ಲೇಖನ: ಶ್ರೀ ನಾರಾಯಣ ಶೇವಿರೆ

ಚಲವಾಣಿ ಕೂಗಿತು. ನೋಡಿದರೆ ತುಂಬಾ ಅಪರೂಪದ ಕರೆ. ಮತ್ತೂರಿನ ಭಾನುಪ್ರಕಾಶರದು. ಉಭಯಕುಶಲೋಪರಿ ಮಾತುಕತೆಯಾದ ಬಳಿಕ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕಾರ್ಯದ ಬಗೆಗೆ ವಿಚಾರಿಸಿದರು. ಅಭಾಸಾಪ ಕಾರ್ಯವು ಕರ್ನಾಟಕದಲ್ಲಿ ಬೆಳೆಯುತ್ತಿರುವ ಕುರಿತು ಅವರಿಗೂ ಮಾಹಿತಿಯಿತ್ತು. ಕುತೂಹಲವಂತು ಹೇಗೂ ಇತ್ತು. ಅದು ಚೆನ್ನಾಗಿ ಗಟ್ಟಿಯಾಗಿ ಬೆಳೆಯಬೇಕೆಂಬ ಆಗ್ರಹವೂ ಜತೆಗೆ ಸೇರಿಕೊಂಡಿತ್ತು.

ಹೀಗೆ ಸಾಹಿತ್ಯ ಪರಿಷತ್ತಿನ ಸಂಘಟನೆಯ ಬಗೆಗೆ ಮಾತನಾಡುತ್ತಾ ಸಂಕೇತಿ ಭಾಷೆಯನ್ನು ಕುರಿತಾಗಿ ಉಲ್ಲೇಖಿಸಿದರು. ಅದರ ಬಗ್ಗೆ ನಡೆದಿರುವ ಪ್ರಯತ್ನಗಳನ್ನು ಕುರಿತಾಗಿ ವಿವರಿಸಿದರು. ಕೊನೆಯಲ್ಲಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂಕೇತಿ ಭಾಷೆಯ ಮೇಲೆ ಒಂದು ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ಪ್ರಸ್ತಾಪಿಸಿದರು. ಮೈಸೂರಿನಲ್ಲಿ ನಡೆಯುವ ಸಂಕೇತಿ ಸಾಹಿತಿಗಳ ಸಮ್ಮೇಳನಕ್ಕೆ ಆಹ್ವಾನಿಸಿ, ಅಲ್ಲಿ ಸಂಕೇತಿ ಕುರಿತ ಅಭಾಸಾಪ ಕಾರ್ಯಕ್ರಮದ ಬಗೆಗೆ ಹೆಚ್ಚಿನ ವಿವರಗಳನ್ನು ಚರ್ಚಿಸೋಣ ಎಂದು ಹೇಳಿದರು.

ಆ ನಿಗದಿತ ಸಮಯದಲ್ಲಿ ಮೈಸೂರಿಗೆ ಹೋಗಲು ಸಾಧ್ಯವಾಗದೆ ಅವರ ಜತೆಗಿನ ಮಾತುಕತೆ ಅಪೂರ್ಣವಾಗಿಯೇ ಉಳಿಯಿತು.

ಭಾರತೀಯ ವಿಚಾರಧಾರೆಯಡಿ ಕಾರ್ಯಮಾಡುವ, ಅಖಿಲ ಭಾರತ ವ್ಯಾಪ್ತಿಯ ಸಂಘಟನೆಯ ವೇದಿಕೆಯಲ್ಲಿ ಸಂಕೇತಿ ಭಾಷಾ ಸಂಬಂಧಿತ ಕಾರ್ಯಕ್ರಮವನ್ನು ಆಯೋಜಿಸಲು ಉದ್ಯುಕ್ತರಾದುದು ಅವರ ಯೋಚನಾವ್ಯಾಪ್ತಿಯನ್ನು ಸೂಚಿಸುತ್ತದೆ. ತಮ್ಮ ಮಾತೃಭಾಷೆ ಸಂಕೇತಿಯನ್ನು ಭಾರತೀಯ ಭಾಷೆಯಾಗಿ ಕಂಡಿದ್ದ ಅವರು, ಅದನ್ನು ಒಂದು ಸಮುದಾಯದ ಮತ್ತು ನಿರ್ದಿಷ್ಟ ಪ್ರದೇಶಗಳ ಚೌಕಟ್ಟಿನಿಂದ ಹೊರಗೆ ತಂದು ವಿಶಾಲವ್ಯಾಪ್ತಿಯಲ್ಲಿ ಕಂಡರಿಸುವ ಯೋಚನೆಯನ್ನು ಹೊಂದಿದ್ದರು.

ಸಂಘಟಕ – ಹೋರಾಟಗಾರ

ಮತ್ತೂರಿನ ಭಾನುಪ್ರಕಾಶ್ ಅಂದಾಗ ರಾಜಕಾರಣಿಗಳಿಗೆ ನೆನಪಾಗುವುದು ಭಾಜಪಾ ನಾಯಕ, ರಾಷ್ಟ್ರೀಯ ದೃಷ್ಟಿಕೋನದವರಿಗೆ ನೆನಪಾಗುವುದು ಆರೆಸ್ಸೆಸ್ ಸ್ವಯಂಸೇವಕ, ಊರ-ಪರವೂರ ಸಂಕೇತಿಗಳಿಗೆ ನೆನಪಾಗುವುದು ವಿಶ್ವ ಸಂಕೇತಿ ಸಮ್ಮೇಳನದ ರೂವಾರಿ, ಸಾಹಿತಿಗಳಿಗೆ ನೆನಪಾಗುವುದು ಸಹೃದಯ – ಬರೆಹಗಾರ – ಸಂಕೇತಿ ಸಾಹಿತ್ಯ ಸಮ್ಮೇಳನದ ಆಯೋಜಕ, ಸಾಮಾಜಿಕರಿಗೆ ನೆನಪಾಗುವುದು ಆಪ್ತ ಸಹಾಯಕ – ನಾಯಕ.

ರಾಜಕೀಯ ಕ್ಷೇತ್ರದಲ್ಲಿ ಜವಾಬ್ದಾರಿ ಹೊಂದಿ ಕಾರ್ಯಮಾಡುತ್ತಿದ್ದುದರಿಂದ ಅವರನ್ನು ರಾಜಕಾರಣಿ ಎಂದು ಗುರುತಿಸಬಹುದೇನೋ! ಆದರೆ ಅವರು ರಾಜಕಾರಣಿಗಿಂತ ಭಿನ್ನವಾಗಿ ರಾಷ್ಟ್ರೀಯ ವಿಚಾರಗಳ ಕಾರ್ಯಕರ್ತರಾಗಿ ರಾಷ್ಟ್ರಜೀವನದ ಹಲವು ಕ್ಷೇತ್ರಗಳಲ್ಲಿ ಬಹುಮುಖಿಯಾಗಿ ತೊಡಗಿದ್ದರು. ಅಧಿಕಾರ ರಾಜಕಾರಣದಿಂದ ದೂರವಿದ್ದರಷ್ಟೇ ಅಲ್ಲ, ಸಂಘಟನಾ ರಾಜಕಾರಣಿಯಾಗಿ ಅಷ್ಟೇ ಸಕ್ರಿಯತೆಯನ್ನು ಮೆರೆದರು. ರಾಜಕಾರಣಿಗಿಂತ ಮಿಗಿಲಾದ ಸಂಘಟಕರು ಅವರು.

