– ಎಂ.ಕೆ.ಶ್ರೀಧರನ್,ನಿರ್ವಾಹಕ ವಿಶ್ವಸ್ಥರು, ವಿಶ್ವ ಸಂವಾದ ಕೇಂದ್ರ, ಕರ್ನಾಟಕ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪದ್ದತಿಯಂತೆ ಮುಖ್ಯಸ್ಥರಾದ ಸರಸಂಘಚಾಲಕರು ಸಂಘ ಸ್ಥಾಪನಾ ದಿನವಾದ ವಿಜಯದಶಮಿಯ ದಿನದಂದು ಮಾಡುವ ವಾರ್ಷಿಕ ಭಾಷಣವು ಈ ವರ್ಷ ೨೦೨೨ ರ ಬುಧವಾರ, ೫ನೇ ಅಕ್ಟೋಬರ್‌ಅಂದು ನಡೆಯಿತು. ಆ ಭಾಷಣದ ಮುಖ್ಯಾಂಶಗಳನ್ನು, ಅವುಗಳ ಹಿನ್ನೆಲೆಗಳೊಂದಿಗೆ ಮತ್ತು ಕೆಲವು ಸಮೀಕ್ಷಾತ್ಮಕ ವಿವರಣೆಗಳೊಡನೆ ಇಲ್ಲಿ ನೀಡಲಾಗಿದೆ.
ಈ ವರ್ಷ ಉತ್ಸವದ ಅತಿಥಿಯಾಗಿ ಶ್ರೀಮತಿ ಸಂತೋಷ್ ಯಾದವ್ ಅವರನ್ನು ಅಹ್ವಾನಿಸಲಾಗಿತ್ತು. ಹರಿಯಾಣ ಮೂಲದ ೫೩ ವರ್ಷದ ಶ್ರೀಮತಿ ಸಂತೋಷ್ ಯಾದವ್ ಅವರು ಎರಡುಬಾರಿ ಗೌರಿಶಂಕರ (ಎವರೆಸ್ಟ್) ಪರ್ವತಾರೋಹಣ ಮಾಡಿ ಹೆಸರಾಗಿದ್ದಾರೆ. ಹಿಂದುತ್ವದ ಸಮರ್ಥಕರೂ ಆಗಿದ್ದಾರೆ.


“ಒಂಭತ್ತು ರಾತ್ರಿಗಳ ಶಕ್ತಿ ದೇವತೆಯ ಆರಾಧನೆಯ ನಂತರದ ಹತ್ತನೇ ಬೆಳಗು ವಿಜಯದೊಡನೆ ದಶಮಿಯಂದು ಆಗುತ್ತದೆ. ಶಕ್ತಿಸ್ವರೂಪಳಾದ ಜಗಜ್ಜನನಿಯು ಮಾತ್ರವೇ ಶಿವಸಂಕಲ್ಪವನ್ನು ಸಾಕಾರಗೊಳಿಸಲು ಆಧಾರಳಾಗಿದ್ದಾಳೆ. ಎಲ್ಲೆಡೆ ಪವಿತ್ರತೆ ಮತ್ತು ಶಾಂತಿ ಸ್ಥಾಪನೆ ಮಾಡಲೂ ಸಹ ಶಕ್ತಿಯ ಆಧಾರ ಅನಿವಾರ್ಯವಾಗಿದೆ.” ಹೀಗೆ ಹೇಳುತ್ತಾ ಮೋಹನ್ ಭಾಗವತರು ಸಭೆಯ ಮುಖ್ಯ ಅತಿಥಿಯನ್ನು ಶಕ್ತಿ ಮತ್ತು ಚೈತನ್ಯದ ಪ್ರತಿನಿಧಿ ಎಂದು ಬಣ್ಣಿಸಿದರು. ಅವರು ಮುಂದುವರೆದು “ಭಾರತೀಯ ಸಂಪ್ರದಾಯವು ಸ್ತ್ರೀ-ಪುರುಷರ ಪೂರಕ ಪಾತ್ರವನ್ನು ಸದಾ ಪರಿಗಣಿಸಿದೆ. ಭಾರತದ ನವೋತ್ಥಾನದ ಸಂದರ್ಭದಲ್ಲಿ ನಮ್ಮ ಎಲ್ಲಾ ಮಹಾಪುರುಷರೂ ಸಹ ಸ್ತ್ರೀಯರು ಸಮಾಜದ ಎಲ್ಲಾ ಕಾರ್ಯಕಲಾಪಗಳಲ್ಲೂ, ನಿರ್ಣಯ ಪ್ರಕ್ರಿಯೆಗಳಲ್ಲೂ ಭಾಗವಹಿಸಲು ಅನುವಾಗುವಂತೆ ಮಾಡುವುದರ ಮೂಲಕ ಇದನ್ನು ಮುಂದುವರೆಸಿದೆ. ರಾಷ್ಟ್ರ ಪುನರ್ನಿರ್ಮಾಣದಲ್ಲಿ ಮಾತೃಶಕ್ತಿಯ ಪ್ರಭಾವ ಕಾಣಬರಲಿದೆ.” ಎಂದೂ ಹೇಳಿದರು.
