Dr Manmohan Viadya and Sri Bhaiyyaji Joshi at Samanvay Baithak- Ujjain

ರಾಷ್ಟ್ರೀಯ ಸ್ವಯಂಸೇವಕ ಸಂಘ ಸಹಕಾರ್ಯವಾಹ ಸುರೇಶ್ ಜೋಶಿ (ಭೈಯಾಜೀ) ಅವರು ನೀಡಿದ ಪತ್ರಿಕಾ ಹೇಳಿಕೆ 

  ಉಜ್ಜಯಿನಿ ಅಗಸ್ಟ್ 20:

Dr Manmohan Viadya and Sri Bhaiyyaji Joshi at Samanvay Baithak- Ujjain

ಒಂದೇ ಉದ್ದೇಶದಿಂದ ಪ್ರೇರಿತರಾಗಿ ರಾಷ್ಟ್ರ ಮತ್ತು ಸಮಾಜ ಜೀವನದ ವಿಭಿನ್ನ ಕ್ಷೇತ್ರಗಳಲ್ಲಿ ಕಾರ್ಯನಿರತವಾದ ಸಂಘಟನೆಯ ಪ್ರಮುಖ ಕಾರ್ಯಕರ್ತರು 3-4 ವರ್ಷಗಳಿಗೊಮ್ಮೆ ವಿಚಾರ-ವಿಮರ್ಶೆಯ ಉದ್ದೇಶದಿಂದ ಒಂದೆಡೆ ಸೇರುತ್ತಾರೆ. ಇಲ್ಲಿ ಅನುಭವಗಳ ಪರಸ್ಪರ ವಿನಿಮಯ ನಡೆಯುತ್ತದೆ.

ಇದೇ ಸರಣಿಯಲ್ಲಿ ಈ ಸಮನ್ವಯ ಬೈಠಕ್ ಉಜ್ಜೈನಿಯಲ್ಲಿ ಸೇರಿದೆ; ಇದರಲ್ಲಿ ವಿವಿಧ ವಿಚಾರಗಳ ಕುರಿತು ಚರ್ಚಿಸಲಾಗಿದೆ; ಜತೆಗೆ ಇವತ್ತಿನ ಸಾಮಾಜಿಕ ಪರಿಸ್ಥಿತಿಯನ್ನು ಕುರಿತು ಕೂಡ ಚಿಂತನೆ ನಡೆಸಲಾಗಿದೆ.

ವಿದೇಶದಲ್ಲಿರುವ ಕಪ್ಪು ಹಣದ ವಾಪಸಾತಿ ಮತ್ತು ಭ್ರಷ್ಟಾಚಾರಗಳು ಈಗ ದೇಶವ್ಯಾಪಿ ಚಿಂತನೆಯ ವಿಷಯಗಳಾಗಿವೆ. ಜನಸಾಮಾನ್ಯರನ್ನು ಚಿಂತೆಗೀಡು ಮಾಡಿರುವ ಈ ಸಮಸ್ಯೆಗಳ ವಿರುದ್ಧ ಜನರ ಭಾವನೆಗಳು ಕ್ರೋಢೀಕೃತವಾಗಿ ಆಂದೋಲನದ ರೂಪ ಪಡೆದು ತೀವ್ರ ಸ್ವರೂಪದಲ್ಲಿ ಪ್ರಕಟವಾಗುತ್ತಿದೆ. ಎಬಿವಿಪಿ ನಡೆಸಿದ ’ಯೂತ್ ಅಗೈನಸ್ಟ್ ಕರಪ್ಶನ್’ (ಭ್ರಷ್ಟಾಚಾರದ ವಿರುದ್ಧ ಯುವಜನರು) ಚಳವಳಿ ಇರಲಿ, ಬಾಬಾ ರಾಮ್ ದೇವ್ ಅವರ ಮಾರ್ಗದರ್ಶನದಲ್ಲಿ ’ಭಾರತ ಸ್ವಾಭಿಮಾನ ಟ್ರಸ್ಟ್’ ನೇತೃತ್ವದಲ್ಲಿ ನಡೆಯುತ್ತಿರುವ ಆಂದೋಲನವಿರಲಿ ಅಥವಾ ಅಣ್ಣಾ ಹಜಾರೆ ಅವರ ನೇತೃತ್ವದಲ್ಲಿ ಜನ ಲೋಕ್ ಪಾಲ್ ಮಸೂದೆಯ ಬೇಡಿಕೆಯನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಹೋರಾಟವಿರಲಿ-ಇವುಗಳಿಗೆ ಸಿಗುತ್ತಿರುವ ವ್ಯಾಪಕ ಜನಬೆಂಬಲವು ಇದರ ಹಿಂದಿರುವ ದೇಶಭಕ್ತಿ ಮತ್ತು ಪ್ರಖರ ಭಾವನೆಗಳನ್ನು ಪರಿಚಯಿಸುತ್ತದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘವು 2011 ರ ಮಾರ್ಚ್ ತಿಂಗಳಲ್ಲಿ ನಡೆಸಿದ ’ಅಖಿಲ ಭಾರತೀಯ ಪ್ರತಿನಿಧಿ ಸಭೆ’ಯಲ್ಲಿ ಸ್ವೀಕರಿಸಿದ ನಿರ್ಣಯದಲ್ಲಿ, ಭ್ರಷ್ಟಾಚಾರದ ವಿರುದ್ಧ ನಡೆಯುವ ಚಳವಳಿಗಳನ್ನು ಸಂಘ ಬೆಂಬಲಿಸುತ್ತದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಅದಕ್ಕನುಗುಣವಾಗಿ ಇಂತಹ ಚಳವಳಿಗಳಲ್ಲಿ ಸಂಘದ ಸ್ವಯಂ ಸೇವಕರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ನಮ್ಮ ಈ ಬೆಂಬಲ ಇನ್ನು ಕೂಡ ಮುಂದುವರಿಯಲಿದೆ. ವಿವಿಧ ಚಳವಳಿಗಳ ನಡುವೆ ಸಮನ್ವಯ ಉಂಟಾಗಬೇಕು; ಎಲ್ಲರೂ ಜತೆಯಾಗಿ ಮುನ್ನಡೆಯಬೇಕೆನ್ನುವುದು  ನಮ್ಮ ಗ್ರಹಿಕೆಯಾಗಿದೆ.