ನಗದಿರುವ ಭಾನುರವರ ಮುಖವನ್ನು ಕಾಣಲಸಾಧ್ಯ. ಅದೇ ವೇಳೆ ಅನ್ಯಾಯವಿನಿತು ನಡೆದರೂ ಅದರ ವಿರುದ್ಧ ಸೆಟೆದು ನಿಲ್ಲದ ಭಾನುರವರು ಇರಲಸಾಧ್ಯ. ಅಂದಮೇಲೆ ತುರ್ತುಪರಿಸ್ಥಿತಿಯ ವಿರುದ್ಧ ಹೋರಾಡದೆ ಎಲ್ಲೋ ಮೂಲೆಯಲ್ಲಿ ಸಂದುಹೋಗಲು ಈ ವ್ಯಕ್ತಿತ್ವಕ್ಕೆ ಅಸಾಧ್ಯವೇ ಸರಿ. ಹೋರಾಟಪ್ರವೃತ್ತಿಯ ಅವರು ಆಗ ಜೈಲುಸೇರಿದರು ಎಂದು ಬೇರೆ ಹೇಳಬೇಕಾಗಿಲ್ಲವಷ್ಟೆ. ಇಹದ ಒಳಿತಿಗಾಗಿ ಹೋರಾಡುತ್ತಲೇ ಜೈಲುಸೇರಿದ್ದ ಅವರು, ಹೋರಾಡುತ್ತ ಹೋರಾಡುತ್ತ, ಅನವಶ್ಯ ಬೆಲೆಯೇರಿಕೆಯ ಅನ್ಯಾಯದ ವಿರುದ್ಧ ಹೋರಾಡುತ್ತಲೇ ಇಹವನ್ನು ತೊರೆದುದು ಒಂದು ದೈವೀಲೀಲೆಯೇ ಇರಬೇಕು! ಇಹವನ್ನು ತೊರೆಯಲು ಇದಕ್ಕಿಂತ ಸುಂದರ ಸಂದರ್ಭ ಇನ್ನಾವುದಿದ್ದೀತು!

ಸಂಘಟಕ ಹೋರಾಟಗಾರನಾಗಿ ಇರುವುದು ಅಪರೂಪ. ಹೋರಾಟಗಾರ ಸಂಘಟಕನಾಗಿ ರೂಪುಗೊಳ್ಳುವುದೂ ಅಪರೂಪ. ಈ ಅಪರೂಪದ ವ್ಯಕ್ತಿತ್ವವನ್ನು ಅವರು ತಮ್ಮೊಳಗೆ ಸಮನ್ವಯಗೊಳಿಸಿಕೊಂಡಿದ್ದರು.

ಇಂಥ ವ್ಯಕ್ತಿತ್ವವೊಂದು ಕಾಲೇಜು ಶಿಕ್ಷಣ ಮುಗಿಸಿದಾಕ್ಷಣ ಸಮಾಜಸಂಘಟನೆಯ ಕಾರ್ಯಕ್ಕಾಗಿ ತೊಡಗಿದ್ದು, ರಾಷ್ಟ್ರೀಯ ವಿಚಾರಧಾರೆಯ ಪಕ್ಷಕ್ಕಾಗಿ ದುಡಿಯಲು ಬದುಕು ಸವೆಸಿದ್ದು, ಅದರ ಜಿಲ್ಲಾ, ರಾಜ್ಯ ಮತ್ತು ಅಖಿಲ ಭಾರತ ಸ್ತರದ ವಿವಧ ಜವಾಬ್ದಾರಿಗಳನ್ನು ಹೊತ್ತು ದಿನರಾತ್ರಿಗಳನ್ನು ಒಂದಾಗಿಸಿದ್ದು.. ಇದೀಗ ಇತಿಹಾಸ.

ಬರೆಯಿಸುವ ಬರೆಹಗಾರ

ಬರೆಹಕ್ಕೂ ಭಾನುರವರಿಗೂ ಒಂದು ಉತ್ತಮ ನಂಟು. ಅವರೂ ಸ್ವತಃ ಒಬ್ಬ ಬರೆಹಗಾರರಾಗಿದ್ದರು. ಬರೆಹಗಾರರು ಯಾರೇ ಇದ್ದರೂ ಅವರನ್ನು ಭೇಟಿಯಾಗಿ ಅವರ ಬರೆಹಗಳ ಬಗೆಗೆ ಶೈಲಿ, ವಿಚಾರ ಇತ್ಯಾದಿ ನೆಲೆಯಲ್ಲಿ ಆಪ್ತವಾಗಿ ಚರ್ಚಿಸುತ್ತಿದ್ದರು. ತಮ್ಮ ವಿರೋಧಿ ಸಿದ್ಧಾಂತಗಳ ಬರೆಹಗಾರರೊಂದಿಗೂ ಅವರ ಒಡನಾಟ ಇದ್ದುದು ವಿಶೇಷ.

ಅವರ ಮಾತೃಭಾಷೆ ಸಂಕೇತಿ. ಅದಕ್ಕೆ ಸ್ವತಂತ್ರವಾದ ಲಿಪಿಯಿಲ್ಲ. ಆದರೆ ಆ ಭಾಷೆಯಲ್ಲಿ ಪತ್ರಿಕೆಯಿದೆ, ಸಾಹಿತ್ಯವೂ ಸಾಕಷ್ಟು ಬಂದಿವೆ. ಮಾತೃಭಾಷೆಯ ಬಗೆಗೆ ದುರಭಿಮಾನ ಇಲ್ಲವೇ ಕೀಳರಿಮೆಯನ್ನು ಹೊಂದಲಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ ಅವರು ಅವೆರಡರಿಂದಲೂ ದೂರನಿಂತು ಮಾತೃಭಾಷಾಪ್ರೀತಿಯನ್ನು ಅಭಿವ್ಯಕ್ತಿಸಿದ ಒಬ್ಬ ಅಪರೂಪದ ವ್ಯಕ್ತಿ.

