ದೀಕ್ಷಿತ್ ನಾಯರ್ ಮಂಡ್ಯ

” ಮೂಡುವನು ರವಿ ಮೂಡುವನು
ಕತ್ತಲೊಡನೆ ಜಗಳಾಡುವನು
ಮೂಡಣ ರಂಗಸ್ಥಳದಲಿ ನೆತ್ತರ
ಮಾಡುವನು ಕುಣಿದಾಡುವನು”

ಒಂದು ತಲೆಮಾರಿನ ಮಕ್ಕಳು ಈ ಮೇಲಿನ ಪದ್ಯವನ್ನು ಏರು ಧ್ವನಿಯಲ್ಲಿ ಹೇಳುತ್ತಾ ಚಪ್ಪಾಳೆ ತಟ್ಟಿ ಕುಣಿದಾಡುತ್ತಿದ್ದರು. ಅಕ್ಷರಶಃ ಈ ಪದ್ಯ ಎಲ್ಲರಿಗೂ ಕಂಠಸ್ಥವಾಗಿತ್ತು. ಉತ್ಸಾಹ, ಕುತೂಹಲ, ಬೇಸರ ಎಲ್ಲವುಗಳ ಸಮ್ಮಿಶ್ರಣದೊಂದಿಗೆ ರಚಿತವಾಗಿದ್ದ ಈ ಪದ್ಯದ ಮೂಲ ಸೃಷ್ಟಿಕರ್ತ ಈ ನಾಡಿನ ಹೆಮ್ಮೆಯ ಕವಿ ಮತ್ತು ಕನ್ನಡಕ್ಕಾಗಿಯೇ ಅಹರ್ನಿಶಿ ದುಡಿದ ‘ಕವಿ ಶಿಷ್ಯ’ ಖ್ಯಾತಿಯ ಪಂಜೆ ಮಂಗೇಶರಾಯರು.

