ಬೆಂಗಳೂರು ಮಾರ್ಚ 8: ನಾಲ್ಕು ದಶಕಗಳ ಹಿಂದೆ ನಾಡಿನ ಮುಂದಿನ ಪೀಳಿಗೆಗೆ ಆದರ್ಶ ವ್ಯಕ್ತಿಗಳು, ದೇಶಭಕ್ತರು, ಮಹಾತ್ಮರನ್ನು ಪರಿಚಯಿಸುವ ಸಲುವಾಗಿ ಪ್ರಕಟಗೊಂಡು ರಾಷ್ಟ್ರೀಯ ಸಾಹಿತ್ಯದ ಇತಿಹಾಸದಲ್ಲೇ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ ರಾಷ್ಟ್ರೋತ್ಥಾನ ಸಾಹಿತ್ಯದ ಭಾರತ ಭಾರತಿ ಪುಸ್ತಕ ಮಾಲಿಕೆಯ ಎರಡನೇ ಸಂಪದದ ಎರಡನೇ ಕಂತಿನ ಐವತ್ತು ಪುಸ್ತಕಗಳು ಲೋಕಾರ್ಪಣೆಗೊಂಡವು. ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ ಕೇಶವಶಿಲ್ಪ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನಾಡಿನ ಹಿರಿಯ ಕವಿ- ಚಿಂತಕ ಡಾ. ಎಚ್ ಎಸ್ ವೆಂಕಟೇಶಮೂರ್ತಿಯವರು ಹೆಸರಾಂತ ಹಿರಿಯ ಮತ್ತು ಯುವ ಲೇಖಕರ ಲೇಖನಿಯಿಂದ ಮೂಡಿಬಂದ ಪುಸ್ತಕಗಳನ್ನು ಬಿಡುಗಡೆಮಾಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಹಿರಿಯ ಸಾಹಿತಿಗಳು, ಪತ್ರಕರ್ತರು ಹಾಗೂ ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷರೂ ಆದ ನಾಡೋಜ ಡಾ. ಎಸ್ ಆರ್ ರಾಮಸ್ವಾಮಿಯವರು ಸ್ವಾತಂತ್ರ್ಯ ಪೂರ್ವದಲ್ಲಿ ಸಮೃದ್ಧವಾಗಿ ನಡೆದ ರಾಷ್ಟ್ರೀಯ ಸಾಹಿತ್ಯ ರಚನೆಯು ಸ್ವಾತಂತ್ರ್ಯಾನಂತರ ಕುಂಠಿತಗೊಂಡಿದ್ದರ ಬಗ್ಗೆ ಗಮನ ಸೆಳೆದರು. ಈ ಕೊರತೆಯನ್ನು ತೂಗಿಸುವ ಸಲುವಾಗಿ ೧೯೬೦ರ ದಶಕದಲ್ಲಿ ಆರಂಭಗೊಂಡ ರಾಷ್ಟ್ರೋತ್ಥಾನ ಸಾಹಿತ್ಯದ ಆರಂಭದ ಸಂಕಷ್ಟದ ದಿನಗಳನ್ನು ನೆನೆಯುತ್ತ ರಾಷ್ಟ್ರೀಯ ದೃಷ್ಟಿಯ ವೈಚಾರಿಕ ಸಾಹಿತ್ಯದ ಬ್ರಾಂಡ್ ಕ್ರಿಯೇಶನ್ ರಾಷ್ಟ್ರೋತ್ಥಾನ ಸಾಹತ್ಯದ ಕಡೆಯಿಂದ ಆಯಿತು. ಅದರಲ್ಲೂ ಭಾರತ ಭಾರತಿ, ಭುಗಿಲು ಮುಂತಾದ ಪುಸ್ತಕ ಸರಣಿಗಳು ಸಾಹಿತ್ಯ ಜಗತ್ತಿನ ಮೈಲಿಗಲ್ಲುಗಳಾದವು. ಹಾಗೆಯೇ ಶತಮಾನದ ತಿರುವಿನಲ್ಲಿ ಭಾರತ, ಆರ್ಥಿಕತೆಯ ಎರಡು ಧ್ರುವ, ಕೋಲ್ಮಿಂಚು ಮುಂತಾದ ಹತ್ತಾರು ಪುಸ್ತಕಗಳು ರಾಷ್ಟ್ರೋತ್ಥಾನ ಸಾಹಿತ್ಯದ ಮಹತ್ತರ ಕೊಡುಗೆಗಳಾಗಿವೆ. ರಾಷ್ಟ್ರೋತ್ಥಾನ ಪ್ರಕಾಶನವು ಪ್ರಕಟಿಸಿದ ಅನೇಕ ರಾಷ್ಟ್ರೀಯ ಸಾಹಿತ್ಯ ಕೃತಿಗಳು ವಿಶ್ವವಿದ್ಯಾಲಯಗಳ ಆಕರ ಗ್ರಂಥಗಳಾದವು ಎಂದು ನುಡಿದರು.
