– ಶ್ರೀಕಂಠ ಬಾಳಗಂಚಿ, ಲೇಖಕರು, ಅಖಿಲ ಭಾರತೀಯ ಸಾಹಿತ್ಯ ಪರಿಷತ್
ಸಿನಿಮಾ ಕ್ಷೇತ್ರ ಅತ್ಯಂತ ಸೃಜನಾತ್ಮಕವಾದ ಕ್ಷೇತ್ರವಾಗಿದ್ದು ಇಲ್ಲಿ ಎಲ್ಲವೂ ನಾನೇ ನನ್ನಿಂದಲೇ ಎನ್ನುವುದಕ್ಕಿಂತಲೂ ಇಲ್ಲಿ ನಾವು ನಮ್ಮಿಂದ ಎಂದು ಎಲ್ಲರೂ ಒಟ್ಟಾಗಿ ಸೇರಿಕೊಂಡು ಕೆಲಸ ಮಾಡುವಂತಹ ಕ್ಷೇತ್ರವಾಗಿದೆ. ಕಥೆ, ಚಿತ್ರಕಥೆ, ಹಾಡು ಸಂಭಾಷಣೆ, ಸಂಗೀತ ನಿರ್ದೇಶನ, ಛಾಯಾಗ್ರಹಣ, ನಟ, ನಟಿಯರು, ಸಹಕಲಾವಿದರುಗಳಲ್ಲದೇ, ತೆರೆಯ ಮರೆಯಲ್ಲಿ ಎಲೆ ಮರೆಕಾಯಿಯಂತೆ ದುಡಿಯುವ ನೂರಾರು ತಂತ್ರಜ್ಞರೆಲ್ಲರನ್ನು ಒಗ್ಗೂಡಿಸಿ ನಿರ್ದೇಶಕ Captain of the Ship ಎನ್ನುವಂತೆ ಮನ್ನಡೆಸಿಕೊಂಡು ಹೋಗುತ್ತಾನೆ. ಕನ್ನಡ ಚಿತ್ರರಂಗದಲ್ಲಿ ಎಪ್ಪತ್ತು ಮತ್ತು ಎಂಭತ್ತರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಅಕ್ಷರಶಃ ಆಳಿದ್ದಲ್ಲದೇ ಕನ್ನಡ ಚಿತ್ರಪ್ರೇಮಿಗಳನ್ನು ಕುಣಿಸಿದ ಜೋಡಿಯಾದ ದೊರೈ-ಭಗವಾನ್ (ಬಿ. ದೊರೈರಾಜು-ಎಸ್. ಕೆ. ಭಗವಾನ್) ಜೋಡಿಯ ಕೊನೆಯ ಕೊಂಡಿಯಾಗಿದ್ದ ಭಗವಾನ್ ಅವರು 20.02.23ರಂದು ವಯೋಸಹಜವಾಗಿ ಇಹಲೋಕವನ್ನು ತ್ಯಜಿಸುವ ಮೂಲಕ ಕನ್ನಡ ಚಿತ್ರರಂಗದ ಅತ್ಯಂತ ಹಿರಿಯ ಕೊಂಡಿಯನ್ನು ಕಳೆದು ಕೊಂಡಿದೆ.
ಮೂಲತಃ ಮೈಸೂರಿನ ಮೂಲದವರಾದ ಶ್ರೀ ಬಿ.ದೊರೈರಾಜ್ ಚಿಕ್ಕಂದಿನಿಂದಲೂ ಸಂಗೀತ ಚಿತ್ರ ಕಲೆ,ಕ್ರೀಡೆಯಲ್ಲಿ ಆಸಕ್ತರಾಗಿ, ಅಂತಿಮವಾಗಿ ಚಲನಚಿತ್ರಗಳ ಬಗ್ಗೆ ಆಸಕ್ತಿ ಹೊಂದಿ ಮೈಸೂರಿನಲ್ಲಿ ಆರಂಭವಾದ ನವಜ್ಯೋತಿ ಸ್ಟುಡಿಯೋ ದಲ್ಲಿ ಸಹಾಯಕರಾಗಿ ಸೇರಿ ಕೊಂಡು ನಂತರ ಮುಂಬೈನಲ್ಲಿ ಏನ್.ಜಿ.ರಾವ್ ಬಳಿ ಕ್ಯಾಮರಾ ಸಹಾಯಕರಾಗಿ ಕೆಲಸವನ್ನು ಕಲಿತುಕೊಂಡ ನಂತರ ಮಲಯಾಳಂ ಚಿತ್ರದ ಮೂಲಕ ಸ್ವತಂತ್ರವಾಗಿ ಛಾಯಾಗ್ರಾಕರಾದ ನಂತರ, ವರನಟ ರಾಜಕುಮಾರರ ಸೋದರಿ ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಛಾಯಾಗ್ರಾಹಕರಾಗಿ ಪಾದಾರ್ಪಣೆ ಮಾಡಿದ ನಂತರ ಅನೇಕ ಕನ್ನಡ ಚಿತ್ರಗಳಲ್ಲಿ ಯಶಸ್ವಿ ಛಾಯಾಗ್ರಾಹಕರಾಗಿ ಗುರುತಿಸಿಕೊಳ್ಳುತ್ತಾರೆ. ರಾಜಕುಮಾರರ ಜಗಜ್ಯೋತಿ ಬಸವೇಶ್ವರ ಚಿತ್ರೀಕರಣ ಸಂದರ್ಭದಲ್ಲಿ, ಎಸ್.ಕೆ.ಭಗವಾನ್ ಅವರನ್ನು ಮೊತ್ತ ಮೊದಲಬಾರಿಗೆ ಭೇಟಿಯಾಗುತ್ತಾರೆ.