ಪಂಜೆ ಮಂಗೇಶರಾಯರನ್ನು ಒಂದು ನಿರ್ದಿಷ್ಟವಾದ ಸಾಹಿತ್ಯ ಪ್ರಾಕಾರದ ಗೂಟಕ್ಕೆ ತಗುಲಿ ಹಾಕಲು ಸಾಧ್ಯವೇ ಇಲ್ಲ. ಅವರು ಸಾಹಿತ್ಯದ ಎಲ್ಲಾ ವಿಭಾಗಗಳಲ್ಲೂ ಕೈಯಾಡಿಸಿ ಸೈ ಎನಿಸಿಕೊಂಡವರು. ಅರ್ಥಾತ್; ಮಂಗೇಶರಾಯರು ಎಳೆ ಹೃದಯವನ್ನು ಅರ್ಥೈಸಿಕೊಂಡು ಸ್ವತಃ ತಾವೇ ಆಸೆಗಣ್ಣಿನ ಮಗುವಾಗಿ ಸಣ್ಣ ಪುಟ್ಟದ್ದರಲ್ಲಿ ಸಂಭ್ರಮ ಹುಡುಕುತ್ತಲೇ ಮುದಗೊಂಡು ಶಿಶು ಸಾಹಿತ್ಯವನ್ನು ಕ್ಷಣಾರ್ಧದಲ್ಲಿಯೇ ರಚಿಸಿ ಬಿಡುತ್ತಿದ್ದರು. ಮಂಗೇಶರಾಯರ ಮೋಡಿಗಾರಿಕೆ ಮತ್ತು ಅವರ ಶಿಶು ಸಾಹಿತ್ಯದ ಬಿಸುಪು ಎಳವೆಗಳನ್ನು ತಟ್ಟುವಲ್ಲಿ ಯಶಸ್ವಿಯಾಗಿ ಬಿಡುತ್ತಿದ್ದವು. ಅಂತೆಯೇ ದಿಕ್ಕು ಬದಲಿಸಿ ಕೂತು ವಾಸ್ತವ ಪ್ರಜ್ಞೆಯಿಂದ ದಿಗಲುಗೊಂಡ ಸಮಾಜವನ್ನು ಬಡಿದೆಚ್ಚರಿಸುವ ಪ್ರತಿಭಟನೆಯ ಕವಿತೆಗಳನ್ನೂ ಬರೆದು ಪಂಜೆ ನಿರುಮ್ಮಳರಾಗುತ್ತಿದ್ದರು. ಸಣ್ಣ ಕಥೆಗಳು ಕೂಡ ಅವರಿಂದ ಸರಾಗವಾಗಿ ಬರೆಸಿಕೊಳ್ಳುತ್ತಿದ್ದವು. ಲಲಿತ ಪ್ರಬಂಧ,ಸಂಶೋಧನಾ ಸಾಹಿತ್ಯವನ್ನೂ ಸುಲಿದ ಬಾಳೆ ಹಣ್ಣಿನಂತೆಯೇ ಪಂಜೆ ಬರೆದು ಮುಗಿಸುತ್ತಿದ್ದರು. ಅವರ ಸ್ಪರ್ಶ ಪಡೆದ ಪ್ರತಿ ಸಾಹಿತ್ಯ ಪ್ರಾಕಾರಗಳು ಪ್ರೌಢತೆಯಿಂದಲೂ ಮತ್ತು ಓದುಗರನ್ನು ವಿಭಿನ್ನ ಆಲೋಚನೆಯತ್ತ ಓರೆ ಹಚ್ಚುವಲ್ಲಿ ಗೆಲ್ಲುತ್ತಿದ್ದವು ಎಂಬುದು ವಿಶೇಷ. ಮಂಗೇಶರಾಯರು ತಮ್ಮ ಬದುಕಿನುದ್ದಕ್ಕೂ ಸುಖಾ ಸುಮ್ಮನೆ ಕೈ ನವೆ ತೀರಿಸಿಕೊಳ್ಳುವಂತಹ ಬರಹಗಳನ್ನು ಬರೆದವರೇ ಅಲ್ಲ.

ಬಹು ಮುಖ್ಯವಾಗಿ ನಾವು ತಿಳಿದುಕೊಳ್ಳಬೇಕಾಗಿರುವುದು; ಶೈಶವಾವಸ್ಥೆಯಲ್ಲಿದ್ದ ಮತ್ತು ಕನ್ನಡ ಸಾಹಿತ್ಯ ಲೋಕದೊಳಗೆ ಹುಟ್ಟೇ ಪಡೆಯದ ಅದೆಷ್ಟೋ ಸಾಹಿತ್ಯ ಪ್ರಾಕಾರಗಳಲ್ಲಿ ಮೊದಲು ಬರೆಯಲು ಪ್ರಾರಂಭಿಸಿದ್ದು ಪಂಜೆ ಮಂಗೇಶರಾಯರು. ಅದರಲ್ಲೂ ಸಣ್ಣ ಕಥೆ ಮತ್ತು ಶಿಶು ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟು ಸ್ವತಃ ತಾವು ಕೂಡ ಅದೇ ಸಾಹಿತ್ಯ ಪ್ರಾಕಾರಗಳಲ್ಲಿಯೇ ವಿಪುಲವಾಗಿ ಬರೆದವರು.


