ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪೂರ್ವ ಸಂಘಟನಾ ಕಾರ್ಯದರ್ಶಿ, ವಿಶ್ವ ಸಂವಾದ ಕೇಂದ್ರದ ಸಂಸ್ಥಾಪಕರು, ಲೇಖಕರು, ಕವಿಗಳಾದ ಚಂದ್ರಶೇಖರ ಭಂಡಾರಿಗಳು (87) ದೈವಾಧೀನರಾಗಿದ್ದು,,ಅವರೊಂದಿಗೆ ಹತ್ತಿರದಿಂದ ಒಡನಾಡಿದ ಶ್ರೀ ವಾದಿರಾಜ,ಶ್ರೀ ಸಂತೋಷ್ ಜಿ.ಆರ್,ಶ್ರೀ ದು.ಗು.ಲಕ್ಷ್ಮಣ ಹಾಗು ಶ್ರೀ ನಾರಾಯಣ ಶೇವಿರೆ ಅವರು ತಮ್ಮ ನುಡಿನಮನವನ್ನು ಸಲ್ಲಿಸಿದ್ದಾರೆ.

ಶ್ರೀ ವಾದಿರಾಜ, ಸಾಮರಸ್ಯ

12 ವರ್ಷಗಳ ಹಿಂದಿನ ಮಾತು . ಅವತ್ತು ಟಿವಿ ವಾಹಿನಿಯೊಂದರಲ್ಲಿ ‘ಪೇಜಾವರರ ದಲಿತ ಕೇರಿಗಳಲ್ಲಿನ ಪಾದಯಾತ್ರೆ’ ಬಗ್ಗೆ ಚರ್ಚೆ ನಡೆದಿತ್ತು. ಆಗ ಪತ್ರಕರ್ತರೇ ಆಗಿದ್ದ ಅಗ್ನಿ ಶ್ರೀಧರ್ ಮತ್ತೊಬ್ಬ ಪತ್ರಕರ್ತ ಅರುಣ್ ಶೌರಿರವರ ‘Worshipping The False God’ ಪುಸ್ತಕವನ್ನು ಉಲ್ಲೇಖಿಸುತ್ತ “ಇದು ಆರೆಸ್ಸೆಸ್ ಗೆ ದಲಿತರ ಬಗ್ಗೆ ಇರುವ ಪ್ರೀತಿ, ಬಾಬಾಸಾಹೇಬರ ಬಗ್ಗೆ ಇರುವ ಗೌರವ” ಎಂದು ಕುಟುಕಿದ್ದರು. ಇಂತಹದೊಂದು ಕುಟುಕು ಪ್ರಶ್ನೆ ಬರಬಹುದೆಂಬ ನಿರೀಕ್ಷೆಯಲ್ಲಿ ಜೊತೆಗೆ ಒಯ್ದಿದ್ದ ‘ಶೌರಿ ಪ್ರಶ್ನೆ – ಪತಂಗೆ ಉತ್ತರ’ ಎಂಬ ಕಿರುಹೊತ್ತಿಗೆಯನ್ನು ಮುಂದೆ ಇಟ್ಟು, “ಶೌರಿಯವರ ಆರೋಪವನ್ನು ಆರೆಸ್ಸೆಸ್ ಸಾರಾಸಗಟು ನಿರಾಕರಿಸಿದೆ. ರಮೇಶ್ ಪತಂಗೆ ಎಂಬ ಮತ್ತೊಬ್ಬ ಆರೆಸ್ಸೆಸ್ ಹಿನ್ನೆಲೆಯ ಪತ್ರಕರ್ತ ಶೌರಿಗೆ ಕೊಟ್ಟಿರುವ ಉತ್ತರ ನೋಡಿ” ಎಂದೆ . ಅಗ್ನಿ ಶ್ರೀಧರ್ ಪುಸ್ತಕದೊಳಗಿನ content ಬಗ್ಗೆ ಚರ್ಚಿಸಲು ಮುಂದಾಗಲಿಲ್ಲ . “ಏನ್ ಪುಸ್ತಕರೀ ಇದು ಇಷ್ಟು ಚೀಪಾಗಿ ಪ್ರಿಂಟ್ ಮಾಡಿದಿರಾ” ಎಂದು ಚುಚ್ಚಿದರು .

