“ಆಂದೋಲನ ಜೀವಿ” ಗಳ ರಾಷ್ಟ್ರವಿರೋಧಿ ನಿಲುವನ್ನು ಅನಾವರಣಗೊಳಿಸಲು ಇದು ಸುಸಮಯ.
ಲೇಖಕರು : ಸಿಂಚನ.ಎಂ.ಕೆ, ಇಂಜಿನಿಯರಿಂಗ್ ವಿದ್ಯಾರ್ಥಿನಿ, ಸೋದರಿ ನಿವೇದಿತಾ ಪ್ರತಿಷ್ಠಾನ ಹಾಗೂ ಎಬಿವಿಪಿ ಸ್ವಯಂಸೇವಕರು
ಎಷ್ಟೊಂದು ವ್ಯವಸ್ಥಿತವಾಗಿ, ಯೋಜನೆಗಳನ್ನು ರೂಪಿಸಿ, ರೈತರ ಚಳುವಳಿಯ ಮುಖವಾಡ ಧರಿಸಿಕೊಂಡು ಬಲಿಷ್ಠವಾಗುತ್ತಿರುವ ಭಾರತದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡವನ್ನು ತಂದು ರಾಷ್ಟ್ರವನ್ನು ಒಡೆಯಬೇಕೆಂದು ಮಾಡಿದ್ದ ಷಡ್ಯಂತ್ರವೊಂದು ಬಯಲಾಗಿದೆ. ಯಾವ ಗ್ರೆಟಾ ಥನ್ಬರ್ಗ್ ಎಂಬ ಪರಿಸರವಾದಿ ಈ ಷಡ್ಯಂತ್ರದಲ್ಲಿ ಸ್ವತಃ ಭಾಗಿಯಾಗಿದ್ದಳೊ ಅವಳ ಚಿಕ್ಕ ತಪ್ಪಿನಿಂದಲೇ ಅದರ ಸಂಪೂರ್ಣ ಕಾರ್ಯದ ರೂಪು ರೇಷೆಯ ‘ಟೂಲ್ ಕಿಟ್’ ಟ್ವಿಟ್ಟರ್ ನ ಮೂಲಕ ಬೆಳಕಿಗೆ ಬಂದಿದೆ.
ಈ ಗ್ರೆಟಾ ಥನ್ಬರ್ಗ್, ರಿಹಾನಾ, ಮಿಯಾ ಖಲೀಫ ಎಂಬ ವಿದೇಶಿ ಸೆಲೆಬ್ರಿಟಿಗಳು ನಮ್ಮ ದೇಶದಲ್ಲಿ ನಡೆಯುತ್ತಿರುವ ರೈತರ ಚಳುವಳಿಯ ಬಗ್ಗೆ ಹೆಚ್ಚು ಅನುಕಂಪ ಹೊಂದಿ ಬೆಂಬಲ ಸೂಚಿಸಿ ಟ್ಟೀಟ್ ಮಾಡಿದ್ದರೊ ಅವರು ಸ್ವತಃ ತಮ್ಮ ದೇಶ ಅಮೆರಿಕಾದಲ್ಲಿ ವೈಟ್ ಹೌಸ್ ನ ಮೇಲೆ ದಾಳಿ ನಡೆದಾಗ ಹೀಗೆ ಗಟ್ಟಿಯಾಗಿ ನಿಂತು ಪ್ರಶ್ನಿಸಿದ್ದರೆ? ತಮ್ಮ ದೇಶದಲ್ಲಿ ಆಗು-ಹೋಗುಗಳ ಬಗ್ಗೆಯೇ ಹೆಚ್ಚು ಚಿಂತೆಯಿಲ್ಲದಿರುವ ಇವರು ತಮಗೆ ಸಂಬಂಧವೇ ಇಲ್ಲದ ಭಾರತದ ರೈತರ ಚಳುವಳಿಯ ಬಗ್ಗೆ ಏಕಿಷ್ಟು ಚಿಂತಿಸುತ್ತಿದ್ದಾರೆ? ಇದೆಲ್ಲಾ ಕಾಕತಾಳೀಯವೇ? ಎಂತಹ ಮೂರ್ಖರಿಗಾದರೂ ಇದರ ಹಿಂದಿನ ಷಡ್ಯಂತ್ರ ಅರ್ಥವಾಗುತ್ತದೆ. ಆದರೆ, ನಮ್ಮದೇ ದೇಶದ ಹಲವು ವಿಪಕ್ಷಗಳಿಗೆ, ಬುದ್ಧಿಜೀವಿಗಳಿಗೆ ಮಾತ್ರ ಅರ್ಥವಾಗಿಲ್ಲವೆಂಬುದೇ ವಿಪರ್ಯಾಸ. ಈ ಅಂತಾರಾಷ್ಟ್ರೀಯ ಹುನ್ನಾರ ಬೆಳಕಿಗೆ ಬಂದ ಮೇಲೆ ನಮ್ಮ ದೇಶದ ಹಲವಾರು ಸೆಲೆಬ್ರಿಟಿಗಳು ದೇಶದ ಏಕತೆಯ ಸಂದೇಶ ನೀಡಿ, ನಮ್ಮ ಆಂತರಿಕ ವಿಚಾರಗಳಿಗೆ ವಿದೇಶಿ ಶಕ್ತಿಗಳ ಹಸ್ತಕ್ಷೇಪ ಸಲ್ಲದು ಎಂದು ಗಟ್ಟಿ ಧ್ವನಿಯಲ್ಲಿ ಪ್ರತ್ಯುತ್ತರ ನೀಡಿದರು. ಇವರಿಗೆಲ್ಲಾ ನಾವು ಆಭಾರಿಯಾಗಿದ್ದೇವೆ. ಆದರೆ ಹೀಗೆ ದಿಟ್ಟ ಸಂದೇಶ ನೀಡಿದ ಅದರಲ್ಲೂ ಸಚಿನ್ ತೆಂಡೂಲ್ಕರ್ ಹಾಗೂ ಲತಾ ಮಂಗೇಶ್ಕರ್ ರಂತಹ ದಿಗ್ಗಜರನ್ನು ಕಾಂಗ್ರೆಸ್ ನವರು ಹಾಗೂ ತಥಾಕಥಿತ ಬುದ್ಧಿಜೀವಿಗಳು ಏಕೆ ಟ್ರೋಲ್ ಮಾಡಿ ಅವಮಾನ ಮಾಡಿದರು? ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರಕ್ಕೆ ಕೇರಳ ಕಾಂಗ್ರೆಸ್ ಯುವ ವಿಭಾಗದವರು ಕಪ್ಪು ಬಣ್ಣವನ್ನು ಸುರಿದು ವಿಕೃತಿ ಮೆರೆದದ್ದು ಮಾತ್ರ ದುರಾದೃಷ್ಟಕರ. ತಮ್ಮ ದೇಶದ ಬಗೆಗಿನ ಗೌರವ, ಅಭಿಮಾನದಿಂದ ಹಾಗೆ ಟ್ವೀಟ್ ಮಾಡಿದ್ದಕ್ಕೆ ಅವರು ಏನೋ ದೊಡ್ಡ ಅಪರಾಧ ಮಾಡಿರುವಂತೆ ಕೆಲವರು ಅವಮಾನ ಮಾಡಿದರು. ತಮ್ಮ ಕ್ಷೇತ್ರದ ಬಗ್ಗೆ ಮಾತ್ರ ಈ ಸೆಲೆಬ್ರಿಟಿಗಳು ಮಾತನಾಡಲಿ ಎಂಬ ತರ್ಕವನ್ನು ಮುಂದಿಡುವ ಬುದ್ಧಿಜೀವಿಗಳು ರಿಹಾನಾ, ಗ್ರೆಟಾ ಥನ್ಬರ್ಗ್ ಅವರು ಸೆಲೆಬ್ರಿಟಿಗಳಾಗಿದ್ದರೂ ಅವರ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಏಕೆ? ಇವರೆಲ್ಲಾ ಒಂದು ಬಗೆಯ ಸೆಲೆಬ್ರಿಟಿಗಳಾದರೆ, ಮತ್ತೊಂದು ಬಗೆಯ ಸೆಲೆಬ್ರಿಟಿಗಳಿದ್ದಾರೆ. ಇವರು ರಿಹಾನಾ, ಗ್ರೆಟಾರವರ ಟ್ಟೀಟ್ ಗಳನ್ನು ರೀಟ್ಟೀಟ್ ಮಾಡುತ್ತಾರೆ, ಸಮರ್ಥಿಸಿಕೊಳ್ಳುತ್ತಾರೆ ಮತ್ತು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದಿಲ್ ಜಿತ್ ದೊಸಂಝ್ ನಂತಹವರು ಅವರಿಗಾಗಿ ಒಂದು ಆಲ್ಬಮ್ ಹಾಡನ್ನೇ ಮಾಡಿ ಧನ್ಯವಾದ ಅರ್ಪಿಸುತ್ತಾರೆ. ಈ ರೀತಿ ನೇರವಾಗಿ, ಹೆಮ್ಮೆಯಿಂದ ರಾಷ್ಟ್ರವಿರೋಧಿ ನಿಲುವನ್ನು ಬೆಂಬಲಿಸುತ್ತಿರುವ ಈ ಸೆಲೆಬ್ರಿಟಿಗಳಿಗೆ ಒಂದು ಕಹಿಯಾದ ಪ್ರಶ್ನೆಯನ್ನು ಕೇಳಲೇ ಬೇಕಿದೆ. ಈ ಭಾರತವು ನಿಮ್ಮ ಕಲೆಯನ್ನು ಗೌರವಿಸಿ ನಿಮಗೆ ಪ್ರಖ್ಯಾತ ಜೀವನವನ್ನೇ ನಿರ್ಮಿಸಿ ಕೊಟ್ಟಿದೆ. ಅಂತಹ ಭಾರತಕ್ಕೆ ನೀವು ಸಲ್ಲಿಸುವ ಕೃತಜ್ಞತೆ ಇದೇನಾ!?
