ರೈತರಿಂದ, ರೈತರಿಗಾಗಿ… -‘ಭಾರತೀಯ ಕಿಸಾನ್ ಸಂಘ’

ನಮ್ಮದು ಕೃಷಿ ಪ್ರಧಾನ ದೇಶ. ರೈತ ದೇಶದ ಬೆನ್ನೆಲುಬು. ‘ರೈತರ ಏಳಿಗೆಯೇ ದೇಶದ ಏಳಿಗೆ’ ಎಂಬ ಧ್ಯೇಯವಾಕ್ಯವನ್ನು ಇಟ್ಟುಕೊಂಡು, ರೈತರ ಹಿತವನ್ನು ಸಾಧಿಸುವ ಜೊತೆಯಲ್ಲಿಯೇ ರಾಷ್ಟ್ರದ ಸಂಪೂರ್ಣ ಹಿತವನ್ನು ಸಾಧಿಸಬೇಕೆಂಬ ಛಲದೊಂದಿಗೆ ರೈತರಿಂದ ರೈತರಿಗಾಗಿಯೇ ರೈತರೇ ಸಂಘಟಿಸಿ ಈಗ ಹೆಮ್ಮರವಾಗಿ ಬೆಳೆದು ನಿಂತಿರುವ ಸಾಮಾಜಿಕ ಚಳವಳಿಯ ಸಂಘಟನೆ ಭಾರತೀಯ ಕಿಸಾನ್ ಸಂಘ.        ೧೯೭೯ ಮಾರ್ಚ್ ೪ರಂದು ರಾಜಸ್ಥಾನ ಪ್ರಾಂತದ ಕೋಟದಲ್ಲಿ ಭಾ.ಕಿ.ಸಂಘ ಸ್ಥಾಪಿಸಲ್ಪಟ್ಟಿತು. ರಾಷ್ಟ್ರದ ಮೂಲಭೂತ ಸಮಸ್ಯೆಗಳನ್ನು ಭಾರತೀಯ ಜೀವನ ಪದ್ಧತಿಯ ಮೂಲಕವೇ ಅರಿತುಕೊಂಡು, ಸಮಗ್ರ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದ
ದಿ|| ದತ್ತೋಪಂತ ಠೇಂಗಡಿಯವರು ಈ ಸಂಘಟನೆಯ ಸಂಸ್ಥಾಪಕರು.
ರಾಜಕೀಯ ಚಟುವಟಿಕೆಗಳಿಂದ ದೂರ ನಿಂತು, ರೈತ ಜನಮಾನಸದಲ್ಲಿ ತನ್ನ ಶಕ್ತಿಯ ಜಾಗೃತಿ ಮೂಡಿಸಿ, ಆ ಮೂಲಕ ರಾಷ್ಟ್ರದ ಹಿರಿಮೆ-ಗರಿಮೆಗಳನ್ನು ಮತ್ತೊಮ್ಮೆ ಸಂಸ್ಥಾಪಿಸುವ ಉದ್ದೇಶದಿಂದ ‘ಭಾರತೀಯ ಕಿಸಾನ್ ಸಂಘ’ ಕಾರ್ಯಪ್ರವೃತ್ತವಾಗಿದೆ. ರೈತ ಎಂದರೆ ಕೇವಲ ಜಮೀನು ಉಳುಮೆ ಮಾಡಿ, ಆಹಾರ ಧಾನ್ಯಗಳನ್ನು ಬೆಳೆಯುವ ವ್ಯಕ್ತಿಯಲ್ಲ. ಬದಲಾಗಿ ರೈತ ಒಂದು ರಾಷ್ಟ್ರದ ನಿಜವಾದ ಶಕ್ತಿ! ರೈತರ ಎತ್ತಿನಗಾಡಿಯನ್ನು ತಯಾರಿಸಿ ಕೊಡುವ ಬಡಗಿ, ಆ ಗಾಡಿಯ ಚಕ್ರಕ್ಕೆ ಬೇಕಾಗುವ ಕಬ್ಬಿಣದ ಪಟ್ಟಿಯನ್ನು ತಯಾರಿಸುವ ಕಮ್ಮಾರ ಕೃಷಿಕಾರ್ಯಗಳನ್ನು ಮಾಡುವ ಅಸಂಘಟಿತ ಕೃಷಿಕಾರ್ಮಿಕರು; ಎತ್ತು, ದನ, ಕೋಣ, ಎಮ್ಮೆಗಳನ್ನು ಮೇಯಿಸುವ ಗೋಪಾಲಕರು; ತಮ್ಮ ಜೀವನಕ್ಕೆ ರೈತರ ಮೇಲೆ ಅವಲಂಬಿಸಿದಂತೆ, ರೈತರೂ ಈ ಎಲ್ಲ ವ್ಯಕ್ತಿಗಳನ್ನು ಅವಲಂಬಿಸಬೇಕಲ್ಲವೇ? ಆದ್ದರಿಂದ ಇವರೆಲ್ಲರನ್ನೂ ಒಂದುಗೂಡಿಸಿ, ಇವರೆಲ್ಲರ ನಡುವೆ ಮಧುರ ಬಾಂಧವ್ಯಗಳನ್ನು ನಿರ್ಮಿಸಿ ಜಾಗೃತಿ ಮೂಡಿಸಲು ಭಾ.ಕಿ.ಸಂಘ ಶ್ರಮಿಸುತ್ತಿದೆ.