‘ಸಂಕೇತಿ ಸಂಗಮ’ ಪತ್ರಿಕೆಗೆ ಬರೆಯುವ ಬರೆಹಗಾರರ ಬಗೆಗೆ ಅವರು ವಿಶೇಷ ಕಾಳಜಿ ಉಳ್ಳವರಾಗಿದ್ದರು. ಅದಕ್ಕೆ ಸಣ್ಣಪುಟ್ಟ ಬರೆಹಗಳನ್ನು ಬರೆದವರ ಬಗೆಗೂ ಹಾಸ್ಯತುಣುಕು ಪತ್ರಗಳಂಥ ಪುಟ್ಟ ಬರೆಹಬರೆದ ಬರೆಹಗಾರರ ಬಗೆಗೂ ಅತೀವ ಕಾಳಜಿಯನ್ನು ತೋರುತ್ತಿದ್ದರು. ಶಿವಮೊಗ್ಗದ ಮುರಳಿಯವರು ಒಮ್ಮೆ ‘ಅಗಡಿ ತೋಟ’ದ ಬಗೆಗೆ ಒಂದು ಲೇಖನವನ್ನು ‘ಸಂಕೇತಿಸಂಗಮ’ದಲ್ಲಿ ಬರೆದಿದ್ದರು. ಕೆಲವು ಸಮಯದ ಬಳಿಕ ಅವರಿಗೆ ಸಿಕ್ಕ ಭಾನು ಮಾತನಾಡುತ್ತ ಆ ಲೇಖನದ ಬಗ್ಗೆ ಉಲ್ಲೇಖಿಸದೆ ಬಿಡಲಿಲ್ಲ. ಸ್ವತಃ ಅಗಡಿ ತೋಟಕ್ಕೆ ಹೋಗಿಬಂದ ಅನುಭವವಾಯಿತು ಎಂಬುದು ಭಾನು ಅವರ ಆಪ್ತ ಬೆನ್ನುಡಿಯಾಗಿತ್ತು ಆಗ.

ಅದು ಮತ್ತೂರು ಹೊಸಹಳ್ಳಿಯ ಬರೆಹಗಾರರೇ ಇರಲಿ, ಹೊರರಾಜ್ಯದ ಬರೆಹಗಾರರೇ ಇರಲಿ, ತಮ್ಮ ದೃಷ್ಟಿಕಕ್ಷೆಗೆ ಬಂದರೆ ಸಾಕು; ಅವರ ಬರೆಹಗಳನ್ನು ಓದಿ ಬೆನ್ನುತಟ್ಟದಿರುವ ವ್ಯಕ್ತಿತ್ವ ಭಾನುರವರದ್ದಲ್ಲ.

ಬರಿಯ ಬರೆಹಗಾರರಷ್ಟೇ ಅಲ್ಲ, ಉತ್ತಮ ಕಾರ್ಯವನ್ನು ಸಾಧಿಸಿದ ಯಾರೇ ಆದರೂ, ಅವರು ವಿರೋಧಿಗಳೇ ಆದರೂ ಭಾನುರವರು ಅವರ ಬೆನ್ನುತಟ್ಟದಿದ್ದರೆ ಮತ್ತೆ ಕೇಳಿ.

ಉತ್ತಮ ಯೋಜಕ

ಭಾಷಾಸಂವರ್ಧನೆಯು ಅವರ ಆಗ್ರಹದ ವಿಷಯವಾಗಿತ್ತು. ಸಂಕೇತಿ ಭಾಷೆಯನ್ನು ಒಂದು ಭಾರತೀಯ ಭಾಷೆಯೆಂಬ ನೆಲೆಯಲ್ಲಿ ಅದರ ಸಂವರ್ಧನೆಯ ಕುರಿತು ಭಿನ್ನ ಬಗೆಗಳಲ್ಲಿ ತೊಡಗಿದ ಅವರು, ಸಂಕೇತಿ ಅಕಾಡೆಮಿಯನ್ನು ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕಾಗಿ ಪ್ರೊ. ಎಂ. ಎಲ್. ಶಾಸ್ತ್ರೀ, ಡಾ. ಸತ್ಯನಾರಾಯಣ ಶಾಸ್ತ್ರೀ, ಶ್ರೀಮತಿ ರಾವ್, ಶ್ರೀಯುತ ರು. ಸು. ಭಾಸ್ಕರ ಅವಧಾನೀ ಮುಂತಾದ ವಿದ್ವಾಂಸರನ್ನು ಒಂದೆಡೆ ತಂದು ಸಂಕೇತಿ ಭಾಷೆಯನ್ನು ಕುರಿತು ಒಂದಿಷ್ಟು ನಿರ್ದಿಷ್ಟ ಕೆಲಸಗಳನ್ನು ಆಯೋಜಿಸಿದ್ದರು.

ಸಂಕೇತಿ ಭಾಷೆಯು ಬೆಟ್ಟದಪುರ, ಕೌಶಿಕ, ಮತ್ತೂರು, ಲಿಂಗದಹಳ್ಳಿ ಎಂದು ಮುಖ್ಯವಾಗಿ ನಾಲ್ಕಾಗಿ ವಿಂಗಡಗೊಂಡಿತ್ತು. ಅವುಗಳಲ್ಲಿ ವಿವಿಧ ಪ್ರಮಾಣದಲ್ಲಿ ದಕ್ಷಿಣದ ನಾಲ್ಕೂ ಭಾಷೆಗಳ ಪ್ರಭಾವವಿದ್ದುವು. ಶುದ್ಧ ಸಂಕೇತಿಯನ್ನು ಆವಿಷ್ಕರಿಸುವುದು ಸಾಹಸದ ಕಾರ್ಯವಾಗಿತ್ತು. ಅಕಾಡೆಮಿಯು ಅನ್ಯಭಾಷಾ ಪ್ರಯೋಗ – ಪ್ರಭಾವಗಳಿಂದ ಮುಕ್ತವಾದ ನಾಲ್ಕು ಸಾವಿರ ಸಂಕೇತಿಪದಗಳನ್ನು ಸಂಗ್ರಹಿಸುವಲ್ಲಿ ಯಶಸ್ಸುಪಡೆಯಿತು. ಜತೆಗೆ ಇನ್ನೂ ಹಲವಾರು ಪುಸ್ತಕಗಳನ್ನು ಪ್ರಕಟಿಸುವಲ್ಲಿಯೂ ಒಂದು ಯಶಃಪ್ರದ ಹೆಜ್ಜೆಯನ್ನಿಟ್ಟಿತು. ಸಂಕೇತಿಭಾಷಾ ಸಂವರ್ಧನೆಯ ನೆಲೆಯಲ್ಲಿ ಭಾನುರವರು ತೊಡಗಿದ ಈ ಕಾರ್ಯವು ಇದೀಗ ಅವರ ಅನುಪಸ್ಥಿತಿಯಲ್ಲಿಯೂ ಮುಂದುವರಿದಿದೆ.

ತಾನು ಪ್ರಾರಂಭಿಸಿದ ಕಾರ್ಯವು ತನ್ನ ನಂತರವೂ ಯಾವುದೇ ತೊಡಕಿಲ್ಲದೆ ಮುಂದುವರಿಯುವಂತೆ ಮಾಡಬಲ್ಲವ ಉತ್ತಮ ಸಂಘಟಕ. ಭಾನು ಅಂಥ ಸಂಘಟಕರಾಗಿದ್ದರು.

