ಬೆಂಗಳೂರು: ವಿಶ್ವದ ನಾನಾ ಮಾಧ್ಯಮಗಳಲ್ಲಿ ಭಿತ್ತರವಾಗುವ ಭಾರತದ ಕುರಿತಾದ ಸುದ್ದಿಗಳು ಭಾರತೀಯರ ಮನಸ್ಥಿತಿಯ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ರಾಜಕೀಯದ ಕಾರಣದಿಂದಾಗಿ ಇಡೀ ಭಾರತವನ್ನು ನಕಾರಾತ್ಮಕವಾಗಿ ಬಿಂಬಿಸುವ ಪ್ರಯತ್ನಗಳು ಜಾಗತಿಕ ಮಾಧ್ಯಮಗಳಿಂದ ನಡೆಯುತ್ತಿದೆ. ಇವೆಲ್ಲವೂ ಭಾರತೀಯರ ಮನಸ್ಸನ್ನು ವಸಾಹತುಶಾಹಿ ಮನೋಭಾವಕ್ಕೆ ಒಳಗಾಗುವಂತೆ ಮಾಡುತ್ತಿದೆ ಎಂದು ಪತ್ರಕರ್ತ ಹಾಗೂ ಲೇಖಕ ಉಮೇಶ್ ಉಪಾಧ್ಯಾಯ ಹೇಳಿದರು.

ಮಂಥನ ಬೆಂಗಳೂರು ವತಿಯಿಂದ ಮಲ್ಲೇಶ್ವರದ ಶ್ರೀ ಕೃಷ್ಣದೇವರಾಯ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ‘ದಿ ವೆಸ್ಟರ್ನ್ ಮೀಡಿಯಾ ನರೇಟಿವ್ಸ್ ಆನ್ ಇಂಡಿಯಾ: ಫ್ರಮ್ ಗಾಂಧಿ ಟು ಮೋದಿ’ ಪುಸ್ತಕ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತವನ್ನು ಅನಾಗರಿಕರ ರಾಷ್ಟ್ರ, ಬಡರಾಷ್ಟ್ರ ಮುಂತಾದ ಪೂರ್ವಗ್ರಹಪೀಡಿತ ಧೋರಣೆಗಳಿಂದ ಜಾಗತಿಕವಾಗಿ ಹಳಿಯುವ ಕೆಲಸವನ್ನು ಜಾಗತಿಕ ಮಾಧ್ಯಮಗಳು ನಿರಂತರವಾಗಿ ಮಾಡಿಕೊಂಡು ಬಂದಿವೆ. ಮಾಧ್ಯಮಗಳಿಗೂ ಮೊದಲಿನಿಂದಲೇ ಭಾರತದ ವಿರುದ್ಧ ಈ ರೀತಿಯ ಕಥನಗಳನ್ನು (ನರೇಟಿವ್) ಸೃಷ್ಟಿಸುವ ಪ್ರಯತ್ನಗಳು ಶತಮಾನಗಳಿಂದ ನಡೆಯುತ್ತಿವೆ. ಅದರ ಪರಿಣಾಮವಾಗಿ ವಸಾಹತುಶಾಹಿ ಮಾನಸಿಕತೆ ನಮ್ಮಲ್ಲಿ ಮೂಡುತ್ತಿದೆ ಎಂದರು.

ಕೊರೋನಾ ಮಹಾಮಾರಿ ಜಗತ್ತನ್ನೇ ವ್ಯಾಪಿಸಿದ್ದ ಸಂದರ್ಭದಲ್ಲಿಯೂ ಅಭಿವೃದ್ಧಿ ಹೊಂದಿದ್ದ ದೇಶಗಳೆಂದು ಕರೆಸಿಕೊಳ್ಳುತ್ತಿದ್ದವರೇ ನಲುಗಿ ಹೋಗಿದ್ದರು. ಅಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿಯೂ ತಮ್ಮ ಮಾಧ್ಯಮಗಳಲ್ಲಿ ಅತ್ಯಂತ ಚಾಣಾಕ್ಷತನದಿಂದ ಭಾರತದ ಸ್ಥಿತಿ ಏನಾಗಬಹುದು ಎಂದು ತಪ್ಪು ಅಂಕಿಅಂಶಗಳನ್ನು ರವಾನಿಸಿದ್ದವು. ಆದರೆ ಭಾರತ ಅವರೆಲ್ಲರ ಆರೋಪಗಳನ್ನು ತನ್ನ ಕಾರ್ಯವೈಖರಿಯ ಮೂಲಕ ಸುಳ್ಳೆಂದು ಸಾಬೀತುಗೊಳಿಸಿತು ಎಂದು ನುಡಿದರು.

ಭಾರತ ಸಮರ್ಥವಾಗಿ ಕೋವಿಡ್ ಸಂದರ್ಭವನ್ನು ಎದುರಿಸಿ, ಅಂಕಿಅಂಶಗಳ ಸಹಿತ ವರದಿಯನ್ನು ಜಗತ್ತಿನ ಮುಂದಿರಿಸಿದಾಗ ಅದೇ ಮಾಧ್ಯಮಗಳು ಮುಂದಿನ ದಿನಗಳಲ್ಲಿ ಈ ಅಂಕಿಅಂಶಗಳನ್ನು ಸ್ವೀಕರಿಸಿದವು. ಆದರೆ ರಾಜಕೀಯ ಕಾರಣಕ್ಕಾಗಿ ಇಡೀ ರಾಷ್ಟ್ರದ ಕುರಿತು ಹಬ್ಬಿಸಿದ ನಕಾರಾತ್ಮಕ ಸುದ್ದಿಗೆ ಕ್ಷಮೆಯಾಚಿಸುವ ಗೊಡವೆಗೇ ಅವುಗಳು ಹೋಗಲಿಲ್ಲ ಎಂದು ತಿಳಿಸಿದರು.

ಹಿಂದಿನಿಂದಲೂ ವಿದೇಶಿ ಮಾಧ್ಯಮಗಳು ಇಂತಹ ಕಥನಗಳನ್ನು ಮಾಡಿಕೊಂಡು ಬಂದಿದ್ದರೂ ಅವುಗಳಿಗೆ ಮರು ಉತ್ತರ ನೀಡುವ ಪ್ರಕ್ರಿಯೆ ನಮ್ಮಿಂದಾಗಿದ್ದು ಅತ್ಯಂತ ಕಡಿಮೆ. ಆದರೆ ಈಗಿನ ಯುವಜನತೆ ಇಂತಹ ಸವಾಲುಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಎದುರಿಸುವಷ್ಟು ಸಮರ್ಥರು. ಖಂಡಿತವಾಗಿಯೂ ಮುಂದೊಂದು ದಿನ ವಿದೇಶಿ ಕಥನಗಳಿಗೆ ಒಳಗಾಗದೇ ಭಾರತ ತನ್ನ ಕಥನ (ನರೇಟಿವ್) ವನ್ನು ಜಾಗತಿಕವಾಗಿ ಅತ್ಯಂತ ಪ್ರಭಾವಿಯಾಗಿಸುವ ಮಟ್ಟಿಗೆ ಬೆಳೆದು ನಿಲ್ಲುತ್ತದೆ. ಈ ಕಾರ್ಯವನ್ನು ಜನಸಾಮಾನ್ಯರೇ ಮುಂದೆ ನಿಂತು ಮಾಡಲಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಜಯಕರ ಶೆಟ್ಟಿ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಚಿಂತಕರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.