by Basavaraj Kulali
ಆಸ್ಸಾಂನ ಮೂಲನಿವಾಸಿಗಳ ಮೇಲೆ ಬಾಂಗ್ಲಾ ವಲಸಿಗರಿಂದ ನಡೆಯುತ್ತಿರುವ ಹಲ್ಲೆಯಿಂದಾಗಿ ಲಕ್ಷಾಂತರ ಭಾರತೀಯರು ನಿರಾಶ್ರಿತರಾಗಿದ್ದಾರೆ. ಇಂತಹ ಪರಿಸ್ಥಿತಿಯನ್ನು ಹಲವಾರು ವರ್ಷಗಳ ಹಿಂದೆಯೇ ಊಹಿಸಿದ್ದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಈ ಬಗ್ಗೆ ಕಾಲಕಾಲಕ್ಕೆ ಸರ್ಕಾರಕ್ಕೆ ಎಚ್ಚರಿಸುತ್ತಲೇ ಬಂದಿದೆ. ಆದರೆ ಓಟ್ ಬ್ಯಾಂಕ್ ರಾಜಾಕಾರಣದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿರುವ ಕಾಂಗ್ರೆಸ್ ಸರ್ಕಾರದ ಕಿವಿಯೊಳಗೆ ಕೆಸರು ತುಂಬಿಕೊಂಡಿದೆ. ಅದರ ಪರಿಣಾಮ ಇವತ್ತಿನ ಪರಿಸ್ಥಿತಿ. ಅವತ್ತು ನೆಹರು ಮಾಡಿದ ತಪ್ಪಿನಿಂದ ಕಾಶ್ಮಿರಿ ಪಂಡಿತರು ತಮ್ಮ ದೇಶದಲ್ಲೇ ನಿರಾಶ್ರಿತರಾಗಬೇಕಾಯಿತು. ಅದೇ ರೀತಿ ಆತನ ವಂಶಸ್ಥರು ಮಾಡುತ್ತಿರುವ ನಿರ್ಲಕ್ಷದಿಂದ ಇವತ್ತು ಆಸ್ಸಾಂ ಜನರು ನಿರಾಶ್ರಿತರಾಗಬೇಕಾಗಿದೆ. ಈಶಾನ್ಯ ರಾಜ್ಯಗಳಿಗೆ ಕೋಟಿ-ಕೋಟಿ ಸಂಖ್ಯೆಯಲ್ಲಿ ಅಕ್ರಮವಾಗಿ ನುಸುಳಿರುವ ಬಾಂಗ್ಲಾದೇಶಿಯರ ವಿರುದ್ಧದ ಹೋರಾಟದಲ್ಲಿ ಎಬಿವಿಪಿ ಅಗ್ರಸ್ಥಾನದಲ್ಲಿದೆ. ಈ ಕುರಿತು ಒಂದಿಷ್ಟು . . . .
ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರಾರಂಭದಿಂದಲೂ ಪಂಜಾಬ್ ಭಯೋತ್ಪಾದಕರ ವಿರುದ್ಧ, ಕಾಶ್ಮೀರ ಸಮಸ್ಯೆಯ ವಿರುದ್ಧ, ನಕ್ಸಲ್ ಚಟುವಟಿಕೆಗಳ ವಿರುದ್ಧ, ಭಯೋತ್ಪಾದನೆ, ತುಷ್ಟೀಕರಣದ ವಿರುದ್ಧ ಹೋರಾಡುತ್ತ ಇಂದಿನ ಯುವಕರಲ್ಲಿ ರಾಷ್ಟ್ರೀಯ ವಿಚಾರಧಾರೆಗಳನ್ನು ಜಾಗೃತಗೊಳಿಸುತ್ತಿದೆ. ನಮ್ಮ ಭಾರತೀಯ ಸಂಸ್ಕøತಿಯ ಮೇಲಾಗುತ್ತಿರುವ ದಾಳಿಗಳನ್ನು ಸಿಡಿದೆದ್ದು ಖಂಡಿಸಿದೆ. ಅನೇಕ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಮಸ್ಯೆಗಳ ವಿರುದ್ಧ ಸರಕಾರದ ಮತ್ತು ಸಾಮಾನ್ಯ ಜನತೆಯ ಗಮನ ಸೆಳೆಯಲು ಅನೇಕ ಹೋರಾಟಗಳನ್ನು ನಡೆಸಿದೆ.
