Shivarama Karantha_Bharatha_Bharathi

by Du Gu Lakshman

ಕಥೆಗಳೆಂದರೆ ಯಾರಿಗೆ ತಾನೆ ಇಷ್ಟವಿಲ್ಲ? ಅದರಲ್ಲೂ ಮಕ್ಕಳಿಗೆ ಕಥೆಗಳೆಂದರೆ ಇಷ್ಟವಿಲ್ಲದೆ ಇರಲು ಸಾಧ್ಯವೆ? ರಚ್ಚೆ ಹಿಡಿದ ಪುಟ್ಟ ಮಕ್ಕಳನ್ನು ಸಂತೈಸಲು ತಾಯಿಗೆ ಹೊಳೆಯುವ ಒಳ್ಳೆಯ ಉಪಾಯವೆಂದರೆ ಆ ಮಗುವಿಗೆ ಪುಟ್ಟದೊಂದು ಕಥೆ ಹೇಳುವುದು. ಅದು ಚಂದ ಮಾಮನ ಕಥೆಯಾಗಿರಬಹುದು ಅಥವಾ ಯಾವುದೋ ಅಡುಗೂಲಜ್ಜಿಯ ಕಥೆ ಇರಬಹುದು ಇಲ್ಲವೇ ಬ್ರಹ್ಮ ರಾಕ್ಷಸನೊಬ್ಬನ ಕಥೆಯೂ ಆಗಿರಬಹುದು. ಹೀಗೆ ಕಥೆಗಳನ್ನು ಕೇಳುವುದೆಂದರೆ ಮಕ್ಕಳಿಂದ ಹಿಡಿದು ಮುದುಕರವರೆಗೂ ಖುಷಿ ಕೊಡುವ ಸಂಗತಿ.

Shivarama Karantha_Bharatha_Bharathi
Shivarama Karantha_Bharatha_Bharathi

ಆದರೆ ಕಥೆ ಹೇಳುವವರಾರು? ಎಂತಹ ಕಥೆಗಳನ್ನು ಹೇಳಬೇಕು? ಅಡಗೂಲಜ್ಜಿಯ ಕಥೆಗಳನ್ನು ಹೇಳಿಹೇಳಿ ಅದೆಷ್ಟು ದಿನ ಮಕ್ಕಳ ಮನಸ್ಸನ್ನು ತಣಿಸಬಹುದು? ನಿಜಕ್ಕೂ ಕಥೆಗಳಿಗೆ ಬರಗಾಲವಿದೆಯೆ? ಈ ಎಲ್ಲ ಪ್ರಶ್ನೆಗಳಿಗೆ ೪೨ ವರ್ಷಗಳ ಹಿಂದೆ ಉತ್ತರ ಹುಡುಕಿದ್ದು ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್.

ಆರೆಸ್ಸೆಸ್‌ನ ಪ್ರಾಂತ ಕಾರ್ಯಾಲಯ ಕೇಶವ ಕೃಪಾದಲ್ಲಿ ಪ್ರತಿನಿತ್ಯ ಬೆಳಿಗ್ಗೆ ಅಲ್ಲಿರುವ ನಿವಾಸಿಗಳು ಒಟ್ಟಿಗೆ ಸೇರಿ ಪ್ರಾತಃಸ್ಮರಣೆ ಎಂಬ ಶ್ಲೋಕಗಳನ್ನು ಹೇಳುವುದು ವಾಡಿಕೆ. ಆ ಪ್ರಾತಃಸ್ಮರಣೆಯಲ್ಲಿ ನಮ್ಮ ದೇಶದಲ್ಲಿ ಆಗಿ ಹೋದ ನೂರಾರು ಮಹಾನ್ ವ್ಯಕ್ತಿಗಳ ಹೆಸರುಗಳು ಬರುತ್ತವೆ. ಅವರೆಲ್ಲ ಯಾರು? ಅವರ ಸ್ಮರಣೆ ಏಕೆ? ಎಲ್ಲಿ ಹುಟ್ಟಿದರು? ಏನೇನು ಮಾಡಿದರು? ಇಂತಹ ನೂರಾರು ಪ್ರಶ್ನೆಗಳು ಕೆಲವು ಪ್ರಮುಖರ ತಲೆ ಕೊರೆಯಲಾರಂಭಿಸಿದವು. ಈ ಎಲ್ಲ ಮಹನೀಯರ ಕುರಿತು ಪುಸ್ತಕ ಬರೆದರೆ ಹೇಗಿರುತ್ತದೆ ಎಂಬ ಪ್ರಶ್ನೆಯೂ ಅವರನ್ನು ಕಾಡಿತು. ಆದರೆ ಪುಸ್ತಕ ಬರೆಯುವವರಾರು? ಈ ಮಹನೀಯರ ವಿವರಗಳನ್ನು ಹುಡುಕಿ ಗ್ರಂಥ ರಚಿಸುವುದು ಸುಲಭದ ಕೆಲಸವೆ? ಎಂಬ ಇನ್ನಷ್ಟು ಪ್ರಶ್ನೆಗಳು ಕಾಡಿದವು. ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕಲೇಬೇಕೆಂಬ ಹಠದ ಪರಿಣಾಮವಾಗಿ ರೂಪುಗೊಂಡಿದ್ದೇ ಭಾರತ-ಭಾರತಿ ಪುಸ್ತಕ ಸಂಪದ.