ಟಿವಿ ಚರ್ಚೆ ಮುಗಿದರೂ ಆ ಮಾತಿನ ಮುಳ್ಳು ಚುಚ್ಚುತ್ತಲೇ ಇತ್ತು. ಎರಡು ದಿನದ ತರುವಾಯ ಚಂದ್ರಶೇಖರ ಭಂಡಾರಿಯವರಲ್ಲಿ ಆ ಕಹಿಯನ್ನು ಹಂಚಿಕೊಂಡೆ. ಆಗವರು ಕಾರ್ಮಿಕ ನಾಯಕ, ಸಾಮಾಜಿಕ ಚಿಂತಕ ದತ್ತೋಪಂತ ಠೇಂಗಡೆಯವರ ಬಾಬಾಸಾಹೇಬರ ಕುರಿತಾದ ಪುಸ್ತಕದ ಅನುವಾದದಲ್ಲಿ ತೊಡಗಿದ್ದರು. ಕೆಲ ತಿಂಗಳಲ್ಲಿ ‘ ಸಾಮಾಜಿಕ ಕ್ರಾಂತಿಸೂರ್ಯ ಡಾ.ಬಾಬಾಸಾಹೇಬ್ ಅಂಬೇಡ್ಕರ್ ‘ ಗ್ರಂಥ ಬಿಡುಗಡೆಗೆ ಸಿದ್ಧವಾಯಿತು. ಪುಸ್ತಕಕ್ಕೆ ಬೇಕಾದ ಬಾಬಾಸಾಹೇಬರ original ಛಾಯಾಚಿತ್ರಗಳನ್ನು ತರಲು ನಾಗಪುರದ ದೀಕ್ಷಾ ಭೂಮಿಗೆ ಹೋಗಿಬಂದೆವು.

ದತ್ತೊಪಂತ ಠೇಂಗಡಿಯವರು ಬಾಬಾಸಾಹೇಬರ ಜೊತೆ ನೇರವಾಗಿ ಒಡನಾಡಿದವರು . ಅವರ ಅನುಭವದ ಬುತ್ತಿಯನ್ನು ‘ ಕನ್ನಡದ್ದೇ ‘ ಎಂಬಂತೆ ಅನುವಾದಿಸಿದವರು ಚಂದ್ರಶೇಖರ ಭಂಡಾರಿ . ಬೆಂಗಳೂರಿನ ಜ್ಞಾನ ಭಾರತಿ ಸಭಾಂಗಣದಲ್ಲಿ ಎರಡು ಸಾವಿರಕ್ಕೂ ಮಿಕ್ಕ ಸಭಾಸದರ ನಡುವೆ ‘ ಕ್ರಾಂತಿಸೂರ್ಯ…. ‘ ಬಿಡುಗಡೆ ಆಯಿತು . ಬೆಂಗಳೂರು ಅಷ್ಟೇ ಅಲ್ಲ ಮೈಸೂರು , ಮಂಗಳೂರು , ಶಿವಮೊಗ್ಗ , ಧಾರವಾಡ , ಕಲ್ಬುರ್ಗಿ , ಬೆಳಗಾವಿ , ದಾವಣಗೆರೆ ಎಲ್ಲೆಡೆ ಬಿಡುಗಡೆಯಾಯಿತು. ಎರಡೇ ತಿಂಗಳಲ್ಲಿ 400 ರೂ ಮುಖಬೆಲೆಯ 600 ಪುಟಗಳ ಪುಸ್ತಕ ನಾಲ್ಕು ಸಲ ಮುದ್ರಣ ಕಂಡು ಐದು ಸಾವಿರಕ್ಕೂ ಹೆಚ್ಚು ಪ್ರತಿಗಳು ಓದುಗರ ಕೈ ಸೇರಿದವು .

