ಬೆಂಗಳೂರು : ‘ಸಾಮರಸ್ಯಕ್ಕೆ ಬೇಕು ತೆರೆದ ಮನಸ್ಸು’ ಪುಸ್ತಕದ ಲೋಕಾರ್ಪಣೆಯ ಕಾರ್ಯಕ್ರಮವು ಮಿಥಿಕ್ ಸೊಸೈಟಿಯಲ್ಲಿ ಶನಿವಾರ ಫೆಬ್ರವರಿ 25ರಂದು ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾಮಾಜಿಕ ಕಾರ್ಯಕರ್ತರಾದ ವಾದಿರಾಜ್ ಅವರು ಮಾತನಾಡಿ, “ಸಮಾಜದಲ್ಲಿ ಬೀಡುಬಿಟ್ಟಿರುವ ಜಾತೀಯ ವಿಷಮತೆಯನ್ನು ಹೋಗಲಾಡಿಸಲು ಧಾರ್ಮಿಕ ನೇತೃತ್ವ ಅತ್ಯಂತ ಅಗತ್ಯ. ನಮ್ಮ ದೇಶ, ಜಗತ್ತಿನ ಬೇರೆ ದೇಶಗಳ ಹಾಗಲ್ಲ. ನಮ್ಮಲ್ಲಿ ಇರುವಷ್ಟು ವೈವಿಧ್ಯತೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಅಸ್ಸಾಮಿನಲ್ಲಿ ಗಮನಿಸಿದಂತೆ 200ಕ್ಕೂ ಹೆಚ್ಚು ಭಾಷೆಗಳನ್ನು ಗುರುತಿಸಿದ್ದರು. ಅದೂ ಗುಡ್ಡಗಾಡಿನ ಪ್ರದೇಶದಲ್ಲಿ ಅಷ್ಟೊಂದು ವೈವಿಧ್ಯಮಯವಾಗಿತ್ತು.ಇದು ಕೇವಲ ಭಾಷೆಯ ವಿಷಯದಲ್ಲಿ ಮಾತ್ರವಲ್ಲ ಹಬ್ಬ, ಹರಿದಿನ, ಬಟ್ಟೆ, ಜಾತ್ರೆ ಆಹಾರ ಪದಾರ್ಥ ಹೀಗೆ ಎಲ್ಲದರಲ್ಲೂ ವೈವಿಧ್ಯತೆಯಿದೆ.ಇದೇ ರೀತಿಯಲ್ಲಿ ಜಾತಿ ಉಪಜಾತಿಗಳಿವೆ. ಇದೂ ಕೂಡ ನಮ್ಮ ದೇಶದ ವೈವಿಧ್ಯತೆಯ ಭಾಗ. ಆದರೆ ಇದು ಬೇರೆ ಸ್ವರೂಪ ಪಡೆದು ಜಾತೀಯತೆಯ ಮಟ್ಟಿಗೆ ಬೆಳೆದು ನಿಂತಿತು. ಆದರೆ ಆ ವೈವಿಧ್ಯತೆಯನ್ನು ಉಳಿಸಿಕೊಂಡೂ ಸಹ ಒಟ್ಟಾಗಿರಬೇಕು. ಹಾಗೆ ವಿವಿಧತೆಯ ಜೊತೆಗೆ ಒಟ್ಟಾಗಿರುವುದೇ ಸಮರಸತೆ. ಇದರಲ್ಲಿ ಸಾವಿರಾರು ವರ್ಷದಿಂದ ಈ ಸಮಸ್ಯೆ ಇದೆ. ಬಸವಣ್ಣನವರು, ಅಂಬೇಡ್ಕರ್ ಅವರು, ಗಾಂಧಿಯವರು, ಸಾವರ್ಕರ್ ಅವರು ಅದರ ನಿವಾರಣೆಗಾಗಿ ಶ್ರಮಿಸಿದ್ದಾರೆ. ನಮ್ಮ ಸಮಾಜದಲ್ಲಿ ಸಾಕಷ್ಟು ಸುಧಾರಣೆ ಆಗಿದೆ, ಆದರೂ ಇದೇ ಸಮಸ್ಯೆಯಿನ್ನೂ ನಮ್ಮ ಚರ್ಚೆಯ ವಿಷಯವಾಗಿರುವುದು ವಿಷಾದ. ಕೊಪ್ಪಳದಲ್ಲಿ ಅಸ್ಪೃಶ್ಯ ಜಾತಿಯ ಮಗು ಅಕಸ್ಮಾತ್ ಆಗಿ ಆಟಾಡುತ್ತಾ ಒಳಗೆ ಹೋದಾಗ ದಂಡ ಹಾಕಿದ್ದರು.ಈ ರೀತಿಯ ಸಾಮಾಜಿಕ ಸ್ಥಿತಿಗತಿಗಳು ಇನ್ನೂ ಇರುವುದು ಕಳವಳಕಾರಿ.”