ತೆರೆಮರೆಯಲ್ಲಿ ಶ್ರಮಿಸಿದ ರೂವಾರಿಗಳೆಂದರೆ 

ಮಕ್ಕಳೇ ದೇಶದ ಆಸ್ತಿ. ಅಂತಹ ಮಕ್ಕಳ ಮನಸ್ಸಿಗೆ, ಬುದ್ಧಿಗೆ ಆರೋಗ್ಯಕರ ಆಹಾರ ಕೊಟ್ಟರೆ ಆ ಮಕ್ಕಳು ಎತ್ತರಕ್ಕೆ ಬೆಳೆದಾರು. ಮಕ್ಕಳಿಗೆ ಭಾರತದ ಮಹಾ ಚೇತನಗಳ ಜೀವನ ಚರಿತ್ರೆಯನ್ನು ಪುಟ್ಟದಾಗಿ, ಅಧಿಕೃತವಾಗಿ, ಚಿತ್ರವತ್ತಾಗಿ ಮನಸ್ಸನ್ನು ಸೂರೆಗೊಳ್ಳುವಂತೆ ಪ್ರಕಟಿಸಬೇಕು. ಪುಸ್ತಕದ ಆಕಾರ, ನೋಟ ಆಟದ ಸಾಮಾನಿನಂತೆ ನುಣುಪಾಗಿ ಹೊಳೆಯುವಂತೆ ಇರಬೇಕು. ಕಿಸೆಯಲ್ಲಿಟ್ಟುಕೊಂಡು, ಬೇಕಾದಾಗ ಆಟಿಕೆಯಂತೆ ಆಡುತ್ತಾ ಸಂಗಡಿಗರೊಡನೆ ಮೋಜು ಮಾಡುತ್ತಾ ಮಕ್ಕಳು ಬೆಳೆದರೆ ಅದೆಷ್ಟು ಚೆನ್ನ! ಇಂತಹದೊಂದು ಕಲ್ಪನೆಗೆ ಸಾಕಾರ ರೂಪ ಕೊಡುವ ಸಾಹಸಕ್ಕೆ ರಾಷ್ಟ್ರೋತ್ಥಾನ ಪರಿಷತ್ ಹೊರಟಿದ್ದು ಮಾತ್ರ ಕನ್ನಡ ಸಾಹಿತ್ಯ ಲೋಕದಲ್ಲೊಂದು ದೊಡ್ಡ ವಿಸ್ಮಯವೇ. ಏಕೆಂದರೆ ಇಂತಹ ಸಾಹಸವನ್ನು ಅದುವರೆಗೆ ಯಾರೂ ಮಾಡಿರಲಿಲ್ಲ. ಭಾರತದ ಮಹಾ ಚೇತನಗಳ ಕುರಿತು ಅಲ್ಲಲ್ಲಿ ಒಂದಿಷ್ಟು ದೊಡ್ಡ ಗ್ರಂಥಗಳು ಪ್ರಕಟವಾಗಿದ್ದರೂ ಮಕ್ಕಳಿಗೆ ಅರ್ಥವಾಗುವಂತೆ ಸರಳ ಶೈಲಿಯಲ್ಲಿ ನೂರಾರು ಮಹಾಚೇತನಗಳ ಪುಸ್ತಕ ಪ್ರಕಟಿಸುವ ಸಾಹಸಕ್ಕೆ ಯಾವ ಪ್ರಕಾಶನ ಸಂಸ್ಥೆಯೂ ಕೈಹಾಕಿರಲಿಲ್ಲ. ರಾಷ್ಟ್ರೋತ್ಥಾನ ಪರಿಷತ್ ಖ್ಯಾತ ಸಾಹಿತಿ ಪ್ರೊ.ಎಲ್.ಎಸ್.ಶೇಷಗಿರಿ ರಾವ್ ಅವರ ಪ್ರಧಾನ ಸಾರಥ್ಯದಲ್ಲಿ ಇಂತಹದೊಂದು ಸಾಹಸಕ್ಕೆ ಮುಂದಾಗಿ, ಅದರಲ್ಲಿ ಯಶಸ್ವಿಯೂ ಆಗಿದ್ದು ಈಗ ಒಂದು ರೋಚಕ ಯಶೋಗಾಥೆ. ಇಂಥ ಸಾಹಸದ ಯೋಜನೆಯ ತೆರೆಮರೆಯಲ್ಲಿ ಶ್ರಮಿಸಿದ ರೂವಾರಿಗಳೆಂದರೆ ಹಿರಿಯರಾದ ನಂ.ಮಧ್ವರಾವ್, ಹೊ.ವೆ. ಶೇಷಾದ್ರಿ, ಅರಕಲಿ ನಾರಾಯಣ್ ಹಾಗೂ ಮೈ.ಚ.ಜಯದೇವ ಅವರು.

