ಎಬಿಪಿಎಸ್ ನಿರ್ಣಯ – ಕನ್ನಡ ಅನುವಾದ
ಭಾರತವು ತನ್ನ ಸಮೃದ್ಧವಾದ ನೈಸರ್ಗಿಕ ಸಂಪನ್ಮೂಲಗಳು, ಅಪಾರವಾದ ಮಾನವ ಸಂಪನ್ಮೂಲ ಹಾಗು ತನ್ನೊಳಗಿನ ಉದ್ಯಮಶೀಲತೆಯನ್ನು,ತನ್ನ ಸಮಾಜದ ಕೃಷಿ, ಉತ್ಪಾದನಾ ಕ್ಷೇತ್ರ ಮತ್ತು ಸೇವಾ ಕ್ಷೇತ್ರಗಳನ್ನು ಪರಿವರ್ತಿಸಲು ಉಪಯೋಗಿಸಿಕೊಳ್ಳುವಲ್ಲಿ ಅಪಾರವಾದ ಅವಕಾಶ ಮತ್ತು ಸಾಮರ್ಥ್ಯವನ್ನು ಹೊಂದಿದ್ದು,ಇದರ ಮೂಲಕ ಇಡಿಯ ಆರ್ಥಿಕ ವ್ಯವಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಿದೆ.
ಇತ್ತೀಚೆಗಿನ ಕೋವಿಡ್ -19ರ ಸಾಂಕ್ರಾಮಿಕ ರೋಗದ ಪರಿಣಾಮವನ್ನು ನಾವು ಅನುಭವಿಸುತ್ತಿದ್ದೇವೆ,ಅದರ ಪ್ರಭಾವವು ಉದ್ಯೋಗ ಮತ್ತು ಜನಜೀವನದ ಮೇಲೆ ಅತ್ಯಂತ ಗಾಢವಾಗಿ ಬೀರಿರುವುದು ನಮ್ಮ ಕಣ್ಣೆದುರಿದೆ.ಅದರ ಜೊತೆಗೆ ಸಮಾಜದ ಕೆಲವು ವರ್ಗದ ಜನಕ್ಕೆ ಮಾತ್ರ ದೊರೆಯುತ್ತಿದ್ದ ಕ್ಷೇತ್ರಗಳಲ್ಲೂ ಈಗ, ಹೊಸ ರೀತಿಯ ಅವಕಾಶಗಳ ಬಾಗಿಲು ತೆರೆಯುತ್ತಿರುವ ಸಕಾರಾತ್ಮಕ ಅಂಶವನ್ನೂ ನೋಡುತ್ತಿದ್ದೇವೆ. ಸಮಾಜದ ಒಟ್ಟಾರೆ ನಿರುದ್ಯೋಗದ ಸವಾಲುಗಳನ್ನು ಎದುರಿಸುವ, ಅದಕ್ಕಾಗಿ ಹೊಸ ಅವಕಾಶಗಳನ್ನು ಸೃಜಿಸುವ ಕೆಲಸಕ್ಕೆ ಇಡಿಯ ಸಮಾಜವೇ ಕ್ರಿಯಾಶಿಲವಾಗಿ ತನ್ನ ಪಾತ್ರವನ್ನು ನಿಭಾಯಿಸಬೇಕೆಂದು ಅಖಿಲ ಭಾರತ ಪ್ರತಿನಿಧಿ ಸಭಾ(ABPS)ವು ಬಯಸುತ್ತದೆ.
ಭಾರತೀಯ ಮೂಲದ ಆರ್ಥಿಕ ವ್ಯವಸ್ಥೆಯ ಮಾದರಿಯನ್ನು ಅಂದರೆ ಮಾನವ ಕೇಂದ್ರಿತ,ಕಾರ್ಮಿಕ ಕೇಂದ್ರಿತ,ಪ್ರಕೃತಿ ಸ್ನೇಹಿ ಮತ್ತು ವಿಕೇಂದ್ರೀಕರಣಕ್ಕೆ ಒತ್ತು ನೀಡುವ ಅಲ್ಲದೆ ಸಮಾಜದ ಉಪಯೋಗಗಳನ್ನು ನ್ಯಾಯಸಮ್ಮತವಾದ ರೀತಿಯಲ್ಲಿ ಸಮಾಜದ ವಿವಿಧ ಸ್ಥರಗಳಿಗೆ ಒದಗಿಸುವ ನಿಟ್ಟಿನಲ್ಲಿ, ಗ್ರಾಮಾಧಾರಿತ ಅರ್ಥವ್ಯವಸ್ಥೆಗೆ ಸಲ್ಲಬೇಕಾದ ಭಾಗವನ್ನು ಸಲ್ಲಿಸಲು,ಅತಿ ಸಣ್ಣ ಮತ್ತು ಸಣ್ಣ ಮಟ್ಟದ ಹಾಗು ಕೃಷಿ ಆಧಾರಿತ ಕೈಗಾರಿಕೋದ್ಯಮಗಳಿಗೆ,ವ್ಯಾಪಾರಗಳಿಗೆ ಒತ್ತು ನೀಡಲು ಅಖಿಲ ಭಾರತ ಪ್ರತಿನಿಧಿ ಸಭಾವು ಆಗ್ರಹಿಸುತ್ತದೆ.
