By Du Gu Lakshman

(ನೇರನೋಟ August 19th)

ಸಿಲೋನ್-ಶ್ರೀಲಂಕಾ, ಬರ್ಮಾ-ಮ್ಯಾನ್ಮಾರ್ ಆಗುವುದಾದರೆ  ‘ಇಂಡಿಯಾ’-ಭಾರತ ಆಗುವುದು ಯಾವಾಗ?

ಮೊನ್ನೆ ಆಗಸ್ಟ್ ೧೫ರಂದು ೬೬ನೇ ಸ್ವಾತಂತ್ರ್ಯೋತ್ಸವವನ್ನು ದೇಶದೆಲ್ಲೆಡೆ ಸಡಗರ, ಸಂಭ್ರಮದಿಂದ ಆಚರಿಸಿದಾಗ ಒಂದು ಸಂಗತಿಯನ್ನು ಮಾತ್ರ ನಾವ್ಯಾರೂ ನೆನಪಿಗೆ ತಂದುಕೊಳ್ಳಲೇ ಇಲ್ಲ. ತ್ರಿವರ್ಣ ಧ್ವಜಾರೋಹಣ, ರಾಜಕೀಯ ನಾಯಕರಿಂದ ಅದೇ ಹಳಸಲು ಭಾಷಣ, ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಬೇಕೆಂಬ ಗಂಟಲ ಮೇಲಿನ ಅದೇ ಶುಷ್ಕ ಸಂದೇಶಗಳನ್ನು ಕೇಳಿ ಮತ್ತೆ ಮುಂದಿನ ಸ್ವಾತಂತ್ರ್ಯೋತ್ಸವಕ್ಕೆ ಇದನ್ನೇ ಮತ್ತೆ ಕೇಳುವ ನಿರ್ಧಾರಕ್ಕೆ ಬಂದಿರುವುದನ್ನು ಬಿಟ್ಟರೆ, ದೇಶದ ಪ್ರಜೆಗಳಾಗಿ ಒಂದು ಮುಖ್ಯ ಸಂಗತಿಯತ್ತ ನಾವ್ಯಾರೂ ಆಲೋಚಿಸಿಯೇ ಇಲ್ಲವೆಂಬುದು ನನ್ನ ಭಾವನೆ.

ದೇಶಕ್ಕೆ ಸ್ವಾತಂತ್ರ್ಯ ದೊರಕಿ ೬೬ ವರ್ಷಗಳೇ ಸಂದಿವೆ. ಈ ೬೬ ವರ್ಷಗಳ ದೀರ್ಘ ಕಾಲದಲ್ಲಿ ನಾವು ನಮ್ಮದೇ ಸ್ವತಂತ್ರ ದೇಶದೊಳಗೆ ಸ್ವಾಭಿಮಾನ ಸಂಪನ್ನರಾಗಿ, ಸ್ವಂತಿಕೆಯಿಂದ ಬಾಳಿ ಬದುಕಿzವೆಯೆ? ಈ ಪ್ರಶ್ನೆಗೆ ಬಹುತೇಕ ಮಂದಿ ‘ಹೌದು’ ಎಂದೇ ಉತ್ತರಿಸಬಹುದು. ಇಲ್ಲಿ ನಮ್ಮದೇ ಸರ್ಕಾರವಿದೆ. ನಮ್ಮದೇ ಜನಪ್ರತಿನಿಧಿಗಳಿದ್ದಾರೆ. ಸ್ವತಂತ್ರ ಬದುಕು ಇಲ್ಲಿ ಸಾಧ್ಯ. ಹಾಗಿರುವಾಗ ನಿಮ್ಮದೇನು ಕಿರಿಕ್ಕು ಎಂದು ಕೆಲವರು ಕೇಳಬಹುದು. ಅವೆಲ್ಲವೂ ನಿಜ. ನಮ್ಮದೇ ಸರ್ಕಾರ, ನಮ್ಮದೇ ಜನಪ್ರತಿನಿಧಿಗಳು, ನಮ್ಮವರದೇ ಆಡಳಿತವಿದ್ದರೂ ನಾವೇಕೆ ಇನ್ನೂ ಗುಲಾಮೀ ಮಾನಸಿಕತೆಯನ್ನು ಬದಲಾಯಿಸಿಕೊಂಡಿಲ್ಲ? ಬ್ರಿಟಿಷರು ಈ ದೇಶ ಬಿಟ್ಟು ತೊಲಗಿದ ಬಳಿಕ ನಾವೇಕೆ ನಮ್ಮದೇ ರೀತಿರಿವಾಜು, ಸ್ವದೇಶಿತನ, ಸ್ವಾಭಿಮಾನಭರಿತ ನಡೆನುಡಿಗಳನ್ನು ರೂಢಿಸಿಕೊಂಡಿಲ್ಲ? ನಮ್ಮ ವೇಷಭೂಷಣಗಳಲ್ಲಿ  ನಮ್ಮದೇ ಛಾಪು ಏಕಿಲ್ಲ? ಇದು ನನ್ನ ಪ್ರಶ್ನೆಗಳು. ಈ ಪ್ರಶ್ನೆಗಳು ನಿಮ್ಮನ್ನೂ ಕಾಡಿರಬಹುದು. ಮದುವೆಯಂತಹ ಶುದ್ಧ ಭಾರತೀಯ ಸಂಭ್ರಮದ ಸಂದರ್ಭದಲ್ಲೂ ಇಂಗ್ಲಿಷರ ಅದೇ ಕೋಟು, ಬೂಟು, ಟೈಗಳಿಂದ ಮದುಮಗ ಅಲಂಕೃತನಾಗುವ ದೈನೇಸಿ ದೃಶ್ಯ ನೋಡಿದಾಗ ನಿಮಗೇನನಿಸುತ್ತದೆ? ಅದು ಸರಿಯೆನಿಸುತ್ತದೆಯೆ? ಸರಿ ಎನಿಸಿದರೆ ನನ್ನದೇನೂ ತಕರಾರಿಲ್ಲ. ಆದರೆ ನಮಗೆ ನಮ್ಮದೇ ಆದ ಸ್ವಂತಿಕೆ ಎನ್ನುವುದು ಬೇಡವೆ? ವಿವಾಹ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ನಾವಿನ್ನೂ ಇಂಗ್ಲಿಷ್‌ನಲ್ಲೆ ಮುದ್ರಿಸಿ ಧನ್ಯರಾಗುತ್ತಿರುವುದು ಯಾವ ಭಾಗ್ಯಕ್ಕಾಗಿ? ಮನೆಮನೆಗಳಲ್ಲಿ ಕೇಕ್ ಕತ್ತರಿಸಿ, ದೀಪ ಆರಿಸಿ ಹುಟ್ಟುಹಬ್ಬ ಆಚರಿಸುವ ವೈಖರಿ ಸಾಕ್ಷಾತ್ ಗುಲಾಮೀ ಮಾನಸಿಕತೆಗೆ ಇನ್ನೊಂದು ದಿವ್ಯ ಸಂಕೇತವಲ್ಲವೆ? ಬಹುತೇಕ ಭಾರತೀಯರ ರುಜು ಇರುವುದು ಇಂಗ್ಲಿಷ್‌ನಲ್ಲೇ ಹೊರತು ಅವರವರ ಮಾತೃಭಾಷೆಯಲ್ಲಲ್ಲ ಎಂಬ ಸಂಗತಿ ನಮ್ಮ ಸ್ವಾಭಿಮಾನಶೂನ್ಯತೆಗೆ ಒಂದು ದಿವ್ಯ ನಿದರ್ಶನವಲ್ಲವೆ? ಇಂಗ್ಲಿಷ್‌ನಲ್ಲಿ ರುಜು ಹಾಕಿದರೆ ಮಾತ್ರ ಅದೊಂದು ಪ್ರತಿಷ್ಠೆಯ ಸಂಕೇತ ಎಂಬ ಭ್ರಮೆ ಸ್ವಾತಂತ್ರ್ಯಪಡೆದು ೬೬ ವರ್ಷಗಳ ನಂತರವೂ ಆವರಿಸಿರುವುದಕ್ಕೆ ಯಾರನ್ನು ದೂರೋಣ? ಇಂತಹ ನೂರಾರು ಪ್ರಶ್ನೆಗಳು ನನ್ನನ್ನು ಕಾಡಿದಂತೆ ನಿಮ್ಮನ್ನೂ ಕಾಡಿರಬಹುದಲ್ಲವೆ?