ಸಂಪ್ರದಾಯಸ್ಥ ಕ್ರಾಂತಿಕಾರಿ

ಗ್ರಾಮದಲ್ಲಿ ಯಾರಾದರೂ ಮರಣಿಸಿದಾಗ ಹತ್ತನೆಯ ದಿನದ ಧರ್ಮೋದಕ ಕಾರ್ಯಕ್ಕೆ ಪುರುಷರು ಮಾತ್ರ ಬರುವುದು ಸಂಪ್ರದಾಯ. ಒಮ್ಮೆ ಗ್ರಾಮದ ಹಿರಿಯರೊಬ್ಬರು ತೀರಿಕೊಂಡಾಗ ಧರ್ಮೋದಕ ಬಿಡಲು ಮನೆಯ ಹೆಣ್ಣುಮಕ್ಕಳೂ ಬಂದರು. ಹೆಣ್ಣುಮಕ್ಕಳ ‘ಸಂಪ್ರದಾಯವಿರೋಧಿ’ಯಾದ ಈ ಅಪೇಕ್ಷೆಯನ್ನು ಪೂರೈಸಿಕೊಡುವಲ್ಲಿ ರವಿಕುಮಾರ್ ಎಂಬ ಕಾರ್ಯಕರ್ತರೊಬ್ಬರ ಪ್ರಯತ್ನವೂ ಇತ್ತು. ಈ ವಿಷಯ ತಮ್ಮ ಗಮನಕ್ಕೆ ಬಂದಾಗ ಭೇಷ್ ಎಂದು ಆ ಕಾರ್ಯಕರ್ತರ ಬೆನ್ನುತಟ್ಟವಲ್ಲಿ ಭಾನುಪ್ರಕಾಶ್ ಮೊದಲಿಗರಾದರು. ಇದೊಂದು ಕ್ರಾಂತಿಕಾರಿ ಹೆಜ್ಜೆ. ಇಂಥ ಪರಿವರ್ತನೆಯನ್ನು ನಾವೆಲ್ಲ ಸೇರಿ ಮಾಡಬೇಕಾಗಿದೆ ಎಂದವರು ವಿಶ್ವಾಸದ ಮಾತುಗಳನ್ನು ರವಿ ಜತೆಗೆ ಹೊಣೆಗಾರಿಕೆಯಿಂದ ಹೇಳಿಕೊಂಡಿದ್ದರು.

ಮತ್ತೂರಿನ ವಿಜಯೇಂದ್ರ ಅವರು ಓರ್ವ ಸಂಘದ ಕಾರ್ಯಕರ್ತರು. ಅವರಿಗೆ; ಕುಟುಂಬಗಳನ್ನು ಸಂಸ್ಕಾರಸಂಪನ್ನವಾಗಿಸಲು ಪ್ರಯತ್ನಿಸುವ ‘ಕುಟಂಬ ಪ್ರಬೋಧನ’ ಎಂಬ ವೇದಿಕೆಯೊಂದರ ಜವಾಬ್ದಾರಿ. ಪುಟ್ಟ ಪ್ರದೇಶದ ವ್ಯಾಪ್ತಿಯಲ್ಲಿ ಅಲ್ಲಿಯ ಮನೆಮಂದಿಯನ್ನು, ಮುಖ್ಯವಾಗಿ ದಂಪತಿಗಳನ್ನು ಈ ರೀತಿ ಸೇರಿಸಿ ಚಟುವಟಿಕೆಗಳನ್ನು ಮಾಡಲಾಗುತ್ತದೆ. ಒಮ್ಮೆ ಅಂಥ ಒಂದು ‘ಕುಟಂಬ ಮಿಲನ’ವನ್ನು ವಿಜಯೇಂದ್ರರು ತಮ್ಮ ಮನೆಮಹಡಿಯಲ್ಲಿಯೇ ಆಯೋಜಿಸಿದ್ದರು. ಸುತ್ತಮುತ್ತಲಿನ ಎಲ್ಲ ಸಮುದಾಯಗಳ ದಂಪತಿಗಳನ್ನು ಆ ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದರು. ಸುಮಾರು ನೂರು ಮಂದಿ ಉಪಸ್ಥಿತರಿದ್ದ ಆ ಕಾರ್ಯಕ್ರಮವು ಯಶಸ್ವೀ ಕಾರ್ಯಕ್ರಮ ಎಂದೆನಿಸಿಕೊಂಡಿತಷ್ಟೇ ಅಲ್ಲ, ಮಡಿವಂತ ಸಂಪ್ರದಾಯದ ಹಿನ್ನೆಲೆಯ ಮನೆಯೊಂದರಲ್ಲಿ ಅದು ನಡೆಯಿತೆಂಬುದು ಹಲವರ ಹುಬ್ಬೇರುವಂತೆಯೂ ಮಾಡಿತ್ತು. ಆದರೆ ಅದು ಸಂಘದ ಕಾರ್ಯಕರ್ತರ ದೃಷ್ಟಿಯಿಂದ ಅತ್ಯಂತ ಸಹಜ ವಿದ್ಯಮಾನ. ಈ ಕಾರ್ಯಕ್ರಮದ ಕುರಿತು ಕೇಳಿತಿಳಿದ ಭಾನುಪ್ರಕಾಶ್, ‘ಸಮಾಜದ ಎಲ್ಲರನ್ನೂ ಒಳಗೊಳ್ಳುವ ನಮ್ಮ ಸಂಘಟನಾ ಪ್ರಯತ್ನದಲ್ಲಿ ಇದೊಂದು ಉತ್ತಮ ಹೆಜ್ಜೆ. ನೀವು ಈ ಹೆಜ್ಜೆಯನ್ನು ದೃಢವಾಗಿ ಇಟ್ಟಿದ್ದೀರಿ. ಸಂಘಕ್ಕೆ ನೂರು ವರ್ಷ ಮತ್ತು ಮತ್ತೂರು ಶಾಖೆಗೆ ಐವತ್ತು ವರ್ಷ ತುಂಬುತ್ತಿರುವ ಸಮಯದಲ್ಲಿ ಸಾಮಾಜಿಕ ಪರಿವರ್ತನೆ ಕಾರ್ಯಕ್ಕೆ‌‌ ನಾಂದಿ ಆಗಿರುವ ಈ ದಿಕ್ಸೂಚಿ ಘಟನೆಗೆ‌ ನಮ್ಮ ವಿಜಯೇಂದ್ರ ದಂಪತಿಗಳು ನಿಮಿತ್ತರಾದರು ಎನ್ನುವುದು‌ ನಮಗೆಲ್ಲಾ ಹೆಮ್ಮೆಯ‌ ವಿಷಯ. ಹಿಂದೂ ಸಮಾಜವನ್ನು ಒಡೆಯುವ ತನಕ ಬೆಳೆದು ಬೇರೂರಿರುವ ಅನಿಷ್ಟ ಕಳಂಕದ ಮೌಢ್ಯಾಚರಣೆ ತೊಲಗಿಸಲು ನೀವು ಮಾಡಿರುವ‌ ಪ್ರಯತ್ನ‌ ಅನುಕರಣೀಯ. ಇದರ ಮೂಲಕ ಬಂಧುವಾಗಿ, ಮಿತ್ರರಾಗಿ, ಸಹಕಾರಿ ಸ್ವಯಂಸೇವಕರಾಗಿ ನಿಮ್ಮ ಬಗ್ಗೆ ಅಭಿಮಾನ ನನಗೆ. ಇದೊಂದು ಸಾರ್ಥಕ ಪ್ರಯತ್ನ. ಇದನ್ನು ನಾವೆಲ್ಲಾ ಸೇರಿ ಮುಂದುವರಿಸೋಣ. ನಮ್ಮ ಊರಿನಲ್ಲಿ, ನಮ್ಮ ಮಧ್ಯೆ ನೀವೇ ಅಗ್ರೇಸರರು’ ಎಂದು ಪತ್ರಿಸುವ ಮೂಲಕ ಬೆನ್ನುತಟ್ಟಿದ್ದರು.

