ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪರಂಪರಾಗತವಾಗಿ ನಡೆಸಿಕೊಂಡು ಬರಲಾಗುತ್ತಿರುವ ಮಡೆಸ್ನಾನ ಸಾಕಷ್ಟು ವಾದ-ವಿವಾದಗಳಿಗೆ ಗ್ರಾಸವಾಗಿದೆ. ಮಡೆಸ್ನಾನದ ಪರ ಹಾಗೂ ವಿರುದ್ಧವಾಗಿ ಮಾಧ್ಯಮಗಳಲ್ಲಿ ವಾದ-ವಿವಾದಗಳೂ ಪ್ರಕಟವಾಗಿದೆ. ಮಡೆಸ್ನಾನ ಮಾತ್ರ ಈ ವಾದ-ವಿಚಾರಗಳ ನಡುವೆಯೂ ಸದ್ದಿಲ್ಲದೆ ಈ ಬಾರಿಯೂ ನಡೆದುಹೋಗಿದೆ! ಧಾರ್ಮಿಕ ನಂಬಿಕೆಯ ಹೆಸರಿನಲ್ಲಿ ನಡೆದುಬಂದಿರುವ ಒಂದು ಅಸಹ್ಯಕರವೂ ಅವೈಜ್ಞಾನಿಕವೂ ಆಗಿರುವ ಅನಿಷ್ಟ ಪರಂಪರೆಯನ್ನು ಬುದ್ಧಿವಂತರ ಜಿಲ್ಲೆ ಎನಿಸಿಕೊಂಡ ದಕ್ಷಿಣ ಕನ್ನಡದಲ್ಲಿ ನಿಷೇಧಿಸಲು ಅಡ್ಡಿ ಪಡಿಸಿದ ವಿಕೃತ ಮನಸ್ಸುಗಳು, ದುಷ್ಟ ಶಕ್ತಿಗಳ ಕುರಿತು ಈಗ ಗಂಭೀರವಾಗಿ ಅಲೋಚಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಮಡೆಸ್ನಾನವನ್ನು ಜನರ ವೈಯಕ್ತಿಕ ಧಾರ್ಮಿಕ ನಂಬಿಕೆ ಎಂಬ ಕಾರಣದಿಂದ ಸಮರ್ಥಿಸಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಧಾರ್ಮಿಕ ಸ್ವಾತಂತ್ರ್ಯ ಇದೆಯೆಂಬುದು ನಿಜ. ಅಂತಹ ಧಾರ್ಮಿಕ ಸ್ವಾತಂತ್ರ್ಯಕ್ಕೆ ಯಾರೂ ಅಡ್ಡಿಪಡಿಸುವಂತಿಲ್ಲ. ಅವರವರಿಗೆ ಬೇಕಾದಂತೆ ತಮ್ಮ ಧಾರ್ಮಿಕ ವಿಧಿವಿಧಾನಗಳನ್ನು ಆಚರಿಸಿಕೊಳ್ಳಬಹುದು. ಅನೇಕ ಬಗೆಯ ಪೂಜಾಪದ್ಧತಿ, ನೂರಾರು ದೇವರು, ಹಲವಾರು ಜಾತಿ, ಪಂಥಗಳಿಂದ ಕೂಡಿರುವ ಹಿಂದು ಧರ್ಮದಲ್ಲಿ ನಂಬಿಕೆಗಳು ಕೂಡ ಹಲವು ಬಗೆಯವು. ಇದೆಲ್ಲವೂ ನಿಜ. ಆದರೆ ಮಡೆಸ್ನಾನಕ್ಕೆ ಧಾರ್ಮಿಕ ನಂಬಿಕೆಯ ಸ್ಥಾನ ನೀಡಬಹುದೇ? ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ದೇವರ ಸೇವಾ ಪಟ್ಟಿಯಲ್ಲಿ ಮಡೆಸ್ನಾನ ಎಂಬ ಸೇವೆಯಿಲ್ಲ ಎಂದು ಅಲ್ಲಿನ ಆಡಳಿತ ಮಂಡಳಿಯೇ ಸ್ಪಷ್ಟಪಡಿಸಿದೆ. ಅದೂ ಅಲ್ಲದೆ ವೇದ, ಉಪನಿಷತ್‌ಗಳಿಂದ ಹಿಡಿದು ಹಿಂದು ಧರ್ಮದ ಯಾವ ಧಾರ್ಮಿಕ ಗ್ರಂಥದಲ್ಲೂ ಬ್ರಾಹ್ಮಣರು ಊಟ ಮಾಡಿ ಮುಗಿಸಿದ ಎಂಜಲು ಎಲೆಗಳ ಮೇಲೆ ಉರುಳು ಸೇವೆ ನಡೆಸಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ಉಲ್ಲೇಖ ಎಲ್ಲಿಯೂ ಇಲ್ಲ. ಹಾಗಿದ್ದ ಮೇಲೆ ಮಡೆಸ್ನಾನವನ್ನು ಒಂದು ಧಾರ್ಮಿಕ ನಂಬಿಕೆ ಎಂದು ಕೆಲವರು ಪ್ರಬಲವಾಗಿ ವಾದಿಸುವುದಕ್ಕೆ ಏನರ್ಥ? ಅದೊಂದು ವಿತಂಡವಾದವಲ್ಲವೆ? ಒಂದು ಜಾತಿಯ ಪ್ರತಿಷ್ಠೆಯನ್ನು, ಪಾರಮ್ಯವನ್ನು ಎತ್ತಿಹಿಡಿಯುವ ಹುನ್ನಾರವಿದಲ್ಲವೆ?