ಗ್ರಾಮೀಣ ಉದ್ಯೋಗಾವಕಾಶಗಳು,ಅಸಂಘಟಿತ ಕಾರ್ಮಿಕ ವಲಯ,ಮಹಿಳೆಯರಿಗೆ ಉದ್ಯೋಗ ಮತ್ತು ಒಟ್ಟಾರೆ ಆರ್ಥಿಕ ವ್ಯವಸ್ಥೆಯಲ್ಲಿ ಅವರ ಭಾಗವಹಿಸುವಿಕೆಯು ಹೆಚ್ಚಾಗಬೇಕಿದೆ.ನಮ್ಮ ಸಾಮಾಜಿಕ ಜೀವನದ ಮೌಲ್ಯಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮತ್ತು ಸಾಫ್ಟ್ ಸ್ಕಿಲ್ಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ಹೆಚ್ಚಾಗಬೇಕಿದೆ.
ದೇಶದ ವಿವಿಧ ಭಾಗದಲ್ಲಿ ಈ ಮೇಲಿನ ಆಯಾಮಗಳ ಮಾದರಿಯಂತೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಯಶಸ್ವಿ ಪ್ರಯತ್ನಗಳು ನಡೆದಿರುವುದು ಉಲ್ಲೇಖಾರ್ಹ ಸಂಗತಿ.ಇಷ್ಟು ಮಾತ್ರವೇ ಅಲ್ಲದೆ ಸ್ಥಳೀಯ ಸಂಪನ್ಮೂಲಗಳ,ಪ್ರತಿಭೆಗಳ ಬಳಕೆ ಮತ್ತು ಅಲ್ಲಿನ ಅಗತ್ಯಕ್ಕೆ ತಕ್ಕಂತೆ ಇವುಗಳನ್ನು ಮಾರ್ಪಾಡು ಮಾಡಿಕೊಳ್ಳಬೇಕಿದೆ.ಆ ರೀತಿಯಲ್ಲೆಲ್ಲ ಉದ್ಯಮಿಗಳು,ವ್ಯಾಪಾರಿಗಳು,ಸಣ್ಣ ಫೈನಾನ್ಸಿಯರ್ಸ್,ಸ್ವಸಹಾಯ ಗುಂಪುಗಳು ಮತ್ತು ಸ್ವಯಂಪ್ರೇರಿತ ಕಾರ್ಯಕರ್ತರುಗಳು ಸಹಕಾರೀ ಕ್ಷೇತ್ರ, ಸ್ಥಳೀಯ ವಸ್ತುಗಳಿಗೆ ನೇರ ಮಾರುಕಟ್ಟೆ,ಕೌಶಲ್ಯಾಭಿವೃದ್ಧಿ ಮತ್ತು ಮೌಲ್ಯಧಾರಿತ ವಸ್ತುಗಳ ಉತ್ಪಾದನೆಯ ಆಯಾಮಗಳಲ್ಲಿ ಕೆಲಸ ನಿರ್ವಹಿಸಲು ಮುಂದಾಗಿದ್ದಾರೆ.
ಈ ಪ್ರಯತ್ನಗಳು ಅನೇಕ ಗುಡಿಕೈಗಾರಿಕೆ,ಆಹಾರ ಸಂಸ್ಕರಣೆ,ಕರಕುಶಲ ವಸ್ತುಗಳು ಮತ್ತು ಕುಟುಂಬದ ವ್ಯಾಪಾರಗಳನ್ನು ಪ್ರೋತ್ಸಾಹಿಸಲು ಸಹಾಯಕವಾಗಿವೆ.