ಹುಟ್ಟುಹಬ್ಬದಂದು ಮನೆಗಳಲ್ಲಿ ಕೇಕ್ ಕತ್ತರಿಸಿ, ದೀಪ ಆರಿಸಿ ‘ಹ್ಯಾಪಿ ಬರ್ತ್‌ಡೇ ಟು ಯೂ’ ಎಂದು ಕೋರಸ್ ಹಾಡುವ ವೈಖರಿ ಸದ್ಯಕ್ಕಂತೂ ಬದಲಾಗುವ ಲಕ್ಷಣ ಕಂಡುಬರುತ್ತಿಲ್ಲ. ದೀಪ ಬೆಳಗುವುದು ಭಾರತೀಯ ಸಂಪ್ರದಾಯ. ದೀಪವೆಂದರೆ ಬೆಳಕು. ಬೆಳಕೆಂದರೆ ಜ್ಞಾನ. ಇಂತಹ ಜ್ಞಾನ ಹುಟ್ಟುಹಬ್ಬದಂದು ಹೆಚ್ಚಾಗಲಿ ಎಂಬುದು ದೀಪ ಬೆಳಗುವುದರ ಹಿಂದಿನ ಆಶಯ. ದೀಪ ಆರಿಸುವುದು ಪಾಶ್ಚಾತ್ಯ ಪದ್ಧತಿ. ಅವರು ಅದೇಕೆ ದೀಪವಾರಿಸುತ್ತಾರೋ ಗೊತ್ತಿಲ್ಲ. ಭಾರತೀಯರಾದ ನಮಗಂತೂ ದೀಪವಾರಿಸುವುದೆಂದರೆ ಜ್ಞಾನವನ್ನು ಹೊಸಕಿ ಹಾಕಿದಂತೆ.

