ರಾಷ್ಟ್ರೀಯ ಸ್ವಯಂಸೇವಕ ಸಂಘದ
ಪರಮಪೂಜನೀಯ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಅವರು ವಿಜಯದಶಮಿ ಉತ್ಸವದ ಸಂದರ್ಭದಲ್ಲಿ ನೀಡಿದ ಭಾಷಣದ ಸಾರಾಂಶ.
ಆಶ್ವೀಜ ಶುದ್ಧ ದಶಮಿ, ಬುಧವಾರ
5 ಅಕ್ಟೋಬರ್, 2022
ನಾಗಪುರ
ಇಂದಿನ ಕಾರ್ಯಕ್ರಮದ ಮುಖ್ಯ ಅತಿಥಿ ಆದರಣೀಯ ಶ್ರೀಮತಿ ಸಂತೋಷ್ ಯಾದವ್ ಅವರೇ, ವೇದಿಕೆಯಲ್ಲಿ ಉಪಸ್ಥಿತರಿರುವ ವಿದರ್ಭ ಪ್ರಾಂತದ ಸಂಘಚಾಲಕರೇ, ನಾಗಪುರ ಮಹಾನಗರ ಸಂಘಚಾಲಕರೇ, ನಾಗಪುರ ಮಹಾನಗರದ ಸಹಸಂಘಚಾಲಕರೇ,ನಾಗರೀಕ ಸಜ್ಜನರೇ, ಮಾತಾ ಭಗಿನಿಯರೇ ಮತ್ತು ಆತ್ಮೀಯ ಸ್ವಯಂಸೇವಕ ಬಂಧುಗಳೇ,
ನವರಾತ್ರಿಯ ಶಕ್ತಿಪೂಜೆಯ ನಂತರ ವಿಜಯದ ಅಂಶದ ಜೊತೆಯಲ್ಲಿ ಬರುವ ಆಶ್ವೀಜ ಶುಕ್ಲ ದಶಮಿಯ ಈ ದಿನ ಪ್ರತಿವರ್ಷದಂತೆ ವಿಜಯದಶಮಿ ಉತ್ಸವವನ್ನು ಆಚರಿಸಲು ನಾವು ಇಲ್ಲಿ ಸೇರಿದ್ದೇವೆ. ಶಕ್ತಿ ಸ್ವರೂಪಿಣಿ ಜಗಜ್ಜನನಿಯೇ ಶಿವಸಂಕಲ್ಪಗಳನ್ನು ಸಫಲಗೊಳಿಸಲು ಆಧಾರ. ಎಲ್ಲೆಡೆಯೂ ಪಾವಿತ್ರ್ಯತೆಯನ್ನೂ, ಶಾಂತಿಯನ್ನೂ ಸ್ಥಾಪನೆಗೊಳಿಸಲೂ ಕೂಡ ಆ ಶಕ್ತಿಯ ಆಧಾರ ಅನಿವಾರ್ಯ. ಸುಯೋಗದಿಂದ ಇಂದು ಪ್ರಮುಖ ಅತಿಥಿಯ ರೂಪದಲ್ಲಿ ಶ್ರೀಮತಿ ಸಂತೋಷ್ ಯಾದವ್ ಅವರು ತಮ್ಮ ಗಣ್ಯಉಪಸ್ಥಿತಿಯಿಂದ ನಮ್ಮೆಲ್ಲರ ಸಂತಸವನ್ನು ಇಮ್ಮಡಿಗೊಳಿಸಿದ್ದಾರೆ. ಅವರೂ ಶಕ್ತಿಯನ್ನು, ಚೈತನ್ಯವನ್ನು ಪ್ರತಿನಿಧಿಸುತ್ತಾರೆ. ಅವರು ಗೌರಿಶಂಕರ ಶಿಖರವನ್ನು ಎರಡು ಬಾರಿ ಆರೋಹಿಸಿದ್ದಾರೆ.
ಸಂಘದ ಕಾರ್ಯಕ್ರಮದಲ್ಲಿ ಅತಿಥಿಗಳ ರೂಪದಲ್ಲಿ ಸಮಾಜದ ಪ್ರಬುದ್ಧ ಮತ್ತು ಕರ್ತೃತ್ವ ಸಂಪನ್ನ ಮಹಿಳೆಯರ ಉಪಸ್ಥಿತಿಯು ಹಳೆಯ ಪರಂಪರೆಯಾಗಿದೆ. ವ್ಯಕ್ತಿ ನಿರ್ಮಾಣದ ಶಾಖಾ ಪದ್ಧತಿಯು ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಸಂಘ ಮತ್ತು ಸಮಿತಿಯಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿದೆ. ಉಳಿದೆಲ್ಲ ಕಾರ್ಯಗಳಲ್ಲಿ ಮಹಿಳೆಯರು ಪುರುಷರು ಎಂಬ ಭೇದವಿಲ್ಲದೆ, ಎಲ್ಲರೂ ಒಟ್ಟಿಗೆ ಕಾರ್ಯ ಸಂಪನ್ನಗೊಳಿಸುತ್ತಾರೆ. ಭಾರತೀಯ ಪರಂಪರೆಯಲ್ಲಿ ಇದೇ ರೀತಿಯ ಪೂರಕ ದೃಷ್ಟಿಯ ವಿಚಾರವನ್ನೇ ಮುಂದಿಡಲಾಗಿದೆ. ನಾವು ಆ ದೃಷ್ಟಿಯನ್ನು ಮರೆತಿದ್ದೇವೆ, ಮಾತೃಶಕ್ತಿಯನ್ನು ಸೀಮಿತಗೊಳಿಸಿದ್ದೇವೆ. ಸತತ ಆಕ್ರಮಣಗಳ ಪರಿಸ್ಥಿತಿಯಲ್ಲಿ ಈ ಮಿಥ್ಯಾಚಾರಕ್ಕೆ ತಾತ್ಕಾಲಿಕವಾಗಿ ಸ್ಥಾನ ದೊರೆತಿದ್ದು, ನಂತರ ಅದನ್ನೇ ಆಚರಣೆಯ ರೂಢಿಯಲ್ಲಿ ತರಲಾಗಿದೆ. ಭಾರತದ ನವೋತ್ಥಾನದ ಈ ಉಷಃಕಾಲದಲ್ಲಿ ನಮ್ಮಲ್ಲಿ ಆಗಿ ಹೋದ ಮಹಾಪುರುಷರು ಈ ರೂಢಿಯನ್ನು ದೂರಗೊಳಿಸಲು ಕರೆ ನೀಡಿದ್ದು, ಮಾತೃಶಕ್ತಿಯನ್ನು ದೇವತಾಸ್ವರೂಪದಲ್ಲಿ ಆರಾಧಿಸಿ ಪೂಜಾಗೃಹಕ್ಕೆ ಸೀಮಿತಗೊಳಿಸುವುದನ್ನೂ,ಅಥವಾ ದ್ವಿತೀಯ ಶ್ರೇಣಿಯಲ್ಲಿ ಕಂಡು ಕೇವಲ ಅಡುಗೆಮನೆಯ ನಿರ್ವಹಣೆಗೆ ಒಳಪಡಿಸುವುದನ್ನೂ ಮಾಡುವ ಅತಿರೇಕಕ್ಕೆ ಹೋಗದೆ ಮಹಿಳೆಯರನ್ನು ಶಿಕ್ಷಿತರನ್ನಾಗಿಸಿ, ಸಶಕ್ತೀಕರಣಗೊಳಿಸುವ ಮತ್ತು ಸಮಾಜದ ಎಲ್ಲಾ ಕ್ರಿಯಾಪ್ರಕಲ್ಪಗಳಲ್ಲಿ, ನಿರ್ಣಯ ಪ್ರಕ್ರಿಯೆಗಳಲ್ಲೂ ಸೇರಿದಂತೆ ಎಲ್ಲ ಸ್ಥಳಗಳಲ್ಲೂ ಸಮಾನವಾದ ಸಹಭಾಗಿತ್ವ ನೀಡುವ ಕುರಿತಾಗಿ ನಮ್ಮ ಮಹಾಪುರುಷರು ಒತ್ತು ನೀಡಿದ್ದಾರೆ. ವಿವಿಧ ರೀತಿಯ ಅನುಭವಗಳ ನಂತರ ವಿಶ್ವದಲ್ಲಿ ಪ್ರಚಲಿತವಿರುವ ವ್ಯಕ್ತಿವಾದ ಅಥವಾ ಸ್ತ್ರೀವಾದದ ದೃಷ್ಟಿಕೋನವೂ ಸಹ ಈಗ ಸಹಭಾಗಿತ್ವದ, ಸಮನ್ವಯದ ಕಡೆಗೇ ತಮ್ಮ ವಿಚಾರಗಳನ್ನು ತೆರೆದುಕೊಳ್ಳುತ್ತಿದೆ. 2017ರಲ್ಲಿ ವಿಭಿನ್ನ ಸಂಘಟನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಕಾರ್ಯಕರ್ತರೊಂದಿಗೆ ಜೋಡಿಸಿಕೊಂಡು ಭಾರತದ ಮಹಿಳೆಯರ ಬಗೆಗೆ ಬಹು ವ್ಯಾಪಕವಾದ ಮತ್ತು ಸರ್ವಾಂಗೀಣವಾದ ಸರ್ವೇಕ್ಷಣೆ ನಡೆಯಿತು. ಅದನ್ನು ಆಡಳಿತ ವ್ಯವಸ್ಥೆಗೂ ತಲುಪಿಸಲಾಯಿತು. ಆ ಸಮೀಕ್ಷೆಯ ನಿಷ್ಕರ್ಷೆಯನ್ನು ನಡೆಸಿದಾಗಲೂ ಮಹಿಳೆಯರಿಗೆ ಅಗತ್ಯವಾದ ಪ್ರಬೋಧನ, ಸಶಕ್ತೀಕರಣ ಮತ್ತು ಸಮಾನ ಸಹಭಾಗಿತ್ವದ ಅವಶ್ಯಕತೆಯು ಕಂಡುಬಂದಿದೆ. ಈ ಕಾರ್ಯವು ಕುಟುಂಬ ಸ್ತರದಿಂದ ಆರಂಭಗೊಂಡು ಸಂಘಟನೆಗಳವರೆಗೂ ಸ್ವೀಕೃತವಾಗಬೇಕಿದೆ ಮತ್ತು ಪ್ರಚಲಿತವಾಗಬೇಕಿದೆ. ಆಗ ಮಾತ್ರವೇ ಮಾತೃಶಕ್ತಿಯನ್ನು ಒಳಗೊಂಡ ಸಂಪೂರ್ಣ ಸಮಾಜವು, ರಾಷ್ಟ್ರದ ನವೋತ್ಥಾನದಲ್ಲಿ ತನ್ನ ಭೂಮಿಕೆಯನ್ನು ಸಫಲವಾಗಿ ನಿರ್ವಹಿಸಲು ಸಾಧ್ಯ.
ಈ ರಾಷ್ಟ್ರೀಯ ನವೋತ್ಥಾನದ ಪ್ರಕ್ರಿಯೆಯು ಈಗ ಸಾಮಾನ್ಯ ವ್ಯಕ್ತಿಯ ಅನುಭವಕ್ಕೂ ನಿಲುಕುತ್ತಿದೆ. ನಮ್ಮ ಪ್ರೀತಿಯ ಭಾರತ ತನ್ನ ಬಲದಿಂದ, ಶೀಲದಿಂದ ಮುಂದುವರೆಯುತ್ತಿರುವುದು ಮತ್ತು ಜಾಗತಿಕ ಪ್ರತಿಷ್ಠೆಯಲ್ಲೂ ನಿರಂತರವಾಗಿ ವೃದ್ಧಿಯಾಗಿರುವುದನ್ನು ನೋಡಿ ನಾವೆಲ್ಲರೂ ಆನಂದಿತರಾಗಿದ್ದೇವೆ. ಎಲ್ಲ ಕ್ಷೇತ್ರದಲ್ಲೂ ಆತ್ಮನಿರ್ಭರತೆಯ ಕಡೆಗೆ ಕೊಂಡೊಯ್ಯುವ ನೀತಿಗಳ ಅನುಸರಣೆಗೆ ಸರಕಾರದ ಕಡೆಯಿಂದಲೂ ಪುರಸ್ಕಾರ ದೊರೆಯುತ್ತಿದೆ. ವಿಶ್ವದ ರಾಷ್ಟ್ರಗಳಲ್ಲಿ ಈಗ ಭಾರತದ ಮಹತ್ವ ಮತ್ತು ಅದರ ಕುರಿತಾದ ವಿಶ್ವಸನೀಯತೆ ಹೆಚ್ಚಾಗಿದೆ. ಸುರಕ್ಷಾ ಕ್ಷೇತ್ರದಲ್ಲಿ ನಾವು ಹೆಚ್ಚಾಗಿ ಸ್ವಾವಲಂಬಿಗಳಾಗುತ್ತ ನಡೆಯುತ್ತಿದ್ದೇವೆ.