ಕನ್ನಡ ಭಾಷೆ ಮತ್ತು ಕನ್ನಡ ನಾಡಿನ ಬಗೆಗೆ ಪಂಜೆ ಅವರಿಗಿದ್ದ ಅಪಾರ ಅಭಿಮಾನ ಸರ್ವಕಾಲಕ್ಕೂ ಮತ್ತು ಎಲ್ಲಾ ತಲೆಮಾರಿನ ಜನರಿಗೂ ಮಾದರಿ. ಇತರೆ ಭಾಷೆಗಳ ಕವಿತೆ ಕಥೆಗಳಿಗೆ ಪಂಜೆ ಪ್ರಭಾವಿತರಾದರೂ ಕನ್ನಡತನವನ್ನು ಎಲ್ಲಿಯೂ ಬಿಟ್ಟು ಕೊಟ್ಟವರಲ್ಲ. ಕನ್ನಡ ಭಾಷೆಯ ಸಂಸರ್ಗ ಬೆಳೆಯಲು ಆಂಗ್ಲ ಭಾಷೆಯ ಅಧ್ಯಯನವು ಕೂಡ ಬಹು ಮುಖ್ಯವಾದದ್ದು ಎಂಬುದನ್ನು ಅವರು ಅರಿತವರಾಗಿದ್ದರಿಂದ ಆಂಗ್ಲ ಭಾಷೆಯ ಸಾಹಿತ್ಯವನ್ನು ಕನ್ನಡದೊಳಕ್ಕೆ ತಂದು ಕನ್ನಡಿಗರ ಹೃದಯವನ್ನು ಅರಳಿಸಿದರು. ಆದರೆ ನೆನಪಿರಲಿ; ಪಂಜೆಯವರು ಆಂಗ್ಲ ಭಾಷೆಯಿಂದ ತಂದ ಕವಿತೆಗಳನ್ನು ಶುದ್ಧ ನಮ್ಮ ಮಣ್ಣಿನ ಕವಿತೆಗಳೇ ಎಂದುಕೊಳ್ಳುವಷ್ಟರ ಮಟ್ಟಿಗೆ ಸಹಜ, ಸುಂದರ ಸೊಗಡಿನಲ್ಲಿಯೇ ರಚಿಸಿ ಶಾಶ್ವತವಾಗಿ ನಮ್ಮ ನಾಲಿಗೆಗಳಲ್ಲಿ ನರ್ತಿಸುವಂತೆ ಮಾಡಿದರು. ಹೌದು; ಪಂಜೆ ಅವರಿಂದ ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಬಂದ ಕವಿತೆಗಳು ನಮ್ಮದೇ ಕವಿತೆಗಳಾಗಿ ಉಳಿದುಬಿಟ್ಟವು.

ಮಂಗೇಶರಾಯರು ಕೇವಲ ಸಾಹಿತ್ಯಕ್ಕೆ ಅಂಟಿಕೊಂಡು ಕೂರದೆ ಹೋರಾಟದತ್ತಲೂ ಹೊರಳಿಕೊಂಡು ಸಮ ಸಮಾಜದ ನಿರ್ಮಾಣದ ಮತ್ತು ಸ್ವತಂತ್ರ ಭಾರತದ ಕನಸನ್ನು ಕಾಣುತ್ತಿದ್ದರು. ತಮ್ಮ ಹರಿತವಾದ ಲೇಖನಿಯಿಂದ ಕಿಚ್ಚು ಮತ್ತು ರೊಚ್ಚಿನ ಕವಿತೆಗಳನ್ನು ಬರೆದು ಬ್ರಿಟಿಷರ ಕೆಂಗಣ್ಣಿಗೂ ಗುರಿಯಾಗಿದ್ದರು. ಇಂದಿನ ಬಹುತೇಕರು ಶಿಶು ಪದ್ಯವೆಂದೇ ತಿಳಿದಿರುವ
“ನಾಗರ ಹಾವೆ! ಹಾವೊಳು ಹೂವೆ!
ಬಾಗಿಲ ಬಿಲದಲಿ ನಿನ್ನಯ ಠಾವೆ?
ಕೈಗಳ ಮುಗಿವೆ, ಹಾಲನ್ನೀವೆ
ಬಾ ಬಾ ಬಾ ಬಾ ಬಾ ಬಾ ಬಾ ಬಾ” ಈ ಕವಿತೆಯನ್ನು ಬ್ರಿಟಿಷರ ವಿರುದ್ಧ ಪಂಜೆ ಅವರು ಸಿಡಿದೆದ್ದು ಮತ್ತು ಸಿಟ್ಟಿಗೆದ್ದು ಬ್ರಿಟಿಷರನ್ನು ವಿಷಕಾರಿ ನಾಗರ ಹಾವಿಗೆ ಹೋಲಿಸಿ ಬರೆದದ್ದು.