ಆದರೆ ರಾಷ್ಟ್ರೋತ್ಥಾನ ಪರಿಷತ್ ಮೊದಲು ಅಂದುಕೊಂಡಷ್ಟು ಸುಲಭದ ಕೆಲಸ ಇದಾಗಿರಲಿಲ್ಲ. ಮಕ್ಕಳಿಗಾಗಿ ಪುಸ್ತಕ ರಚಿಸುವ ಲೇಖಕ – ಲೇಖಕಿಯರು ಬೇಕು. ಪುಸ್ತಕದ ವಸ್ತು, ನಿರೂಪಣೆ, ಬಳಸುವ ಭಾಷೆ – ಇವುಗಳ ಬಗ್ಗೆ ಸ್ಪಷ್ಟ ಸೂತ್ರಗಳಿರಬೇಕು. ಕೀರ್ತಿಕಾಯರಾದವರನ್ನು ಮಾತ್ರ ಕುರಿತು ಪುಸ್ತಕಗಳಿರಬೇಕು. ಭಾಷೆ ಸರಳವಾಗಿರಬೇಕು. ೧೦-೧೨ ವರ್ಷದ ಮಕ್ಕಳು ಹಿರಿಯರ ನೆರವನ್ನು ಕೋರದೆ ತಾವೇ ಓದಲು ಸಾಧ್ಯವಾಗಬೇಕು. ಪುಸ್ತಕ ಓದಿಸಿಕೊಂಡು ಹೋಗುವಂತಿರಬೇಕು. ಜೀವನದ ಎಲ್ಲ ಕ್ಷೇತ್ರಗಳಲ್ಲಿ ಹಿರಿಮೆ ಸಾಧಿಸಿದವರನ್ನು ಈ ಪುಸ್ತಕ ಮಾಲೆಯಲ್ಲಿ ಪರಿಚಯಿಸಿಕೊಡಬೇಕು… ಹೀಗೆ ಹಲವು ಸೂತ್ರಗಳನ್ನು ರೂಪಿಸಿಕೊಂಡು ಭಾರತ-ಭಾರತಿ ಪುಸ್ತಕ ಸಂಪದ ಯೋಜನೆ ಆರಂಭಿಸಿದಾಗ ಅದೆಷ್ಟು ಕಷ್ಟದ ಕೆಲಸ ಎನ್ನುವ ಅರಿವು ಸಂಬಂಧಿಸಿದವರಿಗೆ ಉಂಟಾಗಿರಲೇಬೇಕು!

ಯಾವುದೇ ಮಹಾಪುರುಷರ ಬಗ್ಗೆ ಒಂದು ಉದ್ಗ್ರಂಥ ರಚಿಸಿರೆಂದು ಹೇಳಿದರೆ ಲೇಖಕರು ತಕ್ಷಣ ಒಪ್ಪಬಹುದು. ಆದರೆ ಮಕ್ಕಳಿಗಾಗಿ ಕೇವಲ ಮೂರು ಸಾವಿರ ಪದಗಳ ಮಿತಿಯಲ್ಲಿ , ಸರಳವಾಗಿ, ಆದರೆ ಸಮಗ್ರವಾಗಿ, ಸಂಕ್ಷಿಪ್ತವಾಗಿ ಆ ಮಹಾಪುರುಷರ ವ್ಯಕ್ತಿಚಿತ್ರ ಕಟ್ಟಿಕೊಡುವಂತೆ ಬರೆದು ಕೊಡಿ ಎಂದರೆ ಹಿಂದೇಟು ಹೊಡೆಯುವವರೇ ಜಾಸ್ತಿ. ಏಕೆಂದರೆ ಅದು ಅಷ್ಟು ಸುಲಭದ ಕೆಲಸವಲ್ಲ. ಶ್ರೀರಾಮ, ಶ್ರೀಕೃಷ್ಣ, ಸೀತೆ ಮುಂತಾದ ಪೌರಾಣಿಕ ವ್ಯಕ್ತಿಗಳನ್ನಾಗಲಿ, ಬುದ್ಧ, ಮಹಾವೀರ, ಗಾಂಧೀಜಿ, ಸಿ.ವಿ.ರಾಮನ್, ವಿವೇಕಾನಂದ, ಅಂಬೇಡ್ಕರ್, ಲೋಹಿಯಾ, ನಿವೇದಿತಾ ಮುಂತಾದ ಚಾರಿತ್ರಿಕ ವ್ಯಕ್ತಿಗಳನ್ನಾಗಲಿ ಕುರಿತು ೩ ಸಾವಿರ ಪದಗಳಲ್ಲಿ ಪುಸ್ತಕ ಬರೆದುಕೊಡಿ ಎಂದು ಲೇಖಕರನ್ನು ಕೋರುವುದಕ್ಕೇ ಮೊದಲು ಭಾರತ-ಭಾರತಿ ಸಂಪಾದಕೀಯ ವಿಭಾಗಕ್ಕೆ ಏನೋ ಅಳುಕು. ಆನೆಯನ್ನು ಕನ್ನಡಿಯಲ್ಲಿ ತೋರಿಸಿ ಎಂದು ಹೇಳಿದಂತೆ ಇದು!