ಕೊರೋನಾದ ವಿಪತ್ತಿನ ಸಂದರ್ಭದಿಂದ ಹೊರಬಂದು ನಮ್ಮ ಅರ್ಥವ್ಯವಸ್ಥೆಯು ಅತ್ಯಂತ ವೇಗವಾಗಿ ತನ್ನ ಹಿಂದಿನ ಸ್ಥಿತಿಗೆ ಮರಳಿದೆ. ಆಧುನಿಕ ಭಾರತದ ಮುಂದಿನ ಆರ್ಥಿಕ, ತಾಂತ್ರಿಕ ಮತ್ತು ಸಾಂಸ್ಕೃತಿಕ ಅಡಿಗಲ್ಲುಗಳ ಕುರಿತಾಗಿ ನವದೆಹಲಿಯ ಕರ್ತವ್ಯಪಥದ ಉದ್ಘಾಟನಾ ಸಮಾರಂಭದ ಸಮಯದಲ್ಲಿ ಕೇಳಿದ್ದೀರಿ. ಸರಕಾರದ ಮೂಲಕ ಘೋಷಣೆಯಾದ ಈ ಸ್ಪಷ್ಟ ದಿಶೆಯು ಅಭಿನಂದನೀಯ. ಆದರೆ ಅದಕ್ಕೂ ಮಿಗಿಲಾಗಿ ಈ ದಿಶೆಯಲ್ಲಿ ನಾವೆಲ್ಲ ಮನ, ವಚನ, ಕರ್ಮಬದ್ಧರಾಗಿ ಒಟ್ಟಿಗೆ ನಡೆಯಬೇಕಾದ ಅವಶ್ಯಕತೆಯಿದೆ. ಆತ್ಮನಿರ್ಭರತೆಯ ದಾರಿಯಲ್ಲಿ ಮುಂದೆ ಸಾಗಲು ನಮ್ಮ ರಾಷ್ಟ್ರದ ಆತ್ಮಸ್ವರೂಪವನ್ನು ಶಾಸನ, ಪ್ರಶಾಸನ ಮತ್ತು ಸಮಾಜ ಸ್ಪಷ್ಟವಾಗಿ ಮತ್ತು ಸಮಾನವಾಗಿ ಅರ್ಥ ಮಾಡಿಕೊಳ್ಳುವುದು ಕೂಡ ಅನಿವಾರ್ಯವಾಗಿದೆ. ತಮ್ಮ ತಮ್ಮ ಸ್ಥಾನದಲ್ಲಿ, ಪರಿಸ್ಥಿತಿಯಲ್ಲಿ ಸಮಯದ ಅಗತ್ಯಕ್ಕೆ ತಕ್ಕಂತೆ ಒಗ್ಗಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಆಗ ಪರಸ್ಪರ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುತ್ತಾ ಮತ್ತು ವಿಶ್ವಾಸದಿಂದ ಜೊತೆಗೂಡಿ ಸಾಗಿದರೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ವೈಚಾರಿಕ ಸ್ಪಷ್ಟತೆ, ಸಮಾನ ದೃಷ್ಟಿ, ಮತ್ತು ದೃಢತೆಯ ಜೊತೆಗೆ ಮಿತಿಯಲ್ಲಿ ಒಗ್ಗಿಕೊಳ್ಳುವುದನ್ನೂ ರೂಢಿಸಿಕೊಳ್ಳುತ್ತಾ ತಪ್ಪುಗಳಿಂದ ಚಂಚಲತೆಯಿಂದ ದೂರವಿರಲು ಸಾಧ್ಯವಿದೆ. ಶಾಸನ, ಪ್ರಶಾಸನ, ವಿಭಿನ್ನ ರೀತಿಯ ನಾಯಕಗಣದ ಜೊತೆಗೆ ಸಮಾಜ ತನ್ನ ಸ್ವಾರ್ಥ ಮತ್ತು ಭೇದಭಾವಗಳಿಂದ ಮೇಲೆದ್ದು ಒಳ್ಳೆಯ ಉದ್ದೇಶಕ್ಕಾಗಿ ಕರ್ತವ್ಯ ಪಥದಲ್ಲಿ ಮುಂದೆ ಸಾಗಬೇಕಿದೆ,ಆಗ ರಾಷ್ಟ್ರ ಅಭಿವೃದ್ಧಿಯ ಪಥದಲ್ಲಿ ಅಗ್ರೇಸರವಾಗುತ್ತದೆ. ಶಾಸನ, ಪ್ರಶಾಸನ ಮತ್ತು ನಾಯಕಗಣ ಅವರ ಕರ್ತವ್ಯಗಳನ್ನು ಮಾಡುತ್ತಾರೆ, ಜೊತೆಗೆ ಸಮಾಜವೂ ಕೂಡ ತನ್ನ ಕರ್ತವ್ಯಗಳನ್ನು ವಿಚಾರಪೂರ್ವಕವಾಗಿ ನಿರ್ವಹಣೆ ಮಾಡಬೇಕಿದೆ.
ಈ ನವೋತ್ಥಾನದ ಪ್ರಕ್ರಿಯೆಯಲ್ಲಿ ಬರುವ ಎಲ್ಲ ಅಡೆತಡೆಗಳಿಂದ ಪಾರಾಗುವ ಸಲುವಾಗಿ ನಾವು ಕಾರ್ಯನಿರ್ವಹಿಸಬೇಕಿದೆ. ಮೊದಲ ತಡೆ ‘ಗತಾನುಗತಿಕತೆ’. ಸಮಯದ ಜೊತೆಗೆ ಮನುಷ್ಯರ ಜ್ಞಾನನಿಧಿ ಹೆಚ್ಚಾಗುತ್ತಲೇ ಹೋಗುತ್ತದೆ. ಕಾಲ ಮುಂದೆ ಸಾಗುತ್ತಾ ಕೆಲವು ವಿಚಾರಗಳು ಬದಲಾಗುತ್ತದೆ, ಕೆಲವು ವಿಚಾರಗಳು ನಶಿಸಿಹೋಗುತ್ತದೆ. ಕೆಲವು ಹೊಸ ವಿಚಾರಗಳು ಪರಿಸ್ಥಿತಿಗಳ ನಡುವೆ ಆರಂಭವೂ ಆಗುತ್ತದೆ. ಹಾಗಾಗಿಯೇ ಹೊಸ ಸಂರಚನೆ ಮಾಡುವ ಸಂದರ್ಭದಲ್ಲಿ ಪರಂಪರೆ ಮತ್ತು ಸಾಮಯಿಕತೆಗಳ ಸಮನ್ವಯ ಸಾಧಿಸಬೇಕಾಗುತ್ತದೆ. ಕಾಲಬಾಹಿರವಾದ ಕೆಲವು ವಿಚಾರಗಳನ್ನು ದೂರ ಮಾಡಿ ಹೊಸ ಯುಗಾನುಕೂಲ ಮತ್ತು ದೇಶಾನುಕೂಲ ಪರಂಪರೆಗಳನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಅದೇ ಸಮಯದಲ್ಲಿ ನಮ್ಮ ಅಸ್ಮಿತೆ, ಸಂಸ್ಕೃತಿ, ಜೀವನದೃಷ್ಟಿ ಇತ್ಯಾದಿಗಳನ್ನು ಅಧೋರೇಖಿತಗೊಳಿಸುವ ಮೌಲ್ಯಗಳು ಕೀವಾಗದಿರುವಂತೆ ನೋಡಿಕೊಳ್ಳಬೇಕಿದೆ.
ಇನ್ನೊಂದು ರೀತಿಯ ತಡೆಯೆಂದರೆ ಏಕತೆ ಮತ್ತು ಉನ್ನತಿಯನ್ನು ಬಯಸದ ಶಕ್ತಿಗಳ ನಿರ್ಮಾಣ. ತಪ್ಪು ಅಥವಾ ಅಸತ್ಯವಾದ ವಿಚಾರವನ್ನು ಪ್ರಸಾರ ಮಾಡುವ, ಭ್ರಮೆಯನ್ನು ಹರಡುವ, ಅಹಿತದ ಕೆಲಸ ಮಾಡುವ ಅದನ್ನು ಪ್ರೋತ್ಸಾಹಿಸುವ ಮತ್ತು ಸಮಾಜದಲ್ಲಿ ಆತಂಕ, ಕಲಹವನ್ನು ಹೆಚ್ಚು ಮಾಡುವ ಆ ರೀತಿಯ ಶಕ್ತಿಗಳ ಕಾರ್ಯಪದ್ಧತಿಯ ಅನುಭವ ನಮಗೆ ಆಗುತ್ತಿದೆ. ಭಾರತದೊಳಗೆ ಸಮಾಜದ ವಿಭಿನ್ನ ವರ್ಗಗಳ ನಡುವೆ ಸ್ವಾರ್ಥ, ದ್ವೇಷದ ಆಧಾರದ ಮೇಲೆ ದೂರವನ್ನು ಹೆಚ್ಚಿಸುವ, ದ್ವೇಷ ಹೆಚ್ಚಿಸುವ ಕೆಲಸ ಯಾವಾಗಲೂ ಸ್ವತಂತ್ರ ಭಾರತದಲ್ಲಿ ಮಾಡುತ್ತಿದ್ದಾರೆ. ಅವರ ಕೆಲಸಗಳಿಗೆ ವಶರಾಗದೆ ಅವರ ಭಾಷೆ, ಪಂಥ, ಪ್ರಾಂತ, ನೀತಿ ಯಾವುದೇ ಇರಲಿ ಅವರೆಡೆಗೆ ನಿರ್ಮೋಹವಾಗಿ ನಿರ್ಭಯತೆಯಿಂದ ಅವರನ್ನು ಖಂಡಿಸಬೇಕಿದೆ. ಶಾಸನ ಮತ್ತು ಪ್ರಶಾಸನಗಳು ಈ ಶಕ್ತಿಗಳ ನಿಯಂತ್ರಣದಲ್ಲಿ ಸಿಕ್ಕಿ ನಿರ್ನಾಮಗೊಳಿಸುವ ಪ್ರಯತ್ನಗಳೂ ನಡೆಯುತ್ತಿದ್ದು ನಾವು ಎಚ್ಚರಿಕೆಯಿಂದಿರಬೇಕಾಗಿದೆ.
ಸಮಾಜದ ಸಶಕ್ತ ಭೂಮಿಕೆಯಿಲ್ಲದಿದ್ದರೆ ಯಾವುದೇ ಮಹತ್ತರವಾದ ಕಾರ್ಯ ಅಥವಾ ಪರಿವರ್ತನೆಯು ಯಶಸ್ವಿಯಾಗಿಯೋ ಅಥವಾ ಸ್ಥಾಯಿಯಾಗಿಯೋ ಉಳಿಯಲು ಸಾಧ್ಯವಿಲ್ಲ ಎನ್ನುವುದು ಅನುಭವ ಸಿದ್ಧವಾಗಿದೆ. ಒಳ್ಳೆಯ ವ್ಯವಸ್ಥೆ ಜನರ ಮನಮುಟ್ಟಬೇಕು ಮತ್ತು ಜನ ಅದನ್ನು ಸ್ವೀಕರಿಸಬೇಕು ಇಲ್ಲದಿದ್ದರೆ ಅದು ನಡೆಯಲು ಸಾಧ್ಯವಿಲ್ಲ.
ವಿಶ್ವದಲ್ಲಿ ಇದುವರೆಗೂ ಬಂದಿರುವ ಮತ್ತು ತಂದಿರುವ ಎಲ್ಲ ಮಹತ್ವದ ಮತ್ತು ಸ್ಥಾಯಿ ಪರಿವರ್ತನೆಯಲ್ಲಿ ಸಮಾಜದ ಜಾಗೃತಿಯ ನಂತರವೇ ವ್ಯವಸ್ಥೆಯಲ್ಲಿ ಮತ್ತು ವಿಚಾರದಲ್ಲಿ ಪರಿವರ್ತನೆ ಬಂದಿದೆ.
ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡುವ ನೀತಿ ರೂಪಿತವಾಗಬೇಕು ಎಂಬುದು ಅತ್ಯಂತ ಸಮಂಜಸ ವಿಚಾರ, ಈ ಕುರಿತಾಗಿ ಹೊಸ ಶಿಕ್ಷಣ ನೀತಿಯ ಮೂಲಕ ಶಾಸನ, ಪ್ರಶಾಸನ ಗಮನ ಹರಿಸಿದೆ. ಆದರೆ ನಮ್ಮಲ್ಲಿನ ಪೋಷಕರಿಗೆ ತಮ್ಮ ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಓದುವುದು ಬೇಕಾಗಿದೆಯೇ? ಮತ್ತು ತಥಾಕಥಿತ ಆರ್ಥಿಕ ಲಾಭ ಅಥವಾ ಕರಿಯರ್‌ನ ಮರೀಚಿಕೆಯ ಬೆನ್ನಟ್ಟಿ ಕಣ್ಣುಕಟ್ಟಿ ಪೋಷಕರು ಓಡುತ್ತಿದ್ದಾರೆಯೇ? ಕರಿಯರ್ ರೂಪಿಸಿಕೊಳ್ಳಲು ಶಿಕ್ಷಣದ ಜೊತೆಗೆ ಉದ್ಯಮಶೀಲತೆ, ಸಾಹಸ, ಜಾಣ್ಮೆ ಎಲ್ಲದರ ಅವಶ್ಯಕತೆಯಿದೆ. ಮಾತೃಭಾಷೆಯ ಕುರಿತು ಶಾಸನದ ಉಪೇಕ್ಷೆಯ ಕುರಿತು ಮಾತನಾಡುವಾಗ ನಾವು ನಮ್ಮ ಹಸ್ತಾಕ್ಷರವನ್ನು ಮಾತೃಭಾಷೆಯಲ್ಲಿ ಮಾಡುತ್ತಿದ್ದೇವೆಯೆ? ನಮ್ಮ ಮನೆಯಲ್ಲಿ ನಮ್ಮ ಮಾತೃಭಾಷೆಯನ್ನು ಉಪಯೋಗಿಸುತ್ತಿದ್ದೇವೆಯೇ ಇಲ್ಲವೆ? ನಮ್ಮ ಮನೆಯ ಮುಂದಿನ ನಾಮಫಲಕಗಳು ಮಾತೃಭಾಷೆಯಲ್ಲಿದೆಯೆ? ಮನೆಯ ಕಾರ್ಯಕ್ರಮಗಳ ಆಮಂತ್ರಣ ಪತ್ರಗಳು ,ಆಹ್ವಾನ ಪತ್ರಿಕೆಗಳನ್ನು ಮಾತೃಭಾಷೆಯಲ್ಲಿ ಕಳುಹಿಸುತ್ತಿದ್ದೇವೆಯೆ? ಈ ಕುರಿತು ಯೋಚಿಸಬೇಕಿದೆ.
ಹೊಸ ಶಿಕ್ಷಣ ನೀತಿಯ ಕಾರಣದಿಂದ ವಿದ್ಯಾರ್ಥಿಯೊಬ್ಬ ಒಳ್ಳೆಯ ಮನುಷ್ಯನಾಗಲಿ,ಅವನೊಳಗೆ ದೇಶಭಕ್ತಿಯ ಭಾವನೆಗಳು ಜಾಗೃತವಾಗಲಿ,ಅವನೊಬ್ಬ ಸುಸಂಸ್ಕೃತ ನಾಗರೀಕನಾಗಿ ರೂಪುಗೊಳ್ಳಲಿ ಎಂದು ಎಲ್ಲರೂ ಅಪೇಕ್ಷಿಸುತ್ತಿದ್ದೇವೆ. ಆದರೆ ಸುಶಿಕ್ಷತ, ಸಂಪನ್ನ ಮತ್ತು ಪ್ರಬುದ್ಧ ಪಾಲಕರು, ಶಿಕ್ಷಣದ ಸಮಗ್ರ ಉದ್ದೇಶವನ್ನು ಗಮನದಲ್ಲಿರಿಸಿಕೊಂಡವರು ಮಕ್ಕಳನ್ನು ಕೇವಲ ದೊಡ್ಡ ಶಾಲೆಗಳಿಗೆ ಮತ್ತು ಮಹಾವಿದ್ಯಾಲಯಗಳಿಗೆ ಕಳುಹಿಸಿದರೆ ಸಾಕೆ? ಶಿಕ್ಷಣ ಕೇವಲ ಶಾಲೆಗಳ ತರಗತಿಯಲ್ಲಿ ದೊರೆಯುವುದಿಲ್ಲ. ಮನೆಯಲ್ಲಿ ಸಂಸ್ಕಾರದ ವಾತಾವರಣವನ್ನು ನೆಲೆಗೊಳಿಸುವಲ್ಲಿ ಪೋಷಕರದ್ದು; ಸಮಾಜದಲ್ಲಿ ಭದ್ರತೆ, ಸಾಮಾಜಿಕ ಅನುಶಾಸನ ಇತ್ಯಾದಿ ವಾತಾವರಣವನ್ನು ಸರಿಯಾಗಿಟ್ಟುಕೊಳ್ಳುವ ಮಾಧ್ಯಮಗಳದ್ದು; ಜನನಾಯಕರದ್ದು; ಮತ್ತು ಹಬ್ಬ ಹರಿದಿನಗಳು,ಉತ್ಸವ,ಮೇಳ ಇತ್ಯಾದಿ ಸಾಮಾಜಿಕ ಆಯೋಜನೆಗಳದ್ದೂ ಸೇರಿದಂತೆ ಇದರಲ್ಲಿ ಎಲ್ಲರಿಗೂ ಸಮಾನವಾದ, ಮಹತ್ವದ ಭೂಮಿಕೆಯಿದೆ. ಈ ನಿಟ್ಟಿನಲ್ಲಿ ನಮ್ಮ ಗಮನ ಎಷ್ಟಿದೆ? ಅದೆಲ್ಲವನ್ನೂ ಹೊರತುಮಾಡಿದ, ಕೇವಲ ಶಾಲೆಗಳಲ್ಲಿನ ಶಿಕ್ಷಣದಿಂದ ಮಾತ್ರ ಶಿಕ್ಷಣ ಪ್ರಭಾವಿಯಾಗಲು ಸಾಧ್ಯವಿಲ್ಲ.
ವಿವಿಧ ಪ್ರಕಾರದ ಚಿಕಿತ್ಸಾ ಪದ್ಧತಿಗಳ ಸಮನ್ವಯದಿಂದ ಚಿಕಿತ್ಸೆಯು ಉತ್ತಮ ಗುಣವತ್ತತೆಯಿಂದ,ಅತ್ಯಂತ ಕಡಿಮೆ ಬೆಲೆಯಲ್ಲಿ, ಸುಲಭವಾಗಿ ದೊರೆಯುವಂತೆ ಮತ್ತು ವ್ಯಾಪಾರೀಕರಣದ ಮಾನಸಿಕತೆಯಿಂದ ಮುಕ್ತವಾದ ವ್ಯವಸ್ಥೆಯು ಸರಕಾರದ ಕಡೆಯಿಂದ ದೊರೆಯುವಂತೆ ಮಾಡಬೇಕು ಎನ್ನುವುದು ಸಂಘದ ಪ್ರಸ್ತಾವನೆಯಾಗಿದೆ. ಸರಕಾರದ ಪ್ರೇರಣೆ ಮತ್ತು ಸಹಯೋಗದಿಂದ, ವ್ಯಕ್ತಿಗತವಾಗಿ ಮತ್ತು ಸಾಮಾಜಿಕ ಸ್ವಚ್ಛತೆಯ ಮೂಲಕ, ಯೋಗ ಮತ್ತು ವ್ಯಾಯಾಮಗಳ ಮೂಲಕವೂ ಈ ರೀತಿಯ ಸಮಗ್ರ ದೃಷ್ಟಿಕೋನದ ಉಪಕ್ರಮದಿಂದ ಚಿಕಿತ್ಸೆಗಳು ನಡೆಯಬೇಕಿದೆ. ಸಮಾಜದಲ್ಲೂ ಈ ರೀತಿ ನಡೆಯುವಂತೆ ಆಗ್ರಹಿಸುವ, ಮತ್ತು ಈ ವಿಚಾರವನ್ನು ಸಮರ್ಥಿಸುವ, ಬಹಳ ಮಹತ್ವವೆಂದು ನುಡಿಯುವ ಅನೇಕ ಜನರಿದ್ದಾರೆ. ಆದರೆ ಈ ಎಲ್ಲವನ್ನು ಉಪೇಕ್ಷೆ ಮಾಡುತ್ತಾ, ಸಮಾಜವು ತನ್ನ ಹಳೆಯ ರೀತಿಯಲ್ಲೇ ಬಿಡಿಬಿಡಿಯಾದ ಚಿಕಿತ್ಸಾ ಪದ್ಧತಿ ಅನುಸರಿಸಿ ನಡೆಯುತ್ತಿದ್ದರೆ, ಯಾವ ವ್ಯವಸ್ಥೆ ಎಲ್ಲರ ಆರೋಗ್ಯವನ್ನು ಸರ್ವಾಂಗೀಣವಾಗಿ ಸರಿಯಾಗಿಡಲು ಸಾಧ್ಯ?
“ಸಂವಿಧಾನದ ಕಾರಣದಿಂದ ರಾಜಕೀಯ ಸಮತೆ ಮತ್ತು ಆರ್ಥಿಕ ಸಮತೆಯ ದಾರಿ ಈಗ ಪ್ರಶಸ್ತವಾಗಿದೆ. ಆದರೆ ಸಾಮಾಜಿಕ ಸಮತೆಯನ್ನು ತರದಿದ್ದರೆ ವಾಸ್ತವಿಕವಾದ, ಸಮಗ್ರವಾದ ಪರಿವರ್ತನೆ ಬರಲು ಸಾಧ್ಯವಿಲ್ಲ”, ಎನ್ನುವ ಎಚ್ಚರಿಕೆಯನ್ನು ಪೂಜನೀಯ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆಲ್ಲರಿಗೂ ನೀಡಿದ್ದರು. ನಂತರದಲ್ಲಿ ಇದೇ ಉದ್ದೇಶವನ್ನು ಗಮನದಲ್ಲಿರಿಸಿಕೊಂಡು ಅನೇಕ ನಿಯಮಗಳನ್ನೂ ಜಾರಿ ಮಾಡಲಾಯಿತು. ಆದರೆ ವಿಷಮತೆಯ ಮೂಲ ಮನದಲ್ಲಿದೆ, ಆಚರಣೆಯ ರೂಢಿಯಲ್ಲಿದೆ. ವ್ಯಕ್ತಿಗತ ಮತ್ತು ಕೌಟುಂಬಿಕ ಸ್ಥರದಲ್ಲಿ ಪರಸ್ಪರ ಸ್ನೇಹ, ಸಹಜವಾದ ಅನೌಪಚಾರಿಕ ಸಂಪರ್ಕ, ಒಟ್ಟಾಗುವಿಕೆಗಳು, ಕೂಡುವಿಕೆ, ಬೆರೆಯುವಿಕೆ ಎಲ್ಲಿಯವರೆಗೂ ನಡೆಯುವುದಿಲ್ಲವೋ; ಮತ್ತು ಸಾಮಾಜಿಕ ಸ್ತರದಲ್ಲಿ ದೇವಸ್ಥಾನ, ನೀರು, ಸ್ಮಶಾನ ಎಲ್ಲ ಹಿಂದೂಗಳಿಗೂ ತೆರೆದಿರುವುದಿಲ್ಲವೋ ಅಲ್ಲಿಯವರೆಗೂ ಸಮತೆಯ ಮಾತುಗಳು ಕೇವಲ ಕನಸಿನಲ್ಲಿಯೇ ಉಳಿದಿರುತ್ತದೆ.