ಹಿಂದೂ ಸಮಾಜದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಇಲ್ಲ ಎನ್ನುವುದು ಹಳೆಯ ದೂರು. ಸರಿಯಾಗಿ ಹೇಳಬೇಕೆಂದರೆ ಅದು ಒಂದು ಅಪಪ್ರಚಾರ. ಆಕ್ರಮಣಕಾರರ ಅಧಿಕಾರದ ನೆರಳಲ್ಲಿ ಮಾಡಲಾದ ಈ ಆರೋಪಕ್ಕೆ ಬಲವಾಗುವುದಕ್ಕೆ ಕಾರಣ ಅದಕ್ಕೆ ಸಿಕ್ಕ ಅಧಿಕೃತ ಮಾನ್ಯತೆ. ಹೆಣ್ಣು ಮಗು ಪಾಲಕರಿಂದಲೇ ತಾರತಮ್ಯಕ್ಕೆ ಒಳಗಾಗುತ್ತದೆ ಎನ್ನುವವರೆಗೆ ಈ ಅಪಪ್ರಚಾರ ಮುಂದುವರೆದಿದೆ. ದುರದೃಷ್ಟವಶಾತ್, ಈ ಆರೋಪವನ್ನು ಭಾರತೀಯ ಸಮಾಜದಲ್ಲಿ ಕೂಡ ವ್ಯಾಪಕವಾಗಿ ಒಪ್ಪಿಕೊಳ್ಳಲಾಗಿದೆ. ಹಿಂದೂ ಸಂಘಟನೆಯೇ ತನ್ನ ಗುರಿಯಾಗಿರಿಸಿಕೊಂಡ ಸಂಘದ ಮೇಲೆ ಕೂಡ ಇದೇ ಆರೋಪ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಖ್ಯ ಅತಿಥಿಗಳ ಆಯ್ಕೆ, ಶಕ್ತಿದೇವತೆಯ ಮಹತ್ವದ ಉಲ್ಲೇಖ, ಮಾತೃಶಕ್ತಿಯ ಬಗೆಗಿನ ಮಾತುಗಳು ಸಮಾಜ ಮತ್ತು ಸಂಘಟನೆಯ ಮಹಿಳಾ ಪರ ದೃಷ್ಟಿಕೋನವನ್ನು ಪ್ರಬಲವಾಗಿ ಪ್ರಸ್ತುತಪಡಿಸಿದೆ.


“ಭಾರತದ ಪುನರುಜ್ಜೀವನದ ಪ್ರಕ್ರಿಯೆಯ ಅನುಭವವು ಸಾಮಾನ್ಯ ಜನರ ಅನುಭವಕ್ಕೂ ಬರುತ್ತಿದೆ. ದೇಶದ ಶಕ್ತಿ ವರ್ಧನೆ, ಮತ್ತು ಲಭ್ಯವಾಗುತ್ತಿರುವ ಜಾಗತಿಕ ಮನ್ನಣೆಯಿಂದ ಎಲ್ಲರೂ ಸಂತೋಷಗೊಳ್ಳುತ್ತಿದ್ದಾರೆ. ಸರ್ಕಾರವು ಆತ್ಮ-ನಿರ್ಭರತೆಯ ನೀತಿಯನ್ನು ಅನುಸರಿಸುತ್ತಿದೆ. ಪ್ರಧಾನ ಮಂತ್ರಿಗಳು ಕರ್ತವ್ಯ ಪಥವನ್ನು ಉದ್ಘಾಟನೆ ಮಾಡುವಾಗ ಭಾರತದ ಭವಿಷ್ಯದ ಬಗ್ಗೆ ನೀಡಿದ ಚಿತ್ರಣಕ್ಕಾಗಿ ಸರ್ಕಾರವು ಅಭಿನಂದನೀಯವಾಗಿದೆ. ನಾಗರೀಕರೂ ಸಹ ತಮ್ಮ ಜವಾಬ್ದಾರಿಗಳನ್ನು ಈ ನಿಟ್ಟಿನಲ್ಲಿ ನಿರ್ವಹಿಸಬೇಕಾಗಿದೆ ”