 

VALMIKI - Valmeeki_Bharatha_Bharathi - 2
VALMIKI – Valmeeki_Bharatha_Bharathi – 2

ಲೇಖಕರಿಗೆ ವಿವಿಧ ಮಹಾಪುರುಷರ ಕುರಿತು ಪುಸ್ತಕ ಬರೆಯಲು ಕೋರಿಕೆ ಪತ್ರ ಕಳಿಸಿ, ಅನಂತರ ಅನುಭವಿಸಿದ ಪಡಿಪಾಟಲಂತೂ ಆ ದೇವರಿಗೇ ಪ್ರೀತಿ! ಕೆಲವರು ದೊಡ್ಡ ಗ್ರಂಥವನ್ನೇ ಬರೆದುಕೊಟ್ಟರು. ಇನ್ನು ಕೆಲವರ ಬರವಣಿಗೆ ಅತ್ಯಂತ ಕ್ಲಿಷ್ಟವಾಗಿತ್ತು. ಇನ್ನು ಕೆಲವರ ಬರವಣಿಗೆ ಬರಿ ಅಂಕೆ-ಸಂಖ್ಯೆಗಳಿಂದ ಕೂಡಿದ್ದು ಓದಿಸಿಕೊಂಡು ಹೋಗುತ್ತಿರಲಿಲ್ಲ. ಕೆಲವು ಲೇಖಕರ ಹಸ್ತಪ್ರತಿಗಳಲ್ಲಿ ಆ ಲೇಖನದ ಮಹಾಪುರುಷರ ಕುರಿತ ಸಾಧನೆಗಳೇ ಇರಲಿಲ್ಲ. ಹೀಗಾಗಿ ಅವನ್ನೆಲ್ಲ ಬೇರೆ ಲೇಖಕರಿಂದ ಇನ್ನೊಮ್ಮೆ ಬರೆಸಬೇಕಾಯಿತು. ಆದರೂ ಭಾರತ – ಭಾರತಿ ಪುಸ್ತಕ ಸಂಪದ ಇಟ್ಟ ಹೆಜ್ಜೆಯನ್ನು ಹಿಂದೆ ಸರಿಸಲಿಲ್ಲ. ೮ ವರ್ಷ ೬೭ ದಿನಗಳ ಅವಧಿಯಲ್ಲಿ ಒಟ್ಟು ೫೧೦ ಶೀರ್ಷಿಕೆಗಳ ಪುಸ್ತಕಗಳನ್ನು ಪ್ರಕಟಿಸಿತು. ಈ ಶೀರ್ಷಿಕೆಗಳಲ್ಲಿ ವಾಲ್ಮೀಕಿಯಿಂದ ಹಿಡಿದು ಶ್ರೀರಾಮ, ಶ್ರೀಕೃಷ್ಣ , ಪ್ರಹ್ಲಾದ, ಶಂಕರಾಚಾರ್ಯ, ಗಾಂಧೀಜಿ, ಸತ್ಯೇಂದ್ರನಾಥ ಬೋಸ್, ಶಾಂತಿ ಸ್ವರೂಪ್ ಭಾಟ್ನಗರ್, ದಾದಾಭಾಯಿ ನವರೋಜಿ, ಅತ್ತಿಮಬ್ಬೆ, ಶ್ಯಾಮಪ್ರಸಾದ ಮುಖರ್ಜಿ, ಕಬೀರದಾಸ, ಉಧಮ್‌ಸಿಂಗ್, ಅಬ್ದುಲ್ ಕರೀಂ ಖಾನ್, ಮಹಮ್ಮದ್ ಪೀರ್, ವಿಷ್ಣುನಾರಾಯಣ ಭಾತಖಂಡೆ, ಸುರಪುರ ವೆಂಕಟಪ್ಪ ನಾಯಕ, ಗೋವಿಂದ ಪೈ, ಮಿರ್ಜಾ ಇಸ್ಮಾಯಿಲ್, ಮೋಳಿಗೆ ಮಾರಯ್ಯ, ಸಿ.ಎಫ್.ಆಂಡ್ರೂಸ್, ಮಹಮ್ಮದ್ ರಫಿ, ಚಂಬೈ ವೈದ್ಯನಾಥ ಭಾಗವತರ್, ವಿಷ್ಣುಶಾಸ್ತ್ರಿ ಚಿಪಳೂಣಕರ್, ಬದ್ರುದ್ದೀನ್ ತಯಬ್‌ಜೀ, ವಿನೂ ಮಂಕಡ್, ಪೃಥ್ವೀರಾಜ್ ಕಪೂರ್, ಫಿರೋಜ್ ಷಾ ಮೆಹತಾ, ಉತ್ತಂಗಿ ಚನ್ನಪ್ಪ ಮೊದಲಾದ ಮಹಾಚೇತನಗಳವರೆಗೆ ವಿವಿಧ ಕ್ಷೇತ್ರಗಳ ಮಹನೀಯರ ಕುರಿತ ಪುಸ್ತಕಗಳು ಪ್ರಕಟವಾಗಿವೆ. ಎಲ್ಲ ಕಡೆಯಿಂದ ಬಂದ ಬೆಳಕು ಗಾಳಿಗೆ ಇಲ್ಲಿ ಕಿಟಕಿಗಳನ್ನು ತೆರೆದಿಡಲಾಗಿದೆ. ಶೀರ್ಷಿಕೆಗಳ ಆಯ್ಕೆಯಲ್ಲಿ ಯಾವ ಒಂದು ಧರ್ಮ, ಜಾತಿ, ಪಂಥ, ಯುಗ, ರಾಜಕೀಯ ಪಕ್ಷಕ್ಕೂ ಜೋತು ಬೀಳದೆ, ಇತರರಿಗಾಗಿ ಬಾಳಿದ, ಭಾರತದ ಭಾಗ್ಯವನ್ನು ರೂಪಿಸಿದ ಮಹನೀಯರನ್ನು ಮಕ್ಕಳಿಗೆ ಪರಿಚಯಿಸುವ ಪಾರದರ್ಶಕ ಕೆಲಸವಷ್ಟನ್ನೇ ಭಾರತ-ಭಾರತಿ ನಿರ್ವಹಿಸಿರುವುದು ಪ್ರಶಂಸಾರ್ಹ. ಪುರಾಣ ಪುರುಷರಿಂದ ಹಿಡಿದು ಕ್ರಿಕೆಟ್ ಆಟಗಾರರವರೆಗೆ, ರಾಜಕೀಯ ಮುತ್ಸದ್ದಿಗಳಿಂದ ಹಿಡಿದು ಸಂತರು, ಸಾಧಕರು, ವಿಜ್ಞಾನಿಗಳು, ದೇಶಭಕ್ತರವರೆಗೆ ಎಲ್ಲ ಬಗೆಯ ಮೌಲ್ಯಗಳು ಹಾಗೂ ಮನೋಧರ್ಮಗಳ ಪ್ರತಿಪಾದಕರ ಪರಿಚಯ ಈ ಮಾಲಿಕೆಯಲ್ಲಿ ಮೂಡಿಬಂದಿದೆ.