ಒಂದು ದೇಶದ ಆಂತರಿಕ ವಿಚಾರಗಳಿಗೆ ಮತ್ತೊಂದು ದೇಶ ಏಕೆ ತಲೆ ಹಾಕಬಾರದು? ಇತಿಹಾಸ ನೆನಪಿದೆ ತಾನೆ. ಘಜ್ನಿ, ಘೋರಿಯಂತಹ ಇಸ್ಲಾಂ ಆಕ್ರಮಣಕಾರರಿಂದ ಪ್ರಾರಂಭವಾದ ಭಾರತ ಭೂಮಿಯ ಮೇಲಿನ ಆಕ್ರಮಣವು ಹೆಚ್ಚು ಕಡಿಮೆ ಸಾವಿರ ವರ್ಷಗಳ ನಂತರ ಬ್ರಿಟಿಷರಿಂದ ಕೊನೆಗೊಂಡು ಬಲಿದಾನಗಳ ಆಸ್ತಿ ಎಂಬಂತೆ ನಮಗೆ ಸ್ವಾತಂತ್ರ್ಯ ದೊರೆತಿದೆ. ಅಂದು ವಿದೇಶಿಗರಿಗೆ ಸಹಾಯ ಮಾಡಿ ತಮ್ಮ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿ ಕೊಳ್ಳಲು ತಾಯ್ನಾಡಿಗೆ ದ್ರೋಹ ಬಗೆದಂತೆ ಇಂದಿಗೂ ಕೂಡ ಕೆಲವರು ನಮ್ಮ ದೇಶಕ್ಕೆ ದ್ರೋಹವೆಸಗುತ್ತಿದ್ದಾರೆ. ಈಗ ಮತ್ತೆ ನಾವು ಭೂತಕಾಲದಲ್ಲಿ ಅತಿ ಸಜ್ಜನಿಕೆಯಿಂದ ಮಾಡಿದ ತಪ್ಪನ್ನೇ ಮತ್ತೆ ಮಾಡಬೇಕೆ? ವಿದೇಶಿ ಸೆಲೆಬ್ರಿಟಿಗಳ ಪರ ಬ್ಯಾಟಿಂಗ್ ಮಾಡುತ್ತಿರುವ ಬುದ್ಧಿಜೀವಿಗಳಿಗೆ ಈ ಇತಿಹಾಸ ತಿಳಿದಿಲ್ಲವೆ ಅಥವಾ ತಿಳಿದಿದ್ದು ತಿಳಿಯದ ಹಾಗೆ ನಟಿಸುತ್ತಿದ್ದಾರೆಯೆ? ಹೀಗೆ ಈ ದೇಶವಿರೋಧಿ ಕೃತ್ಯವನ್ನು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಬೆಂಬಲಿಸುತ್ತಿರುವವರಿಗೆ ಯಾವುದೇ ಕಠಿಣ ಶಿಕ್ಷೆಗಳು ಆಗುತ್ತಿಲ್ಲ. ಇದನ್ನು ಹೀಗೇ ಮುಂದುವರಿಯಲು ಬಿಟ್ಟರೆ ಭವಿಷ್ಯದಲ್ಲಿ ಸತ್ಯ-ಧರ್ಮದ ಬಲಶಾಲಿ ಸಮಾಜ ನಿರ್ಮಾಣವಾಗುವುದರ ಬದಲಾಗಿ ದುರ್ಬಲ ಸಮಾಜ ನಿರ್ಮಾಣವಾಗಬಹುದು. ಈ ರಾಷ್ಟ್ರವಿರೋಧಿಗಳ ಧ್ವನಿ ಇಷ್ಟೊಂದು ಜೋರಾಗಲು ನಾವೇಕೆ ಬಿಡುತ್ತಿದ್ದೇವೆ? ಇವರ ಬ್ಲ್ಯಾಕ್ಮೇಲ್ ತಂತ್ರಗಾರಿಕೆಗೆ ಇಂದು ನಾವು ಸಮರ್ಪಕ ಉತ್ತರ ನೀಡಬೇಕಿದೆ. ಇಷ್ಟೆಲ್ಲಾ ಘಟನೆಗಳು ನಡೆದ ಮೇಲೂ, ರಾಷ್ಟ್ರಧ್ವಜಕ್ಕೇ ಅಗೌರವ ನೀಡಿ ಕೆಂಪುಕೋಟೆಯ ಮೇಲೆ ದೊಡ್ಡ ಮಟ್ಟದಲ್ಲಿ ದಾಳಿ ಮಾಡಿದ ಮೇಲೂ ನಮ್ಮ ಪ್ರಧಾನಮಂತ್ರಿ ಎಷ್ಟು ತಾಳ್ಮೆಯಿಂದ ಸೌಜನ್ಯದಿಂದ ನಡೆದುಕೊಳ್ಳುತ್ತಿದ್ದಾರೆ. ಹೀಗಿದ್ದಾಗ್ಯೂ ಮೋದಿಯವರ ಮೇಲೆ ನಿರಂಕುಶ ಆಡಳಿತ ಎಂದೆಲ್ಲಾ ಸುಳ್ಳು ಆರೋಪಗಳನ್ನು ಮಾಡುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆದ ಕೆನಡಾದಲ್ಲಿ ನಡೆದ ಖಾಲಿಸ್ಥಾನ ಕುರಿತ ಭಾಷಣವೊಂದರಲ್ಲಿ ಮೋನಮಿಂದರ್ ಸಿಂಗ್ ಎಂಬಾತನು “ಕೃಷಿ ಕಾನೂನುಗಳನ್ನು ಸರ್ಕಾರ ಹಿಂಪಡೆದರೂ ಈ ಹೋರಾಟ ನಿಲ್ಲುವುದಿಲ್ಲ. ಈ ಹೋರಾಟವಿರುವುದು ಪ್ರತ್ಯೇಕ ಖಾಲಿಸ್ಥಾನ್ ಗಾಗಿ” ಎಂದು ನೇರವಾಗಿ ಸಾರಿದ್ದಾನೆ.