1979 ರಿಂದಲೂ ಅಕ್ರಮ ಬಾಂಗ್ಲಾ ನುಸುಳುಕೋರರ ಸಮಸ್ಯೆಯ ಬಗ್ಗೆ ವೈಚಾರಿಕ ಸಂಗ್ರಾಮವನ್ನೇ ಎಬಿವಿಪಿ ನಡೆಸಿದೆ. 1979 ರಲ್ಲಿ ಐತಿಹಾಸಿಕ “ಆಸ್ಸಾಂ ಆಂದೋಲನ”ದ ನಂತರದಿಂದ ಇವತ್ತಿನವರೆಗೂ ನುಸುಳುಕೋರರನ್ನು ಖಂಡಿಸಿ ಚಳುವಳಿ ನಡೆಸುತ್ತಿದೆ. ಸಮಸ್ಯೆಯ ಗಂಭೀರತೆಯ ಬಗ್ಗೆ ಎಬಿವಿಪಿ ನಾಯಕರು ರಾಷ್ಟ್ರಪತಿ, ಪ್ರಧಾನ ಮಂತ್ರಿ, ಗೃಹ ಸಚಿವರು ಮುಂತಾದವರನ್ನು ಭೇಟಿಯಾಗಿ ಅದರ ಬಗ್ಗೆ ಗಮನ ಸೆಳೆದಿದ್ದಾರೆ. 1980ರಲ್ಲಿ ಆಸ್ಸಾಂನ ಒಂದು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 70 ಸಾವಿರ ಮತದಾರರಲ್ಲಿ 27 ಸಾವಿರ ಮತದಾರರು ಅಕ್ರಮ ನುಸುಳುಕೋರರೆಂದು ಪತ್ತೆ ಹಚ್ಚಿದ ಆಸ್ಸಾಂನ ವಿದ್ಯಾರ್ಥಿ ಸಂಘಟನೆ AASU(All Assam Student Union) ಅದರ ವಿರುದ್ಧ ಒಂದು ದೊಡ್ಡ ಪ್ರತಿಭಟನೆಯನ್ನು ಹಮ್ಮಿಕೊಂಡಿತು. ಇದೇ ಸಮಯದಲ್ಲಿ ಎಬಿವಿಪಿಯು ಕೂಡಲೇ ವಿದೇಶಿ ನುಸುಳುಕೋರರನ್ನು ಹೊರಹಾಕುವಂತೆ ಒತ್ತಾಯಿಸಿ AASU(ಆಸೂ) ಗೆ ಬೆಂಬಲ ನೀಡಿತು.
ಹೋರಾಟದ ಹಾದಿಯಲ್ಲಿಯ ಕೆಲವು ಮೈಲುಗಲ್ಲುಗಳು :
1. ದೇಶಾದ್ಯಂತ ಜನರ ಬೆಂಬಲ ಪಡೆಯಲು ಎಬಿವಿಪಿಯ ನಿರ್ಧಾರ : 1979 ರಲ್ಲಿ ಎಬಿವಿಪಿಯ ರಾಷ್ಟ್ರೀಯ ಸಮ್ಮೇಳನ ಜೈಪುರದಲ್ಲಿ ನಡೆಯಿತು. ಸಮ್ಮೇಳನದಲ್ಲಿ ಆಸ್ಸಾಂ ಆಂದೋಲನದೇ ಅತಿ ಮುಖ್ಯ ಚರ್ಚೆಯ ವಿಷಯವಾಗಿತ್ತು. ಎಬಿವಿಪಿಯ ಪ್ರತಿನಿಧಿಗಳ ಗುಂಪೊಂದು ಆಗಿನ ಮುಖ್ಯ ಚುನಾವಣಾಧಿಕಾರಿಯನ್ನು ಭೇಟಿಯಾಗಿ ಅಸ್ಸಾಂನ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿತು. ಇದು ಯಶಸ್ವಿಯಾಗಿ ಕೂಡಲೇ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಯಿತು. ನಂತರ 1980 ಜೂನ್ 9 ರಂದು ಅಮೃತಸರದಲ್ಲಿ ಸಭೆ ನಡೆಸಿದ ಎಬಿವಿಪಿ ಆಂದೋಲನವನ್ನು ಆಸ್ಸಾಂಗೆ ಮಾತ್ರ ಸೀಮಿತಗೊಳಿಸದೇ ದೇಶಾದ್ಯಂತ ಹೋರಾಟ ಹಬ್ಬುವಂತೆ ಮಾಡಿತು.
2. ಸಂಸತ್ ಭವನದ ಮುಂದೆ ಉಪವಾಸ ಸತ್ಯಾಗ್ರಹ : ಜೂನ್ 9, 1980ರಂದು ಎಬಿವಿಪಿಯ ಸುಮಾರು 45 ಜನ ಕಾರ್ಯಕರ್ತರು ಸಂಸತ್ ಭವನದ ಮುಂದೆ 24 ಗಂಟೆಗಳ ಉಪವಾಸ ಸತ್ಯಾಗ್ರಹ ನಡೆಸಿದರು. ಅನೇಕ ರಾಷ್ಟ್ರೀಯ ನಾಯಕರು ಮತ್ತು ಅಸ್ಸಾಂನ ಅನೇಕ ನಾಯಕರು ಇದಕ್ಕೆ ಬೆಂಬಲ ಸೂಚಿಸಿ ಕಾರ್ಯಕರ್ತರನ್ನು ಭೇಟಿ ಮಾಡಿದರು. ಇದಕ್ಕೆ ಬೆಂಬಲ ಸೂಚಿಸಿದ ಪ್ರಮುಖ ನಾಯಕರೆಂದರೆ ಚಂದ್ರಶೇಖರ, ಡಾ.ಸುಬ್ರಮಣ್ಯಸ್ವಾಮಿ, ಜಾರ್ಜ್ ಫನಾಂಡಿಸ್ ಮುಂತಾದವರು.