ಕೆಲವು ಮಹನೀಯರನ್ನು ಮೊಟ್ಟಮೊದಲು ಪರಿಚಯಿಸಿದ ಹೆಗ್ಗಳಿಕೆ ಕೂಡ ಭಾರತ-ಭಾರತಿ  ಪುಸ್ತಕ ಸಂಪದದ್ದು. ಅಶ್ಫಾಕ್ ಉಲ್ಲಾ, ಖಾರವೇಲ, ಗಾಮ, ಕುದ್ಮುಲ್ ರಂಗರಾವ್, ನಾನಿ ಬಾಲಾದೇವಿ, ಭಿಕ್ಷು ಉತ್ತಮ, ದೀಪಂಕರ, ಸುಶ್ರುತ ಮೊದಲಾದವರನ್ನು ಕುರಿತು ಯಾವುದೇ ಭಾರತೀಯ ಭಾಷೆಯಲ್ಲಿ ಪುಸ್ತಕ ೪೨ ವರ್ಷಗಳ ಹಿಂದೆ ಪ್ರಕಟವಾಗಿದೆಯೆ ಎನ್ನುವುದು ಅನುಮಾನ. ಜನರಲ್ ತಿಮ್ಮಯ್ಯ, ರಾಮಪ್ರಸಾದ್ ಬಿಸ್ಮಿಲ್, ಮೇಡಂ ಕಾಮಾ, ಸಿ.ಕೆ.ನಾಯ್ಡು, ಬೀರಬಲ್ ಸಾಹನಿ, ಸೂರ್ಯಸೇನ್, ಹೋಮಿ ಭಾಭಾ, ಅಬ್ದುಲ್ ಕರೀಂ ಖಾನ್, ಮಹಮ್ಮದ್ ನಿಸಾರ್, ಧ್ಯಾನ್‌ಚಂದ್ ಮೊದಲಾದವರನ್ನು ಕುರಿತು ಕನ್ನಡದಲ್ಲಿ ಮೊಟ್ಟಮೊದಲು ಪುಸ್ತಕ ರಚಿಸಿದ ಹೆಮ್ಮೆಯೂ ಭಾರತ-ಭಾರತಿಯದೇ.

ಭಾರತ-ಭಾರತಿ ಪುಸ್ತಕ ಸಂಪದ ಯೋಜನೆಯಲ್ಲಿ ಕನ್ನಡದ ಎಲ್ಲ ಹಿರಿಯ ಸಾಹಿತಿಗಳನ್ನು ಜೋಡಿಸಿರುವುದು ಇನ್ನೊಂದು ಉಲ್ಲೇಖನೀಯ ಸಂಗತಿ. ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ, ತ.ಸು.ಶಾಮರಾವ್, ರಂ.ಶ್ರೀ.ಮುಗಳಿ, ಜಿ.ಎಸ್.ಶಿವರುದ್ರಪ್ಪ, ಎಂ.ವಿ.ಸೀತಾರಾಮಯ್ಯ, ವಿ.ಎಂ.ಇನಾಂದಾರ್, ಪಾ.ವೆಂ.ಆಚಾರ್ಯ, ವ್ಯಾಸರಾಯ ಬಲ್ಲಾಳ, ಎಚ್ಚೆಸ್ಕೆ, ಹಾಮಾನಾ, ತಿ.ತಾ. ಶರ್ಮ, ಕೊರಟಿ ಶ್ರೀನಿವಾಸ ರಾವ್, ಸಿಂಪಿ ಲಿಂಗಣ್ಣ, ಸಿದ್ದಯ್ಯ ಪುರಾಣಿಕ, ನಾಡಿಗ ಕೃಷ್ಣಮೂರ್ತಿ, ಸ.ಸ. ಮಾಳವಾಡ ಮೊದಲಾದ ದಿಗ್ಗಜರು ಪುಟ್ಟ ಮಕ್ಕಳಿಗಾಗಿ ಪುಟ್ಟ ಪುಸ್ತಕಗಳನ್ನು ಬರೆದು ಕೊಟ್ಟಿದ್ದಾರೆ.