ಮೈಸೂರಿನ ಸಾಂಪ್ರದಾಯಕ ಕುಟುಂಬದಲ್ಲಿ ಜನಿಸಿದ ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್ ಆವರಿಗೆ ಬಾಲ್ಯದಿಂದಲೂ ರಂಗಭೂಮಿಯತ್ತ ಆಸಕ್ತಿ ಇದ್ದ ಕಾರಣ, ಮೈಸೂರು ಮತ್ತು ಸುತ್ತಮುತ್ತಲು ಎಲ್ಲೇ ನಾಟಕಗಳು ನಡೆದರೂ ಅಲ್ಲಿ ಬಾಲಕ ಭಗವಾನ್ ಹಾಜರಿರುತ್ತಾರೆ. ಅದೇ ರೀತಿ ಓದಿನಲ್ಲಿಯೂ ಚುರುಕಾಗಿದ್ದ ಭಗವಾನ್ ಕೇವಲ ಪಠ್ಯಪುಸ್ತಕಗಳಲ್ಲದೇ ಅಂದಿನ ಕಾಲದ ಬಹುತೇಕ ಕನ್ನಡದ ಸಾಹಿತಿಗಳ ಕಾದಂಬರಿಗಳನ್ನು ಓದುತ್ತಲೇ ಚಿತ್ರರಂಗದತ್ತ ಹರಿಸುತ್ತಾರೆ ತಮ್ಮ ಚಿತ್ತ.
ಆರಂಭದಲ್ಲಿ ಸಿನಿಮಾ ರೆಪ್ರೆಸೆಂಟೆಟಿವ್ ಆಗಿ ಇಡೀ ರಾಜ್ಯವನ್ನು ಸುತ್ತಾಡಿದ ಎಸ್.ಕೆ. ಭಗವಾನ್ 1956ರ ವೇಳೆಗೆ ಕಣಗಾಲ್ ಪ್ರಭಾಕರ್ ಶಾಸ್ತ್ರಿಗಳಿಗೆ ಭಾಗ್ಯೋದಯ ಚಿತ್ರದಲ್ಲಿ ಸಹಾಯಕರಾಗಿ ಸೇರಿಕೊಳ್ಳುತ್ತಾರೆ. ಅಂದೆಲ್ಲಾ ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಚಿತ್ರಗಳು ಮದರಾಸಿನಲ್ಲಿ ನಡೆಯುತ್ತಿದ್ದ ಕಾರಣ ಮದರಾಸಿಗೆ ಹೋಗಿ ಅಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗ, ಅದಾಗಲೇ ಛಾಯಾಗ್ರಾಹಕರಾಗಿ ಸುಪ್ರಸಿದ್ಧರಾಗಿದ್ದ ದೊರೈ ಅವರ ಪರಿಚಯವಾಗುತ್ತದೆ.