ತಮ್ಮ ಗ್ರಾಮದಲ್ಲಿ ಒಂದು ಸಮುದಾಯದ ವ್ಯಾಪ್ತಿಯಲ್ಲಿ ಪ್ರತಿ ವರ್ಷ ನಡೆಯುವ ಉತ್ಸವದ ಮೆರವಣಿಗೆಯು ತಮ್ಮ ಮನೆಯೆದುರೂ ಬರುತ್ತದೆ. ಪೂಜೆ ನಡೆಯುತ್ತದೆ. ಇದಕ್ಕೆ ಸಾಮರಸ್ಯದ ಸೂತ್ರವನ್ನು ಪೋಣಿಸುವ ಒಂದು ಮಾರ್ಗವಾಗಿ ಭಾನುರವರು ತಮ್ಮ ಮನೆಗೆ ಆ ಉತ್ಸವದಂದು ಎಲ್ಲ ಸಮುದಾಯದವರನ್ನೂ ಕರೆದು ಅವರನ್ನು ಭಜನೆ ಇತ್ಯಾದಿ ಧಾರ್ಮಿಕಕಾರ್ಯದಲ್ಲಿಯೂ ಜೋಡಿಸಿ ಪೂಜೆಯಲ್ಲಿಯೂ ಪಾಲ್ಗೊಳ್ಳುವಂತೆ ಮಾಡಿ ಅವರೆಲ್ಲರಿಗೂ ಪ್ರಸಾದವನ್ನು ವಿತರಿಸುವ ಒಂದು ನೂತನ ಸಂಪ್ರದಾಯವನ್ನೇ ಪ್ರಾರಂಭಿಸಿದರು.

ಅವರು ಎಷ್ಟು ಸಂಪ್ರದಾಯಸ್ಥರೋ ಅಷ್ಟೇ ಕ್ರಾಂತಿಕಾರಿಗಳಾಗಿ ಯೋಚಿಸುತ್ತಿದ್ದರು. ಅವರ ಯೋಚನೆಯ ಸೂತ್ರವಿಷ್ಟೆ: ಸಮಾಜಕ್ಕೆ ಹಿತವಾಗುವ ಸಂಪ್ರದಾಯವೂ ಬೇಕು, ಸಂಪ್ರದಾಯವಿರೋಧವೂ ಬೇಕು. ಅಹಿತವಾಗುವ ಸಂಪ್ರದಾಯವೂ ಬೇಡ, ಸಂಪ್ರದಾಯವಿರೋಧವೂ ಬೇಡ.

ಕಾಳಜಿಯಲ್ಲಿರುವ ವೈಶಿಷ್ಟ್ಯ

ಅಡಿಕೆ ಬೆಳೆಗಾರರೇ ಇರುವ ಮತ್ತೂರಿನಲ್ಲಿ ಎಲ್ಲರೂ ತಮ್ಮ ಅಡಿಕೆಯನ್ನು ಒಂದೆಡೆ ವಿಶಾಲ ಮೈದಾನದಲ್ಲಿ ತಮ್ಮ ನಿಗದಿತ ಜಾಗದಲ್ಲಿ ಒಣಹಾಕುತ್ತಾರೆ. ಒಮ್ಮೆ ಹಾಗೆ ಒಣಹಾಕಿದ ಅಡಿಕೆ ಒಮ್ಮೆಲೇ ಬಂದುಹೋದ ಭಾರೀ ಮಳೆಗೆ ಕೊಚ್ಚಿಕೊಂಡು ಹೋಯಿತು. ನೆರೆಪಾಲಾಗಿ ಉಳಿದ ಒಂದಷ್ಟು ಅಡಿಕೆ ಅಲ್ಲಿಲ್ಲಿ ರಾಶಿಯಾಗಿದ್ದವು. ಎಲ್ಲರ ಅಡಿಕೆಯೂ ಇದೆ. ಆದರೆ ಯಾರ಼್ಯಾರದ್ದು ಯಾವ್ಯಾವುದು ಎಷ್ಟೆಷ್ಟು ಎಂದು ಊಹಿಸಲಾಗದು. ಅದನ್ನು ಈಗ ಎಲ್ಲರಿಗೂ ಒಪ್ಪಿಗೆಯಾಗುವಂತೆ ಹಂಚಬೇಕು. ಹೇಗೇ ಹಂಚಿದರೂ ಎಲ್ಲರಿಗೂ ಒಪ್ಪಿಗೆಯಾಗುವುದು ಕಷ್ಟವೇ. ಸಮನಾಗಿ ಹಂಚಿದರೆ ಕೆಲವರದು ತುಂಬಾ ಹೆಚ್ಚಿತ್ತು, ಕೆಲವರದು ತುಂಬಾ ಕಡಮೆಯಿತ್ತು. ಆಗ ಭಾನು ಮುಂದೆ ನಿಂತು ಅದನ್ನು ತಮ್ಮದೇ ಒಂದು ಅನುಪಾತದ ಲೆಕ್ಕಾಚಾರದಲ್ಲಿ ಹಂಚಿದರು. ಬಹುತೇಕ ಎಲ್ಲರಿಗೂ ನ್ಯಾಯ ಸಿಗುವಂತೆ ಅವರ ಆ ಅನುಪಾತದಲ್ಲಿ ಎಚ್ಚರಿಕೆ ಇತ್ತು. ಅವರು ಹಂಚಿದ್ದರಿಂದಾಗಿ ಯಾರದೂ ಪುಕಾರು ಬರಲಿಲ್ಲ.

ತಮ್ಮ ಬಗ್ಗೆ ಕಡಮೆ ಯೋಚಿಸಿ ಉಳಿದವರ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಭಾನುರವರ ವ್ಯಕ್ತಿತ್ವಕ್ಕೆ ಈ ನಿರ್ವ್ಯಾಜ ಹಂಚಿಕೆ ಸುಲಭಸಾಧ್ಯವಾಯಿತು.