ಹೀಗೆ ಕೆನಡಾದಂತೆ ಹಲವು ವಿದೇಶಿ ಶಕ್ತಿಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸಿರುವುದರಿಂದ ಒಂದಂತೂ ಸ್ಪಷ್ಟವಾಗಿದೆ. ಈ ಹೋರಾಟ ಕೃಷಿ ಕಾನೂನುಗಳ ವಿರುದ್ಧವಲ್ಲ. ಕೇಂದ್ರ ಸರ್ಕಾರ ಈ ಕಾನೂನುಗಳನ್ನು ಹಿಂತೆಗೆದು ಕೊಂಡರೂ ಇದು ನಿಲ್ಲುವ ಹೋರಾಟವಲ್ಲ. ಕೃಷಿ ಕಾನೂನಿನ ನಂತರ ಸಿಎಎ, ನಂತರ ಬಂಧಿತ ಹೋರಾಟಗಾರರ ಬಿಡುಗಡೆಗೆ ಆಗ್ರಹ, ನಂತರ ಪ್ರತ್ಯೇಕ ಖಾಲಿಸ್ಥಾನ ಆಗ್ರಹ ಹೀಗೆ ಮೋದಿ ಸರ್ಕಾರವನ್ನು ಕೆಳಗಿಳಿಸಬೇಕೆಂಬುದೇ ಇದರ ಹಿಂದಿರುವ ಮುಖ್ಯ ಉದ್ದೇಶವೆಂಬುದು ಸ್ಪಷ್ಟವಾಗುತ್ತಿದೆ. ಚುನಾಯಿತರಾಗಿರುವ ಪ್ರತಿನಿಧಿಗಳ ವಿರುದ್ಧ ಚುನಾಯಿತರಾಗದೆ ಪ್ರಜೆಗಳಿಂದ ಧಿಕ್ಕರಿಸಲ್ಪಟ್ಟವರಿಗೆ ತಮ್ಮ ವಿಚಾರಧಾರೆಯ ಅಸ್ತಿತ್ವಕ್ಕೇ ಚ್ಯುತಿ ಬಂದಿರುವುದರಿಂದ ಅಂತಿಮ ಪ್ರಯತ್ನವಾಗಿ ವಿದೇಶಿ ಶಕ್ತಿಗಳ ಸಹಾಯದಿಂದ, ದೇಶದ ಹಿತಾಸಕ್ತಿಯ ಬಗ್ಗೆಯೂ ಚಿಂತಿಸದೆ ಮಾಡುತ್ತಿರುವ ಹೋರಾಟವಿದು. ಮೋದಿ ಸರ್ಕಾರವು ಹೀಗೆ ಭದ್ರವಾಗಿ ನೆಲೆ ಸ್ಥಾಪಿಸಿಕೊಂಡುಬಿಟ್ಟರೆ, ತಾವು ಮತ್ತೆಂದೂ ಮುಂಚೂಣಿಗೆ ಬರಲು ಸಾಧ್ಯವಿಲ್ಲವೆಂಬ ಭಯದಿಂದ ಅವರೆಲ್ಲಾ ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇನ್ನು ವಿದೇಶಿ ಶಕ್ತಿಗಳು, ಮೋದಿ ಸರ್ಕಾರವು ಪ್ರಪಂಚದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿದ್ದು ಕೊರೊನಾ ಸಂಕಷ್ಟದ ಕಾಲದಲ್ಲೂ ಬೇರೆಲ್ಲಾ ದೇಶಗಳಿಗಿಂತ ಅಧಿಕವಾಗಿ ಪ್ರಜೆಗಳ ವಿಶ್ವಾಸವನ್ನು ಉಳಿಸಿಕೊಂಡಿರುವುದು ವಿದೇಶಿ ಸಮೀಕ್ಷೆಗಳಲ್ಲೇ ವ್ಯಕ್ತವಾಗಿ ಅವರ ನಿದ್ದೆಗೆಡಿಸಿದೆ. ಭಾರತದ ಪ್ರಧಾನಿ ಜಗತ್ತಿನಲ್ಲೇ ಅತಿ ಹೆಚ್ಚು ಪ್ರಭಾವಿ ನಾಯಕರಾಗಿ ಹೊರಹೊಮ್ಮುತ್ತಿರುವುದು