ಭಾರತೀಯ ಜೀವನ ಪದ್ಧತಿಯಲ್ಲಿ ನಕಾರಾತ್ಮಕ ಸಂಗತಿಗಳಿಗೆ ಅವಕಾಶವೇ ಇಲ್ಲ. ಶತ್ರುಗಳೆನಿಸಿಕೊಂಡವರಿಗೆ ಕೇಡನ್ನೇ ಬಯಸುವ ನಿದರ್ಶನಗಳು ನಮ್ಮೆದುರಿಗೇ ಇರುವಾಗ ಶತ್ರು ಬುದ್ಧಿಯನ್ನು ವಿನಾಶ ಮಾಡು ಎಂದು ಪ್ರಾರ್ಥಿಸುವುದು ನಾವು ಹಿಂದೂಗಳು ಮಾತ್ರ. ಪ್ರತಿ ಜೀವಿಯ ಸುಖವನ್ನು ಬಯಸುವ ಸಾಮಾಜಿಕ ಕೌಟುಂಬಿಕ ಮತ್ತು ವೈಯಕ್ತಿಕ ಮೌಲ್ಯಗಳನ್ನು ರೂಢಿಯಿಂದ ಬೆಳೆಸಿಕೊಂಡು ಬಂದಿರುವ ಧರ್ಮ ನಮ್ಮದು. ಅವುಗಳ ಅನುಷ್ಠಾನ ಮನಸ್ಸುಗಳನ್ನು ಒಂದಾಗಿಸುವ ಮನೆಗಳಿಂದಲೇ ಆಗಬೇಕು ಎಂದು ಜ್ಞಾನಭಾರತಿ ಪ್ರಕಾಶನ ಲಿಮಿಟೆಡ್ ನ ಅಧ್ಯಕ್ಷ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು.

ವಿಕ್ರಮ ವಾರಪತ್ರಿಕೆಯ ವತಿಯಿಂದ ಬಸವನಗುಡಿಯ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಲಾದ ‘ವಿಶ್ವಶಾಂತಿಗಾಗಿ ಹಿಂದುತ್ವ’ ಎಂಬ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಭಾನುವಾರ ಮಾತನಾಡಿದರು.

ನಮಗೆ ಮುಪ್ಪಿಲ್ಲ ಎನ್ನುವಂತೆ ಧರ್ಮ ಮಾರ್ಗದಲ್ಲಿ ವಿದ್ಯೆ ಮತ್ತು ಹಣವನ್ನು ಗಳಿಸಬೇಕು. ವೈಯಕ್ತಿಕ ಕೆಲಸ ಸಮಾಜ ಕಟ್ಟುವ ಕೆಲಸಕ್ಕೂ ಪೂರಕವಾಗಿರಬೇಕು. ನಾವು ಮಾಡಬೇಕಾದ ಕಾರ್ಯಗಳನ್ನು ಮಾಡುತ್ತಾ ಹೋದಂತೆ, ಆಗಬೇಕಾದ ಸತ್ಕಾರ್ಯಗಳು ತನ್ನಿಂದ ತಾನೆ ಆಗುತ್ತದೆ‌. ಅಂದುಕೊಂಡ ಕಾರ್ಯದ ಅನುಷ್ಠಾನದ ಸಂದರ್ಭ ಅಭಿಪ್ರಾಯ ಬೇಧಗಳಿರುವುದು ತಪ್ಪಲ್ಲ. ಆದರೆ ಮನಃಬೇಧವಿದ್ದರೆ ಅದು ಶಾಂತಿಯನ್ನು ಕದಡಿಸುತ್ತದೆ. ಅಂತಹ ಸಂದರ್ಭಗಳಲ್ಲಿ ಸಮಾಜಕ್ಕೆ ದೃಷ್ಟಿಯನ್ನು ನೀಡುವ ಸಲುವಾಗಿ ವಿಕ್ರಮದಂತಹ ಪ್ರಯತ್ನಗಳು ಮುನ್ನೆಲೆಗೆ ಬರಬೇಕು ಎಂದು ಅಭಿಪ್ರಾಯಪಟ್ಟರು.

ಒಂದು ಕೆನ್ನೆಗೆ ಹೊಡೆದರೆ, ಇನ್ನೊಂದು ಕೆನ್ನೆಯನ್ನು ತೋರಿಸಬೇಕೆನ್ನುವ ಶಾಂತಿಯ ಕಲ್ಪನೆ ನಮ್ಮದಲ್ಲ. ಇನ್ನೊಂದು ಕೆನ್ನೆಯನ್ನು ತೋರಿಸುವ ವಿಧಾನದಲ್ಲೇ ಎದುರಿಗಿರುವವನನ್ನು ಅಧೈರ್ಯಗೊಳಿಸುವ ಮತ್ತು ಶಕ್ತಿಯಿದ್ದರೂ ಶಾಂತಿಯನ್ನು ಪಾಲಿಸುವ ಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕೆನ್ನುವ ಅಹಿಂಸೆಯ ಕಲ್ಪನೆ ನಮ್ಮದು. ವಿಶ್ವವೇ ಎದುರು ನಿಂತರೂ ಯುದ್ಧ ಮಾಡದೆಯೇ ಗೆಲ್ಲುವ ಸಾಮರ್ಥ್ಯವನ್ನು ಗಳಿಸಬೇಕು‌ ಅದಕ್ಕೆ ಪ್ರೇರಣೆಯೊದಗಿಸುವ ಶ್ರೇಷ್ಠ ಜೀವನಮೌಲ್ಯಗಳ ಕಣಜ ಹಿಂದುತ್ವವಾಗಿದೆ ಎಂದು ನುಡಿದರು.

ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿ, ಚಿಂತಕ ಹಾಗೂ ಲೇಖಕ ಜಿ.ಬಿ.ಹರೀಶ್ ಮಾತನಾಡಿ ಸತ್ಯ ಎನ್ನುವುದು ಬಹಳ ಸರಳವೇ ಆಗಿರುತ್ತದೆ, ಆದರೆ ನಾವು ಅದನ್ನು ಸಂಕೀರ್ಣಗೊಳಿಸಿದ್ದೇವೆ. ಸಂಕೀರ್ಣತೆಯೊಳಗೆ ಅಡಗಿರುವ ಸತ್ಯವೆಂಬ ಬೆಳಕಿನ ಅನ್ವೇಷಣೆಯೇ ಹಿಂದುತ್ವವಾಗಿದೆ .ಅದರ ರೂಪಗಳು ಹಲವು ಕ್ಷೇತ್ರಗಳಲ್ಲಿ ವ್ಯಾಪಿಸಿರಬಹುದು. ಆದರೆ ಗುರಿ ಮನುಷ್ಯಕೋಟಿಯನ್ನು ದೇವತಾಕೋಟಿಯನ್ನಾಗಿಸುವುದೇ ಆಗಿದೆ ಎಂದರು.

ಉತ್ಸವ ಮೂರ್ತಿಗೆ ಮೂಲ ವಿಗ್ರಹ ಶಕ್ತಿಯ ಕೇಂದ್ರವಾಗಿರುವಂತೆ, ಹಿಂದುತ್ವದ ಸತ್ವ ಅಡಗಿರುವ ಎಲ್ಲಾ ಕ್ಷೇತ್ರಗಳಿಗೂ ಶಕ್ತಿಯ ಕೇಂದ್ರ ನಮ್ಮ ಸನಾತನ ಸಂಸ್ಕೃತಿ. ಈ ಸಂಸ್ಕೃತಿ ಪ್ರಶ್ನಾತೀತವಾಗಿರದೆ ಸಂವಾದದ ಮೂಲಕವೇ ಬೆಳೆದುಬಂದಿದೆ. ಆದರೆ ಪ್ರಶ್ನೆಗೆ ಅವಕಾಶ ಇರುವ ದೇಶದಲ್ಲಿ, ಪ್ರಶ್ನೆಗಳನ್ನು ಮುಚ್ಚಿಹಾಕುವ ಪ್ರಯತ್ನಗಳಾದರೆ ವಿಶ್ವಶಾಂತಿಯನ್ನು ಗಳಿಸಲು ಸಾಧ್ಯವಿಲ್ಲ. ಪ್ರಶ್ನಿಸುವ ಮೂಲಕ ಅನಾವರಣಗೊಳ್ಳುವ ಸತ್ಯದ ಪ್ರಖರತೆಗೆ ನಮ್ಮದಲ್ಲದ, ಮೂಲಕ್ಕೆ ಅಪಾಯಕಾರಿಗಳಾದ ವ್ಯವಸ್ಥೆಗಳೆಲ್ಲವೂ ಅಸ್ತಿತ್ವ ಕಳೆದುಕೊಳ್ಳಲೇಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳ ಉಪನ್ಯಾಸದ ನಂತರ ಸಂವಾದ ಕಾರ್ಯಕ್ರಮವನ್ನು ವಿಕ್ರಮ ವಾರಪತ್ರಿಕೆ ಮತ್ತು ಸಂವಾದ ಯೂಟ್ಯೂಬ್ ವಾಹಿನಿಯ ಸಂಪಾದಕ ವೃಷಾಂಕ್ ಭಟ್ ನಡೆಸಿಕೊಟ್ಟರು. ನಂತರ ‘ವಿಶ್ವಶಾಂತಿಗಾಗಿ ಹಿಂದುತ್ವ’ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಡಾ.ಅನಘಾ ಪ್ರಾರ್ಥಿಸಿದರು. ವಿಕ್ರಮ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಸು‌.ನಾಗರಾಜ ಪ್ರಸ್ತಾವನೆಗೈದು ಸ್ವಾಗತಿಸಿದರು. ವಿಕ್ರಮ ಜಾಹೀರಾತು ಮತ್ತು ಪ್ರಸರಣದ ಪ್ರತಿನಿಧಿ ಚ.ನಾ. ಅನಂತರಾಜು ವಂದಿಸಿದರು. ವಿಕ್ರಮ ವಾರಪತ್ರಿಕೆಯ ಉಪಸಂಪಾದಕಿ ದಿವ್ಯಾ ಹೆಗಡೆ ಕಬ್ಬಿನಗದ್ದೆ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.