ಅಖಿಲ ಭಾರತೀಯ ಪ್ರತಿನಿಧಿ ಸಭಾ – ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿ-ನಿರ್ಧಾರಗಳನ್ನು ನಿರೂಪಿಸುವ ಮಹತ್ವದ ಸಭೆ. ಈ ವರ್ಷದ ಅಖಿಲ ಭಾರತೀಯ ಪ್ರತಿನಿಧಿ ಸಭೆ ಇದೇ 2014ರ ಮಾರ್ಚ್ 7, 8, 9ರಂದು ಬೆಂಗಳೂರಿನ ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿಶಾಲ ಪರಿಸರದಲ್ಲಿ ನಡೆಯಲಿದೆ.

ss

ದೇಶಾದ್ಯಂತ ಹರಡಿಕೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳ ಮೂಲಕ ಆಯ್ಕೆಯಾದ ಪ್ರತಿನಿಧಿಗಳು, ಸಂಘದ ರಾಜ್ಯಮಟ್ಟದ ಹೊಣೆಗಾರಿಕೆಯ ಪದಾಧಿಕಾರಿಗಳು ಜೊತೆಗೆ ಸಂಘ ಪರಿವಾರದ 40ಕ್ಕೂ ಮಿಕ್ಕ ಸಂಘಟನೆಗಳ ರಾಷ್ಟ್ರೀಯ ಸ್ತರದ ಕಾರ್ಯಕರ್ತರು ಈ ೩ ದಿನದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆಯಿಂದ ೫ ಕಿ.ಮೀ ದೂರದಲ್ಲಿರುವ ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸುಂದರ ಪರಿಸರದಲ್ಲಿ ಈ ಸಭೆ ನಡೆಯಲಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್ ಹಾಗೂ ಸರಕಾರ್ಯವಾಹರಾದ ಶ್ರೀ ಸುರೇಶ್ ಜೋಷಿಯವರ ಹಿರಿತನದಲ್ಲಿ ಸಭೆ ಜರುಗಲಿದೆ. ಮಾರ್ಚ್ 7 ರಂದು ಬೆಳಗ್ಗೆ 8.30ಕ್ಕೆ ಸರಸಂಘಚಾಲಕ ಮೋಹನ್ ಭಾಗವತ್ ಅಖಿಲ ಭಾರತೀಯ ಪ್ರತಿನಿಧಿ ಸಭಾವನ್ನು ಉದ್ಘಾಟಿಸಲಿದ್ದಾರೆ.

ರೈತಾಪಿ ಜನರ ನಡುವೆ ಕೆಲಸ ಮಾಡುತ್ತಿರುವ ಭಾರತೀಯ ಕಿಸಾನ್ ಸಂಘ, ಗುಡ್ಡಗಾಡಿನ ಜನರ ನಡುವೆ ಸೇವಾಕಾರ್ಯದ ಹಂದರ ನಿರ್ಮಿಸಿರುವ ವನವಾಸಿ ಕಲ್ಯಾಣಾಶ್ರಮ, ಕಾಲೇಜು ವಿದ್ಯಾರ್ಥಿಗಳ ನಡುವೆ ಕ್ರಿಯಾಶೀಲರಾಗಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕಾರ್ಮಿಕ ರಂಗದಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಮಜ್ದೂರ್ ಸಂಘ, ಸಾಧು, ಸಂತ, ಮಠಾಧೀಶರ ನಡುವಿನ ಧಾರ್ಮಿಕ ಸಂಘಟನೆ ವಿಶ್ವ ಹಿಂದೂ ಪರಿಷದ್, ರಾಜಕೀಯ ರಂಗದಲ್ಲಿ ಸಕ್ರಿಯವಾಗಿರುವ ಭಾರತೀಯ ಜನತಾ ಪಕ್ಷದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

ಸಮಾಜ ಜೀವನದ ಅನ್ಯಾನ್ಯ ರಂಗಗಳಲ್ಲಿ ಕಾರ್ಯಶೀಲವಾಗಿರುವ ವಿದ್ಯಾಭಾರತಿ, ವಿಜ್ಞಾನಭಾರತಿ, ಕ್ರೀಡಾಭಾರತಿ, ಸೇವಾಭಾರತಿ, ಸಂಸ್ಕೃತಭಾರತಿ, ಸಂಸ್ಕಾರಭಾರತಿ, ಲಘುಉದ್ಯೋಗ ಭಾರತಿ ಅಲ್ಲದೆ ಸ್ತ್ರೀ ಶಕ್ತಿ ಜಾಗರಣದಲ್ಲಿ ತೊಡಗಿರುವ ರಾಷ್ಟ್ರಸೇವಿಕಾ ಸಮಿತಿ ಮಹಿಳಾ ಸಮನ್ವಯ, ಜನ ಜಾಗೃತಿಯ ರಂಗದಲ್ಲಿ ಸಕ್ರಿಯವಾಗಿರುವ ಸ್ವದೇಶಿ ಜಾಗರಣ ಮಂಚ್, ದೀನದಯಾಳ್ ಸಂಶೋಧನಾ ಸಂಸ್ಥೆ, ಭಾರತ ವಿಕಾಸ ಪರಿಷತ್, ಶೈಕ್ಷಣಿಕ ಮಹಾಸಂಘ, ಧರ್ಮಜಾಗರಣ – ಮುಂತಾದ ಸಂಘಟನೆಯ ಪ್ರಮುಖರು ಭಾಗವಹಿಸಲಿದ್ದಾರೆ.

ದೃಷ್ಟಿಹೀನರ ನಡುವೆ ಕ್ರಿಯಾಶೀಲರಾಗಿರುವ ಸಕ್ಷಮ, ಭಾರತದ ಗಡಿ ಪ್ರದೇಶದ ಜನರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿರುವ ಸೀಮಾ ಸುರಕ್ಷಾ ಪರಿಷತ್, ನಿವೃತ್ತ ಸೈನಿಕರ ಸಮಾಜಮುಖಿ ವೇದಿಕೆ ಪೂರ್ವಸೈನಿಕ ಪರಿಷತ್‌ನಂತಹ ವಿಶಿಷ್ಟ ಸಂಘಟನೆಗಳ ಪ್ರಮುಖರು ಪ್ರತಿನಿಧಿಸಭಾದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಎಲ್ಲ ಸಂಘಟನೆಗಳ ವಾರ್ಷಿಕ ಕಾರ್ಯಕಲಾಪದ ವರದಿ, ವಿಶ್ಲೇಷಣೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜ್ಯವಾರು ಕಾರ್ಯಚಟುವಟಿಕೆಗಳ ಅವಲೋಕನ ನಡೆಯಲಿದೆ. ಜೊತೆಗೆ ದೇಶದ ಆಗುಹೋಗುಗಳನ್ನು ಪ್ರಭಾವಿಸುವ ಪ್ರಮುಖ ವಿಷಯಗಳ ಕುರಿತು ಸಭೆ ಎಲ್ಲ ಮಗ್ಗಲುಗಳಲ್ಲಿ ಚರ್ಚಿಸಿ ಸಭೆ ನಿರ್ಣಯ ಅಂಗೀಕರಿಸಲಿದೆ.

ಸಮಾಜ ಜೀವನದ ಎಲ್ಲ ರಂಗಗಳಲ್ಲಿ ಕಾರ್ಯನಿರತರಾಗಿರುವ 1400ಕ್ಕೂ ಹೆಚ್ಚು ಪ್ರತಿನಿಧಿಗಳು ದೇಶದ ಮೂಲೆ-ಮೂಲೆಗಳಿಂದ ಈ ಸಭೆಗೆ ಆಗಮಿಸುತ್ತಿದ್ದಾರೆ.

