ಬೆಂಗಳೂರು: ಪ್ರಸ್ತುತ ಶಿಕ್ಷಣದ ಮೂಲಕ ಪಡೆದ ಪದವಿಗಳಿಗೆ ಬೆಲೆಯಿದೆ. ಆದರೆ ಜೀವನಕ್ರಮದ ಮೂಲಕ ಮೈಗೂಡಿಸಿಕೊಂಡ ಜ್ಞಾನವನ್ನು ನಿರ್ಲಕ್ಷಿಸಲಾಗಿದೆ. ಉದ್ಯೋಗದ ಹೆಸರಿನಲ್ಲಿ ನಾವು ನಿಜವಾದ ಕೌಶಲ್ಯವನ್ನು ಮರೆಮಾಚಿದ್ದೇವೆ. ಇದರ ದುಷ್ಪರಿಣಾಮವಾಗಿ ನೈಜ ಪ್ರತಿಭೆಗಳನ್ನು, ರಾಷ್ಟ್ರದ ಮಾನವ ಸಂಪನ್ಮೂಲವನ್ನು ಕಳೆದುಕೊಂಡಿದ್ದೇವೆ. ನಮ್ಮತನವನ್ನು ಸಂರಕ್ಷಿಸುವ ಜೊತೆಗೆ ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಿಸಿರುವ ವಿದೇಶಿ ಸಂಸ್ಕೃತಿಯ ವಸ್ತುಗಳ ಎದುರಿಗೆ ನಮ್ಮ ರಾಷ್ಟ್ರದ ಸಂಸ್ಕೃತಿ, ಕಲೆಗಳು, ಆಹಾರ ಪದ್ಧತಿಯನ್ನು ಸಮರ್ಥವಾಗಿ ಪ್ರಸ್ತುತಪಡಿಸಲು ಶ್ರಮವಹಿಸಬೇಕು. ಈ ಹಾದಿಯಲ್ಲಿ ತಂತ್ರಜ್ಞಾನವನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕು ಎಂದು ಮ್ಯಾಗ್ಸಸೆ ಪ್ರಶಸ್ತಿ ವಿಜೇತ ಮತ್ತು ಸೆಲ್ಕೊ ಸಂಸ್ಥೆಯ ಸಂಸ್ಥಾಪಕ ಹರೀಶ್ ಹಂದೆ ಹೇಳಿದರು.
ಬೆಂಗಳೂರಿನ ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ಪರಿಷತ್ ಸಭಾಂಗಣದಲ್ಲಿ ನಡೆದ ಉತ್ಥಾನ ಮಾಸಪತ್ರಿಕೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ವಾರ್ಷಿಕ ಪ್ರಬಂಧ ಸ್ಪರ್ಧೆ – 2022ರ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಶನಿವಾರ ಮಾತನಾಡಿದರು.


ಶಿಕ್ಷಣವನ್ನು ಆಸಕ್ತಿಯಿಂದ ಕಲಿಯಬೇಕೇ ವಿನಃ ವಿವಿಧ ಒತ್ತಡಗಳಿಗೆ ಸಿಲುಕಿ, ಸ್ವಾರ್ಥಕ್ಕಾಗಿ ಕಲಿಯುವಂತಿರಬಾರದು. ಜ್ಞಾನ ಇರುವುದೇ ಹಂಚುವುದಕ್ಕೆ ಎನ್ನುವುದನ್ನು ಅರಿತು ವಿದ್ಯಾಭ್ಯಾಸ ಮಾಡಬೇಕಿದೆ. ಪೋಷಕರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಬೋಧಕರಾಗದೆ, ಅವರ ಜೊತೆಗೆ ಕಲಿಯುವ ಸಹಪಾಠಿಯಾಗಬೇಕು. ಓದಿನಲ್ಲಿ ಮುಂದಿರುವ ವಿದ್ಯಾರ್ಥಿಗಳು ಸಹಜವಾಗಿಯೇ ಉತ್ತಮ ಅಂಕಗಳನ್ನು ಗಳಿಸುತ್ತಾರೆ. ಆದರೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯುವಂತೆ ಮಾಡುವುದರಲ್ಲಿ ಶಿಕ್ಷಕರ ನಿಜವಾದ ಸಾಮರ್ಥ್ಯ ಅಡಗಿದೆ ಎಂದು ಅಭಿಪ್ರಾಯಪಟ್ಟರು.