ಇನ್ನು ನಮ್ಮದೇ ಮಾತೃ ಭಾಷೆಯಲ್ಲಿ ಕಾಗದ ಪತ್ರಗಳಿಗೆ ಸಹಿ ಹಾಕಿದರೆ ಅದನ್ನು ತಪ್ಪೆಂದು ಹೇಳುವವರು ಯಾರು? ಹಾಗೆ ಯಾರಾದರೂ ಅದು ತಪ್ಪೆಂದು ವಾದಿಸಿದರೆ ಅದಕ್ಕೆ ಆಧಾರವೇನು ಎಂದು ಕೇಳುವ ದಾರ್ಷ್ಟ್ಯ ನಮಗೇಕಿಲ್ಲ? ಇಂಗ್ಲಿಷ್‌ನಲ್ಲೇ ಸಹಿ ಹಾಕಬೇಕೆಂಬ ಭ್ರಮೆ ನಮಗೇಕೆ? ನಮ್ಮ ಬಂಧು-ಬಳಗಕ್ಕೆ ಸೇರಿದವರೆಲ್ಲರಿಗೂ ಕನ್ನಡ ಭಾಷೆ ಚೆನ್ನಾಗಿ ಗೊತ್ತಿದ್ದರೂ ನಮ್ಮ ಮನೆಯ ಮದುವೆ ಆಮಂತ್ರಣ ಪತ್ರಿಕೆಯನ್ನು ನಾವು ಇಂಗ್ಲಿಷ್‌ನಲ್ಲೇ ಮುದ್ರಿಸಿ ವಿತರಿಸುತ್ತೇವಲ್ಲ , ಇದು ಸರಿಯಲ್ಲವೆಂದು ನಮಗೇಕೆ ಅನಿಸುತ್ತಿಲ್ಲ? (ಈಗೀಗ ಕೆಲವರು ಶುದ್ಧ ಕನ್ನಡದಲ್ಲಿ ಅಥವಾ ಸಂಸ್ಕೃತದಲ್ಲಿ ಆಮಂತ್ರಣ ಪತ್ರಿಕೆ ಮುದ್ರಿಸುತ್ತಿರುವುದು ಒಂದು ಸಮಾಧಾನಕರ ಬೆಳವಣಿಗೆ.)

ಮೆಕಾಲೆ ಕನಸು ನನಸು!

೧೮೩೬ರಲ್ಲಿ ಲಾರ್ಡ್ ಮೆಕಾಲೆ ತನ್ನ ದೇಶಕ್ಕೆ ಬರೆದ ಒಂದು ಪತ್ರದಲ್ಲಿ ಹೀಗೆ ಹೇಳಿದ್ದ : ‘ ರಕ್ತ, ಬಣ್ಣಗಳಲ್ಲಿ ಮಾತ್ರ ಭಾರತೀಯರಾಗಿ, ಆದರೆ ಅಭಿಪ್ರಾಯ, ನೀತಿ, ಕಲ್ಪನೆ, ಬುದ್ಧಿ ಭಾವನೆಗಳಲ್ಲಿ ಇಂಗ್ಲಿಷರೇ ಆಗಿರುವಂತಹ ವರ್ಗವನ್ನು ನಾವೀಗ ಸೃಷ್ಟಿಸಬೇಕಾಗಿದೆ. ಅವರು ನಮ್ಮ-ನಮ್ಮ ಆಳ್ವಿಕೆಗೆ ಒಳಪಟ್ಟ ಕೋಟ್ಯಾವಧಿ ಮಂದಿಯ ನಡುವಣ ಸಂವಾದಕರಾದಾರು… ಇಂಗ್ಲಿಷ್ ವಿದ್ಯಾಭ್ಯಾಸ ಪಡೆದ ಯಾವ ಹಿಂದುವೂ ತನ್ನ ಧರ್ಮಕ್ಕೆ ನಿಷ್ಠೆಯಿಂದ ಉಳಿಯಲಾರ’. ಮೆಕಾಲೆ ಉzಶ ಇದೀಗ ಸಂಪೂರ್ಣವಾಗಿ ಈಡೇರಿದೆ. ಇಂಗ್ಲಿಷ್ ಶಿಕ್ಷಣದ ಮೂಲಕ ಕಪ್ಪು ಚರ್ಮದ ಬಿಳಿಯರನ್ನು ಭಾರತದಾದ್ಯಂತ ಆತ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾನೆ. ಆತನ ಆತ್ಮ ಗೋರಿಯಲ್ಲಿ ಸಂತೋಷದಿಂದ ನಕ್ಕಿರಬಹುದು! ಭಾರತೀಯರ ಮಾನಸಿಕತೆಯನ್ನು ಸಂಪೂರ್ಣ ಇಂಗ್ಲಿಷ್‌ಮಯವನ್ನಾಗಿ ಪರಿವರ್ತಿಸಿ, ಸ್ವಂತಿಕೆ, ಸ್ವಾಭಿಮಾನವನ್ನು ಶಾಶ್ವತವಾಗಿ ಕಳೆದುಕೊಳ್ಳುವಂತೆ ಮಾಡಿದ ಮೆಕಾಲೆಯ ‘ಸಾಧನೆ’ಯನ್ನು ಅದೆಷ್ಟು ಕೊಂಡಾಡಿದರೂ ಸಾಲದು!