3. ದೆಹಲಿಯಲ್ಲಿ ವಿಚಾರಗೋಷ್ಠಿ : ಅಕ್ರಮ ನುಸುಳುಕೋರರ ವಿಚಾರವಾಗಿ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವಿಚಾರಗೋಷ್ಠಿಯಲ್ಲಿ ಅಸ್ಸಾಂನ ಮಾಜಿ ಸಚಿವರಾದ ಡಾ. ಬೀರೇಂದ್ರ ಭಟ್ಟಾಚಾರ್ಯ, ಉಪ ಮುಖ್ಯಮಂತ್ರಿ ಶ್ರೀ ಗುಲಾಪ್ ಬರ್ಬರಾ ಮುಂತಾದವರು ಪಾಲ್ಗೊಂಡಿದ್ದರು.
4. ಅಸ್ಸಾಂ ಆಂದೋಲನ ನಂತರ ದೇಶಾದ್ಯಂತ ಚಟುವಟಿಕೆಗಳು : ಬೆಂಗಳೂರು, ಶಿವಮೊಗ್ಗ, ಮಹಾರಾಷ್ಟ್ರದ ಪುಣೆ ಸೇರಿದಂತೆ ದೇಶದ 9 ಸ್ಥಳಗಳಲ್ಲಿ ಬೃಹತ್ ಸಾರ್ವಜನಿಕ ಸಭೆಗಳನ್ನು ನಡೆಸಲಾಯಿತು. ಆಂಧ್ರಪ್ರದೇಶದಲ್ಲಿ ಸುಮಾರು 500 ವಿದ್ಯಾರ್ಥಿಗಳು ರಾಜ್ಯಾದ್ಯಂತ ಸೈಕಲ್ ರಾಲಿ ನಡೆಸಿದರು. 1983ರಲ್ಲಿ ಮುಂಬೈಬಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾರತದ ಏಕತೆ ಮತ್ತು ಸಮಗ್ರತೆಗೆದಕ್ಕೆ ತರುತ್ತಿರುವ ಬಾಂಗ್ಲಾ ನುಸುಳುಕೋರರ ಸಮಸ್ಯೆಯ ಬಗ್ಗೆ ರಾಷ್ಟ್ರಾದ್ಯಂತ ಜಾಗೃತಿ ಹರಡಲು ಆಸ್ಸಾಂನ ಪ್ರಮುಖ ನಾಯಕರ ಸಹಾಯ ಮತ್ತು ಸಹಕಾರ ಕೋರಲು ನಿರ್ಧರಿಸಿತು. ಈ ನಿಟ್ಟಿನಲ್ಲಿ ದೇಶಾದ್ಯಂತ ಬೃಹತ್  ರಾಲಿ ಮತ್ತು ಸಾರ್ವಜನಿಕ ಸಭೆಯಲ್ಲಿ ಆಸೂನ ನಾಯಕರಾದ ಶ್ರೀ ಭೃಗುಕುಮಾರ ಪುಖಾನ್ ಪಾಲ್ಗೋಂಡು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇಷ್ಟಲ್ಲದೆ ಓರಿಸ್ಸಾ, ಹರಿಯಾಣಾ, ರಾಜಸ್ತಾನ ಮುಂತಾದ ಕಡೆಗಳಲ್ಲಿ ಅನೇಕ ವಿಚಾರ ಗೋಷ್ಠಿ ಮತ್ತು ವಿದ್ಯಾರ್ಥಿ ಸಮ್ಮೇಳನಗಳನ್ನು ಆಯೋಜಿಸಲಾಯಿತು.