ಇಲ್ಲಿ ಸರಸಂಘಚಾಲಕರು ಸರ್ಕಾರವನ್ನೂ, ಪ್ರಧಾನ ಮಂತ್ರಿಗಳನ್ನೂ ಪ್ರಶಂಸಿಸಿ ಮಾತನಾಡಿರುವುದನ್ನು ಗಮನಿಸಬೇಕು. ಇದನ್ನು ಪರಿವಾರದ ಭಾಗವಾದ ಬಿಜೆಪಿಯ ಪರವಾದ ಮಾತು ಎಂದಷ್ಟೇ ಹೇಳಿ ಬಿಟ್ಟುಬಿಡಲಾಗದು. ಯಾರೇ ಇಷ್ಟ ಪಡಲೀ ಅಥವಾ ಪಡದಿರಲೀ, ಭಾರತದಲ್ಲಿ ಹಿಂದೂ ಸಮುದಾಯವು ಅತ್ಯಂತ ಪ್ರಮುಖವಾದ ಸಮುದಾಯವಾಗಿದೆ. ಹಿಂದೂ ಸಂಘಟನೆಯಾದ ಸಂಘಕ್ಕೆ ಸಾರ್ವಜನಿಕ ವ್ಯವಹಾರಗಳಲ್ಲಿ ಬಾಧ್ಯತೆ ಅಷ್ಟೇ ಅಲ್ಲದೇ ಹಕ್ಕೂ ಕೂಡ ಇದೆ. ತನ್ನ ಭಾಧ್ಯತೆಯನ್ನು ಸಂಘವು ದಶಕಗಳಿಂದಲೂ, ಯಾವುದೇ ಸರ್ಕಾರವಿದ್ದರೂ, ಜವಾಬ್ದಾರಿಯುತವಾಗಿ ಮತ್ತುಸಂಯಮದಿಂದ ನಿರ್ವಹಿಸುತ್ತಿದೆ. ಪ್ರಸ್ತುತ ಸರ್ಕಾರದ ರೀತಿ-ನೀತಿಗಳು ಸಮಾಜಪರವಾಗಿದೆ ಎಂಬುದು ಸಂಘದ ಅಭಿಪ್ರಾಯವಾಗಿದೆ. ಆದ್ದರಿಂದ, ಸಂಘವು ರಾಜಕೀಯ ಸ್ಥಿರತೆಯ ಮುಂದುವರಿಕೆಯನ್ನು ಬಯಸುತ್ತಿದೆ. ಈ ಹಿನ್ನೆಲೆಯಲ್ಲಿ ಸಂಘವು ಸರ್ಕಾರ ಮತ್ತು ಸಮಾಜದ ಮಧ್ಯದ ಬಹಿರಂಗ ಕೊಂಡಿಯಾಗಿ ಸಮಾಜವನ್ನುದ್ದೇಶಿಸುತ್ತಿದೆ.

ಸರ್ಕಾರದ ಆತ್ಮನಿರ್ಭರತೆ ಸಂಘಕ್ಕೆ ಆಪ್ಯಾಯಮಾನ ಎನಿಸಬಹುದಾದ ಕಾರ್ಯಕ್ರಮ. ಇದು ಯಾವುದೇ ಭಾರತ ಪರ ವ್ಯಕ್ತಿ/ಸಂಸ್ಥೆಗಳ ವಿಚಾರದಲ್ಲೂ ನಿಜವೇ. ಭಾರತೀಯ ಸಮಾಜದ ಪುನರುಜ್ಜೀವನಕ್ಕೆ ಇದು ರಹದಾರಿ ಎಂಬುದೂ ಸತ್ಯವೇ. ಆದ್ದರಿಂದಲೇ, ಮೋಹನ್ ಭಾಗವತರು ಈ ವಿಷಯಗಳ ಬಗ್ಗೆ, ಅವುಗಳಿಗೆ ಇರುವ ಅಡೆತಡೆಗಳ ಬಗ್ಗೆ ಮಾತನಾಡಿದ್ದಾರೆ. ಸುಳ್ಳು ಸುದ್ದಿಗಳನ್ನು ಹರಡುತ್ತಾ, ತಪ್ಪು ಅಭಿಪ್ರಾಯಗಳನ್ನು ಮೂಡಿಸುತ್ತಾ ಮಿಥ್ಯಾಖ್ಯಾನಗಳ ಮೂಲಕ ರಾಷ್ಟ್ರೀಯ ಪುನರುಜ್ಜೀವನವನ್ನು ತಡೆಯುವ ಪ್ರಯತ್ನಗಳ ಬಗ್ಗೆ ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ.

