Paivalike ಪೈವಳಿಕೆ  August 27: ಪೈವಳಿಕೆ ಪಂಚಾಯತ್ ಮಟ್ಟದ ಯುವಸಮಾವೇಶವು ಅಗಸ್ಟ್ 25 ರಂದು ಕಾಯರ್ ಕಟ್ಟೆ ಸರಕಾರಿ  ಪ್ರೌಢ ಶಾಲೆಯಲ್ಲಿ ನಡೆಯಿತು.ಯುವಸಮಾವೇಶದ ಉದ್ಘಾಟನೆಯ ನಂತರ ಉಪನ್ಯಾಸಕರಾಗಿ  ಬಂದ ಮೂಡಬಿದಿರೆಯ ಆಳ್ವಾಸ್ ಕಾಲೇಜ್ ಶ್ರೀ ಆದಿತ್ಯ ಭಟ್,ಮಾತನಾಡಿ ರಾಷ್ಟ್ರೀಯ ಚಿಂತಕರೊಬ್ಬರು ನಮ್ಮಲ್ಲಿ ಭಾರತ ಹಾಗೂ ಇಂಡಿಯಾ  ಎಂಬ ಎರಡು ಸಂಸ್ಕೃತಿ ಇದೆ.’ಇಂಡಿಯಾ ಎಲ್ಲಾ ಕಡೆಗಳಲ್ಲೂ ಕಾಣಲು ಸಾಧ್ಯ ,ಆದರೆ ‘ಭಾರತ ‘ ವನ್ನು ಕಾಣುವುದು ತುಂಬಾ ಕಷ್ಟ ,ಆದರೆ  ಇಲ್ಲಿ  ಇಂದು ಯುವ ಭಾರತವನ್ನು  ಕಾಣುತ್ತಿದ್ದೇನೆ  ಎಂದರು. ಸ್ವಾಮೀ ವಿವೇಕಾನಂದರ ತತ್ವ ಸಿದ್ಧಾಂತಗಳ ಅಧ್ಯಯನ ಹಾಗೂ ಆಚರಣೆ  ಯಾಕೆ ಮಾಡಬೇಕು ಎಂಬುದನ್ನು ನಾವೆಲ್ಲರೂ ತಿಳಿಯಲೇಬೇಕು.

yuva samavesha (2)
ಭಾರತದಲ್ಲಿ ಸುಮಾರು 30  ವರ್ಷಗಳ ಕಾಲ ಇದ್ದ ಇಂಗ್ಲೆಂಡ್ ಮೆಕೋಲೆ ಎನ್ನುವ ವಿದ್ವಾಂಸ 1834ರಲ್ಲಿ ತನ್ನ ದೇಶಕ್ಕೆ ಮರಳಿ ಅಲ್ಲಿಯ ಪಾರ್ಲಿಮೆಂಟ್ ನಲ್ಲಿ ತನ್ನಅಧ್ಯಯನದ ವರದಿ ಕೊಡುತ್ತಾನೆ. ಅದರಲ್ಲಿ ಆತ “ನಾನು ಭಾರತದ ಉದ್ದಗಲಕ್ಕೂ ಸುಮಾರು  30 ವರ್ಷ ತಿರುಗಿದ್ದೇನೆ, ಆದರೆ  ಒಬ್ಬನೇ ಒಬ್ಬ ಭಿಕ್ಷುಕನನ್ನು  ನೋಡಲಿಲ್ಲ “. ಆದರೆ ಭಾರತದಲ್ಲಿ ಇಂದು 34% ಜನರಿಗೆ ಎರಡು ಹೊತ್ತಿನ ಊಟ ದೊರೆಯುತ್ತಿಲ್ಲ ಎಂಬುದು ಬೇಸರದ ಸಂಗತಿ . ಅಷ್ಟೇ ಅಲ್ಲ ನಮ್ಮ ದೆಹಲಿಯೊಂದರಲ್ಲೇ ಚಳಿಯಿಂದ ಸಾಯುವರ ಸಂಖ್ಯೆ  ವರ್ಷಕ್ಕೆ ಸರಾಸರಿ 60. ಅಷ್ಟೇ ಅಲ್ಲದೆ ಮಹಿಳೆಯರ ಮೇಲಿನ ದೌರ್ಜನ್ಯ , ಮಾದಕ ವ್ಯಸನ  ಹಾಗೂ ಕೊಲೆ ಮೊದಲಾದುವುಗಳು ಹೆಚ್ಚಾಗಿವೆ.