ಈ ಮಾಲಿಕೆಯಲ್ಲಿ 

೪೨ ವರ್ಷಗಳ ಬಳಿಕ ಈಗ ೨೦೧೪ರಲ್ಲಿ ಮಕ್ಕಳ ಪುಸ್ತಕ ಯೋಜನೆಗೆ ಮರುಜೀವ ಬಂದಿದೆ. ಪುನಃ ೨೦೦ ಹೊಸ ಪುಸ್ತಕಗಳನ್ನು ಪ್ರಕಟಿಸುವ ಯೋಜನೆಯನ್ನು ರಾಷ್ಟ್ರೋತ್ಥಾನ ಪರಿಷತ್ ಹಮ್ಮಿಕೊಂಡಿದೆ. ಮೊದಲ ಕಂತಿನ ೫೧೦ ಪುಸ್ತಕಗಳನ್ನು ಕನ್ನಡ ನಾಡಿನ ಅತಿರಥ – ಮಹಾರಥ ಲೇಖಕರು ರಚಿಸಿ ಕೊಟ್ಟಿದ್ದರು. ಈಗಿನ ‘ಭಾರತ-ಭಾರತಿ ೨’ರ ವಿಶೇಷವೆಂದರೆ ಆಗ ಪುಸ್ತಕ ಬರೆದುಕೊಟ್ಟ ದಿಗ್ಗಜ ಲೇಖಕರೇ ಈಗ ಪುಸ್ತಕಗಳಾಗಿದ್ದಾರೆ. ಈ ಮಹನೀಯರ ಕುರಿತು ೨ನೇ ಮಾಲಿಕೆಯಲ್ಲಿ ಪುಸ್ತಕಗಳು ಹೊರಬಂದಿವೆ. ಈಗಿನ ಕನ್ನಡದ ಹಿರಿ – ಕಿರಿಯ ಲೇಖಕರು ೨೦೦ ಪುಸ್ತಕಗಳನ್ನು ರಚಿಸಿಕೊಡುತ್ತಿದ್ದಾರೆ. ೧೯೭೨ರಲ್ಲಿ ಅಚ್ಚು ಮೊಳೆ ಜೋಡಿಸಿ ಪುಸ್ತಕ ಪ್ರಕಟಿಸುವ ಕಡು ಕಷ್ಟದ ಕಾಯಕ ಇದಾಗಿತ್ತು. ಆದರೀಗ ಆಧುನಿಕ ಡಿಟಿಪಿ ಅಕ್ಷರ ಜೋಡಣೆ, ಸುಂದರ ವರ್ಣದ ರಕ್ಷಾಪುಟ, ಅಂದವಾದ ಮುದ್ರಣ ಪುಸ್ತಕಗಳ ಮೆರುಗನ್ನು ಇನ್ನಷ್ಟು ಹೆಚ್ಚಿಸಿದೆ. ಕನ್ನಡ ಸಾಹಿತಿಗಳು, ಭಾವಗೀತೆ ಲೋಕ, ಚಿತ್ರ ಕಲಾವಿದರು, ಶಿಲ್ಪಿಗಳು, ಶಾಸ್ತ್ರೀಯ ಸಂಗೀತಪಟುಗಳು, ಆಧುನಿಕ ಸಮಾಜ ಸುಧಾರಕರು, ಸಾಧನಾಶೀಲ ಸಾರ್ವಜನಿಕರು, ಎಲೆಮರೆಯ ಪ್ರತಿಭಾವಂತರು, ಉದ್ಯಮಿಗಳು – ಹೀಗೆ ಹಲವರು ಈ ಮಾಲಿಕೆಯಲ್ಲಿ ಮಕ್ಕಳಿಗೆ ಪುಸ್ತಕ ರೂಪದಲ್ಲಿ ಪರಿಚಯವಾಗಲಿದ್ದಾರೆ.

