
ಬೆಂಗಳೂರು: ಸಮರ್ಥ ಭಾರತ ವತಿಯಿಂದ ನವೆಂಬರ್ 26, 2023 ಭಾನುವಾರ ಬಸವನಗುಡಿಯ ಬಿ ಎಂ ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿರುವ ‘ನಾರೀ ಶಕ್ತಿ ಸಂಗಮ’ ಮಹಿಳಾ ಸಮ್ಮೇಳನ ಕಾರ್ಯಕ್ರಮದ ಕುರಿತು ಪತ್ರಿಕಾಗೋಷ್ಠಿ ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪರಿಷತ್ ನ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆಯಿತು.



ಕಾರ್ಯಕ್ರಮದಲ್ಲಿ ‘ನಾರೀ ಶಕ್ತಿ ಸಂಗಮ’ ಮಹಿಳಾ ಸಮ್ಮೇಳನದ ಅಧ್ಯಕ್ಷೆ ಡಾ. ವಿಜಯಲಕ್ಷ್ಮಿ ದೇಶಮಾನೆ, ಉಪಾಧ್ಯಕ್ಷೆ ಡಾ. ಎಲ್. ಗೋಮತೀದೇವಿ, ಬೆಂಗಳೂರು ದಕ್ಷಿಣ ವಿಭಾಗ ಸಂಯೋಜಕಿ ತೇಜಸ್ವಿನಿ, ಕರ್ನಾಟಕ ದಕ್ಷಿಣ ಪ್ರಾಂತದ ಮಹಿಳಾ ಸಮನ್ವಯದ ಸಹ ಸಂಯೋಜಕಿ ವಸಂತ ಸ್ವಾಮಿ, ಸ್ವಾಗತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.



ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು
ಸಮರ್ಥ ಭಾರತ ವತಿಯಿಂದ ಬೆಂಗಳೂರು ದಕ್ಷಿಣ ವಿಭಾಗ ಮಟ್ಟದ ಮಹಿಳಾ ಸಮ್ಮೇಳನ ‘ನಾರೀ ಶಕ್ತಿ ಸಂಗಮ’ ಮಹಿಳಾ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಈ ಮಹಿಳಾ ಸಮ್ಮೇಳನವು ನವೆಂಬರ್ 26ರಂದು ಭಾನುವಾರ ಬೆಳಗ್ಗೆ 9:00ರಿಂದ ಬಸವನಗುಡಿಯ ಬಿ.ಎಂ.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ಈ ಮಹಿಳಾ ಸಮ್ಮೇಳನವು ಸಮಾಜದ ಬಗ್ಗೆ ಕಳಕಳಿಯಿರುವ ಮಹಿಳೆಯರ ಏಕತ್ರೀಕರಣ, ವಿವಿಧ ವೃತ್ತಿಯಲ್ಲಿರುವ ಮಹಿಳೆಯರಿಗೆ ಸಮಾಜಮುಖಿ ದೃಷ್ಟಿ ನೀಡುವುದು. ತಮ್ಮ ಆಸಕ್ತಿ ಕ್ಷೇತ್ರದಲ್ಲಿ ಸಮಾಜಸೇವೆಯ ಅವಕಾಶವನ್ನು ಕಲ್ಪಿಸುವ ದೃಷ್ಟಿಯಿಂದ ಆಯೋಜನೆಗೊಳ್ಳಲಿದೆ.

ಸುಮಾರು 2000 ಮಹಿಳೆಯರು ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಹಾಗೂ ರಾಷ್ಟ್ರೀಯ ವಿಚಾರಗಳ ಮಂಥನ, ಪರ್ಯಾವರಣ ಸಂರಕ್ಷಣೆ ಮುಂತಾದ ಚಟುವಟಿಕೆಗಳ ಕಾರ್ಯಾಗಾರ, ಭಾರತದ ಮಹಿಳಾ ಸಾಧಕಿಯರ ಪರಿಚಯಾತ್ಮಕ ಪ್ರದರ್ಶಿನಿ, ರಾಷ್ಟ್ರೀಯ ಸಾಹಿತ್ಯ ಮಳಿಗೆ, ವನವಾಸಿ, ಗೋ ಉತ್ಪನ್ನ ಹಾಗೂ ಸ್ವದೇಶಿ ಮಳಿಗೆಗಳು ಇರಲಿವೆ.

ಈ ಮಹಿಳಾ ಸಮ್ಮೇಳನದ ಅಧ್ಯಕ್ಷತೆಯನ್ನು ಡಾ. ವಿಜಯಲಕ್ಷ್ಮಿ ದೇಶಮಾನೆ, ಉಪಾಧ್ಯಕ್ಷತೆಯನ್ನು ಡಾ. ಎಲ್. ಗೋಮತೀದೇವಿ ವಹಿಸಲಿದ್ದಾರೆ. ಸಂಸ್ಕೃತ ಹಾಗೂ ಇಂಡಾಲಜಿ ತಜ್ಞರು, ವಿಭು ಅಕಾಡೆಮಿಯ ಸ್ಥಾಪಕರು ಹಾಗೂ ಅಧ್ಯಕ್ಷರು ಡಾ.ಆರತಿ ವಿ ಬಿ ಕಾರ್ಯಕ್ರಮವನ್ನು ಉದ್ಘಾಟಿಸಿ “ಭಾರತೀಯ ಚಿಂತನೆಯಲ್ಲಿ ಮಹಿಳೆ” ಎಂಬ ವಿಷಯದ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಲಿದ್ದಾರೆ. ಬೆಳಗ್ಗೆ 10:30 ಗಂಟೆಗೆ ‘ಸ್ಥಾನೀಯ ಮಹಿಳೆಯರ ಸ್ಥಿತಿ, ಸವಾಲುಗಳು ಹಾಗೂ ಪರಿಹಾರ’ ಎಂಬ ವಿಷಯದ ಕುರಿತು ಚರ್ಚಾಗೋಷ್ಠಿ ನಡೆಯಲಿದೆ. ಸಮ್ಮೇಳನದ ಸಮಾರೋಪ ಮಧ್ಯಾಹ್ನ 12:15 ಗಂಟೆಗೆ “ಆಧುನಿಕ ಭಾರತದ ವಿಕಾಸದಲ್ಲಿ ಮಹಿಳೆಯರ ಪಾತ್ರ” ಎಂಬ ವಿಷಯಾಧಾರಿತವಾಗಿ ನಡೆಯುತ್ತದೆ. ಸಮಾರೋಪ ಸಮಾರಂಭದಲ್ಲಿ ಸಂಸ್ಕೃತ ಪ್ರಾಧ್ಯಾಪಕರು. ವಿಧಾನ ಪರಿಷತ್ ಮಾಜಿ ಸದಸ್ಯರು ಡಾ. ಎಸ್. ಆರ್. ಲೀಲಾ ಉಪಸ್ಥಿತರಿರುತ್ತಾರೆ.

ಈ ಕಾರ್ಯಕ್ರಮವನ್ನು ಕರ್ನಾಟಕದ ಸಾಮಾಜಿಕ, ಆರ್ಥಿಕ, ನಾಗರಿಕ, ಪರಿಸರ ಮತ್ತು ಇತರೆ ಸವಾಲುಗಳನ್ನು ಎದುರಿಸುವ ಗುರಿಯನ್ನು ಹೊಂದಿರುವ ಸ್ವಯಂಸೇವಕ ವೇದಿಕೆ ‘ಸಮರ್ಥ ಭಾರತ’ ಇದರ ಸಹಯೋಗದಲ್ಲಿ ನಡೆಸಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.