5. ರಾಷ್ಟ್ರೀಯ ಚರ್ಚಾ ಸಭೆ : ರಾಜ್‍ಕೋಟ್‍ನಲ್ಲಿ ನಡೆದ ಎಬಿವಿಪಿಯ 29 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ‘ಅನು ಪ್ರವೇಶ – ಏಕ್ ರಾಷ್ಟ್ರೀಯ ಸಮಸ್ಯಾ’ ಎಂಬ ವಿಷಯದ ಮೇಲೆ ವಿಸ್ತøತ ಚರ್ಚೆ ನಡೆಸಲಾಯಿತು. ಈ ಸಭೆಯಲ್ಲಿ ಕಾಂಗ್ರೇಸ್, ಲೋಕದಳ, ಸಿಪಿಎಮ್, ಸಿಪಿಐ, ಜನತಾ ಪಾರ್ಟಿಯ ಅನೇಕ ಪ್ರತಿನಿಧಿಗಳು, ರಾಜಕೀಯೇತರ ಪ್ರತಿನಿಧಿಗಳು ಭಾಗವಹಿಸಿದ್ದರು. ಸುಮಾರು 12 ಸಂಘಟನೆಗಳು ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದವು. ಈ ಸಭೆಯ ನಂತರ ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು, ಮಾಧ್ಯಮ ಪ್ರತಿನಿಧಿಗಳು, ವಕೀಲರು, ಶಿಕ್ಷಣ ತಜ್ಞರು ಮುಂತಾದವರನ್ನು ಒಳಗೊಂಡ ಒಂದು ಸ್ಥಾಯಿ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು ಗುಹಾಟಿಯಲ್ಲಿ ಸಭೆ ಸೇರಿ, ಆಸೂನ ನಾಯಕರಾದ ಪ್ರಪುಲ್ ಕುಮಾರ್ ಮಹಾಂತರನ್ನು ಪ್ರಮುಖರಾಗಿ ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ 3ಡಿ ಸೂತ್ರವನ್ನು ಅಳವಡಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು. D  – Detection of Infiltrates(ನುಸುಳುಕೋರರನ್ನು ಗುರುತಿಸುವಿಕೆ),D – Deletion of their names from voter list(ಮತದಾರರ ಪಟ್ಟಿಯಿಂದ ಅವರ ಹೆಸರನ್ನು ತೆಗೆಯುವುದು) D – Deportation of Infiltrates(ಅವರನ್ನು ದೇಶದಿಂದ ಹೊರಗಟ್ಟುವುದು)
6. ಗುಡ್‍ವಿಲ್ ಮಿಷನ್ : 1983ರಲ್ಲಿ ಕೇಂದ್ರ ಸರ್ಕಾರ ಜನತೆಯ ವಿರುದ್ಧವಾಗಿ ಆಸ್ಸಾಂನಲ್ಲಿ ಚುನಾವಣೆ ನಡೆಸಿತು. ಇದರ ಪರಿಣಾಮವಾಗಿ ಶಾಂತಿಯುತವಾಗಿ ನಡೆಯುತ್ತಿದ್ದ ಅಸ್ಸಾಂ ಆಂದೋಲನ ಹಿಂಸೆಯ ಹಾದಿ ಹಿಡಿಯಿತು. ಎಲ್ಲೆಡೆ ಜನರು ಆಕ್ರೋಶಿತರಾಗಿ ರಸ್ತೆಗಿಳಿದರು. ಈ ಪರಿಸ್ಥಿತಿಯಲ್ಲಿ ಎಬಿವಿಪಿಯು ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಲು ಮತ್ತು ಮತ್ತೆ ಶಾಂತಿ ಸ್ಥಾಪಿಸಲು “ಗುಡ್‍ವಿಲ್ ಮಿಷನ್” ಎಂಬ 8 ಸದಸ್ಯರ ಒಂದು ಅಧ್ಯಯನ ತಂಡವನ್ನು ರಚಿಸಿತು. ಎಬಿವಿಪಿಯ ರಾಷ್ಟ್ರಾದ್ಯಕ್ಷರಾದ ಡಾ. ಓಂಪ್ರಕಾಶ ಕೋಹಿಲಿ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆಯವರನ್ನು ಒಳಗೊಂಡ ಈ ತಂಡ ರಾಜ್ಯಾದ್ಯಂತ ಪ್ರವಾಸ ಮಾಡಿ ಅಲ್ಲಿನ ಸ್ಥಿತಿಗತಿಗಳ ಅಧ್ಯಯನ ಮಾಡಿತು. ಈ ತಂಡದ ಇತರ ಪ್ರಮುಖ ಸದಸ್ಯರೆಂದರೆ ನ್ಯಾಯವಾದಿಗಳಾದ ಶ್ರೀ ಟಿ ಯು ಮೆಹ್ತಾ ಮತ್ತು ಪ್ರಸಿದ್ಧ ಪತ್ರಕರ್ತರಾದ ಶ್ರೀ ರಾಮಸ್ವಾಮಿ ಮುಂತಾದವರು.
