಕ್ಕೊಳಪಡದೇ ಸಮಾಜದಿಂದ ನಡೆಯುವ ಟ್ರಸ್ಟ್ ಆಗಿ ರಚಿಸಿರುವುದು ಮತ್ತು ಸರ್ಕಾರದ ಪಾತ್ರವನ್ನು ಸಾಧ್ಯಗೊಳಿಸುವ (facilitator) ಜವಾಬ್ದಾರಿಗೆ ಸೀಮಿತಗೊಳಿಸಿದ್ದು ಸರ್ಕಾರದ ದೂರದರ್ಶಿತ್ವವನ್ನು ತೋರಿಸುತ್ತದೆ. ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ಗೌರವಾನ್ವಿತ ಹಿರಿಯ ಸಂತರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಮಂದಿರ ನಿರ್ಮಾಣದ ಕಾರ್ಯವನ್ನು ನಡೆಸುವ ನಿರ್ಣಯವು ಶ್ಲಾಘನೀಯವಾಗಿದೆ. ನ್ಯಾಸವು ರಾಮಜನ್ಮಸ್ಥಾನದಲ್ಲಿ ಭವ್ಯ ಮತ್ತು ಪವಿತ್ರವಾದ ದೇಗುಲವನ್ನು ಮತ್ತು ಪರಿಸರ ಕ್ಷೇತ್ರದ ನಿರ್ಮಾಣವ ಕಾರ್ಯವನ್ನು ಅತ್ಯಂತ ವೇಗದಿಂದ ಸಂಪನ್ನಗೊಳಿಸುವುದು ಎಂದು ಅಭಾಕಾಮಂ ಉತ್ಸಾಹಪೂರ್ವಕವಾಗಿ ಆಶಿಸುತ್ತದೆ. ಹಾಗೆಯೇ ಈ ಪವಿತ್ರ ಕಾರ್ಯದಲ್ಲಿ ಎಲ್ಲ ಭಾರತೀಯರು ಮತ್ತು ವಿಶ್ವದೆಲ್ಲೆಡೆಯ ರಾಮಭಕ್ತ ಸಹೋದರರು ಪಾಲ್ಗೊಳ್ಳುವರು ಎಂದು ಅಭಾಕಾಮಂ ನಂಬುತ್ತದೆ.
ಪವಿತ್ರ ಮಂದಿರದ ನಿರ್ಮಾಣದೊಂದಿಗೆ, ಘನತೆ, ಸಾಮಾಜಿಕ ಸಾಮರಸ್ಯ, ಐಕ್ಯತೆಯ ಭಾವ ಮತ್ತು ಮರ್ಯಾದಾ ಪುರುಷೋತ್ತಮ ರಾಮನ ಶ್ರೇಷ್ಠ ಜೀವನಾದರ್ಶಗಳನ್ನು ಅನುಕರಿಸುವ ಪ್ರೇರಣೆ ಸಮಾಜದಲ್ಲಿ ಬೆಳೆಯುವುದು ಸುನಿಶ್ಚಿತವಾಗಿದೆ. ಮತ್ತು ಭಾರತವು ವಿಶ್ವದಲ್ಲಿ ಶಾಂತಿ, ಸೌಹಾರ್ದ ಮತ್ತು ಸಾಮರಸ್ಯವನ್ನು ಸ್ಥಾಪಿಸುವ ತನ್ನ ಗುರಿಯನ್ನು ನೆರವೇರಿಸಲಿದೆ.