ಆ ರೀತಿಯ ಉದ್ಯಮದ ಅನುಭವಗಳನ್ನು ಇತರರ ಜೊತೆ ಹಂಚಿಕೊಳ್ಳುತ್ತಾ ಅಗತ್ಯವಿದ್ದ ಕಡೆಗಳಲ್ಲಿ ಅದನ್ನು ಪ್ರಯೋಗ ಮಾಡಲು ಬಳಸಿಕೊಳ್ಳಬೇಕಿದೆ.
ಕೆಲವು ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗ ಸಂಸ್ಥೆಗಳೂ ಸಹ ಈ ನಿಟ್ಟಿನಲ್ಲಿ ಉದ್ಯೋಗಾವಕಾಶಗಳ ಹೆಚ್ಚಿಸುವಿಕೆಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ.
ಸಮಾಜದ ಅತ್ಯಂತ ದೊಡ್ಡ ಭಾಗಕ್ಕೆ ಉದ್ಯೋಗ ನೀಡಿದ,ಅತ್ಯಂತ ಶೋಷಿತ ತಳಮಟ್ಟದ ಸಮುದಾಯಗಳಿಗೂ ಉದ್ಯೋಗಾವಕಾಶಗಳನ್ನು ನೀಡಿದ ಈ ರೀತಿಯ ಎಲ್ಲ ಯಶಸ್ವಿ ಉದ್ಯಮಗಾಥೆಗಳನ್ನು ಎಬಿಪಿಎಸ್ ಪ್ರಶಂಸಿಸುತ್ತದೆ. ಸ್ವದೇಶಿ ಮತ್ತು ಸ್ವಾವಲಂಬಿ ಸಮಾಜದ ನಿರ್ಮಾಣಕ್ಕೆ ಈ ರೀತಿಯ ಪ್ರಯತ್ನಗಳಿಂದ ಸ್ಪೂರ್ತಿ ದೊರೆಯುತ್ತದೆ.
ನಮ್ಮ ಉತ್ಪಾದನಾ ಕ್ಷೇತ್ರವು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಮೂಲಕ ನಮ್ಮ ಆಮದಿನ ಮೇಲಿನ ಒತ್ತಡವನ್ನು ಕಡಿಮೆಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.ಕೇವಲ ಉದ್ಯೋಗವನ್ನು ಪಡೆಯುವ ಮಾನಸಿಕತೆಯಿಂದ ನಮ್ಮ ಜನರನ್ನು ಅದರಲ್ಲೂ ವಿಶೇಷವಾಗಿ ಯುವಕರನ್ನು ಕೌನ್ಸಿಲಿಂಗ್ ಮತ್ತು ಶಿಕ್ಷಣದ ಮೂಲಕ ಉದ್ಯಮಶೀಲತೆಯ ಕಡೆಗೆ ಯೋಚಿಸುವ ಕುರಿತಾಗಿ ಒಲವು ಮೂಡಿಸುವ ಉದ್ಯಮ ಸ್ನೇಹಿ ವಾತಾವರಣವನ್ನು ಕಲ್ಪಿಸಬೇಕಿದೆ.
ಇದೇ ರೀತಿಯ ಉದ್ಯಮಶೀಲತೆಯ ಸ್ಪೂರ್ತಿಯು ಮಹಿಳೆಯರಲ್ಲಿ ,ಗ್ರಾಮೀಣ ಜನರು ಮತ್ತು ವನವಾಸೀ ಜನರಲ್ಲಿ ಮೂಡಿಸಬೇಕಿದೆ.ಶಿಕ್ಷಣ ತಜ್ಞರು, ಉದ್ಯಮಿಗಳು ಮತ್ತು ಸಮುದಾಯದ ಮುಖಂಡರು, ಸಾಮಾಜಿಕ ಸಂಸ್ಥೆಗಳು ಮತ್ತು ಇತರ ಗುಂಪುಗಳು ಈ ನಿಟ್ಟಿನಲ್ಲಿ ಅವರ ಭಾಗವಹಿಸುವಿಕೆಗೆ ತಮ್ಮ ಕೈಜೋಡಿಸಬಹುದು.ಪೂರಕವೆಂಬಂತೆ ಸರಕಾರ ಮತ್ತು ಇತರ ಯೋಜನೆಗಳೂ ಕೂಡ ಅದಕ್ಕೆ ತಕ್ಕನಾದ ಪ್ರಯತ್ನ ಮಾಡಲು ಸಹಕಾರ ನೀಡಬೇಕಿದೆ.