ಈಗ ವಿಷಯಕ್ಕೆ ಬರೋಣ. ಬ್ರಿಟಿಷರು ಭಾರತದ ಸ್ವಾತಂತ್ರ್ಯ ಕಸಿದುಕೊಂಡಂತೆ ನಮ್ಮ ನೆರೆಯ ಸಿಂಹಳದ ಸ್ವಾತಂತ್ರ್ಯವನ್ನೂ ಕಸಿದುಕೊಂಡಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದಂತೆ ಸಿಂಹಳಕ್ಕೂ ಬಂದಿತು. ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದಾಗ ಸಿಂಹಳ ‘ಸಿಲೋನ್’ ಎಂದಾಗಿತ್ತು. ಆದರೆ ಬ್ರಿಟಿಷರ ಆಳ್ವಿಕೆ ತೊಲಗಿದ ಬಳಿಕ ಆ ದೇಶ ಮತ್ತೆ ತನ್ನ ಅಸ್ಮಿತೆಯನ್ನು ನೆನಪಿಸಿಕೊಂಡು ಸಿಲೋನ್ ಎಂದಾಗಿದ್ದ ದೇಶದ ಹೆಸರನ್ನು ‘ಶ್ರೀಲಂಕಾ’ ಎಂದು ಬದಲಾಯಿಸಿಕೊಂಡು ಸಂಭ್ರಮಪಟ್ಟಿದೆ. ಅದೇ ರೀತಿ ನಮ್ಮ ನೆರೆಯ ಬರ್ಮಾ ದೇಶ ಕೂಡ ತನ್ನ ಹೆಸರನ್ನು ‘ಮ್ಯಾನ್ಮಾರ್’ ಎಂದು ಬದಲಿಸಿಕೊಂಡು ಸ್ವಾಭಿಮಾನ ಮೆರೆದಿದೆ. ಭಾರತದೊಳಗೇ ಇರುವ ಮದ್ರಾಸ್ ಈಗ ಚೆನ್ನೈ ಆಗಿದೆ. ಬ್ರಿಟಿಷರ ನಾಲಿಗೆ ತಿರುಗದ ಬಾಯಲ್ಲಿ ‘ಬಾಂಬೆ’ ಆಗಿದ್ದ ವಾಣಿಜ್ಯ ನಗರಿ ಈಗ ಮುಂಬೈ ಆಗಿ ಝಗಮಗಿಸಿದೆ. ಬ್ಯಾಂಗಲೋರ್ ಈಗ ‘ಬೆಂಗಳೂರು’ ಆಗಿದೆ. ಶಿಮೊಗ ಈಗ ‘ಶಿವಮೊಗ್ಗ’ವಾಗಿ ಅಸಲಿತನ ಪಡೆದುಕೊಂಡಿದೆ. ಹುಬ್ಳಿ ‘ಹುಬ್ಬಳ್ಳಿ’ಯಾಗಿದೆ. ಒರಿಸ್ಸಾ ‘ಒಡಿಶಾ’ ಆಗಿದೆ. ಕಲ್ಕಟಾ ‘ಕೋಲ್ಕೊತ್ತಾ’ ಆಗಿ ಬದಲಾಗಿದೆ.

ಇಷ್ಟಾದರೆ ಸಾಕೆ? ಬ್ರಿಟಿಷರ ಬಾಯಲ್ಲಿ ವಿಕೃತಗೊಂಡ ಉಳಿದ ಹೆಸರುಗಳು ಹಾಗೆಯೇ ಇರಬೇಕೆ? ಹಿಮಾಲಯದ ಕಾಂಚನಗಂಗಾ ಎಂಬ ಶಿಖರದ ಸುಂದರ ಹೆಸರು ಬ್ರಿಟಿಷರ ಬಾಯಲ್ಲಿ ಕಿಂಚಿನ್‌ಚುಂಗಾ ಎಂದಾಗಿತ್ತು. ಪಠ್ಯಪುಸ್ತಕಗಳಲ್ಲೂ ಹಾಗೆಯೇ ನಮೂದಾಗಿದೆ. ಕಾಂಚನಗಂಗಾ ಎನ್ನುವಾಗ ಭಾರತೀಯರ ಮನದಲ್ಲಿ ಮೂಡುವ ಶ್ರದ್ಧೆ, ಗೌರವ ಕಿಂಚಿನ್‌ಚುಂಗಾ ಎಂದಾಗ ಮೂಡಲು ಸಾಧ್ಯವೆ?

ಭಾರತ-ಪ್ರಾಚೀನ ಹೆಸರು

ಅದ್ಯಾವ ಪಾಪಿ ಈ ದೇಶವನ್ನು ‘ಇಂಡಿಯಾ’ ಎಂದು ಕರೆದನೋ ದೇವರಿಗೂ ಗೊತ್ತಿರಲಿಕ್ಕಿಲ್ಲ. ವಾಸ್ತವವಾಗಿ ಈ ದೇಶದ ಹೆಸರು ಭಾರತವೆಂಬುದು ಸಹಸ್ರಾರು ವರ್ಷಗಳಿಂದಲೂ ಕೇಳಿಬರುತ್ತಿದೆ. ‘ಗಾಯಂತಿ ದೇವಾಃ ಕಿಲ ಗೀತಕಾನಿ ಧನ್ಯಾಸ್ತುಯೇ ಭಾರತ ಭೂಮಿ ಭಾಗೇ|’ (ಸ್ವರ್ಗಕ್ಕೆ, ಮುಕ್ತಿಗೆ ದ್ವಾರವಾದ ಭಾರತದಲ್ಲಿ ಹುಟ್ಟಿದವರು ದೇವತೆಗಳಿಗಿಂತ ಧನ್ಯರು) – ಹೀಗೆಂದು ಪ್ರಾಚೀನ ವೇದಗಳೇ ಸಾರಿವೆ. ‘ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಬೈವ ದಕ್ಷಿಣಂ| ವರ್ಷಂ ತದ್ ಭಾರತಂ ನಾಮ ಭಾರತೀ ಯತ್ರ ಸಂತತಿಃ||’ (ಸಾಗರಗಳಿಂದ ಉತ್ತರಕ್ಕೆ ಮತ್ತು ಹಿಮಾಲಯದಿಂದ ದಕ್ಷಿಣಕ್ಕೆ ಇರುವ ಭೂಮಿಗೆ ಭರತ ವರ್ಷ ಎಂದು ಹೆಸರು. ಭಾರತೀಯರು ಇದರ ಮಕ್ಕಳು) –  ಈ ಮಾತನ್ನು ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಿಕರು ಹೇಳಿದ್ದಾರೆ. ಅಲ್ಲೆಲ್ಲೂ ಈ ದೇಶದ ಹೆಸರು ಇಂಡಿಯಾ ಎಂದು ಉಲ್ಲೇಖವಾಗಿಲ್ಲ. ಭಾರತವೆಂದೇ ಉಲ್ಲೇಖವಾಗಿದೆ. ಧಾರ್ಮಿಕ ಕ್ರಿಯೆಗಳಲ್ಲಿ ಮಂತ್ರಪಠಣ ಮಾಡುವಾಗಲೂ ‘ಭರತವರ್ಷೇ ಭರತಖಂಡೇ ಜಂಬೂದ್ವೀಪೇ…’ ಎಂದೇ ಈ ದೇಶದ ಪರಿಚಯವನ್ನು ಹೇಳಲಾಗುತ್ತದೆ. ರಾಷ್ಟ್ರಕವಿ ಕುವೆಂಪು ‘ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಎಂದು ಈ ದೇಶವನ್ನು ಹಾಡಿ ಹೊಗಳಿದ್ದಾರೆಯೇ ಹೊರತು, ‘ಇಂಡಿಯಾ ಜನನಿಯ ತನುಜಾತೆ…’ ಎಂದು ಅಪ್ಪಿತಪ್ಪಿಯೂ ಹೇಳಿಲ್ಲ. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸಂದರ್ಭಗಳಲ್ಲಿ ನಾವೆಲ್ಲ ‘ಭಾರತ ಮಾತಾ ಕೀ ಜೈ’ ಎಂದು ಘೋಷಣೆ ಹಾಕುತ್ತೇವೆಯೇ ಹೊರತು ‘ಇಂಡಿಯಾ ಮಾತಾ ಕೀ ಜೈ’ ಎಂದು ಹೇಳುವುದಿಲ್ಲ. ಹಾಗಿದ್ದರೆ ಇಂಡಿಯಾ ಎಂಬ ಹೆಸರು ಈ ದೇಶಕ್ಕೆ ಅಂಟಿಕೊಂಡಿದ್ದಾದರೂ ಹೇಗೆ? ಅದಕ್ಕೇಕೆ ಇನ್ನೂ ಜೋತು ಬಿದ್ದಿzವೆ?