7. ಕಲ್ಕತ್ತಾದಲ್ಲಿ ರಾಷ್ಟ್ರೀಯ ವಿಚಾರಗೋಷ್ಠಿ : ಪುರ್ವೋತ್ತರದಲ್ಲಿ ಗಡಿ ಸಮಸ್ಯೆಯನ್ನು ರಾಷ್ಟ್ರಮಟ್ಟದಲ್ಲಿ ಅದರ ಗಂಭೀರತೆಯ ಬಗ್ಗೆ ತಿಳಿ ಹೇಳಲು ಎಬಿವಿಪಿಯು ನಡೆಸಿದ ಕಾರ್ಯಕ್ರಮಗಳಲ್ಲಿ ಇದು ಮುಖ್ಯವಾದುದು. ನುಸುಳುಕೋರರ ವಿಷಯವಾಗಿ 12 ಫೆಬ್ರುವರಿ 1984ರಲ್ಲಿ ಕೊಲ್ಕತ್ತಾದಲ್ಲಿ ರಾಷ್ಟ್ರೀಯ ವಿಚಾರ ಗೋಷ್ಠಿಯನ್ನು ನಡೆಸಲಾಯಿತು. ಇದೇ ಪ್ರಥಮ ಬಾರಿಗೆ ಪಶ್ಚಿಮ ಬಂಗಾಲ, ಬಿಹಾರ್, ಗುಜರಾತ್, ಉತ್ತರ ಪ್ರದೇಶ, ರಾಜಸ್ತಾನ, ತ್ರಿಪುರ, ಜಮ್ಮು ಮತ್ತು  ಕಾಶ್ಮಿರ ಮುಂತಾದ 11 ರಾಜ್ಯಗಳಿಂದ ಸುಮಾರು 114 ಪ್ರತಿನಿಧಿಗಳು ಅ ಸಭೆಗೆ ಆಗಮಿಸಿದ್ದರು. ಪ್ರಪುಲ್ ಕುಮಾರ್ ಮಹಾಂತ್ ಈ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ಪೂರ್ವೋತ್ತರದ ನುಸುಳುಕೋರರ ಸಮಸ್ಯೆಯು ಒಂದು ಸಾವಿನೆಡೆಗೆ ಒಯ್ಯುವ ಒಂದು ಕಾಯಿಲೆ ಇದ್ದಂತೆ ಎಂದು ಹೇಳಿದರು.
8. ಶಹೀದ್ ಜ್ಯೋತಿ ಯಾತ್ರೆ – ದೆಹಲಿಯಿಂದ ಗುಹಾಟಿವರೆಗೆ : ಎಬಿವಿಪಿಯ ರಾಷ್ಟ್ರೀಯ ನಾಯಕರಾದ ಶ್ರೀ ಮಹೇಶ ಶರ್ಮಾರವರ ನೇತೃತ್ವದಲ್ಲಿ ದೆಹಲಿಯಿಂದ ಗುಹಾಟಿವರೆಗೆ “ಶಹಿದ್ ಜ್ಯೋತಿ ಯಾತ್ರೆ”ಯನ್ನು ಆಯೋಜಿಸಲಾಗಿತ್ತು. ಈ ಯಾತ್ರೆಯ ಮುಖ್ಯ ಉದ್ದೇಶ ನುಸುಳುಕೋರರಿಂದ ಆಸ್ಸಾಂನ ಜನರ ಮೇಲಾಗುತ್ತಿರುವ ಅನ್ಯಾಯವನ್ನು ದೇಶದ ಜನರಿಗೆ ಎತ್ತಿ ತೋರಿಸುವುದು.
9. ಐತಿಹಾಸಿಕ ಉಪವಾಸ ಸತ್ಯಾಗ್ರಹ : ಎಬಿವಿಪಿಯ ಅಸ್ಸಾಂ ಆಂದೋಲನದ ಹೋರಾಟದಲ್ಲಿ ಮತ್ತೊಂದು ಮೈಲಿಗಲ್ಲು ಈ ಉಪವಾಸ ಸತ್ಯಾಗ್ರಹ. ಅಕ್ಟೋಬರ್ 2, 1983 ರಂದು ಒಂದು ಸಾವಿರಕ್ಕಿಂತ ಹೆಚ್ಚು ಕಾರ್ಯಕರ್ತರು ದೇಶದ ಅನೇಕ ಕಡೆಗಳಿಂದ ಆಗಮಿಸಿ ಗುಹಾಟಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು. ಪೋಲಿಸರು ಅನೇಕ ಕಾರ್ಯಕರ್ತರನ್ನು ಗುಹಾಟಿ ತಲುಪದಂತೆ ತಡೆದರು. ಅವತ್ತು ಎಲ್ಲ ವಾಹನಗಳನ್ನು ತಪಾಸಣೆ ಮಾಡಲಾಯಿತು. ಆದರೂ ಪೋಲಿಸರ ಕಣ್ಣು ತಪ್ಪಿಸಿ ಸಾವಿರ ಕಾರ್ಯಕರ್ತರು ಪ್ರತಿಭಟನೆಯ ಸ್ಥಳಕ್ಕೆ ಬಂದು ತಲುಪಿದರು. ಅನೇಕ ಕಡೆಗಳಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಈ ಸಂದರ್ಭದಲ್ಲಿ 20 ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡರು. ಅನಂತರ ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷರಾದ ಪ್ರೋ. ಕೃಷ್ಣಭಟ್ ಮತ್ತು ಕಾರ್ಯದರ್ಶಿ ಮಹೇಶ್ ಶರ್ಮಾ ಅವರನ್ನು ಬಂಧಿಸಲಾಯಿತು. ಉಳಿದೆಲ್ಲ ಕಾರ್ಯಕರ್ತರನ್ನು ಬಂಧಿಸಿ ಅವರನ್ನು ಆಸ್ಸಾಂನಿಂದ ಹೊರಗೆ ಕರೆದುಕೊಂಡು ಹೋಗಿ ಮೇಘಾಲಯದಲ್ಲಿ ಬಿಡುಗಡೆಗೊಳಿಸಲಾಯಿತು.