ಭಾರತ ಭಾರತಿ ಪುಸ್ತಕ ಸಂಪದ ಯೋಜನೆಯ ಬಗ್ಗೆ ಮಾತನಾಡಿದ ಅವರು ೧೯೭೧ರಲ್ಲಿ ಕಲ್ಪನೆಯ ಬೀಜಾಂಕುರವಾಗಿ ಹಿರಿಯ ಸಾಹಿತಿ ಎಲ್ ಎಸ್ ಶೇಷಗಿರಿರಾವ್ ಅವರ ಸಂಪಾದಕತ್ವದಲ್ಲಿ ಹೊರಬಂದ ಭಾರತ ಭಾರತಿ ಪುಸ್ತಕ ಮಾಲಿಕೆಯು ರಾಷ್ಟ್ರೋತ್ಥಾನ ಪರಿಷತ್ತಿಗೆ ಹೊಸ ಐಡೆಂಟಿಟಿಯನ್ನು ತಂದುಕೊಟ್ಟಿತು. ಈ ಯೋಜನೆಯ ಯಶಸ್ಸು ಪರಿಷತ್ತಿನ ಆತ್ಮವಿಶ್ವಾಸವನ್ನು ವೃದ್ಧಿಸಿ ರಾಷ್ಟ್ರೋತ್ಥಾನ ಪರಿಷತ್ತು ಬಹುಮುಖ ಚಟುವಟಿಗಳಿಗೆ ವಿಸ್ತಾರಗೊಳ್ಳಲು ನಾಂದಿ ಹಾಡಿತು ಎಂದರು.
ಎರಡನೇ ಸಂಪದದ ಪ್ರಧಾನ ಸಂಪಾದಕತ್ವ ವಹಿಸಿರುವ ಹಿರಿಯ ಸಾಹಿತಿ ಚಿರಂಜೀವಿಯವರು ಎರಡನೇ ಸರಣಿಯ ಯೋಜನೆ ಮತ್ತು ಪುಸ್ತಕಗಳನ್ನು ಪರಿಚಯಿಸಿದರು.
ಸಮಾರಂಭದ ಅಧ್ಯಕ್ಷತೆವಹಿಸಿ ಪುಸ್ತಕಗಳನ್ನು ಬಿಡುಗಡೆಗೊಳಿಸಿದ ಎಚ್ ಎಸ್ ವೆಂಕಟೇಶಮೂರ್ತಿಯವರು ಮಕ್ಕಳ ಸಾಹಿತ್ಯಕ್ಕೆ ಭಾರತ ಭಾರತಿ ಪುಸ್ತಕ ಸರಣಿಯು ನೀಡಿದ ಕೊಡುಗೆಯನ್ನು ನೆನೆಯುತ್ತ ರಾಷ್ಟ್ರೋತ್ಥಾನ ಸಾಹಿತ್ಯದ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಸಮಾರಂಭದಲ್ಲಿ ಎರಡನೇ ಸಂಪದದ ಎರಡನೇ ಕಂತಿನ ಐವತ್ತು ಪುಸ್ತಕಗಳನ್ನು ರಚಿಸಿಸಿದ ಲೇಖಕರನ್ನು ಸನ್ಮಾನಿಸಲಾಯಿತು.
ಕುಮಾರಿ ಕಾವೇರಿ ಅಯ್ಯಪ್ಪರವರ ಸುಶ್ರಾವ್ಯ ಪ್ರಾರ್ಥನೆಯೊಂದಿಗ ಕಾರ್ಯಕ್ರಮ ಆರಂಭಗೊಂಡಿತು, ರಾಷ್ಟ್ರೋತ್ಥಾನ ಪರಿಷತ್ತಿನ ಕಾರ್ಯಕಾರಿಣಿ ಸದಸ್ಯರಾದ ಕೆ ಎಸ್ ನಾರಾಯಣರವರು ವೇದಿಕೆಯಲ್ಲಿದ್ದ ಮಹನೀಯರನ್ನು ಪರಿಚಯಿಸಿ ಸ್ವಾಗತಿಸಿದರು, ವಿಘ್ನೇಶ್ವರ ಭಟ್ ವಂದಿಸಿದರು, ಉತ್ಥಾನ ಮಾಸಿಕದ ಸಂಪಾದಕ ಕಾಕುಂಜೆ ಕೇಶವ ಭಟ್‌ರವರು ಕಾರ್ಯಕ್ರಮವನ್ನು ನಿರ್ವಹಿಸಿದರು. ವೇದಿಕೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ನಾ ದಿನೇಶ ಹೆಗ್ಡೆ ಉಪಸ್ಥಿತರಿದ್ದರು. ರಾಸ್ವಸಂಘದ ಹಿರಿಯರಾದ ಮೈ ಚ ಜಯದೇವ, ಚಂದ್ರಶೇಖರ ಬಂಢಾರಿ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಂಡರು.
ಲೋಕಾರ್ಪಣೆಗೊಂಡ ಎರಡನೇ ಕಂತಿನಲ್ಲಿ ಪುರಾಣ ಋಷಿ ಚ್ಯವನ, ಪ್ರಖ್ಯಾತ ಸಂಗೀತಗಾರರಾದ ಭೂಪೆನ್ ಹಜಾರಿಕಾ, ಉಸ್ತಾದ್ ಬಿಸ್ಮಿಲ್ಲಾ ಖಾನ್, ಬಸವರಾಜ ರಾಜಗುರು, ಸಿತಾರ್ ಮಾಂತ್ರಿಕ ಪಂಡಿತ್ ರವಿಶಂಕರ, ಹಿರಿಯ ಸಾಹಿತಿಗಳಾದ ತ ಸು ಶಾಮರಾವ್, ಗೌರೀಶ್ ಕಾಯ್ಕಿಣಿ, ಕರ್ನಾಟಕದಲ್ಲಿ ಆರೆಸ್ಸೆಸ್‌ನ ಆದ್ಯ ಪ್ರವರ್ತಕರಾದ ಯಾದವ್‌ರಾವ್ ಜೋಷಿ, ಪೂರ್ವೋತ್ತರ ರಾಜ್ಯದ ಪ್ರಸಿದ್ಧ ರಾಣಿ ಗಾಯ್‌ಡಿನ್ ಲೂ, ಮಾನವ ಕಂಪ್ಯೂಟರ್ ಎಂದೇ ಹೆಸರಾಗಿದ್ದ ಗಣಿತಜ್ಞೆ ಶಕುಂತಲಾ ದೇವಿ, ಚಲನಚಿತ್ರ ಜಗತ್ತಿನ ತಾರೆಗಳಾದ ಡಾ. ರಾಜಕುಮಾರ, ಪಿ ಬಿ ಶ್ರೀನಿವಾಸ್, ಪಕ್ಷಿ ವಿಜ್ಞಾನಿ ಸಲೀಂ ಅಲಿ, ಗಗನಯಾತ್ರಿ ಕಲ್ಪನಾ ಚಾವ್ಲಾ ಮೊದಲಾದ ಮಹನೀಯರ ಪುಸ್ತಕಗಳು ಪ್ರಟಕಗೊಂಡಿವೆ.
ಈ ಸರಣಿಯ ಪುಸ್ತಕಗಳನ್ನು ರಚಿಸಿದ ಲೇಖಕರಲ್ಲಿ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ, ಚಿರಂಜೀವಿ, ಈಶ್ವರಚಂದ್ರ, ಬಾಬು ಕೃಷ್ಣಮೂರ್ತಿ, ಎಚ್ ಜಿ ಸೋಮಶೇಖರ ರಾವ್, ಖಾದ್ರಿ ಅಚ್ಯುತನ್ ಮುಂತಾದ ಹಿರಿಯ ಸಾಹಿತಿಗಳಲ್ಲದೇ ಸುಘೋಷ್ ನಿಗಳೆ, ಮೊಳಹಳ್ಳಿ ಅನಿಲಕುಮಾರ್ ಮೊದಲಾದ ಯುವ ಬರಹಗಾರರೂ ಸೇರಿದ್ದು ಇನ್ನೊಂದ ವಿಶೇಷವಾಗಿದೆ.