ಕಲಾಕ್ಷೇತ್ರದ ಮತ್ತ್ಯಾವುದೋ ಕಾರ್ಯಕ್ರಮದಲ್ಲಿ ದೊಡ್ಡ ಸಾಹಿತಿಯೊಬ್ಬರು ಈ ಪುಸ್ತಕದ ಬಗ್ಗೆ ಪ್ರಸ್ತಾಪಿಸಿ ಆರೆಸ್ಸೆಸಿನವರು ಅಂಬೇಡ್ಕರನ್ನು ಹೈಜಾಕ್ ಮಾಡುತ್ತಿದ್ದಾರೆ ಎಂದರು. ಸಭೆಯಲ್ಲಿದ್ದ ಬೆಂಗಳೂರು ವಿಶ್ವವಿದ್ಯಾಲಯದ ದಲಿತ ಮೇಷ್ಟ್ರೊಬ್ಬರು “ಆರೆಸ್ಸೆಸ್ ನವರು ಅರುಣ್ ಶೌರಿ ಆರೋಪಗಳಿಗೆ 600 ಪುಟದ ಪುಸ್ತಕ ಹೊರತಂದು ಉತ್ತರ ಕೊಟ್ಟಿದ್ದಾರೆ . ನಾವೇನು ಮಾಡಿದೀವಿ ಹೇಳಿ? ಬರೀ ಬೀದಿ ಟೀಕೆ ಮಾಡಿಕೊಂಡಿದ್ದರೆ ಏನು ಪ್ರಯೋಜನ? ಅಕಾಡೆಮಿಕ್ಕಾಗಿ ಶೌರಿನ ಎದುರಿಸಬೇಕಲ್ಲವೇ?” ಎಂದು ನೇರವಾಗಿ ಪ್ರಶ್ನಿಸಿದ್ದರು .

ಆ ವರ್ಷವೇ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
‘ ಸಾಮಾಜಿಕ ಕ್ರಾಂತಿಸೂರ್ಯ…. ‘ ಪುಸ್ತಕಕ್ಕೆ ಅತ್ಯುತ್ತಮ ಅನುವಾದಕ ಪ್ರಶಸ್ತಿಯನ್ನು ಚಂದ್ರಶೇಖರ ಭಂಡಾರಿಯವರಿಗೆ ನೀಡಿ ಗೌರವಿಸಿತು . ‘ ಸಾಮಾಜಿಕ ಕ್ರಾಂತಿಸೂರ್ಯ … ‘ ಅಂಬೇಡ್ಕರ್ ಕುರಿತಾದ ಭಂಡಾರಿಯವರ ಮೂರನೇ ಪುಸ್ತಕ . ಆ ಮೊದಲೇ ಅವರು ರಾಷ್ಟ್ರ ನಾಯಕ ಡಾ ಅಂಬೇಡ್ಕರ್ , ಸಮಾಜ ಚಿಕಿತ್ಸಕ ಡಾ ಅಂಬೇಡ್ಕರ್ ಪುಸ್ತಕಗಳನ್ನು ಬರೆದಿದ್ದರು. ಆರೆಸ್ಸೆಸ್ ವಲಯದಲ್ಲಿ ಬಾಬಾಸಾಹೇಬರನ್ನು ಪರಿಣಾಮಕಾರಿಯಾಗಿ ಪರಿಚಯಿಸಿದವರಲ್ಲಿ ಭಂಡಾರಿರವರದ್ದು ದೊಡ್ಡ ಪಾತ್ರ .

