– ಡಾ. ಶ್ರೀಧರ ಹೆಚ್ ಜಿ
ಪರೀಕ್ಷಾಂಗ ಕುಲಸಚಿವರು ಹಾಗೂ ಕನ್ನಡ ವಿಭಾಗ ಮುಖ್ಯಸ್ಥರು, ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ),ಪುತ್ತೂರು
ಕನ್ನಡ ನಾಡು ನುಡಿಗಾಗಿ ತಮ್ಮ ಬದುಕನ್ನು ಮೀಸಲಿಟ್ಟ ಆಲೂರು ವೆಂಕಟರಾಯರು ಇಲ್ಲಿನ ಪತ್ರಿಕೋದ್ಯಮ ಸಾಹಿತ್ಯ, ಸಂಸ್ಕೃತಿಗೆ ನೀಡಿದ ಕೊಡುಗೆ ಅನನ್ಯವಾದುದು. ಕರ್ನಾಟಕ ಏಕೀಕರಣದ ನೆಲೆಯಲ್ಲಿ ಅವರು ಮಾಡಿದ ಕೆಲಸ ಸದಾ ಸ್ಮರಣೀಯ. ಈ ಕಾರಣಕ್ಕಾಗಿಯೇ ಅವರನ್ನು ಕನ್ನಡದ ‘ಕುಲಪುರೋಹಿತ’ ಎಂಬ ಹೆಸರಿನಿಂದ ಗೌರವಿಸುತ್ತೇವೆ.
“ಕನ್ನಡದಲ್ಲಿ ಏನಿದೆ ಎಂದು ತಿರಸ್ಕಾರದ ದೃಷ್ಟಿಯಿಂದ ನೋಡುತ್ತಿದ್ದವರಿಗೆ ಕನ್ನಡದಲ್ಲಿ ಏನಿಲ್ಲ” ಎಂಬ ಉತ್ತರವನ್ನು ನೀಡುವುದರ ಮೂಲಕ ಕನ್ನಡದ ಜ್ಯೋತಿಯನ್ನು ಬೆಳಗಿಸಿದ ಧೀಮಂತ ವ್ಯಕ್ತಿ ಆಲೂರ ವೆಂಕಟರಾಯರು. ಕರ್ನಾಟಕತ್ವದ ಕಲ್ಪನೆಯಿಂದ ಪ್ರೇರಣೆಯನ್ನು ಪಡೆದಿರುವ ಶ್ರೀಯುತರು ಧರ್ಮ, ಸಾಹಿತ್ಯ, ಶಿಕ್ಷಣ, ಇತಿಹಾಸ, ರಾಜಕಾರಣ ಇತ್ಯಾದಿ ಹಲವು ವಿಷಯಗಳನ್ನು ಕುರಿತು ಗ್ರಂಥಗಳನ್ನು ರಚಿಸಿದರು.