“ಹಲವಾರು ಮೂಲಗಳಿಂದ ಸಿಗುತ್ತಿರುವ ವಿವಿಧ ವೈದ್ಯಕೀಯ ಚಿಕಿತ್ಸಾ ವಿಧಾನಗಳನ್ನು ಜೋಡಿಸಿ ಜನರಿಗೆ ಸುಲಭವಾಗಿ, ಕಡಿಮೆ ದರದಲ್ಲಿ ಸಿಗುವಂತೆ ಸರ್ಕಾರವು ಮಾಡಬೇಕೆಂದು ಸಂಘವು ಬಯಸುತ್ತದೆ. “ ಅಲೋಪತಿ ಪದ್ಧತಿಯನ್ನು ಇತರ ಪರ್ಯಾಯ ವೈದ್ಯಕೀಯ ಪದ್ಧತಿಗಳ ಜೊತೆ ಸಮೀಕರಿಸಿಕೊಳ್ಳಬೇಕಾದ ಅಗತ್ಯವನ್ನು ಅವರು ಪುನರುಚ್ಚರಿಸಿದ್ದಾರೆ. “ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಗಳು ಉದ್ಯೋಗಮುಖೀ ಆಗಿರಬೇಕೆಂಬುದು ಸಹಜವಾದ ಅಪೇಕ್ಷೆ” ಎಂದು ಹೇಳಿರುವುದೂ ಸಹ ಸಾರ್ವಜನಿಕರ ಪರವಾಗಿ ಸರ್ಕಾರಕ್ಕೊಂದು ಸಂದೇಶ ಎನ್ನಬಹುದು.
ಸಾಮಾಜಿಕ ಸಾಮರಸ್ಯದ ವಿಷಯದಲ್ಲಿ ಸಂಘವು ತನ್ನ ನಿಶ್ಚಿತ ನಿಲುವನ್ನು ಸತತವಾಗಿ ಹೇಳುತ್ತಿದೆ. ಅಸಮಾನತೆ, ತಾರತಮ್ಯತೆ ಗಳು ಧರ್ಮವಾಗಲಾರದು ಎಂಬುದು ಇದರ ತಿರುಳು. ದೇವಾಲಯಗಳು, ನೀರಿನ ಮೂಲಗಳು ಮತ್ತು ಸ್ಮಶಾನಗಳಿಗೆ ದಲಿತರನ್ನು ನಿರ್ಭಂಧಿಸಲಾಗುತ್ತಿದೆ ಎಂಬ ವರದಿಗಳು ಆಗಾಗ ಬರುತ್ತಿರುತ್ತವೆ. ಈ ರೀತಿಯ ನಿರ್ಬಂಧಗಳಿಗೆ ಕಾನೂನಿನ ಮತ್ತು ಆಡಳಿತಗಳ ಸಮ್ಮತಿ ಇಲ್ಲ ಎನ್ನುವುದೂ ಸ್ಪಷ್ಟ. ವ್ಯಕ್ತಿಗತ, ಕೌಟುಂಬಿಕ ಮತ್ತು ಸಮುದಾಯದ ನೆಲೆಯಲ್ಲಿ ಸ್ನೇಹ ಮತ್ತು ಒಡನಾಟ ವ್ಯಾಪಕವಾಗಿಯೇ ಇದೆ ಎಂಬುದೂ ನಿಜ. ಆದರೆ, ನಿರ್ಬಂಧದ ವರದಿಗಳೂ ಸಹ ಜೊತೆಯಲ್ಲೇ ಬರುತ್ತಿದ್ದು ಸಾಮಾಜಿಕವಾಗಿ ನೆಲೆಯಲ್ಲಿ ಇವು ನಡೆಯುತ್ತಿದೆ ಎನ್ನಲಾಗುತ್ತಿದೆ. ಈ ಸನ್ನಿವೇಶದಲ್ಲಿ “ಸಮಾನತೆಯು ಕನಸಿನ ಮಾತು” ಎಂದು ಭಾಗವತರು ಎಚ್ಚರಿಸಿದ್ದಾರೆ. ಆಡಳಿತಾತ್ಮಕ ಪರಿವರ್ತನೆಗಳು ವಾಸ್ತವವಾಗಬೇಕಾದರೆ ಅವು ಸಾಮಾಜಿಕ ವರ್ತನೆಗಳಲ್ಲಿ ಪ್ರತಿಫಲನಗೊಳ್ಳಬೇಕು. ಇದಕ್ಕೆ ಮಾನಸಿಕತೆಯ ಪರಿವರ್ತನೆ ಆಗಬೇಕು. ಉಪಭೋಗ ಪ್ರವೃತ್ತಿ ಮತ್ತು ಶೋಷಣೆ ಮಾಡುವ ಮಾನಸಿಕತೆಗಳು ಅಗತ್ಯವಾದ ಮಾನಸಿಕ ಪರಿವರ್ತನೆಗೆ ತಡೆಯಾಗಿದೆ ಎಂಬುದನ್ನು ಅವರು ಗುರುತಿಸಿದ್ದಾರೆ.


