ಪ್ರತಿಯೊಬ್ಬರ ಜೀವನಕ್ಕೆ ಬೆಳಕು ತುಂಬಾ ಅತ್ಯಾವಶ್ಯಕ. ವಿಜ್ಞಾನ, ಸಂಸ್ಕೃತಿ, ಕಲೆ, ಶಿಕ್ಷಣ , ಮುಂತಾದ ಯಾವುದೇ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಯಲ್ಲಿ ಬೆಳಕು ಪ್ರಮುಖ ಪಾತ್ರ ವಹಿಸುತ್ತದೆ. ಆಧುನಿಕ ಯುಗದಲ್ಲಿ ಬೆಳಕು ಇಲ್ಲದೆ ಯಾವ ಕಾರ್ಯಗಳೂ ನಡೆಯುವುದಿಲ್ಲ. ಬೆಳಕಿನ ಸಂಶೋಧನೆಯು ಸಂಭಾವ್ಯ ಪರ್ಯಾಯ ಶಕ್ತಿ ಮೂಲಗಳು, ಆರೋಗ್ಯದ ಸುಧಾರಣೆ ಮತ್ತು ಚಿಕಿತ್ಸೆಗಳಲ್ಲಿ ನಿರ್ಣಾಯಕ ವೈದ್ಯಕೀಯ ಸುಧಾರಣೆಗಳು, ಹೈ-ಸ್ಪೀಡ್ ಇಂಟರ್ನೆಟ್ ಸೇರಿದಂತೆ ಹಲವಾರು ಇತರ ಆವಿಷ್ಕಾರಕ್ಕೆ ಬೆಳಕು ಅತ್ಯಗತ್ಯ. ಈ ಕಾರಣಕ್ಕಾಗಿ ಬೆಳಕಿನ ಮಹತ್ವ ಹಾಗೂ ಅದರ ವಿವಿಧತೆಯನ್ನು ಗುರುತಿಸುವ ಸಲುವಾಗಿ ಪ್ರತಿ ವರ್ಷ ಮೇ 16 ರಂದು ಅಂತಾರಾಷ್ಟ್ರೀಯ ಬೆಳಕಿನ ದಿನವನ್ನು ಆಚರಿಸಲಾಗುತ್ತದೆ.
ಈ ದಿನ ಔಷಧ, ಸಂವಹನ, ಕಲೆ ಮತ್ತು ಶಕ್ತಿಯಂತಹ ಕ್ಷೇತ್ರಗಳಲ್ಲಿ ಬೆಳಕು ಮತ್ತು ಅದರ ಆಧಾರಿತ ತಂತ್ರಜ್ಞಾನಗಳ ನಿರ್ಣಾಯಕ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಸೂಕ್ತವಾಗಿದೆ. ಈ ವರ್ಷದ ಅಂತಾರಾಷ್ಟ್ರೀಯ ಬೆಳಕಿನ ದಿನದ ಥೀಮ್ Light in Our Lives, to let the light guide us the way forward.
ಇತಿಹಾಸ
ಈ ದಿನವನ್ನು ವಿಜ್ಞಾನ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲು ಸಾಧನೆಯ ನೆನಪಿಗಾಗಿ ಸ್ಥಾಪಿಸಲಾಯಿತು. ಮೇ 16 , 1960 ರಂದು ವಿಜ್ಞಾನಿ ಮತ್ತು ಇಂಜಿನಿಯರ್ ಥಿಯೋಡರ್ ಮೈಮನ್ ಅವರು ಲೇಸರ್ ನ ಮೊದಲ ಯಶಸ್ವಿ ಕಾರ್ಯಾಚರಣೆ ನಡೆಸಿದರು. ಹೀಗಾಗಿ ಇದರ ಸ್ಮರಣಾರ್ಥವಾಗಿ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ ) ಡಿಸೆಂಬರ್ 20, 2017 ರಂದು ಮೇ 16ರನ್ನು ಅಂತರಾಷ್ಟ್ರೀಯ ಬೆಳಕಿನ ದಿನವೆಂದು ಅಧಿಕೃತವಾಗಿ ಘೋಷಿಸಿತು. ಮೇ 16, 2018 ರಂದು ಮೊದಲ ಅಂತರಾಷ್ಟ್ರೀಯ ಬೆಳಕಿನ ದಿನವನ್ನು ಆಚರಿಸಲಾಯಿತು.