ಮತ್ತೂರಿನ ಪಕ್ಕದಲ್ಲಿರುವ ಊರಗಡೂರಿನಲ್ಲಿ ಒಂದು ಪುಟ್ಟ ಬೆಟ್ಟವಿದೆ. ಅದರ ಮೇಲೊಂದು ಮಂದಿರ ಶಿಥಿಲಾವಸ್ಥೆಯಲ್ಲಿತ್ತು. ಜತೆಗೆ ಬೆಟ್ಟದ ಕೆಳಗೆ ಸುತ್ತಲೂ ಎಲ್ಲಿಂದಲೋ ಬಂದ ಅನ್ಯಮತೀಯರು ರಾಜಕಾರಣಿಗಳ ಕೃಪಾಕಟಾಕ್ಷದಿಂದ ಅಕ್ರಮ ಆಶ್ರಯವನ್ನು ಕಂಡುಕೊಂಡು ಸ್ಥಾನೀಯರಿಗೆ ಸವಾಲಾಗಿದ್ದರು. ಮಂದಿರವನ್ನು ಪುನರುಜ್ಜೀವನಗೊಳಿಸಿ ಅದರ ಮೂಲಕ ಸಮಾಜಜಾಗೃತಿಯ ಕಾರ್ಯವನ್ನು ಮಾಡುವುದು ವಿಹಿತ ಮತ್ತು ಸುಲಭ ಎಂದರಿತ ಭಾನು, ಆ ಕಾರ್ಯಕ್ಕೆ ಮುಂದಾದರು. ಇದಕ್ಕಾಗಿ ಅವರು ಗೈದ ಸಂಘಟನೆ ಮತ್ತು ಯೋಜನೆಯ ಪರಿಣಾಮವಾಗಿ ಕೆಲವೇ ಸಮಯದಲ್ಲಿ ಮಂದಿರ ನವೀಕೃತಗೊಂಡು ಭಕ್ತಾದಿಗಳಿಂದ ತುಂಬುವಂತಾಯಿತು. ಮಂದಿರದ ಪೂಜಾದಿ ನಿತ್ಯದ ಕಾರ್ಯ-ಚಟುವಟಿಕೆಗಳು ತಡೆಯಿಲ್ಲದೆ ನೆರವೇರಲು ಒಂದು ಸಿದ್ಧ ಆರ್ಥಿಕವ್ಯವಸ್ಥೆಯನ್ನೂ ರೂಪಿಸಲಾಯಿತು. ದೇವಸೇವೆಗಾಗಿ ಜನ ಬೆಟ್ಟವೇರುವುದು ಮಾಮೂಲಿಯಾಯಿತು. ಬೆಟ್ಟ ಸಮಾಜದ ಸ್ವತ್ತಾಗಿ ಸುರಕ್ಷಿತವಾಯಿತು.

ಭಾನು ಅವರು ವಹಿಸುವ ಕಾಳಜಿಯ ಕಾರ್ಯವು ಅವರ ನಂತರವೂ ನಿರಂತರ ನಡೆಯುವಂತೆ ಮುಂಗಾಣ್ಕೆಯ ಒಂದು ಗಟ್ಟಿ ವ್ಯವಸ್ಥೆಯಿಂದ ಕೂಡಿರುತ್ತದೆ.

ಅನೂಹ್ಯ ಆಪ್ತತೆ

ಶಿವಮೊಗ್ಗದ ಆಝಾದ್ ನಗರ ಮುಸ್ಲಿಮರೇ ಇರುವ ಒಂದು ಪ್ರದೇಶ. ಅಲ್ಲೊಬ್ಬರು ಶಿ.ಜು. ಪಾಶ ಎಂಬವರು ಪತ್ರಕರ್ತರು. ಅವರಿಗೂ ಭಾನುಪ್ರಕಾಶರಿಗೂ ಭಾರೀ ಆತ್ಮೀಯ ನಂಟು. ಸೈದ್ಧಾಂತಿಕ ಮತಭೇದವನ್ನು ಅವರು ಸ್ನೇಹದಲ್ಲಿ ಕಳಕೊಂಡಿರಲಿಲ್ಲ.

‘ಭಾಜಪಾ’ ರಾಜಕೀಯ ಪಕ್ಷದ ಹಿರಿಯ ಕಾರ್ಯಕರ್ತರಾದ ಅವರಿಗೆ ಎಲ್ಲಾ ಪಕ್ಷಗಳಲ್ಲೂ ಸ್ನೇಹಿತರಿದ್ದರು. ವಿರೋಧಿಗಳು ‘ಭಾಜಪಾ’ಕ್ಕೆ ಮುಸ್ಲಿಂವಿರೋಧಿ ಎಂಬ ಹಣೆಪಟ್ಟಿ ಹಚ್ಚಿಟ್ಟಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಅದನ್ನು ನಂಬಿ ‘ಭಾಜಪಾ’ವನ್ನು ಶತ್ರುಸ್ಥಾನದಲ್ಲಿ ನೋಡುವ ಮಂದಿಗೆ ಕೊರತೆಯಿಲ್ಲ.
ಆದರೆ ಭಾನುಪ್ರಕಾಶರು ಕೆಲವು ಮುಸ್ಲಿಂ ಸ್ನೇಹಿತರ ಸ್ನೇಹವನ್ನೂ ಸಂಪಾದಿಸಿದ್ದರು. ಅವರನ್ನು ಆಗಾಗ ಕಂಡು ಮಾತಾಡಿಸುವ ಕ್ರಮವನ್ನೂ ಇಟ್ಟುಕೊಂಡಿದ್ದರು.

ಪಾಶಾಜೀ ಎಂದೇ ತನ್ನನ್ನು ಗೌರವದಿಂದ ಮತ್ತು ಅಷ್ಟೇ ಹೃದಯವಂತಿಕೆಯಿಂದ ಕರೆಯುತ್ತಿದ್ದ ಭಾನು ಅವರು, ತನ್ನ ಬರಹಗಳ ಬಗೆಗೆ ಸಿಕ್ಕಿದಾಗೆಲ್ಲ ಮೆಚ್ಚುಗೆಯ ಮಾತುಗಳನ್ನು ಹೇಳಿ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದರು ಎಂದು ಪಾಶಾ ಹೇಳಿಕೊಂಡಿದ್ದಾರೆ. ಒಂದು ಪಕ್ಷದ ನಾಯಕನಾಗಿದ್ದೂ ತನ್ನ ಬಳಿ ರಾಜಕೀಯದ ವಿಷಯವನ್ನು ಮಾತನಾಡುವಾಗಲೂ ಪಕ್ಷಾತೀತವಾಗಿ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು ಎಂಬುದು ಅವರ ಅಭಿಪ್ರಾಯ.

ಅವರು ತೀರಿಕೊಂಡ ದಿನ ಅಂತಿಮದರ್ಶನಕ್ಕಾಗಿ ಬಂದ ಒಬ್ಬ ರಿಕ್ಷಾಚಾಲಕ ದಿನಪೂರ್ತಿ ಅಲ್ಲೇ ಇದ್ದು, ಅತೀವ ದುಃಖದ ದಿನವಾದ ಇಂದು ತಾನು ಬಕ್ರಿದ್ ಆಚರಿಸಲಾರೆ ಎನ್ನುತ್ತ ದಿನವಿಡೀ ಉಪವಾಸ ಆಚರಿಸಿದ್ದರು.