ಈ ಪ್ರಶ್ನೆಗೆ ಎನ್‌ಸೈಕ್ಲೋಪೀಡಿಯಾ, ಇತಿಹಾಸದ ಪುಸ್ತಕಗಳು… ಇತ್ಯಾದಿಗಳನ್ನು ಜಾಲಾಡಿದರೂ ಸೂಕ್ತ ಉತ್ತರ ಮಾತ್ರ ದೊರಕುವುದಿಲ್ಲ. ಭಾರತಕ್ಕೆ ಹಿಂದುಸ್ಥಾನ ಎಂಬ ಹೆಸರಿತ್ತು ಎಂಬ ಬಗ್ಗೆ ಇತಿಹಾಸದ ಪುಟಗಳಲ್ಲಿ ಸಾಕಷ್ಟು ಹೇರಳ ಉಲ್ಲೇಖಗಳಿವೆ. ಭಾರತ ಸಿಂಧೂ ನದಿಯ ತೀರದಲ್ಲಿದ್ದುದರಿಂದ ಪರ್ಶಿಯನ್ನರು, ಅವರ ಭಾಷೆಯಲ್ಲಿ ಸಕಾರ ಹಕಾರ ಆಗುವುದರಿಂದ ಸಿಂಧೂ ನದಿಯನ್ನು ‘ಇಂಡಸ್’ ಎಂದು ಕರೆದರೆಂದು, ಅದಾದ ಮೇಲೆ ೨೫೦೦ ವರ್ಷಗಳ ಹಿಂದೆ ಗ್ರೀಕರು ಇದನ್ನು ‘ಇಂಡೋಸ್’ ಎಂದು ಕರೆದು, ಅನಂತರ ಲ್ಯಾಟಿನ್ ಭಾಷೆಯಲ್ಲಿ ಅದು ‘ಇಂಡಸ್’ ಆಗಿ ಮಾರ್ಪಟ್ಟಿತೆಂದೂ ಒಂದು ಅಧ್ಯಯನ ತಿಳಿಸುತ್ತದೆ. ಇಂಡಸ್ ನದಿಯ ತೀರದಲ್ಲಿರುವ ದೇಶವನ್ನು ‘ಇಂಡಿಯಾ’ ಎಂದು ಯುರೋಪಿಯನ್ನರು ಅನಂತರ ಕರೆಯತೊಡಗಿದರೆಂದು ಈ ಅಧ್ಯಯನದ ಸಾರ. ಸರಸ್ವತಿ-ಸಿಂಧೂ ಸಿವಿಲೈಜೇಶನ್ ಎಂಬುದು ಇಂಡಸ್ ವ್ಯಾಲಿ ಸಿವಿಲೈಜೇಶನ್ ಎಂದು ವಿಕೃತಗೊಂಡು ಪಠ್ಯಪುಸ್ತಕಗಳಲ್ಲಿ ಈಗಲೂ ಹಾಗೆಯೇ ಉಳಿದಿದೆ. ಬ್ರಿಟಿಷರು ವ್ಯಾಪಾರಕ್ಕೆಂದು ತಕ್ಕಡಿ ಹಿಡಿದು ಭಾರತಕ್ಕೆ ಬಂದ ಬಳಿಕ ಈ ದೇಶವನ್ನು ಇಂಡಿಯಾ ಎಂದೇ ಕರೆದಿರಬಹುದು. ಏಕೆಂದರೆ ಅವರು ಈ ದೇಶವನ್ನು ಉದ್ಧಾರ ಮಾಡುವುದಕ್ಕೆಂದು ಬಂದಿರಲಿಲ್ಲ. ಇಲ್ಲಿನ ಸಂಪತ್ತನ್ನು ದೋಚಿ, ಇಲ್ಲಿನ ನಾಗರಿಕತೆ, ಸಂಸ್ಕೃತಿ, ಸದಾಚಾರಗಳನ್ನು ಅಳಿಸಿ ಹಾಕಿ, ಇದನ್ನೊಂದು ಗುಲಾಮೀ ರಾಷ್ಟ್ರ ಮಾಡಬೇಕೆಂಬುದೇ ಅವರ ಹಿಡನ್ ಅಜೆಂಡಾ ಆಗಿತ್ತು. ಆ ಪ್ರಯತ್ನದಲ್ಲಿ ಅವರು ಯಶಸ್ವಿಯೂ ಆದರು. ಅದು ಈಗ ಇತಿಹಾಸ.

