BPY- Gangolly Nov-5-2012

ಕುಂದಾಪುರ  November 06: ಅಖಂಡ ಭಾರತ ನಿರ್ಮಾಣಕ್ಕಾಗಿ ಹಾಗೂ ಗ್ರಾಮ ವಿಕಾಸಕ್ಕಾಗಿ ಮತ್ತು ಗ್ರಾಮಗಳಲ್ಲಿ ರಾಷ್ಟ್ರೀಯ ಜಾಗೃತಿ ಮೂಡಿಸುವ ಸಲುವಾಗಿ ಆರೆಸ್ಸೆಸ್ಸ್‌ನ ಅಖಿಲ ಭಾರತೀಯ ಸೇವಾ ಪ್ರಮುಖ ಸೀತಾರಾಮ ಕೆದಿಲಾಯ ಆರಂಭಿಸಿರುವ ಭಾರತ ಪರಿಕ್ರಮ ಯಾತ್ರೆ ಮಂಗಳವಾರ ಬೆಳಿಗ್ಗೆ ಮೀನುಗಾರಿಕಾ ಬಂದರು ಪ್ರದೇಶವಾದ ಗಂಗೊಳ್ಳಿ ಗ್ರಾಮ ತಲುಪಿದೆ.

BPY- Gangolly Nov-5-2012

ಮುಂಜಾನೆ ಹೆಮ್ಮಾಡಿಯ ಅಣ್ಣಪ್ಪ ನಾಯ್ಕ್‌ರವರ ಮನೆಯಲ್ಲಿ ಗೋಪೂಜೆ ಮುಗಿಸಿ ಗಂಗೊಳ್ಳಿಯತ್ತ ಸಾಗಿದ ಯಾತ್ರೆಗೆ ರಾ.ಹೆ.66ರಲ್ಲಿ ಮುಳ್ಳಿಕಟ್ಟೆ ಬಳಿ ಸ್ಥಳೀಯರು ಹೂಹಾರ ಹಾಲಿ ಸ್ವಾಗತ ಕೋರಿದರು. ಬಳಿಕ ನಾಯಕವಾಡಿ-ಗುಜ್ಜಾಡಿ ಮಾರ್ಗವಾಗಿ ಸಾಗಿದ ಯಾತ್ರೆಗೆ ನಾಯಕವಾಡಿಯಲ್ಲೂ ಭವ್ಯ ಸ್ವಾಗರ ದೊರಕಿತು. ಬೆಳಿಗ್ಗೆ ಸುಮಾರು ೮ ಗಂಟೆಗೆ ಮೇಲ್‌ಗಂಗೊಳ್ಳಿಯ ಶ್ರೀ ರಾಮ ಮಂದಿರ ಬಳಿ ಕೆದಿಲಾಯರು ಆಗಮಿಸುತ್ತಿದ್ದಂತೆಯೇ ಗಂಗೊಳ್ಳಿ ಗ್ರಾಮಸ್ಥರು ಹಾಗೂ ಮಾತೆಯರು ಮಂಗಳವಾದ್ಯದೊಂದಿಗೆ, ಪೂರ್ಣಕುಂಭದೊಂದಿಗೆ ಅಭೂತಪೂರ್ವ ಸ್ವಾಗತ ನೀಡಿ ಅದ್ದೂರಿಯಾಗಿ ಬರಮಾಡಿಕೊಂಡರು. ಬಳಿಕ ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವಳದ ವಠಾರದಲ್ಲಿ ವೃಕ್ಷಾರೋಹಣ ಮಾಡಿದರು. ಬಳಿಕ ವಾಸ್ತವ್ಯದ ಮನೆಯಾದ ವೆಂಕಿಮನೆ ಮಾಚ ಪೂಜಾರಿಯವರ ಮನೆಗೆ ಆಗಮಿಸಿ ವಿಶ್ರಾಂತಿ ಪಡೆದರು.