ಕೆಲವರ ವಿತಂಡವಾದ

ಇಂತಹ ಆಚರಣೆಯಿಂದ ಉಳಿದವರಿಗೆ ಏನು ತೊಂದರೆ? ಅದು ಕೆಲವರ ಭಾವನೆಗಳಿಗೆ ಸಂಬಂಧಿಸಿದ ಪ್ರಶ್ನೆ. ಅಂಥವರ ಭಾವನೆಗಳಿಗೆ ಧಕ್ಕೆ ತರುವುದು ಸಮಂಜಸವಲ್ಲ ಎಂಬ ವಾದವನ್ನು ಮುಂದೊಡ್ಡುವವರು ನಾವೊಂದು ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂಬುದನ್ನೇ ಮರೆತು ಮಾತನಾಡುತ್ತಿದ್ದಾರೆ. ದೇಶದ ಸಂವಿಧಾನದ ಬಗ್ಗೆ, ಪ್ರಜಾಪ್ರಭುತ್ವದ ಆಶಯಗಳ ಬಗ್ಗೆ ಗೌರವ, ನಂಬಿಕೆ ಉಳ್ಳವರು ಖಂಡಿತ ಇಂತಹ ಅವಿವೇಕದ ಮಾತನ್ನಾಡಲಾರರು. ಅಷ್ಟಕ್ಕೂ ಸಂವಿಧಾನ ಹೇಳುವುದಾದರೂ ಏನನ್ನು?ನಾವೆಲ್ಲರೂ ಸಮಾನರು ಎಂದಲ್ಲವೆ? ಬ್ರಾಹ್ಮಣರಷ್ಟೇ ಶೂದ್ರರೂ ಸಮಾನರು. ಬೇಧಭಾವ ಸಲ್ಲದು ಎಂದಲ್ಲವೆ? ಹಾಗಿರುವಾಗ ಬ್ರಾಹ್ಮಣರು ಶ್ರೇಷ್ಠರೆಂಬ ಭ್ರಮೆಯಲ್ಲಿ ಅವರು ಊಟ ಮಾಡಿ ಬಿಟ್ಟ ಎಂಜಲು ಎಲೆಯ ಮೇಲೆ ಬಹುತೇಕ ಶೂದ್ರರೇ ಉರುಳುಸೇವೆ ನಡೆಸುವುದನ್ನು ಒಪ್ಪಲು ಸಾಧ್ಯವಿಲ್ಲ. ಬ್ರಾಹ್ಮಣರಿಗಿರುವಷ್ಟೇ ವ್ಯಕ್ತಿತ್ವದ ಘನತೆ, ಗೌರವ ಬ್ರಾಹ್ಮಣೇತರರಿಗೂ ಇದೆ. ಅಂತಹ ಘನತೆ, ಗೌರವಗಳಿಗೆ ಚ್ಯುತಿ ತರುವ ಮಡೆಸ್ನಾನ ಅದು ಹೇಗೆ ಸಮರ್ಥನೀಯ? ಅಂತಹ ನಡವಳಿಕೆ ನಾಗರಿಕ ಸಮಾಜಕ್ಕೇ ಕಳಂಕ ತರುವಂತಹುದಲ್ಲವೇ?

ವ್ಯವಸ್ಥಿತ ಸಂಚು

ಮಡೆಸ್ನಾನ ನಡೆಯುವ ಸಂದರ್ಭದಲ್ಲಿ ಬ್ರಾಹ್ಮಣರಿಗಾಗಿ ದೇವಾಲಯದ ಹೊರಾವರಣದಲ್ಲಿ ಊಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಉಳಿದ ದಿನಗಳಲ್ಲಿ ಅಂತಹ ವ್ಯವಸ್ಥೆ ಇರುವುದಿಲ್ಲ. ಆ ಪಂಕ್ತಿಯಲ್ಲಿ ಬ್ರಾಹ್ಮಣೇತರರು ಕುಳಿತುಕೊಳ್ಳುವಂತೆಯೇ ಇಲ್ಲ. ಅಷ್ಟೇಕೆ, ಕೆಲವು ವರ್ಷಗಳ ಹಿಂದೆ ಆ ಪಂಕ್ತಿಯಲ್ಲಿ ಕೆಳವರ್ಗದ ಬ್ರಾಹ್ಮಣರೆನಿಸಿಕೊಂಡ ಸ್ಥಾನಿಕರು, ಮಾಲೆಯವರು, ವಿಶ್ವಕರ್ಮರು, ದೈವಜ್ಞರು ಕೂಡ ಕುಳಿತುಕೊಳ್ಳುವಂತಿರಲಿಲ್ಲ. ಮೇಲುವರ್ಗದ ಬ್ರಾಹ್ಮಣರೆನಿಸಿಕೊಂಡವರಿಗೆ ಮಾತ್ರ ಅಲ್ಲಿ ಅವಕಾಶವಿತ್ತು. ಇದೀಗ ಆ ಪಂಕ್ತಿಯಲ್ಲಿ ಬ್ರಾಹ್ಮಣರೇತರರು ಕುಳಿತುಕೊಂಡರೆ ಅವರನ್ನು ಬಲವಂತವಾಗಿ ಎಬ್ಬಿಸಲಾಗುತ್ತದೆ. ಹಾಗೆ ಅವರನ್ನು ಎಬ್ಬಿಸಲು ಒಂದು ‘ಗ್ಯಾಂಗ್’ ಕೂಡ ಇದೆ. ಬ್ರಾಹ್ಮಣರಲ್ಲ ಎಂದು ಕಂಡು ಬಂದವರನ್ನು ಈ ಗ್ಯಾಂಗ್ ಯಾವ ಮುಲಾಜೂ ಇಲ್ಲದೆ, ನಿರ್ದಾಕ್ಷಿಣ್ಯವಾಗಿ ಎಬ್ಬಿಸಿ ಹೊರಗೆ ಕಳಿಸುತ್ತದೆ. ಇದನ್ನು ನೋಡಿ ಆಕ್ರೋಶಗೊಂಡ ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರು ತಮ್ಮದೇ ಆದ ಇನ್ನೊಂದು ಗ್ಯಾಂಗ್ ಕಟ್ಟಿ, ಎಬ್ಬಿಸಿ ಕಳಿಸಿದವರನ್ನು ಮತ್ತೆ ಅದೇ ಬ್ರಾಹ್ಮಣರ ಪಂಕ್ತಿಯಲ್ಲಿ ಊಟಕ್ಕೆ ಕೂರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅದಾದ ಮೇಲೆ ಬ್ರಾಹ್ಮಣರೇತರರನ್ನು ಬಲವಂತವಾಗಿ ಅಲ್ಲಿಂದೆಬ್ಬಿಸುವ ದುಸ್ಸಾಹಸ ಅಷ್ಟಾಗಿರಲಿಲ್ಲ. ಆದರೆ ಆ ಸಾಮಾಜಿಕ ಕಾರ್ಯಕರ್ತರ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ, ತೇಜೋವಧೆ ಆರಂಭವಾದಾಗ ಅವರೂ ಈ ಉಪಟಳದಿಂದ ದೂರ ಸರಿಯಬೇಕಾಯಿತು. ಈಗ ಮತ್ತೆ ಬ್ರಾಹ್ಮಣರ ಪಂಕ್ತಿಯಲ್ಲಿ ಕುಳಿತುಕೊಳ್ಳುವ ಬ್ರಾಹ್ಮಣರೇತರರನ್ನು ಬಲವಂತವಾಗಿ ಎಬ್ಬಿಸಿ ಕಳುಹಿಸುವ ಕಾರ್ಯ ಸಾಂಗವಾಗಿ ಮುಂದುವರಿದೆ!