ಪ್ರಪಂಚದ ದಿಕ್ಕೇ ಬದಲಾಗುವ ಸೂಚನೆಯನ್ನಂತೂ ನೀಡಿದೆ. ಇದರಿಂದ ಭವಿಷ್ಯದಲ್ಲಿ ಪಾಶ್ಚಿಮಾತ್ಯ ಚಿಂತನೆಗಳ ಪ್ರಭಾವ ಕಡಿಮೆಯಾಗಬಹುದಾದ ಹಾಗೂ ಭಾರತೀಯ ಧರ್ಮ ಸಂಸ್ಕೃತಿಯ ಚಿಂತನೆಗಳು ವಿಶ್ವವನ್ನು ಗೆಲ್ಲಬಹುದಾದ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿ ಗೋಚರವಾಗುತ್ತಿರುವುದರಿಂದ ಇಷ್ಟು ದೊಡ್ಡ ಮಟ್ಟದಲ್ಲಿ ಅಂತಾರಾಷ್ಟ್ರೀಯ ಷಡ್ಯಂತ್ರವನ್ನು ಹೆಣೆಯಲಾಗಿದೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.
ಅಮೆರಿಕಾ ಸರ್ಕಾರವೇ ಭಾರತದ ಕೃಷಿ ಕಾನೂನುಗಳು ರೈತರ ಜೀವನದಲ್ಲಿ ಉತ್ತಮ ಸುಧಾರಣೆಯನ್ನು ತರುವುದು ಎಂದು ಹೇಳಿಕೆ ನೀಡಿದ್ದರೂ, ಇಷ್ಟು ದೊಡ್ಡ ಮಟ್ಟದಲ್ಲಿ ವಿದೇಶಿ ಸೆಲೆಬ್ರಿಟಿಗಳಿಂದಲೇ ಅವರ ಷಡ್ಯಂತ್ರ ಜಗಜ್ಜಾಹೀರಾಗಿದ್ದರೂ ಆ ಸೆಲೆಬ್ರಿಟಿಗಳು ಮಾತ್ರ ಈಗಲೂ ರೈತರ ಚಳುವಳಿಯ ಪರವಾಗಿ ನಿಲ್ಲುತ್ತೇವೆ, ಎಷ್ಟೇ ದ್ವೇಷ-ಬೆದರಿಕೆಗಳು ನಮ್ಮ ನಿಲುವನ್ನು ಬದಲಿಸಲಾಗುವುದಿಲ್ಲ ಎಂದು ಧೈರ್ಯವಾಗಿ ಹೇಳಿಕೆ ಕೊಡುತ್ತಾರೆಂದರೆ ಇದರ ಹಿಂದೆ ಯಾವುದೋ ದೊಡ್ಡ ದೊಡ್ಡ ಆರ್ಥಿಕ ಶಕ್ತಿ ಕೆಲಸ ಮಾಡುತ್ತಿದೆ ಎಂಬುದು ಪ್ರಮಾಣಿತವಾಗುತ್ತದೆ. ಈ ಆರ್ಥಿಕ ಶಕ್ತಿಗಳ ಬಗ್ಗೆ ಸವಿವರವಾಗಿ ಸಾಕ್ಷ್ಯಾಧಾರಗಳೊಂದಿಗೆ ‘String’ ಎಂಬ ಯೂಟ್ಯೂಬ್ ಚಾನೆಲ್ ಪ್ರಸ್ತುತ ಪಡಿಸಿರುವುದನ್ನು ನೋಡಿ ಇದರ ಬಗ್ಗೆ ಮತ್ತಷ್ಟು ವಿವರಗಳನ್ನು ಕಾಣಬಹುದು. ಅಮೆರಿಕಾ ದೇಶದ ಹಿಪೋಕ್ರೆಸಿ ಹೇಗಿದೆಯೆಂದರೆ ಕೃಷಿ ಕಾನೂನುಗಳನ್ನು ಸಮರ್ಥಿಸಿಕೊಳ್ಳುವುದರೊಂದಿಗೆ ಹೋರಾಟದ ಕ್ಷೇತ್ರಗಳಲ್ಲಿ ಇಂಟರ್ನೆಟ್ ಸೌಲಭ್ಯವನ್ನು ಕಡಿತಗೊಳಿಸಿರುವುದರ ವಿರುದ್ಧ ಮಾತನಾಡಿ, ಹಾಗೆ ಮಾಡಬಾರದೆಂದು ಭಾರತಕ್ಕೆ ಲೆಕ್ಚರ್ ಕೂಡ ಮಾಡಿದೆ. ಭಾರತದ ಕೆಂಪು ಕೋಟೆಯ ಮೇಲೆ ಬೃಹತ್ ದಾಳಿಯಾದರೂ ಕೂಡ ಒಬ್ಬನೇ ಒಬ್ಬ ಹೋರಾಟಗಾರನೂ ಕೂಡ ಪೋಲೀಸರ ಗುಂಡೇಟಿನಿಂದ ಸಾವನ್ನಪ್ಪಿಲ್ಲ. ಬದಲಾಗಿ 300-400 ಮಂದಿ ಪೋಲೀಸರ ಸ್ಥಿತಿಯೇ ಗಂಭೀರವಾಗಿದೆ. ಆದರೆ ಅಮೆರಿಕಾದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ 5 ಮಂದಿ ಹೋರಾಟಗಾರರು ಪೋಲೀಸರ ಗುಂಡೇಟಿಗೆ ಬಲಿಯಾದರು. ಈಗ ನಡೆದ ಚುನಾವಣೆಯಲ್ಲಿ ಅಮೆರಿಕದ ಪ್ರಜಾಪ್ರಭುತ್ವ ಎಷ್ಟು ಅಸ್ತವ್ಯಸ್ತಗೊಂಡಿದೆ ಎಂಬುದನ್ನು ಪ್ರಪಂಚ ನೋಡಿದೆ. ಇನ್ನು ಮುಂದೆಯಾದರೂ ಸುಮ್ಮನಿರುತ್ತಾರೆಂದುಕೊಂಡರೆ, ಇಲ್ಲ. ಮತ್ತೆ ತಾವು ಪ್ರಜಾಪ್ರಭುತ್ವದ ಬಗ್ಗೆ ಲೆಕ್ಚರಿಂಗ್ ನೀಡಲು ಆರಂಭಿಸಿದ್ದಾರೆ. ಇದುವರೆಗೂ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅಧಿಕಾರ ಹಸ್ತಾಂತರದ ವೇಳೆ ಹಿಂಸಾಚಾರವಾಗಿಲ್ಲ. ಮತ ಎಣಿಕೆಯಲ್ಲಿ ತಪ್ಪಾಗಿಲ್ಲ. ಅಂತಹ ಪ್ರಜಾಪ್ರಭುತ್ವವನ್ನು ಹೊಂದಿರುವ ನಮಗೆ ಭೋದಿಸುತ್ತಾರೆ. ಬೈಬಲ್ ಮೇಲೆ ಕೈ ಇಟ್ಟು ಅಮೆರಿಕಾ ಅಧ್ಯಕ್ಷರು ಪ್ರಮಾಣವಚನ ಮಾಡುತ್ತಾರೆ. ಆದರೆ ಬೇರೆ ದೇಶಗಳಿಗೆಲ್ಲಾ ಸೆಕ್ಯುಲರಿಸಂನ ಬೋಧನೆ ಮಾಡುತ್ತಾರೆ. ವಾಸ್ತವದಲ್ಲಿ ಭಾರತವನ್ನು ನೋಡಿ ಅಮೆರಿಕಾದಂತಹ ರಾಷ್ಟ್ರಗಳು ಕಲಿಯಬೇಕಿದೆ.
‘ಪ್ರಪಂಚದಲ್ಲೇ ಅತಿ ದೊಡ್ಡ ಮಾನವ ಹೋರಾಟದಲ್ಲಿ ನೀವು ಪಾಲ್ಗೊಳ್ಳುವಿರಾ?’ ಎಂಬ ನೇರ ಹೇಳಿಕೆಯಿಂದ ಆರಂಭವಾಗುವ ಷಡ್ಯಂತ್ರದ ಕಡತಗಳು ಯಾವ ಸೆಲೆಬ್ರಿಟಿಗಳು ಯಾವ ಸಮಯದಲ್ಲಿ ಟ್ಟೀಟ್ ಮಾಡುತ್ತಾರೆ? ನೀವು ಇದರ ಬಗ್ಗೆ ಟ್ಟೀಟ್ ಮಾಡಿ ಯಾರನ್ನೆಲ್ಲಾ ಟ್ಯಾಗ್ ಮಾಡಬೇಕು? ಯೋಗಾ, ಚಹಾ ಎಂಬ ಭಾರತದ ಪ್ರತಿಷ್ಠೆಯನ್ನು ಹಾಳು ಮಾಡುಬೇಕು ಎಂದು ಹೇಳದ್ದಾರೆ. ಈ ಪದಗಳನ್ನು ಪ್ರಧಾನಿಯವರಿಗೆ ಅಥವಾ ಮತ್ತ್ಯಾವುದೇ ಪ್ರಭಾವಿ ಕೇಂದ್ರೀಯ ನಾಯಕರಿಗೆ ಕೋಡ್ ವರ್ಡ್ ಆಗಿ ಬಳಸಿದ್ದಾರಾ ಎಂಬ ಆತಂಕದ ಚರ್ಚೆಗಳು ಹುಟ್ಟುಕೊಂಡಿವೆ. 26ರ ಜನವರಿಯ ಸಂಪೂರ್ಣ ಕೊರಿಯಾಗ್ರಫಿ ತಯಾರು ಮಾಡಿ, ಹೇಗೆ ಭಾರತದ ಅಭಿವೃದ್ಧಿಗೆ ಮುಖ್ಯ ಕಾರಣವಾಗಿರುವ ದೊಡ್ಡ ದೊಡ್ಡ ಉದ್ಯೋಗಪತಿಗಳಾದ ಅಂಬಾನಿ-ಅಡಾಣಿಯವರ ಸಂಸ್ಥೆಯ ಮುಂದೆ ಹೋರಾಟ ಮಾಡಬೇಕು? ಹೇಗೆ ನೀವು ಖಾಲಿಸ್ಥಾನಿಯಾಗಿದ್ದರೂ, ಖಾಲಿಸ್ಥಾನಿಯಲ್ಲವೆಂಬಂತೆ ವರ್ತಿಸಬೇಕು? ಒಟ್ಟಾರೆ ಹೇಳುವುದಾದರೆ ಭಾರತದ ಘನತೆಗೆ ಹೇಗೆ ಕಳಂಕ ತರಬೇಕು? ಎಂಬ ಅಂಶಗಳನ್ನೆಲ್ಲಾ ವ್ಯವಸ್ಥಿತವಾಗಿ ಒಳಗೊಂಡಿದೆ.
ರಾಷ್ಟ್ರವಿರೋಧಿಗಳಿಗೆ ಭಾರತವೇಕೆ ನೆಮ್ಮದಿಯ ಸ್ಥಳವಾಗಿ ಕಾಣುತ್ತದೆ? ಇವರಿಗೆಲ್ಲಾ ಏಕೆ ಕಠಿಣ ಶಿಕ್ಷೆಗಳಾಗುತ್ತಿಲ್ಲ? ಎಂಬುದರ ಕುರಿತು ಗಂಭೀರ ಚರ್ಚೆ ಮಾಡಬೇಕಾದ ಕಾಲ ಬಂದೊದಗಿದೆ. ಆದರೆ ಇದಕ್ಕೆ ವ್ಯತಿರಿಕ್ತವೆಂಬಂತೆ ರಾಷ್ಟ್ರ ಸರ್ವೋಪರಿ ಧೋರಣೆಯನ್ನು ಅನುಸರಿಸಿ ಸತ್ಯದ ಪರವಾಗಿ ಧ್ವನಿಯೆತ್ತಿ ಮಹಾರಾಷ್ಟ್ರ ಸರ್ಕಾರವನ್ನು ಎದುರು ಹಾಕಿ ಕೊಂಡದ್ದಕ್ಕೆ ಅರ್ನಬ್ ಗೋಸ್ವಾಮಿ ಎಂಬ ಸುದ್ದಿ ವಾಹಿನಿಯ ಮುಖ್ಯಸ್ಥರ ಮೇಲೆ ಸುಳ್ಳು ಆರೋಪದ ಮೇರೆಗೆ ಜೈಲಿಗೆ ಕಳುಹಿಸಿದ್ದರು ಎಂಬುದನ್ನು ನೋಡಿದೆವು. ಹಾಗೆಯೇ ನಟಿ ಕಂಗನಾ ಅವರು ರಾಷ್ಟ್ರವಾದದ ಧೋರಣೆ ಹೊಂದಿರುವುದಕ್ಕೆ ಅವರ ಹಲವಾರು ಹೇಳಿಕೆಗಳ ಮೇಲೂ ಕೇಸ್ ದಾಖಲಿಸಲಾಗುತ್ತಿದೆ, ಅವರ ಕಛೇರಿಯ ಮೇಲೆ ಆಕ್ರಮಣ ಮಾಡಲಾಗಿದೆ ಎಂಬುದನ್ನು ಕಂಡೆವು. ಟ್ರೂ ಇಂಡಾಲಜಿಯಂತಹ ಅಕೌಂಟ್ ಗಳನ್ನು ಭಾರತೀಯ ಹಿಂದೂ ಸಂಸ್ಕೃತಿಯ ಪರವಾಗಿ ಧ್ವನಿಯೆತ್ತಿದ್ದಕ್ಕೆ ಟ್ವಿಟ್ಟರ್ ನಲ್ಲಿ ಅಮಾನತು ಮಾಡಿದ್ದನ್ನೂ ನೋಡಿದೆವು.