ವಿವೇಕಾನಂದರ ಸಿದ್ಧಾಂತ ಗಳ ಅನುಷ್ಠಾನವನ್ನು ಸರಕಾರ ಹಾಗೂ ನಾವು ಮಾಡುತ್ತಿದ್ದರೆ  ಖಂಡಿತ ಈ ಸಾಮಾಜಿಕ ಸಮಸ್ಯೆಗಳು ಬರುತ್ತಿರಲಿಲ್ಲ.
ಮಹಾನ್ ವ್ಯಕ್ತಿ ಗಳನ್ನು  ಎರಡು  ರೀತಿಯಲ್ಲಿ ಕೊಲೆ ಮಾಡುತ್ತೇವೆ ಎಂದು ಹೇಳಬಹುದು. ಮೊದಲನೆಯದಾಗಿ ಮಹಾನ್ ವ್ಯಕ್ತಿಯೊಬ್ಬರನ್ನು ಕೇವಲ ಅವರ ಜೀವನದ ಯಾವುದೋ ಒಂದು ಘಟನೆ , ಅಥವಾ ಅವರ ಒಂದು ಗುಣದ ಆಧಾರದಲ್ಲಿ ಮಾತ್ರ ಗುರುತಿಸಿ ಅವರ ಇನ್ನಿತರ ಚಿಂತನೆಯನ್ನು ಅಧ್ಯಯನ ನಡೆಸದೆ ಇರುವುದಾಗಿದೆ . ಉದಾಹರಣೆಗೆ ಸ್ವಾಮಿ ವಿವೇಕಾನಂದ ಅಂದಾಗ ಚಿಕಾಗೋ  ಭಾಷಣ , ಗಾಂಧೀಜಿ -ಅಹಿಂಸೆ ,ಭಗತ್ ಸಿಂಗ್ – ಹಿಂಸಾತ್ಮಕ ಹೋರಾಟ ಎಂಬುದಾಗಿ ಗುರುತಿಸುತ್ತೇವೆ . ಎರಡನೇ ರೀತಿಯಲ್ಲಿ ನಾವು ಮಹಾನ್ ವ್ಯಕ್ತಿಯ ಮೂರ್ತಿಯನ್ನು ಸ್ಥಾಪಿಸಿ , ಅವರ ಸಿದ್ಧಾಂತವನ್ನು ಕಾರ್ಯರೋಪಕ್ಕೆ ತರದೇ ಅಷ್ಟಕ್ಕೇ ಬಿಟ್ಟು ಬಿಡುವುದಾಗಿದೆ . ಈಗ ಕಾಲ ಬಂದಿದೆ,ಹಾಗಾಗಿ ಇಂತಹ ಕಾರ್ಯಕ್ರ ಮಗಳ ಮೂಲಕ ಸ್ವಾಮೀ ವಿವೇಕಾನಂದರ ತತ್ವ ಸಿದ್ಧಾಂತಗಳನ್ನು ಕಾರ್ಯರೂಪಕ್ಕೆ ತರುವುದರ ಮೂಲಕ ಅವರಿಗೆ ನಿಜವಾದ ನಮನವನ್ನು ಸಲ್ಲಿಸಬೇಕು ಎಂದರು .
ಸ್ವಾಮೀ ವಿವೇಕಾನಂದರು ಸಮಾಜಸುಧಾರಕರಾಗಿ ವಿದ್ಯಾಭಾಸ,ಬಡವರು ಹಾಗೂ  ದೀನ ದಲಿತರ ಸೇವೆ ಮೊದಲಾದ ವಿಷಯಗಳಲ್ಲಿ ಅನೇಕ ಕ್ರಾಂತಿಯನ್ನು ಮಾಡಿದವರಾಗಿದ್ದಾರೆ. ಒಮ್ಮೆ  ಪಶ್ಚಿಮ ಬಂಗಾಳದಲ್ಲಿ ಒಂದು ವಾರದ ಉಪನ್ಯಾಸದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಪ್ರತಿದಿನ ಪ್ರಶ್ನೆಗಳನ್ನು ಕೇಳುತ್ತಿದ್ದ , ಆದರೆ ಸ್ವಾಮೀಜಿ ಅವನ ಪ್ರಶ್ನೆಗಳಿಗೆ ಉತ್ತರಿಸುತ್ತಿರಲಿಲ್ಲ . ಅದಕ್ಕೆ ಕಾರಣವನ್ನು ಕೇಳಿದಾಗ , ಪ್ರಶ್ನೆ ಕೇಳಿದ ವ್ಯಕ್ತಿ ಯಾವುದೇ ರೀತಿಯಲ್ಲಿ ಇತರರಿಗೆ ಸಹಾಯ ಮಾಡಿದ ವ್ಯಕ್ತಿಯಲ್ಲ,ಹಾಗಾಗಿ ಅಂಥವನ ಪ್ರಶ್ನೆಗೆ ಉತ್ತರ ಕೊಡುವುದು ವ್ಯರ್ಥ ಎಂಬ ಕಾರಣವನ್ನು ಸ್ವಾಮೀಜಿ ಕೊಡುತ್ತಾರೆ. ಹಾಗೆಯೇ 1894 ರಲ್ಲಿ ಮೈಸೂರಿನ ಮಹಾರಾಜರಿಗೆ ಬರೆದ ಪತ್ರದಲ್ಲಿ ಸ್ವಾಮೀ ವಿವೇಕಾನಂದರು “ಬಡ ಹುಡುಗನಿಗೆ ಶಿಕ್ಷಣ ಪಡೆಯಲು ಸಾಧ್ಯವಿಲ್ಲವಾದಲ್ಲಿ ಶಿಕ್ಷಣವೇ ಅವನಿದ್ದಲ್ಲಿಗೆ ಹೋಗಲಿ ” ಎಂದು ಬರೆದಿದ್ದರು. ದರಿದ್ರ ದೇವೋಭವ ಎಂದು ಹೇಳಿದ ಅವರು ಬಡವರ, ರೋಗಿಗಳ ಸೇವೆಯಲ್ಲಿ ದೇವರನ್ನು ಕಾಣು ಎಂದಿದ್ದರು. ನಮ್ಮ ದೇಶದಲ್ಲಿರುವ ಸಾವಿರಾರು ಸಂತರ ಪ್ರವಚನದ ಜೊತೆಯಲ್ಲಿ ಶಿಕ್ಷಣದವನ್ನೂ ನೀಡಬೇಕು   ಎಂಬ ಸ್ವಾಮೀಜಿಯ ಮಾತನ್ನು ನೆನಪಿಸಿದರು  .
ಇನ್ನು ವ್ಯಕ್ತಿತ್ವ  ವಿಕಸನಗಾರರಾಗಿ ಸ್ವಾಮೀಜಿ ಯವರ ವಿಚಾರವನ್ನು ನೋಡಿದಾಗ ಅವರು “ಇನ್ನೊಬ್ಬರನ್ನು ದೂರುವುದು, ಶಪಿಸುವುದು ಬೇಡ, ಸಮಸ್ಯೆಯನ್ನು ಗೆಲ್ಲುವ ಸಾಮರ್ಥ್ಯ ನಿನ್ನಲ್ಲಿದೆ” ಎನ್ನುವ ಮಾತನ್ನು ಹೇಳಿದರು. ಅವರ ಪ್ರಕಾರ  ಮಾನವನ  ಎಲ್ಲಾ ಪ್ರಯತ್ನಗಳಿಗೂ 3 ಹಂತಗಳಿರುತ್ತವೆ,ಅವುಗಳು  ಅಪಮಾನ , ವಿರೋಧ ಹಾಗೂ ಸ್ವೀಕಾರ. ಮೂರನೆಯ ಹಂತ ತಲುಪಲು ಛಲದಿಂದ ಪ್ರಯತ್ನಿಸಿದರೆ ಮಾತ್ರ ಸಾಧ್ಯ ಎಂದು ಹೇಳಿದ್ದರು.
ಒಬ್ಬ  ರಾಷ್ಟಭಕ್ತನನ್ನಾಗಿ ನೋಡಿದಾಗ ಸ್ವಾಮೀ ವಿವೇಕಾನಂದರು ನಮ್ಮ ಪರಕೀಯ ದಾಸ್ಯತೆಯ ಕುರಿತಾಗಿ “ಕೇವಲ 40 ಮಿಲಿಯನ್ ಬ್ರಿಟಿಷರು 300 ಮಿಲಿಯನ್ ಭಾರತೀಯರನ್ನುಆಳಲು ಈ ವಿಷಯದಲ್ಲಿ ಅವರಿಗಿದ್ದ ಏಕತೆ ಕಾರಣವಾಗಿದೆ. ಯಾವಾಗ ಭಾರತೀಯರು ಒಂದಾಗುತ್ತರೋ  ಆಗ ಮಾತ್ರ ನಮಗೆ ಜಗತ್ತನ್ನು ಗೆಲ್ಲಲು ಸಾಧ್ಯ , ನಮ್ಮಲ್ಲಿ ಶಾಂತಿ ಹಾಗು ನೆಮ್ಮದಿ ಉಳಿಸಲು ಸಾಧ್ಯ”ಎಂದು ಹೇಳಿದ್ದರು. ನಮ್ಮಲ್ಲಿ ಬೇರೆ ಬೇರೆ ಸಂಸ್ಕೃತಿಯಿದೆ, ಈ  ವಿವಿಧತೆಯನ್ನು ದೂರಗೊಳಿಸಿ ಏಕತೆಯನ್ನು ಎತ್ತಿ ಹಿಡಿಯುವಲ್ಲಿ ಸ್ವಾಮೀ ವಿವೇಕಾನಂದರ  ಪಾತ್ರ ದೊಡ್ಡದಾಗಿದೆ .
