ಬೆಂಗಳೂರು: ಯಾವುದೇ ರಾಷ್ಟ್ರ ವಿಶ್ವದ ಪ್ರಭಾವಿ ರಾಷ್ಟ್ರವಾಗಬೇಕಾದರೆ ಮೊದಲು ಇಚ್ಛಾಶಕ್ತಿ ಇರಬೇಕು. ಜಾಗತಿಕ ಶಕ್ತಿಯಾಗಬೇಕೆಂಬ ಮಹತ್ವಾಕಾಂಕ್ಷೆಯ ಜೊತೆಗೆ ರಾಷ್ಟ್ರವನ್ನು ಸರಿದಾರಿಯಲ್ಲಿ ಕೊಂಡೊಯ್ಯಬಲ್ಲ ಜವಾಬ್ದಾರಿಯುತ ನಾಯಕತ್ವವೂ ಬೇಕು. ಪ್ರಸ್ತುತ ಈ ಎರಡನ್ನೂ ಸಮರ್ಥವಾಗಿ ರೂಢಿಸಿಕೊಂಡಿರುವ ಭಾರತ ಅಲಿಪ್ತ ನೀತಿಯಿಂದ ಜೊತೆಗೇ ಕಾರ್ಯತಂತ್ರದ ಸ್ವಾಯತ್ತತೆಯ (Strategic Autonomy) ಕಡೆಗೆ ದಾಪುಗಾಲನ್ನಿರಿಸಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿಣಿ ಸದಸ್ಯ ಡಾ.ರಾಮ್ ಮಾಧವ್ ಹೇಳಿದರು.

ಬೆಂಗಳೂರಿನ ಎನ್ ಆರ್ ಕಾಲನಿಯ ಡಾ. ಸಿ. ಅಶ್ವತ್ಥ್ ಕಲಾ ಭವನದಲ್ಲಿ ನಡೆದ ವಿಶ್ವ ಸಂವಾದ ಕೇಂದ್ರ ಕರ್ನಾಟಕದ ಉಪಕ್ರಮವಾದ ಸಂವಾದ ವರ್ಲ್ಡ್ ವತಿಯಿಂದ ಪ್ರಕಟಗೊಂಡಿರುವ ‘ರೀ ಇಮ್ಯಾಜಿನಿಂಗ್ ಇಂಡಿಯಾ- ಜಿಯೋ ಪಾಲಿಟಿಕ್ಸ್ ಫಾರ್ ಟ್ವೆಂಟಿ ಫರ್ಸ್ಟ್ ಸೆಂಚುರಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಎರಡು ರಾಷ್ಟ್ರಗಳ ಜಗತ್ತಿನ ಮೇಲಿನ ಅಧಿಪತ್ಯ ಇಪ್ಪತ್ತನೇ ಶತಮಾನದ ಅಂತ್ಯಕ್ಕೆ ರಷ್ಯಾದ ವಿಭಜನೆಯೊಂದಿಗೆ ಅಂತ್ಯಗೊಂಡಿತು. ಆಗ ಅಮೇರಿಕಾ ಜಗತ್ತಿನ ಏಕೈಕ ಜಾಗತಿಕ ಶಕ್ತಿಯಾಗಿ ತಾನಿರಬೇಕು ಎಂದು ಇಚ್ಛಿಸಿತ್ತು. ಆದರೆ 21ನೇ ಶತಮಾನದಲ್ಲಿ ಭಾರತ, ಚೀನಾ, ಜಪಾನ್, ಸಿಂಗಾಪುರ ಮುಂತಾದ ರಾಷ್ಟçಗಳ ಅಭಿವೃದ್ಧಿಯ ವೇಗ ಮತ್ತು ಆಸಿಯಾನ್, ಸಾರ್ಕ್, ಯುರೋಪಿಯನ್ ಯೂನಿಯನ್, ಆಫ್ರಿಕನ್ ಯೂನಿಯನ್ ಮುಂತಾದ ಒಕ್ಕೂಟಗಳ ಗಮನಾರ್ಹ ಬೆಳವಣಿಗೆ ಈ ಶತಮಾನವನ್ನು ವಿವಿಧತೆಗಳನ್ನೊಳಗೊಂಡ ಬಹುಧ್ರುವ (Multipolar and Heteroploar) ಕೇಂದ್ರಿತವಾಗಿಸಿದೆ ಎಂದು ನುಡಿದರು.