ಶಿಶು ಮಂದಿರ, ಎಸ್.ವಿ.ಶಾಲೆಗೆ ಭೇಟಿ : ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರಕ್ಕೆ ಭೇಟಿ ನೀಡಿದ ಕೆದಿಲಾಯರನ್ನು ಶಿಶು ಮಂದಿರದ ಸಂಚಾಲಕ ಡಾ.ಕಾಶೀನಾಥ ಪೈ ಬರ ಮಾಡಿಕೊಂಡರು. ಬಳಿಕ ಸ್ಥಳೀಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿಗೆ ಆಗಮಿಸಿದ ಇವರನ್ನು ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್ ಹಾರ್ದಿಕವಾಗಿ ಸ್ವಾಗತಿಸಿದರು. ಯಾತ್ರೆಯ ಉದ್ದೇಶಗಳನ್ನು ಮಕ್ಕಳೊಂದಿಗೆ ಹಂಚಿಕೊಂಡ ಅವರು, ಭಾರತೀಯ ಸಂಸ್ಕೃತಿ, ಸಂಸ್ಕಾರಗಳ ಕುರಿತು, ಕೃಷಿ ಸಂರಕ್ಷಣೆ, ಗೋ ಸಂರಕ್ಷಣೆ ಹಾಗೂ ಅಖಂಡ ಭಾರತ ನಿರ್ಮಾಣದ ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮೂಡಿಸುವ ಪ್ರಯತ್ನ ನಡೆಸಿದರು.

ಮಧ್ಯಾಹ್ನ ಭಿಕ್ಷಾನ್ನ ಭೋಜನವನ್ನು ದೊಡ್ಡಹಿತ್ಲು ದೇವತಾ ಸುರೇಂದ್ರ ಖಾರ್ವಿಯವರ ಮನೆಯಲ್ಲಿ ಸ್ವೀಕರಿಸಿದರು. ವೆಂಕಿಮನೆ ಮಾಚ ಪೂಜಾರಿಯವರ ಮನೆಯಲ್ಲಿ ರಾತ್ರಿ ವಾಸ್ತವ್ಯ ಮಾಡಿದರು.

ಚರ್ಚ್‌ನ ಧರ್ಮಗುರುಗಳ ಭೇಟಿ : ಭಾರತ ಪರಿಕ್ರಮ ಯಾತ್ರೆ ಕೈಗೊಂಡಿರುವ ಸೀತಾರಾಮ ಕೆದಿಲಾಯರನ್ನು ಮಧ್ಯಾಹ್ನ ಗಂಗೊಳ್ಳಿ ಚರ್ಚ್‌ನ ಧರ್ಮಗುರು ರೆ.ಫಾ.ಅಲ್ಫೋನ್ಸ್ ಡಿ’ಲೀಮಾ ಭೇಟಿ ಮಾಡಿ ಕುಶಲೋಪರಿ ನಡೆಸಿದರು.

ಸುಮಾರು ೧೫ ನಿಮಿಷಗಳ ಕಾಲ ವಿಚಾರ ವಿನಿಮಯ ನಡೆದ ವಿಚಾರ ವಿನಿಮಯದಲ್ಲಿ ಇವರಿಬ್ಬರು ಸಮಾಜದ ಅನೇಕ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಭಾರತ ಪರಿಕ್ರಮ ಯಾತ್ರೆಯ ಉದ್ದೇಶ ಹಾಗೂ ಯಾತ್ರೆಯ ಉದ್ದಕ್ಕೂ ಸಿಕ್ಕದ ಸ್ವಾಗತ ಹಾಗೂ ಬೆಂಬಲವನ್ನು ಧರ್ಮಗುರುಗಳೊಂದಿಗೆ ಕೆದಿಲಾಯರು ಹಂಚಿಕೊಂಡರು. ಕೆದಿಲಾಯರ ಯಾತ್ರೆ ಯಶಸ್ವಿಯಾಗಲಿ, ಯಾತ್ರೆಯ ಉದ್ದೇಶಗಳು ಈಡೇರಲಿ ಎಂದು ಧರ್ಮಗುರು ಅಲ್ಫೋನ್ಸ್ ಡಿ’ಲೀಮಾ ಹಾರೈಸಿದರು.