ಹೀಗೆ ಪರಿಚಯವಾದ ಇವರಿಬ್ಬರು ದೊರೈ-ಭಗವಾನ್ ಎಂಬ ಎರಡು ದೇಹ ಒಂದೇ ಆತ್ಮವಾದ ಕಥೆ ನಿಜಕ್ಕೂ ರೋಚಕವಾಗಿದೆ. ಚಿತ್ರಂರಂಗದಲ್ಲಿ ಸಾಧನೆ ಮಾಡುವ ಸಲುವಾಗಿ ದೂರದ ಮದರಾಸಿನಲ್ಲಿ ಕೆಲಸಕ್ಕಾಗಿ ಅಲೆಯುತ್ತಿದ್ದ ಭಗವಾನ್ ಅವರಿಗೆ ಅದೊಮ್ಮೆ ಕೈಯ್ಯಲ್ಲಿ ಕಾಸಿಲ್ಲದೇ ಒಂದು ಹೊತ್ತಿನ ಊಟಕ್ಕಾಗಿ ಪರಿತಪಿಸುತಿದ್ದ ಕಾಲವಾಗಿತ್ತು. ಕನ್ನಡ ಚಿತ್ರಗಳು ಚಿತ್ರೀಕರಣವಾಗುತ್ತಿದ್ದ ಸ್ಟುಡಿಯೋಗಳ ಬಳಿ ಕೆಲಸಕ್ಕಾಗಿ ಕಾಯುತ್ತಿದ್ದಲ್ಲದೇ, ಊಟ ಮತ್ತು ತಿಂಡಿಯ ಸಮಯದಲ್ಲಿ ಹತ್ತಿರಲ್ಲೇ ಇದ್ದ ಹೋಟೇಲ್ ಬಳಿ ಹೋಗಿ ನಿಂತು ಯಾರಾದರೂ ಪರಿಚಯದವರು ಬಂದರೆ ಅವರಿಗೆ ನಮಸ್ಕಾರ ಹಾಕಿ ಅವರೇನಾದರೂ ಮನಸ್ಸು ಮಾಡಿ ತಿಂಡಿ, ಊಟ ಕೊಡಿಸಿದರೆ ಉಂಟು, ಇಲ್ಲದಿದ್ದರೆ ಹೊಟ್ಟೆಗೆ ತಣ್ಣೀರು ಬಟ್ಟೆಯನ್ನು ಕಟ್ಟಿಕೊಂಡು ನಿದ್ರಿಸುತ್ತಿದಂತಹ ಕಾಲವಾಗಿರುತ್ತದೆ, ಅದೊಮ್ಮೆ ಎರಡು ದಿನಗಳ ಕಾಲ ಪರಿಚಿತರು ಯಾರೂ ಸಹಾ ಸಿಗದೇ ನಿತ್ರಾಣರಾಗಿದ್ದ ಭಗವಾನರಿಗೆ ಹೋಟೆಲ್ ಬಳಿ ದೊರೈ ಅವರು ಸಿಗುತ್ತಾರೆ. ಅಲ್ಪ ಸ್ವಲ್ಪ ಪರಿಚಯವಿದ್ದ ಕಾರಣ, ತಮ್ಮ ಸ್ವಾಭಿಮಾನವನ್ನೆಲ್ಲಾ ಬದಿಗಿಟ್ಟು, ಊಟ ಮಾಡಿ ಎರಡು ದಿನಗಳಾಗಿವೆ ಸ್ವಲ್ಪ ಹಣ ಇದ್ದರೆ ಕೊಡಿ ನಂತರ ಹಿಂದಿರುಗಿಸುತ್ತೇನೆ ಎಂದು ಕೇಳಿದ ತಕ್ಷಣ ಒಂದು ಕ್ಷಣವೂ ಯೋಚಿಸದ ದೊರೈ ಅವರು ತಮ್ಮಲ್ಲಿದ್ದ 50 ಪೈಸೆ ಹಣವನ್ನು ಕೊಟ್ಟು ಸರಸರನೆ ಹೊರಟು ಹೋಗುತ್ತಾರೆ. ಬದುಕಿದೆಯಾ ಬಡ ಜೀವ ಎಂದು ದೊರೈ ಅವರು ನೀಡಿದ್ದ ಹಣದಲ್ಲಿ ಭಗವಾನ್ ಅವರು ಹೊಟ್ಟೆ ತುಂಬಾ ಊಟ ಮಾಡುತ್ತಾರೆ. ಈ ಪ್ರಸಂಗವಾದ ಕೆಲವು ದಿನಗಳ ನಂತರ ಅವರಿಗೆ ತಿಳಿದು ಬಂದ ವಿಷಯವೆಂದರೆ, ಅಂದು ದೊರೈ ಅವರ ಬಳಿಯೂ ಕೇವಲ 50 ಪೈಸೆ ಇದ್ದಿದ್ದು, ಅದನ್ನು ಭಗವಾನ್ ಅವರಿಗೆ ಕೊಟ್ಟು ತಾವು ಉಪವಾಸ ಮಾಡಿರುತ್ತಾರೆ. ಹೀಗೆ ಎಂಟಾಣೆಯೊಂದಿಗೆ ಆರಂಭವಾದ ಅವರಿಬ್ಬರ ಗೆಳೆನ ಮುಂದೆ ಸುಮಾರು ಮೂರು ದಶಕಗಳ ಕಾಲ ಮುಂದುವರೆದಿದ್ದು ಈಗ ಇತಿಹಾಸ.