ಪಕ್ಷದೊಳಗಿದ್ದೂ ಪಕ್ಷಾತೀತವಾಗಿ, ಮನೆಯೊಳಗಿದ್ದೂ ಅನಿಕೇತರಾಗಿ ಇರುವವರಿಗೆ ಜಗವೆಲ್ಲ ಸ್ನೇಹಿತರು.

ವ್ಯಕ್ತಿತ್ವಸೂಚಿ

  • ‘ಆತನೊಬ್ಬ ಜನ್ಮಜಾತ ನೇತಾರ. ಜತೆಗೆ ನೇತಾರರಲ್ಲಿ ಅಪರೂಪವೆನಿಸುವ ಸತ್ಯಸಂಧತೆ, ಪ್ರಾಮಾಣಿಕತೆ, ನೀಡಿದ ಭರವಸೆಗಳನ್ನು ಕೂಡಲೇ ಈಡೇರಿಸಿ ಕೊಡುವುದು ಇತ್ಯಾದಿ ಹಲವು ಗುಣಗಳಿದ್ದವು. ಭಾನು ನಮ್ಮೂರಿನ ಹೆಮ್ಮೆ’ ಎಂದಿದ್ದರು ಖ್ಯಾತ ವಿದ್ವಾಂಸ ಮತ್ತೂರು ಕೃಷ್ಣಮೂರ್ತಿ.
  • ಸಂಕೇತಿ ಮತ್ತು ಮತ್ತೂರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ತನ್ಮೂಲಕ ಸಮಾಜ – ರಾಷ್ಟ್ರಗಳೊಂದಿಗೆ ಪರಸ್ಪರ ಬಿಡಿಸಲಾಗದ ನಂಟಿನಂತೆ ಜೋಡಿಸುವಲ್ಲಿ ಮೊದಲು ಪ್ರಯತ್ನರತರಾದವರು ಇಬ್ಬರು. ಒಬ್ಬರು ಪಟ್ಟಾಭಿ. ಮತ್ತೊಬ್ಬರು ಭಾನುಪ್ರಕಾಶ್. ಇದು ಈಗ ಯುವಪೀಳಿಗೆಯ ಮೂಲಕ ಪರಂಪರೆಯಾಗಿ ಮುಂದುವರಿದಿದೆ ಎನ್ನಿ.
  • ಮತ್ತೂರಲ್ಲಿ ನಡೆದ ವಿಶ್ವ ಸಂಕೇತಿ ಸಮ್ಮೇಳನವನ್ನು ಉದ್ಘಾಟಿಸಿದ್ದು ಸಂಘದ ಹಿರಿಯ ಪ್ರಚಾರಕರಾದ ನ. ಕೃಷ್ಣಪ್ಪನವರು. ಮೈಸೂರಿನಲ್ಲಿ ನಡೆದ ಸಂಕೇತಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ್ದು ಎಸ್. ಎಲ್. ಭೈರಪ್ಪನವರು. ಸಂಕೇತಿಯನ್ನು ಬರಿಯ ಸಮುದಾಯದ ಭಾಷೆಯಾಗಿ ಇಲ್ಲವೇ ಸಂವಹನ ಭಾಷೆಯಾಗಿ ಸಂಕುಚಿತ ದೃಷ್ಟಿಯಿಂದ ನೋಡದೆ ಭಾರತೀಯ ಭಾಷೆಯಾಗಿ, ಸಾಹಿತ್ಯ-ಸಂಸ್ಕೃತಿಯ ಭಾಷೆಯಾಗಿ ಎತ್ತರದ ದೃಷ್ಟಿಯಿಂದ ನೋಡುವವರಾಗಿದ್ದರು ಭಾನು.
  • ಮತ್ತೂರು ಮತ್ತು ಹೊಸಹಳ್ಳಿ ತುಂಗೆಯ ಇಬ್ಬದಿಗಳಲ್ಲಿರುವ ಅವಳಿ ಗ್ರಾಮಗಳು. ಸಂಕೇತಿ ಮಾತನಾಡುವವರು ಇರುವ ಗ್ರಾಮವೂ ಹೌದು. ಅಭಿವೃದ್ಧಿ ಕಾಮಗಾರಿಯಿಂದ ಹಿಡಿದು ಸಾಂಸ್ಕೃತಿಕ ಚಟುವಟಿಕೆಗಳ ತನಕ ಏನೇ ಯೋಜಿಸುವುದಿದ್ದರೂ ಎರಡೂ ಗ್ರಾಮಗಳ ಬಗೆಗೆ ಯೋಚಿಸುತ್ತಿದ್ದರು ಭಾನು.
  • ಬಿ. ಎಸ್. ಯಡಿಯೂರಪ್ಪನವರು ಭಾಜಪಾ ರಾಜ್ಯಾಧ್ಯಕ್ಷರಾದಾಗ ಯಾವುದೋ ವೈಯಕ್ತಿಕ ಕಾರಣಕ್ಕಾಗಿ ಭಾನಪ್ರಕಾಶರನ್ನು ಪಕ್ಷದ ಜವಾಬ್ದಾರಿಯಿಂದ ತೆಗೆದುಹಾಕಿದರು. ಮುಂದಿನ ವರ್ಷವೇ ನಡೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿ ನಿಂತ ಯಡಿಯೂರಪ್ಪನವರ ಮಗ ರಾಘವೇಂದ್ರರ ಗೆಲುವಿಗಾಗಿ ಹಗಲಿಡೀ ಶ್ರಮಿಸಿದ ಭಾನು, ಪಕ್ಷಕ್ಕೆ ಕಡಮೆ ಮತಗಳು ಬರುತ್ತಿದ್ದ ಬೂತುಗಳಲ್ಲಿ ತಾವೇ ನಿಂತು ಕಾರ್ಯರತರಾದರು. ಅಂಥ ನಿರ್ದ್ವೇಷದ ವ್ಯಕ್ತಿತ್ವ ಅವರದಾಗಿತ್ತು.
  • ಒಮ್ಮೆ ಪುಟ್ಟ ಹುಡಗರಿಬ್ಬರು ಬೀದಿಯಲ್ಲಿ ಜಗಳಾಡುತ್ತಿದ್ದರು. ಒಬ್ಬ ಪುರೋಹಿತರ ಮಗ. ಆತನ ಬಾಯಲ್ಲಿ ಅವಾಚ್ಯಪದಗಳು ಪುಂಖಾನುಪುಂಖವಾಗಿ ಬರುತ್ತಿತ್ತು. ಅಲ್ಲಿಗೆ ಬಂದ ಭಾನು, ಆ ಹುಡುಗನ ಭುಜವನ್ನು ಮೃದುವಾಗಿ ಸವರಿ ‘ನೀನಾಡಿದ ಈ ಮಾತುಗಳು ಯಾವ ಉಪನಿಷತ್ತಿನಲ್ಲಿವೆ? ಈ ಮಾತುಗಳು ಪುರೋಹಿತರ ಮಗನ ಬಾಯಿಯಿಂದ ಬಂತೆಂದ ಮೇಲೆ ಅವು ಯಾವುದೋ ಉಪನಿಷತ್ತಿನದ್ದೇ ಇರಬೇಕೆಂದು ನಾವೆಲ್ಲಾ ಭಾವಿಸುತ್ತೇವೆ’ ಎಂದರು. ಹುಡುಗ ತಲೆತಗ್ಗಿಸಿ ಕ್ಷಮೆಕೇಳಿದ. ತಾತನ ಬಳಿ ಹೋಗಿ ಕ್ಷಮೆಕೇಳು ಎಂದು ಸೂಚಿಸಿದ ಭಾನು, ಆ ಹುಡುಗನನ್ನು ಪರಿಣಾಮಕಾರಿ ರೀತಿಯಲ್ಲಿ ತಿದ್ದಿದ್ದರು.
  • ನಾವು ಬೇರೆ ಅಪರಿಚಿತ ಊರಿಗೆ ರೈತರಾಗಿ ಹೋಗಿ, ಕೆಲಸ ಕೇಳಿ ಮಾಡಿ, ಸಂಬಳ ಪಡೆದು ಅದರ ಅನುಭವದಲ್ಲಿ ನಮ್ಮ ಕೆಲಸಗಾರರ ಕುರಿತು ಯೋಚಿಸಬೇಕು. ನಮ್ಮ ಜಮೀನಿನಲ್ಲಿ ದುಡಿಯುವ ಕುರಿತು ಯೋಚಿಸಬೇಕು.. ಎನ್ನುತ್ತಿದ್ದ ಭಾನು ಅವರು ತಮ್ಮ ಮನೆಗೆ ಬರುವ ಕೆಲಸಗಾರರನ್ನು ಸಹಾಯಕರೆಂದು ಭಾವಿಸುತ್ತಿದ್ದರು, ತಮ್ಮದೇ ಮನೆಯ ಸದಸ್ಯರಂತೆ ಕಾಣುತ್ತಿದ್ದರು.
  • ಸದಾ ಶ್ವೇತವಸ್ತ್ರಧಾರಿ. ರಾಜಕಾರಣದಲ್ಲಿದ್ದೂ ಯಾವುದೇ ಕಪ್ಪುಚುಕ್ಕೆಯಿಲ್ಲದ ವ್ಯಕ್ತಿತ್ವ. ಆರ್ಥಿಕ ಅಷ್ಟೇ ಅಲ್ಲ, ನೈತಿಕ ವೈಚಾರಿಕ ಇತ್ಯಾದಿ ಯಾವುದೇ ಭ್ರಷ್ಟತೆ ಅವರ ಬಳಿ ಸುಳಿಯಲು ಧೈರ್ಯವಹಿಸಲಿಲ್ಲ. ಸ್ವಯಂಸೇವಕನೊಬ್ಬ ಯಾವುದೇ ಕ್ಷೇತ್ರದಲ್ಲಿ ಹೇಗಿರಬೇಕೆಂಬುದಕ್ಕೆ ಉತ್ತಮ ಮಾದರಿ ಭಾನು.
  • ಅವರ ಮನೆಯ ಹೆಸರು ‘ಅನ್ನಪೂರ್ಣಾ’. ಅದು ಅಕ್ಷರಶಃ ಅನ್ವರ್ಥಕ ನಾಮ. ಅವರ ಮನೆಯವರು ಬಂದ ಎಲ್ಲರಿಗೂ ಅನ್ನಪೂರ್ಣೆಯೇ ಸರಿ. ಅಂದಹಾಗೆ ಆ ಮನೆಯಲ್ಲಿ ಈಗಲೂ ಎಲ್ಲ ಸಮುದಾಯಗಳ ಮಂದಿಗೂ ಯಾವುದೇ ರೀತಿಯ ಭೇದಭಾವವಿಲ್ಲದೆ ಆತಿಥ್ಯ ಲಭ್ಯವಾಗುತ್ತದೆ. ಭಾನುರವರು ಹಾಕಿಕೊಟ್ಟ ಮೇಲ್ಪಂಕ್ತಿ ಅತಿಸಹಜವಾಗಿ ಮುಂಬರಿದಿದೆ.
  • ಭಾನುಪ್ರಕಾಶ್ ತೀರಿಕೊಂಡರು ಎಂಬ ಸುದ್ದಿ ತಿಳಿದಾಕ್ಷಣ ಶವ ನೋಡಬಂದವರಲ್ಲಿ ಅವರಿಂದ ಉಪಕೃತರಾದ ಕೂಲಿಕಾರ್ಮಿಕರು, ಕೃಷಿಕೆಲಸಗಾರರು, ಲಂಬಾಣಿ ತಾಂಡಾದವರು ಮತ್ತಿತರರಿದ್ದರು. ಇವರಲ್ಲಿ ಬಹುತೇಕರು ಮಾಡುತ್ತಿದ್ದ ಕೆಲಸವನ್ನು ಅಲ್ಲೇ ಬಿಟ್ಟು ಉಟ್ಟಬಟ್ಟೆಯಲ್ಲೇ ನೇರ ಭಾನುಮನೆಗೆ ಧಾವಿಸಿದ್ದರು. ದಿಲ್ಲಿಯ ಮಂತ್ರಿಮಹೋದಯರಿಂದ ತೊಡಗಿ ಹಳ್ಳಿಯ ಕೊಟ್ಟಕೊನೆಯ ವ್ಯಕ್ತಿಯ ತನಕ ಎಲ್ಲರ ಆಪ್ತ ಒಡನಾಟವಿದ್ದ ನಿಜ ನೇತಾರ ಭಾನುಪ್ರಕಾಶ್.