ವಿಕೃತ ಸಂತಸ ಏಕೆ?

ಬ್ರಾಹ್ಮಣರ ಪಂಕ್ತಿಯಲ್ಲಿ ಊಟಕ್ಕೆ ಕುಳಿತವರಲ್ಲಿ ತಾವೇ ಶ್ರೇಷ್ಟರೆಂಬ ಅಹಂಭಾವ ಅವರ ಮುಖಚರ್ಯೆ, ಹಾವಭಾವ ಹಾಗೂ ದೇಹಭಾಷೆ (ಬಾಡಿ ಲಾಂಗ್ವೇಜ್)ಯಿಂದಲೇ ವ್ಯಕ್ತವಾಗುತ್ತದೆಂದು ಸ್ಥಳೀಯರೊಬ್ಬರು ಹೇಳುತ್ತಾರೆ. ತಾವುಂಡ ಎಂಜಲೆಲೆಯ ಮೇಲೆ, ಊಟ ಮುಗಿದ ಬಳಿಕ ಇತರರು ಹೊರಳಾಡುತ್ತಾರೆಂಬ ಸಂಗತಿ ಊಟ ಮಾಡುವ ಬ್ರಾಹ್ಮಣರ ಸಂತಸ, ದರ್ಪ, ಅಟ್ಟಹಾಸಕ್ಕೆ ಕಾರಣವಾಗುತ್ತದೆಂದರೆ ಅದೆಂಥ ಅಮಾನವೀಯತೆ, ರೂಕ್ಷ ಭಾವನೆ ಈ ಮಂದಿಯ ಮಲಿನ ಮನಸ್ಸುಗಳಲ್ಲಿ ತುಂಬಿಕೊಂಡಿರಬಹುದು? ವಾಸ್ತವವಾಗಿ ತಾವುಂಡ ಎಂಜಲೆಲೆಯ ಮೇಲೆ ಇತರರು ಹೊರಳಾಡುತ್ತಾರಲ್ಲ, ಛೇ ಇದು ಕೂಡದು ಎಂಬ ಕಾಳಜಿ, ಪಾಪಪ್ರಜ್ಞೆ ಇಂಥವರಲ್ಲಿ ಉಂಟಾಗಬೇಕಿತ್ತು. ತಾವುಂಡ ಎಂಜಲೆಲೆಯ ಮೇಲೆ ಂiರೂ ಹೊರಳಾಡದಿರಲಿ ಎಂಬ ಆಶಯದಿಂದ ಆ ಎಲೆಗಳನ್ನು ತಕ್ಷಣ ತಾವೇ ಎತ್ತಿ ಕೊಂಡು ಹೋಗಿ ತಿಪ್ಪೆಗೆ ಒಗೆಯಬೇಕಿತ್ತು. ಆದರೆ ಈ ಮಲಿನ ಮನಸ್ಸುಗಳಿಗೆ ಅಂತಹ ಪ್ರಜ್ಞಾವಂತಿಕೆ, ಕಾಳಜಿಯಾದರೂ ಹೇಗೆ ಬರಬೇಕು? ನಿಜವಾದ ಓರಿಯಂಟೇಶನ್, ಸಂಸ್ಕಾರ ಆಗಬೇಕಾಗಿರುವುದು ಇಂತಹ ಅವಿವೇಕಿಗಳಿಗೆ! ಎಂಜಲೆಲೆಯ ಮೇಲೆ ಹೊರಳಾಡುವ ಅಮಾಯಕ ಭಕ್ತರಿಗಲ್ಲ!