ನೆಹರು ಮನಸ್ಸು ಮಾಡಲಿಲ್ಲ

ಹೀಗೆ ಯಾವುದೋ ಕಾರಣಕ್ಕೆ, ಯಾರದೋ ತೆವಲಿಗೆ ಅಥವಾ ಇನ್ನಾರದೋ ಕುತಂತ್ರಕ್ಕೆ ‘ಇಂಡಿಯಾ’ ಎಂದು ವಿಕೃತಗೊಂಡ ಈ ದೇಶದ ಹೆಸರನ್ನು ಸ್ವಾತಂತ್ರ್ಯ ಬಂದ ಬಳಿಕ ಮತ್ತೆ ಸರಿಪಡಿಸಬೇಕೆಂಬ ತುಡಿತ ದೇಶದ ಆಡಳಿತ ಸೂತ್ರ ಹಿಡಿದ ಮೊಟ್ಟ ಮೊದಲ ಪ್ರಧಾನಿಗೆ ಇರಬೇಕಾಗಿತ್ತು. ಇಂಡಿಯಾ ಎಂದಾಗಿದ್ದನ್ನು ಭಾರತವೆಂದು ಬದಲಿಸಿದ್ದರೆ ಅದಕ್ಕೆ ತಕರಾರು ತೆಗೆಯುವವರು ಆಗ ಯಾರೂ ಇರಲಿಲ್ಲ. ಬ್ರಿಟಿಷರಂತೂ ಖಂಡಿತ ಮತ್ತೆ ಭಾರತದ ಮೇಲೆ ಆಕ್ರಮಣ ಮಾಡಿ ಇಲ್ಲಿ ರಾಜ್ಯಭಾರ ಮಾಡುತ್ತಿರಲಿಲ್ಲ! ಆದರೆ..? ನಮ್ಮ ಮೊಟ್ಟ ಮೊದಲ ಪ್ರಧಾನಿ ಪಂಡಿತ್ ನೆಹರು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಲೇ ಇಲ್ಲ. ೧೯೪೯ರ ನವೆಂಬರ್ ೨೪ರಂದು ಭಾರತಕ್ಕೊಂದು ಹೊಸ ಸಂವಿಧಾನ (ಅoಟಿsಣiಣuಣioಟಿ) ಸ್ವೀಕರಿಸಿದಾಗ ಅಲ್ಲಿ ದೇಶದ ಹೆಸರು ಉಲ್ಲೇಖವಾಗಿದ್ದುದು ‘Iಟಿಜiಚಿ ಣhಚಿಣ is ಃhಚಿಡಿಚಿಣ’ ಎಂದಾಗಿತ್ತು. ಅಂದರೆ ಭಾರತವನ್ನು ಇಂಡಿಯಾ ಎಂಬ ಹೆಸರಿನಿಂದ ಗುರುತಿಸಬೇಕು ಎಂಬುದು ಇದರ ಆಶಯ! ಸಂವಿಧಾನ ರಚನೆಯ ಸಮಿತಿಯಲ್ಲಿದ್ದ ಹಲವು ಗಣ್ಯರು ಈ ದೇಶದ ಹೆಸರು ಭಾರತ ಎಂದೇ ಇರಬೇಕೆಂದು ಆಗ್ರಹಿಸಿದ್ದರು. ಪಂಡಿತ್ ನೆಹರು ಮಾತ್ರ ಅದಕ್ಕೆ ಕಿವಿಗೊಡಲೇ ಇಲ್ಲ.

