ರಾಷ್ಟ್ರೀಯ ಸ್ವಯಂಸೇವಕ ಸಂಘದ ಅವಧ್ ಪ್ರಾಂತ ಪ್ರಚಾರ ಪ್ರಮುಖ್ ಅಶೋಕ್ ಕುಮಾರ್ ದುಬೆ ಆರ್ ಎಸ್ ಎಸ್ ಕುರಿತಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದಕ್ಕಾಗಿ ಮೂರು ಪ್ರಮುಖ ಸುದ್ದಿ ಸಂಸ್ಥೆಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಅದರನ್ವಯ ದೈನಿಕ ಭಾಸ್ಕರ ಪತ್ರಿಕೆಯ ರಾಕೇಶ್ ಅಗರ್ವಾಲ್ ಮತ್ತು ರಮೇಶ್ ಮಿಶ್ರಾ, ಹರಿಭೂಮಿ ಪತ್ರಿಕೆಯ ಸಂಪಾದಕ ಹಾಗೂ ನ್ಯೂಸ್ 24 ರ ಪ್ರಧಾನ ಸಂಪಾದಕರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ದೈನಿಕ್ ಭಾಸ್ಕರ್, ಹರಿಭೂಮಿ ಮತ್ತು ನ್ಯೂಸ್ 24 ಸುದ್ದಿ ಮಾಧ್ಯಮಗಳು ಆರ್ ಎಸ್ ಎಸ್ ತನ್ನ ಎರಡನೇ ಮುಖ್ಯಕಚೇರಿಯನ್ನು ಅಯೋಧ್ಯೆಯ ನೂರು ಎಕರೆ ಜಾಗದಲ್ಲಿ ನಿರ್ಮಿಸಲಿದೆ ಹಾಗೂ ಈ ಕಚೇರಿ ನಾಗ್ಪುರದ ಕಚೇರಿಗಿಂತ ನೂರು ಪಟ್ಟು ವಿಸ್ತೀರ್ಣವಿರಲಿದೆ ಎಂದು ಇತ್ತೀಚೆಗೆ ಪ್ರಕಟಿಸಿತ್ತು.

ಹಾಗೆಯೇ 2025ರಲ್ಲಿ ತನ್ನ ಶತಮಾನೋತ್ಸವವನ್ನು ಆಚರಿಸಲು ಆರ್ ಎಸ್ ಎಸ್ ಸಿದ್ಧವಾಗುತ್ತಿದೆ. ಅದಕ್ಕೂ ಪೂರ್ವದಲ್ಲಿ ತನ್ನ ಎರಡನೇ ಮುಖ್ಯಕಚೇರಿಯನ್ನು ಅಯೋಧ್ಯೆಯಲ್ಲಿ ನಿರ್ಮಿಸಲು ಚಿಂತಿಸಿದೆ. ಈ ಕಾರಣಕ್ಕಾಗಿ ವಸತಿ ಅಭಿವೃದ್ಧಿ ಮಂಡಳಿ ನೂರು ಎಕರೆ ಪ್ರದೇಶವನ್ನು ನೀಡಲು ಮನವಿ ಮಾಡಿದೆ. ಈ ಪ್ರದೇಶವನ್ನು ನವ್ಯ ಅಯೋಧ್ಯಾ (ಗ್ರೀನ್ ಫೀಲ್ಡ್ ಶಿಪ್ ಪ್ರೋಗ್ರಾಂ) ಅಡಿಯಲ್ಲಿ ಆರ್ ಎಸ್ ಎಸ್ ಬಯಸಿದೆ ಎಂದೂ ಸುದ್ದಿ ಪ್ರಕಟಿಸಿದ್ದವು.