“೨೦೦೦ ನೇ ಇಸವಿಯಲ್ಲಿ ಫಲವತ್ತತೆಯ ದರದ ಗುರಿ ೨.೧ ಆಗಿತ್ತು. ಆದರೆ, ೨೦೨೨ ರಲ್ಲಿ ಇದು ೨.೦ಕ್ಕೆ ಆಗಿದೆ. ಅತಿ ಸಣ್ಣ ಕುಟುಂಬಗಳು ಹೆಚ್ಚಾದಂತೆ, ಮಕ್ಕಳ ಸರ್ವತೋಮುಖ ಬೆಳವಣಿಗೆ ಕಷ್ಟಸಾಧ್ಯವಾಗುತ್ತಿದೆ. ಅನಧಿಕೃತ ಮತ್ತು ಅನೈತಿಕ ಮತಾಂತರಗಳು, ಮತಾಧಾರಿತ ಜನಸಂಖ್ಯಾ ಪಲ್ಲಟಗಳು ದೇಶದ ಮೂಲಭೂತ ಸ್ವರೂಪವನ್ನು ಬದಲಿಸುವ ಸಾಮರ್ಥ್ಯ ಹೊಂದಿವೆ. ಈ ದೃಷ್ಟಿಗಳಿಂದ ಜನಸಂಖ್ಯಾ ನೀತಿ ರೂಪಿಸಬೇಕಾಗಿದೆ.” – ಇದು ಜನಸಂಖ್ಯಾ ಪಲ್ಲಟದ ಬಗ್ಗೆ ಶ್ರೀ. ಮೋಹನ್ ಭಾಗವತ್ ಅವರು ಹೇಳಿರುವ ಮಾತು.
ಸಂಘವು ಜನಸಂಖ್ಯಾ ಪಲ್ಲಟದ ಬಗ್ಗೆ ಏಕಾಂಗಿಯಾಗಿ ಹಲವಾರು ದಶಕಗಳಿಂದ ಕಾಳಜಿ ಮತ್ತು ಆತಂಕಗಳಿಂದ ಮಾತನಾಡುತ್ತಿದೆ. ದೇಶ ವಿಭಜನೆಯ ಮೂಲಕಾರಣಗಳು ಮತ್ತು ನೆರೆಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಹಿಂದೂಗಳ ವ್ಯವಸ್ಥಿತ ನಾಶ – ಇವುಗಳ ಹಿನ್ನೆಲೆಯಲ್ಲಿ ಸಂಘವು ಸಮಸ್ಯೆಯನ್ನು ಸರಿಯಾಗಿ ಗ್ರಹಿಸಿದೆ. ಈ ವರ್ಷದ ಭಾಷಣದಲ್ಲಿ ಒಟ್ಟೂ ಫಲವತ್ತತೆಯ ದರದ ಆಧಾರದಲ್ಲಿ ಜನಸಂಖ್ಯಾ ಪಲ್ಲಟದ ದಿಕ್ಕನ್ನು ಸರ್ವತೋಮುಖವಾಗಿ ವಿಶ್ಲೇಷಿಸಿದ್ದಾರೆ.

ಜೊತೆಗೆ, ಸಮಸ್ಯೆಯ ಕೇಂದ್ರ ಬಿಂದುವನ್ನು ನಿಖರವಾಗಿ ಮತಾಂತರ, ಮತ್ತು ಅಸಮಾನ ಮತೀಯ ಜನಸಂಖ್ಯಾ ವೃದ್ಧಿ ಎಂಬುದಾಗಿ ಗುರುತಿಸಿದ್ದಾರೆ. ಸಂಘ ಮುಸ್ಲಿಂ ವಿರೋಧೀ ಎಂಬ ಆರೋಪ/ಅಪಪ್ರಚಾರವನ್ನೂ ಅವರು ಅಲ್ಲಗೆಳೆದಿದ್ದಾರೆ. ಸಂಘಟಿತ ಹಿಂದೂ ಸಮಾಜ ಮುಸ್ಲಿಮರಿಗೆ ಅಪಾಯ ತರುವುದಿಲ್ಲ. ಹಿಂದೆ ನಡೆದ ಘಟನೆಗಳಿಂದಲೂ ಈ ರೀತಿ ಹೇಳಲಾಗುವುದಿಲ್ಲ. ಭಾರತದ ಅಥವಾ ಭಾರತದ ಪರವಾಗಿರುವ ಸಂಘದ ಸ್ವಭಾವದಲ್ಲೇ ಈ ರೀತಿಯ ಅಪಾಯ ತರುವ ಪ್ರವೃತ್ತಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದೂ ಸಂಘಟನೆಯ ಕಾರ್ಯವನ್ನೇ ಮುಸ್ಲಿಂ ವಿರೋಧಿ ಎಂದು ಹೇಳಲಾಗದು. ಸದುದ್ದೇಶದಿಂದ ಮುಚ್ಚು-ಮರೆ ಇಲ್ಲದೇ ಮಾಡುವ ಸಮುದಾಯ ಕೇಂದ್ರಿತ ಚಟುವಟಿಕೆಗಳು ಸಾಮಾಜಿಕವಾಗಿ ಲಾಭಕರವೇ ಆಗುತ್ತದೆ. ಸಂಘವು, ಹಾಗು ಅದರ ಪದಾಧಿಕಾರಿಗಳು ಮುಸ್ಲಿಂ ಸಮುದಾಯದವರೊಡನೆ ನಿಯಮಿತ ಮಾತುಕತೆ ನಡೆಸಲಿದ್ದಾರೆ ಎಂದು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇಸ್ಲಾಂ ಜೊತೆಗಿನ ಚರ್ಚೆಯ ಪ್ರಯತ್ನ ಸಾಧ್ಯವೇ? ಈ ಭ್ರಮೆಯು ಆತ್ಮಘಾತಕವಲ್ಲವೇ? ಎಂಬ ಪ್ರಶ್ನೆಗಳು ಸಾರ್ವಜನಿಕರ ಮನದಲ್ಲಿ ಎದ್ದವು.