ಪಂಜೆ ಮಂಗೇಶರಾಯರು ಅಂದಿಗೆ ಅತೀವ ಶೋಷಣೆಗೆ ಒಳಗಾಗಿದ್ದ ಹರಿಜನರ ಸ್ಥಿತಿಗೆ ಮರುಗಿ ಅವರ ಅಸಹನೀಯ ಸ್ಥಿತಿಗೆ ನೊಂದು ಬರೆದ “ಹೊಲೆಯನ ಹಾಡು” ಎಂಬ ಕವಿತೆಯನ್ನು ನಾವು ಎಲ್ಲಾ ಕಾಲದಲ್ಲೂ ನೆನಪಿಡಬೇಕು. ಮಂಗೇಶರಾಯರು ಒಬ್ಬ ಶುದ್ಧ ಅಂತಃಕರಣದ ಮತ್ತು ಹೃದಯ ವೈಶಾಲ್ಯತೆಯನ್ನು ಹೊಂದಿದ್ದ ಕವಿಯಾಗಿದ್ದರು ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ?

ಪಂಜೆ ಅವರು ದಲಿತರಿಗಾಗಿ ಬರೆದ ಕವಿತೆ ಇಂತಿದೆ;

“ಉಳ್ಳಯ್ಯಾ; ದಯೆಗೊಳ್ಳಯ್ಯಾ!
ಕಣ್ಣು, ಮೂಗು, ಕಿವಿ, ಕೈ, ಕಾಲು, ಗಂಟಲು –
ಅಣ್ಣ, ನಿಮ್ಮಂತೆಯೆ ನಮಗೆಲ್ಲ ಉಂಟು.
ಬಣ್ಣ ಕಪ್ಪೆಂದು ನೀ ಬಿಡುವುದೆ ನಂಟು?
ಎಣ್ಣೆಯೋಲ್ ಹಿಡಿವುದೇ ನಮ್ಮ ಮೈ ಅಂಟು?

ಅಂದಿನ ಕೆಟ್ಟ ಸಮಾಜದ ಬಗೆಗೆ ಪಂಜೆ ಅವರಿಗಿದ್ದ ರೋಷವನ್ನು ನಾವು ಈ ಕವಿತೆಯಲ್ಲಿ ಗಮನಿಸಬಹುದು. ಹಾಗೆ ಪಂಜೆ ಅವರು ತಾವು ಪ್ರೌಢಶಾಲೆಯ ಇನ್ಸ್ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾಗ ದಲಿತ ಮಕ್ಕಳನ್ನು ಉಚಿತವಾಗಿ ಶಾಲೆಗೆ ದಾಖಲಾತಿ ಮಾಡಿಕೊಂಡು ಅವರೊಂದಿಗೆಯೇ ಪಂಕ್ತಿಯಲ್ಲಿ ಭೋಜನ ಸೇವಿಸುತ್ತಿದ್ದದ್ದನ್ನು ಅಂದಿನ ಕಾಲದ ಮಹಾನ್ ಕ್ರಾಂತಿಯೆಂದೇ ನಾವು ಭಾವಿಸಬಹುದು.