ಮಕ್ಕಳಿಗಾಗಿ ಈಗ ಕೆಲವು ಪ್ರಕಾಶನ ಸಂಸ್ಥೆಗಳು ವಿವಿಧ ಮಹನೀಯರ ಕುರಿತು ಬಣ್ಣಬಣ್ಣದ ಪುಸ್ತಕಗಳನ್ನು ಪ್ರಕಟಿಸಿವೆ. ಆದರೆ ೪೨ ವರ್ಷಗಳ ಹಿಂದೆ ಈ ಕೆಲಸವನ್ನು ಮೊದಲು ಕೈಗೊಂಡ ಸಾಹಸ ರಾಷ್ಟ್ರೋತ್ಥಾನ ಪರಿಷತ್‌ನದು. ಅದು ಪ್ರಕಟಿಸಿದ ೫೧೦ ಶೀರ್ಷಿಕೆಗಳ ಭಾರತ-ಭಾರತಿ ಪುಸ್ತಕಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಅಷ್ಟೇ ಅಲ್ಲ, ಕನ್ನಡದ ಭಾರತ – ಭಾರತಿ ಪುಸ್ತಕಗಳು ಹಿಂದಿ, ಇಂಗ್ಲಿಷ್, ಮರಾಠಿ, ಮಲೆಯಾಳಂ ಸೇರಿದಂತೆ ಹತ್ತಾರು ಭಾಷೆಗಳಿಗೆ ಅನುವಾದಗೊಂಡಿವೆ. ಆ ಎಲ್ಲ ಭಾಷೆಗಳ ಪ್ರಕಾಶಕರಿಗೆ ಭಾರತ – ಭಾರತಿ ಪುಸ್ತಕಗಳೇ ಮೂಲ ಆಧಾರ. ಕನ್ನಡದ ಕೀರ್ತಿ ಪತಾಕೆಯನ್ನು ದೇಶದುದ್ದಗಲಕ್ಕೆ ಹಾರಿಸಿದ ಖ್ಯಾತಿ ರಾಷ್ಟ್ರೋತ್ಥಾನ ಪರಿಷತ್ತಿನದು ಎಂಬ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ.

‘ಭಾರತ – ಭಾರತಿ ೨’ ಮಾಲಿಕೆಯ ಮೊದಲ ಕಂತಿನ ೫೦ ಪುಸ್ತಕಗಳು ಇದೇ ಜನವರಿ ೨೮ರಂದು ಶಿವಮೊಗ್ಗದ ‘ಶುಭಮಂಗಳ’ ಕಲ್ಯಾಣ ಮಂಟಪದಲ್ಲಿ ಸಂಜೆ ೬ ಗಂಟೆಗೆ ಲೋಕಾರ್ಪಣೆಗೊಳ್ಳಲಿವೆ. ಖ್ಯಾತ ಕವಿ, ಸಾಹಿತಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಅಧ್ಯಕ್ಷತೆ. ಸಾಹಿತಿ ನಾ.ಡಿ’ಸೋಜ ಮುಖ್ಯ ಅತಿಥಿ. ಶಿವಮೊಗ್ಗದಲ್ಲಲ್ಲದೆ ಮೊದಲ ಕಂತಿನ ಈ ೫೦ ಪುಸ್ತಕಗಳನ್ನು ಬೆಂಗಳೂರು, ಮೈಸೂರು, ಮಂಗಳೂರು, ದಾವಣಗೆರೆ, ಗುಲ್ಬರ್ಗ ಮುಂತಾದ ಪ್ರಮುಖ ನಗರಗಳಲ್ಲೂ ಬಿಡುಗಡೆ ಮಾಡಲು ರಾಷ್ಟ್ರೋತ್ಥಾನ ಪರಿಷತ್ ಯೋಜನೆ ಹಾಕಿಕೊಂಡಿದೆ. ಭಾರತ-ಭಾರತಿ ೧ ಮಾಲಿಕೆಗೆ ಹಿರಿಯ ಸಾಹಿತಿಗಳಾದ ಎಲ್.ಎಸ್.ಶೇಷಗಿರಿ ರಾವ್ ಅವರು ಪ್ರಧಾನ ಸಂಪಾದಕರಾಗಿದ್ದರೆ, ೨ನೇ ಹಂತದ ಈಗಿನ ಮಾಲಿಕೆಗೆ ಯುವ ಸಾಹಿತಿ ‘ಚಿರಂಜೀವಿ’ ಪ್ರಧಾನ ಸಂಪಾದಕರು.

ಹಾಗಿದ್ದರೆ ತಡವೇಕೆ? ಕಥೆಗಳನ್ನು ಓದಬೇಕೆಂಬ ಆಸಕ್ತಿ ಇರುವ ನೀವು, ನಿಮ್ಮ ಮಕ್ಕಳನ್ನೂ ಕರೆದುಕೊಂಡು ಜನವರಿ ೨೮ರಂದು ಶಿವಮೊಗ್ಗೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ. ಅದು ನಿಮಗೂ ನಿಮ್ಮ ಮಕ್ಕಳಿಗೂ ಖಂಡಿತ ಖುಷಿ ತಂದುಕೊಡಬಲ್ಲುದು.

ಮೊದಲ ಕಂತಿನ ಈ ೫೦ ಪುಸ್ತಕಗಳನ್ನು ಬೆಂಗಳೂರು, ಮೈಸೂರು, ಮಂಗಳೂರು, ದಾವಣಗೆರೆ, ಗುಲ್ಬರ್ಗ ಮುಂತಾದ ಪ್ರಮುಖ ನಗರಗಳಲ್ಲೂ ಬಿಡುಗಡೆ ಮಾಡಲು ರಾಷ್ಟ್ರೋತ್ಥಾನ ಪರಿಷತ್ ಯೋಜನೆ ಹಾಕಿಕೊಂಡಿದೆ. ಭಾರತ-ಭಾರತಿ ೧ ಮಾಲಿಕೆಗೆ ಹಿರಿಯ ಸಾಹಿತಿಗಳಾದ ಎಲ್.ಎಸ್.ಶೇಷಗಿರಿ ರಾವ್ ಅವರು ಪ್ರಧಾನ ಸಂಪಾದಕರಾಗಿದ್ದರೆ, ೨ನೇ ಹಂತದ ಈಗಿನ ಮಾಲಿಕೆಗೆ ಯುವ ಸಾಹಿತಿ ‘ಚಿರಂಜೀವಿ’ ಪ್ರಧಾನ ಸಂಪಾದಕರು.