ಆರಂಭದಲ್ಲಿ ದೊರೈ ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದರೆ, ಟಿ.ವಿ.ಸಿಂಗ್ ಠಾಕೂರ್, ಅವರ ಗರಡಿಯಲ್ಲಿ ಪಳಗಿದ ನಂತರ ಎ.ಸಿ.ನರಸಿಂಹಮೂರ್ತಿ ಅವರೊಂದಿಗೆ ಸಂಧ್ಯಾರಾಗ ಹಾಗೂ ರಾಜದುರ್ಗದ ರಹಸ್ಯ ಚಿತ್ರಗಳನ್ನು ನಿರ್ದೇಶಿಸುವಷ್ಟರಲ್ಲಿ ದೊರೈ ಅವರೊಂದಿಗಿನ ಗೆಳೆತನ ಬಹಳ ಪಕ್ವಗೊಂಡು ಅವರಿಬ್ಬರೂ ಸೇರಿಕೊಂಡು 1968ರಲಿ ದೊರೈ-ಭಗವಾನ್ ಎಂಬ ಹೆಸರಿನಲ್ಲಿ ಚಿತ್ರವನ್ನು ನಿರ್ದೇಶನವನ್ನು ಆರಂಭಿಸಿ ಅದುವರೆವಿಗೂ ಪೌರಾಣಿಕ ಮತ್ತು ಸಾಮಾಜಿಕ ಪಾತ್ರಗಳನ್ನೇ ಮಾಡುತ್ತಾ ರಸಿಕರ ರಾಜ ಎಂದೇ ಬಿರುದಾಂಕಿತರಾಗಿದ್ದ ರಾಜಕುಮಾರ್ ಅವರನ್ನು ತಮ್ಮ ಚೊಚ್ಚಲ ಜಂಟೀ ನಿರ್ದೇಶನದ ಜೇಡರ ಬಲೆ ಚಿತ್ರದ ಮೂಲಕ ಕನ್ನಡದಲ್ಲಿ ಜೇಮ್ಸ್ ಬಾಂಡ್ ಶೈಲಿಯ ಚಲನಚಿತ್ರಗಳನ್ನು ಮಾಡಿದ ಮೊದಲ ನಿರ್ದೇಶಕರು ಎನಿಸಿಕೊಳ್ಳುತ್ತಾರೆ. ಜೇಡರಬಲೆ ಅಭೂತಪೂರ್ವವಾಗಿ ಯಶಸ್ವಿಯಾಗುತ್ತಿದ್ದಂತೆಯೇ, ದೊರೈ-ಭಗವಾನ್ ಜೋಡಿಗೆ ಹಿಂದಿರುಗಿ ನೋಡುವ ಪ್ರಮೇಯವೂ ಬರಲಿಲ್ಲ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಎನ್ನುವಂತೆ ತಿನ್ನಲು ಊಟವಿಲ್ಲದಿದ್ದರೂ ಭಗವಾನ್ ಉಡುಗೆ ತೊಡುಗೆ ಮತ್ತು ಶಿಸ್ತಿನೆಂದೂ ಬಿಡಲೇ ಇಲ್ಲ. ಸದಾಕಾಲವೂ ಸಫಾರಿ ಇಲ್ಲವೇ ಸೂಟು ಬೂಟಿನಲ್ಲಿಯೇ ಇರುತ್ತಿದ್ದ ಭಗವಾನ್ ಶೂಟಿಂಗ್ ಸಮಯದಲ್ಲೂ ಶಿಸ್ತು ಮತ್ತು ಸಂಯಮಗಳಿಗೆ ಹೆಸರುವಾಸಿಯಾಗಿದ್ದರು. ಯಾವ ಕಲಾವಿದರಿಗೂ ಮತ್ತು ತಂತ್ರಜ್ಞರಿಗೂ ಎಂದಿಗೂ ಅವಾಚ್ಯ ಪದಗಳನ್ನು ಬಳಸದೇ, ತಾಳ್ಮೆಯಿಂದ ಅವರುಗಳಿಂದ ಕೆಲವನ್ನು ತೆಗೆಯುವ ಜಾಣ್ಮೆಯನ್ನು ಭಗವಾನ್ ರೂಢಿಸಿಕೊಂಡಿದ್ದರು.
