
ಬೇಲೂರು : ಇತಿಹಾಸ ಪ್ರಸಿದ್ದ ಬೇಲೂರು ಶ್ರೀ ಚನ್ನಕೇಶವ ದೇವಸ್ಥಾನದ ರಥೋತ್ಸವ ಸಂದರ್ಭದಲ್ಲಿ ಪ್ರತಿವರ್ಷವೂ ನಡೆಸುವ ಕುರಾನ್ ಪಠಣವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಬೇಲೂರಿನಲ್ಲಿ ಆಯೋಜಿಸಿದ್ದ ಬಜರಂಗದಳದ ಪ್ರತಿಭಟನೆ ನಡೆಸಿದ್ದು ಅದರಲ್ಲಿ ಮುಸ್ಲಿಂ ಯುವಕ ನುಗ್ಗಿ ಬಂದಿದ್ದರಿಂದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತು.

ಏಪ್ರಿಲ್ ನಾಲ್ಕರಂದು ಬೇಲೂರಿನ ರಥೋತ್ಸವ ಮುಕ್ತಾಯಗೊಳ್ಳಲಿದ್ದು, ಅಂದು ತೇರು ಎಳೆಯುವ ಮುನ್ನ ಕುರಾನ್ ಪಠಿಸಬಾರದು ಎಂದು ಆಗ್ರಹಿಸಿ ವಿಹೆಚ್ಪಿ ಮತ್ತು ಬಜರಂಗದಳದ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ನುಗ್ಗಿದ ಯುವಕನೊಬ್ಬ ಕುರಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ. ಈ ವೇಳೆ ಕಾರ್ಯಕರ್ತರು ಆತನನ್ನು ವಾಪಾಸ್ ಕಳುಹಿಸಲು ಪ್ರಯತ್ನಿಸುವಾಗ ಉಂಟಾದ ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರವನ್ನು ನಡೆಸಿದರು.
ದೇವಸ್ಥಾನಗಳ ಜಾತ್ರೆ ವೇಳೆ ಅನ್ಯ ಧರ್ಮೀಯರ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ವಿಚಾರ ತೀವ್ರ ಚರ್ಚೆಯಲ್ಲಿರುವ ನಡುವೆಯೇ ಬೇಲೂರಿನ ವಿವಾದ ತೀವ್ರಗೊಂಡಿದೆ. ಬೇಲೂರು ಚೆನ್ನಕೇಶವನಿಗೆ ಮುಸ್ಲಿಮರ ಕುರಾನ್ ಪಠಣ ಸೇವೆ ಎನ್ನುವುದು ಇತ್ತೀಚಿನವರೆಗೆ ಒಂದು ಸಾಮಾಜಿಕ ಸೌಹಾರ್ದದ ಭಾಗ ಎಂಬಂತೆ ಬಿಂಬಿಸಲಾಗಿದ್ದರೂ ಅದರಲ್ಲಿ ಆಕ್ಷೇಪಾರ್ಹ ಅಂಶಗಳಿತ್ತು. ಆದರೆ, ಈಗ ಚೆನ್ನಕೇಶವನಿಗೇಕೆ ಕುರಾನ್ ಪಠಣ ಎನ್ನುವ ವಾದ ಮತ್ತೆ ಮೇಲೆದ್ದು ಬಂದಿದೆ.
ಎರಡು ವರ್ಷದ ಹಿಂದೆಯೂ ಈ ವಿವಾದ ಎದ್ದುಬಂದಿದ್ದರೂ ಆಗ ಮುಜರಾಯಿ ಇಲಾಖೆಯ ಕೈಪಿಡಿಯಲ್ಲೇ ಈ ವಿಚಾರ ಉಲ್ಲೇಖವಾಗಿತ್ತು, ತೇರಿನ ದಿನ ದೇವಾಲಯದ ಬಳಿ ನಿಂತು ಕುರಾನ್ ಪಠಣ ಮಾಡುವುದು ರೂಢಿಗತ ಕ್ರಮ ಎಂದು ಧಾರ್ಮಿಕ ದತ್ತಿ ಇಲಾಖೆ ಸ್ಪಷ್ಟನೆ ನೀಡಿತ್ತು. ದೇವಾಲಯದಲ್ಲಿ ಹಿಂದಿನಿಂದ ಬಂದಿರುವ ರೂಢಿ, ಸಂಪ್ರದಾಯ, ಪದ್ಧತಿಯನ್ನು ಮೀರಲು ಅಧಿಕಾರ ಇರುವುದಿಲ್ಲ ಆದುದರಿಂದ ದೇವಾಲಯದಲ್ಲಿ ವಾರ್ಷಿಕ ಬ್ರಹ್ಮರಥೋತ್ಸವವನ್ನು ಆಗಮ ಶಾಸ್ತ್ರ ರೀತಿ ಹಾಗೂ ಹಿಂದಿನಿಂದ ನಡೆದುಬರುತ್ತಿರುವ ರೂಢಿಯಲ್ಲಿರುವ ಸಂಪ್ರದಾಯ ಪದ್ಧತಿಯಂತೆ ನಡೆಸಲು ಸೂಚಿಸಬಹುದಾಗಿರುತ್ತದೆ ಎಂದು ಆಯುಕ್ತರ ಪರವಾಗಿ ಧಾರ್ಮಿಕ ದತ್ತಿ ಇಲಾಖೆ ಈ ಹಿಂದೆ ಹೇಳಿತ್ತು.