ಡಾ. ಹೆಡಗೇವಾರ್, ಗೋಳ್ವಲ್ಕರ್, ಯಾದವರಾವ್ ಜೋಷಿ , ನ. ಕೃಷ್ಣಪ್ಪನವರ ಕುರಿತಾಗಿ ಭಂಡಾರಿರವರು ಬರೆದಿರುವ ಜೀವನಕಥನಗಳು ವಿಶಿಷ್ಟ ನಿರೂಪಣೆಯಿಂದ ಓದುಗರನ್ನು ಪ್ರಭಾವಿಸಿದೆ . ಹಮೀದ್ ದಳವಾಯಿ ಸಮಾಜವಾದಿ ಹಿನ್ನೆಲೆಯ ಅಪರೂಪದ ಒಳನೋಟವಿರುವ ಲೇಖಕ. ದಳವಾಯಿರವರ ‘ಸೆಕ್ಯೂಲರ್ ಭಾರತದಲ್ಲಿನ – ಮುಸ್ಲಿಂ ರಾಜಕಾರಣ’ ವನ್ನು ಕನ್ನಡಕ್ಕೆ ತಂದವರು ಭಂಡಾರಿ . ಸಂಘಟನೆಯ ಕೆಲಸವನ್ನು ಮಾಡುತ್ತಲೇ ಅವರು ಬರವಣಿಗೆಯ ಕೆಲಸವನ್ನೂ ಅದೇ ಪ್ರೀತಿಯಿಂದ ಮಾಡುತ್ತಿದ್ದರು. ನೂರಾರು ಬಿಡಿ ಲೇಖನಗಳಾಚೆಗೆ 38 ಕೃತಿಗಳು ಅವರಿಂದ ಬಂದಿದೆ ಎಂದರೆ ಆ ತಪ್ಪಿಸ್ಸಿನ ಹಿಂದಿನ ಶಿಸ್ತು, ಬದ್ಧತೆ ತಲೆಬಾಗುವಂತೆ ಮಾಡುತ್ತದೆ .

ಸಂತೋಷ್ ಜಿ.ಆರ್, ಸ್ವಯಂಸೇವಕರು

ಸಂಘದ ಜ್ಯೇಷ್ಠ ಪ್ರಚಾರಕರಾದ ಚಂದ್ರು ಜಿ ಇನ್ನಿಲ್ಲವೆಂಬ ದುಃಖದ ಸುದ್ಧಿ ಉತ್ಥಾನದ ಸಂಪಾದಕರಾದ ಅನಿಲ್‌ ಕುಮಾರ್‌ ಅವರಿಂದ ಬಂದಾಗ ಮನಕೆ ಕತ್ತಲಾವರಿಸಿತು.
  
ಸಂಘದ ದರ್ಶನ, ಸಂಘದ ಬೆಳವಣಿಗೆಯ ಕುರಿತ ವಿಚಾರಗಳಿಗೆ ಚಂದ್ರು ಜಿ ಒಂದು ರೀತಿ ಅಧಿಕೃತ ಮಾಹಿತಿ ಕೋಶವೇ ಆಗಿದ್ದರು. ಅವರೊಂದಿಗಿನ ಭೇಟಿ, ಬೈಠಕ್, ವಾರ್ತಾಲಾಪ, ಸಹ ಪ್ರವಾಸದ ನೆನಪುಗಳು ಬಹಳ.

ಅನೇಕ ವರ್ಷಗಳ ಕಾಲ ಸಮಾಚಾರ ಸಮೀಕ್ಷೆ ಮತ್ತು ಪುಂಗವ ಪಾಕ್ಷಿಕದ ಸಂಪಾಕೀಯ ಮಂಡಳಿಯ ಸಭೆಯ ನೆಪದಲ್ಲಿ ಕೇಶವಕೃಪಾದಲ್ಲಿ ತಿಂಗಳಿಗೆರಡು ಬಾರಿಯಾದರೂ ಅವರೊಂದಿಗೆ ಚರ್ಚಿಸುವ ಅವಕಾಶಗಳು ದೊರಕುತಿತ್ತು. ಆ ಸಂದರ್ಭಗಳಲ್ಲಿ ಮುದ್ರಣಕ್ಕೆ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕಾದ ಕ್ರಮ, ಲೇಖನದಲ್ಲಿ ವಿಷಯ ಪ್ರಸ್ತುತ ಪಡಿಸುವ ರೀತಿ, ಸೂಕ್ತವಾದ ಹೆಡ್ಡಿಂಗ್‌, ಲೇಖನದೊಳಗೂ ಬಳಸ ಬೇಕಾದ ಪದಪುಂಜಗಳ ಕುರಿತು ನಡೆಯುತ್ತಿದ್ದ ಸುದೀರ್ಘವಾದ ಚರ್ಚೆಯೇ ಕಿರಿಯರಾಗಿದ್ದ ನಮ್ಮ ಕಲಿಕೆಗೆ ಒಂದು ಸುವರ್ಣಾವಕಾಶ.