ಬಳಿಕ ಗ್ರಾಮ ಸಂಪರ್ಕದ ಸಮಯದಲ್ಲಿ ಸ್ಥಳೀಯ ಎನ್.ಶಬ್ಬೀರ್ ಸಾಹೇಬ್ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರೊಂದಿಗೆ ಕುಶಲೋಪರಿ ನಡೆಸಿದರು. ಜಗಳ ಆಡುವುದು ನಮ್ಮ ದೇಶದ ಮಣ್ಣಿನ ಗುಣವಲ್ಲ. ಬದಲಾಗಿ ಎಲ್ಲರನ್ನೂ ಪ್ರೀತಿಸುವ ಎಲ್ಲರನ್ನೂ ಒಂದೇ ಎಂದು ಭಾವಿಸುವ ದೊಡ್ಡ ಗುಣ ನಮ್ಮದು. ಹಿಂದೆ ಗಲಾಟೆ ಎಂಬುದೇ ಇರಲಿಲ್ಲ. ಈಗ ರಾಜಕೀಯ ಕಾರಣಕ್ಕಾಗಿ, ಓಟಿಗಾಗಿ ನಮ್ಮನ್ನು ಒಡೆಯುವ ಕೆಲಸ ಆಗುತ್ತಿದೆ. ಎಲ್ಲಾ ಜಾತಿ, ಮತ, ಧರ್ಮಗಳನ್ನು ಗೌರವಿಸುವ ಗುಣಗಳನ್ನು ಮತ್ತೊಮ್ಮೆ ನಮ್ಮಲ್ಲಿ ಬೆಳೆಯುವಂತಾಗಬೇಕು ಎಂದು ಕೆದಿಲಾಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಬಳಿಕ ಯು.ಶ್ರೀಕಾಂತ ಶೆಣೈ, ಮಾಧವ ಗಾಣಿಗ, ಆಲಿಸ್ ಫೆರ್ನಾಂಡಿಸ್ ಮತ್ತಿತರರ ಮನೆಗಳಿಗೆ ಸೀತಾರಾಮ ಕೆದಿಲಾಯರು ಭೇಟಿ ನೀಡಿ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡರು. ಸಂಜೆ ನಗರ ಸಂಕೀರ್ತನೆ ಹಾಗೂ ಶ್ರೀ ಶಾರದಾ ಮಂಟಪದಲ್ಲಿ ಸತ್ಸಂಗ ಕಾರ್ಯಕ್ರಮ ಜರಗಿತು.

ಯಾತ್ರೆಯಲ್ಲಿ ಉಮಾನಾಥ ದೇವಾಡಿಗ, ವಾಸುದೇವ ದೇವಾಡಿಗ, ರಾಘವೇಂದ್ರ ದೇವಾಡಿಗ, ರಘುನಾಥ ಖಾರ್ವಿ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಣಯಕುಮಾರ್ ಶೆಟ್ಟಿ, ವೇದಮೂರ್ತಿ ರಾಘವೇಂದ್ರ ಎನ್.ಆಚಾರ್ಯ, ಶಿವಾನಂದ ಕೆ.ಎಚ್., ರಾಮನಾಥ ಪಿ.ನಾಯಕ್, ಎಂ.ನಾಗೇಂದ್ರ ಪೈ, ಎಂ.ಜಿ.ರಾಘವೇಂದ್ರ ಭಂಡಾರ್‌ಕಾರ್, ಎನ್.ಅಶ್ವಿನ್ ನಾಯಕ್, ರವೀಂದ್ರ ಪಠೇಲ್, ಗಣೇಶ್ ಶೆಣೈ, ಸತೀಶ್ ಜಿ., ರತ್ನಾಕರ ಗಾಣಿಗ, ವಿಶ್ವನಾಥ, ಮಣಿ, ಅಶೋಕ ಪೂಜಾರಿ, ಡಾ.ಕಾಶೀನಾಥ ಪೈ, ಲಕ್ಷ್ಮಣ ಸುವರ್ಣ, ರಾಜು ಪೂಜಾರಿ, ಶಂಕರ ಕೊತ್ವಾಲ್, ಶ್ರೀನಿವಾಸ ಎಂ., ಶ್ರೀಪತಿ ಗಾಣಿಗ ಮೊದಲಾದವರು ಪಾಲ್ಗೊಂಡಿದ್ದರು.

———–

 

Leave a Reply

Your email address will not be published.

This site uses Akismet to reduce spam. Learn how your comment data is processed.