“ಜೀವನವನ್ನೇ ಸಂಘಮಯ ಮಾಡಿಕೊಂಡಿದ್ದರು ಚಂದ್ರಶೇಖರ ಭಂಡಾರಿಗಳು” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕರಾದ ವಿ.ನಾಗರಾಜ ಅವರು ಹಿರಿಯ ಪ್ರಚಾರಕರಾದ ಸ್ವರ್ಗೀಯ ಶ್ರೀ ಚಂದ್ರಶೇಖರ ಭಂಡಾರಿಯವರಿಗೆ ಬೆಂಗಳೂರಿನ ಬಸವನಗುಡಿಯ ಬಿ.ಎಂ.ಎಸ್.ಕಾಲೇಜಿನಲ್ಲಿ ನಡೆದ ಸಭೆಯಲ್ಲಿ ನುಡಿನಮನವನ್ನು ಸಲ್ಲಿಸಿದರು.
ಅವರು ಮುಂದುವರೆದು ಮಾತನಾಡುತ್ತಾ, “ಸಂಘದ ಪ್ರಚಾರಕನೊಬ್ಬ ಸರಳವಾಗಿರಬೇಕು, ಸ್ವಾವಲಂಬಿಯಾಗಬೇಕು ಎನ್ನುವುದು ಚಂದ್ರೂ ಅವರ ಆಂಬೋಣವಾಗಿತ್ತು. ಅವರೊಮ್ಮೆ ಕೇಶವಕೃಪಾದಲ್ಲಿ ಎಂಬತ್ತರ ವಯಸ್ಸಿನಲ್ಲಿ ಬಟ್ಟೆ ಒಗೆದುಕೊಳ್ಳುತ್ತಿದ್ದರು. “ಈಗ ನೀವ್ಯಾಕೆ ಒಗೆಯಬೇಕು ಯಾರಾದ್ರು ಒಗೆದುಕೊಡ್ತಾರೆ ಬಿಡಿ” ಎಂದೆ, ತಮ್ಮ ಎಂದಿನ ಶೈಲಿಯಲ್ಲಿ ಅವರು “ನಾನೊಬ್ಬ ಪ್ರಚಾರಕ್” ಎಂದು ಮುಗುಳ್ನಕ್ಕಿದ್ದರು.ಹೀಗೆ ಸರಳವಾಗಿದ್ದರು, ನಾನು ಎನ್ನುವ ಭಾವನೆಯ ಲವಲೇಶವೂ ಇಲ್ಲದೆ ಬದುಕಿದ್ದವರು ಚಂದ್ರಶೇಖರ ಭಂಡಾರಿಗಳು. ಕವಿಗಳಾಗಿ, ಲೇಖಕರಾಗಿದ್ದವರು, ಶಾರೀರಿಕ ಶಿಕ್ಷಣ ಪಡೆದಿದ್ದರು, ಅದೆಲ್ಲ ತನ್ನ ಉದ್ಧಾರಕ್ಕಾಗಿಯೋ, ತಾವೇನೋ ಆಗಬೇಕಾಗಿಯೋ ಅಲ್ಲ, ಬದಲಾಗಿ ಸಂಘದ ಪ್ರಚಾರಕತನವನ್ನು ನಿಭಾಯಿಸುವುದಕ್ಕಾಗಿ ಮಾತ್ರವೇ,ಈ ಎಲ್ಲ ಗುಣಗಳನ್ನು ಸಂಘಕಾರ್ಯಕ್ಕಾಗಿ ಅಚ್ಚುಕಟ್ಟಾಗಿ ರೂಢಿಸಿಕೊಂಡರು. ಸಂಘದ ಅಗತ್ಯಕ್ಕೆ ತಕ್ಕಂತೆ ಪ್ರವಾಸದಲ್ಲಿರಬೇಕಾಗಿದ್ದ ಪ್ರಚಾರಕರಾದರೂ ಸ್ಥಾಯಿಯಾಗಿ ಉಳಿದು ಅಕ್ಷರ ಕಾಯಕಕ್ಕೆ ತೊಡಗಿಸಿಕೊಂಡರು. ಈ ಅಕ್ಷರ ಕಾಯಕವು ಕೂಡ ಸ್ವಲ್ಪವೂ ಶುಷ್ಕವಾಗಿರಲಿಲ್ಲ, ಬಹು ಆಕರ್ಷಕವಾಗಿ ಬರವಣಿಗೆ ರೂಢಿಸಿಕೊಂಡರು. ಮನಸ್ಸು, ಬುದ್ಧಿ, ಸ್ವಭಾವವನ್ನು ಸಂಘಕ್ಕೆ ಸಮರ್ಪಿಸಿಕೊಂಡವರು. ಎಲ್ಲದರಲ್ಲೂ ನಿಖರತೆ, ಕರಾರುವಾಕ್ಕಾಗಿ ಬರೆದವರು. ಮೀಸಲಾತಿ ನಮಗೆ ಬೇಡ ಎನ್ನುವ ಮಟ್ಟಿಗೆ ಸಮಾಜದ ಕೆಳವರ್ಗವನ್ನು ಮೇಲೆತ್ತಬೇಕು ಎನ್ನುವುದು ಅವರ ನಿಲುವಾಗಿತ್ತು, ಇದನ್ನು ಆ ಸಮಾಜದ ಅನೇಕ ಮುಖಂಡರು ಕೂಡ ಬಹಳ ಮುಕ್ತವಾಗಿ ಸ್ವಾಗತಿಸಿದರು” ಎಂದರು.