ದಿನಾಂಕ ೧೨.೦೭.೧೮೮೦ರಂದು ಅಂದಿನ ವಿಜಾಪುರದಲ್ಲಿ ಭೀಮರಾವ್ ಮತ್ತು ಭಾಗೀರಥಿಬಾಯಿ ದಂಪತಿಗಳ ಪುತ್ರನಾಗಿ ಜನಿಸಿದ ವೆಂಕಟರಾಯರು ನವಲಗುಂದ, ಗದಗ, ಹಾನಗಲ್ಲ ಮುಂತಾದ ಊರುಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ೧೮೯೭ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಪುಣೆಯ ಫರ್ಗುನ್ಸನ್ ಕಾಲೇಜಿನಲ್ಲಿ ಬಿ.ಎ., ಮುಂಬೈಯಲ್ಲಿ ಎಲ್.ಎಲ್.ಬಿ. ಪದವಿಯನ್ನು ಅಭ್ಯಾಸ ಮಾಡಿದರು. ಕಾನೂನು ಶಿಕ್ಷಣದಲ್ಲಿ ಪದವಿಯನ್ನು ಪಡೆದ ಬಳಿಕ ಧಾರವಾಡಕ್ಕೆ ಹಿಂದಿರುಗಿ ಬಂದರು. ೧೯೦೫ರಲ್ಲಿ ಆಲೂರರಿಗೆ ಹಂಪೆಯ ದರ್ಶನ ಮತ್ತು ವಂಗಭಂಗ ಚಳುವಳಿಗಳು ಬದುಕಿನ ಮೇಲೆ ತೀವ್ರವಾದ ಪ್ರಭಾವವನ್ನು ಬೀರಿದವು. ಈ ಅಂಶವನ್ನು ಸ್ವತಃ ಆಲೂರು ವೆಂಕಟರಾಯರು ಹೀಗೆ ಬರೆದಿದ್ದಾರೆ : “ವಿಜಯನಗರವು ವಿಸ್ತಾರವಾಗಿ ಪತ್ಯಕ್ಷವಾಗಿ ನನ್ನ ಕಣ್ಣಮುಂದೆ ಬಿದ್ದಿದೆ. ವಿಜಯನಗರವನ್ನು ದರ್ಶನ ಮಾಡಿದ ಬಳಿಕ ನನ್ನ ಹೃದಯದಲ್ಲಿ ಕರ್ನಾಟಕ ದೇವಿಯ ಸುಂದರವಾದ ಚಿತ್ರವು ಒಡಮೂಡಿತು. ಆ ದಿನವು ನನ್ನ ಜೀವನದಲ್ಲಿ ಕ್ರಾಂತಿಯನ್ನು ಮಾಡಲು ಕಾರಣವಾಯಿತು”. ಇಲ್ಲಿಂದ ಮುಂದೆ ಆಲೂರು ವೆಂಕಟರಾಯರು ಹಿಂದುತ್ವ ಮತ್ತು ಕರ್ನಾಟಕತ್ವದ ಸಲುವಾಗಿ ದುಡಿಯಲು ನಿರ್ಧರಿಸಿದರು.
೧೯೧೬ರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರನ್ನು ಕರ್ನಾಟಕಕ್ಕೆ ಬರಮಾಡಿಕೊಂಡು ಅವರ ಉಪನ್ಯಾಸಗಳನ್ನು ಏರ್ಪಡಿಸಿದರು. ಸ್ವತಃ ಸ್ವದೇಶಿ ಚಳುವಳಿ ಮತ್ತು ಕಾಯಿದೆಭಂಗ ಚಳುವಳಿಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸ್ವರಾಜ್ಯ ಪುಸ್ತಕಮಾಲೆಯನ್ನು ಆರಂಭಿಸಿ ನ್ಯಾಯಾಲಯದಲ್ಲಿ ಬಿಡುವು ದೊರೆತಾಗ ಸ್ವರಾಜ್ಯ ಸರ್ಕಾರದ ಬಗೆಗೆ ಕಿರುಹೊತ್ತಿಗೆಗಳನ್ನು ಬರೆದು ಪ್ರಕಟಿಸಿದರು.
ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ದಿಗ್ಗಜರೆನಿಸಿದ ಕುವೆಂಪು, ಶಂ.ಬಾ. ಜೋಶಿ, ಶ್ರೀರಂಗ, ಬೆಟಗೇರಿ ಕೃಷ್ಣಶರ್ಮ, ಶಿವರಾಮ ಕಾರಂತ, ಅ.ನ.ಕೃಷ್ಣರಾಯ ಮೊದಲಾದವರಿಗೆ ಕನ್ನಡದಲ್ಲಿ ಸಾಹಿತ್ಯ ನಿರ್ಮಿಸಲು ಪ್ರೇರಣೆ ನೀಡಿದ ಹಿರಿಯ ಚೇತನ ಆಲೂರ ವೆಂಕಟರಾಯರು. ದ.ರಾ. ಬೇಂದ್ರೆ ಅವರನ್ನು ಸಾರ್ವಜನಿಕವಾಗಿ ಮೊದಲು ಪರಿಚಯಿಸಿದ ಕೀರ್ತಿ ಆಲೂರು ವೆಂಕಟರಾಯರಿಗೆ ಸಲ್ಲುತ್ತದೆ. ಬೇಂದ್ರೆಯವರ ಮೊದಲ ಕೃತಿ ಕೃಷ್ಣಾಕುಮಾರಿಯನ್ನು ಪ್ರಕಟಿಸಿದ ಕೀರ್ತಿಯು ಆಲೂರರಿಗೆ ಸಲ್ಲುತ್ತದೆ.