ಪತ್ರಕರ್ತರಿಗೆ ಆಹ್ವಾನ

ಮಾರ್ಚ್ 5, 2014ರ ಬುಧವಾರದಂದು ಸಂಜೆ 5.00 ಗಂಟೆಗೆ  ಆರೆಸ್ಸೆಸ್ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಮನಮೋಹನ ವೈದ್ಯ ಅವರು ಥಣಿಸಂದ್ರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಪ್ರತಿನಿಧಿ ಸಭಾದ ಕುರಿತು ಪ್ರತಿಕಾಗೋಷ್ಠಿಯನ್ನು ಕುರಿತು ಮಾತನಾಡಲಿದ್ದಾರೆ. ಮಾರ್ಚ್ 7, 8,9ರ ಈ ಸಭೆಯ ಕಾರ್ಯಕಲಾಪದ ವಿವರವನ್ನು 3 ದಿನವೂ ಸಂಘದ ರಾಷ್ಟ್ರೀಯ ಪ್ರಮುಖರು ಪತ್ರಕರ್ತರಿಗೆ ಪ್ರತ್ಯೇಕ ಗೋಷ್ಠಿಯಲ್ಲಿ ವಿವರಿಸಲಿದ್ದಾರೆ. ಇದಕ್ಕಾಗಿಯೇ ಥಣಿಸಂದ್ರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪರಿಸರದಲ್ಲಿ ಮಾಧ್ಯಮ ಕೇಂದ್ರ www.samvada.org ವನ್ನು ಸಜ್ಜುಗೊಳಿಸಲಾಗುತ್ತಿದೆ.

ದಿನಾಂಕ                 ಗೋಷ್ಠಿಯ ಸಮಯ      ಪ್ರೆಸ್ ಕ್ಲಬ್ ಆವರಣದಿಂದ ವಾಹನ ವ್ಯವಸ್ಥೆ

ಮಾರ್ಚ್  05, 2014  ಸಂಜೆ 5.00 ಕ್ಕೆ     ಸಂಜೆ 3.30 ಕ್ಕೆ

ಮಾರ್ಚ್ 07, 2014  ಬೆಳಗ್ಗೆ 08.30ಕ್ಕೆ ಉದ್ಘಾಟನೆ,  ಬೆಳಗ್ಗೆ 07.00ಕ್ಕೆ

ಮಾರ್ಚ್ 08, 2014  ಅಪರಾಹ್ನ 3.00 ಕ್ಕೆ    ಮಧ್ಯಾಹ್ನ1.30ಕ್ಕೆ

ಮಾರ್ಚ್ 09, 2014 ಮಧ್ಯಾಹ್ನ 12.00ಕ್ಕೆ   ಬೆಳಗ್ಗೆ 10.30ಕ್ಕೆ

 

ಪ್ರೆಸ್ ಕ್ಲಬ್ ಆವರಣದಿಂದ ಪ್ರತಿನಿಧಿ ಸಭಾ ಸ್ಥಳಕ್ಕೆ ಕರೆದೊಯ್ಯಲು ಪತ್ರಕರ್ತರಿಗೆ ವಿಶೇಷ ವಾಹನ ವ್ಯವಸ್ಥೆ ಇರುತ್ತದೆ. (ಸಂಪರ್ಕಿಸಿ: ಸೋಮಶೇಖರ್ 9845445101).

ಅಖಿಲ ಭಾರತೀಯ ಪ್ರತಿನಿಧಿ ಸಭಾದ ಕುರಿತ ಮಾಹಿತಿಗಳನ್ನು ನಿಯಮಿತವಾಗಿ www.samvada.org ವೆಬ್‌ಸೈಟ್‌ನಲ್ಲಿ ನೀಡಲಾಗುವುದು.

ಯಾವುದೇ ಸಂದರ್ಭದಲ್ಲಿ ಮಾಹಿತಿಗಳಿಗಾಗಿ ರಾಜೇಶ್ ಪದ್ಮಾರ್ – 09880621824 ಅಥವಾ ಡಾ|| ಗಿರಿಧರ ಉಪಾಧ್ಯಾಯ – 09449831147 ಇವರನ್ನು ಸಂಪರ್ಕಿಸಲು ಕೋರಲಾಗಿದೆ.

ಇತಿ

ಮ ವೆಂಕಟರಾಮು

ಪ್ರಾಂತ ಸಂಘಚಾಲಕರು, ಆರೆಸ್ಸೆಸ್ ಕರ್ನಾಟಕ

(ದಿನಾಂಕ : ಮಾರ್ಚ್ 01, 2014)

Leave a Reply

Your email address will not be published.

This site uses Akismet to reduce spam. Learn how your comment data is processed.