ನಂತರದ ದಿನಗಳಲ್ಲಿ ಭಗವಾನ್ ರಾಜಕುಮಾರ್ ಅವರ ಕುಟುಂಬದೊಡನೆ ಅತ್ಯಂತ ಸ್ನೇಹವನ್ನು ಸಂಪಾದಿಸಿ ಅವರ ಕುಟುಂಬದವರೇನೋ ಎನ್ನುವಷ್ಟು ಹತ್ತಿರವಾಗುತ್ತಾರೆ.
ಪಾರ್ವತಮ್ಮ ರಾಜಕುಮಾರ್ ಅವರಿಗಿದ್ದ ಕಾದಂಬರಿ ಓದುವ ಹುಚ್ಚಿಗೆ ಭಗವಾನ್ ಸಹಾ ನೀರೆರೆದು ಪೋಷಿಸಿದ್ದಲ್ಲದೇ, ಅವರಿಬ್ಬರೂ ಕಾದಂಬರಿಗಳನ್ನು ಒಟ್ಟೊಟ್ಟಿಗೆ ವಿಮರ್ಶಿಸುವಷ್ಟು ಹತ್ತಿರವಾಗುವುದಲ್ಲದೇ ಅವರ ಮನೆಯ ಬೇಕು ಬೇಡಗಳನ್ನು ನಿರ್ಧರಿಸುವಷ್ಟರ ಮಟ್ಟಿಗೆ ಆತ್ಮೀಯರಾಗಿದ್ದು ಅದು ಅವರ ಕಡೆಯ ದಿನಗಳ ವರೆಗೂ ಮುಂದುವರೆದಿದ್ದು ವಿಶೇಷವಾಗಿತ್ತು. ಇದೇ ಆತ್ಮೀಯ ಸಲುಗೆಯಿಂದಲೇ, ಮುಂದೆ ದೊರೈ-ಭಗವಾನ್, ರಾಜಕುಮಾರ್ ಮತ್ತು ಉದಯ ಶಂಕರ್ ಈ ನಾಲ್ವರು ದಿಗ್ಗಜರ ಸಮಾಗಮದಲ್ಲಿ ಸತತವಾಗಿ ಒಂದಾದ ನಂತರ ಒಂದು ಎನ್ನುವಂತೆ ಆಪರೇಷನ್ ಜಾಕ್‌ಪಾಟ್ ನಲ್ಲಿ ಸಿಐಡಿ 999, ಕಸ್ತೂರಿ ನಿವಾಸ, ಎರಡು ಕನಸು, ಗಿರಿ ಕನ್ಯೆ, ವಸಂತ ಗೀತ, ಆಪರೇಷನ್ ಡೈಮಂಡ್ ರಾಕೆಟ್, ಹೊಸ ಬೆಳಕು , ನಾನೊಬ್ಬ ಕಳ್ಳ, ಪ್ರತಿದ್ವನಿ,ಯಾರಿವನು, ಜೀವನ ಚೈತ್ರ, ಒಡ ಹುಟ್ಟಿದವರು ಸುಮಾರು 23ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮತ್ತು ನಿರ್ಮಾಣ ಮಾಡಿ ಕನ್ನಡ ಚಿತ್ರರಂಗದಲ್ಲಿ ದೊರೈ ಭಗವಾನ್ ಸೂಪರ್ ಹಿಟ್ ಜೋಡಿ ಎನಿಸಿಕೊಳ್ಳುತ್ತಾರೆ. ಬರವಣಿಗೆಯಂತೆ ಸಂಗೀತದಲ್ಲೂ ಅಪಾರವಾದ ಹಿಡಿತವಿದ್ದ ಭಗವಾನ್, ತಮ್ಮ ಬಹುತೇಕ ಸಿನಿಮಾಗಳಿಗೆ ರಾಜನ್-ನಾಗೇಂದ್ರ ಮತ್ತು ಜಿ.ಕೆ.ವೆಂಕಟೇಶ್ ಅವರುಗಳಿಂದ ಅತ್ಯಂತ ಸುಶ್ರಾವ್ಯವಾದ ಸಂಗೀತವನ್ನು ಮಾಡಿಸಿ ಅದಕ್ಕೆ ತಕ್ಕಂತೆ ಚಿ. ಉದಯ ಶಂಕರ್ ಅವರಿಂದ ಹಾಡುಗಳನ್ನು ಬರೆಸುತ್ತಿದ್ದ ಕಾರಣ, ಅವರ ಸಿನಿಮಾದ ಬಹುತೇಕ ಹಾಡುಗಳು ಹಿಟ್ ಆಗಿದ್ದು, ಇಂದಿಗೂ ಸಹಾ ಗುನುಗುವಂತಿದೆ.