ಅನೇಕ ಘಟನೆಗಳನ್ನು ಉದಾಹರಿಸುತ್ತಾ,” ನಾವು ಎಳೆವೆಯಲ್ಲಿದ್ದಾಗ ತೆರೆದ ಹೃದಯದಿಂದ ಯೋಚಿಸುತ್ತಿದ್ದೆವು,ಈಗ ಬೆಳೆಯುತ್ತಾ ನಾವು ಸಂಕುಚಿತಗೊಂಡಿದ್ದೇವೆ. ಅನೇಕ ಬಾರಿ ಇಂತಹ ಕಟ್ಟುಗಳನ್ನು ಮೀರಲು ಈ ರೀತಿಯ ಪುಸ್ತಕಗಳು ನೆರವಾಗಲಿದೆ” ಎಂದರು.
ವಿಜಯ ಕರ್ನಾಟಕದ ಸಂಪಾದಕರಾದ ಶ್ರೀ ಸುದರ್ಶನ್ ಚನ್ನಂಗಿಹಳ್ಳಿಯವರು ತಮ್ಮ ಅಧ್ಯಕ್ಷೀಯ ಭಾಷಣ ಮಾಡುತ್ತಾ,”ಇದು ಯುವಜನತೆ ಓದಲೇಬೇಕಾದ ಪುಸ್ತಕ. ಜಾತಿ ವ್ಯವಸ್ಥೆಯಲ್ಲಿ ಅನೇಕ ಶೋಷಣೆ ನಡೆಯುತ್ತಲೇ ಇದೆ. ಆದರೆ ಬದಲಾವಣೆಗಳು ಆಗಲೇಬೇಕು. ಅದಕ್ಕೆ ತೆರೆದ ಮನಸ್ಸು ಬಹಳ ಮುಖ್ಯ. ಕೆಲವು ಅಹಿತಕರ ಘಟನೆಗಳಾದಾಗ ಸಮಾಜದಲ್ಲಿ ಚಿಕಿತ್ಸಕ ಮನೋಭಾವದ ಕೆಲಸಗಳು ನಡೆಯಬೇಕಿದೆ. ಪ್ರತಿ ಹಂತದಲ್ಲೂ ಇಂತಹ ಕೈಪಿಡಿಗಳು ತಲುಪಬೇಕಿದೆ” ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿಯ ನಿವೃತ್ತ ಕುಲಪತಿ ಡಾ. ಕೆ.ಆರ್. ವೇಣುಗೋಪಾಲ್, ತುಮಕೂರು ವಿವಿ ಪ್ರಾಧ್ಯಾಪಕ ಡಾ. ಎಂ ಕೊಟ್ರೇಶ್, ಸಾಮಾಜಿಕ ಮುಖಂಡ ಡಾ. ಚಿ.ನಾ. ರಾಮು, ಲೇಖಕ ರಾಜೇಶ್ ಪದ್ಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.