ಆರ್ಥಿಕವಾಗಿ ರೈತರನ್ನು ಸಬಲರಾಗಿ ಸುವುದರ ಜೊತೆಗೆ ರೈತ ಪಂಗಡಗಳ ಮಧ್ಯೆ ಸಾಮರಸ್ಯ ಮೂಡಿಸುವುದು ಅಗತ್ಯ ಎಂಬುದು ಈ ಸಂಘದ ನಿಲುವು. ಇದಕ್ಕಾಗಿ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳನ್ನು ಪಡೆಯಲು, ತಮ್ಮ ಬೆಳೆಗಳಿಗೆ ಹೆಚ್ಚಿನ ಬೆಲೆ ಒದಗಿಸಿಕೊಳ್ಳಲು, ಮಧ್ಯವರ್ತಿ ಪಡೆಗಳನ್ನು ನಿವಾರಿಸಲು ಭಾರತೀಯ ಕಿಸಾನ್ ಸಂಘ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ಈಗಾಗಲೇ ಹೆಚ್ಚಿನ ರಾಜ್ಯಗಳಲ್ಲಿ ಶಕ್ತಿಯುತವಾಗಿ ಈ ಸಂಘಟನೆ ಮುಂದೆ ಹೆಜ್ಜೆಯೂರಿದೆ.
ಗ್ರಾಮೀಣ ಮತ್ತು ನಗರದ ನಡುವಿನ ಅಭಿವೃದ್ಧಿಯ ಅಂತರವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಸಮಾಜವನ್ನು ವಿಭಜಿಸುವ ದೃಷ್ಟಿಕೋನವನ್ನು ಸಂಪೂರ್ಣವಾಗಿ ತ್ಯಜಿಸಿ ಸಮಾಜವನ್ನು ಒಂದುಗೂಡಿಸುವ ಪ್ರಯತ್ನಗಳನ್ನು ಮಾಡುವುದು ಭಾರತೀಯ ಕಿಸಾನ್ ಸಂಘದ ಉದ್ದೇಶವೂ ಕೂಡ.
ಕರ್ನಾಟಕದಲ್ಲಿ ಹಲವಾರು ರೈತ ಆಂದೋಲನ, ರೈತಪರ ಹೋರಾಟ, ವಿದ್ಯುತ್ ದರ ಚಳವಳಿಗಳ ಮೂಲಕ ಸಹಸ್ರಾರು ರೈತರು ಭಾ.ಕಿ.ಸಂ. ಸಂಪರ್ಕದಲ್ಲಿದ್ದಾರೆ. ಒಬ್ಬ ರೈತನಿಗೆ ಸಿಗಬೇಕಾದ ನ್ಯಾಯವನ್ನು ಶಾಂತ ಪ್ರಯತ್ನದಿಂದ ದೊರಕಿಸಿಕೊಂಡು ಕೃಷಿಯಲ್ಲಿ ರಚನಾತ್ಮಕ ಕಾರ‍್ಯಗಳಿಂದ ರೈತ ಸಮಾಜಕ್ಕೆ ಹೊಸ ಶಕ್ತಿಯನ್ನು ನೀಡುವತ್ತ ಭಾ.ಕಿ.ಸಂ. ಶ್ರಮಿಸುತ್ತಿದೆ. ರೈತ ನಿಜವಾಗಿಯೂ ಆರ್ಥಿಕ ಸ್ವಾವಲಂಬಿ ಯಾಗಬೇಕು. ಜಾತಿ-ಪಂಗಡ, ಮೇಲು-ಕೀಳು, ಬಡವ-ಬಲ್ಲಿದ ಇತ್ಯಾದಿ ತಾರತಮ್ಯಗಳಿಂದ ಹೊರಬಂದು ಏಕಚಿಂತನೆಯಲ್ಲಿ ತೊಡಗಬೇಕೆಂಬುದು ‘ಭಾರತೀಯ ಕಿಸಾನ್ ಸಂಘ’ದ ಮೂಲ ನಿಲುವಾಗಿದೆ.
ಹೆಚ್ಚಿನ ವಿವರಗಳಿಗಾಗಿ:
‘ಭಾರತೀಯ ಕಿಸಾನ್ ಸಂಘ’
ಯಾದವಸ್ಮೃತಿ, #೫೫, ೧ನೇ ಮುಖ್ಯರಸ್ತೆ, ಶೇಷಾದ್ರಿಪುರಂ, ಬೆಂಗಳೂರು-೫೬೦೦೨೦
ಪುಟ್ಟಸ್ವಾಮಿ – ೯೪೪೮೧ ೫೬೪೪೮

Leave a Reply

Your email address will not be published.

This site uses Akismet to reduce spam. Learn how your comment data is processed.