ಶಾಂತಿಪೂರ್ಣ, ಅಹಿಂಸಾತ್ಮಕ ಹಾಗೂ ಕಾನೂನಿನ ಚೌಕಟ್ಟಿನೊಳಗೆ ನಡೆಯುತ್ತಿರುವ ಆಂದೋಲನವನ್ನು ದಮನ ಮಾಡುವುದಕ್ಕೆ ಶಾಸನದ ದುರುಪಯೋಗ, ಚಳವಳಿಗಾರರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಬದಲು ಅವರನ್ನು ಸೆರೆಮನೆಗೆ ತಳ್ಳುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಜನರ ಭಾವನೆಗಳನ್ನು ಗೌರವಿಸುವುದು ಮತ್ತು ಸಮಸ್ಯೆಯ ಪರಿಹಾರಕ್ಕೆ ಶ್ರಮಿಸುವುದು ಸರ್ಕಾರದ ಹೊಣೆಗಾರಿಕೆಯಾಗಿದೆ.

ರಾಷ್ಟ್ರೀಯ ಸಲಹಾ ಮಂಡಳಿ (National Advisory Council) ಯು ಸಿದ್ಧ ಪಡಿಸಿರುವ ಸಾಂಪ್ರದಾಯಿಕ ಮತ್ತು ಸಂಭಾವ್ಯ ಹಿಂಸಾ ನಿಯಂತ್ರಣ ಅಧಿನಿಯಮ-2011 ದೇಶದ ಏಕತೆ ಮತ್ತು ಸಾಮಾಜಿಕ ಸೌಹಾರ್ದಗಳಿಗೆ ತೀವ್ರವಾದ ಹಾನಿ ಎಸಗಬಹುದು.

ಈ ಮಸೂದೆಯು ಸಂವಿಧಾನದ ಮೂಲಭೂತ ನಿಲುವಿಗೆ ಆಘಾತ ಉಂಟುಮಾಡುವಂತದೆ. ಅದಲ್ಲದೆ ಸಮಾಜದಲ್ಲಿ ಅವಿಶ್ವಾಸ ಹಾಗೂ ವಿಘಟನೆ (ಒಡಕು) ಗಳಿಗೆ ಕಾರಣವಾದೀತು. ಒಟ್ಟಿನಲ್ಲಿ ಪ್ರಸ್ತುತ ಮಸೂದೆಯು ಎನ್ ಎ ಸಿ ಯ ಮೂಲಭೂತವಾದಿ ಮತ್ತು ವಿಘಟನಕಾರಿ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ.

ಈ ವಿಧೇಯಕವು ಸಂವಿಧಾನದ ಮೂಲಕ ರಚಿಸಲಾದ ಒಕ್ಕೂಟ ಮಾದರಿಯನ್ನು ತಿರಸ್ಕರಿಸುವಂತಿದೆ. ರಾಜ್ಯಗಳಿಗೆ ದತ್ತವಾಗಿರುವ ಅಧಿಕಾರಗಳ ಮೇಲೆ ಆಕ್ರಮಣ ಮಾಡುವಂತಿದೆ. ಆದ್ದರಿಂದ ಸರ್ಕಾರ ಈ ವಿಧೇಯಕವನ್ನು ನೇರವಾಗಿ ತಿರಸ್ಕರಿಸಿ, ದೇಶದ ಏಕತೆಯನ್ನು ಉಳಿಸಬೇಕು. ಇಂತಹ ಒಂದು ವಿಧೇಯಕವನ್ನು ರೂಪಿಸಿರುವ ರಾಷ್ಟ್ರೀಯ ಸಲಹಾ ಮಂಡಳಿಯು ರಾಷ್ಟ್ರದ ಮುಂದೆ ತನ್ನ ಅಸ್ಥಿತ್ವದ ಔಚಿತ್ಯವನ್ನೇ ಪ್ರಶ್ನಾರ್ಹವನ್ನಾಗಿ ಮಾಡಿದೆ.

ಸಮಾಜದ ವಿವಿಧ ಸಮುದಾಯಗಳು ಎದ್ದು ನಿಂತು ವಿಭಿನ್ನ ಸ್ವರಗಳಲ್ಲಿ ಈ ವಿಧೇಯಕವನ್ನು ವಿರೋಧಿಸಬೇಕಾಗಿದೆ.

ಸಮಾಜದ ಸೌಹಾರ್ದಕ್ಕೆ ಹಾನಿಕರವಾದ ಮತ್ತು ಸಾಮಾಜಿಕ ಆರೋಗ್ಯವನ್ನೇ ಹಾಳುಗೆಡಹುವ ಈ ವಿಷಯದ ಕುರಿತು ಸರ್ಕಾರ ಗಂಭೀರವಾಗಿ ಚಿಂತಿಸಬೇಕಾಗಿದೆ.

Issued by

ಡಾ. ಮನಮೋಹನ್ ವೈದ್ಯ

ಅ.ಭಾ.ಪ್ರಚಾರ ಪ್ರಮುಖ


Leave a Reply

Your email address will not be published.

This site uses Akismet to reduce spam. Learn how your comment data is processed.