ಸೂಕ್ತ ಮತ್ತು ಹೊಸ ಶಬ್ದಗಳನ್ನು ಠಂಕಿಸುವುದರಲ್ಲಿಯೂ ಚಂದ್ರುಜಿ ಅವರದು ಅದ್ಭುತ ಪ್ರತಿಭೆ, ಮೆಡಿಕಲ್‌ ಟೂರಿಸಂ ಕುರಿತ ಲೇಖನಕ್ಕೆ ಕನ್ನಡದಲ್ಲಿ ಸೂಕ್ತ ಪದದ ಕುರಿತು ನಮಗಾರಿಗೂ ಒಮ್ಮತವಿಲ್ಲದಾದಾಗ ʼಚಿಕಿತ್ಸಾ ಪ್ರವಾಸʼ ಎಂಬ ಸುಂದರ ಶಬ್ದವನ್ನು ನೀಡಿದ್ದು ಚಂದ್ರು ಜಿ. ಇಂತಹ ಉದಾಹರಣೆಗಳು ಅಸಂಖ್ಯ. ಇತಿಹಾಸದ ಅಪರೂಪದ ಸಂಗತಿಗಳು, ಉಲ್ಲೇಖನೀಯ ಸಂಗತಿಗಳು, ನಮಗೆ ಅರಿವಿರದ ಉದಾಹರಣೆಗಳು ಅಸಂಖ್ಯವಾಗಿ ಅವರಿಂದ ಹೊರಹೊಮ್ಮುತ್ತಿದ್ದವು.
  
ಅವರೊಂದಿಗೆ ಕಳೆದ ಪ್ರತಿ ಸಂದರ್ಭಗಳೂ ನಮಗೊಂದು ರೀತಿ ಶಿಕ್ಷಣದ ಕ್ಷಣಗಳೇ ಆಗಿದ್ದವು. ಸಾಹಿತ್ಯ ಕ್ಷೇತ್ರದಲ್ಲಿಯೂ ಮೇರು ಸಾಧನೆ ಮಾಡಿಯೂ ಮರೆಯಲ್ಲಿಯೇ ಬದುಕು ನಡೆಸಿದ ಸಂಘ ಸಮರ್ಪಿತ ನಿಸ್ಪೃಹ ವ್ಯಕ್ತಿತ್ವ. ಸಮಗ್ರವಲ್ಲದಿದ್ದರೂ ಅವರ ಜೀವನ ಯಾನವನ್ನು ನೆನಪಿಸಿಕೊಳ್ಳುವ ಸಣ್ಣ ಪ್ರಯತ್ನ ಕೆಳಗಿನ ಶಬ್ದಗಳಲ್ಲಿ…

ಸಂಘಜೀವಿಯ ಸಾಹಿತ್ಯ ಯಾನ-

ಎಲೆಯಮರೆಯಲ್ಲಿ ಅರಳಿ ನಗುವ ಹೂವು ತಾನು ಸೂಸುವ ಸುಗಂಧದಿಂದಲೇ ತನ್ನ ಇರುವಿಕೆಯನ್ನು ಸೂಚಿಸುವಂತೆ ಸಿದ್ಧಾಂತದ ಸುಗಂಧವನ್ನು ಹೊತ್ತ ಸಾಹಿತ್ಯದ ತಂಗಾಳಿಯನ್ನು ನಾಡಿನೆಲ್ಲೆಡೆ ಪಸರಿಸಿದವರು ಶ್ರೀಯುತ ಚಂದ್ರಶೇಖರ ಭಂಡಾರಿಯವರು.