 ಹಾಗಿದ್ದರೆ ತಡವೇಕೆ? ಕಥೆಗಳನ್ನು ಓದಬೇಕೆಂಬ ಆಸಕ್ತಿ ಇರುವ ನೀವು, ನಿಮ್ಮ ಮಕ್ಕಳನ್ನೂ ಕರೆದುಕೊಂಡು ಜನವರಿ ೨೮ರಂದು ಶಿವಮೊಗ್ಗೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ. ಅದು ನಿಮಗೂ ನಿಮ್ಮ ಮಕ್ಕಳಿಗೂ ಖಂಡಿತ ಖುಷಿ ತಂದುಕೊಡಬಲ್ಲುದು.

ವೈಶಿಷ್ಟ್ಯ – ವಿಕ್ರಮ

* ಭಾರತ-ಭಾರತಿ ಪುಸ್ತಕ ಸಂಪದದ ಮೊದಲ ಮಾಲಿಕೆಯಲ್ಲಿ ಪ್ರಕಟವಾದ ೫೧೦ ಪುಸ್ತಕಗಳಿಗೆ ತಗಲಿದ ಅವಧಿ ೮ ವರ್ಷ ೬೭ ದಿನಗಳು.

* ೫೧೦ ಮಕ್ಕಳ ಪುಸ್ತಕಗಳಲ್ಲಿ ಒಟ್ಟು ೨೨,೧೪೦ ಪುಟಗಳ ಸಾಹಿತ್ಯ ಪ್ರಕಟಣೆ. ೧೫೨೦ ರೇಖಾಚಿತ್ರಗಳು.

* ಒಟ್ಟು ಸುಮಾರು ೧ ಕೋಟಿಗೂ ಮೀರಿ ಪ್ರತಿಗಳ ಮುದ್ರಣ.

* ಬಳಸಿದ ಕಾಗದ ಸುಮಾರು ೨೫೫ ಟನ್ ಮುದ್ರಣ ಕಾಗದ. (ಸುಮಾರು ೧೪,೦೦೦ ರೀಮ್‌ಗಳು)

* ‘ಮಕ್ಕಳ ಕೈಗೆ ಸರಸ್ವತಿ’ ಯೋಜನೆ – ಹಿಂದುಳಿದ ಸಮಾಜವರ್ಗಗಳ ಮಕ್ಕಳಿಗೆ ಸುಮಾರು ೨ ಲಕ್ಷ ಭಾರತ-ಭಾರತಿ ಪುಸ್ತಕಗಳ ಹಂಚಿಕೆ.

* ಭಾರತದ ಎಲ್ಲ ಪ್ರಾಂತಗಳಿಂದಲೂ ಆರಿಸಿದ, ಇದುವರೆಗೆ ಬೆಳಕು ಕಾಣದ ಮಹಾಪುರುಷರ ಜೀವನ ಚರಿತ್ರೆಗಳ ಸಂಕಲನ.

* ೫೧೦ ಮಕ್ಕಳ ಪುಸ್ತಕಗಳಲ್ಲಿ ಒಟ್ಟು ೨೨,೧೪೦ ಪುಟಗಳ ಸಾಹಿತ್ಯ ಪ್ರಕಟಣೆ. ೧,೫೨೦ ರೇಖಾ ಚಿತ್ರಗಳು, ಸುಮಾರು ೧೫ ಲಕ್ಷ ೩೦ ಸಹಸ್ರ ಪದಗಳು.

* ಯೋಜನೆಯ ಮೊದಲ ಹತ್ತು ಪುಸ್ತಕಗಳು ಸಮಾರಂಭದಂದೇ ೧ ಲಕ್ಷ ೩೦ ಸಾವಿರ ಪ್ರತಿ ಮಾರಾಟದ ದಾಖಲೆ.

* ೨ನೇ ಕಂತಿನಲ್ಲಿ ಒಟ್ಟು ೨೦೦ ಪುಸ್ತಕಗಳ ಪ್ರಕಟಣೆ.

* ಮೊದಲ ೫೦ ಪುಸ್ತಕಗಳ ಬಿಡುಗಡೆ – ಜನವರಿ ೨೮ರಂದು, ಸಂಜೆ ೬ಕ್ಕೆ.

* ಸ್ಥಳ: ಶಿವಮೊಗ್ಗದ ‘ಶುಭಮಂಗಳ’ ಕಲ್ಯಾಣ ಮಂದಿರ.

* ಅಧ್ಯಕ್ಷತೆ: ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ

* ಮುಖ್ಯ ಅತಿಥಿ: ನಾ. ಡಿ’ಸೋಜ

 

 

 

Leave a Reply

Your email address will not be published.

This site uses Akismet to reduce spam. Learn how your comment data is processed.