ರಾಜಕುಮಾರ್ ಅವರು ಇತರೇ ನಿರ್ದೇಶಕರ ಚಿತ್ರಗಳಲ್ಲಿ ನಿರತರಾಗಿದ್ದಾಗ ದೊರೈ ಭಗವಾನ್ ಜೋಡಿಯು ಕನ್ನಡ ಚಿತ್ರರಂಗದ ಮತ್ತೊಬ್ಬ ಸುರದ್ರೂಪಿ ಮತ್ತು ಪ್ರತಿಭಾವಂತ ನಟ ಅನಂತ್ ನಾಗ್ ಮತ್ತು ಜೂಲಿ ಲಕ್ಮ್ಮೀ ಅವರೊಂದಿಗೆ ಬಯಲು ದಾರಿ, ಬೆಂಕಿಯ ಬಾಲೆ, ಚಂದನದ ಗೊಂಬೆ, ಸೇಡಿನ ಹಕ್ಕಿ, ಬಿಡುಗಡೆಯ ಬೇಡಿ, ಗಾಳಿ ಮಾತು ಮುಂತಾದ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡುವ ಮೂಲಕ 80ರ ದಶಕದಲ್ಲಿ ಲಕ್ಷ್ಮೀ ಮತ್ತು ಅನಂತ್ ಯಶಸ್ವಿ ಜೋಡಿ ಕರ್ನಾಟಕಾದ್ಯಂತ ಮಧ್ಯಮವರ್ಗದವರ ಮನೆ ಮಾತಾಗುತ್ತಾರೆ. ಎರಡು ದೇಹ ಒಂದೇ ಅತ್ಮ ಎಂಬಂತಿದ್ದ ದೊರೈ ಮತ್ತು ಭಗವಾನ್ ನಡುವೆಯೂ ಅದೇನೋ ಕಾರಣದಿಂದಾಗಿ ಕೆಲದಿನಗಳ ಕಾಲ ಮುನಿಸುಂಟಾಗಿ, ಭಗವಾನ್ ತಾವೊಬ್ಬರೇ ನಿರ್ದೇಶಿಸಿದ ಚಿತ್ರ ಯಶಸ್ವಿಯಾಗದೇ ಮತ್ತೆ ಅವರಿಬ್ಬರೂ ಜೋಡಿಯಾದ ಕೆಲವೇ ತಿಂಗಳುಗಳಲ್ಲಿ 2000 ರಲ್ಲಿ ಅಕಾಲಿಕವಾಗಿ ದೊರೈ ಅವರು ನಿಧನರಾದಾಗ ಕೆಲವು ವರ್ಷಗಳ ಕಾಲ ಭಗವಾನ್ ಚಿತ್ರರಂಗದಿಂದ ದೂರ ಉಳಿಯುತ್ತಾರೆ. ನಂತರ ದಿನಗಳಲ್ಲಿ ಜನರು ಅವರನ್ನು ಭಗವಾನ್ ಎಂದು ಗುರುತಿಸಲು ಆರಂಭಿಸಿದಾಗ, ದಯವಿಟ್ಟು ನನ್ನನ್ನು ದೊರೈ-ಭಗವಾನ್ ಎಂದೇ ಗುರುತಿಸಬೇಕೆಂದು ಕೋರಿಕೊಳ್ಳುವ ಮೂಲಕ ತಮ್ಮ ಅಮೂಲ್ಯವಾದ ಗೆಳೆತನವನ್ನು ಎತ್ತಿ ಹಿಡಿಯುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದರು.