ಸಾಹಿತ್ಯ, ಬೋಧನೆ, ಕನ್ನಡತನ, ಹೋರಾಟ ಮತ್ತು ಸ್ವಾತಂತ್ರ್ಯದ ಕನಸನ್ನೇ ತಮ್ಮ ಪುರುಷಾರ್ಥವಾಗಿಸಿಕೊಂಡಿದ್ದ ಪಂಜೆ ಅವರು ಅಪಾರ ಹಾಸ್ಯ ಪ್ರಜ್ಞೆಯ ವ್ಯಕ್ತಿಯೂ ಆಗಿದ್ದರು ಎಂಬುದನ್ನು ಅವರ ಸಮಕಾಲಿನ ಬಹುತೇಕ ಕವಿಗಳು ತಮ್ಮ ಬರಹಗಳಲ್ಲಿ ದಾಖಲಿಸಿದ್ದಾರೆ. ತಮ್ಮ ವಿಶಿಷ್ಟವಾದ ಭಾಷಾ ಶೈಲಿಯ ಮುಖೇನವೆ ನೋಡುಗರ/ಕೇಳುಗರ ಮೊಗದಲ್ಲಿ ನಗೆ ಅರಳಿಸುವ ಚಮತ್ಕಾರಿಕೆಯನ್ನು ಪಂಜೆ ಸಿದ್ಧಿಸಿಕೊಂಡಿದ್ದರು. ಎಲ್ಲಾ ಕ್ಷೇತ್ರಗಳಲ್ಲೂ ಆಸಕ್ತಿ ತಳೆದು ಅಪಾರ ಸ್ನೇಹಿತ ವರ್ಗವನ್ನು ಕೂಡ ಅವರ ಸಂಪಾದಿಸಿದ್ದರು. ಅವರು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಮಾಡಿದ ನೂತನ ಪ್ರಯೋಗಗಳು ಎಲ್ಲರನ್ನು ಬೆರಗುಗೊಳಿಸುವಂತಹವು. ಒಬ್ಬ ಮನುಷ್ಯ ಬಹು ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಎಲ್ಲವನ್ನು ಸಮರ್ಥವಾಗಿ ನಿಭಾಯಿಸುತ್ತಾ ಮಹಾನ್ ಸಾಧಕ ಎನಿಸಿಕೊಳ್ಳಬಹುದು ಎಂಬುದಕ್ಕೆ ಬಹುದೊಡ್ಡ ನಿದರ್ಶನವಾಗಿ ನಮ್ಮ ಎದುರು ಪಂಜೆ ಮಂಗೇಶರಾಯರು ನಿಲ್ಲುತ್ತಾರೆ.

ಪಂಜೆ ಅವರ ಸಾಹಿತ್ಯ ಈಗಾಗಲೇ ಹೇಳಿರುವಂತೆ ಕಥೆ, ಕವಿತೆ,ಪ್ರಬಂಧ, ಸಂಶೋಧನೆ, ಬಾಲ ಸಾಹಿತ್ಯ ಪ್ರಾಕಾರಗಳಲ್ಲಿ ಬರೆದು ನಿಷ್ಣಾತರು ಎನಿಸಿಕೊಂಡ ಪಂಜೆ ಅವರು ಇಂದಿಗೂ ಕನ್ನಡ ಸಾರಸ್ವತ ಲೋಕದಲ್ಲಿ ಅವಿಸ್ಮರಣೀಯವಾಗಿ ಉಳಿದಿದ್ದಾರೆ.

