ಬೆಂಗಳೂರು: ಭಾರತೀಯ ಜ್ಞಾನ ಪರಂಪರೆಗಳಿಗೆ ಕೃತಕ ಬುದ್ಧಿಮತ್ತೆಯಿಂದ ಎದುರಾಗುತ್ತಿರುವ ಸವಾಲುಗಳಿಗೆ ಉತ್ತರ ನೀಡುವ ಶಕ್ತಿ ಇದೆ. ಎದುರಾಗುವ ಸವಾಲುಗಳಿಗೆ ಭಾರತೀಯ ಪರಿಹಾರಗಳನ್ನು ಜಗತ್ತಿಗೆ ಅರ್ಥವಾಗುವ ಭಾಷೆಯಲ್ಲಿ ನೀಡಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಸಿ ಆರ್ ಹೇಳಿದರು.

ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ದಕ್ಷಿಣ ಪ್ರಾಂತ ಇದರ ವತಿಯಿಂದ ಭಾರತೀಯ ವಿದ್ಯಾಭವನದಲ್ಲಿ ನಡೆದ ‘ಗುರುವಂದನ’ ಕಾರ್ಯಕ್ರಮ ಅವರು ಮಾತನಾಡಿದರು.

ಕಳೆದ ಶತಮಾನದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾಗಿದೆ. ಆದರೆ ಗುರುವಿನ ಸ್ಥಾನಮಾನ ಉಳಿದುಕೊಂಡು ಬಂದಿತ್ತು. ಆದರೆ ಇಂದಿಗೆ ಅದೂ ಕೂಡ ಬದಲಾಗುತ್ತಿದೆ. ಹಣ ತಂತ್ರಜ್ಞಾನ ಮುಂತಾದ ವಾತಾವರಣದಲ್ಲಿ ಗುರುವಿನ ಸ್ಥಾನ ಅನೇಕ ಕಾರಣಗಳಿಗಾಗಿ ಕಡಿಮೆಯಾಗುತ್ತಿದೆ ಎಂದರು.

ಜಗತ್ತಿನ ಶಿಕ್ಷಣ ವ್ಯವಸ್ಥೆಯಲ್ಲಿ ಸಂವಹನದ ಬದಲಾವಣೆಯನ್ನು ಗಮನಿಸಬೇಕಿದೆ. ಅಗಾಧ ಜ್ಞಾನಪರಂಪರೆಗಳನ್ನು ವರ್ತಮಾನಕ್ಕೆ ಹೇಗೆ ತಲುಪಿಸಬೇಕು ಎನ್ನುವಂತಹ ಕುರಿತು ಯೋಚಿಸಬೇಕಿದೆ. ಹಾಗೆ ಯೋಚಿಸಿ ಕಾರ್ಯಪ್ರವೃತ್ತರಾಗಿರುವ ಹಲವು ಗುರುಗಳು ನಮ್ಮ ನಡುವೆ ಇದ್ದಾರೆ‌. ಹಾಗಾಗಿ ಅವರಿಗೆ ಮಾಡುವ ಗುರುವಂದನೆ ಕೇವಲ ಅವರಿಗಷ್ಟೇ ಅಲ್ಲದೇ ಗುರುವೆಂಬ ವಿಶಿಷ್ಟ ಕಲ್ಪನೆಯನ್ನು ಗೌರವಿಸುವುದಕ್ಕಾಗಿಯೂ ಹೌದು ಎಂದು ಅಭಿಪ್ರಾಯಪಟ್ಟರು.

ಇಂದಿನ ಶಿಕ್ಷಣ ಶ್ರದ್ಧೆ ಮತ್ರು ಜೀವನಶಿಕ್ಷಣವನ್ನು ಕಲಿಸಬೇಕು. ಏಕೆಂದರೆ ಮಾಹಿತಿ ಮಾತ್ರ ವ್ಯಕ್ತಿಯನ್ನು ರೂಪಿಸುವುದಿಲ್ಲ. ಗುರುವಿನ ಪ್ರಮುಖ ಪ್ರಕ್ರಿಯೆಯೇ ಅರಿವನ್ನು ಮೂಡಿಸುವುದು. ಅರಿವನ್ನು ಉಂಟು ಮಾಡುವುದಕ್ಕೆ‌ ಸಾನಿಧ್ಯದಿಂದ ಮಾತ್ರ ಸಾಧ್ಯ‌. ಅಂತಹ ಅರಿವನ್ನು ಮೂಡಿಸುವ ಕಾರ್ಯ ಗುರುವೃಂದದಿಂದಾಗಬೇಕಿದೆ. ಆ ಮೂಲಕ ಭಾರತದ ವಿಶೇಷತೆ ಜಗತ್ತಿಗೆ ಮಾದರಿಯಾಗುವಂತೆ ಮಾಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಎಸ್ ವ್ಯಾಸ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ರಾಮಚಂದ್ರ ಭಟ್ ಕೋಟೆಮನೆ ಮಾತನಾಡಿ ಮಾನವನ ವಿಚಾರಶಕ್ತಿಯನ್ನೂ, ನೆನಪಿನ ಶಕ್ತಿ ಮೀರಿಸುವಂತೆ ಇತ್ತೀಚೆಗೆ ಕೃತ್ರಿಮ ಬುದ್ದಿಮತ್ತೆ‌ ಬೆಳೆದು ನಿಂತಿದೆ‌. ಆದರೆ ಶ್ರದ್ಧೆಯನ್ನು, ಆತ್ಮಚಕ್ಷು ಕಸಿಯುವುದಕ್ಕೆ ಅವುಗಳಿಗೆ ಸಾಧ್ಯವಿಲ್ಲ. ಯಂತ್ರಗಳಿಂದ ನಕಲು ಮಾಡುವುದಕ್ಕಾಗದೇ ಇರುವ ಜ್ಞಾನ ಪರಂಪರೆಗಳನ್ನು ಕಾಪಾಡಿಕೊಳ್ಳುವುದೇ ಭಾರತೀಯತೆ ಎಂದು ನುಡಿದರು.