ಪರಿವರ್ತನೆಯನ್ನು ಸೂಕ್ತ ಯೋಚನೆಗಳ ಮೂಲಕ ತರಬೇಕು ಎನ್ನುವುದು ನಮ್ಮ ಅಪೇಕ್ಷೆ. ಆ ವಿಚಾರಗಳು ನಮ್ಮ ಆಚರಣೆಯಲ್ಲಿ ತರುವುದರ ಮೂಲಕ ಪರಿವರ್ತನೆಯ ಪ್ರಕ್ರಿಯೆಗೆ ಒಂದು ನಿರಂತರತೆ ಮತ್ತು ಬಲ ದೊರೆಯುತ್ತದೆ, ಆಗ ಮಾತ್ರ ಆ ಪ್ರಕ್ರಿಯೆ ಸ್ಥಾಯಿಯಾಗಿ ಉಳಿಯಲು ಸಾಧ್ಯ. ಈ ರೀತಿ ಆಗದಿದ್ದರೆ ಪರಿವರ್ತನೆ ಎಂಬ ಪ್ರಕ್ರಿಯೆ ನಿಂತು ಬಿಡುತ್ತದೆ ಮತ್ತು ಸ್ಥಾಯಿತ್ವದೆಡೆಗೆ ಸಾಗಲು ಸಾಧ್ಯವಿಲ್ಲ. ಪರಿವರ್ತನೆಗಾಗಿ ಸಮಾಜವು ವಿಶಿಷ್ಟ ಮಾನಸಿಕತೆಯನ್ನು ಸಿದ್ಧಪಡಿಸಿಕೊಳ್ಳುವುದು ಅನಿವಾರ್ಯ.
ನಮ್ಮ ವಿಚಾರ ಪರಂಪರೆಯಾಧಾರಿತವಾದ ಉಪಭೋಗವಾದ ಅಥವಾ ಶೋಷಣಾಮುಕ್ತ ವಿಕಾಸವನ್ನು ಸಾಧಿಸಲು, ಸಮಾಜದಲ್ಲಿ ಮತ್ತು ಸ್ವಯಂ ನಮ್ಮ ಜೀವನದಿಂದಲೂ ಭೋಗವೃತ್ತಿ ಅಥವಾ ಶೋಷಕ ಪ್ರವೃತ್ತಿಯನ್ನು ಮೂಲದಿಂದ ದೂರಗೊಳಿಸಿಕೊಳ್ಳಬೇಕಿದೆ.
ಭಾರತದಂತಹ ವಿಶಾಲ ಜನಸಂಖ್ಯೆಯ ದೇಶದಲ್ಲಿ ಆರ್ಥಿಕ ಮತ್ತು ಅಭಿವೃದ್ಧಿಯ ನೀತಿಗಳು ಉದ್ಯೋಗಮುಖಿಯಾಗಿರಬೇಕು ಎಂಬ ಅಪೇಕ್ಷೆ ಸ್ವಾಭಾವಿಕವೇ ಆಗಿದೆ. ಆದರೆ ಉದ್ಯೋಗ ಅಂದರೆ ಕೇವಲ ನೌಕರಿಯಲ್ಲ. ಈ ಕುರಿತಾದ ತಿಳುವಳಿಕೆಯನ್ನು ಸಮಾಜವು ಅರಿಯಬೇಕಿದೆ. ಯಾವುದೇ ಕೆಲಸ ಪ್ರತಿಷ್ಠೆಯಲ್ಲೂ ಸಣ್ಣದು ಅಥವಾ ದೊಡ್ಡದು ಎಂಬುದಿಲ್ಲ. ಪರಿಶ್ರಮ,ಆರ್ಥಿಕ ಕುಶಲತೆ ಮತ್ತು ಬೌದ್ಧಿಕ ಶ್ರಮ ಇದೆಲ್ಲದರ ಮಹತ್ವವೂ ಸಮಾನವಾಗಿರುವಂಥದ್ದು. ಅದರ ಮಾನ್ಯತೆಯ ತದನುರೂಪ ಆಚರಣೆಯು ನಮ್ಮ ಕೈಯಲ್ಲಿಯೇ ಇದೆ. ಉದ್ಯಮಶೀಲತೆಯ ಕಡೆಗೆ ಕೆಲಸಮಾಡುವ ಪ್ರವೃತ್ತಿಯುಳ್ಳವರನ್ನು ಪ್ರೋತ್ಸಾಹಿಸಬೇಕು. ಪ್ರತ್ಯೇಕ ಜಿಲ್ಲೆಯಲ್ಲಿ ಔದ್ಯೋಗಿಕ ಪ್ರಶಿಕ್ಷಣದ ಸಲುವಾಗಿ ವಿಕೇಂದ್ರಿತ ಯೋಜನೆ ನಡೆಯಬೇಕು ಮತ್ತು ನಮ್ಮ ಜನರಿಗೆ ನಮ್ಮ ಜಿಲ್ಲೆಯಲ್ಲಿಯೇ ಉದ್ಯೋಗ ದೊರೆಯುವಂತಾಗಬೇಕು, ಹಳ್ಳಿಗಳನ್ನು ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಶಿಕ್ಷಣ, ಆರೋಗ್ಯ ಇತ್ಯಾದಿ ಅನೇಕ ಸೌಲಭ್ಯಗಳು ಸುಲಭದಲ್ಲಿ ದೊರಕುವಂತಾಗಬೇಕು ಎನ್ನುವ ಅಪೇಕ್ಷೆ ಸರಕಾರದಿಂದ ಇದ್ದೇ ಇದೆ. ಆದರೆ ಕೊರೋನಾದ ವಿಪತ್ತಿನ ಸಮಯದಲ್ಲಿ ಕಾರ್ಯಪ್ರವೃತ್ತರಾಗಿದ್ದ ಕಾರ್ಯಕರ್ತರ ಅನುಭವಕ್ಕೆ ಬಂದ ಸೋಜಿಗದ ಸಂಗತಿಯೇನೆಂದರೆ ಸಮಾಜದ ಸಂಘಟಿತ ಬಲವೂ ಕೂಡ ಅನೇಕ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಲು ಶಕ್ತವಾಗಿದೆ ಎಂಬುದು. ಆರ್ಥಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಅನೇಕ ಸಂಘಟನೆಗಳು, ಲಘು ಉದ್ಯಮಿಗಳು, ಕೆಲವು ಸಂಪನ್ನ ಸಜ್ಜನರು, ಕಲಾಕೌಶಲ ಹೊಂದಿರುವವರು, ಪ್ರಶಿಕ್ಷಕ ಮತ್ತು ಸ್ಥಾನೀಯ ಸ್ವಯಂಸೇವಕರು ಸೇರಿಕೊಂಡು ಹತ್ತಿರ ಹತ್ತಿರ 185 ಜಿಲ್ಲೆಯಲ್ಲಿ ಸ್ವದೇಶೀ ಜಾಗರಣ ಮಂಚ್‌ನ ಜೊತೆಗೂಡಿ ಹೊಸ ಪ್ರಯೋಗವನ್ನು ಆರಂಭಿಸಿದರು. ಈ ಪ್ರಾರಂಭಿಕ ಅವಸ್ಥೆಯಲ್ಲಿಯೇ ಉದ್ಯೋಗ ಸೃಷ್ಟಿಸುವಲ್ಲಿ ಉಲ್ಲೇಖನೀಯವಾದ ಯೋಗದಾನವನ್ನು ನೀಡುವಲ್ಲಿ ಅವರು ಸಫಲರಾಗಿದ್ದಾರೆ.
ರಾಷ್ಟ್ರಜೀವನದ ಅನೇಕ ಕ್ಷೇತ್ರದಲ್ಲಿ ಸಮಾಜದ ಸಹಭಾಗಿತ್ವದ ಕುರಿತಾದ ಈ ರೀತಿಯ ವಿಚಾರ ಮತ್ತು ಆಗ್ರಹಗಳು ಸರಕಾರವನ್ನು ಅದರ ಜವಾಬ್ದಾರಿಗಳಿಂದ ಮುಕ್ತ ಮಾಡುವುದಕ್ಕಾಗಿ ಅಲ್ಲ, ಬದಲಾಗಿ ರಾಷ್ಟ್ರದ ಉತ್ಥಾನದಲ್ಲಿ ಸಮಾಜವನ್ನು ಸಹಭಾಗಿತ್ವದ ಮೂಲಕ ಜೊತೆಗೆ ತರುವ ಅವಶ್ಯಕತೆ ಮತ್ತು ಅದಕ್ಕೆ ಅನುಕೂಲಕರವಾದ ನೀತಿ ನಿರೂಪಣೆಗಳ ಇಂಗಿತವಿರುತ್ತದೆ.
ನಮ್ಮ ದೇಶದ ಜನಸಂಖ್ಯೆ ವಿಶಾಲವಾದುದು ಎಂಬುದು ಒಂದು ವಾಸ್ತವ. ಜನಸಂಖ್ಯೆಯ ವಿಚಾರ ಇತ್ತೀಚೆಗೆ ಎರಡು ರೀತಿಯಲ್ಲಿ ನೋಡಲಾಗುತ್ತದೆ. ಒಂದು, ಇಷ್ಟು ದೊಡ್ಡ ಜನ ಸಂಖ್ಯೆಗೆ ಇಷ್ಟು ಪ್ರಮಾಣದಲ್ಲಿನ ಸಾಧನಗಳು ಅವಶ್ಯಕವಾಗುತ್ತದೆ. ಅದು ಹೆಚ್ಚಾದರೆ ಸಮಾಜಕ್ಕೆ, ಸರಕಾರಕ್ಕೆ ಹೆಚ್ಚಿನ ಹೊರೆಯಾಗುವ ಸಾಧ್ಯತೆಯಿರುತ್ತದೆ. ಇದಕ್ಕಾಗಿಯೇ ಇದನ್ನು ನಿಯಂತ್ರಣ ಮಾಡಲು ಯೊಜನೆಗಳು ಸಿದ್ಧವಾಗುತ್ತದೆ. ಈ ವಿಚಾರದ ಇನ್ನೊಂದು ಪ್ರಕಾರವೂ ಕಾಣುತ್ತದೆ. ಅದರಲ್ಲಿ ಜನಸಂಖ್ಯೆಯನ್ನು ಒಂದು ನಿಧಿಯ ರೂಪದಲ್ಲಿ ಅಂದರೆ ಸಂಪನ್ಮೂಲದ ರೀತಿಯಲ್ಲಿ ಪರಿಗಣಿಸಲಾಗುತ್ತದೆ. ಅದಕ್ಕಾಗಿ ಅಗತ್ಯ ಪ್ರಶಿಕ್ಷಣ ಮತ್ತು ಅದರಿಂದ ಪಡೆಯುವ ಹೆಚ್ಚು ಉಪಯೋಗದ ಕುರಿತಾಗಿ ಯೋಚಿಸಲಾಗುತ್ತದೆ. ಇಡೀ ವಿಶ್ವದ ಜನಸಂಖ್ಯೆಯನ್ನು ಗಮನಿಸಿದಾಗ ಒಂದು ವಿಚಾರ ಗಮನಕ್ಕೆ ಬರಬಹುದು, ಕೇವಲ ನಮ್ಮ ದೇಶವನ್ನು ಗಮನದಲ್ಲಿಟ್ಟುಕೊಂಡರೆ ಆ ವಿಚಾರ ಬದಲಾಗಬಹುದು. ಚೀನಾ ಈಗ ತನ್ನ ಜನಸಂಖ್ಯೆಯ ನಿಯಂತ್ರಣದ ನೀತಿಯನ್ನು ಬದಲು ಮಾಡಿ ಅದರ ವೃದ್ಧಿಗೆ ಪ್ರೋತ್ಸಾಹ ನೀಡಲು ಆರಂಭಿಸಿದೆ. ದೇಶದ ಹಿತವೂ ಜನಸಂಖ್ಯೆಯ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾವೀಗ ಎಲ್ಲರಿಗಿಂತ ಯುವ ದೇಶವೇನೋ ಹೌದು, ಆದರೆ ಇಲ್ಲಿಂದ ಮುಂದೆ 40 ವರ್ಷಗಳ ನಂತರ ಇಂದಿನ ತರುಣರು ವೃದ್ಧರಾಗಿರುತ್ತಾರೆ, ಆಗ ಇವರನ್ನು ನಿರ್ವಹಿಸಲು ಎಷ್ಟು ಮಂದಿ ತರುಣರ ಅವಶ್ಯಕತೆ ಬೀಳುತ್ತದೆ ಎಂಬುದನ್ನೂ ನಾವು ಲೆಕ್ಕ ಹಾಕಬೇಕಿದೆ. ಇನ್ನೊಂದು ರೀತಿಯಲ್ಲಿ ಅದೇ ರೀತಿ ದೇಶದ ಜನರು ತಮ್ಮ ಪುರಾಷಾರ್ಥದಿಂದ ದೇಶವನ್ನು ವೈಭವಶಾಲಿಯನ್ನಾಗಿ ಮಾಡುತ್ತಾರೆ. ಜೊತೆಗೆ ತಮ್ಮ ಮತ್ತು ಸಮಾಜದ ಜೀವನವನ್ನೂ ಸುಭದ್ರಗೊಳಿಸುತ್ತಾರೆ. ಹೀಗೆ ಜನತೆಯ ಯೋಗಕ್ಷೇಮ ಮತ್ತು ರಾಷ್ಟ್ರೀಯ ಸುರಕ್ಷೆಯನ್ನು ಹೊರತುಪಡಿಸಿಯೂ ಇನ್ನೂ ಅನೇಕ ವಿಚಾರಗಳ ಕುರಿತಾಗಿಯೂ ಹಲವು ಸವಾಲುಗಳು ಎದುರಾಗಬಹುದು.
