
23 ಮಾರ್ಚ್ 2019, ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಹುಬ್ಬಳ್ಳಿ ಮಹಾನಗರ ಸೇವಾ ವಿಭಾಗವು ಹಲವಾರು ಸೇವಾ ಚಟುವಟಿಕೆಗಳನ್ನು ಮಾಡುತ್ತಲೇ ಬಂದಿದೆ. ಇಂತಹ ಸೇವಾ ಚಟುವಟಿಕೆಗಳಲ್ಲಿ ರಕ್ತದಾನ ಶಿಬಿರವೂ ಒಂದಾಗಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘ ಹುಬ್ಬಳ್ಳಿ ಮಹಾನಗರ ಸೇವಾ ವಿಭಾಗ ಮತ್ತು ಲೋಕಹಿತ ಟ್ರಸ್ಟ್ (ರಿ) ಹುಬ್ಬಳ್ಳಿ ಹಾಗೂ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರ ಹುಬ್ಬಳ್ಳಿ ಇವರ ಸಹಯೋಗದಲ್ಲಿ ‘ಬಲಿದಾನ ದಿವಸ’ದ ನಿಮಿತ್ತ ರಕ್ತದಾನ ಶಿಬಿರವನ್ನು ಗೋಕುಲ ರಸ್ತೆಯಲ್ಲಿರುವ ಕೇಶವ ಕುಂಜದಲ್ಲಿ ಏರ್ಪಡಿಸಲಾಯಿತು.
ಕಾರ್ಯಕ್ರಮವನ್ನು ಭಾರತ ಮಾತೆಗೆ ಪುಷ್ಪಾರ್ಚಣೆ ಮಾಡುವುದರ ಮುಖಾಂತರ ಪ್ರಾರಂಭಿಸಲಾಯಿತು, ಮುಖ್ಯ ಅತಿಥಿಗಳಾಗಿ ಶ್ರೀ ಗೌತಮ ಬಾಫನಾ, ನಗರದ ಗಣ್ಯ ವ್ಯಾಪಾರಸ್ಥರು, ಸಂಸ್ಥಾಪಕ ಅಧ್ಯಕ್ಷರು ಮಹಾವೀರ ಯೂಥ್ ಫೆಡರೇಶನ್ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಭಾರತೀಯ ಜೈನ್ ಸಂಘ ಉಪಸ್ಥಿತರಿದ್ದರು.
ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರ ಹುಬ್ಬಳ್ಳಿಯ ಆಡಳಿತ ಅಧಿಕಾರಿಗಳಾದ ಶ್ರೀ ದತ್ತಮೂರ್ತಿ ಕುಲಕರ್ಣಿಯವರು ಪ್ರಾಸ್ಥಾವಿಕವಾಗಿ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರ ಮಾಡುತ್ತಿರುವ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಈ ವರ್ಷದಲ್ಲಿ ಒಟ್ಟು 5000ಕ್ಕೂ ಹೆಚ್ಚು ರಕ್ತ ದಾನಿಗಳಿಂದ ರಕ್ತವನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ವಕ್ತಾರರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಸೇವಾ ಪ್ರಮುಖರಾದ ಶ್ರೀ ನಿಂಗಪ್ಪ ಮಡಿವಾಳರ ಇವರು ಸಂಘದ ವಿವಿದ ಸೇವಾ ಚಟುವಟಿಕೆಗಳ ಬಗ್ಗೆ ವಿವರಣೆ ನೀಡಿದರು, 1 ಲಕ್ಷ 75 ಸಾವಿರಕ್ಕೂ ಹೆಚ್ಚು ಸೇವಾ ಚಟುಚಟಿಕೆಗಳು ದೇಶದಲ್ಲಿ ಸಂಘದ ವತಿಯಿಂದ ನಡೆಯುತ್ತಿವೆ ಎಂದು ತಿಳಿಸಿದರು.
ಅತಿಥಿಗಳಾಗಿ ಶ್ರೀ ಗೌತಮ ಬಾಫನಾರವರು ಮುಖ್ಯ ಅತಿಥಿಗಳ ನುಡಿಗಳಲ್ಲಿ ದೇಶದಲ್ಲಿ ನಡೆಯುತ್ತಿರುವ ಸಂಘದ ಚಟುವಟಿಕೆಗಳ ಬಗ್ಗೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಮತ್ತು ನಾನು ಒಬ್ಬ ಸ್ವಯಂಸೇವಕನಂತೆ ಮುಂದಿನ ದಿನಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಧಾರವಾಡ ಲೋಕಸಭಾ ಸಂಸದರಾದ ಶ್ರೀ ಪ್ರಹ್ಲಾದ ಜೋಶಿ ಹಾಗೂ ವಿಧಾನಪರಿಷತ್ ನ ಸದಸ್ಯರಾದ ಶ್ರೀ ಪ್ರದೀಪ ಶೆಟ್ಟರ ಹಾಗೂ ನಗರದ ಇನ್ನಿತರ ಗಣ್ಯವ್ಯಕ್ತಿಗಳು ಭಾಗವಹಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಹುಬ್ಬಳ್ಳಿಯ ವಿದ್ಯಾನಗರದ ಸೇವಾ ಪ್ರಮುಖರಾದ ಶ್ರೀ ವೆಂಕಟೇಶ ಬಿದರಹಳ್ಳಿಯವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಮಹಾನಗರ ಸೇವಾ ಪ್ರಮುಖರಾದ ಶ್ರೀ ಬಸವರಾಜ ಕುಂದನಹಳ್ಳಿಯವರು ವಂದನಾರ್ಪಣೆ ಮಾಡಿದರು.
ರಕ್ತದಾನ ಶಿಬಿರದಲ್ಲಿ ಒಟ್ಟು 122 ಯುನಿಟ ರಕ್ತ ಸಂಗ್ರಹಿಸಲಾಯಿತು. ರಕ್ತದಾನ ಮಾಡಿದ ಪ್ರತಿಯೊಬ್ಬ ರಕ್ತದಾನಿಗೂ ರಾಷ್ಟ್ರೋತ್ಥಾನ ರಕ್ತ ನಿಧಿ ಹುಬ್ಬಳ್ಳಿ ವತಿಯಿಂದ ಪ್ರಮಾಣ ಪತ್ರವನ್ನ ನೀಡಲಾಯಿತು.