ದೊರೈ ಅವರೊಂದಿಗೆ ಸೇರಿಕೊಂದು ಸುಮಾರು 55 ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿದ್ದ ಭಗವಾನ್, ಅವುಗಳ ಪೈಕಿ 24 ಚಿತ್ರಗಳು ಕಾದಂಬರಿ ಆಧಾರಿತ ಚಿತ್ರಗಳಾಗಿದದ್ದು ಗಮನಾರ್ಹವಾಗಿದೆ. ಆರಂಭದಲ್ಲಿ ಕೇವಲ ನಿರ್ದೇಶನ ಮಾತ್ರ ಮಾಡುತ್ತಿದ್ದ ಈ ಜೋಡಿ ನಂತರದ ದಿನಗಳಲ್ಲಿ ತಮ್ಮದೇ ಆದ ಅನುಪಂ ಪ್ರೊಡಕ್ಷನ್ಸ್ ಆರಂಭಿಸಿ ಅದರ ಮೂಲಕವೂ ಅನೇಕ ಯಶಸ್ವಿ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದರು. ರಾಜಕುಮಾರ್ ಮತ್ತು ಅನಂತ್ ನಾಗ್ ಅಲ್ಲದೇ ಶಂಕರ್ ನಾಗ್ ನಾಯಕತ್ವದಲ್ಲಿ ಮುನಿಯನ ಮಾದರಿ ಮತ್ತು ವಿಷ್ಣುವರ್ಧನ್ ಅವರ ಜೊತೆ ನೀನು ನಕ್ಕರೆ ಹಾಲು ಸಕ್ಕರೆ ಯಂತಹ ಯಶಸ್ವಿ ಚಿತ್ರಗಳನ್ನು ನೀಡಿದ್ದರು.
ರಾಜಕುಮಾರ್ ಅವರ ಪರಮಾಪ್ತರಲ್ಲಿ ಒಬ್ಬರಾಗಿದ್ದ ಭಗವಾನ್ ತಮ್ಮ ನಿರ್ದೇಶನವನ್ನು ನಿಲ್ಲಿದ ನಂತರ ಬಹುತೇಕ ಸಮಯವನ್ನು ರಾಜಕುಮಾರ್ ಅವರೊಂದಿಗೆ ಕಳೆಯುತ್ತಿದ್ದರು. ಇಳೀ ವಯಸ್ಸಿನಲ್ಲೂ ರಾಜ ಕುಮಾರ್ ಅವರು ನಡೆಸಿಕೊಡುತ್ತಿದ್ದ ರಸ ಮಂಜರಿ ಕಾರ್ಯಕ್ರಮಗಳಲ್ಲಿ ಪಾದರಸದಂತೆ ರಾಜಕುಮಾರ್ ಅವರ ಹಿಂದೆ ಮುಂದೆ ಓಡಾಡುತ್ತಾ, ರಾಜ್ ಅವರಿಗೆ ಹತ್ತಾರು ಸಲಹೆಗಳನ್ನು ನೀಡುತ್ತಾ, ಕಾರ್ಯಕ್ರಮದ ಓಘಕ್ಕೆ ಮತ್ತಷ್ಟು ಕಳೆಯನ್ನು ಕಟ್ಟುತ್ತಿದ್ದದ್ದನ್ನು ದೂರದರ್ಶನದಲ್ಲಿ ನೋಡುತ್ತಿದ್ದದ್ದು ಇನ್ನು ಮುಂದೆ ಕೇವಲ ನನೆಪಾಗಿ ಉಳಿಯುತ್ತದೆ. ರಾಜಕುಮಾರ್ ಮತ್ತು ಭಗವಾನ್ ಅವರ ಗೆಳೆತನ ಹೇಗಿತ್ತೆಂದೆರೆ, ರಾಜಕುಮಾರ್ ಅವರು ಬಳಸೇ ಇದ್ದ ಅನೇಕ ಬಟ್ಟೆಗಳನ್ನು ಭಗವಾನ್ ಅವರು ಪಾರ್ವತಮ್ಮನವರಿಂದ ಕೇಳಿ ಪಡೆದು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಂಡು ಬಳಸುತ್ತಿದ್ದರಂತೆ. ಇಂತಹ ಸರಳ ವ್ಯಕ್ತಿಗಳು ಇಂದು ಸಿಗುವುದು ಬಹಳ ವಿರಳವೇ ಸರಿ.