ಸಂತಾನ ಸಂಖ್ಯೆಯ ವಿಷಯ ತಾಯಂದಿರ ಆರೋಗ್ಯ, ಆರ್ಥಿಕ ಕ್ಷಮತೆ, ಶಿಕ್ಷಣ, ಇಚ್ಛೆಯೊಂದಿಗೆ ಜೋಡಿಸಿಕೊಂಡಿರುವಂಥದ್ದು,ಅಲ್ಲದೆ ಆಯಾ ಪರಿವಾರದ ಅವಶ್ಯಕತೆಗೆ ಅನುಗುಣವಾಗಿಯೂ ನಡೆಯುವಂಥದ್ದು. ಆದರೆ, ಜನಸಂಖ್ಯೆ ಪರಿಸರದ ಮೇಲೂ ಪ್ರಭಾವ ಬೀರುತ್ತದೆ. ಒಟ್ಟಾರೆಯಾಗಿ ಜನಸಂಖ್ಯೆಯ ನೀತಿ ಈ ಎಲ್ಲಾ ವಿಷಯಗಳಿಂದ ಕೂಡಿದ ಸಮಗ್ರ ಮತ್ತು ಏಕಾತ್ಮ ವಿಚಾರ. ಎಲ್ಲರ ಮೇಲೆ ಸಮಾನವಾಗಿ ಜಾರಿಯಾಗುವಂತೆ, ಲೋಕಪ್ರಬೋಧನದ ಮೂಲಕ ಪೂರ್ಣವಾಗಿ ಪಾಲನೆಯಾಗುವಂತಹ ಮಾನಸಿಕತೆಯನ್ನು ದೇಶದಲ್ಲಿ ಸಿದ್ಧಗೊಳಿಸಬೇಕಿದೆ. ಆಗ ಮಾತ್ರವೇ ಜನಸಂಖ್ಯಾ ನಿಯಂತ್ರಣದ ನಿಯಮದಲ್ಲಿ ಪರಿಣಾಮ ಸಾಧಿಸಲು ಸಾಧ್ಯವಿದೆ.
2000ನೇ ಇಸವಿಯಲ್ಲಿ ಭಾರತ ಸರಕಾರವು ಸಮಗ್ರವಾಗಿ ವಿಚಾರ ಮಾಡಿ ಒಂದು ಜನಸಂಖ್ಯಾನೀತಿಯ ನಿರ್ಧಾರ ಮಾಡಿತ್ತು. ಅದರಲ್ಲಿ ಒಂದು ಮಹತ್ವಪೂರ್ಣ ವಿಚಾರ ಪ್ರಸ್ತಾಪವಾಗಿತ್ತು, ಅದು ಭಾರತ 2.1ರಷ್ಟು ಪ್ರಜನನ(fertility rate) ಪ್ರಮಾಣ ಸಾಧಿಸಬೇಕಿತ್ತು ಎಂಬುದು. ಈಗ 2022ರಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಪ್ರಕಟವಾಗುವ NHFSನ ವರದಿ ಬಂದಿದ್ದು, ಅದರಲ್ಲಿ ಸಮಾಜದ ಜಾಗರೂಕತೆ ಮತ್ತು ಸಕಾರಾತ್ಮಕ ಸಹಭಾಗಿತ್ವದ ಕಾರಣದಿಂದ ಹಾಗು ಕೇಂದ್ರ ಮತ್ತು ರಾಜ್ಯ ಸರಕಾರಗಳ ಸತತ ಸಮನ್ವಯದ ಪ್ರಯತ್ನದ ಸಲುವಾಗಿ 2.1 ಗಿಂತಲೂ ಕಡಿಮೆ ಅಂದರೆ 2.0ರಷ್ಟು ಪ್ರಜನನ ಪ್ರಮಾಣ ಬಂದಿದೆ. ಜನಸಂಖ್ಯಾ ನಿಯಂತ್ರಣದ ಜಾಗೃತಿ ಮತ್ತು ಆ ನಿಟ್ಟಿನಲ್ಲಿನ ಗುರಿ ಸಾಧನೆಯ ಕಡೆಗೆ ನಿರಂತರವಾಗಿ ಸಾಗುತ್ತಿರುವವರಲ್ಲಿ ನಾವು ಅಗ್ರೇಸರರು. ಆದರೆ ಅಲ್ಲಿ ಮತ್ತೆರಡು ಪ್ರಶ್ನೆ ಮತ್ತು ವಿಚಾರಗಳೂ ಎದ್ದು ನಿಲ್ಲುತ್ತದೆ. ಸಮಾಜ ವಿಜ್ಞಾನಿಗಳು ಮತ್ತು ಮನೋವಿಜ್ಞಾನಿಗಳ ಅಭಿಮತದಂತೆ ಸಣ್ಣ ಕುಟುಂಬಗಳ ಕಾರಣದಿಂದ ಬಾಲಕ ಬಾಲಕಿಯರ ಆರೋಗ್ಯದ ಸಮಗ್ರ ವಿಕಾಸ, ಕುಟುಂಬದಲ್ಲಿ ಅಸುರಕ್ಷತೆಯ ಭಾವ, ಸಾಮಾಜಿಕವಾದ ಒತ್ತಡ, ಏಕಾಂಗಿ ಜೀವನ ಇತ್ಯಾದಿ ಅನೇಕ ಸವಾಲುಗಳನ್ನು ಕೂಡ ಎದುರಿಸುವ ಸ್ಥಿತಿ ಎದುರಾಗಿದೆ. ಅಲ್ಲದೆ, ನಮ್ಮ ಸಮಾಜದ ಸಂಪೂರ್ಣ ವ್ಯವಸ್ಥೆಯ ಕೇಂದ್ರ ‘ಕೌಟುಂಬಿಕ ವ್ಯವಸ್ಥೆ’, ಅದರ ಮೇಲೆಯೇ ಪ್ರಶ್ನೆ ಉದ್ಭವವಾಗಿದೆ. ಅದು ಜನಸಂಖ್ಯಾ ಅಸಮತೋಲನದ ಎರಡನೆಯ ಮಹತ್ವದ ಪ್ರಶ್ನೆಯೂ ಆಗಿದೆ.
75 ವರ್ಷಗಳ ಕೆಳಗೆ ನಾವು ನಮ್ಮ ದೇಶದಲ್ಲಿ ಇದನ್ನು ಅನುಭವಿಸಿದ್ದೇವೆ. ಇದರ ಸಲುವಾಗಿ 21ನೆಯ ಶತಮಾನದಲ್ಲಿ ಮೂರು ಸ್ವತಂತ್ರ ದೇಶಗಳು ವಿಶ್ವದಲ್ಲಿ ಹುಟ್ಟಿಕೊಂಡವು. ಈಸ್ಟ್ ತಿಮೋರ್, ದಕ್ಷಿಣ ಸುಡಾನ್ ಮತ್ತು ಕೊಸೋವಾ. ಇವು ಇಂಡೋನೇಷ್ಯಾ, ಸುಡಾನ್ ಮತ್ತು ಸರ್ಬಿಯಾದ ಭೂಭಾಗದಲ್ಲಿ ಜನಸಂಖ್ಯೆಯ ಸಮತೋಲನ ಬಿಗಡಾಯಿಸುತ್ತಿರುವ ಪರಿಣಾಮವಾಗಿದೆ. ಯಾವಾಗೆಲ್ಲ ದೇಶದಲ್ಲಿ ಜನಸಂಖ್ಯೆಯ ಅಸಮತೋಲನ ಆರಂಭವಾಗುವುದೋ ಆಗೆಲ್ಲ ದೇಶದ ಭೌಗೋಳಿಕ ಸೀಮೆಯಲ್ಲೂ ಪರಿವರ್ತನೆಯಾಗಿದೆ. ಜನರಲ್ಲಿ ಅಸಮಾನತೆಯ ಜೊತೆಗೆ ಲೋಭ, ಲಾಲಸೆ, ಹಿಂಸೆ, ಮತಾಂತರ, ದೌರ್ಜನ್ಯಗಳೂ ದೊಡ್ಡ ಕಾರಣಗಳೇ.ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಜನಸಂಖ್ಯೆಯ ನಿಯಂತ್ರಣದ ಜೊತೆ ಜೊತೆಗೆ ಪಂಥೀಯವಾಗಿಯೂ ಅದರ ಸಂತುಲನೆಯನ್ನು ನಿರ್ವಹಿಸುವುದು ಅತ್ಯಂತ ಮಹತ್ವದ ವಿಷಯವಾಗಿದ್ದು ಇದನ್ನು ಕಡೆಗಣಿಸಲು ಸಾಧ್ಯವಿಲ್ಲ.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಮನೋಗತವೇ ಸರ್ವಶ್ರುತವಾದುದು. ನಿಯಮಗಳನ್ನು ಮಾಡುವುದು, ಸ್ವೀಕರಿಸುವುದು ಅಥವಾ ಅದರ ಉಪೇಕ್ಷೆ ಮಾಡುವುದು, ಪರಿಣಾಮದವರೆಗೂ ತಲುಪುವುದು ಆ ಮನೋಗತದಿಂದಲೇ ಸಾಧ್ಯವಾಗುವಂಥದ್ದು. ಯಾವ ನಿಯಮಗಳಿಂದ ತ್ವರಿತವಾಗಿ ಲಾಭ ದೊರೆಯುವುದು ಅಥವಾ ಯಾವುದು ಕಾಲಾಂತರದಲ್ಲಿ ಲಾಭವ ಸಿದ್ಧಿ ಸಿಗುವುದು ಎಂಬುದು ಜನರ ಮನೋಗತಕ್ಕೆ ತಿಳಿಯುವುದಿಲ್ಲ. ಆದರೆ ದೇಶದ ಹಿತಕ್ಕಾಗಿ, ದುರ್ಬಲರ ಹಿತಕ್ಕಾಗಿ ತಮ್ಮ ಸ್ವಾರ್ಥವನ್ನು ಬಿಟ್ಟು ತ್ಯಾಗಕ್ಕಾಗಿ ಜನರು ಸಿದ್ಧರಾಗಲು ಸಮಾಜದಲ್ಲಿ ‘ಸ್ವ’ತ್ವದ ಬೋಧೆಯನ್ನು ಅದರ ಕುರಿತಾಗಿ ಗೌರವವನ್ನು ಜಾಗೃತಗೊಳಿಸುವ ಅವಶ್ಯಕತೆ ಇರುತ್ತದೆ.