ವಿಜಯದಶಮಿಯ ಭಾಷಣದಲ್ಲಿ, ಭಾಗವತರು ಸ್ವತಃ ಈ ವರದಿಗಳನ್ನು ಖಚಿತಪಡಿಸಿದ್ದಾರೆ. ಸೌಹಾರ್ದಯುತವಾಗಿ ಮತ್ತು ಮುಕ್ತವಾಗಿ ಈ ಚರ್ಚೆ ನಡೆದಿದೆ. ಮುಸ್ಲಿಮರೂ ಭಾರತದೊಡನೆ ಗುರುತಿಸಿಕೊಳ್ಳಬೇಕಾದ ಅಗತ್ಯವನ್ನು ಮಾತುಕತೆಯಲ್ಲಿ ಹಂಚಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಮುಸ್ಲಿಂ ಸಮುದಾಯವು ಮುಖ್ಯವಾಹಿನಿಯಿಂದ ಪ್ರತ್ಯೇಕವಾಗಿಯೇ ಉಳಿದಿರುವುದು ಒಂದು ಸಮಸ್ಯೆಯಾಗಿದೆ. ಅವರ ರೀತಿ-ನೀತಿಗಳು ಸಂವಿಧಾನ ದತ್ತ ಮತೀಯ ಸ್ವಾತಂತ್ರ್ಯದ ಮಿತಿಯೊಳಗೇ ಇದೆ ಎಂಬ ವಾದ ಇದೆಯಾದರೂ, ವಸ್ತುಸ್ಥಿತಿ ಅಷ್ಟು ಸರಳವಾಗಿಲ್ಲ.

ಉದಯಪುರದಲ್ಲಿ ನಡೆದ ಶಿರಚ್ಛೇಧದ ಪ್ರಕರಣ ಮತ್ತು ಅದೇ ರೀತಿಯ ಇತರೆಡೆ ನಡೆದ ಪ್ರಕರಣಗಳು ಮುಸ್ಲಿಂ ಸಮುದಾಯದಲ್ಲಿರುವ ಪ್ರತ್ಯೇಕತೆಯ ಮಾನಸಿಕತೆಯನ್ನೂ, ಅಸಹಿಷ್ಣುತೆಯನ್ನು ಕ್ರೌರ್ಯದ ಮೂಲಕ ವ್ಯಕ್ತಗೊಳಿಸುವ ಪ್ರವೃತ್ತಿಯನ್ನೂ ತೋರಿಸುತ್ತದೆ. ಮೋಹನ್ ಭಾಗವತ್ ಅವರು ತಮ್ಮ ಭಾಷಣದಲ್ಲಿ ಈ ಪ್ರವೃತ್ತಿಗೆ ಇಡೀ ಇಸ್ಲಾಂ ಸಮುದಾಯವನ್ನು ಜವಾಬ್ದಾರಿ ಮಾಡದೇ ಪ್ರಬುದ್ಧತೆ ಮೆರೆದಿದ್ದಾರೆ. ಆದರೆ, ಮುಸ್ಲಿಂ ಸಮುದಾಯದೊಳಗೆ ಉದಯಪುರದಂಥಹಾ ಘಟನೆಗಳಿಗೆ ಪ್ರತಿಭಟನೆ ಸಾಕಷ್ಟು ಬರುತ್ತಿಲ್ಲ ಎಂಬುದರತ್ತ ಎಲ್ಲರ ಗಮನ ಸೆಳೆದಿದ್ದಾರೆ. ಪ್ರತ್ಯೇಕತೆಯ ಕಾರಣದಿಂದಲೇ ಆದ ದೇಶವಿಭಜನೆಯನ್ನು ಪ್ರಸ್ತಾಪಿಸಿ ಅದರಿಂದ ಆದ ಉತ್ಪತ್ತಿ ಆದ ಸಾವು,ನೋವು ಮತ್ತು ಅಸಂತೋಷದತ್ತ ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಕಾನೂನಿನ ಚೌಕಟ್ಟುಗಳನ್ನು ಯಾವುದೇ ಪ್ರಚೋದನೆ ಇದ್ದರೂ ಮುರಿಯುವಂತಿಲ್ಲ ಎಂದು