ರಜ್ಜು ಭಯ್ಯಾ ಎಂದೇ ಗುರುತಿಸಿಕೊಂಡಿದ್ದ ಪ್ರೊ.ರಾಜೇಂದ್ರ ಸಿಂಗ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಲ್ಕನೇ ಸರಸಂಘಚಾಲಕರಾಗಿದ್ದವರು. ಅದಕ್ಕೂ ಪೂರ್ವದಲ್ಲಿ ಅಲಹಾಬಾದ್ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ವಿಜ್ಞಾನಿಯಾಗಿಯೂ ಗುರುತಿಸಿಕೊಂಡಿದ್ದ ಪ್ರೊ.ರಾಜೇಂದ್ರ ಸಿಂಗ್ ಅವರ ಜಯಂತಿ ಇಂದು.

ಪರಿಚಯ
ರಾಜೇಂದ್ರ ಸಿಂಗ್ ಅವರು ಜನವರಿ 29, 1922 ರಲ್ಲಿ ಉತ್ತರಪ್ರದೇಶದ ಷಹಜಾಹನ್ ಪುರ ನಗರದಲ್ಲಿ ಜನಿಸಿದರು. ಅವರ ತಂದೆ ಬಲ್ಬೀರ್ ಸಿಂಗ್, ತಾಯಿ ಜ್ವಾಲಾ ದೇವಿ. ಅವರು ಉನ್ನಾವೊದಿಂದ ಮೆಟ್ರಿಕ್ಯುಲೇಷನ್ ಪಡೆದರು. ಅಲಹಾಬಾದ್ ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್ಸಿ, ಎಂಎಸ್ಸಿ ಪದವಿ ಪಡೆದರು.

ರಾಜೇಂದ್ರ ಸಿಂಗ್ ಅವರು 1942 ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯರಾಗಿದ್ದರು. ಈ ಸಮಯದಲ್ಲಿ ಅವರು ಆರ್ ಎಸ್ಎಸ್ ಸಂಪರ್ಕಕ್ಕೆ ಬಂದರು. ಅಂದಿನಿಂದ ಸಂಘವು ಅವರ ಜೀವನದ ಮೇಲೆ ಪ್ರಭಾವ ಬೀರಿತ್ತು.

ರಾಜೇಂದ್ರ ಸಿಂಗ್ ಅವರು ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸರ್ ಸಿ.ವಿ. ರಾಮನ್ ಅವರ ಬಳಿ ಅತ್ಯುತ್ತಮ ವಿದ್ಯಾರ್ಥಿ ಎಂದು ಕರೆಸಿಕೊಂಡಿದ್ದರು. ಅವರು ರಾಜೇಂದ್ರ ಸಿಂಗ್ ಅವರಿಗೆ ನ್ಯೂಕ್ಲಿಯರ್ ಫಿಸಿಕ್ಸ್ ನಲ್ಲಿ ಸಂಶೋಧನೆ ನಡೆಸಲು ಫೆಲೊಶಿಷ್ ನ್ನು ಕೂಡ ನೀಡಲು ಸಹಕರಿಸಿದ್ದರು.

ನಂತರ ಅವರು ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇರಿದರು. ಹಲವು ವರ್ಷಗಳ ಕಾಲ ಪರಮಾಣು ಭೌತಶಾಸ್ತ್ರ ಪ್ರಾಧ್ಯಾಪಕರಾಗಿ, ನಂತರ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿಭಾಯಿಸಿದರು. ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳಾಗಿದ್ದರು.

ಪ್ರೊ. ರಾಜೇಂದ್ರ ಸಿಂಗ್ ಅವರು 1966 ರಲ್ಲಿ ತಮ್ಮ ವಿಶ್ವವಿದ್ಯಾಲಯದ ಹುದ್ದೆಗೆ ರಾಜೀನಾಮೆ ನೀಡಿ ಆರ್ ಎಸ್ಎಸ್ ಪ್ರಚಾರಕರಾಗಿ ಹೊರಟರು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಅವರು ಭೂಗತರಾಗಿ ಇಡೀ ಭಾರತವನ್ನು ಸುತ್ತಿದರು. ರಾಜೇಂದ್ರ ಸಿಂಗ್ ಅವರು 1976ರಲ್ಲಿ ದೆಹಲಿಯಲ್ಲಿ ನ್ಯಾಯಮೂರ್ತಿ ವಿ ಎಂ ತಾರಕುಂಡೆ ಅವರ ಅಧ್ಯಕ್ಷತೆಯಲ್ಲಿ ಮಾನವ ಹಕ್ಕುಗಳ ಸಮಾವೇಶವನ್ನು ಆಯೋಜಿಸುವ ಜವಾಬ್ದಾರಿಯನ್ನು ಹೊಂದಿದ್ದರು. ಇಂಡಿಯಾ ಸೊಸೈಟಿ ಇಂಟರ್ನ್ಯಾಷನಲ್ ಮೂಲಕ ವಿದೇಶಗಳಲ್ಲಿನ ಭಾರತೀಯರನ್ನೂ ಒಗ್ಗೂಡಿಸುವ ಕಾರ್ಯ ನಿರ್ವಹಿಸಿದ್ದರು.