ಹಿಂದು ಧರ್ಮದ ಸಂತರಾಗಿ ಸ್ವಾಮೀಜಿಯವರು ದ್ವೈತ , ಅದ್ವೈತ , ವಿಶಿಷ್ಟಾದ್ವೈತ ಗಳು ಹಿಂದು ಧರ್ಮದ ಜಾಗತಿಕ ದೃಷ್ಟಿಕೋನದ ಮಜಲುಗಳು ಎಂದು ಹೇಳಿದರು. ಆದರೆ ದುರದೃಷ್ಟವಶಾತ್ ನಮ್ಮಲ್ಲಿದ್ದ ಭಿನ್ನತೆಯನ್ನು ವೈಭವೀಕರಿಸಿ ನಾವು ಭಿನ್ನರೆಂದು ವಿದೇಶೀಯರ ಮುಂದೆ ತೋರಿಸಿಕೊಳ್ಳುತ್ತೇವೆ. ಆದರೆ ಸ್ವಾಮೀ ವಿವೇಕಾನಂದರು ಇದನ್ನು ಒಂದೆ ತಥ್ಯದ ಹಲವು ಮಜಲುಗಳು ಎಂದು ಎಲ್ಲವನ್ನು ಒಂದೇ ಎಂದು ಪ್ರತಿಪಾದಿಸಿದವರು ಎಂದು ಹೇಳಿದರು.
ನಾವು ಇಂಡಿಯನ್ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೇಳಿರಬಹುದು , ಒಬ್ಬ ಭಾರತೀಯ ವಿದೇಶದ ಯಾವುದೇ ವಿಶ್ವ ವಿದ್ಯಾಲಯಕ್ಕೆ ಹೋದರೆ ತಾನು ಭಾರತದವ ಎಂದು ಹೇಳಿದ ತಕ್ಷಣವೇ ಇಂಡಿಯನ್ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿ  ಇರುವ ಭಾರತವಲ್ಲವೇ ಎಂದು ಕೇಳುತ್ತಾರೆ. ಈ   ಇಂಡಿಯನ್ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸ್ಥಾಪನೆಯನ್ನು   ಜೆಮ್ ಶೆಡ್ ಟಾಟಾ  ಅವರು ಸ್ವಾಮೀ ವಿವೇಕಾನಂದರ ಪ್ರೇರಣೆಯಿಂದ ಮಾಡಿದ್ದರು .ಸಂಸ್ಥೆಯ ಸ್ಥಾಪನೆಯ ನಂತರ ಜೆಮ್ ಶೆಡ್ ಟಾಟಾ  ಅವರು ಸ್ವಾಮೀ ವಿವೇಕಾನಂದರಲ್ಲಿ ಇಂಡಿಯನ್ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮುಖ್ಯಸ್ಥರನ್ನಾಗಿ ಆಹ್ವಾನಿಸಿ ಪತ್ರ ಬರೆಯುತ್ತಾರೆ. ವಿಜ್ಞಾನದ ಬಗ್ಗೆ ಇದ್ದ ಅರಿವನ್ನು ಕೂಡ ನಾವು ಈ ಮೂಲಕ ತಿಳಿಯಬಹುದು.