ನಾವೊಂದು ಸಮಾಜವಾಗಿ,ಬದಲಾಗುತ್ತಿರುವ ಜಾಗತಿಕ, ಆರ್ಥಿಕ ಮತ್ತು ತಾಂತ್ರಿಕ ಸನ್ನಿವೇಶಗಳ ಸವಾಲುಗಳನ್ನು ಎದುರಿಸಲು ಇನ್ನೋವೇಶನ್ನಿನ ಮಾರ್ಗಗಳನ್ನು ಹುಡುಕುವ ಅಗತ್ಯವಿದೆ ಎಂದು ಎಬಿಪಿಎಸ್ ಅಭಿಪ್ರಾಯಿಸುತ್ತದೆ. ಡಿಜಿಟಲ್ ಎಕಾನಮಿ ಮತ್ತು ರಫ್ತು ಸಾಧ್ಯತೆಗಳನ್ನು ಅನ್ವೇಶಿಸುವ ಮೂಲಕ ಉದ್ಯಮಶೀಲತೆ ಮತ್ತು ಉದ್ಯೋಗಾವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ.
ಅಲ್ಲದೆ ನಮ್ಮ ಮಾನವ ಸಂಪನ್ಮೂಲಕ್ಕೆ ಉದ್ಯೋಗ ಪೂರ್ವ ಮತ್ತು ಉದ್ಯೋಗದ ಸಮಯದಲ್ಲೂ ತರಬೇತಿ ನೀಡಲು, ಸಂಶೋಧನೆ ಮತ್ತು ತಾಂತ್ರಿಕ ವಲಯದಲ್ಲಿ ಹೊಸ ಇನ್ನೋವೇಶನ್ನುಗಳಿಗೆ ಪ್ರಾಧಾನ್ಯತೆ ನೀಡಲು,ಹೊಸ ಸ್ಟಾರ್ಟ್ ಅಪ್ಗಳಿಗೆ ಪ್ರೇರಣೆ ನೀಡಲು ಮತ್ತು ಹಸಿರು ತಾಂತ್ರಿಕತೆಯ ಉದ್ಯಮಗಳಿಗೆ ಹೊರಳುವಂತೆ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕಿದೆ.
ಅರ್ಥ ವ್ಯವಸ್ಥೆಯನ್ನು ಬಲಗೊಳಿಸಲು ಭಾರತ ಕೇಂದ್ರಿತ ಉದ್ಯೋಗಾವಕಾಶಗಳ ಮಾದರಿಯನ್ನು ಅನುಸರಿಸಲು ಮತ್ತು ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿ ಮಾದರಿಯನ್ನು ಸಾಧಿಸಲು ಎಬಿಪಿಎಸ್ ಎಲ್ಲಾ ನಾಗರಿಕರಿಗೂ ಕರೆ ನೀಡುತ್ತದೆ.ಸಮಾಜದ ಎಲ್ಲ ವರ್ಗಕ್ಕೂ ಆರೋಗ್ಯಪೂರ್ಣವಾದ ಔದ್ಯೋಗಿಕ ವಾತಾವರಣವನ್ನು ನಿರ್ಮಾಣ ಮಾಡಲು, ಜಾಗತಿಕ ಆರ್ಥಿಕ ವ್ಯವಸ್ಥೆಯ ಮುಖ್ಯವಾಹಿನಿಯಲ್ಲಿ ಭಾರತ ಮತ್ತೆ ತನಗೆ ಸಲ್ಲಬೇಕಾದ ಸ್ಥಾನವನ್ನು ದಕ್ಕಿಸಿಕೊಳ್ಳಲು ವಿವಿಧ ಉದ್ಯೋಗಾವಕಾಶಗಳ ವಿವಿಧ ಮಜಲುಗಳಲ್ಲಿ ಭಾರತೀಯ ಸನಾತನ ಮೌಲ್ಯಗಳನ್ನು ಅಳವಡಿಸಿಕೊಳ್ಳವಲ್ಲಿ ಸಂಪೂರ್ಣ ಪ್ರಯತ್ನವನ್ನು ಹೆಚ್ಚಿಸಬೇಕಿದೆ.