ತಾವು ಊಟ ಮಾಡಿಬಿಟ್ಟ ಎಂಜಲು ಎಲೆಗಳ ಮೇಲೆ ಭಕ್ತರು ಉರುಳು ಸೇವೆ ನಡೆಸುತ್ತಾರೆ ಎಂಬುದು ಗೊತ್ತಾದಾಗ, ಅಂತಹ ಬ್ರಾಹ್ಮಣರು ಸಾಮೂಹಿಕ ಊಟವನ್ನೇ ನಿರಾಕರಿಸುವಂತಹ ಔದಾರ್ಯವನ್ನು ತೋರಿಸಬಹುದಾಗಿತ್ತು. ಹಾಗೆ ಮಾಡಿದ್ದರೆ ಅದೊಂದು ಸುಸಂಸ್ಕೃತ ನಡವಳಿಕೆಯಾಗಿ ಸಮಾಜಕ್ಕೆ ಮಾದರಿ ನಡೆಯಾಗುತ್ತಿತ್ತು, ಆದರೆ…?

ಮಡೆಸ್ನಾನಕ್ಕೆ ಬರುವ ಭಕ್ತರು ಮುಗ್ಧರು, ಅಮಾಯಕರು. ಯಾವುದೋ ಸಂಕಷ್ಟ, ಸಮಸ್ಯೆಗಳಿಗೆ ಸಿಲುಕಿದವರು. ಹತಾಶರಾಗಿ ಕೊನೆಗೆ ಇಂತಹ ಆಚರಣೆಗಳಿಗೆ ಇಳಿಯುತ್ತಾರೆ. ಇದೊಂದೇ ಪರಿಹಾರ ಎಂದು ಭಾವಿಸುತ್ತಾರೆ. ಅಥವಾ ಹಾಗೆ ಭಾವಿಸುವಂತೆ ಅವರಿಗೆ ಹಲವರು ಅವರಲ್ಲಿ ತಪ್ಪು ಕಲ್ಪನೆಗಳನ್ನು ಬಿತ್ತುತ್ತಾರೆ. ಚರ್ಮವ್ಯಾಧಿ, ಸಂತಾನಹೀನತೆ ಮೊದಲಾದ ಸಮಸ್ಯೆಗಳಿಂದ ತೀರಾ ನೊಂದವರಿಗೆ ಕೆಲವರು ಬಿತ್ತುವ ತಪ್ಪು ಕಲ್ಪನೆಗಳೇ ಆಶಾಕಿರಣವಾಗಿ ಗೋಚರಿಸುವುದು ಸಹಜ. ಮಡೆಸ್ನಾನ ಮಾಡಿದವರ ಸಂಕಷ್ಟಗಳು ಯಾವ ಪ್ರಮಾಣದಲ್ಲಿ ನಿವಾರಣೆಯಾಗಿದೆ ಎಂಬುದನ್ನು ಮಾತ್ರ ಯಾರೂ ನಿಖರವಾಗಿ, ಅಂಕಿ-ಅಂಶ, ವಾಸ್ತವ ಮಾಹಿತಿಗಳೊಂದಿಗೆ ಸಾದರ ಪಡಿಸುವ ಧೈರ್ಯ ಮಾಡುವುದಿಲ್ಲ. ಮಡೆಸ್ನಾನ ಮಾಡಿದವರಿಗೆ ಇಷ್ಟಾರ್ಥಗಳು ಸಿದ್ಧಿಸಿವೆ ಎಂಬ ಪ್ರಚಾರ ಮಾತ್ರ ಜೋರಾಗಿಯೇ ಇರುತ್ತದೆ. ಇದರಲ್ಲಿ ವಾಸ್ತವ ಎಷ್ಟು? ಕಲ್ಪನೆ ಎಷ್ಟು? ಈ ಬಗ್ಗೆ ವಿಮರ್ಶಿಸುವ ಗೋಜಿಗೆ ಯಾರೂ ಅಷ್ಟಾಗಿ ಹೋಗದಿರುವುದೇ ಮಡೆಸ್ನಾನದಂತಹ ವಿಕೃತ ಪದ್ಧತಿ ಲಾಗಾಯ್ತಿನಂದಲೂ ಮುಂದುವರಿರುವುದಕ್ಕೆ ಕಾರಣ.