೧೯೦೦ರ ಕಾಲಘಟ್ಟದಲ್ಲಿ ಮುಂಬಯಿ ಪ್ರಾಂತ್ಯದಲ್ಲಿದ್ದ ಕನ್ನಡ ನಾಡಿನ ಪ್ರದೇಶಗಳಲ್ಲಿ ಮರಾಠಿ ಭಾಷೆ ಸಾಕಷ್ಟು ಪ್ರಾಬಲ್ಯವನ್ನು ಹೊಂದಿತ್ತು. ಈ ಬಗ್ಗೆ ವೆಂಕಟರಾಯರಂತಹ ಹಿರಿಯರು ಹೋರಾಟವನ್ನು ಮಾಡಿ ಕನ್ನಡ ಶಾಲೆಗಳನ್ನು ಆರಂಭಿಸಲು ಪ್ರಯತ್ನಿಸಿದ್ದರು. ಇಷ್ಟಾಗಿಯೂ ಕನ್ನಡದ ಪರಿಸ್ಥಿತಿ ಹೇಳುವಷ್ಟು ಉತ್ತಮವಾಗಿರಲಿಲ್ಲ. ಮೈಸೂರು ಪ್ರಾಂತ್ಯಕ್ಕಿಂತ ಧಾರವಾಡ ಪ್ರದೇಶದಲ್ಲಿ ಕನ್ನಡದ ಬಗೆಗಿನ ಎಚ್ಚರ ಸಾಕಷ್ಟು ತೀವ್ರ ಸ್ವರೂಪವನ್ನು ಪಡೆದುಕೊಂಡಿತ್ತು. ಇದರ ಪರಿಣಾಮವಾಗಿ ೧೯೦೬ರಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪತ್ರಿಕೆಯಾದ ವಾಗ್ಭೂಷಣ ಪತ್ರಿಕೆ ಆರಂಭವಾಯಿತು. ಇದರ ಸಂಪಾದಕರಾಗಿ ಆಲೂರು ವೆಂಕಟರಾಯರು ನಿಯುಕ್ತರಾದರು. ಕನ್ನಡ ನಾಡಿನ ಏಕೀಕರಣಕ್ಕೆ ಸಂಬಂಧಿಸಿ ತಮ್ಮ ಆಲೋಚನೆಗಳನ್ನು ಪತ್ರಿಕೆಯ ಮೂಲಕ ಪ್ರಕಟಿಸಿ ಕನ್ನಡಿಗರನ್ನು ಎಚ್ಚರಿಸಿದರು; ಮಾತ್ರವಲ್ಲ, ಪತ್ರಿಕೆಯ ಮೂಲಕ ಕರ್ನಾಟಕ ಒಂದೇ ಎಂದು ಘೋಷಿಸಿದರು.