ರಾಜ ಕುಮಾರ್ ಅವರು ನಿಧನರಾದ ನಂತರವಂತೂ, ಭಗವಾನ್ ಬಹುತೇಕ ಸಿನಿಮಾರಂಗದಿಂದ ವಿರಾಮ ಪಡೆದುಕೊಂಡು ಆದರ್ಶ ಫಿಲಂ ಇನ್ಸ್‌ಟಿಟ್ಯೂಟ್‌ನ ಪ್ರಾಂಶುಪಾಲಕರಾಗಿ ಚಿತ್ರರಂಗವನ್ನು ಪ್ರವೇಶ ಮಾಡಲು ಬರುತ್ತಿದ್ದ ಹೊಸಾ ಕಲಾವಿದರುಗಳಿಗೆ ತಮ್ಮ ಅನುಭವದ ಧಾರೆಯನ್ನು ಎರೆಯುತ್ತಿದ್ದರು. ಕರೋನ ಸಮಯದಲ್ಲಿ ಕಲಾ ಮಾಧ್ಯಮ ಮತ್ತಿತರ ಅನೇಕ ಯೂಟ್ಯೂಬ್ ಚಾನೆಲ್ಲುಗಳಲ್ಲಿ ತಮ್ಮ ಸುದೀರ್ಘ ಆರು ದಶಕಗಳ ಅನುಭವವನ್ನು ಧಾರಾವಾಹಿಯಂತೆ ಬಿಚ್ಚಿಡುವ ಮೂಲಕ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗಿದ್ದರು.
ಅದೇ ಸರಣಿಯಲ್ಲಿ ಅವರೇ ಹೇಳಿಕೊಂಡಿದ್ದಂತೆ, ಕಳೆದ ವರ್ಷ ನಿಧನರಾದ ಪುನೀತ್ ರಾಜಕುಮಾರ್ ಅವರು ಹುಟ್ಟಿದ ತಕ್ಷಣ ನೋಡಿ, ಎತ್ತಿ ಆಡಿಸಿದ ಮೊತ್ತ ಮೊದಲ ವ್ಯಕ್ತಿಯೇ ಭಗವಾನ್ ಅವರಾಗಿದ್ದರು. 2019 ರಲ್ಲಿ ಸಂಚಾರಿ ವಿಜಯ್ ಮತ್ತು ಅನಂತ್ ನಾಗ್ ಅಭಿನಯದ ಆಡುವ ಗೊಂಬೆ ಅವರ ಕಡೆಯ ಚಿತ್ರವಾಗಿತ್ತು. ಇವರ ಸುದೀರ್ಘ ಕಲಾಸೇವೆಯನ್ನು ಪರಿಗಣಿಸಿ, ಅನೇಕ ಸಂಘಸಂಸ್ಥೆಗಳು ಭಗವಾನ್ ಅವರಿಗೆ ನೂರಾರು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ಕರ್ನಾಟಕ ಸರ್ಕಾರವೂ ಸಹಾ 1995-96 ನೇ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಿ ಗೌರವಿಸಿತ್ತು.
ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಹೊಂದಿದ್ದ ಭಗವಾನ್ ತಮ್ಮ ಅಂತಿಮ ಸಹಕಾರ ನಗರದಲ್ಲಿದ್ದ ಅವರ ನಿವಾಸದಲ್ಲಿ ನೆಮ್ಮದಿಯಾಗಿ ಕಳೆಯುತ್ತಿದ್ದರು. ಇತ್ತೀಚಿನ ಕೆಲವು ತಿಂಗಳಿಂದಲು ವಯೋಸಹಜವಾಗಿ ತೀವ್ರ ಅನಾರೋಗ್ಯ ಪೀಡಿತರಾಗಿ ಅಸ್ಪತ್ರೆಯನ್ನು ಸೇರಿ ಚಿಕಿತ್ದೆ ಪಡೆದು ಮನೆಗೆ ಹಿಂದಿರುಗಿದ್ದರೂ ತಮ್ಮ 90ನೇ ವಯಸ್ಸಿನಲ್ಲಿ ದಿನಾಂಕ 20.02.23 ಸೋಮವಾರ ನಿಧನರಾದರು.
ಕಲೆಗೆ ಮತ್ತು ಕಲಾವಿದರುಗಳಿಗೆ ಎಂದಿಗೂ ಸಾವಿಲ್ಲ. ಅವರುಗಳು ಭೌತಿಕವಾಗಿ ನಮ್ಮೊಂದಿಗೆ ಇರುವುದಿಲ್ಲವಾದರೂ, ಅವರ ಚಿತ್ರಗಳ ಮೂಲಕ ಆಚಂದ್ರಾರ್ಕವಾಗಿ ಕನ್ನಡಿಗರ ಹೃನ್ಮನಗಳಲ್ಲಿ ಇದ್ದೇ ಇರುತ್ತಾರೆ ಅಂತಹ ಕಲಾವಿದರುಗಳ ಪೈಕಿ ದೊರೈ ಭಗವಾನ್ ಸಹಾ ಒಬ್ಬರೂ ಎಂದರೂ ಅತಿಶಯವಾಗದು ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