ರಾಷ್ಟ್ರದಲ್ಲಿನ ಹಲವು ಸಮಸ್ಯೆಗಳು ನಾಡಿನಲ್ಲಿ ಬದಲಾವಣೆ ತರಬೇಕಾದ ಹಲವು ಸಾಧ್ಯತೆಗಳನ್ನು ಒದಗಿಸುತ್ತವೆ. ಈ ಅಪೂರ್ವ ಅವಕಾಶವನ್ನು ಯುವಜನತೆ ಸದುಪಯೋಗ ಪಡಿಸಿಕೊಂಡು ಕೇವಲ ಸಮಸ್ಯೆಗಳನ್ನು ಗುರುತಿಸುವವರಾಗದೆ, ಪರಿಹಾರ ನೀಡುವವರಾಗಬೇಕಿದೆ. ಬಡತನ ನಿರ್ಮೂಲನೆ ಆದರೆ ಮಾತ್ರ ಭಾರತ ಜಗದ್ಗುರುವಾಗುತ್ತದೆ. ಆದ್ದರಿಂದ ರಾಷ್ಟ್ರದ ಸಮಸ್ಯೆಗಳಿಗೆ ಕೇವಲ ಮರುಗಿದರೆ ಸಾಲದು. ಅವುಗಳಿಗೆ ಪರಿಹಾರವನ್ನು ಹುಡುಕಿ ಅನುಷ್ಠಾನಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಭಾರತ ಅವಕಾಶಗಳ ಆಗರ. ವಿಶ್ವದ ಭವಿಷ್ಯ ಭಾರತ ಕೇಂದ್ರಿತವಾಗಿರುತ್ತದೆ. ಈ ಸಂದರ್ಭದಲ್ಲಿ ಜಗತ್ತಿನ ಜನರು ಭಾರತವನ್ನು ಶ್ರೇಷ್ಠ ಎಂದು ಒಪ್ಪಿಕೊಳ್ಳುವಂತಾಗಬೇಕು. ಅದಕ್ಕಾಗಿ ನಮ್ಮ ನಾಡಿನ ಅಭಿವೃದ್ಧಿಯಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು. ನಮ್ಮ ವೈಯಕ್ತಿಕ ಗುರಿ ಮತ್ತು ದೇಶದ ಗುರಿ ಬೇರೆ ಬೇರೆ ಆಗಿರದೆ ಇವೆರಡರ ಸಮನ್ವಯ ಆಗಬೇಕಿದೆ ಎಂದು ನುಡಿದರು.


ರಾಜ್ಯದ ವಿವಿಧ ಭಾಗಗಳಿಂದ ಬಂದ ಸುಮಾರು ೬೦೦ ಪ್ರಬಂಧಗಳಲ್ಲಿ ಎರಡು ಸುತ್ತಿನ ಮೌಲ್ಯಮಾಪನದ ನಂತರ ಆಯ್ಕೆಯಾದ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಪ್ರಬಂಧಗಳು ಮತ್ತು ೧೦ ಮೆಚ್ಚುಗೆಯ ಪ್ರಬಂಧಗಳಿಗೆ ಬಹುಮಾನ ಲಭಿಸಿದೆ. ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಹಾಗೂ ಮೆಚ್ಚುಗೆಯ ಬಹುಮಾನ ಪಡೆದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಧಾನ ಸಂಪಾದಕ ನಾಡೋಜ ಎಸ್.ಆರ್. ರಾಮಸ್ವಾಮಿ, ಪ್ರಬಂಧ ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿದ ಉಪನ್ಯಾಸಕಿ ಡಾ.ಎಂ.ಸೋಮಕ್ಕ, ಲಘು ಉದ್ಯೋಗ ಭಾರತಿಯ ಅಖಿಲ ಭಾರತೀಯ ಉಪಾಧ್ಯಕ್ಷ ಶ್ರೀಕಾಂತ ದತ್ತ, ಮೈಲಾರ್ ಟೆಕ್ಸ್ ಮಾಲೀಕ ಲೋಹಿತಾಕ್ಷ, ಸಾಮಾಜಿಕ ಕಾರ್ಯಕರ್ತರಾದ ವಾದಿರಾಜ್ ಮತ್ತು ರಾಜೇಶ್ ಪದ್ಮಾರ್ ಉಪಸ್ಥಿತರಿದ್ದರು.


ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಪ್ರಸ್ತಾವನೆಯ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಉತ್ಥಾನ ಮಾಸಪತ್ರಿಕೆ ಸಂಪಾದಕ ಅನಿಲ್ ಕುಮಾರ್ ಸ್ವಾಗತಿಸಿ, ಮಂಚಲ್ ಮಹೇಶ್ ವಂದಿಸಿದರು. ಹರೀಶ್ ಭಾರದ್ವಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.