ಮುಂಬಯಿ ಪ್ರಾಂತ್ಯದಲ್ಲಿ ಕನ್ನಡ ಪುಸ್ತಕಗಳ ಕೊರತೆ ತೀವ್ರವಾಗಿತ್ತು. ಅದರಲ್ಲಿಯೂ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಒದಗಿಸುವ ಸವಾಲು ಲೇಖಕರ ಮೇಲಿತ್ತು. ಈ ಹಿನ್ನೆಲೆಯಲ್ಲಿ ೧೯೦೭ರಲ್ಲಿ ಧಾರವಾಡದಲ್ಲಿ ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನವನ್ನು ಸಂಘಟಿಸಿದರು. ಇದರ ಮುಂದುವರಿದ ಭಾಗವಾಗಿ ೧೯೧೫ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿದೆ ಎಂಬುದು ಈಗ ಇತಿಹಾಸವಾಗಿದೆ. ೧೯೦೭ ರಿಂದ ೧೯೧೧ರವರೆಗೆ ಕರ್ನಾಟಕ ಪತ್ರ, ಕರ್ನಾಟಕ ವೃತ್ತ ಮತ್ತು ಕನ್ನಡ ಕೇಸರಿ ಪತ್ರಿಕೆಗಳಿಗೆ ಸಂಪಾದಕೀಯ ಲೇಖನಗಳನ್ನು ಬರೆಯುವುದರ ಮೂಲಕ ಕರ್ನಾಟಕತ್ವವನ್ನು ಜಾಗೃತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಪತ್ರಿಕೆಗಳಲ್ಲಿ ಇವರು ಬರೆಯುತ್ತಿದ್ದ ಲೇಖನಗಳು ಬ್ರಿಟಿಷ್ ಸರಕಾರಕ್ಕೆ ಅಪಥ್ಯವಾಗಿತ್ತು.
೧೯೨೧ರಲ್ಲಿ ಧಾರವಾಡದಲ್ಲಿ ಸತ್ಯಾಗ್ರಹಿಗಳ ಮೇಲೆ ನಡೆದ ಗೋಲಿಬಾರ್ ಘಟನೆಯನ್ನು ಖಂಡಿಸಿ ಕರ್ಮವೀರದಲ್ಲಿ ಅನಾಮಧೇಯನ ಹೆಸರಿನಲ್ಲಿ ಲೇಖನವನ್ನು ಪ್ರಕಟಿಸಿದರು. ಇದರ ಪರಿಣಾಮವಾಗಿ ಪತ್ರಿಕೆಯ ಸಂಪಾದಕ ರಂಗರಾವ್ ದಿವಾಕರ ಹಾಗೂ ಪ್ರಕಾಶಕ ರಾಮರಾವ್ ಹುಕ್ಕೇರಿಕರ ಇಬ್ಬರಿಗೂ ಸೆರೆಮನೆ ಶಿಕ್ಷೆಯಾಯಿತು. ೧೯೩೧ರಲ್ಲಿ ಪೊಲೀಸ್ ಅಧಿಕಾರಿಗಳು ಆಲೂರ ಅವರನ್ನು ಸೆರೆಹಿಡಿದು ಕಲಘಟಗಿಯಲ್ಲಿ ರಾಜಕೀಯ ದಿಗ್ಬಂಧನದಲ್ಲಿ ಇರಿಸಿದರು.
ಆಲೂರು ವೆಂಕಟರಾಯರು ಕೆಲಸ ಮಾಡಿದ ಇನ್ನೊಂದು ಪತ್ರಿಕೆ ‘ಜಯಕರ್ನಾಟಕ. ೧೯೨೨ರಲ್ಲಿ ಆರಂಭವಾದ ಈ ಪತ್ರಿಕೆ ಕನ್ನಡ ನಾಡು, ನುಡಿಗೆ ಸಂಬಂಧಿಸಿ ಚರ್ಚಿಸಲು ಗಂಭೀರ ವೇದಿಕೆಯೊಂದನ್ನು ಕಲ್ಪಿಸಿತು. ಕನ್ನಡ ನವೋದಯ ಸಾಹಿತ್ಯ ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತು. ರಾಷ್ಟ್ರೀಯತ್ವದ ವಿಕಾಸ, ಕರ್ನಾಟಕತ್ವದ ಪ್ರಜ್ಞೆ, ಸ್ವದೇಶಿ ಪ್ರಜ್ಞೆಯನ್ನು ಜಾಗೃತಗೊಳಿಸುವುದು ಜಯಕರ್ನಾಟಕ ಪತ್ರಿಕೆಯ ಉದ್ದೇಶವಾಗಿತ್ತು. ನಾಡಿನ ಎಲ್ಲ ಕಡೆಯಿಂದಲೂ ಲೇಖಕರು ಜಯಕರ್ನಾಟಕ ಪತ್ರಿಕೆಗೆ ಬರೆಯುತ್ತಿದ್ದರು. ಇತಿಹಾಸಕ್ಕೆ ಸಂಬಂಧಿಸಿದ ಲೇಖನಗಳನ್ನು ಪ್ರಕಟಿಸುವುದಕ್ಕಾಗಿ ‘ಪ್ರಾಚೀನ ಕರ್ನಾಟಕ’ ಎಂಬ ಪತ್ರಿಕೆಯನ್ನು ಆರಂಭಿಸಿದರು.