ಇನ್ನು ಈ ಪ್ರಕ್ರಿಯೆ ಹೀಗೆ ಮುಂದುವರಿಯಬಾರದೆಂದರೆ ಇಂತಹ ದೇಶವಿರೋಧಿಗಳನ್ನು ಅವರ ಕಾರ್ಯಗಳ ಮುಖವಾಡವನ್ನು ಕಳಚಿ ವಿಶ್ವಕ್ಕೆ ಅನಾವರಣ ಮಾಡಬೇಕಿದೆ. ಅಂತಹ ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಯಾವುದೇ ರಾಜಕಾರಣಿಗಳು, ಸೆಲೆಬ್ರಿಟಿಗಳು, ಅಧಿಕಾರಿಗಳು, ಸಾಮಾಜಿಕ ಜಾಲತಾಣಗಳಿಗೂ ಬೆಂಬಲ ನೀಡುವುದಿಲ್ಲವೆಂಬ ಸಂಕಲ್ಪವನ್ನು ಮಾಡಬೇಕಾಗಿದೆ. ಅಂತಹವರ ರಾಜಕೀಯ ಪಕ್ಷಗಳಿಗೆ ಮತ ಹಾಕಬಾರದು. ಅಂತಹವರ ಚಿತ್ರಗಳನ್ನು ವೀಕ್ಷಿಸಬಾರದು. ಅಂತಹವರ ಪ್ರಾಯೋಜಿತದಲ್ಲಿ ಬರುವ ವಸ್ತುಗಳನ್ನು ಕೊಂಡುಕೊಳ್ಳಬಾರದು. ಅಂತಹವರ ಕಾರ್ಯಗಳಿಗೆ ವೇದಿಕೆ ನೀಡುವ ಟ್ಟಿಟ್ಟರ್ ನಂತಹ ಸಾಮಾಜಿಕ ಜಾಲತಾಣವನ್ನು ಟಿಕ್ ಟಾಕ್ ವಿರುದ್ಧ ಒಂದಾಗಿ ಬ್ಯಾನ್ ಮಾಡಿದಂತೆ ಮಾಡಬೇಕಾಗಿದೆ. ಭಾರತದ ಆತ್ಮನಿರ್ಭರತೆಯ ಹಾದಿಯಲ್ಲಿ ಮುಳ್ಳಾಗಿರುವ ರಾಷ್ಟ್ರವಿರೋಧಿ ಪ್ರೊಪಗ್ಯಾಂಡವನ್ನು ಕಿತ್ತೆಸೆಟುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಕೊನೆಯದಾಗಿ ಒಂದು ಮಾತು, ಎಷ್ಟೋ ಜನ ಅದರಲ್ಲೂ ಯುವಜನಾಂಗದವರು ಪಾಶ್ಚಿಮಾತ್ಯ ಪ್ರಭಾವದಿಂದಲೋ ಮತ್ತ್ಯಾವುದರ ಪ್ರಭಾವದಿಂದಲೋ ತಮ್ಮ ದೇಶದ ಬಗ್ಗೆಯೇ ಅಭಿಮಾನ ಹೊಂದಿಲ್ಲದಂತವರಾಗಿದ್ದಾರೆ. ಬೌದ್ಧಿಕ ಆಕ್ರಮಣಕ್ಕೆ ಬಲಿಯಾದ ಇಂತಹವರೇ ರಾಷ್ಟ್ರವಿರೋಧಿಗಳ ಗುರಿಯಾಗಿರುತ್ತಾರೆ. ಇಂತಹವರಿಗೆ ಸರಿಯಾದ ಮಾರ್ಗದರ್ಶನ ನೀಡುವುದು, ಅವರನ್ನು ದೇಶಪ್ರೇಮಿಗಳನ್ನಾಗಿಸುವುದೂ ಕೂಡ ನಮ್ಮ ಜವಾಬ್ದಾರಿ ಎಂದು ನಾವು ನಮ್ಮ ಧರ್ಮ, ಸಂಸ್ಕೃತಿ, ನಾಡಿನ ಶ್ರೇಷ್ಠತೆಯ ಬಗ್ಗೆ ಅರಿತುಕೊಳ್ಳುವೆವೋ ಅಂದಿನಿಂದ ನಾವು ನಮ್ಮ ದೇಶವನ್ನು ಮತ್ತಷ್ಟು ಗೌರವಿಸಲು ಪ್ರೀತಿಸಲು ಆರಂಭಿಸುತ್ತೇವೆ. ಈ ಶ್ರೇಷ್ಠತೆಯನ್ನು ಸಾರಿ, ಪಾಶ್ಚಿಮಾತ್ಯ ಪ್ರಭಾವಕ್ಕೊಳಗಾದವರಿಗೆ ಅರ್ಥ ಮಾಡಿಸುವುದೊಂದೇ ನಮ್ಮ ಮುಂದಿರುವ ಅತಿದೊಡ್ಡ ಸವಾಲು.
–
ಸಿಂಚನ.ಎಂ.ಕೆ, ಇಂಜಿನಿಯರಿಂಗ್ ವಿದ್ಯಾರ್ಥಿನಿ, ಸೋದರಿ ನಿವೇದಿತಾ ಪ್ರತಿಷ್ಠಾನ ಹಾಗೂ ಎಬಿವಿಪಿ ಸ್ವಯಂಸೇವಕರು