ಬೆಂಗಳೂರು : ಭಾರತೀಯ ಶಿಕ್ಷಣ ಮಂಡಲದ ಕರ್ನಾಟಕ (ದಕ್ಷಿಣ) ಪ್ರಾಂತದ ನೂತನ ಕಾರ್ಯಕಾರಿಣಿಯನ್ನು ನವೆಂಬರ್ 1 ರಂದು ಬೆಂಗಳೂರಿನಲ್ಲಿ ನಡೆದ ಅಭ್ಯಾಸವರ್ಗದಲ್ಲಿ ಘೋಷಿಸಲಾಯಿತು. ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೊ. ಸತೀಶ್ ವಾಸು ಕೈಲಾಸ್ ಅವರು ಅಧ್ಯಕ್ಷರಾಗಿ ನಿಯುಕ್ತಿಗೊಂಡರು.
ಉಪಾಧ್ಯಕ್ಷರಾಗಿ ಪ್ರೊ. ರಾಮಚಂದ್ರಗೌಡ ಹಾಗೂ ಶ್ರೀಶೈಲ ರಾಮಣ್ಣನವರ್, ಕಾರ್ಯದರ್ಶಿಯಾಗಿ ಡಾ. ರಾಘವೇಂದ್ರ ಹೊಳ್ಳ ಜವಾಬ್ದಾರಿ ವಹಿಸಿಕೊಂಡರು. ಒಟ್ಟು 26 ಮಂದಿಯ ನೂತನ ಕಾರ್ಯಕಾರಿಣಿಯನ್ನು ದೆಹಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹಾಗೂ ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತೀಯ ಪ್ರಕಾಶನ ಪ್ರಮುಖ ಪ್ರೊ. ರವಿ ಟೇಕ್ಚಂದಾನಿ ಘೋಷಿಸಿದರು.
ನೂತನ ಕಾರ್ಯಕಾರಿಣಿಯನ್ನು ಉದ್ದೇಶಿಸಿ ಮಾತನಾಡಿದ, ಭಾರತೀಯ ಶಿಕ್ಷಣ ಮಂಡಲದ ಸಂಘಟನಾ ಕಾರ್ಯದರ್ಶಿ ಬಿ. ಆರ್. ಶಂಕರಾನಂದ ಅವರು, ವಸಾಹತುಶಾಹಿಯ ಚಿಂತನೆಗಳಿಂದ ಪ್ರಭಾವಿತವಾಗಿರುವ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಭಾರತೀಯತೆಯನ್ನು ತರುವುದಕ್ಕೆ ಆಂದೋಲನ ನಡೆಸಬೇಕಿರುವ ಅಗತ್ಯವನ್ನು ಪ್ರತಿಪಾದಿಸಿದರು.
ಬೆಳಗ್ಗೆ ಹತ್ತರಿಂದ ಸಂಜೆ ಐದರ ನಡುವೆ ನಡೆಯುವ ಪಾಠಪ್ರವಚನವೇ ಶಿಕ್ಷಣವಲ್ಲ. ಅದು ಈ ವ್ಯಾಪ್ತಿಯನ್ನು ಮೀರಿದ ಒಂದು ಪ್ರಕ್ರಿಯೆ. ಬದುಕುವುದಕ್ಕೆ ಇಂಗ್ಲಿಷ್ ಅನಿವಾರ್ಯ ಎಂಬ ತಪ್ಪುಕಲ್ಪನೆಯನ್ನು ಇಡೀ ಸಮಾಜಲ್ಲಿ ಬಿತ್ತಲಾಗಿದೆ. ಈ ಭ್ರಮೆಯಿಂದ ಹೊರಬರುವ ಅಗತ್ಯವಿದೆ. ವ್ಯವಹಾರಕ್ಕೆ ಇಂಗ್ಲಿಷ್ ಬೇಕು. ಆದರೆ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ನಡೆಯಬೇಕು. ಇದನ್ನು ಪ್ರತಿಪಾದಿಸುವ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನ ಆಗಬೇಕಿದೆ ಎಂದರು.
ʼಟ್ಯಾಕ್ಸಾನಮಿಯ ಭಾರತೀಯ ಮಾದರಿʼ ಕುರಿತು ಮಾತನಾಡಿದ ಹರ್ಯಾಣ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ರಾಜೇಂದ್ರ ಕುಮಾರ್ ಅನಾಯತ್, ಪ್ರಶ್ನಿಸುವ ಗುಣವೇ ಭಾರತದ ಪ್ರಾಚೀನ ಪರಂಪರೆಯ ಅಂತಃಸತ್ವ. ಭಾರತದಷ್ಟು ಉದಾರವಾದಿ ಶಿಕ್ಷಣದ ಪರಿಕಲ್ಪನೆ ಪ್ರಪಂಚದ ಬೇರೆ ಯಾವುದೇ ನಾಗರಿಕತೆಯಲ್ಲಿ ಇಲ್ಲ ಎಂದರು.
ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ʼಬೋಧನೆʼಗಿಂತಲೂ ಕಲಿಕೆಗೆ ಹೆಚ್ಚಿನ ಮಹತ್ವ. ಇದರ ಪ್ರಕಾರ ಯಾವುದನ್ನೂ ಹೊಸತಾಗಿ ಕಲಿಸಲಾಗದು, ಕಲಿಕಾರ್ಥಿ ತನ್ನ ಶ್ರದ್ಧೆಯಿಂದ ಕಲಿತುಕೊಳ್ಳಬಲ್ಲ ಅಷ್ಟೇ. ನಮ್ಮ ಶಿಕ್ಷಣ ಮಾಹಿತಿ, ವ್ಯಾಖ್ಯಾನ, ವಿಮರ್ಶೆಯ ಹಂತವನ್ನು ದಾಟಿ ಸೌಂದರ್ಯಶಾಸ್ತ್ರದ ಹಂತದವರೆಗೆ ವಿಸ್ತರಿಸಿಕೊಂಡಿದೆ. ಆತ್ಮನಿರ್ಭರತೆಯನ್ನು ಸಾಧಿಸುವುದೇ ಶಿಕ್ಷಣದ ಉದ್ದೇಶ ಎಂದರು.