ಗ್ರಂಥಪ್ರಕಟಣೆಯ ಸಲುವಾಗಿ ಕರ್ನಾಟಕ ಗ್ರಂಥ ಪ್ರಸಾರ ಮಂಡಲಿ, ನವಜೀವನ ಗ್ರಂಥ ಭಂಡಾರ, ಗೀತಾ ಕುಸುಮ ಮಂಜರಿ ಈ ಸಂಸ್ಥೆಗಳನ್ನು ಆರಂಭಿಸಿದರು. ಈ ಸಂಸ್ಥೆಗಳ ಮೂಲಕ ಆಲೂರರ ಸುಖವೂ ಶಾಂತಿಯೂ, ಶಿಕ್ಷಣ ಮೀಮಾಂಸೆ, ಭಗವದ್ಗೀತೆಗೆ ಸಂಬಂಧಿಸಿ ಕೃತಿಗಳು ಪ್ರಕಟವಾದವು. ಅಲ್ಲದೆ ಆದ್ಯ ರಂಗಾಚಾರ್ಯರ ಶಾರದೆಯ ಸಂಸಾರ, ಪಂಡಿತ ತಾರಾನಾಥರ ಧರ್ಮಸಂಭವ, ಹರ್ಡೇಕರ ಮಂಜಪ್ಪನವರ ಖಾದಿ ಶಾಸ್ತ್ರ ಕೃತಿಗಳನ್ನು ಪ್ರಕಟಿಸಿದ ಶ್ರೇಯಸ್ಸು ಆಲೂರರಿಗೆ ಸಲ್ಲುತ್ತದೆ. ಈ ಕೃತಿಗಳು ಆಯಾ ಲೇಖಕರ ಚೊಚ್ಚಲ ಕೃತಿಗಳು ಎಂಬುದು ಗಮನಿಸಬೇಕಾದ ಅಂಶವಾಗಿದೆ.
ಕರ್ನಾಟಕದ ಇತಿಹಾಸಕ್ಕೆ ಸಂಬಂಧಿಸಿ ಅಧಿಕೃತವಾದ ಯಾವುದೇ ಕೃತಿಗಳು ಇರಲಿಲ್ಲ. ಹೀಗಾಗಿ ಅಲೂರರು ಕರ್ನಾಟಕದ ಚಾರಿತ್ರಿಕ ಪ್ರದೇಶಗಳಿಗೆ ಭೇಟಿ ನೀಡಿ, ನೂರಾರು ಶಾಸನ, ತಾಮ್ರಪತ್ರಗಳನ್ನು ಅಧ್ಯಯನ ಮಾಡಿದ್ದರ ಪರಿಣಾಮವಾಗಿ, ಅವರಿಗೆ ಕರ್ನಾಟಕ ಚರಿತ್ರೆಯ ಬಗೆಗೆ ಅರಿವು ಮೂಡಿತು. ೧೯೧೪ರಲ್ಲಿ ಧಾರವಾಡದಲ್ಲಿ ಕರ್ನಾಟಕ ಇತಿಹಾಸ ಸಂಶೋಧನ ಮಂಡಲವನ್ನು ಸ್ಥಾಪಿಸಿ ಅದರ ಪ್ರಥಮ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದರು. ೧೯೧೭ರಲ್ಲಿ ‘ಕರ್ನಾಟಕ ಗತವೈಭವ’ ಗ್ರಂಥವನ್ನು ಪ್ರಕಟಿಸುವುದರ ಮೂಲಕ ಕನ್ನಡ ನಾಡಿನ ಬಗೆಗೆ ಹೊಸ ಎಚ್ಚರವನ್ನು ಮೂಡಿಸಿದರು. ಈ ಕೃತಿಯಲ್ಲಿ ಅವರ ಮನೋಧರ್ಮ ಸ್ಪಷ್ಟವಾಗಿ ವ್ಯಕ್ತವಾಗಿದೆ. “ನಾನು ಕನ್ನಡಿಗ. ಕರ್ನಾಟಕವು ನನ್ನದು ಎಂಬ ಸದ್ವಿಚಾರ ತರಂಗಗಳಿಂದ ಯಾವನ ಹೃದಯವು ಆತ್ಮಾನಂದದಿಂದ ಪುಳಕಿತಗೊಳ್ಳುವುದಿಲ್ಲವೋ, ಕನ್ನಡ ತಾಯಿಗೆ ಈಗ ಬಂದೊದಗಿರುವ ವಿಷಮ ಸ್ಥಿತಿಯಲ್ಲಿ ಯಾವಾತನ ಹೃದಯವು ತಲ್ಲಣಿಸುವುದಿಲ್ಲವೋ ಅದು ಹೃದಯವಲ್ಲ. ಕಲ್ಲಿನ ಬಂಡೆ. ದೇಹವಲ್ಲ. ಮೋಟುಮರ”. ಆಲೂರರ ಈ ಮಾತುಗಳು ಅವರು ಮುಂದೆ ಮಾಡಲಿರುವ ಕೆಲಸಗಳ ಮುನ್ನೋಟವನ್ನು ಒದಗಿಸುತ್ತದೆ. ಇಲ್ಲಿಂದ ಮುಮದೆ ಕನ್ನಡದ ಕೆಲಸಕ್ಕೆ ಟೊಂಕಕಟ್ಟಿ ನಿಂತರು. ಇಲ್ಲಿಂದ ಮುಂದ೩ಎ ಅವರು ಬರೆದಿರುವ ಕರ್ನಾಟಕ ವೀರರತ್ನಗಳು, ಕರ್ನಾಟಕತ್ವದ ಸೂತ್ರಗಳು, ಕರ್ನಾಟಕತ್ವದ ವಿಕಾಸ ಕೃತಿಗಳು ಕರ್ನಾಟಕತ್ವದ ಸಲುವಾಗಿಯೇ ಬರೆದ ಗ್ರಂಥಗಳಾಗಿವೆ.
೧೯೩೦ರಲ್ಲಿ ಮೈಸೂರಿನಲ್ಲಿ ನಡೆದ ೧೬ನೆಯ ಕರ್ನಾಟಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ತಿಲಕ್ ಅವರ ಗೀತಾರಹಸ್ಯವನ್ನು ಆಲೂರರು ಕನ್ನಡಕ್ಕೆ ಅನುವಾದಿಸಿದರು. ಇದರೊಂದಿಗೆ ಗೀತಾಪ್ರಕಾಶ, ಗೀತಾ ಪರಿಮಳ, ಗೀತಾ ಸಂದೇಶ ಕೃತಿಗಳನ್ನು ಪ್ರಕಟಿಸಿದರು.
೧೯೫೬ರಂದು ಕರ್ನಾಟಕದ ಏಕೀಕರಣವಾಗಿ ಕನ್ನಡ ನಾಡಿನ ಉದಯವಾದಾಗ ಆಲೂರರು ಮೈಸೂರು ರಾಜ್ಯ ಎಂಬುದರ ಬದಲು ಕರ್ನಾಟಕ ರಾಜ್ಯವೆಂದು ಕರೆದರು. ಕರ್ನಾಟಕದ ಏಕೀಕರಣವಾದರೆ ಸಾಲದು, ಸಾಂಸ್ಕೃತಿಕ ಏಕೀಕರಣವಾಗಬೇಕು ಎಂದು ಪ್ರತಿಪಾದಿಸಿದರು. ಆಲೂರರು ತಮ್ಮ ಕೃತಿಗಳಲ್ಲಿ ಕರ್ನಾಟಕತ್ವವನ್ನು ಪ್ರಕಟಿಸಿದಂತೆ ರಾಷ್ಟ್ರೀಯತ್ವವನ್ನು ಪ್ರತಿಪಾದಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ೧೯೨೮ರಲ್ಲಿ ಪ್ರಕಟಿಸಿದ ‘ರಾಷ್ಟ್ರೀಯ ಮೀಮಾಂಸೆ’ ಎಂಬ ಕೃತಿ ಮುಖ್ಯವಾಗುತ್ತದೆ.