ಹಿರಿಯ ಪತ್ರಕರ್ತರಾದ ದು.ಗು.ಲಕ್ಷ್ಮಣ ಅವರು ಮಾತನಾಡಿ, “ಕರ್ನಾಟಕದಲ್ಲಿ ಸಂಘದ ಕಾರ್ಯವನ್ನು ದಾಖಲೀಕರಣ ಮಾಡಿದ್ದರಲ್ಲಿ ಭಂಡಾರಿಗಳದ್ದು ಬಹು ಮುಖ್ಯಪಾತ್ರ. ಗಣಿತ ಶಿಕ್ಷಕರಾದರೂ ಸಾಹಿತ್ಯದಲ್ಲಿ ಅತ್ಯಂತ ಆಸಕ್ತಿ ವಹಿಸಿದರು. ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಅತ್ಯಂತ ಸಮರ್ಥವಾಗಿ ಅನುವಾದ ಮಾಡುವುದನ್ನೂ ಸತತ ಪ್ರಯತ್ನ ಮಾಡಿದರು. ಗಳಗನಾಥರು, ಆ.ನ.ಕೃ, ತರಾಸು ಅವರ ಮೇರು ಸಾಹಿತ್ಯ ಕೃತಿಗಳಿಂದ ಅತ್ಯಂತ ಪ್ರಭಾವಿತರಾಗಿದ್ದರು. ಪ್ರತಿ ಶಬ್ದದ ವ್ಯುತ್ಪತ್ತಿ, ಅದರ ಪ್ರಯೋಗದ ಕುರಿತಾದ ವಿಮರ್ಶೆಯ ದೃಷ್ಟಿಯಿಂದ ಡಿಕ್ಷನರಿಯನ್ನೇ ಓದುತ್ತಿದ್ದವರು ಚಂದ್ರೂಜಿ. ಅವರು ಕಾರ್ಯಾಲಯದಲ್ಲಿ ಅನೇಕ ಪತ್ರಿಕೆಗಳನ್ನು ದಿನಂಪ್ರತಿಯೂ ಓದುತ್ತಿದ್ದರು.ಇದನ್ನು ಅವರು ತಮ್ಮ ಲೇಖನಗಳಲ್ಲಿ ಪ್ರತಿಫಲಿಸುವಂತೆ ನೋಡಿಕೊಳ್ಳುತ್ತಿದ್ದರು. ಅಲ್ಲದೆ ತಮ್ಮ ಲೇಖನಿಯಲ್ಲಿ ನಿರಂತರವಾಗಿ ಬರೆಯುತ್ತಲೇ ಹೋದರು. ಒಂದಿಷ್ಟೂ ಸೋಲದೆ, ಸುಸ್ತಾಗದೆ ತಮ್ಮ ಕೊನೆಯ ದಿನಗಳವರೆಗೂ ಬರೆಯುತ್ತಲೇ ಹೋದರು. ಕರ್ನಾಟಕದಲ್ಲಿ ಸಂಘದ ಮೂಲಕ ಆರಂಭವಾದ ಎಲ್ಲ ವೈಚಾರಿಕ ಮುಖವಾಣಿಗಳ ಹಿಂದಿದ್ದವರೂ ಚಂದ್ರೂ ಅವರೇ. ಸಂಘ ಪರಿವಾರದ ಎಲ್ಲ ಮುಖವಾಣಿಗಳಲ್ಲಿ, ಪತ್ರಿಕೆಗಳಲ್ಲಿ ಅವರ ವಿಶೇಷವಾದ ಲೇಖನ ಇದ್ದೇ ಇರುತ್ತಿತ್ತು.ಆದರ್ಶ ಎಂಬುದಕ್ಕೆ ಮತ್ತೊಂದು ಉದಾಹರಣೆ ಅವರೂ ಚಂದ್ರೂ ಅವರೇ” ಎಂದರು.