ಮಲಿನ ಮನಸ್ಸುಗಳ ಆತ್ಮವಂಚನೆ

ಇದು ಭಾವನೆಗಳ ಪ್ರಶ್ನೆ ಎಂದು ವಾದಿಸುವವರು ಹಾಗಿದ್ದರೆ ಚಂದ್ರಗುತ್ತಿಯ ಬೆತ್ತ್ತಲೆ ಸೇವೆಯನ್ನು ಇದು ಭಾವನೆಗೆ ಸಂಬಂಧಿಸಿದ ಸಂಗತಿ ಎನ್ನುತ್ತಾರೆಯೇ? ಬೆತ್ತಲೆ ಸೇವೆ ಅನಿಷ್ಟ ಎನ್ನುವುದಾದರೆ ಮಡೆಸ್ನಾವೂ ಅನಿಷ್ಟ, ಅನಾಗರಿಕವಲ್ಲವೇ? ಬೆತ್ತಲೆ ಸೇವೆ, ಸತಿಸಹಗಮನ, ಬಾಲ್ಯವಿವಾಹ, ವಿಧವಾ ವಿವಾಹಕ್ಕೆ ನಿಷೇಧ, ವಿಧವೆಯರ ಕೇಶಮುಂಡನ ಇತ್ಯಾದಿ ಪರಂಪರಾಗತ ಅನಿಷ್ಟ ರೂಢಿಗಳ ವಿರುದ್ಧ ರಾಜಾರಾಮ ಮೋಹನರಾಯ್, ಗಾಂಧೀಜಿ, ಸಾವರ್ಕರ್, ಕುದ್ಮಲ್ ರಂಗರಾಯರು, ಜ್ಯೋತಿಭಾ ಪುಲೆ, ಅಂಬೇಡ್ಕರ್‌ರಂತಹ ಪ್ರಾತಃಸ್ಮರಣೀಯರು ಹೋರಾಡಿದರು. ಇಂತಹ ಮಹನೀಯರನ್ನು ಗೌರವಿಸುವ ಮನಸ್ಸುಗಳು ಮಡೆಸ್ನಾನವನ್ನು ಬೆಂಬಲಿಸುವುದು ಅಥವಾ ಆ ಅನಿಷ್ಟ ರೂಢಿಯನ್ನು ಖಂಡಿಸದೆ ಮೌನಕ್ಕೆ ಶರಣಾಗಿ ನಿರ್ಲಿಪ್ತರಾಗಿ ಉಳಿಯುವುದು ಆತ್ಮವಂಚನೆಯಲ್ಲದೆ ಮತ್ತೇನು?