ಇದೇ ‘ಸ್ವ’ತ್ವವೇ ನಮ್ಮನ್ನು ಜೋಡಿಸುತ್ತದೆ.ಯಾಕೆಂದರೆ ಇದು ನಮ್ಮ ಪೂರ್ವಜರು ಪ್ರಾಪ್ತಗೊಳಿಸಿಕೊಂಡ ಸತ್ಯದ ಪ್ರತ್ಯಕ್ಷಾನುಭೂತಿಯ ನೇರ ಪರಿಣಾಮವಾಗಿದೆ. ಸ್ವತ್ವ ಅನ್ನುವಂಥದ್ದು ‘ಸರ್ವ ಯದ್ಭೂತಂ ಯಚ್ಛ ಭವ್ಯಂ’. ಅದು ಒಂದು ಶಾಶ್ವತವಾದ, ಅವ್ಯಯವಾದ ಮೂಲದ, ಅಭಿವ್ಯಕ್ತಿ ಮಾತ್ರವೇ. ಹಾಗಾಗಿ ನಮ್ಮ ವಿಶಿಷ್ಟತೆಯ ಮೇಲೆ ಶ್ರದ್ಧಾಪೂರ್ವಕವಾಗಿ ದೃಢವಾಗಿದ್ದಾಗ ಎಲ್ಲರ ವಿವಿಧತೆ, ವಿಶಿಷ್ಟತೆಗಳನ್ನು ಸಮ್ಮಾನ ಮತ್ತು ಸ್ವೀಕಾರ ಮಾಡಬೇಕು ಎಂಬ ಮಾತನ್ನು ಎಲ್ಲರಿಗೂ ಹೇಳಿಕೊಡಲು ಭಾರತಕ್ಕೆ ಮಾತ್ರವೇ ಸಾಧ್ಯವಿದೆ. ಸತ್ಯ, ಕರುಣೆ, ಆಂತರ್ಬಾಹ್ಯ ಶುಚಿತ್ವ ಮತ್ತು ತಪಸ್ಸಿನ ತತ್ವ, ಎನ್ನುವ ಈ ಚತುಷ್ಠಯಗಳು ಎಲ್ಲ ಮಾನ್ಯತೆಗಳಲ್ಲೂ ನಡೆಯುತ್ತದೆ. ಅದೇ ಎಲ್ಲ ವಿವಿಧತೆಗಳನ್ನು ಸುರಕ್ಷಿತವಾಗಿ ಹಾಗು ವಿಕಾಸಪೂರ್ಣವಾಗಿ ಇಟ್ಟುಕೊಂಡು ಜೋಡಿಸುತ್ತದೆ. ಅದನ್ನೇ ನಮ್ಮಲ್ಲಿ ಧರ್ಮ ಎಂದರು. ಇದೇ ನಾಲ್ಕು ತತ್ತ್ವಗಳ ಆಧಾರದ ಮೇಲೆ ಸಂಪೂರ್ಣ ವಿಶ್ವ ಜೀವನದ ಸಮನ್ವಯ, ಸಂವಾದ, ಸೌಹಾರ್ದ ಮತ್ತು ಶಾಂತಿಯುತವಾಗಿ ನಡೆಸುವ, ಸಂಸ್ಕಾರ ನೀಡುವಂತಹ ಸಂಸ್ಕೃತಿ ನಮ್ಮೆಲ್ಲರನ್ನು ಜೋಡಿಸುತ್ತದೆ, ಹಾಗು ವಿಶ್ವವನ್ನು ಕುಟುಂಬದ ರೀತಿಯಲ್ಲಿ ಜೋಡಿಸುವ ಪ್ರೇರಣೆ ನೀಡುತ್ತದೆ. ಸೃಷ್ಟಿಯಿಂದಲೇ ನಾವೆಲ್ಲರೂ ಜೀವಿಸುತ್ತೇವೆ, ಅರಳುತ್ತೇವೆ, ವಿಕಾಸಿಸುತ್ತೇವೆ. ಜೀವನದಲ್ಲಿ ಸಮಾಜ ನಮಗೇನು ನೀಡಿದೆ ಎನ್ನುವದಕ್ಕಿಂತಲೂ ಸಮಾಜಕ್ಕೆ ನಾವೇನು ನೀಡಿದ್ದೇವೆ ಎನ್ನುವ ಭಾವನೆ ಅದರಿಂದಲೇ ನಮಗೆ ದೊರೆತಿದೆ.’ವಸುಧೈವ ಕುಟುಂಬಕಂ’ಎನ್ನುವ ಭಾವ, ‘ ವಿಶ್ವ ಭವತ್ಯೇಕಂ ನೀಡಂ’ ಎನ್ನುವ ಈ ಭವ್ಯ ಲಕ್ಷ್ಯವೇ ನಮಗೆ ಪುರುಷಾರ್ಥಕ್ಕೆ ಪ್ರೇರಣೆ ನೀಡುತ್ತದೆ.
ನಮ್ಮ ರಾಷ್ಟ್ರೀಯ ಜೀವನದ ಸನಾತನ ಪ್ರವಾಹವು ಪ್ರಾಚೀನ ಸಮಯದಿಂದಲೂ ಇದೇ ಉದ್ದೇಶದಿಂದ ಇದೇ ರೀತಿಯಿಂದ ನಡೆದುಕೊಂಡು ಬಂದಿದೆ. ಸಮಯ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಪಥ ಮತ್ತು ಶೈಲಿಯಲ್ಲಿ ಬದಲಾವಣೆಯಾಗಿರಬಹುದು, ಆದರೆ ಮೂಲವಿಚಾರ ಉದ್ದೇಶ ನಿರಂತರ ಅದೇ ಆಗಿದೆ. ಈ ದಾರಿಯಲ್ಲಿ, ಇದೇ ಗತಿಯಲ್ಲಿ ಸಾಗುತ್ತಿರುವುದು ಅದೆಷ್ಟೋ ಅಗಣಿತ ವೀರರ ಶೌರ್ಯ ಮತ್ತು ಸಮರ್ಪಣೆಯಿಂದ, ಅಸಂಖ್ಯಾತ ಕರ್ಮಯೋಗಿಗಳ ಭೀಮ ಪರಿಶ್ರಮದಿಂದ, ಜ್ಞಾನಿಗಳ ದುರ್ಭರ ತಪಸ್ಸಿನಿಂದ ಪ್ರಾಪ್ತವಾಗಿರುವಂಥದ್ದು. ಅದಕ್ಕೆ ನಾವೆಲ್ಲರೂ ನಮ್ಮ ಜೀವನದಲ್ಲಿ ಅನುಕರಣೀಯ ಆದರ್ಶದ ಸ್ಥಾನವನ್ನು ನೀಡುತ್ತೇವೆ. ಅದು ನಮ್ಮೆಲ್ಲರಿಂದ ಗೌರವಿಸಲ್ಪಡುತ್ತದೆ. ಅದು ನಮ್ಮ ಪೂರ್ವಜರು ನಮ್ಮನ್ನು ಜೋಡಿಸಿರುವ ಮತ್ತೊಂದು ಆಧಾರಸ್ಥಂಭ.
ಅವೆಲ್ಲವುಗಳು ನಮ್ಮ ಪವಿತ್ರ ಮಾತೃಭೂಮಿ ಭರತ ವರ್ಷದ್ದೇ ಗುಣಗಾನ ಮಾಡಿವೆ. ಪ್ರಾಚೀನ ಕಾಲದಿಂದ ಎಲ್ಲ ಪ್ರಕಾರಗಳ ವಿವಿಧತೆಯನ್ನು ಸಮ್ಮಾನಿಸುತ್ತಾ, ಸ್ವೀಕಾರ ಮಾಡುತ್ತಾ ಎಲ್ಲವನ್ನು ಜೊತೆಗೆ ತೆಗೆದುಕೊಂಡು ಹೋಗುವ ಸ್ವಭಾವ ಬೆಳೆದುಬಂದಿದೆ. ಭೌತಿಕ ಸುಖದ ಪರಮಾವಧಿಯಲ್ಲೂ ನಿಲ್ಲದೆ ನಮ್ಮ ಅಂತರಾತ್ಮದ ಆಳಕ್ಕೆ ತಲುಪುತ್ತಾ ನಮಗೆ ನಮ್ಮ ಅಸ್ತಿತ್ವದ ಸತ್ಯವನ್ನು ಪ್ರಾಪ್ತಗೊಳಿಸಿಕೊಟ್ಟಿದ್ದಾರೆ. ನಮ್ಮ ಪೂರ್ವಜರು ವಿಶ್ವವನ್ನು ನಮ್ಮದೇ ಪರಿವಾರ ಎಂದುಕೊಳ್ಳುತ್ತಾ ಎಲ್ಲೆಡೆ ಜ್ಞಾನ, ವಿಜ್ಞಾನ, ಸಂಸ್ಕೃತಿ ಮತ್ತು ಭದ್ರತೆಗಳ ಪ್ರಸಾರ ಮಾಡಿದರು, ಇದಕ್ಕೆಲ್ಲ ಕಾರಣ, ಪ್ರೇರಣೆ ನಮ್ಮ ಮಾತೃಭೂಮಿ ಭಾರತವೇ ಸರಿ. ಪ್ರಾಚೀನ ಕಾಲದಲ್ಲಿ ಸುಜಲ, ಸುಫಲ, ಮಲಯಜಶೀತಲ ಈ ಭಾರತ ಜನನಿಯು ಪ್ರಾಕೃತಿಕ ರೀತಿಯಿಂದಲೂ ಸರ್ವಾರ್ಥ ಸುರಕ್ಷಿತವಾಗಿ ತನ್ನ ನಾಲ್ಕು ಸೀಮೆಯಿಂದಲೂ ಸುರಕ್ಷಿತೆಯನ್ನೂ,ನಿಶ್ಚಿಂತೆಯನ್ನೂ ನಮಗೆ ನೀಡಿದೆ.ಈ ಅಖಂಡ ಮಾತೃಭೂಮಿಯ ಅನನ್ಯ ಭಕ್ತಿ ನಮ್ಮ ರಾಷ್ಟ್ರೀಯತೆಯ ಮುಖ್ಯ ಆಧಾರ.
ಪ್ರಾಚೀನ ಸಮಯದಿಂದಲೂ ಭೂಗೋಲ, ಭಾಷೆ, ಪಂಥ, ಸಹಿಷ್ಣುತೆ, ಸಾಮಾಜಿಕ ಮತ್ತು ರಾಜನೈತಿಕ ವ್ಯವಸ್ಥೆಯ ವಿವಿಧತೆಗಳ ಹೊರತಾಗಿಯೂ ಸಮಾಜವಾಗಿ, ಸಂಸ್ಕೃತಿಯಾಗಿ, ರಾಷ್ಟ್ರವಾಗಿ ನಮ್ಮದೊಂದು ಜೀವನ ಪ್ರವಾಹ ನಿರಂತರವಾಗಿ ಹರಿಯುತ್ತಲೇ ಇದೆ. ಇದಕ್ಕೆ ಎಲ್ಲ ವಿವಿಧತೆಯೂ ಸ್ವೀಕೃತವೇ, ಸಮ್ಮಾನಿತವೇ, ಸುರಕ್ಷಿತವೇ ಮತ್ತು ವಿಕಸನೀಯವೇ. ಮುಖಾಮುಖಿಯಾದ ಯಾರಿಗೂ ಸಂಕುಚಿತತೆ, ಕಠೋರತೆ, ಆಕ್ರಮಿಕತೆ ಅಥವಾ ಅಹಂಕಾರಗಳನ್ನು ಬಿಟ್ಟು ಮತ್ತ್ಯಾವುದನ್ನೂ ಬಿಟ್ಟುಕೊಡುವ ಪ್ರಮೇಯವೇ ಬರಲಿಲ್ಲ. ಸತ್ಯ, ಕರುಣೆ, ಅಂತರ್ಬಾಹ್ಯ ಶುಚಿತ್ವ ಈ ಮೂರು ವಿಚಾರಗಳನ್ನು ಹೊರತುಪಡಿಸಿ ಮತ್ತ್ಯಾವುದೂ ಅನಿವಾರ್ಯವಲ್ಲ. ಭಾರತಭಕ್ತಿ, ನಮ್ಮ ಪೂರ್ವಜರ ಉಜ್ವಲ ಆದರ್ಶ ಮತ್ತು ಭಾರತದ ಸನಾತನ ಸಂಸ್ಕೃತಿ, ಈ ಮೂರು ದೀಪಸ್ತಂಭದ ರೀತಿಯಲ್ಲಿ ಪ್ರಕಾಶಿಸುತ್ತಾ ಪ್ರಶಸ್ತವಾದ ದಾರಿ ತೋರಿ ಪರಸ್ಪರ ಸದ್ಭಾವದಿಂದ, ಪ್ರೇಮಪೂರ್ವಕವಾಗಿ ನಡೆಯುವುದೇ ನಮ್ಮ ‘ಸ್ವ’ತ್ವ.ಅದೇ ನಮ್ಮ ರಾಷ್ಟ್ರ ಧರ್ಮ.
ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಮಾಜವನ್ನು ಆವಾಹಿಸಿಕೊಳ್ಳಬೇಕು ಎಂಬ ಆಶಯ ಪ್ರಾರಂಭದಿಂದಲೂ ಇತ್ತು. ಇಂದು ಅದು ಅನುಭವಕ್ಕೆ ಬರುತ್ತದೆ. ಸಮಾಜ ಈಗ ಸಂಘದ ವಿಚಾರವನ್ನು ಕೇಳಿಸಿಕೊಳ್ಳಲು, ಅರ್ಥ ಮಾಡಿಕೊಳ್ಳಲು ತಯಾರಾಗಿದೆ. ಅಜ್ಞಾನ, ಅಸತ್ಯ, ದ್ವೇಷ, ಭಯ ಮತ್ತು ಸ್ವಾರ್ಥದ ಕಾರಣಕ್ಕೆ ಸಂಘದ ವಿರುದ್ಧ ಅಪಪ್ರಚಾರ ನಡೆಯುತ್ತದೆ. ಅದರ ಪ್ರಭಾವವೂ ಕಡಿಮೆಯಾಗುತ್ತಿದೆ. ಏಕೆಂದರೆ ಸಂಘವು ಅದರ ವ್ಯಕ್ತಿ ಮತ್ತು ಸಮಾಜದ ಸಂಪರ್ಕದಲ್ಲಿ ಅಂದರೆ ಸಂಘದ ಶಕ್ತಿಯಲ್ಲಿ ಗಮನಾರ್ಹವಾದ ವೃದ್ಧಿಯಾಗಿದೆ. ಜಗತ್ತು ಕೇಳಿಸಿಕೊಳ್ಳಲು ಸತ್ಯವೂ ಬಲಶಾಲಿಯಾಗಬೇಕಾಗುತ್ತದೆ, ಇದು ಜೀವನದ ವಿಚಿತ್ರ ವಾಸ್ತವ. ಜಗತ್ತಿನಲ್ಲಿ ದುಷ್ಟ ಶಕ್ತಿಗಳೂ ಇದೆ, ಅದರಿಂದ ತಪ್ಪಿಸಿಕೊಳ್ಳಲು, ಮತ್ತು ಇತರರನ್ನು ಅದರಿಂದ ತಪ್ಪಿಸಲು ಸಜ್ಜನರ ಸಂಘಟಿತವಾದ ಶಕ್ತಿಯ ಅಗತ್ಯವಿದೆ. ಸಂಘವು ರಾಷ್ಟ್ರ ವಿಚಾರದ ಪ್ರಚಾರ – ಪ್ರಸಾರ ಮಾಡುತ್ತಾ ಸಂಪೂರ್ಣ ಸಮಾಜವನ್ನು ಸಂಘಟಿತ ಶಕ್ತಿಯ ರೂಪದಲ್ಲಿ ಎದ್ದು ನಿಲ್ಲಿಸುವ ಕೆಲಸ ಮಾಡುತ್ತಿದೆ. ಇದೇ ಹಿಂದೂ ಸಮಾಜದ ಸಂಘಟನೆಯ ಕೆಲಸವಾಗಿದೆ. ಏಕೆಂದರೆ ರಾಷ್ಟ್ರೀಯ ವಿಚಾರವನ್ನು ಹಿಂದೂರಾಷ್ಟ್ರದ ವಿಚಾರವೆಂದು ಹೇಳುತ್ತಾರೆ, ಅದು ಸತ್ಯ ಕೂಡ. ಹಾಗಾಗಿ ಸಂಘ ಹೇಳುತ್ತಿರುವ ರಾಷ್ಟ್ರ ವಿಚಾರವನ್ನು ಒಪ್ಪುವ ಎಲ್ಲರೂ ಹಿಂದೂ ಸಮಾಜದ ಸಂಘಟನೆ, ಹಿಂದೂ ಧರ್ಮ, ಸಂಸ್ಕೃತಿ ಮತ್ತು ಸಮಾಜದ ಸಂರಕ್ಷಣೆಯನ್ನು ಮಾಡುತ್ತಾ ಹಿಂದೂ ರಾಷ್ಟ್ರದ ಸರ್ವಾಂಗೀಣ ಉನ್ನತಿಗಾಗಿ ‘ಸರ್ವೇಷಾಂ ಅವಿರೋಧೇನ’ ಎನ್ನುವಂತೆ ದುಡಿಯುತ್ತಿದ್ದಾರೆ.
ಈಗ ಸಂಘಕ್ಕೆ ಸಮಾಜದಲ್ಲಿ ಸ್ನೇಹ ಮತ್ತು ವಿಶ್ವಾಸದ ಲಾಭವಾಗಿದೆ ಮತ್ತು ಇದೇ ಅದರ ಶಕ್ತಿಯೂ ಆಗಿದೆ. ಈಗ ಹಿಂದೂ ರಾಷ್ಟ್ರದ ಮಾತನ್ನು ಜನ ಗಂಭೀರವಾಗಿ ಕೇಳಿಸಿಕೊಳ್ಳುತ್ತಾರೆ. ಇದೇ ಆಶಯವನ್ನು ಮನದಲ್ಲಿಟ್ಟುಕೊಂಡು, ಆದರೆ ಹಿಂದೂ ಶಬ್ದದ ವಿರೋಧ ಮಾಡುತ್ತಾ ಬೇರೆ ಶಬ್ದಗಳ ಪ್ರಯೋಗ ಮಾಡಿ ಇದೇ ವಿಚಾರ ಹೇಳುವ ಜನರೂ ಇದ್ದಾರೆ. ಅವರ ಬಗೆಗೆ ನಮಗೆ ವಿರೋಧವಿಲ್ಲ. ಆಶಯವನ್ನು ಸ್ಪಷ್ಟಗೊಳಿಸುವ ಸಲುವಾಗಿ ನಮಗೆ ನಾವು ಹಿಂದೂ ಶಬ್ದದ ಪ್ರಯೋಗವನ್ನು ಆಗ್ರಹಿಸುತ್ತೇವೆ.
ತಥಾಕಥಿತ ಅಲ್ಪಸಂಖ್ಯಾತರಲ್ಲಿ ಕಾರಣವಿಲ್ಲದೆ ಒಂದು ರೀತಿಯ ಭಯವನ್ನು ಎಬ್ಬಿಸಲಾಗುತ್ತಿದೆ. ನಮ್ಮಿಂದ ಅಥವಾ ಸಂಘಟಿತರಾದ ಹಿಂದೂಗಳಿಂದ ಅಪಾಯವಿದೆ ಎಂದು ಹಬ್ಬಿಸಲಾಗುತ್ತಿದೆ. ಹೀಗೆ ಎಂದಿಗೂ ಆಗಿಲ್ಲ, ಮುಂದೆ ಆಗುವುದೂ ಇಲ್ಲ. ಈ ರೀತಿಯಲ್ಲಿ ಹಿಂದೂಗಳ ಇತಿಹಾಸವಿಲ್ಲ, ಸಂಘದ ಸ್ವಭಾವವೂ ಹೀಗಿಲ್ಲ ಎನ್ನುವುದು ಇತಿಹಾಸ ಸ್ಪಷ್ಟ. ಅನ್ಯಾಯ, ಅತ್ಯಾಚಾರ, ದ್ವೇಷದ ಸಹಾಯದಿಂದ ಗೂಂಡಾತನ ನಡೆಸುವವರಿಂದ ಅಥವಾ ಸಮಾಜದ ಶತ್ರುತ್ವವನ್ನು ಕಟ್ಟಿಕೊಳ್ಳುವವರಿಂದ ಆತ್ಮರಕ್ಷಣೆ ಮತ್ತು ಆಪ್ತರಕ್ಷಣೆಯನ್ನು ಮಾಡಿಕೊಳ್ಳುವುದು ಎಲ್ಲರ ಕರ್ತವ್ಯವೂ ಆಗಿದೆ. “ನಾ ಭಯ ದೇತ ಕಾಹೂ ಕೋ,ನಾ ಭಯ ಜಾನತ್ ಆಪ್” ಹೀಗೆ ಈ ಸಮಯದಲಿ ಹಿಂದೂ ಸಮಾಜ ನಿಲ್ಲಬೇಕಾಗಿರುವ ಅಗತ್ಯವಿದೆ. ಇದು ಯಾರ ವಿರುದ್ಧವೂ ಅಲ್ಲ. ಸಂಘ ಸಂಪೂರ್ಣ ದೃಢತೆಯಿಂದ ಪರಸ್ಪರ ಸೋದರ ಭಾವದಿಂದ, ಭದ್ರತೆ ಮತ್ತು ಶಾಂತಿಯ ಪಕ್ಷದಲ್ಲಿ ನಿಲ್ಲುತ್ತದೆ.
ಈ ರೀತಿಯ ಚಿಂತನೆಯನ್ನು ಮನದಲ್ಲಿಟ್ಟುಕೊಂಡು ಅಲ್ಪಸಂಖ್ಯಾತರಲ್ಲಿರುವ ಕೆಲವು ಸಜ್ಜನರು ಕೆಲ ವರ್ಷಗಳಿಂದಲೂ ಭೇಟಿಯಾಗುತ್ತಿದ್ದಾರೆ. ಅವರೊಂದಿಗೆ ಸಂಘದ ಕೆಲವು ಅಧಿಕಾರಿಗಳ ಸಂಪರ್ಕ, ಸಂವಾದವೂ ನಡೆದಿದೆ, ಮುಂದೆಯೂ ನಡೆಯುತ್ತಲೇ ಇರುತ್ತದೆ. ಭರತವರ್ಷ ಪ್ರಾಚೀನವಾದ ರಾಷ್ಟ್ರ,ಅದು ಹಿಂದಿನಿಂದಲೂ ಒಂದು ರಾಷ್ಟ್ರವಾಗಿಯೇ ಇದೆ. ಅದಕ್ಕೆ ಅದರ ಅಸ್ಮಿತೆ ಮತ್ತು ಪರಂಪರೆಯ ಧಾರೆಯ ಜೊತೆಗೆ ತನ್ಮಯತಾಪೂರ್ವಕವಾಗಿ ತಮ್ಮ ವಿಶಿಷ್ಟತೆಯನ್ನು ಕಾಪಾಡಿಕೊಳ್ಳುತ್ತಾ, ಜೊತೆಗಿಟ್ಟುಕೊಂಡು ಸಾಗುತ್ತಾ, ನಾವೆಲ್ಲರೂ ಪ್ರೇಮ, ಸಮ್ಮಾನ ಮತ್ತು ಶಾಂತಿಯ ಜೊತೆಗೆ ರಾಷ್ಟ್ರದ ನಿಸ್ವಾರ್ಥ ಸೇವೆಯನ್ನು ಒಟ್ಟಾರೆ ಮಾಡುತ್ತಾ ನಡೆಯೋಣ, ಮತ್ತೊಬ್ಬರ ಸುಖ ದುಃಖಗಳಲ್ಲಿ ಪರಸ್ಪರ ಜೊತೆಯಾಗೋಣ, ಭಾರತವನ್ನು ಅರಿಯೋಣ, ಭಾರತವನ್ನು ಒಪ್ಪೋಣ, ಭಾರತದವರಾಗೋಣ. ಇದೇ ಏಕಾತ್ಮ, ಸಮರಸ ರಾಷ್ಟ್ರದ ಕಲ್ಪನೆ ಸಂಘ ಮಾಡುತ್ತಿದೆ. ಇದರಲ್ಲಿ ಸಂಘದ ಯಾವ ಸ್ವಾರ್ಥವೂ ಇಲ್ಲ.
ಈಗ್ಗೆ ಕೆಲವು ದಿನಗಳ ಕೆಳಗೆ ಉದಯಪುರದಲ್ಲಿ ಅತ್ಯಂತ ಘೋರವಾದ, ಹೃದಯ ನಡುಗಿಸುವ ಘಟನೆ ನಡೆಯಿತು. ಇಡಿಯ ಸಮಾಜ ಸ್ಥಂಭಿತಗೊಂಡಿತು. ಸಮಾಜದ ಅನೇಕ ಜನ ದುಃಖಿತರಾದರು, ಕೆಲವರು ಆಕ್ರೋಶಗೊಂಡರು. ಉದಯಪುರದ ಘಟನೆಯ ನಂತರ ಮುಸಲ್ಮಾನ ಸಮುದಾಯದಿಂದಲೂ ಕೆಲವು ಪ್ರಮುಖ ವ್ಯಕ್ತಿಗಳು ತಮ್ಮ ಖಂಡನೆಯನ್ನು ವ್ಯಕ್ತಪಡಿಸಿದರು. ಈ ಖಂಡನೆಯು ಆ ಸಮುದಾಯದಲ್ಲಿ ಕೇವಲ ಎಲ್ಲೋ ಒಂದೆರಡು ಅಪವಾದವೆಂಬಂತೆ ಅಷ್ಟೇ ಆಗಿ ಉಳಿಯದೇ, ಮುಸಲ್ಮಾನ ಸಮಾಜದವರ ಸ್ವಭಾವವಾಗಿ ಅದು ಬೆಳೆಯಬೇಕು. ಹಿಂದೂ ಸಮಾಜದ ಒಂದು ದೊಡ್ಡ ವರ್ಗ ಈ ರೀತಿಯ ಘಟನೆಯಾಗಿದ್ದರೆ, ನಂತರದಲ್ಲಿ ಹಿಂದೂಗಳ ಮೇಲೇ ಆರೋಪ ಹೊರಿಸಿ ಖಂಡನೆ ನಡೆಸುತ್ತಿದ್ದರು.