ಹೇಳಿದ್ದಾರೆ. ಇಲ್ಲಿ ಪ್ರಚೋದನೆಯು ಮತನಿಂದನೆಯೂ ಸೇರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಮತ್ತು ಕಾನೂನು ಮತ್ತು ಶರಿಯಾ ಮಧ್ಯೆ ಆಯ್ಕೆಯ ಚರ್ಚೆ ಇಲ್ಲ ಎಂಬ ಧ್ವನಿ ಇದೆ. ಒಟ್ಟಿನಲ್ಲಿ ಸಂಘದ ಮುಖ್ಯಸ್ಥರು ಶಾಂತಿಯ, ಸಹಿಷ್ಣುತೆಯ ಸಂದೇಶವನ್ನು ಸಾಮಯಿಕವಾಗಿ ನೀಡಿದ್ದಾರೆ. ಈ ಮಾತುಗಳು ರಾಜಕೀಯ ಒತ್ತಡಗಳಿಂದ ಬಂದಿದೆ ಎಂದು ಗ್ರಹಿಸುವವರು ಸಂಘದ ಆಗ್ರಹಗಳನ್ನು ಐತಿಹಾಸಿಕವಾಗಿ ಗಮನಿಸಿಲ್ಲ ಎಂದು ಖಚಿತವಾಗಿ ಹೇಳಬಹುದು.

ಶ್ರೀ ಅರವಿಂದರ ಆಶಯವಾದ ಭಾರತದ ವಿಭಜನೆಯ ರದ್ದು ಮತ್ತು ಅಖಂಡ ಭಾರತದ ಸಾಕಾರ – ಇವುಗಳನ್ನು ಭಾಗವತರು ಪ್ರಸ್ತಾಪಿಸಿದ್ದಾರೆ. ಅಖಂಡ ಭಾರತವು ಸಂಘದ ಅಜೆಂಡಾದಲ್ಲಿ ಇದೆ ಎಂದು ಮರೆತವರಿಗೆ ನೆನಪಿಸಿದ್ದಾರೆ.


ಪುನರುಜ್ಜೀವನಕ್ಕೆ ಅಗತ್ಯವಾದ ತ್ಯಾಗಗಳಿಗೆ ಸಮಾಜವು ಸಿದ್ಧವಾಗಬೇಕಾದರೆ, ಅದಕ್ಕೆ ತನ್ನತನದ ಅರಿವಿರಬೇಕು ಎಂದು ಹೇಳುತ್ತಾ, ಭಾರತದ ಸ್ವಂತಿಕೆಯನ್ನು ಹಿಂದೂ ಆಧ್ಯಾತ್ಮ ಮತ್ತು ಧರ್ಮದ ನೆಲೆಯಲ್ಲಿ ವಿವರಿಸಿದ್ದಾರೆ. ಅದರ ತಳಹದಿಯ ಮೇಲೆ ನಿಂತಿರುವ ಸಂಘದ ‘ಹಿಂದೂ ಸಂಘಟನೆಯ’ ರೂಪು ರೇಷೆಗಳನ್ನು ವಿವರಿಸಿದ್ದಾರೆ. ‘ಹಿಂದೂ’ ಪದವನ್ನು ಇಷ್ಟಪಡದ ಕೆಲವರ ಪ್ರವೃತ್ತಿಯು ಭಾಗವತರ ಗಮನದಲ್ಲಿದೆ. ಆದರೆ, ಅದು ಇಷ್ಟಪಡದವರ ಪೂರ್ವಾಗ್ರಹವೇ ಹೊರತು ಸಂಘದ ಸಂಕುಚಿತತೆ ಆಗಲಾರದು ಎಂಬುದನ್ನು ಬಿಡಿಸಿ ಹೇಳಲು ಭಾಗವತರು ಹೋಗಿಲ್ಲ. ಬೇರೆ ಪದವನ್ನು ಉಪಯೋಗಿಸಲು ತಮ್ಮ ಆಕ್ಷೇಪಣೆ ಏನೂ ಇಲ್ಲ ಎಂದು ಹೇಳುತ್ತಾ ತಮ್ಮ ಸ್ಪಷ್ಟತೆಗಾಗಿ ಸಂಘವು ಹಿಂದೂ ಪದದ ಬಳಕೆ ಮುಂದುವರೆಸುತ್ತದೆ ಎಂದು ವಿವರಿಸಿದ್ದಾರೆ.