ನನ್ನ ಪತ್ರಕರ್ತ ಮಿತ್ರರೊಬ್ಬರಂತೂ ನಾವು ಜನರ ಭಾವನೆಗಳಿಗೆ ಗೌರವ ಕೊಡಬೇಕು. ಅವರ ನಂಬಿಕೆಗಳಿಗೆ ಚ್ಯುತಿ ತರಬಾರದೆಂದೇ ವಾದಿಸಿದರು. ಮಡೆಸ್ನಾನವನ್ನು ಏಕಾಏಕಿ ಹೀಗೆ ನಿಷೇಧಿಸುವುದು ಸರಿಯಲ್ಲವೆನ್ನುವುದು ಅವರ ವಾದ. ಮಡೆಸ್ನಾನ ಪರಂಪರಾಗತವಾಗಿ ನಡೆದುಕೊಂಡು ಬರುತ್ತಿರುವುದು ಈಗಲ್ಲ. ಸುಮಾರು ೫೦೦ವರ್ಷಗಳಿಂದಲೂ ಆಚರಣೆ ಯಲ್ಲಿದೆ ಎಂದು ಹಿರಿಯರು ಹೇಳುತ್ತಾರೆ. ಹೀಗೆ ಸುಧೀರ್ಘ ಕಾಲದಿಂದ ಗೊತ್ತಿದ್ದೋ ಗೊತ್ತಿಲ್ಲದೆಯೋ ಅರಿವಿನ, ಸಾಮಾಜಿಕ ಪ್ರಜ್ಞವಂತಿಕೆಯ ಕೊರತೆಯ ಕಾರಣದಿಂದಾಗಿ ನಡೆದು ಬಂದಿರುವ ಅನಿಷ್ಟ ಆಚರಣೆಗೆ ನಿಷೇಧ ಹಾಕಬೇಕೆಂಬ ಚಿಂತನೆ ಕಳೆದ ಒಂದೆರಡು ವರ್ಷಗಳಿಂದ ಸಾಗಿತ್ತು. ಈ ವರ್ಷ ಈ ಆಚರಣೆಗೆ ನಿಷೇಧ ಹೇರುವ ನಿರ್ಧಾರವನ್ನು ಜಿಲ್ಲಾಡಳಿತ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಕೈಗೊಂಡಿದ್ದುದು ಸೂಕ್ತವೇ ಆಗಿತ್ತು. ಅದೇನೂ ಏಕಾಏಕಿ ಕೈಗೊಂಡ ನಿರ್ಧಾರವಾಗಿರಲಿಲ್ಲ. ಈ ನಿರ್ಧಾರದ ಬಳಿಕ, ಮಡೆಸ್ನಾನ ಮಾಡುವವರಿಗೆ ಈ ನಿರ್ಧಾರದ ಹಿಂದಿನ ಆಶಯಗಳನ್ನು, ಉತ್ತಮ ಚಿಂತನೆಗಳನ್ನು ಮನದಟ್ಟು ಮಾಡಿಸಬೇಕಾಗಿತ್ತು ಎನ್ನುವುದೇನೋ ಸರಿ. ಅದನ್ನು ದೇವಾಲಯದ ಆಡಳಿತ ಮಂಡಳಿಯೇ ಮಾಡಬಹುದಿತ್ತು. ಅದೇನೂ ಕಷ್ಟದ ಕೆಲಸವೂ ಆಗಿರಲಿಲ್ಲ.  ಯಾರೋ  ಹಿಡಿಯಷ್ಟು ಜನರು  ಇದನ್ನು  ವಿರೋಧಿಸುತ್ತಿದ್ದಿರಬಹುದು. ಬೆತ್ತಲೆ  ಸೇವೆಗೆ ನಿಷೇಧ ಹೇರಿದಾಗಲೂ ಇಂತಹ ಪ್ರತಿರೋಧ ಕೇಳಿ ಬಂದಿತ್ತು. ಆದರೆ  ಅನಂತರ ಬೆತ್ತಲೆ ಸೇವೆ ನಿಷೇಧವಾಗಲಿಲ್ಲವೆ? ಅದೇ ರೀತಿ ಮಡೆಸ್ನಾನವೂ ನಿಷೇಧಗೊಂಡು ಒಂದು ಐತಿಹಾಸಿಕ ಪರಿವರ್ತನೆಗೆ ದ.ಕ.ಜಿಲ್ಲೆ ಸಾಕ್ಷಿಯಾಗಬಹುದಿತ್ತು. ಹಲವಾರು ಇಂತಹ ಐತಿಹಾಸಿಕ ನಿರ್ಧಾರಗಳಿಗೆ ದ.ಕ. ಜಿಲ್ಲೆ ಸಾಕ್ಷಿಯಾದ ಪ್ರಸಂಗಗಳು ನಮಗೆ ತಿಳಿದೇ ಇದೆ. ೧೯೬೮ರ ಉಡುಪಿಯ ವಿಶ್ವಹಿಂದು ಪರಿಷತ್ ಸಮ್ಮೇಳನದಲ್ಲಿ ಎಲ್ಲ ಜಾತಿಗೆ ಸೇರಿದ ಮಠಾಧೀಶರ ಸಮಕ್ಷಮದಲ್ಲಿ ‘ಹಿಂದವಃ ಸೋದರ ಸರ್ವೇ’, ‘ನ ಹಿಂದೂ ಪತಿತೋ ಭವೇತ್’ (ಎಲ್ಲ ಹಿಂದುಗಳು ಸೋದರರು; ಯಾವ ಹಿಂದುವೂ ಪತಿತನಾಗಲು ಸಾಧ್ಯವಿಲ್ಲ) ಎಂಬ ಅಮೋಘ, ಅರ್ಥಪೂರ್ಣ ನಿರ್ಣಯ ಕೈಗೊಂಡಿರಲಿಲ್ಲವೆ? ಅಂತಹ ಕ್ರಾಂತಿಕಾರಕ ನಿರ್ಣಯಕ್ಕೆ ದ.ಕ. ಜಿಲ್ಲೆಯೇನು, ಇಡೀ ದೇಶವೇ ಸಾಕ್ಷಿಯಾಗಿರಲಿಲ್ಲವೆ? ಅಷ್ಟೇ ಅಲ್ಲ, ದ.ಕ. ಜಿಲ್ಲೆಯ ಅದೆಷ್ಟೋ ಊರುಗಳಲ್ಲಿ, ನಗರಗಳಲ್ಲಿ ಹಿಂದುಗಳನ್ನು ಒಗ್ಗೂಡಿಸಿ, ಹಿಂದುಗಳಲ್ಲಿ ಸಮಾನತೆ, ಸಾಮರಸ್ಯ ಭಾವ ಮೂಡಿಸುವ ಹಿಂದು ಸಮಾಜೋತ್ಸವ ನಡೆದಿಲ್ಲವೆ? ಈ ಹಿಂದು ಸಮಾಜೋತ್ಸವದ ಸಂದೇಶವಾದರೂ ಏನು? ಅನಿಷ್ಟ ರೂಢಿಗಳನ್ನು, ಮೇಲು-ಕೀಳು ಭಾವನೆಯನ್ನು ಮುಂದುವರಿಸಿಕೊಂಡು ಹೋಗಬೇಕೆಂದೆ? ಅಲ್ಲವಲ್ಲ. ಹಿಂದು ಸಮಾಜದಲ್ಲಿರುವ ದೋಷಗಳು ನಿವಾರಣೆಯಾಗಿ, ಸಮಾನತೆ, ಸಹಬಾಳ್ವೆ, ಸಾಮರಸ್ಯ ಮೂಡಿ ಇದೊಂದು ಶಕ್ತಿಯುತ, ಸ್ವಾಭಿಮಾನ ಸಂಪನ್ನ ಸಮಾಜವಾಗಿ ಘನತೆ, ಗೌರವಗಳಿಂದ ತಲೆಯೆತ್ತುವಂತಾಗಬೇಕೆನ್ನುವುದೇ ಹಿಂದು ಸಮಾಜೋತ್ಸವಗಳ ಸಂದೇಶ ಎಂದು ನಾನಂತೂ ಭಾವಿಸಿರುವೆ. ಮಡೆಸ್ನಾನದಂತಹ ಅನಿಷ್ಟ ರೂಢಿಯ ಬಗ್ಗೆ ಮೌನ ವಹಿಸುವ ಮಠಾಧೀಶರ, ಧಾರ್ಮಿಕ, ಸಾಮಾಜಿಕ ಮುಖಂಡರ ವರ್ತನೆ ಗಮನಿಸಿದರೆ ಹಿಂದು ಸಮಾಜೋತ್ಸವ ಆಚರಣೆಯಿಂದ ನಾವೇನೂ ಪಾಠ ಕಲಿತಿಲ್ಲ ಎಂಬ ಸಂದೇಶ ರವಾನೆಯಾಗದೆ ಇರದೆ?

ಮಲೆಕುಡಿಯರೇ ಅಡ್ಡಿಯಂತೆ!