ಚಿಂತಕರಾದ ಜಿ.ಬಿ.ಹರೀಶ್ ಅವರು ಮಾತನಾಡಿ, “ಬಸವಣ್ಣನವರನ್ನ ಭಕ್ತಿ ಭಂಡಾರಿಗಳೆಂದರೆ ಚಂದ್ರಶೇಖರ ಭಂಡಾರಿಗಳನ್ನ ದೇಶಭಕ್ತಿಯ ಭಂಡಾರಿಯೆಂದರೂ ತಪ್ಪಿಲ್ಲ. ಸರಳರೂ, ಅಧ್ಯಯನ ಶೀಲರೂ, ಮಿದುಭಾಷಿ, ಸ್ಪಷ್ಟವಿಚಾರಿಗಳಾಗಿದ್ದರು. ವಿಯೆಟ್ನಾಮಿನಲ್ಲಿದ್ದ ಜನರಲ್ ಜ್ಯಾಪ್, ಒಬ್ಬ ಗಣಿತಜ್ಞ, ಆದರೆ ಮುಂದೆ ಎರಡನೆ ಮಹಾಯುದ್ಧದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸಿದ್ದ.ಅದೇ ರೀತಿ ಸಂಘದಲ್ಲಿ ಅನೇಕ ಜನ ವೈಚಾರಿಕ ಯೋಧರು ತಯಾರಾಗಿದ್ದರು. ಅದರಲ್ಲಿ ಚಂದ್ರೂ ಅವರೂ ಒಬ್ಬರು. ಚಿಲಿ ದೇಶದ ಕವಿ ನೆರುಡಾ ಎರಡು ಮೂರು ಲಕ್ಷದಷ್ಟು ದೊಡ್ಡ ಸ್ಟೇಡಿಯಂನಲ್ಲಿ ಅವರ ಪದ್ಯ ಹಾಡುತ್ತಿದ್ದರಂತೆ. ಹಾಗೆಯೇ ಇವರ ಪದ್ಯಗಳನ್ನೂ ಅದೆಷ್ಟೋ ಸಾವಿರಾರು ಲಕ್ಷಾಂತರ ಜನ ಹಾಡಿ, ಅತ್ತು ಮನಸ್ಸು ತುಂಬಿಕೊಂಡಿದ್ದಾರೋ ಬಲ್ಲವರಿಲ್ಲ. ಅವರೆಂದೂ ತಮ್ಮನ್ನು ತಾವು ಸಾಹಿತಿಯೆಂದು ಕರೆದುಕೊಳ್ಳಲಿಲ್ಲ, ಆದರೆ ಸಮಾಜಕ್ಕೆ ಅಗತ್ಯವಾದ ವಿಚಾರವನ್ನು,ಸಾಹಿತ್ಯವನ್ನು, ಸಂವೇದನೆಯನ್ನೂ ತಮ್ಮ ಬರವಣಿಗೆಯ ಮೂಲಕ ನೀಡಿದ್ದಾರೆ. ಭಾರವಿಲ್ಲದೆ ಬದುಕುವುದು ಎನ್ನುವುದನ್ನ ಚಂದ್ರಶೇಖರ ಭಂಡಾರಿಗಳು ಬದುಕಿ ತೋರಿಸಿದವರು. ಸಂಘದ ಕೆಲಸವೆಂದರೆ ಹೃದಯವನ್ನು ಗೆಲ್ಲುವುದು ಎನ್ನುವ ಯಾದವರಾವ್ ಜೋಷಿಯವರ ನುಡಿಯಂತೆ ಬದುಕಿದವರು ಚಂದ್ರಶೇಖರ ಭಂಡಾರಿಗಳು” ಎಂದರು.