ಮುಂದಿನ ಸವಾಲುಗಳಿಗೆ ಇವತ್ತಿನ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಸಲಾಗುತ್ತಿರುವ ಶಿಕ್ಷಣ ಸಾಲದು. ಮತ್ತು ಮುಂದಿನ ಸವಾಲುಗಳನ್ನು ಎದುರಿಸಲು ಇಂದಿನ ಶಿಕ್ಷಣದ ಫಲವಾದ ವಿದ್ಯಾರ್ಥಿಗಳಿಂದ ಆಗದು. ಮುಂದಿನ ಜನಾಂಗ ಋಷಿ ಮಾನವನಾಗಬೇಕು. ಯೋಗ, ಯಾಗಾಭ್ಯಾಸ, ಧ್ಯಾನ, ಭಗವದ್ಗೀತೆ ಮುಂತಾದ ಭಾರತೀಯ ಜ್ಞಾನ ಪರಂಪರೆಗಳ ಅರಿವು ಅವರನ್ನು ಮುಂದಿನ ಸವಾಲುಗಳಿಗೆ ಸನ್ನದ್ಧಗೊಳಿಸುತ್ತದೆ ಎಂದರು‌.

ಕಾರ್ಯಕ್ರಮದಲ್ಲಿ ಮಾತನಾಡಿದ ಎಐಸಿಟಿಇಯ ಮಾಜಿ ಅಧ್ಯಕ್ಷ ಪ್ರೊ. ಟಿ.ಜಿ.ಸೀತಾರಾಮ ಮಾತನಾಡಿ ಈಗಿನ ಪೀಳಿಗೆ ಆತ್ಮವಿಶ್ವಾಸಭರಿತವಾಗಿದೆ. ಮುಂದಿನ ಪೀಳಿಗೆಗೆ ಜ್ಞಾನ, ಪ್ರಶ್ನಿಸುವ ಆತ್ಮವಿಶ್ವಾಸ, ಹೊಸತನ್ನು ಸೃಷ್ಟಿಸುವ ಧೈರ್ಯವನ್ನು ಗುರುವಾದವನು ನೀಡಬೇಕು. ಏಕೆಂದರೆ ಗುರು ಮತ್ತು ತಂತ್ರಜ್ಞಾನದ ಸಮನ್ವಯದ ಪ್ರತಿಫಲವಾದ ಜ್ಞಾನ ಭವಿಷ್ಯವನ್ನು ರೂಪಿಸುತ್ತದೆ. ತಂತ್ರಜ್ಞಾನವನ್ನು ನೈತಿಕತೆಯೊಂದಿಗೆ ಬಳಸಿಕೊಂಡರೆ ಮನುಕುಲಕ್ಕೆ ಒಳಿತು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಭಾರತೀಯ ಶಿಕ್ಷಣ ಮಂಡಲದ ಕರ್ನಾಟಕ ದಕ್ಷಿಣ ಪ್ರಾಂತದ ಅಧ್ಯಕ್ಷ ಪ್ರೊ. ಪ್ರವೀಣ್ ಸಿ ರಾಮಮೂರ್ತಿ ಮಾತನಾಡಿ ಒಳ್ಳೆಯ ಸಂಗತಿ ಪುನರಾವರ್ತನೆಯಾಗುತ್ತಿರಬೇಕು. ಅವುಗಳನ್ನು ಸಂಭ್ರಮಿಸಬೇಕು ಎನ್ನುವ ಕಾರಣಕ್ಕೆ ಗುರುವಂದನ ಕಾರ್ಯಕ್ರಮವನ್ನು ಆಯೋಜಿಲಾಗಿದೆ. ಪ್ರತಿಯೊಬ್ಬರಿಂದಲೂ ನಾವು ಕಲಿಯುತ್ತೇವೆ. ಆದ್ದರಿಂದ ಪ್ರತಿಯೊಬ್ಬರನ್ನೂ ಗೌರವಿಸಬೇಕು. ಇಂದು ಕಲಿಯುವ ವೇದಿಕೆಯಾಗಿರುವ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳೋಣ, ಅವುಗಳಲ್ಲಿರುವ ಸರಿಪಡಿಸಿ ತಂತ್ರಜ್ಞಾನವಾಗಿ ಉಪಯೋಗಿಸೋಣ. ಅವುಗಳಿಗೆ ಅಂಜುವ ಅವಶ್ಯಕತೆ ಇಲ್ಲ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಹತ್ತು ಮಂದಿ ಗುರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞರು, ಚಿಂತಕರು, ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು‌.

Leave a Reply

Your email address will not be published.

This site uses Akismet to reduce spam. Learn how your comment data is processed.