ಮಡೆಸ್ನಾನ ನಿಷೇಧಕ್ಕೆ ಸ್ಥಳೀಯ ಮಲೆಕುಡಿಯ ಜನರೇ ವಿರೋಧ ವ್ಯಕ್ತ ಪಡಿಸಿದ್ದರಿಂದ ಆ ನಿಷೇಧವನ್ನು ಹಿಂತೆಗೆದುಕೊಳ್ಳಬೇಕಾಯಿತೆಂಬ ಸರ್ಕಾರದ ಹೇಳಿಕೆಗೆ ಅಳಬೇಕೋ ನಗಬೇಕೋ ಎಂದು ತಿಳಿಯುತ್ತಿಲ್ಲ. ಮಡೆಸ್ನಾನಕ್ಕೆ ನಿಷೇಧ ಹೇರಿದ ಕೂಡಲೇ ಮಲೆಕುಡಿಯರು ಸುಬ್ರಹ್ಮಣಕ್ಕೆ ಬಂದು, ಹಾಗಿದ್ದರೆ ನಾವಿನ್ನ್ನು ರಥ ಕಟ್ಟುವುದಿಲ್ಲವೆಂದು ಪ್ರತಿಭಟಿಸಿದರಂತೆ. ಮಲೆಕುಡಿಯರು ಅಷ್ಟೊಂದು ಜಾಗೃತ ಜನಾಂಗವೇ? ಅಷ್ಟೊಂದು ಜಾಗೃತ, ಸಂವೇದನಾಶೀಲ ಜನಾಂಗ ಅದಾಗಿದ್ದರೆ ಅವರೇಕೆ ಈಗಲೂ ರಥಕಟ್ಟುವ, ಮಡೆಸ್ನಾನದಲ್ಲೇ ನೆಮ್ಮದಿ ಕಾಣುವವರಾಗಿ ಹಿಂದುಳಿದಿರಬೇಕಾಗಿತ್ತು? ಮಡೆಸ್ನಾನಕ್ಕೆ ಸರ್ಕಾರ ನಿಷೇಧದ ನಿರ್ಧಾರ ಕೈಗೊಂಡ ಕೂಡಲೇ ಸುಬ್ರಹ್ಮಣ ದೇವಾಲಯದ ಪಟ್ಟಭದ್ರ ಗುಂಪೊಂದು ಮಲೆಕುಡಿಯರನ್ನು ಪುಸಲಾಯಿಸಿ, ಚಿತಾವಣೆ ಮಾಡಿ, ಅವರಿಂದ ‘ರಥ ಕಟ್ಟುವುದಿಲ್ಲ. ರಥೋತ್ಸವಕ್ಕೆ ಸಹಕರಿಸುವುದಿಲ್ಲ’ ಎಂಬ ಹೇಳಿಕೆ ಹೊರಬರುವಂತೆ ಮಾಡಿದೆ. ಮಡೆಸ್ನಾನ ವಿರೋಧಿಸಿ ಪ್ರತಿಭಟಿಸಿದವರ ವಿರುದ್ಧ ಮಲೆಕುಡಿಯರೇ ಹಲ್ಲೆ ನಡೆಸುವಂತೆಯೂ ಪ್ರಚೋದಿಸಲಾಗಿದೆ. ನಿಷೇಧವನ್ನು ಹೇಗಾದರೂ ಹಿಂಪಡೆಯುವಂತೆ ಮಾಡಲು ಇದಿಷ್ಟೇ ಸಾಕಾಗಿತ್ತು. ಆದರೆ ಮುಜರಾಯಿ ಇಲಾಖೆ ಸಚಿವರು ಕೆಲವು ಪಟ್ಟಭದ್ರರ ಒತ್ತಡಕ್ಕೆ ಮಣಿದಿದ್ದು ಮಾತ್ರ ಅತ್ಯಂತ ದುರದೃಷ್ಟಕರ. ಹೀಗೆ ಮಣಿಯುವ ಮೂಲಕ ಅವರು ಮೇಲ್ವರ್ಗದ ಜನರ ಕಣ್ಣಿನಲ್ಲಿ ಹೀರೋ ಆಗಿ ಕಂಡಿರಬಹುದು. ಆದರೆ ಪ್ರಜಾತಂತ್ರದ ಆಶಯಗಳಿಗೆ, ಸಂವಿಧಾನದ ಮೌಲ್ಯಗಳಿಗೆ ಅವರು ಅಪಚಾರವೆಸಗಿದ್ದಾರೆ ಎಂಬುದನ್ನು ಮರೆಯುವುದು ಹೇಗೆ?

ಪತ್ರಿಕೆಯೊಂದರ ಹುನ್ನಾರ

ಈ ನಡುವೆ, ಪತ್ರಿಕೆಯೊಂದು ತುರುವೇಕರೆ ಬೇಟೆರಾಯಸ್ವಾಮಿ ದೇವಾಲಯದಲ್ಲಿ ಕೆಳವರ್ಗದವರು ಉಂಡ ಎಂಜಲೆಲೆ ಮೇಲೆ ಬ್ರಾಹ್ಮಣರ ಮಡೆಸ್ನಾನ ಆಚರಣೆಯಲ್ಲಿದ ಎಂದು ಒಂದು ‘ಸ್ಫೋಟಕ ವರದಿ’ಯನ್ನು ಮುಖಪುಟದಲ್ಲಿ ಪ್ರಕಟಿಸಿ, ಇದು ತನ್ನ ಪತ್ರಿಕೆಯಲ್ಲಿ ಮಾತ್ರ ಬಂದ ಅಧಿಕೃತ ಸುದ್ದಿ ಎಂದು ಬೀಗಿತ್ತು. ಈ ಆಚರಣೆ ಹಲವಾರು ವರ್ಷಗಳಿಂದಲೂ ನಡೆಯುತ್ತಿದೆ ಎಂದು ವರದಿಗಾರ ಬರೆದಿದ್ದ. ಆದರೆ ಆ ದೇವಾಲಯದ ಪ್ರಮುಖ ಅರ್ಚಕರನ್ನೇ ಈ ಬಗ್ಗೆ ವಿಚಾರಿಸಿದಾಗ ಮಡೆಸ್ನಾನ ನಡೆಯುತ್ತಿರುವುದೇನೋ ಹೌದು. ಆದರೆ ಅದು ನಡೆಯುವುದು ಬ್ರಾಹ್ಮಣರು ಉಂಡ ಎಂಜಲೆಲೆ ಮೇಲೆ ಬ್ರಾಹ್ಮಣರದೇ ಉರುಳುಸೇವೆ ಹೊರತು ಕೆಳವರ್ಗದವರು ಉಂಡ ಎಲೆಯ ಮೇಲಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ ಆ ಪತ್ರಿಕೆಗೆ ಯಾರು ಇಂತಹ ಸುಳ್ಳು ಮಾಹಿತಿ ಒದಗಿಸಿದರೋ ಗೊತ್ತಿಲ್ಲವೆಂದು ಆ ಅರ್ಚಕರು ನನ್ನ ಬಳಿ ಹೇಳಿದ್ದಾರೆ. ಬ್ರಾಹ್ಮಣ ವರ್ಗದ ಓದುಗರನ್ನು ಸೆಳೆಯಲು ಆ ಪತ್ರಿಕೆ ಹೂಡಿದ ‘ಆಟ’ ಇದಲ್ಲದೆ ಇನ್ನೇನು?