ಅಪಾರ ಸಂಖ್ಯೆಯಲ್ಲಿ ಪಂಜೆ ಅವರು ಸಾಹಿತ್ಯವನ್ನು ರಚಿಸಿದ್ದರೂ ಓದುಗ ಮಹಾಶಯರಿಗೆ ಕೆಲವೊಂದಿಷ್ಟು ಕವಿತೆಗಳು ಮತ್ತು ಕಥೆಗಳು ಥಟ್ಟನೆ ನೆನಪಾಗುತ್ತವೆ; ಅವರ ‘ಗುಡು ಗುಡು ಗುಮ್ಮಟ ದೇವರು’, ‘ಹೇನು ಸತ್ತು ಕಾಗೆ ಬಡವಾಯಿತು’, ‘ಸಿಗಡೆ ಯಾಕೆ ಒಣಗಲಿಲ್ಲ’, ‘ಮೆಣಸಿನ ಕಾಳಪ್ಪ’, ‘ಮೂರು ಕರಡಿಗಳು’, ‘ಇಲಿಗಳ ಥಕ ಥೈ’ ಇವುಗಳು ಮಕ್ಕಳನ್ನು ಸಂಪೂರ್ಣವಾಗಿ ಆವರಿಸಿ ಬಿಡುವಂತಹ ಕಥನ- ಕವನಗಳು. ಅವರು ಬರೆದ ‘ಹುತ್ತರಿ ಹಾಡು’ ಇಂದಿಗೂ ಸುಪ್ರಸಿದ್ಧ ಕವಿತೆಯಾಗಿ ಸರ್ವರಿಂದಲೂ ಓದಿಸಿಕೊಳ್ಳುತ್ತಿದೆ. ಸಣ್ಣ ಕಥೆಯೇ ಸೃಷ್ಟಿಯಾಗದ ಹೊತ್ತಿನಲ್ಲಿ ಪಂಜೆ ಅವರು ಪ್ರಾರಂಭದಲ್ಲಿ ಬರೆದ ‘ಕಮಲಾಪುರದ ಹೋಟ್ಲಿನಲ್ಲಿ’ ಕಥೆ ಎಲ್ಲಾ ಕಥೆಗಳ ದೊಡ್ಡಣ್ಣ ಎಂತಲೇ ಕರೆಸಿಕೊಂಡಿದೆ. ಕಮಲಾಪುರದ ಹೋಟ್ಲಿನಲ್ಲಿನ ಗುಂಡಾಚಾರಿಯ ಪಾತ್ರ ಈಗಲೂ ಓದುಗರನ್ನು ಕಾಡುವುದರಲ್ಲಿ ಆಶ್ಚರ್ಯವಿಲ್ಲ.

ಶ್ರೀ ಸಾಮಾನ್ಯರಿಗಾಗಿ ಮತ್ತು ಶ್ರೀಸಾಮಾನ್ಯರ ಸಂತಸಕ್ಕಾಗಿಯೇ ಬರೆದು ಮಡಿದವರು ಪಂಜೆಮಂಗೇಶರಾಯರು.

“ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ? ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲಿ ನಿಂದಳೋ? ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ? ಎಲ್ಲಿ ನೆಲವನು ತಣಿಸಿ, ಜನಮನ ಹೊಲದ ಕಳೆ ಕಳೆ ಕಳೆವಳೋ?”

ಈ ಮೇಲಿನ ಕವಿತೆ ಮಂಗೇಶರಾಯರಲ್ಲಿದ್ದ ಗಟ್ಟಿ ಕನ್ನಡತನವನ್ನು ತೋರಗೊಡುತ್ತದೆ.

ಪಂಜೆ ಮಂಗೇಶರಾಯರು ಒಂದು ಸಮ್ಮೇಳನದ ಭಾಷಣದಲ್ಲಿ
“ನನಗೀಗ ಇರುವುದು ಒಂದೇ ಆಶೆ, ನನ್ನ ಕಡೆಯ ಗಳಿಗೆಯಲ್ಲಿ ನನ್ನ ನಾಲಗೆ ‘ಕೃಷ್ಣ’, ‘ಕೃಷ್ಣ’ ಎಂದು ನುಡಿಯುವಂತೆಯೇ ‘ಕನ್ನಡ’, ‘ಕನ್ನಡ’ ಎಂದೂ ನುಡಿಯುತ್ತಿರಲಿ!’ ” ಎಂದು ತುಂಬು ಅಭಿಮಾನದಿ ಹೇಳಿದಾಗ ಇಡೀ ಸಭೆಯಲ್ಲಿದ್ದ ಜನರು ಚೇತರಿಸಿಕೊಳ್ಳಲು ಎರಡು ನಿಮಿಷ ತೆಗೆದುಕೊಂಡಿದ್ದರಂತೆ (ಡಿವಿಜಿ ಅವರ ಹೇಳಿಕೆ)