ನಮ್ಮಲ್ಲಿ ಇಂದಿಗೂ ಬೌದ್ಧಿಕ ದಾಸ್ಯತೆ ಹೋಗಿಲ್ಲ ಉದಾಹರಣೆಗೆ ಕಪ್ಪು ಬಣ್ಣ  ಎಂದಾಗ ಇಂದಿಗೂ ನಮ್ಮಲ್ಲಿ ಕೀಳು ಭಾವನೆಯಿದೆ,ಆದರೆ ನಮ್ಮ ದೇಶದ  ಸಾವಿರಾರು ವರ್ಷಗಳ ಇತಿಹಾಸದಲ್ಲಿ ಕಪ್ಪು ಬಣ್ಣ ಎಂಬುದು ಒಬ್ಬನ ಸೌಂದರ್ಯ ಕ್ಕೆ ಬಣ್ಣ ಮಾನದಂಡವಾಗಿರಲಿಲ್ಲ , ಭಗವಾನ್ ಶ್ರೀಕೃಷ್ಣ ನನ್ನು ಅತ್ಯಂತ ಸುಂದರ ಎಂದು ಹೇಳಿದವರು ನಾವಾಗಿದ್ದೇವೆ. ಆದರೆ ಬೆಳ್ಳಗಿದ್ದರೆ ಮಾತ್ರ ಶ್ರೇಷ್ಠ ಎಂಬುದು ಬ್ರಿಟಿಷರು ನಮ್ಮಲ್ಲಿ ಬೆಳೆಸಿದ ಭಾವನೆಯಾಗಿದೆ . ಸ್ವಾತಂತ್ರ್ಯ ಸಿಕ್ಕಿ 67 ವರ್ಷ ಕಳೆದರೂ ನಾವೂ ಬೌದ್ಧಿಕವಾಗಿ ಬ್ರಿಟಿಷರ ಗುಲಾಮರಾಗಿದ್ದೇವೆ ಎನ್ನುವುದು ದುರದೃಷ್ಟಕರ . ಸಮಯ ಇನ್ನೂ ಮೀರಿಲ್ಲ, ಸಮಾವೇಶದಲ್ಲಿ ಸೇರಿರುವ ನಾವೆಲ್ಲಾ ಯುವಕರು  ವಿವೇಕಾನಂದರ 150 ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ವಿವೇಕಾನಂದ ವಿಚಾರಗಳನ್ನು ತಿಳಿಯುವುದರ ಜೊತೆಯಲ್ಲಿ  ಅದನ್ನು ಕಾರ್ಯರೂಪಕ್ಕೆ ತರುವ ಧೃಢ ಸಂಕಲ್ಪವನ್ನು ಮಾಡೋಣ ಎಂದರು.

ನಂತರ ವಿವೇಕಾನಂದರ ಕುರಿತಾದ ಚಲನಚಿತ್ರ “ಹೀರೋ”ಪ್ರದರ್ಶನ  ,ಮಾಡಲಾಯಿತು.
ನಂತರ ಕಾಲೇಜು ವಿದ್ಯಾರ್ಥಿ  ಹಾಗೂ ಉದ್ಯೋಗಿ ಯುವಕರ ಪ್ರತ್ಯೇಕ  ಚರ್ಚಾಗೋಷ್ಠಿ ನಡೆಯಿತು. ಸುಮಾರು 150 ತರುಣರು ಹಾಗೂ ವಿದ್ಯಾರ್ಥಿಗಳು   ಪೈವಳಿಕೆ ಪಂಚಾಯತ್ ಮಟ್ಟದ  ಯುವ ಸಮಾವೇಶದಲ್ಲಿ ಉಪಸ್ಥಿತರಿದ್ದರು. ಸಮಾವೇಶದ  ಉದ್ಘಾಟನೆಯನ್ನು  ಶ್ರೀ ರಾಘವ ಬಲ್ಲಾಳ್ , ನಿವೃತ್ತ ಮುಖ್ಯೋಪಾಧ್ಯಾಯರು , ಬೇಕೂರು ಶಾಲೆ ಇವರು ದೀಪ ಬೆಳಗುವುದರ ಮೂಲಕ ನಡೆಸಿದರು. ಈ  ಸಂದರ್ಭದಲ್ಲಿ ವೇದಿಕೆಯಲ್ಲಿ ಶಾಲಾ  ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ   ಶ್ರೀ ಡಿ  ಮಹಾಲಿಂಗೇಶ್ವರ ಪ್ರಸಾದ್  , ಹಾಗೂ ಶ್ರೀ ಪಿ ಎನ್  ಮೂಡಿತ್ತಾಯ , ನಿವೃತ್ತ ಪ್ರಾಂಶುಪಾಲರು , ಸರಕಾರೀ ಕಾಲೇಜು, ತಲಶೇರಿ ಇವರು ಉಪಸ್ಥಿತರಿದ್ದರು. ಗಣ್ಯರ ಸ್ವಾಗತವನ್ನು ಶ್ರೀ ಶಿವಕೃಷ್ಣ ಎನ್ ನಡೆಸಿ, ಧನ್ಯವಾದವನ್ನು ಶ್ರೀ ಸುಕುಮಾರ ಕೊಜಪ್ಪೆ ನಡೆಸಿದರು. ಶ್ರೀ ಲೋಕೇಶ್ ಜೋಡುಕಲ್ಲು ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು

Leave a Reply

Your email address will not be published.

This site uses Akismet to reduce spam. Learn how your comment data is processed.