“ಇಲ್ಲಿ ಆರೋಪಿಸಲ್ಪಟ್ಟ ವ್ಯಕ್ತಿಗಳು ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮವನ್ನು ಬಳಸಿಕೊಂಡು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರನ್ನು ಹಾಳು ಮಾಡುವುದಕ್ಕೆ ಯತ್ನಿಸಿದ್ದಾರೆ. ದಿನಾಂಕ 14.02.2023 ರಂದು ದೈನಿಕ ಭಾಸ್ಕರ್ ತನ್ನ ವೆಬ್ ಸೈಟ್ ನಲ್ಲಿ ಅಯೋಧ್ಯೆಯಲ್ಲಿ 100 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಲಿರುವ ಆರ್ ಎಸ್ ಎಸ್ ಕಚೇರಿ, ನಾಗ್ಪುರದ ಪ್ರಧಾನ ಕಚೇರಿಯ ಜೊತೆಗೆ ಕಾರ್ಯ ನಿರ್ವಹಿಸುತ್ತದೆ ಎಂದು ಪ್ರಕಟಿಸಿತ್ತು. ಈ ಸುದ್ದಿಯನ್ನು ದೈನಿಕ ಭಾಸ್ಕರದ ಸ್ಥಳೀಯ ವರದಿಗಾರ ರಮೇಶ್ ಮಿಶ್ರಾ ರಚಿಸಿದ್ದರು. ಇದೇ ಸುದ್ದಿಯನ್ನು ಅದೇ ದಿನ ನ್ಯೂಸ್ 24 ಕೂಡ ಪ್ರಸಾರ ಮಾಡಿದೆ.

ಅದೇ ಸುದ್ದಿಯನ್ನು ದಿನಾಂಕ 15-02-2023 ರಂದು ಇತರೆ ಸುದ್ದಿ ಸಂಸ್ಥೆಗಳು ಪ್ರಕಟಿಸಿವೆ. ಹನ್ ಭೂಮಿ ನ್ಯೂಸ್, ಟಿವಿ 9, ಫೋಕಸ್ 24 ನ್ಯೂಸ್, ಪ್ರಕಾಶ್ ಟಿವಿ, ಸ್ಟಾರ್ ಸವೇರ ಚಾನೆಲ್, ಜೋಧನ ಅಬ್ತಕ್ ನ್ಯೂಸ್ ಜನಾದೇಶ್ ಟುಡೆ ಚಾನೆಲ್, ದಿ ಭಾರತ್ ನ್ಯೂಸ್, ಒಪಿ ಇಂಡಿಯಾ ನ್ಯೂಸ್, ಮ್ಹರಾ ಹರಿಯಾಣ ನ್ಯೂಸ್, ಪಂಜಾಬ್ ಕೇಸರಿ ಮತ್ತು ಇತರೆ ಸುದ್ದಿ ಸಂಸ್ಥೆಗಳು ಪ್ರಕಟಿಸಿವೆ. ಹರಡುತ್ತಿರುವ ನಕಲಿ ವರದಿಗಳ ಫೋಟೋಕಾಪಿಗಳು ಮತ್ತು ಪ್ರಿಂಟ್‌ಔಟ್‌ಗಳನ್ನು ನಿಮ್ಮ ಪರಿಶೀಲನೆ ಮತ್ತು ಕ್ರಮಕ್ಕಾಗಿ ಲಗತ್ತಿಸಲಾಗಿದೆ‌.

ಈ ರೀತಿಯಾದ ಸುಳ್ಳು ಸುದ್ದಿಗಳ ಪ್ರಸರಣ ಆರ್ ಎಸ್ ಎಸ್ ಪರಮ ವೈಭವದ ರಾಷ್ಟ್ರದ ನಿರ್ಮಾಣದ ತನ್ನ ಪಥವನ್ನು ಬಿಟ್ಟು ಈಗ ಅಯೋಧ್ಯೆಯಲ್ಲಿ 100-ಎಕರೆ ಭೂಮಿ ಸ್ಥಿರಾಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಮಾರ್ಗದಲ್ಲಿ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಕೆಲಸ ಮಾಡುತ್ತಿದೆ ಎಂಬ ತಪ್ಪು ಗ್ರಹಿಕೆಯನ್ನು ಓದುಗರಲ್ಲಿ ನಿರ್ಮಿಸಿ ಹಾದಿ ತಪ್ಪಿಸುತ್ತದೆ‌.

ವಾಸ್ತವದಲ್ಲಿ ಅಯೋಧ್ಯೆಯಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಾಕೇತ ನಿಲಯಂ ಎಂಬ ಆರ್ ಎಸ್ ಎಸ್ ಕಾರ್ಯಾಲಯ ಇದೆ. ಗೌರವಾನ್ವಿತ ಉಚ್ಚ ನ್ಯಾಯಾಲಯದ ತೀರ್ಪಿನ ನಂತರ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ನಿರ್ಮಾಣದಲ್ಲಿ ಸಹಯೋಗ ನೀಡುವುದು ಸ್ಪಷ್ಟ ಕಾರ್ಯಸೂಚಿಯಾಗಿದೆ.