ಪಂಜೆ ಮಂಗೇಶರಾಯರು ಹೈದರಾಬಾದಿನಲ್ಲಿ ನಿಧನರಾದಾಗ ಕನ್ನಡದ ಮೊದಲ ರಾಷ್ಟ್ರ ಕವಿಯಾದ ಗೋವಿಂದ ಪೈ ಅವರು
“ತುಳುನಾಡಿನ ಕನ್ನಡ ಸಾಹಿತ್ಯದ ವಿಗಡ ದೀಪಸ್ತಂಭವಾರಿತು; ಬೆಳಕು ಬೆಳಕಿಗೆ ಸಾರಿತು” ಎಂಬ ಮಾತುಗಳನ್ನು ಆರ್ದ್ರತೆಯಿಂದ ನುಡಿದಿದ್ದರಂತೆ.

ಕನ್ನಡಕ್ಕಾಗಿಯೇ ದುಡಿದ, ಅಪ್ಪಟ ಕನ್ನಡಿಗನಾಗಿಯೇ ಉಳಿದ ಪಂಜೆ ಮಂಗೇಶರಾಯರ ಜನ್ಮದಿನ ಇಂದು. ಪಂಜೆ ಅವರಂತಹ ಮತ್ತೊಬ್ಬ ಕವಿ ಹುಟ್ಟಬಹುದೇನೋ (?) ಆದರೆ ಅವರಂತಹ ಕನ್ನಡಿಗ ಮತ್ತೆಂದೂ ಹುಟ್ಟಲಾರ!

ಪಂಜೆ ಮಂಗೇಶರಾಯ ಬಗ್ಗೆ ಹೆಚ್ಚಿನ ಮಾಹಿತಿ

ಜನನ : 1874 ಫೆಬ್ರವರಿ 22

ಕಾವ್ಯನಾಮ : ಕವಿ ಶಿಷ್ಯ

ಜನ್ಮಸ್ಥಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳ

ತಂದೆ ತಾಯಿ : ರಾಮಪ್ಪಯ್ಯ ಮತ್ತು ಶಾಂತಾದುರ್ಗ

ವಿದ್ಯಾಭ್ಯಾಸ : ಬಿ ಎ

ಉದ್ಯೋಗ : ಸಾಹಿತಿ, ಮುಖ್ಯೋಪಾಧ್ಯಾಯ

ಪ್ರಮುಖ ಕೃತಿಗಳು : ಶಬ್ದಮಣಿದರ್ಪಣಂ, ಪಂಚಕಜ್ಜ, ಐತಿಹಾಸಿಕ ಕಥಾವಳಿ, ಕೋಟಿ ಚನ್ನಯ

ನಿಧನ : 1937 ಅಕ್ಟೋಬರ್ 24, ಹೈದರಾಬಾದ್

ಕುವೆಂಪು, ಶಿವರಾಮ ಕಾರಂತ, ವೀ ಸೀತಾರಾಮಯ್ಯ ಸೇರಿದಂತೆ ಕನ್ನಡ ಸಾರಸ್ವತ ಲೋಕದ ಹಲವಾರು ಸರ್ವ ಶ್ರೇಷ್ಠ ಕವಿಗಳು ಪಂಜೆ ಅವರಿಂದ ಪ್ರಭಾವಿತರಾಗಿದ್ದರು.

ತಿರುಳು ಮತ್ತು ಹುರುಳಿರುವ ಸಾಹಿತ್ಯವನ್ನೇ ಬರೆದು ಕನ್ನಡದ ತೇರನ್ನು ಎಳೆದ ಪಂಜೆ ಮಂಗೇಶರಾಯರು ಕನ್ನಡ ಸಾಹಿತ್ಯ ಓದುಗರ ಹೃದಯದಲ್ಲಿ ಸದಾ ವಿರಾಜಮಾನರು.

Leave a Reply

Your email address will not be published.

This site uses Akismet to reduce spam. Learn how your comment data is processed.