ಈಗಲಾದರೂ ದ.ಕ. ಜಿಲ್ಲೆಯ ಮಠಾಧೀಶರು, ಧಾರ್ಮಿಕ ಮುಖಂಡರು ತಮ್ಮ ಮೌನ ಮುರಿದು, ನಿರ್ಲಿಪ್ತ ಭಾವದಿಂದ ಹೊರಬಂದು ಮಡೆಸ್ನಾನವೆಂಬ ಅನಿಷ್ಟ ರೂಢಿಯನ್ನು ನಿವಾರಿಸುತ್ತ ದಿಟ್ಟ ಹೆಜ್ಜೆ ಹಾಕಬೇಕಾಗಿದೆ. ರಾಜ್ಯ ಸರ್ಕಾರ ರಾಜ್ಯದಲ್ಲಿ ಈ ಹಿಂದೆ ಧಾರ್ಮಿಕ ಆಚರಣೆಯ ಹೆಸರಲ್ಲಿ ನಡೆಸುತ್ತಿದ್ದ ಬೆತ್ತಲೆ ಸೇವೆಯನ್ನು ತಡೆಗಟ್ಟಿದೆ. ದ.ಕ. ಜಿಲ್ಲೆಯಲ್ಲೇ ನಡೆಯುತ್ತಿದ್ದ ಅನಿಷ್ಟಕರ ‘ಅಜಲು ಸೇವೆ’ಯೂ ನಿವಾರಣೆಗೊಂಡಿದೆ. ಇನ್ನು ಮಡೆಸ್ನಾನದಂತಹ ಅನಿಷ್ಟ ನಿಷೇಧಕ್ಕೇಕೆ ಮೀನ-ಮೇಷ ಎಣಿಸಬೇಕು?

ಮೌಡ್ಯದ, ಅಜ್ಞಾನದ ಎಂಜಲ ಮೇಲೆ ಉರುಳಿದ್ದು ಸಾಕು. ಈಗ ಬೇಕಾಗಿರುವುದು- ಮಡೆಸ್ನಾನವಲ್ಲ, ವಿವೇಕದ ಜ್ಞಾನದ ಸ್ನಾನ. ‘ಸ್ನಾನವ ಮಾಡಿರೋ ಜ್ಞಾನ ತೀರ್ಥದಲಿ; ನಾನು-ನೀನೆಂಬಹಂಕಾರವ ಬಿಟ್ಟು…..’ ಎಂದು ದಾಸವರೇಣ್ಯರು ಸಂದೇಶ ನೀಡಿರುವುದೂ ಇದೇ ಹಿನ್ನೆಲೆಯಲ್ಲಿ.

 

3 thoughts on “ಮಡೆಸ್ನಾನವಲ್ಲ; ಬೇಕಾಗಿರುವುದೀಗ ವಿವೇಕದ, ಜ್ಞಾನದ ಸ್ನಾನ: ದು ಗು ಲಕ್ಷ್ಮಣ ಲೇಖನ

  1. ತುಂಬಾ ಒಳ್ಳೆಯ ಲೇಖನ. ಈ ವಿಚಾರದ ಕುರಿತು ಬೇರೆಲ್ಲ ಪತ್ರಿಕೆಗಳಲ್ಲಿ ಬಂದ ಲೇಖನಕ್ಕಿಂತ ಅತ್ಯಂತ ಸೆನ್ಸಿಬಲ್ ಹಾಗೂ ವಿಚಾರಪೂರ್ಣ ಲೇಖನ. ಈ ಅನಿಷ್ಟದ ಕುರಿತ ಅನೇಕ ಹೊಸ ಸಂಗತಿಗಳನ್ನು ಲೇಖನ ತಿಳಿಸಿಕೊಡುತ್ತಿದೆ. ದು.ಗು.ಲಕ್ಷ್ಮಣ್ ಅವರಿಗೆ ವಂದನೆಗಳು. -ರಾಮಚಂದ್ರ ಹೆಗಡೆ

  2. Personally I feel that there is a non Hindu hand in this while the Male kudi sect insists on the practice. This has to be investigated. There may be plan to bring bad name to Hindus and their practices. Here it should be the responsibility of the higher communities to bring out the truth.

Leave a Reply

Your email address will not be published.

This site uses Akismet to reduce spam. Learn how your comment data is processed.