ಸುಮಾರು ೩೦ಕ್ಕಿಂತ ಹೆಚ್ಚು ಕೃತಿಗಳನ್ನು ಬರೆದಿರುವ ಆಲೂರು ವೆಂಕಟರಾಯರು ‘ನನ್ನ ಜೀವನ ಸ್ಮೃತಿಗಳು’ (೧೯೪೧) ಎಂಬ ಆತ್ಮಚರಿತ್ರೆಯನ್ನು ಬರೆದಿದ್ದಾರೆ. ಇದು ಆಧುನಿಕ ಕರ್ನಾಟಕದ ಇತಿಹಾಸವೇ ಆಗಿದೆ. ೧೯೦೦ರಿಂದ ೧೯೪೦ರವರೆಗೆ ಉತ್ತರ ಕರ್ನಾಟಕದಲ್ಲಿ ನಡೆದ ಅನೇಕ ಮಹತ್ವದ ಸಂಗತಿಗಳಿಗೆ ಹಿಡಿದ ಕೈಗನ್ನಡಿಯಾಗಿದೆ.
ಇಂಗ್ಲೀಷ್, ಸಂಸ್ಕೃತ, ಕನ್ನಡ, ಮರಾಠಿ ಹೀಗೆ ಹಲವು ಭಾಷೆಗಳಲ್ಲಿ ಪಾಂಡಿತ್ಯವಿದ್ದ ಆಲೂರರು ೨೫.೦೨.೧೯೬೪ರಂದು ಆಲೂರು ವೆಂಕಟರಾಯರು ಧಾರವಾಡದಲ್ಲಿ ಇಹಲೋಕವನ್ನು ತ್ಯಜಿಸಿದರು. ೧೯೦೯ ರಿಂದ ೧೯೬೦ರವರೆಗೆ ನಿರಂತರವಾಗಿ ಬರೆದ ಆಲೂರು ವೆಂಕಟರಾಯರು ಕನ್ನಡದ ಗದ್ಯ ಶೈಲಿಯನ್ನು ರೂಪಿಸುವಲ್ಲಿ ನೀಡಿದ ಕೊಡುಗೆ ಗಣನೀಯವಾಗಿದೆ.
ಒಟ್ಟಿನಲ್ಲಿ ಕರ್ನಾಟಕತ್ವವೇ ಆಲೂರರ ಜೀವನದ ಮುಖ್ಯ ಉದ್ದೇಶ. ಸಮಗ್ರ ಕರ್ನಾಟಕ ಅವರ ದೃಷ್ಟಿ. ಅದಕ್ಕಾಗಿಯೇ ತಮ್ಮ ಬದುಕನ್ನು ಮೀಸಲಾಗಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಭಾಷೆ, ಸಾಹಿತ್ಯ, ಶಿಕ್ಷಣ, ಧರ್ಮ, ಪತ್ರಿಕೋದ್ಯಮ, ಇತಿಹಾಸಕ್ಕೆ ಆಲೂರ ವೆಂಕಟರಾವ್ ನೀಡಿದ ಕೊಡುಗೆ ಅಪೂರ್ವವಾಗಿದೆ. ಕನ್ನಡಿಗರು ಮರೆಯಲಾಗದ ವ್ಯಕ್ತಿ ಆಲೂರ ವೆಂಕಟರಾಯರು ಎಂದರೆ ಅತಿಶಯೋಕ್ತಿಯಲ್ಲ.