10. ಐಎಮ್‍ಡಿಟಿ ಕಾನೂನನ್ನು ತೆಗೆಯುವಂತೆ ಆಗ್ರಹ :IMDT(Illegal Migrants Determination Tribunal)  ಇದು ನುಸುಳುಕೋರರನ್ನು ಹೊರಹಾಕಲು ಸರ್ಕಾರ ಮಾಡಿರುವ ಕಾನೂನು. ಇದು ಶಕ್ತಿಹೀನ ಮತ್ತು ಗೊಂದಲಯುಕ್ತವಾಗಿದೆ ಅಂತ ಎಬಿವಿಪಿ ಇದನ್ನು ತೆಗೆಯುವಂತೆ ಆಗ್ರಹಿಸಿ ಸುಮಾರು 10 ಸಾವಿರ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹಿಸಲಾಯಿತು. ನಂತರ ಒಂದು ಮನವಿ ಪತ್ರವನ್ನು ಸಹಿ ಸಂಗ್ರಹದ ಜೊತೆಗೆ ಆಗಿನ ಗೃಹ ಮಂತ್ರಿ ಎಲ್.ಕೆ. ಅಡ್ವಾನಿಯವರಿಗೆ ಸಲ್ಲಿಸಲಾಯಿತು.
11. ಗುಹಾಟಿಯಲ್ಲಿ ರಾಜ್ಯ ಮಟ್ಟ ವಿಚಾರ ಸಂಕೀರ್ಣ : 15 ಅಕ್ಟೋಬರ್ 2002ರಂದು ಗುಹಾಟಿಯಲ್ಲಿ “ನುಸುಳುವಿಕೆ ಮತ್ತು ಆಸ್ಸಾಂ – ಪರಿಹಾರ” ಎಂಬ ವಿಷಯದ ಮೇಲೆ ವಿಚಾರ ಸಂಕೀರ್ಣವನ್ನು ಏರ್ಪಡಿಸಲಾಗಿತ್ತು.
12. ಜಂತರ್ ಮಂತರ್‍ನಲ್ಲಿ ಐಎಮ್‍ಡಿಟಿ ವಿರುದ್ಧ ಸತ್ಯಾಗ್ರಹ ಮತ್ತು ಪ್ರದರ್ಶನ : ನವೆಂಬರ್ 27, 2002 ರಂದು ಅಸ್ಸಾಂನಿಂದ ಆಗಮಿಸಿದ ಸುಮಾರು 500 ಪ್ರತಿಭಟನಾಕಾರರು ದೆಹಲಿಯ ಜಂತರ್ ಮಂತರ್ ನಲ್ಲಿ ಸೇರಿದರು. ಐಎಮ್‍ಡಿಟಿ ಕಾಯ್ದೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ 10 ಜಿಲ್ಲೆಯ ಸುಮಾರು 20 ಸಾವಿರ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸ್ಥಳೀಯ ಅಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
13. ವಿಜಯೋತ್ಸವ : ಎಬಿವಿಪಿಯ ಪ್ರತಿಭಟನೆಯ ಪಲವಾಗಿ 12 ಜುಲೈ 2005ರಂದು ಸುಪ್ರೀಂ ಕೋರ್ಟ್ ಐಎಮ್‍ಡಿಟಿ ಕಾಯ್ದೆಯನ್ನು ನಿಷೇಧಿಸಿತು. ಇದು ಎಬಿವಿಪಿಯ ಹೋರಾಟಕ್ಕೆ ಸಿಕ್ಕ ಪ್ರತಿಫಲ. ಇದೇ ಸಂದರ್ಭದಲ್ಲಿ ಎಲ್ಲ ಕಡೆ ಪಂಜಿನ ಮೆರವಣಿಗೆ ನಡೆಸಿ ಜಾಗೃತಿ ಮೂಡಿಸಿ ವಿಜಯೋತ್ಸವ ಆಚರಿಸಲಾಯಿತು.