ಪೂರ್ಣ ಸತ್ಯದ ಅರಿವಿದ್ದರೂ,ವಾಸ್ತವವನ್ನು ಮುಚ್ಚಿಡಲು ಆರಿಸಿಕೊಂಡು, ಪ್ರೇರಿತ ಹಿತಾಸಕ್ತಿಗಳ ಕಾರಣಕ್ಕಾಗಿ ಪ್ರಚಾರದ ತುಣುಕುಗಳನ್ನು ಬಳಸಿಕೊಂಡು ಆರ್ ಎಸ್ ಎಸ್ ನ ಸದ್ಭಾವನೆ, ಪ್ರತಿಷ್ಠೆ ಮತ್ತು ಸತ್ಯಕ್ಕೆ ಧಕ್ಕೆಯನ್ನುಂಟು ಮಾಡುತ್ತಿದೆ. ಸರಿಯಲ್ಲದ ಮತ್ತು ಕಳಂಕಿತ ಸುದ್ದಿಗಳನ್ನು ಬೇಜವಾಬ್ದಾರಿಯುತವಾಗಿ, ಅಜಾಗರೂಕತೆಯಿಂದ ಯಾವುದೇ ಮಟ್ಟದ ವಾಸ್ತವಿಕ ತನಿಖೆಯಿಲ್ಲದೆ ಮತ್ತು ಎಲ್ಲಾ ಪತ್ರಿಕೋದ್ಯಮದ ನೀತಿ ಮತ್ತು ತತ್ತ್ವಗಳನ್ನು ನಿರ್ಲಕ್ಷಿಸಿ
ಆರ್ ಎಸ್ ಎಸ್ ನ ಧರ್ಮನಿಷ್ಠ ಚಿತ್ರಣವನ್ನು ಹಾಳುಮಾಡಲು ಮುಂದಾಗಿವೆ ಎಂದು ಎಫ್ ಐ ಆರ್ ತಿಳಿಸುತ್ತದೆ.

ಸುಳ್ಳು ಸುದ್ದಿಯ ಕುರಿತು ಮಾತನಾಡಿದ ಅವಧ್ ಪಾಂತ್ರ ಪ್ರಚಾರ ಪ್ರಮುಖ್ ಡಾ. ಅಶೋಕ್ ಕುಮಾರ್ ದುಬೆ “ದೈನಿಕ್ ಭಾಸ್ಕರ್ ಮತ್ತು ಇತರೆ ಮಾಧ್ಯಮಗಳು ಅಯೋಧ್ಯೆ ಮತ್ತು ಸಂಘದ ಹೆಸರನ್ನು ಹಾಳು ಮಾಡುವುದಕ್ಕಾಗಿ ಉದ್ದೇಶ ಪೂರ್ವಕವಾಗಿಯೇ ಸುಳ್ಳು ಸುದ್ದಿಯನ್ನು ಹಬ್ಬಿಸಿವೆ. ವಾಸ್ತವವನ್ನು ಅರಿಯದೆ, ಸತ್ಯಾಂಶವನ್ನು ಪರಿಶೀಲಿಸದೆ, ಅಧಿಕೃತ ವ್ಯಕ್ತಿಯ ಹೆಸರನ್ನು ನಮೂದಿಸದೆ ಸಂಘದ ಕುರಿತಾಗಿ ಸುಳ್ಳು ಸುದ್ದಿಯನ್ನು ಹರಡಿ, ಜನರ ದಿಕ್ಕು ತಪ್ಪಿಸುವುದು ಹಲವು ಮಾಧ್ಯಮಗಳಿಗೆ ಟ್ರೆಂಡ್ ಆಗಿಬಿಟ್ಟಿದೆ. ಜನತೆ ಸಂವೇದನಾಶೀಲರಾಗುವಂತಹ ಆಧಾರವಿಲ್ಲದ ಸುದ್ದಿಗಳನ್ನು ನೀಡುವುದರ ಬದಲು ಸತ್ಯದ ಮೂಲಕ ಸಮಾಜವನ್ನು ಜಾಗೃತಗೊಳಿಸುವ ಜವಾಬ್ದಾರಿಯನ್ನು ಮಾಧ್ಯಮಗಳು ಸ್ವೀಕರಿಸಬೇಕಿದೆ” ಎಂದರು.

Leave a Reply

Your email address will not be published.

This site uses Akismet to reduce spam. Learn how your comment data is processed.