ಜ್ಯೇಷ್ಠ ಪ್ರಚಾರಕರಾದ ಸು.ರಾಮಣ್ಣನವರು ಮಾತನಾಡಿ, “ನುಡಿನಮನಕ್ಕೆ ಮಾತ್ರ ಈ ಕಾರ್ಯಕ್ರಮ ಮುಗಿಯಬಾರದು, ನುಡಿನಮನ ಆದರೆ ಸಾಲದು, ಕೃತಿ ನಮನವಾಗಬೇಕು, ಇದು ಸಂಘದ ಪರಂಪರೆ.1968ರಲ್ಲಿ ಇದ್ದಕ್ಕಿದ್ದಂತೆ ದೀನದಯಾಳ್ಜೀಯವರು ನಮ್ಮನ್ನಗಲಿದರು. ಆಗ ಕೇಳುಗನಾಗಿ ಭಾಗವಹಿಸಿದ ಸ್ವಯಂಸೇವಕರೊಬ್ಬರು, ಅವರ ನುಡಿನಮನವನ್ನು ಕೇಳಿ ಒಂದು ಸಂಕಲ್ಪ ಮಾಡಿದ್ದರು. ಅದನ್ನು ನನ್ನ ಬಳಿಯೂ ಹೇಳಿದ್ದರು. ಈ ಸಂದರ್ಭದಲ್ಲಿ ಅವರಿಗೊಂದು ಮಾತು ನೀಡಿ ನಾನು ಕಡೆಯವರೆಗೆ ಸಂಘಕಾರ್ಯಕ್ಕೆ ಸಮರ್ಪಿಸಿಕೊಳ್ಳುತ್ತೀನಿ, ಮತ್ತು ಪ್ರತಿವರ್ಷ ಆ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಆತ ಜಯನಗರದಲ್ಲಿದ್ದ ವಿ.ಎ.ಗೋಪಾಲ್ ಎನ್ನುವ ಸ್ವಯಂಸೇವಕ.ಹೀಗೆ ಕೃತಿನಮನದ ಮೂಲಕ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ಅಂತಹ ಕೃತಿನಮನಕ್ಕೆ ನಾವು ಸಂಕಲ್ಪ ಮಾಡಬೇಕು. ಶ್ರದ್ಧಾಂಜಲಿ ಸಭೆಯಲ್ಲಿ ದುಃಖ, ಶೋಕ,ಗಂಭೀರತೆ ಇರಬೇಕು, ನಿಜಾ! ಆದರೆ ಅವರ ತುಂಬು ವ್ಯಕ್ತಿತ್ವವನ್ನ ನೆನೆಯುತ್ತಾ, ಸಾರ್ಥಕ ಬದುಕನ್ನ ನಡೆಸಿದ, ಧನ್ಯತಾ ಭಾವದ ಮೂರ್ತರೂಪ ಶ್ರೀ ಚಂದ್ರಶೇಖರ ಭಂಡಾರಿಗಳನ್ನು ನೆನೆಯಬೇಕು. ಹಾಗಾಗಿ, ಇದನ್ನು ಕೃತಿರೂಪದ ನಮನವನ್ನು ಸಲ್ಲಿಸುವುದಕ್ಕೆ ಆಲೋಚಿಸುವ ಬಗೆಗೆ ನಿಶ್ಚಯವಾಗಬೇಕು.ಸ್ವಯಂಸೇವಕತ್ವವನ್ನು ಬೆಳಸಬೇಕು, ಅದರ ಮುಖ್ಯ ಗುಣವೇ ಸ್ವಂತಕ್ಕೆ ಏನೂ ಅಪೇಕ್ಷೆಯಿಲ್ಲದ ಭಾವ. ಡಿ.ವಿ.ಜಿಯವರು ಹೇಳಿದಂತೆ ” ಇಳೆಯಿಂದ ಮೊಳಕೆಯೊಗೆವಂದು…” ಕಗ್ಗದಲ್ಲಿ ಹೇಳಿದಂತೆ ಬದುಕಿದವರು ಅವರು. ಪ್ರಚಾರಕರಾಗಿ ಮೌನ ತಪಸ್ವಿಯಾಗಿ ಬಾಳಿದವರು.ಲೋಕಹಿತಂ ಮಮ ಕರಣೀಯಂ ಎನ್ನುವಂತಹ ನಂದಾದೀಪಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಆಗಿಹೋಗಿದ್ದಾರೆ ” ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ತಮ್ಮ ನುಡಿನಮನ ಸಂದೇಶವನ್ನು ತಲುಪಿಸಿದ್ದು, ಶ್ರೀ ಜಯಪ್ರಕಾಶ್ ಅವರು ಅದನ್ನು ವಾಚಿಸಿದರು. “ದಿವಂಗತ ಚಂದ್ರಶೇಖರ ಭಂಡಾರಿಯವರು ಸಂಘದ ಪ್ರಚಾರಕ ಪರಂಪರೆಯ ಶ್ರೇಷ್ಠ ರತ್ನಗಳಲ್ಲಿ ಒಬ್ಬರು. ರಾಷ್ಟ್ರಕಾರ್ಯಕ್ಕಾಗಿ ವ್ಯಕ್ತಿತ್ವ- ಕರ್ತೃತ್ವಗಳನ್ನು ಸ್ವಪ್ರಯತ್ನದಿಂದ ಪೂರ್ಣವಾಗಿ ಅರಳಿಸಿಕೊಂಡು, ಅದನ್ನು ಸಂಘದ ಸಾಣೆಕಲ್ಲಿನ ಮೇಲೆ ಗಂಧದಂತೆ ತೇಯ್ದು ಮಾತೃಭೂಮಿಯ ಅರ್ಚನೆಯಲ್ಲಿ ಸಮರ್ಪಿಸಿದರು. ಈ ಮಹತ್ಕಾರ್ಯದಲ್ಲೇ ಅವರು ಆನಂದಪಟ್ಟರು; ಇತರರಿಗೆ ಬೆಳಕಾದರು, ಆದರ್ಶವೆನಿಸಿದರು. ಸರಳ ಜೀವನ-ಉಚ್ಚವಿಚಾರದ ನಿಗರ್ವಿ, ಸಂಘಕಾರ್ಯದ ಎಲ್ಲ ಕೌಶಲಗಳಲ್ಲೂ ಪರಿಣತಿಯೊಂದಿಗೆ ತಮ್ಮದೇ ಛಾಪನ್ನು ಮೂಡಿಸಿದ್ದ ಶ್ರದ್ಧೇಯ ಚಂದ್ರು ಅವರು ಬಿಟ್ಟುಹೋದ ವಾರಸಿಕೆ ಅನುಪಮವಾದುದು. ಕಡುನಿಷ್ಠೆಯ ಪ್ರಚಾರಕನಾಗಿದ್ದು ಕವಿ, ಲೇಖಕ, ಕ್ರೀಡಾಳು ಮುಂತಾಗಿ ಹಲವು ಮುಖಗಳಲ್ಲಿ ಸಿದ್ಧಹಸ್ತರಾಗಿದ್ದ ಅವರದು ಸದಾ ಕಲಿಕೆ, ಅಪಾರ ಪರಿಶ್ರಮ, ರಾಜಿಯಿಲ್ಲದ ಸೈದ್ಧಾಂತಿಕತೆಗಳ ಆದರ್ಶ ಬದುಕು. ಕರ್ನಾಟಕದ ಸಂಘಯಾತ್ರೆಯ ಸಾಕ್ಷಿಯಾಗಿದ್ದ ಅವರು ಈಗ ಇತಿಹಾಸಕ್ಕೆ ಸೇರಿದರೂ ಎಂದಿಗೂ ನೆನಪಿರುವ ಅಮರ ವ್ಯಕ್ತಿತ್ವದ ದನಿ. ಚಂದ್ರುರವರ ಪ್ರೇರಣೆ ಎಂದಿಗೂ ಆರದ ನಂದಾದೀಪದಂತೆ ಇರುತ್ತದೆ. ಅದರ ಬೆಳಕಿನಲ್ಲಿ ನಾವೆಲ್ಲ ಬಹುದೂರ ಸಾಗುವಂತಾಗಲಿ.
ಅವರ ಆತ್ಮಕ್ಕೆ ಸದ್ಗತಿ ಸಿಗಲೆಂದು ಪ್ರಾರ್ಥಿಸುತ್ತೇನೆ.
ॐ ಶಾಂತಿಃ॥
ದತ್ತಾತ್ರೇಯ ಹೊಸಬಾಳೆ
ಸರಕಾರ್ಯವಾಹ”
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹರಾದ ಶ್ರೀ ಮುಕುಂದ, ಕ್ಷೇತ್ರೀಯ ಪ್ರಚಾರಕರಾದ ಶ್ರೀ ಸುಧೀರ್ಜೀ, ಕ್ಷೇತ್ರೀಯ ಕಾರ್ಯವಾಹರಾದ ಶ್ರೀ ತಿಪ್ಪೇಸ್ವಾಮಿಯವರು, ಪ್ರಾಂತ ಪ್ರಚಾರಕರಾದ ಶ್ರೀ ಗುರುಪ್ರಸಾದ್, ಸಹ ಪ್ರಾಂತ ಪ್ರಚಾರಕರಾದ ಶ್ರೀ ನಂದೀಶ್, ಹಿರಿಯ ಸ್ವಯಂಸೇವಕರಾದ ಕಾ.ಶ್ರೀ.ನಾಗರಾಜ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಭಾನುಪ್ರಕಾಶ್,ಶ್ರೀಮತಿ ಎಸ್.ಆರ್.ಲೀಲಾ,ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಟಿ.ರವಿ ಮುಂತಾದವರು ಉಪಸ್ಥಿತರಿದ್ದರು.