ನಿರ್ಣಯ – 3
ಪೌರತ್ವ ತಿದ್ದುಪಡಿ ಕಾಯ್ದೆ 2019 – ಭಾರತದ ನೈತಿಕ ಮತ್ತು ಸಾಂವಿಧಾನಿಕ ಬಾಧ್ಯತೆ
ನೆರೆಯ ಇಸ್ಲಾಮಿ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಕಿರುಕುಳದಿಂದಾಗಿ ಭಾರತಕ್ಕೆ ಬಂದ ಹಿಂದೂ, ಸಿಖ್ಖ, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವ ನೀಡುವ ಪ್ರಕ್ರಿಯೆಯಲ್ಲಿ ಸಂಕೀರ್ಣತೆಗಳನ್ನು ಪರಿಹರಿಸಲು ಮತ್ತು ಸರಳಗೊಳಿಸುವ ಉದ್ದೇಶದಿಂದ ಪೌರತ್ವ ತಿದ್ದುಪಡಿ ಕಾಯ್ದೆ 2019 ಅನ್ನು ಅಂಗೀಕರಿಸಿದ ಭಾರತದ ಸಂಸತ್ತನ್ನು ಮತ್ತು ಕೇಂದ್ರ ಸರ್ಕಾರವನ್ನು ಆರ್.ಎಸ್.ಎಸ್.ನ ಅಖಿಲ ಭಾರತೀಯ ಕಾರ್ಯಕಾರಿ ಮಂಡಲಿಯು ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.
ಭಾರತವನ್ನು ಧರ್ಮದ ಆಧಾರದ ಮೇಲೆ ವಿಭಜಿಸಲಾಯಿತು. ಎರಡೂ ದೇಶಗಳು ತಮ್ಮ ಕಡೆಯ ಅಲ್ಪಸಂಖ್ಯಾತರಿಗೆ ಸುರಕ್ಷತೆ, ಗೌರವ ಮತ್ತು ಸಮಾನ ಅವಕಾಶದ ಭರವಸೆಯನ್ನು ನೀಡಿತು. ಭಾರತ – ರಾಜ್ಯ ಮತ್ತು ಸಮಾಜ ಎರಡೂ ತನ್ನ ಭೌಗೋಳಿಕ ಗಡಿಯೊಳಗೆ ವಾಸಿಸುವ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ರಕ್ಷಿಸಿವೆ ಮತ್ತು ರಾಜ್ಯವು ಅವರ ಸುರಕ್ಷತೆ ಮತ್ತು ಅಭಿವೃದ್ಧಿಗೆ ಸಾಂವಿಧಾನಿಕ ಖಾತರಿಯೊಂದಿಗೆ ನೀತಿಗಳನ್ನು ರೂಪಿಸಿದೆ. ಮತ್ತೊಂದೆಡೆ, ಭಾರತದಿಂದ ಬೇರ್ಪಟ್ಟ ನಂತರ ರೂಪುಗೊಂಡ ದೇಶಗಳು ನೆಹರೂ ಲಿಯಾಕತ್ ಅಲಿ ಒಪ್ಪಂದ, ಕಾಲಕಾಲಕ್ಕೆ ನಾಯಕರ ಆಶ್ವಾಸನೆಗಳ ಹೊರತಾಗಿಯೂ ಅಂತಹ ವಾತಾವರಣವನ್ನು ಒದಗಿಸವಲ್ಲಿ ವಿಫಲವಾಗಿವೆ. ಆ ದೇಶಗಳಲ್ಲಿ ವಾಸಿಸುವ ಅಲ್ಪಸಂಖ್ಯಾತರ ಧಾರ್ಮಿಕ ಕಿರುಕುಳದ ನಿರಂತರ ಘಟನೆಗಳು, ಆಸ್ತಿಗಳನ್ನು ಕಸಿದುಕೊಳ್ಳುವುದು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳಿಂದ ಹೊಸ ರೀತಿಯ ಗುಲಾಮಗಿರಿಗೆ ಒಳಗಾಗಿದ್ದರು . ಅಲ್ಲಿನ ಸರ್ಕಾರಗಳೂ ಈ ಅಲ್ಪಸಂಖ್ಯಾತರ ತಾರತಮ್ಯ ನೀತಿಗಳು ಮತ್ತು ಅನ್ಯಾಯದ ಕಾನೂನುಗಳ ಮೂಲಕ ಕಿರುಕುಳ ನೀಡಲು ಪೆ ಪ್ರೋತ್ಸಾಹಿಸಿದವು. ಇದರ ಪರಿಣಾಮವಾಗಿ, ಆ ದೇಶಗಳ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಭಾರತಕ್ಕೆ ಬರಬೇಕಾಯಿತು. ವಿಭಜನೆಯ ನಂತರ ಆ ದೇಶಗಳಲ್ಲಿನ ಅಲ್ಪಸಂಖ್ಯಾತರ ಜನಸಂಖ್ಯೆಯಲ್ಲಾದ ತೀವ್ರ ಕುಸಿತವೇ ಈ ಅಂಶಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.
ಆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯ ಸಮಾಜವು ಭಾರತೀಯ ಸಂಸ್ಕೃತಿಯ ಸಂರಕ್ಷಣೆ ಮತ್ತು ಪೋಷಣೆಗೆ ಮತ್ತು ಸ್ವಾತಂತ್ರ್ಯ ಸಂಗ್ರಾಮಕ್ಕೆ ತುಂಬ ಕೊಡುಗೆ ನೀಡಿದೆ ಎಂಬುದನ್ನು ಮರೆಯಬಾರದು. ಆದ್ದರಿಂದ, ಕಿರುಕುಳಕ್ಕೊಳಗಾದ ಈ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸುವುದು ಭಾರತೀಯ ಸಮಾಜ ಮತ್ತು ಭಾರತ ಸರ್ಕಾರದ ನೈತಿಕ ಮತ್ತು ಸಾಂವಿಧಾನಿಕ ಬಾಧ್ಯತೆಯೇ ಆಗಿದೆ. ಕಳೆದ ಎಪ್ಪತ್ತು ವರ್ಷಗಳಲ್ಲಿ, ಈ ಬಂಧುಗಳಿಗಾಗಿ ಸಂಸತ್ತಿನಲ್ಲಿ ಹಲವು ಬಾರಿ ಚರ್ಚೆಗಳು ನಡೆದವು ಮತ್ತು ಅನೇಕ ಸರ್ಕಾರಗಳು ವಿವಿಧ ಅನುಕೂಲತೆಗಳನ್ನು ನೀಡುತ್ತಿದ್ದವು. ಆದರೆ ಕಾರ್ಯವಿಧಾನದ ಸಂಕೀರ್ಣತೆಯಿಂದಾಗಿ, ಹೆಚ್ಚಿನ ಸಂಖ್ಯೆಯ ಜನರು ಇಂದಿನವರೆಗೂ ಪೌರತ್ವದ ಹಕ್ಕಿನಿಂದ ವಂಚಿತರಾಗಿದ್ದರು ಮತ್ತು ಅನಿಶ್ಚಿತತೆ, ಭಯದ ವಾತಾವರಣದಲ್ಲೇ ಬದುಕುತ್ತಿದ್ದರು. ಪ್ರಸ್ತುತ ತಿದ್ದುಪಡಿಯ ಪರಿಣಾಮವಾಗಿ ಅಂತಹ ಜನರು ಇನ್ನು ಮುಂದೆ ಘನತೆಯ ಜೀವನವನ್ನು ನಡೆಸಬಹುದಾಗಿದೆ.