ಪ್ರಚೋದನೆ ನೀಡುವವರು ಯಾರೇ ಆಗಿರಲಿ, ಹೇಗೇ ಇರಲಿ, ಕಾನೂನು ಮತ್ತು ಸಂವಿಧಾನದ ಮಿತಿಯೊಳಗಿದ್ದು ತಮ್ಮ ವಿರೋಧವನ್ನು ಪ್ರಕಟಗೊಳಿಸಬೇಕು. ಸಮಾಜ ಒಡೆದು ಹೋಗದ ಹಾಗೆ, ಜಗಳವಾಡದೆ, ಹರಿದುಹೋಗದೆ ಜೊತೆಯಾಗಿರಬೇಕು. ಮನ- ವಿಚಾರ- ಕೆಲಸ ಈ ಮೂರು ಪ್ರತಿಭಾವವನ್ನು ಮನದಲ್ಲಿರಿಸಿಕೊಂಡು ಸಮಾಜದ ಎಲ್ಲ ಸಜ್ಜನರೂ ದನಿಯೆತ್ತಬೇಕಿದೆ. ಈ ನಿಟ್ಟಿನಲ್ಲಿ ನಾವು ಭಿನ್ನವಾಗಿ ಮತ್ತು ವಿಶಿಷ್ಟವಾಗಿ ಕಾಣಬಹುದು ಹೀಗಾಗಿಯೇ ನಾವು ಎಲ್ಲರಿಗಿಂತ ವಿಭಿನ್ನ.
ನಮಗೆ ವಿಶೇಷ ಸ್ಥಾನ ಬೇಕು, ಈ ದೇಶದ ಜೊತೆಗೆ, ಇದರ ಮೂಲ ಮುಖ್ಯ ಜೀವನಧಾರೆಯ ಜೊತೆಗೆ, ಅದರ ಅಸ್ಮಿತೆಯ ಜೊತೆಗೆ ನಡೆಯಲು ಸಾಧ್ಯವಿಲ್ಲ, ಈ ರೀತಿಯ ಅಸತ್ಯದ ಕಾರಣದಿಂದಲೇ “ಅಣ್ಣ ತಮ್ಮಂದಿರು ಬೇರೆಯಾದರು, ಭೂಮಿ ಕಳೆದುಕೊಂಡೆವು, ಭಾರತದ ಈ ಧರ್ಮ ಸಂಸ್ಥಾನ ಅಳಿಯಿತು” ಎಂಬ ವಿಭಜನೆಯ ವಿಷವನ್ನು ಅನುಭವಿಸುತ್ತಾ ಯಾರೂ ಸುಖವಾಗಿರಲು ಸಾಧ್ಯವಾಗಿಲ್ಲ. ನಾವು ಭಾರತದವರು, ಭಾರತೀಯ ಪೂರ್ವಜರ ಸಂತತಿಯವರು, ಭಾರತದ ಸನಾತನ ಸಂಸ್ಕೃತಿಯವರು, ಸಮಾಜ ಮತ್ತು ರಾಷ್ಟ್ರೀಯತೆಯ ಕಾರಣಕ್ಕೆ ಒಂದಾಗಿದ್ದೇವೆ, ಇದೇ ನಮ್ಮೆಲ್ಲರ ತಾರಕ ಮಂತ್ರ.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂಪನ್ನಗೊಳ್ಳುತ್ತಿದೆ. ನಮ್ಮ ರಾಷ್ಟ್ರೀಯ ನವೋತ್ಥಾನದ ಪ್ರಾರಂಭದ ಕಾಲದಲ್ಲಿ ಸ್ವಾಮಿ ವಿವೇಕಾನಂದರು ನಮಗೆ ಭಾರತಮಾತೆಯನ್ನು ಆರಾಧ್ಯದೈವವಾಗಿಸಿಕೊಂಡು ಕಾರ್ಯಪ್ರವೃತ್ತರಾಗಲು, ಆಕೆಯನ್ನ ಆವಾಹನೆ ಮಾಡಿಕೊಳ್ಳಲು ಹೇಳಿದ್ದರು. 15 ಆಗಸ್ಟ್ 1947ರಂದು ಅಂದರೆ ಮೊದಲ ಸ್ವಾತಂತ್ರ್ಯ ದಿನದಂದು ಮಹರ್ಷಿ ಅರವಿಂದರು ಭಾರತವಾಸಿಗಳಿಗೆ ಒಂದು ಸಂದೇಶ ನೀಡಿದ್ದರು. ಅದರಲ್ಲಿ ಅವರ ಐದು ಕನಸಿನ ಉಲ್ಲೇಖವಿತ್ತು. ಮೊದಲನೆಯದು ಭಾರತದ ಸ್ವತಂತ್ರತೆ ಮತ್ತು ಏಕಾತ್ಮತೆ. ಸಾಂವಿಧಾನಿಕವಾದ ರೀತಿಯಲ್ಲಿ ರಾಜ್ಯಗಳ ವಿಲೀನ ಪ್ರಕ್ರಿಯೆ ನಡೆದು ಭಾರತ ಒಂದಾಗಿದ್ದಕ್ಕೆ ಸಂತಸವನ್ನೂ ಅವರು ವ್ಯಕ್ತಪಡಿಸುತ್ತಾರೆ. ಆದರೆ ವಿಭಜನೆಯ ಕಾರಣದಿಂದ ಹಿಂದೂ ಮತ್ತು ಮುಸಲ್ಮಾನರ ಮಧ್ಯೆ ಏಕತೆಯ ಬದಲಾಗಿ ಒಂದು ಶಾಶ್ವತವಾದ ರಾಜಕೀಯ ಕಂದಕ ನಿರ್ಮಾಣವಾಯಿತು. ಅದು ಭಾರತದ ಏಕಾತ್ಮತೆಯ, ಉನ್ನತಿಯ ಮತ್ತು ಶಾಂತಿಯ ಮಾರ್ಗದಲ್ಲಿ ಬಾಧಕವಾಗಬಹುದು ಎನ್ನುವ ಚಿಂತೆ ಅವರಿಗಿತ್ತು. ಯಾರು ಯಾವ ರೀತಿಯಲ್ಲಿ ಬೇಕಾದರೂ ವರ್ತಿಸಲಿ, ಆದರೆ ಈ ವಿಭಜನೆ ನಿರಸ್ತವಾಗಿ ಭಾರತ ಅಖಂಡವಾಗಲಿ ಎನ್ನುವ ಉತ್ಕಟ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದರು. ಏಕೆಂದರೆ ಅವರ ಮುಂದಿನ ಕನಸುಗಳೆಲ್ಲ ಏಷ್ಯಾದ ದೇಶಗಳ ಮುಕ್ತಿ, ವಿಶ್ವದ ಏಕತೆ, ಭಾರತದ ಆಧ್ಯಾತ್ಮಿಕತೆಯ ವೈಶ್ವಿಕ ಅಭಿಮಂತ್ರಣ ಮತ್ತು ಅತಿಮಾನಸದ ಜಗತ್ತಿನಲ್ಲಿ ಅವತರಣ, ಇದನ್ನು ಸಾಕಾರ ಮಾಡುವಲ್ಲಿ ಭಾರತದ್ದೇ ಮುಂದಾಳತ್ವ ಇರುವುದಾಗಿ ಅವರು ಮನಗಂಡಿದ್ದರು.ಹೀಗಾಗಿ ಅವರು ನೀಡಿದ ಕರ್ತವ್ಯದ ಸಂದೇಶ ಬಹಳ ಸ್ಪಷ್ಟವಿದೆ –
“ರಾಷ್ಟ್ರದ ಇತಿಹಾಸದಲ್ಲಿ ಒಂದು ಸಮಯ ಬರುತ್ತದೆ, ಆಗ ವಿಧಿ ಭಾರತದ ಎದುರು, ಒಂದೇ ಕಾರ್ಯ, ಒಂದೇ ಲಕ್ಷ್ಯ ಇಡುತ್ತದೆ. ಇದರ ಎದುರು ಬೇರೆ ಎಲ್ಲ ವಿಚಾರಗಳೂ ಅದೆಷ್ಟೇ ಉದಾತ್ತವಾಗಿ,ಉನ್ನತವಾಗಿದ್ದರೂ ಸರಿ ಶರಣಾಗಲೇ ಬೇಕಾಗುತ್ತದೆ. ನಮ್ಮ ಮಾತೃಭೂಮಿಗೆ ಅದೆಂತಹ ಸಮಯ ಈಗ ಬಂದಿದೆಯೆಂದರೆ ಇದರ ಸೇವೆಯನ್ನು ಹೊರತುಪಡಿಸಿ ಉಳಿದ ಯಾವುದೂ ಪ್ರಿಯವೆನಿಸ ಕೂಡದು, ಉಳಿದ ಎಲ್ಲವನ್ನೂ ಇದಕ್ಕಾಗಿಯೇ ಮೀಸಲಾಗಿಸಬೇಕಾಗುತ್ತದೆ. ನೀವೇನು ಮಾಡಬೇಕೆಂದಿದ್ದೀರೋ ಇದಕ್ಕಾಗಿಯೇ ಮಾಡಿ, ಶರೀರ-ಮನ- ಆತ್ಮ ಎಲ್ಲವನ್ನು ಇದರ ಸೇವೆಗಾಗಿಯೇ ಪ್ರಶಿಕ್ಷಿತಗೊಳಿಸಬೇಕು. ನಿಮ್ಮ ಜೀವಿತವಷ್ಟೂ ಇದಕ್ಕಾಗಿಯೇ ಜೀವಿಸುವುದಕ್ಕಾಗಿ ಪ್ರಾಪ್ತವಾಗಿದೆಯೆಂಬಂತೆ ಜೀವಿಸಬೇಕು. ಸಾಗರದಾಚೆಗಿನ ವಿದೇಶಕ್ಕೆ ಹೋಗುವುದಾದರೂ ಅಲ್ಲಿನ ಜ್ಞಾನದ ಬುತ್ತಿಯನ್ನು ತಂದು ರಾಷ್ಟ್ರದ ಸೇವೆಯನ್ನೆ ಮಾಡುವಂತೆ, ಇದರ ವೈಭವಕ್ಕಾಗಿ ಕೆಲಸ ಮಾಡಿ, ಇದು ಆನಂದವಾಗಿರುವುದಕ್ಕೆ ನೀನು ದುಃಖವನ್ನು ಭರಿಸು. ಈ ಒಂದು ಪರಾಮರ್ಶೆಯಲ್ಲೇ ಸಮಸ್ತವೂ ಬರುತ್ತದೆ”
ಭಾರತದ ಜನರಿಗೆ ಇಂದಿಗೂ ಕೂಡ ಇದೇ ಸಾರ್ಥಕ ಸಂದೇಶವಾಗಿದೆ.
ಹಳ್ಳಿ ಹಳ್ಳಿಗಳಲ್ಲಿ ಸಜ್ಜನ ಶಕ್ತಿ
ರೋಮರೋಮಗಳಲ್ಲಿ ಭಾರತ ಭಕ್ತಿ
ಇದೇ ವಿಜಯದ ಮಹಾಮಂತ್ರವಾಗಿಲಿ,
ಹತ್ತು ದಿಕ್ಕುಗಳಲ್ಲಿ ಪಯಣ ಸಾಗಲಿ!
ಭಾರತ್ ಮಾತಾ ಕಿ ಜಯ್.
ನಮಸ್ಕಾರಗಳು. ಸಮಗ್ರವಿಕಾಸಕ್ಕಾಗಿ ಭಾರತದ ಮನೋಭೂಮಿಕೆ, ಸಿದ್ದತೆ ಮತ್ತು ಸುಸ್ಥಿರತೆ ಗಾಗಿಅವಶ್ಯಕ ಅಧ್ಯಾತ್ಮಿಕ ಚಿಂತನೆ , ಅನುಷ್ಠಾನ ಕುರಿತು ಸ್ಪಷ್ಟವಾಗಿ ಸರಳವಾಗಿ ತಿಳಿಸಲಾಗಿದೆ. ವಿಚಾರ ಆಚಾರವಾಗಿ ಅರಳಬೇಕು, ಉದಾತ್ತ ಗುರಿ ಸಾಧಿಸಲು ಸಣ್ಣ ಸಂಗತಿಗಳತ್ತ ಗಮನಹರಿಸ ಬೇಕು.ಮಾತೃ ಶಕ್ತಿಯುಕ್ತ ಸಜ್ಜನಶಕ್ತಿ ಸಂಘಟಿತವಾಗಬೇಕು. ಬಲಿಷ್ಠ ಭಾರತ ನಿರ್ಮಾಣಕ್ಕೆ ಪಥದರ್ಶಕರೀತಿಯಲ್ಲಿದೆ. ವಿಜಯ ದಶಮಿ ಶುಭಾಶಯಗಳು.