1980ರ ದಶಕದಲ್ಲಿ ಸರಕಾರ್ಯವಾಹರಾಗಿ (ಜನರಲ್ ಸೆಕ್ರೆಟರಿ) ಜವಾಬ್ದಾರಿ ಸ್ವೀಕರಿಸಿದ್ದರು. 1994 ರಲ್ಲಿ, ಅವರು ಬಾಳಾ ಸಾಹೇಬ್ ದೇವರಸ್ ನಂತರ ಆರ್ ಎಸ್ ಎಸ್ ಸರಸಂಘಚಾಲಕರಾದರು.

ರಜ್ಜು ಭಯ್ಯಾ ಅವರು ಸ್ವದೇಶಿ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಸಶಕ್ತಗೊಳಿಸುವ ಪರಿಕಲ್ಪನೆಯಲ್ಲಿ ದೃಢ ನಂಬಿಕೆ ಹೊಂದಿದ್ದರು. ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳನ್ನು ಆರಂಭಿಸಿದ ಅವರು, 1995 ರಲ್ಲಿ ಗ್ರಾಮಗಳನ್ನು ಹಸಿವು ಮುಕ್ತ, ರೋಗಮುಕ್ತ ಮತ್ತು ಶಿಕ್ಷಣ ನೀಡುವಲ್ಲಿ ಅತ್ಯಂತ ಆದ್ಯತೆ ನೀಡಬೇಕು ಎಂದು ಘೋಷಿಸಿದರು.

11 ಮಾರ್ಚ್, 1994 ರಿಂದ 10 ಮಾರ್ಚ್ 2000ದ ವರೆಗಿನ ಅವರ ಆರು ವರ್ಷಗಳ ಸರಸಂಘಚಾಲಕರಾಗಿದ್ದ ಅವಧಿಯು ಸಂಘ ಮತ್ತು ಭಾರತ ಎರಡಕ್ಕೂ ಅತ್ಯಂತ ನಿರ್ಣಾಯಕವಾಗಿತ್ತು. ಶಿಕ್ಷಣ ತಜ್ಞರು, ಸಮಾಜ ಸೇವಕರು, ವಿವಿಧ ಸಿದ್ಧಾಂತಗಳ ಮತ್ತು ರಾಜಕೀಯ ನಾಯಕರೊಂದಿಗೆ ರಜ್ಜು ಭಯ್ಯಾ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ್ದರು. ಅವರು ಫೆಬ್ರವರಿ 2000ರಲ್ಲಿ ತಮ್ಮ ಅನಾರೋಗ್ಯದ ಕಾರಣದಿಂದ ಸರಸಂಘಚಾಲಕರ ಜವಾಬ್ದಾರಿಯನ್ನು ತೊರೆದರು. ಅವರ ನಂತರ ಕೆ. ಎಸ್ ಸುದರ್ಶನ್ ಅವರು ಆರ್ ಎಸ್ ಎಸ್ ಸರಸಂಘಚಾಲಕರಾದರು.

ರಜ್ಜು ಭಯ್ಯ ಅವರಿಗೆ ಗೌರವಾರ್ಥವಾಗಿ ಪ್ರಯಾಗ(ಅಲಾಹಬಾದ್) ವಿಶ್ವವಿದ್ಯಾನಿಲಯವನ್ನು ಪ್ರೊ.ರಾಜೇಂದ್ರ ಸಿಂಗ್ ವಿಶ್ವವಿದ್ಯಾಲಯ ಎಂದು ಹೆಸರಿಸಲಾಗಿದೆ.

ರಾಜೇಂದ್ರ ಸಿಂಗ್ ಅವರು 14 ಜುಲೈ 2003 ರಂದು ಮಹಾರಾಷ್ಟ್ರದ ಪುಣೆಯಲ್ಲಿರುವ ಕೌಶಿಕ್ ಆಶ್ರಮದಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.