ಪ್ರಾದೇಶಿಕತೆಯ ಚರ್ಚೆ ಮತ್ತು ಅದರ ಆಧಾರದ ಮೇಲೆ ರಾಜಕೀಯವು ತಮಿಳುನಾಡಿನಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈಗ ಇತರ ಪ್ರದೇಶಗಳಲ್ಲೂ ಈ ದಿಕ್ಕಿನಲ್ಲಿ ಪ್ರಯತ್ನಗಳಾಗುತ್ತಿವೆ. ಹಿಂದೀ ಹೇರಿಕೆಯ ವಿಷಯ ಪ್ರಸ್ತಾಪದೊಡನೆ ಪ್ರಾದೇಶಿಕ ಸ್ವಾಯುತ್ತತೆಯನ್ನು ಆಗ್ರಹಿಸುವ ಪ್ರವೃತ್ತಿ ನೋಡುತ್ತಿದ್ದೇವೆ. ಭಾಗವತರು ನೂತನ ಶಿಕ್ಷಣ ನೀತಿಯಲ್ಲಿ ಮಾತೃಭಾಷಾ ಶಿಕ್ಷಣದತ್ತ ನಮ್ಮ ಗಮನ ಸೆಳೆದು ಕೆಲವು ಸಾಮಾಜಿಕ ಆಯ್ಕೆಗಳನ್ನು ಪ್ರಶ್ನಿಸುತ್ತಾರೆ. ಸರ್ಕಾರ ನಿಯಮ ಮಾಡಿದರೆ ಪಾಲಕರು ಮಾತೃಭಾಷಾ ಶಿಕ್ಷಣ ಒಪ್ಪುವರೇ ಎಂಬುದೇ ಆ ಪ್ರಶ್ನೆ. ಜನರು ತಮ್ಮ ವೈಯುಕ್ತಿಕ ಜೀವನದಲ್ಲೇ ಮಾತೃಭಾಷೆಯನ್ನು ಉಪಯೋಗಿಸದಿದ್ದಾಗ, ಸರ್ಕಾರದ ಮೇಲೆ ದೂರು ಹೇಳುವುದು ಎಷ್ಟು ಸರಿ ಎಂಬುದು ಒಂದು ಮುಖ್ಯ ಆದರೆ ಸಾರ್ವಜನಿಕವಾಗಿ ಚರ್ಚಿತವಾಗಿರದ ಪ್ರಶ್ನೆ.

ಒಟ್ಟಿನಲ್ಲಿ ಹೇಳುವುದಾದರೆ, ಸಂಘವು, ಮೋಹನ ಭಾಗವತರ ಭಾಷಣದ ಮೂಲಕ, ತಾನು ಹೇಳಬೇಕೆಂದಿರುವ ವಿಷಯಗಳನ್ನು ಭಾರತೀಯ ಸಂಸ್ಕೃತಿಯ ಪಾರಿಭಾಷಿಕ ಪದಗಳಲ್ಲೇ ಹೇಳುತ್ತಿದೆ. ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಎಲ್ಲರೊಡನೆ ಸಂವಹನವನ್ನು ಮುಕ್ತವಾಗಿರಿಸಿಕೊಂಡಿದೆ. ಭಾರತೀಯ ಸಮಾಜದ ನೈಜ ಸಮಸ್ಯೆಗಳತ್ತ ತನ್ನ ಗಮನ ಇರಿಸಿದೆ. ಸಾಮಾಜಿಕ ಸಾಮರಸ್ಯದ ಚಿಂತನೆಯಲ್ಲಿ – ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಸಂಬಂಧೀ ವಿಚಾರಗಳನ್ನೊಳಗೊಂಡು – ಹೆಚ್ಚು ಪ್ರೌಢಿಮೆ ಮತ್ತು ತನ್ಮಯತೆ ಹೊಂದಿದೆ. ತಾನು ನಡೆಸುವ ಸಾರ್ವಜನಿಕ ಚರ್ಚೆಯ ಗುಣಮಟ್ಟವನ್ನು ಎಲ್ಲಾ ರಾಜಕೀಯ ಪಕ್ಷಗಳಿಗಿಂತಲೂ, ಸರ್ಕಾರೀ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳಿಗಿಂತಲೂ ಎತ್ತರದಲ್ಲಿಟ್ಟುಕೊಂಡಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.