ಪ್ರಸ್ತುತ ಭಾರತ ಜಾಗತಿಕ ಸಂಗತಿಗಳಲ್ಲಿ ತಟಸ್ಥ ನೀತಿಯನ್ನು ಬದಿಗಿಟ್ಟು ತನ್ನ ಕಾರ್ಯತಂತ್ರದ ಸ್ವಾಯತ್ತತೆಯನ್ನು ಸಮರ್ಥಗೊಳಿಸಿದೆ. ಬಲಿಷ್ಠ ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ಅವುಗಳೆಲ್ಲದರ ಜೊತೆಗೆ ಸ್ಪಷ್ಟವಾದ ನಿಲುವನ್ನು ಪ್ರಕಟಗೊಳಿಸುತ್ತಿದೆ. ಚೀನಾವನ್ನೂ ಒಳಗೊಂಡಂತೆ ತನ್ನ ನೆರೆ ಹೊರೆಯ ದೇಶಗಳ ಕುತಂತ್ರಗಳಿಗೆ ಸೂಕ್ತ ಉತ್ತರವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ವಿಶ್ವದ ಶೇ.೮೦ರಷ್ಟು ಜನಸಂಖ್ಯೆಯನ್ನು ಮತ್ತು ಶೇ.೪೦ರಷ್ಟು ಒಟ್ಟು ದೇಶೀಯ ಉತ್ಪನ್ನವನ್ನು ಒಳಗೊಂಡ ಜಾಗತಿಕ ದಕ್ಷಿಣದ (ಗ್ಲೋಬಲ್ ಸೌತ್) ನಾಯಕತ್ವವನ್ನು ಭಾರತ ವಹಿಸಬೇಕೆಂದು ಇಲ್ಲಿನ ರಾಷ್ಟ್ರಗಳು ಬಯಸುತ್ತಿವೆ ಎಂದು ಅಭಿಪ್ರಾಯಪಟ್ಟರು.

ಅಭಿವೃದ್ಧಿಯ ಪಥದಲ್ಲಿರುವ ಭಾರತಕ್ಕೆ ಅನೇಕ ಸವಾಲುಗಳೂ ಇವೆ. ಮುಂದಿನ ಭವಿಷ್ಯ ತಂತ್ರಜ್ಞಾನಾಧಾರಿತವಾಗಿರುತ್ತದೆ. ಆದ್ದರಿಂದ ಅನ್ವೇಷಣೆಯನ್ನು ಅನುಕರಣೆಯನ್ನಾಗಿಸದೆ ಸೃಜನಶೀಲತೆಯೊಂದಿಗೆ ವಿನೂತನ ತಂತ್ರಜ್ಞಾನದ ಸೃಷ್ಟಿಗೆ ಯುವಜನತೆ ತಯಾರಾಗಬೇಕು. ಆಗ ಭಾರತ ಬಹುಧ್ರುವೀಯ ಜಗತ್ತಿನಲ್ಲೂ ಶಕ್ತಿಶಾಲಿ ರಾಷ್ಟ್ರವಾಗಿ ನಿಲ್ಲುತ್ತದೆ. ನಮ್ಮ ಕ್ರಿಯಾಶೀಲತೆಯ ಮೂಲಕ ಭಾರತದ ಯಶೋಗಾಥೆಯನ್ನು ಜನಮಾನಸಕ್ಕೆ ತಲುಪಿಸಲು ಸಾಧ್ಯವಾಗುತ್ತದೆ ಎಂದರು.

ವೇದಿಕೆಯಲ್ಲಿ ‘ರಿ ಇಮ್ಯಾಜಿನಿಂಗ್ ಇಂಡಿಯಾ’ ಪುಸ್ತಕದ ಸಂಪಾದಕರಾದ ಡಾ. ನಂದಕಿಶೋರ್, ಪ್ರಶಾಂತ್ ವೈದ್ಯರಾಜ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚಿಂತಕರು, ಸಂಶೋಧಕರು, ವಿಮರ್ಶಕರು, ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.