ಪುಸ್ತಕ ಬಿಡುಗಡೆಯೊಂದಿಗೆ ತೀವ್ರಗೊಂಡ ವಿವಾದ
ಈ ವಿವಾದ ಪ್ರತಿ ವರ್ಷವೂ ಆಚೆ ಬರುತ್ತದ್ದು, ಹಿಂದೂಗಳ ಧಾರ್ಮಿಕ ಭಾವನೆಗೆ ಅಡ್ಡಿಯಾಗುತ್ತಿದೆ ಎನ್ನಲಾಗಿದೆ. ಆದರೆ, ರಥೋತ್ಸವ ಮುಗಿದ ಸ್ವಲ್ಪ ದಿನದಲ್ಲಿ ತಣ್ಣಗಾಗುತ್ತದೆ. ಕಳೆದ ವರ್ಷವೂ ಕುರಾನ್ ಪಠನದೊಂದಿಗೆ ತೇರು ಎಳೆಯಲಾಗಿತ್ತು. ಆದರೆ, ಈ ಬಾರಿ ಅದು ತೀವ್ರ ಸ್ವರೂಪ ಪಡೆಯಲು ಕಾರಣವಾಗಿದ್ದು ಮಾರ್ಚ್ 24ರಂದು ಬಿಡುಗಡೆಯಾಗಿರುವ ಪುಸ್ತಕ.
ಹಾಸನದ ವೈದ್ಯ ಹಾಗೂ ಇತಿಹಾಸದ ಬಗ್ಗೆ ಅಧ್ಯಯನ ಮಾಡುತ್ತಿರುವ ಡಾ.ರಮೇಶ್ ಅವರು “ಬೇಲೂರಿನ ಶ್ರೀ ಚನ್ನಕೇಶವನಿಗೆ ಬೇಕಿಲ್ಲ ಕುರಾನ್ ಪಠಣ” ಎನ್ನುವ ಪುಸ್ತಕ ಬರೆದಿದ್ದಾರೆ. ಅದರಲ್ಲಿ 1932ರಲ್ಲಿ ಇಂತಹ ಒಂದು ಸಂಪ್ರದಾಯವನ್ನು ದೇವಾಲಯದ ಮ್ಯಾನ್ಯುಯಲ್ನಲ್ಲಿ ಸೇರಿಸುವ ಮೂಲಕ ಪರಂಪರೆಗೆ ಅಪಚಾರ ಎಸಗಲಾಗಿದೆ ಎನ್ನುವುದನ್ನು ದಾಖಲೆಗಳ ಮೂಲಕ ಮಂಡಿಸಿದ್ದಾರೆ.
“ಚೆನ್ನಕೇಶವನ ಜಾತ್ರೆ ವೇಳೆ ಗೋವಿಂದ ನಾಮಸ್ಮರಣೆ ಮೊಳಗಬೇಕೇ ವಿನಃ ಕುರಾನ್ ಪಠಣ ಸರಿಯಲ್ಲ. ದರ್ಗಾಗೆ ಹೋಗಿ ನಾವು ಹನುಮಾನ್ ಚಾಲಿಸ ಹೇಳೋಕೆ ಆಗುತ್ತಾ? ಹಾಗೆಯೇ ಕೆಲವೇ ವರ್ಷಗಳ ಹಿಂದೆ ಸೇರಿಸಲಾಗಿರುವ ಇಂತಹ ಆಚರಣೆಯನ್ನು ಕೈಬಿಡಬೇಕು” ಎಂದು ಪುಸ್ತಕದ ರಚನಕಾರ ಡಾ. ರಮೇಶ್ ಆಗ್ರಹಿಸಿದ್ದಾರೆ.