ಇದಕ್ಕೂ ಮುನ್ನ ೧೯೪೮ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದೇಶದಾದ್ಯಂತ ಒಂದು ಬೃಹತ್ ಆಂದೋಲನ ಹಮ್ಮಿಕೊಂಡಿತ್ತು. ದೇಶವಾಸಿಗಳಿಂದ ಅದು ೩ ಮುಖ್ಯ ಪ್ರಶ್ನೆಗಳ ಬಗ್ಗೆ ಅಭಿಮತ ಬಯಸಿ, ಸಾಮೂಹಿಕ ಸಹಿ ಸಂಗ್ರಹ ನಡೆಸಿತ್ತು. ಆ ಮೂರು ಮುಖ್ಯ ಪ್ರಶ್ನೆಗಳೆಂದರೆ: ೧. ಈ ದೇಶದ ಹೆಸರು ಯಾವುದಿರಬೇಕು – ಭಾರತ ಅಥವಾ ಇಂಡಿಯಾ? ೨. ಈ ದೇಶದ ರಾಷ್ಟ್ರ ಗೀತೆ ಯಾವುದಿರಬೇಕು – ವಂದೇ ಮಾತರಂ ಅಥವಾ ಜನಗಣಮನ? ೩. ಈ ದೇಶದ ರಾಷ್ಟ್ರ ಭಾಷೆ ಯಾವುದಿರಬೇಕು – ಹಿಂದಿ ಅಥವಾ ಇಂಗ್ಲಿಷ್? ವಿದ್ಯಾರ್ಥಿ ಪರಿಷತ್ ನಡೆಸಿದ ಈ ಆಂದೋಲನಕ್ಕೆ ದೇಶವಾಸಿಗಳಿಂದ ಭಾರೀ ಪ್ರತಿಸ್ಪಂದನ ವ್ಯಕ್ತವಾಗಿತ್ತು. ಮನವಿಗೆ ಸಹಿ ಹಾಕಿದ ಬಹುತೇಕ ಮಂದಿ ದೇಶದ ಹೆಸರು – ಭಾರತ, ರಾಷ್ಟ್ರಗೀತೆ – ವಂದೇ ಮಾತರಂ ಹಾಗೂ ರಾಷ್ಟ್ರ ಭಾಷೆ – ಹಿಂದಿ ಆಗಿರಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದ್ದರು. ಸಂವಿಧಾನ ರಚನಾ ಸಮಿತಿ ಸಭೆಯಲ್ಲೂ ಈ ವಿಷಯ ಚರ್ಚೆಗೆ ಬಂದಿತ್ತು. ಆದರೂ ಅಂತಿಮವಾಗಿ ನೆಹರು ಅವರ ಅಭಿಪ್ರಾಯಕ್ಕೆ ಎಲ್ಲರೂ ಮೂಕ ಸಾಕ್ಷಿಗಳಾದರು. ಹೀಗಾಗಿ ದೇಶದ ಹೆಸರು ಇಂಡಿಯಾ ಎಂದೇ ಉಳಿಯಿತು. ವಂದೇ ಮಾತರಂ ರಾಷ್ಟ್ರಗೀತೆಯ ಸ್ಥಾನಮಾನ ಪಡೆದುಕೊಂಡರೂ ಅಧಿಕೃತವಾಗಿ ಜನಗಣಮನ ಪ್ರಸಿದ್ಧಿಗೆ ಬಂತು. ಹಿಂದಿಯಂತೂ ರಾಷ್ಟ್ರಭಾಷೆ ಆಗಲೇ ಇಲ್ಲ.

೧೯೧೦ರಷ್ಟು ಹಿಂದೆಯೇ ಶ್ರೀ ಅರವಿಂದ ಘೋಷ್ ಸಾರಿದ್ದರು: ‘ನಮಗೆ ತೋಚಿದಂತೆ ಆಯ್ದು, ಯಾವುದೋ ಹೆಸರಿಲ್ಲದ ಕಲಸು ಮೇಲೋಗರವನ್ನು ಸೃಷ್ಟಿಸಿ, ಅದನ್ನು ಹೆಮ್ಮೆಯಿಂದ ಪೂರ್ವ ಹಾಗೂ ಪಶ್ಚಿಮಗಳ ಸಮನ್ವಯವೆಂದು ಕರೆಯದಿರೋಣ. ಯಾವುದೇ ಮೂಲದಿಂದ ಬಂದ ಏನನ್ನೇ ಆಗಲಿ ನಾವು ಅಂಧವಿಶ್ವಾಸದಿಂದ ಒಪ್ಪಿಕೊಳ್ಳದೇ ಪ್ರತಿಯೊಂದನ್ನೂ ಪ್ರಶ್ನಿಸಬೇಕು. ನಮ್ಮದೇ ಆದ ನಿರ್ಣಯಗಳಿಗೆ ಬರಬೇಕು. ಈ ರೀತಿ ಮಾಡುವುದರಿಂದ ನಾವು ಭಾರತೀಯರಾಗಿ ಉಳಿಯುವುದಿಲ್ಲವೆಂದು ಅಥವಾ ಹಿಂದೂಧರ್ಮವನ್ನು ತ್ಯಜಿಸಿದಂತಾಗುವುದೆಂದು ಭಯಪಡಬೇಕಾಗಿಲ್ಲ. ನಾವು ಸ್ವತಂತ್ರವಾಗಿ ಆಲೋಚಿಸಲು ಕಲಿತರೆ ಎಂದಿಗೂ ಭಾರತ ಭಾರತವಾಗಿ ಉಳಿಯಲಿದೆ.’ ಅರವಿಂದ ಘೋಷ್ ಅವರ ಈ ಚಿಂತನೆ ಪಂಡಿತ್ ನೆಹರು ಅವರಲ್ಲಿ ಮೂಡಲೇ ಇಲ್ಲ. ಅರವಿಂದರು ಬಾಲ್ಯದಿಂದಲೂ ಪಾಶ್ಚಾತ್ಯ ಶಿಕ್ಷಣದ ಪ್ರಭಾವದಲ್ಲಿ ಬೆಳೆದಿದ್ದರೂ ಭಾರತೀಯ ಚಿಂತನೆ ಬೆಳೆಸಿಕೊಂಡಿದ್ದರು. ದೇಶಕ್ಕೆ ಯಾವುದು ವಿಹಿತ, ಯಾವುದು ವಿಹಿತವಲ್ಲ ಎನ್ನುವ ಸೂಕ್ಷ್ಮ ಪರಿಜ್ಞಾನ ಅವರಿಗೆ ನಿರಂತರವಾಗಿತ್ತು. ನೆಹರು ಮಾತ್ರ ತಮ್ಮ ಬಾಳಿನುದ್ದಕ್ಕೂ ಪಾಶ್ಚಿಮಾತ್ಯ ಚಿಂತನೆ, ಪದ್ಧತಿ, ಸಂಪ್ರದಾಯಗಳಿಗೆ ಮಾರುಹೋಗಿ ಸ್ವಂತಿಕೆ, ಸ್ವಾಭಿಮಾನಗಳಿಗೆ ತಿಲಾಂಜಲಿ ನೀಡಿದ್ದರು. ಇಂತಹ ಒಬ್ಬ ವ್ಯಕ್ತಿಯನ್ನು ಗಾಂಧೀಜಿಯಂತಹ ಅಪ್ಪಟ ದೇಸೀ ಚಿಂತನೆಯ ದೇಶಪ್ರೇಮಿ ಅದು ಹೇಗೆ ಈ ದೇಶದ ಮೊಟ್ಟಮೊದಲ ಪ್ರಧಾನಿ ಸ್ಥಾನಕ್ಕೆ ಆಯ್ಕೆ ಮಾಡಿದರೋ… ಅರ್ಥವಾಗುತ್ತಿಲ್ಲ.