14. ನುಸುಳುಕೋರರಿಗೆ ಆಶ್ರಯ ನೀಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕಪ್ಪು ದಿನ ಆಚರಣೆ : ಐಎಮ್‍ಡಿಟಿ ಕಾಯ್ದೆ ನಿಷೇಧವಾದ ನಂತರ ಕೇಂದ್ರ ಸರ್ಕಾರ ಮತ್ತೊಂದು ಹೊಸ ಕಾನೂನಿಗೆ ಚಾಲನೆ ಕೊಟ್ಟಿತು. ಇದರ ಪ್ರಕಾರ ನುಸುಳುಕೋರರಿಗೆ ಭಾರತೀಯ ನಾಗರೀಕತ್ವವನ್ನು ಒದಗಿಸಿಕೊಡುವ ಪ್ರಸ್ತಾಪ ಇಟ್ಟಿತು. ಇದರ ಬಗ್ಗೆ ದೇಶಾದ್ಯಂತ ಚರ್ಚೆಗಳಾದವು. ಇದರ ಅಪಾಯವನ್ನು ಅರಿತು ಅದನ್ನು ವಿರೋಧಿಸಿ ಅಗಸ್ಟ 7, 2005 ರಿಂದ ಮೂರು ದಿನಗಳ ಕಾಲ ಕಪ್ಪು ದಿನವನ್ನು ದೇಶಾದ್ಯಂತ ಆಚರಿಸಲಾಯಿತು.
15. ಗೃಹ ಸಚಿವರಿಗೆ ಮನವಿ : 24 ಅಗಸ್ಟ 2005 ರಂದು ಎಬಿವಿಪಿ ಮುಖಂಡರ ಒಂದು ತಂಡ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲರನ್ನು ಭೇಟಿಯಾಗಿ ನಾಗರಿಕತ್ವ ವಿಧಾನದ ಕುರಿತು ಚರ್ಚಿಸಿದರು. ಇದಕ್ಕೂ ಮೊದಲು ಇದೇ ತಂಡ ಮುಖ್ಯ ಚುನಾವನಾಧಿಕಾರಿಗಳನ್ನು ಭೇಟಿಯಾಗಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವಂತೆ ಮನವಿ ಮಾಡಿತು.
16. ನುಸುಳುಕೋರರ ವಿರುದ್ಧ ಮುಂದುವರೆದ ವಿದ್ಯಾರ್ಥಿಗಳ ಪ್ರತಿಭಟನೆ : ನವೆಂಬರ್ 2005 ರಲ್ಲಿ ಅಸ್ಸಾಂನ ಲಕಿಮ್‍ಪುರ್, ಹುಯಿಲಕಂಡಿ, ಕರಿಮ್‍ಗಂಜ್, ದುಬಾರಿ, ದಿಬುಗರ್, ಗುಹಾಟಿ ಮುಂತಾದ ಕಡೆಗಳಲ್ಲಿ ಬೃಹತ್ ವಿದ್ಯಾರ್ಥಿ ರ್ಯಾಲಿಗಳನ್ನು ಆಯೋಜಿಸಲಾಗಿತ್ತು. ಸುಮಾರು 10 ಸಾವಿರ ವಿದ್ಯಾರ್ಥಿ ವಿದ್ಯಾರ್ಥಿನೀಯರು ಭಾಗವಹಿಸಿದ್ದರು. ಪದ್ಮಶ್ರೀ ಮುಜಾಫರ್ ಹುಸೇನ್ ಈ ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದರು. ಈ ರ್ಯಾಲಿಯಲ್ಲಿ ಅಸ್ಸಾಂ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೆ.ಪಿ.ರಾಜ್‍ಕ್ಲೋವಾ, ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ರಘುನಂದನ್ ಭಾಗವಹಿಸಿದ್ದರು.