ಸ್ವತಂತ್ರ ಪೂರ್ವದಲ್ಲಿ ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ರವರು ಇದ್ದ ಸಮಯದಲ್ಲಿ ಬೆಂಗಳೂರಿನಲ್ಲಿ ನಡೆದ ಕೋಮು ಗಲಭೆಯಿಂದ ಅವರ ಹೆಸರಿಗೆ ಅಂಟಿದ್ದ ಕಳಂಕವನ್ನು ತೊಳೆದುಕೊಳ್ಳಲು ಇಂತಹ ಒಂದು ಅಸಂಬದ್ಧ ಅಂಶಗಳನ್ನ ಸೌಹಾರ್ದತೆ, ಸಹಿಷ್ಣುತೆ ಹೆಸರಿನಲ್ಲಿ ದೇಗುಲದ ಮ್ಯಾನ್ಯುಯಲ್ಗೆ 1932ರಲ್ಲಿ ಸೇರಿಸಲಾಗಿದೆ ಎನ್ನುವುದು ಲೇಖಕರು ಮತ್ತು ಇತಿಹಾಸ ತಜ್ಞರಾದ ರಮೇಶ್ ಅವರ ವಾದ.
ಇದೀಗ ಈ ಪುಸ್ತಕವನ್ನು ಮುಂದಿಟ್ಟುಕೊಂಡು ರಥೋತ್ಸವದ ವೇಳೆ ಖುರಾನ್ ಪಠನ ನಿಲ್ಲಬೇಕು ಎಂಬ ಹೋರಾಟ ತೀವ್ರವಾಗಿದ್ದು, ಮಾರ್ಚ್ 24ರಂದು ಬೇಲೂರಿನಲ್ಲಿ ಹಿಂದೂ ಪರ ಸಂಘಟನೆಗಳು ತಹಶೀಲ್ದಾರ್ಗೆ ಮನವಿ ಸಲ್ಲಿಸಿ ಹಿಂದೂಭಾವನೆಗೆ ಧಕ್ಕೆ ತರುವ ಇಂತಹ ಆಚರಣೆ ಬೇಡ ಎಂದು ಮನವಿ ಮಾಡಿದ್ದವು. ಜತೆಗೆ ಮಾರ್ಚ್ 28ರಂದು ಬೃಹತ್ ಹೋರಾಟಕ್ಕೆ ಕರೆ ನೀಡಿದ್ದವು.
ಬಜರಂಗದಳದ ವತಿಯಿಂದ ಬೆಳಗ್ಗಿನಿಂದಲೇ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದ್ದು ಮಹಿಳೆಯರು, ಹಿರಿಯರು ಎಲ್ಲರೂ ಭಾಗವಹಿಸಿದ್ದರು. ಪ್ರತಿಭಟನೆ ವೇಳೆ ಬೈಕ್ ನಲ್ಲಿ ಬಂದ ಮುಸ್ಲಿಂ ಯುವಕನೊಬ್ಬ ಖುರಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರಿಂದ ಆಕ್ರೋಶ ಭುಗಿಲೆದ್ದಿತು.
ಪ್ರತಿಭಟನಾಕಾರರು ಯುವಕನನ್ನು ಅಟ್ಟಾಡಿಸಿದರು. ಈ ವೇಳೆ ಬಜರಂಗದಳ ಹಾಗೂ ಮುಸ್ಲಿಂ ಯುವಕನ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಘು ಲಾಠಿಚಾರ್ಜ್ ಮಾಡಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು ಯುವಕನನ್ನು ವಶಕ್ಕೆ ಪಡೆಯಲಾಯಿತು. ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.







ತಹಸಿಲ್ದಾರ್ ಕಚೇರಿಗೆ ಬಂದ ಪ್ರತಿಭಟನಾಕಾರರು ರಥೋತ್ಸವದ ದಿನ ಕುರಾನ್ ಪಠನ ನಿಲ್ಲಿಸುವಂತೆ ಮನವಿ ಮಾಡಿದರು. ಏಪ್ರಿಲ್ 3ರ ಒಳಗಾಗಿ ಕುರಾನ್ ಪಠಣ ರದ್ದಾದ ಬಗ್ಗೆ ಸರ್ಕಾರ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು. ಬಳಿಕ ಧರಣಿ ಸ್ಥಳದಿಂದ ಮೆರವಣಿಗೆ ಮೂಲಕ ಚನ್ನಕೇಶವ ದೇಗುಲದ ಬಗ್ಗೆ ಬಂದ ಹೋರಾಟಗಾರರು ಅಲ್ಲಿಯೂ ಧರಣಿ ನಡೆಸಿದರು.