ಇಚ್ಛಾಶಕ್ತಿ ಇದ್ದರೆ ಸಾಧ್ಯ

ಬಿಡಿ, ಇವೆಲ್ಲ ಹಿಂದಿನ ಇತಿಹಾಸ. ಅದನ್ನೇ ಚುಯಿಂಗ್‌ಗಮ್‌ನಂತೆ ಜಗಿಯುತ್ತಿದ್ದರೆ ಏನು ಪ್ರಯೋಜನ? ಈಗ ಬ್ರಿಟಿಷರ ಆಡಳಿತ ಇಲ್ಲಿಲ್ಲ. ನೆಹರು ಕೂಡ ಈಗಿಲ್ಲ. ಸಿಲೋನ್‌ನಂತಹ ಪುಟ್ಟ ದೇಶ ಶ್ರೀಲಂಕಾ ಆಗಿ ಸ್ವಾಭಿಮಾನದಿಂದ ತಲೆಯೆತ್ತಬಹುದಾದರೆ, ಬರ್ಮಾ ಮ್ಯಾನ್ಮಾರ್ ಆಗಿ ಹೆಮ್ಮೆ ಪಡಬಹುದಾದರೆ ಭಾರತದಂತಹ ದೊಡ್ಡ ದೇಶ ಇನ್ನೂ ಜಾಗತಿಕ ನಕ್ಷೆಯಲ್ಲಿ ‘ಇಂಡಿಯಾ’ ಎಂದು ಬ್ರಿಟಿಷರು ತಿರುಚಿದ ಅದೇ ವಿಕೃತ ಹೆಸರಿನಲ್ಲಿ ಉಳಿಯಬೇಕೆ? ಇಂಡಿಯಾ ಎಂಬ ಹೆಸರನ್ನು ಭಾರತ ಎಂದು ಬದಲಿಸಲು ಆಡಳಿತ ಸೂತ್ರ ಹಿಡಿದವರು ಯಾವುದೇ ಯುದ್ಧ ಮಾಡಬೇಕಾಗಿಲ್ಲ. ಬಂದೂಕು ಹಿಡಿಯಬೇಕಾಗಿಲ್ಲ. ಆದರೆ ಸಂಸತ್ತಿನಲ್ಲಿ ಈ ಬಗ್ಗೆ ಒಂದು ಮಸೂದೆಯನ್ನು ಮಂಡಿಸಿ, ಸರ್ವಾನುಮತದಿಂದ ಅದನ್ನು ಅಂಗೀಕರಿಸಬೇಕು, ಅಷ್ಟೆ. ಆದರೆ ಇದಕ್ಕೂ ಆಳುವವರಲ್ಲಿ ಇಚ್ಛಾಶಕ್ತಿ ಇಲ್ಲದಿದ್ದರೆ ‘ಇಂಡಿಯಾ’ ಭಾರತವಾಗದೆ ಶಾಪಗ್ರಸ್ತವಾಗಿಯೇ ಉಳಿಯುತ್ತದೆ.

ಸಿಲೋನ್‌ನಂತಹ ಪುಟ್ಟ ದೇಶ ಶ್ರೀಲಂಕಾ ಆಗಿ ಸ್ವಾಭಿಮಾನದಿಂದ ತಲೆಯೆತ್ತಬಹುದಾದರೆ, ಬರ್ಮಾ ಮ್ಯಾನ್ಮಾರ್ ಆಗಿ ಹೆಮ್ಮೆ ಪಡಬಹುದಾದರೆ ಭಾರತದಂತಹ ದೊಡ್ಡ ದೇಶ ಇನ್ನೂ ಜಾಗತಿಕ ನಕ್ಷೆಯಲ್ಲಿ ‘ಇಂಡಿಯಾ’ ಎಂದು ಬ್ರಿಟಿಷರು ತಿರುಚಿದ ಅದೇ ವಿಕೃತ ಹೆಸರಿನಲ್ಲಿ ಉಳಿಯಬೇಕೆ? ಇಂಡಿಯಾ ಎಂಬ ಹೆಸರನ್ನು ಭಾರತ ಎಂದು ಬದಲಿಸಲು ಆಡಳಿತ ಸೂತ್ರ ಹಿಡಿದವರು ಯಾವುದೇ ಯುದ್ಧ ಮಾಡಬೇಕಾಗಿಲ್ಲ. ಬಂದೂಕು ಹಿಡಿಯಬೇಕಾಗಿಲ್ಲ. ಆದರೆ ಸಂಸತ್ತಿನಲ್ಲಿ ಈ ಬಗ್ಗೆ ಒಂದು ಮಸೂದೆಯನ್ನು ಮಂಡಿಸಿ, ಸರ್ವಾನುಮತದಿಂದ ಅದನ್ನು ಅಂಗೀಕರಿಸಬೇಕು, ಅಷ್ಟೆ.

 

Leave a Reply

Your email address will not be published.

This site uses Akismet to reduce spam. Learn how your comment data is processed.