ಸರ್ಕಾರವು ಸಂಸತ್ತಿನಲ್ಲಿ ಚರ್ಚೆಯ ಸಮಯದಲ್ಲಿ ಹಾಗೂ ನಂತರವೂ ಈ ಕಾಯ್ದೆಯು ಭಾರತದ ಯಾವುದೇ ನಾಗರಿಕರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಮತ್ತೆ ಮತ್ತೆ ಸ್ಪಷ್ಟಪಡಿಸಿದೆ. ಈಶಾನ್ಯ ಪ್ರದೇಶದ ಎಲ್ಲಾ ನಿವಾಸಿಗಳ ಆತಂಕಗಳನ್ನು ನಿವಾರಿಸಲು ಅಗತ್ಯವಾದ ಕ್ರಮಗಳನ್ನೂ ತೆಗೆದುಕೊಂಡಿದ್ದಕ್ಕೆ ಎ.ಬಿ.ಕೆ.ಎಂ ತೃಪ್ತಿ ವ್ಯಕ್ತಪಡಿಸುತ್ತದೆ. ಈ ತಿದ್ದುಪಡಿಯು ಭಾರತಕ್ಕೆ ಬಂದಿರುವ ಆ ಮೂರು ದೇಶಗಳ ಧಾರ್ಮಿಕ ಕಿರುಕುಳಕ್ಕೆ ಒಳಗಾದ ಆ ದುರದೃಷ್ಟಕರ ಸಂತ್ರಸ್ತರಿಗೆ ಪೌರತ್ವವನ್ನು ಒದಗಿಸುವುದಕ್ಕಾಗಿ ಹೊರತು ಭಾರತದ ಯಾವುದೇ ನಾಗರಿಕರ ಪೌರತ್ವವನ್ನು ಕಸಿದುಕೊಳ್ಳುವುದಕ್ಕಾಗಿ ಅಲ್ಲ. ಆದರೆ, ಒಂದು ಗುಂಪಿನ ಜನರ ಮನಸ್ಸಿನಲ್ಲಿ ಕಾಲ್ಪನಿಕ ಭಯ ಮತ್ತು ಗೊಂದಲದ ವಾತಾವರಣವನ್ನು ಸೃಷ್ಟಿಸುವ ಮೂಲಕ, ಜಿಹಾದಿ ಮತ್ತು ಎಡ ಗುಂಪುಗಳು ಸ್ವಾರ್ಥಿ ರಾಜಕೀಯ ಪಕ್ಷಗಳ ಮತ್ತು ಕೆಲವು ವಿದೇಶಿ ಶಕ್ತಿಗಳ ಬೆಂಬಲದೊಂದಿಗೆ ಹಿಂಸಾಚಾರ ಮತ್ತು ಅರಾಜಕತೆಯನ್ನು ಹರಡಲು ದುಷ್ಟ ಪ್ರಯತ್ನಗಳನ್ನು ಮಾಡುತ್ತಿವೆ. ಎ.ಬಿ.ಕೆ.ಎಂ ಇಂತಹ ಪ್ರಯತ್ನಗಳನ್ನು ಬಲವಾಗಿ ಖಂಡಿಸುತ್ತದೆ ಮತ್ತು ಸಾಮಾಜಿಕ ಸಮರಸತೆ ಮತ್ತು ರಾಷ್ಟ್ರೀಯ ಸಮಗ್ರತೆಯನ್ನು ನಾಶಮಾಡಲು ಪ್ರಯತ್ನಿಸುತ್ತಿರುವ ಈ ಶಕ್ತಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಸರ್ಕಾರಗಳನ್ನು ಆಗ್ರಹ ಪಡಿಸುತ್ತದೆ.
ಎಬಿಕೆಎಂ ಸಮಾಜದ ಎಲ್ಲಾ ವರ್ಗದವರಿಗೆ ವಿಶೇಷವಾಗಿ ಜಾಗರೂಕ ಮತ್ತು ಜವಾಬ್ದಾರಿಯುತ ನಾಯಕರಿಗೆ ಈ ಎಲ್ಲಾ ಸಮಸ್ಯೆಗಳ ಹಿಂದಿರುವ ಕಠಿಣ ಸಂಗತಿಗಳನ್ನು ಅರ್ಥಮಾಡಿಕೊಳ್ಳಲು ಮತ್ತು ರಾಷ್ಟ್ರ ವಿರೋಧಿ ವಿನ್ಯಾಸಗಳನ್ನು ಸೋಲಿಸಿ ದೇಶದಲ್ಲಿ ಸೌಹಾರ್ದಯುತ ವಾತಾವರಣವನ್ನು ಸೃಷ್ಟಿಸಲು ಸಕ್ರಿಯ ಪಾತ್ರ ವಹಿಸುವಂತೆ ಮನವಿ ಮಾಡುತ್ತದೆ.