(ಇಂದು, ನವೆಂಬರ್ ೧೫, ಭಾನು ಅವರ ಜನ್ಮದಿನ. ತನ್ನಿಮಿತ್ತ)

1 thought on “ಮತ್ತೂರಿನ ಮುತ್ತು ಶ್ರೀ ಭಾನುಪ್ರಕಾಶ್

  1. ಸ್ವ.ಭಾನುಪ್ರಕಾಶ್ ಅವರ ಬಗ್ಗೆ ನಾರಾಯಣ ಶೇವಿರೆ ಅವರು ಬಹಳ ಚೆನ್ನಾಗಿ ವಿವರಿಸಿದ್ದಾರೆ. ಭಾನು ಅವರನ್ನು ಹತ್ತಿರದಿಂದ ಕಂಡ ನನಗೆ ಇಷ್ಟೊಂದು ವಿವರ ಮಾಹಿತಿ ಸಿಕ್ಕಿರಲಿಲ್ಲ. ಹಿರಿದಾದ ವ್ಯಕ್ತಿತ್ವ ಎಂಬುದು ಎಲ್ಲರಿಗೂ ಗೊತ್ತು. ಅದರ ಸೂಕ್ಷ್ಮ ನಿದರ್ಶನ ಘಟನೆಗಳು ಈ ಲೇಖನದಲ್ಲಿ ಪ್ರಕಟ ಆಗಿವೆ. ನಾರಾಯಣ ಶೇವಿರೆ ಅವರಿಗೆ ಧನ್ಯವಾದಗಳು…

Leave a Reply

Your email address will not be published.

This site uses Akismet to reduce spam. Learn how your comment data is processed.