ಶಿವಮೊಗ್ಗ: ಭಾರತದಂತಹ ದೇಶದಲ್ಲಿ ಸಂವಿಧಾನ ಸಿದ್ಧಪಡಿಸಿದ ಮೊದಲ ದಿನದಿಂದಲೇ ಇಲ್ಲಿನ ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾಗಿದೆ. ಆದರೆ ಅಮೆರಿಕದಲ್ಲಿ ಬಲಶಾಲಿ ಸಂವಿಧಾನ ಇದ್ದರೂ 200 ವರ್ಷಗಳ ನಂತರ ಮತದಾನದ ಹಕ್ಕು ಸಿಕ್ಕಿತು ಎಂದು ಉಜಿರೆ ತಾಲೂಕು ಸಂಪರ್ಕ ಪ್ರಮುಖ್ ಶಿವಪ್ರಸಾದ್ ಸುರ್ಯ ಹೇಳಿದರು.

ವಿಕಾಸ ಟ್ರಸ್ಟ್ ಮತ್ತು ಮಧುಕೃಪಾ ಬಳಗದ ಸಹಯೋಗದಲ್ಲಿ ಆಯೋಜಿಸಲಾದ ಅಂಬೇಡ್ಕರ್ ಜಯಂತಿಯ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಮತ್ತು ರಾಷ್ಟ್ರೀಯತೆ – ರಾಮನ ನೆಲದ ಬಲ ಭೀಮ ಭಾಷ್ಯ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ನನ್ನ ಜನ ಪಾತಾಳದಲ್ಲಿ ಅಡಗಿದ್ದರು, ನೀರಿನಲ್ಲಿ ಮುಳುಗಿದ್ದರು, ಪರ್ವತದ ಬುಡದಲ್ಲಿ ಇದ್ದರು. ಅಂತಹವರಿಗೆ ಎದ್ದೇಳಿ ಎಂದು ಸ್ಪೂರ್ತಿ ಕೊಟ್ಟ ವ್ಯಕ್ತಿ ಅಂಬೇಡ್ಕರ್ ಎಂದು ಕವಿ ಸಿದ್ಧಲಿಂಗಯ್ಯ ಹೇಳುತ್ತಾರೆ. ಮಂದಿರಕ್ಕೆ ನುಗ್ಗಿ, ವಿಗ್ರಹ ಪುಡಿ ಮಾಡುವುದು ನಮ್ಮ ಕೆಲಸ ಅಲ್ಲ. ದೇಶದಲ್ಲಿ ಎಲ್ಲರಿಗೂ ಮಂದಿರ ಪ್ರವೇಶ ಮಾಡುವ ಅವಕಾಶ ಸಿಗಬೇಕು ಎನ್ನುವ ಚಿಂತನೆಯನ್ನು ಹೇಳಿದವರು ಅಂಬೇಡ್ಕರ್ ಎಂದು ನುಡಿದರು.

ಶಿಕ್ಷಣಕ್ಕೆ ಪ್ರಾಶಸ್ತ್ಯ, ಮಹತ್ವ ಕೊಡುತ್ತಾ ಬಂದಿದ್ದೇವೆ. ಶಿಕ್ಷಣದ ವ್ಯವಸ್ಥೆ ಇಂದು ಬಲಶಾಲಿಯಾಗಿದೆ. ಎಲ್ಲರಿಗೂ ಅವಕಾಶ ಸಿಗುತ್ತಿದೆ. ಆಗ ಎಲ್ಲರಿಗೂ ಶಿಕ್ಷಣ ಸಿಗುತ್ತಿರಲಿಲ್ಲ. ಸರ್ವರಿಗೂ ಶಿಕ್ಷಣ ಸಿಗಬೇಕು ಎಂಬುದನ್ನು ಸಂವಿಧಾನದಲ್ಲಿ ಜೋಡಿಸಿದವರು ಅಂಬೇಡ್ಕರ್ ಎಂದರು.

ಅಂಬೇಡ್ಕರ್ ರವರು ಒಂದು ಒಳ್ಳೆಯ ಉದ್ಯೋಗವನ್ನು ಪಡೆದು, ಮನೆಯನ್ನು ಕಟ್ಟಿ, ಗೋಡೆ ನಿರ್ಮಾಣ ಮಾಡಿ ಕುಳಿತುಕೊಳ್ಳಲಿಲ್ಲ.38 ಪದವಿಯನ್ನು ಪಡೆದು ಈ ದೇಶದ ವಿದ್ವಾಂಸರಾಗಿದ್ದರೂ ತಮ್ಮ ಕೆಲಸವನ್ನಷ್ಟೇ ನೋಡಿಕೊಳ್ಳಲಿಲ್ಲ. ಬದಲಾಗಿ ದೇಶ ಕಟ್ಟುವುದಕ್ಕೆ ಯೋಗದಾನ ನೀಡಿದರು ಎಂದು ನುಡಿದರು.

370 ಆರ್ಟಿಕಲ್ ಬಗ್ಗೆ ಅಂಬೇಡ್ಕರ್ ಅವರಿಗೆ ವಿರೋಧ ಇತ್ತು. ಅಂಬೇಡ್ಕರ್ ಮತ್ತು ಬಾಬು ರಾಜೇಂದ್ರ ಪ್ರಸಾದ್ ಚರ್ಚೆ ಮಾಡುತ್ತಾರೆ. ಒಂದು ದೇಶದಲ್ಲಿ ಎರಡು ವಿಧಾನ, ಎರಡು ಪ್ರಧಾನಮಂತ್ರಿಗಳು ಹೇಗೆ ಸಾಧ್ಯ ಎಂದು ಚಿಂತಿಸುತ್ತಾರೆ. ಆಗ ಜವಾಹರಲಾಲ್ ನೆಹರು ಅವರು ಅದರ ಅವಶ್ಯಕತೆ ಇದೆ ಎಂದು ಹೇಳಿದ್ದರು. ಅದು ಏತಕ್ಕಾಗಿ ಎಂದು ಹೇಳಲು ಅವರ ಹತ್ತಿರ ಯಾವುದೇ ಸಂಗತಿಗಳು ಇರಲಿಲ್ಲ. 370 ವಿಧಿಯನ್ನು ಕಡ್ಡಾಯವಾಗಿ ವಿರೋಧ ಮಾಡಿದವರು ಅಂಬೇಡ್ಕರ್ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಕಾಸ ಟ್ರಸ್ಟ್ ಅಧ್ಯಕ್ಷ ಹಾಗೂ ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಸಂಘಚಾಲಕ ಬಿ ಎ ರಂಗನಾಥ್ ಅವರು ವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ ನಡೆದ ರಕ್ತದಾನ ಶಿಬಿರದಲ್ಲಿ 95 ಜನ ರಕ್ತದಾನಿಗಳು ಭಾಗವಹಿಸಿ ರಕ್ತದಾನ ಮಾಡಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.