ಮಹತ್ವ
ವಿಜ್ಞಾನ, ತಂತ್ರಜ್ಞಾನ, ಕಲೆ, ಸಂಸ್ಕೃತಿ, ಶಿಕ್ಷಣದ ಗುರಿಗಳನ್ನು ಸಾಧಿಸಲು ಈ ದಿನ ಸಹಾಯಕವಾಗಿದೆ. ಬೆಳಕು ವೈಜ್ಞಾನಿಕ ಅನ್ವೇಷಣೆಯಲ್ಲಿ ಮೂಲಭೂತ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಫೋಟೋನಿಕ್ಸ್, ಖಗೋಳಶಾಸ್ತ್ರ ಮತ್ತು ಕ್ವಾಂಟಮ್ ಭೌತಶಾಸ್ತ್ರದಂತಹ ಕ್ಷೇತ್ರಗಳಲ್ಲಿ ಆವಿಷ್ಕಾರಗಳನ್ನು ಸಕ್ರಿಯವಾಗಿ ಪ್ರೇರೇಪಿಸಲು ಈ ದಿನ ಸಹಕಾರಿಯಾಗಿದೆ.
ಬೆಳಕು ಆಧಾರಿತ ತಂತ್ರಜ್ಞಾನಗಳು ದೂರಸಂಪರ್ಕ, ಮಾಹಿತಿ ತಂತ್ರಜ್ಞಾನ, ಔಷಧ ಮತ್ತು ಇಂಧನ ಸೇರಿದಂತೆ ಹಲವಾರು ಕೈಗಾರಿಕೆಗಳಲ್ಲಿ ಕ್ರಾಂತಿಯನ್ನಂಟು ಮಾಡಿದೆ. ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮತ್ತಷ್ಟು ನಾವೀನ್ಯತೆಯನ್ನು ತೋರಿಸಲು ಈ ದಿನ ಪ್ರೇರೇಪಿಸುತ್ತದೆ.
ಕಲಾತ್ಮಕ ಅಭಿವ್ಯಕ್ತಿಗಳು ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಬೆಳಕು ಯಾವಾಗಲೂ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸುವುದನ್ನು ಈ ದಿನ ಸಾಕ್ಷೀಕರಿಸುತ್ತದೆ. ಶೈಕ್ಷಣಿಕ ಸಂಸ್ಥೆ, ವಸ್ತುಸಂಗ್ರಹಾಲಯ ಮತ್ತು ವೈಜ್ಞಾನಿಕ ಸಂಸ್ಥೆಗಳಲ್ಲಿ ಈ ಕುರಿತಾದ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರೋತ್ಸಾಹಿಸಲಾಗುತ್ತದೆ.
ಬೆಳಕು ಸುಸ್ಥಿರ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಪ್ರಮುಖವಾಗಿ ಬೆಳಕಿನ ಶಕ್ತಿಯ ಕ್ಷೇತ್ರಗಳಾದ ಪರಿಣಾಮಾತ್ಮಕ ಬೆಳಕು, ಸೌರಶಕ್ತಿ , ಆಪ್ಟಿಕಲ್ ತಂತ್ರಜ್ಞಾನ ಮುಂತಾದವುಗಳಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ. ಅಂತರಾಷ್ಟ್ರೀಯ ಬೆಳಕಿನ ದಿನ ಸುಸ್ಥಿರ ಬೆಳಕಿನ ಉಪಯೋಗವನ್ನು ಪ್ರತಿಪಾದಿಸುತ್ತದೆ. ಮತ್ತು ಪರಿಸರದ ಸವಾಲುಗಳನ್ನು ಎದುರಿಸಲು ಹಾಗೂ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ತಂತ್ರಜ್ಞಾನದ ಬಳಕೆಯ ಕುರಿತು ತಿಳಿಸುತ್ತದೆ.