17. ರಾಷ್ಟ್ರಮಟ್ಟದ ಜಾಗೃತಿ ಅಭಿಯಾನ : ಜನರ ಗಮನವನ್ನು ಈ ಗಂಭೀರ ಸಮಸ್ಯೆಯ ಕಡೆಗೆ ಸೆಳೆಯಲು ‘ರಾಷ್ಟ್ರೀಯ ಜಾಗೃತಿ ಅಭಿಯಾನವನ್ನು’ ಹಮ್ಮಿಕೊಳ್ಳಲಾಗಿತ್ತು. 23 ಡಿಸೆಂಬರ್ 2005 ರಿಂದ 5 ಫೆಬ್ರುವರಿ 2006ರವರೆಗೆ ಇದು ನಡೆಯಿತು. ಇದರ ಪ್ರಯುಕ್ತವಾಗಿ ಚರ್ಚೆ, ಪತ್ರಿಕಾಗೋಷ್ಠಿ, ಸಭೆ ಮುಂತಾದವುಗಳಲ್ಲಿ ಅಸ್ಸಾಂನ 50ಕ್ಕೂ ಹೆಚ್ಚು ತಜ್ಞರು ಭಾಗವಹಿಸಿದ್ದರು. ಈ ಅಭೀಯಾನದಲ್ಲಿ ಸುಮಾರು 508 ಕಾರ್ಯಕ್ರಮ ನಡೆಸಲಾಯಿತು. 25 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
18. ಗಡಿ ಸರ್ವೆಕ್ಷಣೆ : ಎಬಿವಿಪಿಯ ಸುಮಾರು 45 ಜನರ ತಂಡ ಜನವರಿ 2007ರಲ್ಲಿ ಸುಮಾರು 4000 ಕಿ.ಮೀ ಭಾರತ-ಬಾಂಗ್ಲಾ ಗಡಿಯ ಸರ್ವೇಕ್ಷಣೆ ನಡೆಸಿತು. ಅಲ್ಲಿಯ ಗಂಭೀರತೆಯ ವರದಿಯನ್ನು ರಾಷ್ಟ್ರಪತಿಗಳಿಗೆ, ಪ್ರಧಾನ ಮಂತ್ರಿಗಳಿಗೆ ಸಲ್ಲಿಸಿತು.
19. ರಾಷ್ಟ್ರಾದ್ಯಂತ ಕಾಲೇಜು ಬಂದ್ : ನುಸುಳುಕೋರರ ವಿರುದ್ಧ ಕ್ರಮ ಜರುಗಿಸದ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ನವೆಂಬರ್ 12, 2008ರಂದು ರಾಷ್ಟ್ರಾದ್ಯಂತ ಕಾಲೇಜು ಬಂದ್‍ಗೆ ಕರೆ ನೀಡಲಾಗಿತ್ತು. ಸುಮಾರು 45 ಸಾವಿರ ಕಾಲೇಜುಗಳು ಸಂಪೂರ್ಣ ಬಂದ್ ಆಗಿದ್ದು ಐತಿಹಾಸಿಕ ದಾಖಲೆ.
20. ದೇಶಾದ್ಯಂತ ಜಿಲ್ಲಾ ರ್ಯಾಲಿಗಳು : ನುಸುಳುಕೋರರಿಂದಾಗುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ದೇಶದ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ವಿದ್ಯಾರ್ಥಿ ರ್ಯಾಲಿಯನ್ನು ಆಯೋಜಿಸಲಾಗಿತ್ತು
21. ಆಸ್ಸಾಂ ಚಲೋ(ಚಿಕನ್‍ನೆಕ್ ಚಲೋ): ಭಾರತದ ಮೂಲೆ ಮೂಲೆಗಳಿಂದ ಆಗಮಿಸಿದ ಸುಮಾರು 80 ಸಾವಿರ ಕಾರ್ಯಕರ್ತರು ಕಿಶನ್‍ಗಂಜ್ ಪ್ರದೇಶದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಬಾಂಗ್ಲಾ ನುಸುಳುಕೋರರಿಂದ ಪ್ರಾರಂಭವಾಗಿರುವ ಜನಾಂಗಿಯ ಹಿಂಸೆಯ ವಿರುದ್ಧ ಎಬಿವಿಪಿ ಮತ್ತೊಮ್ಮೆ ಗರ್ಜಿಸಿ ಎದ್ದು ನಿಂತಿದೆ. ಶಾಂತಿಯುತ ಪ್ರತಿಭಟನೆಗಳ ಮೂಲಕ ಜನಜಾಗೃತಿ ಮೂಡಿಸುತ್ತಿದೆ. ಅಸ್ಸಾಂ ಸಹೋದರ ಸಹೋದರಿಯರ ರಕ್ಷಣೆಗೆ ಧಾವಿಸಿದೆ. ದಾಳಿಯ ಬೀತಿಯಿಂದ ಬೆಂಗಳೂರು, ಹೈದರಾಬಾದ್, ಪುಣೆ, ಮುಂಬಯಿ ಮುಂತಾದ ನಗರಗಳನ್ನು ತೊರೆಯುತ್ತಿರುವ ಆಸ್ಸಾಂ ಬಂದುಗಳಿಗೆ ಅಭಯ ನೀಡಲು ಎಬಿವಿಪಿ ಟೊಂಕ ಕಟ್ಟಿ ನಿಂತಿದೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಎಬಿವಿಪಿ ಮಾಡುತ್ತಿದೆ. ಶುರುವಾಗಿದೆ ಸಂಗ್ರಾಮ . . . . ಇನ್ನಿಲ್ಲ ವಿರಾಮ.
ಬಸವರಾಜ ಕುಳಲಿ
ಅಥಣಿ – 591304

Leave a Reply

Your email address will not be published.

This site uses Akismet to reduce spam. Learn how your comment data is processed.