1935ರ ಮೇ ತಿಂಗಳ 4ರಂದು ಮಂಗಳೂರಿನಲ್ಲಿ ಜನಿಸಿದ ಅವರು ಬಾಲ್ಯದಿಂದಲೂ ಸಂಘದ ಹಾದಿಯಲ್ಲಿ ನಿಷ್ಠೆಯಿಂದ ಮುನ್ನಡೆದವರು. ಬಿಎಸ್ಸಿ, ಬಿಎಡ್ ವಿದ್ಯಾಭ್ಯಾಸದ ನಂತರ ಕೆಲಕಾಲ ನಡೆಸಿದ್ದು ಅಧ್ಯಾಪಕ ವೃತ್ತಿ. ನಂತರ 1961ರಲ್ಲಿ ಸಂಘದ ಪ್ರಚಾರಕರಾಗುವ ಮೂಲಕ ಅವರ ಜೀವನ  ರಾಷ್ಟ್ರಕಾರ್ಯಕ್ಕೆ ಮುಡಿಪಾಯಿತು. ಮಂಗಳೂರು, ತುಮಕೂರು ಮತ್ತು ಮೈಸೂರು ವಿಭಾಗಗಳಲ್ಲಿ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದರು.

ಚಂದ್ರಶೇಖರ ಭಂಡಾರಿಗಳು ದಿವಂಗತ ಹೊ.ವೆ. ಶೇಷಾದ್ರಿಗಳ ಪ್ರೇರಣೆ, ಪ್ರೋತ್ಸಾಹಗಳಿಂದ ಬರವಣಿಗೆಯ ಲೋಕಕ್ಕೆ ಅಡಿಯಿಟ್ಟವರು. 1984ರಲ್ಲಿ ಪ್ರಕಟಗೊಂಡ ‘ಕದಡಿದ ಪಂಜಾಬ್’ ಇವರ ಲೇಖನ ಕಲೆಯನ್ನು ಪರೀಕ್ಷೆಗಿಟ್ಟ ಮೊದಲ ಕೃತಿ. 80ರ ದಶಕದಲ್ಲಿ ಪಂಜಾಬ್ ನಲ್ಲಿ ಉಲ್ಪಣಗೊಂಡಿದ್ದ ಪ್ರತ್ಯೇಕತಾವಾದದ ವಿದ್ಯಮಾನಗಳ ಕುರಿತ ವಿವರಗಳನ್ನು ಈ ಪುಸ್ತಕ ನಾಡಿನ ಜನತೆಗೆ ತೆರೆದಿಟ್ಟಿತು.

ಮುಂದಿನ ದಿನಗಳಲ್ಲಿ ಸಂಘಟನೆಯ ಹಿರಿಯರ ಅಪೇಕ್ಷೆಯಂತೆ  ಸಾಹಿತ್ಯ ಸೃಷ್ಟಿಯ ಕಾರ್ಯಕ್ಕೆ ಇವರ ಹೆಚ್ಚಿನ ಕೊಡುಗೆ ಸಂದಿತು. ಅನೇಕ ಮುಖಗಳಲ್ಲಿ ಸಾಗಿದ ಸಾಹಿತ್ಯ ಕೃಷಿಯಲ್ಲಿ ಮಿನುಗಿದ ಚಂದ್ರುಜೀಯವರ ಬರವಣೆಗೆಯ ಪ್ರತಿಭೆಯು ಮನುವಿನ ಮೀನಿನಂತೆ ಬೆಳೆಯುತ್ತಲೇ ಹೋಯಿತು. ಒಂದಾದ ಮೇಲೊಂದರಂತೆ ರಚಿಸಲ್ಪಡುತ್ತಿದ್ದ ಕೃತಿಗಳು ಅವರನ್ನು ಇತಿಹಾಸಕಾರರಾಗಿ, ಅನುವಾದಕರಾಗಿ, ವೈಚಾರಿಕ ವಿಷಯಗಳ ಪ್ರತಿಪಾದಕರಾಗಿ, ಸಂಶೋಧಕರಾಗಿ, ಪತ್ರಕರ್ತರಾಗಿ ರೂಪಿಸಿದವು. 

1990-91ನೆ ವರ್ಷದಲ್ಲಿ ಡಾ. ಅಂಬೇಡ್ಕರ್ ಅವರ ಜನ್ಮ ಶತಮಾನೋತ್ಸವದ ನಿಮಿತ್ತ ಎಸ್. ಆರ್. ರಾಮಸ್ವಾಮಿಯವರ ಜೊತೆಗೂಡಿ ರಚಿಸಿದ ‘ಸಮಾಜ ಚಿಕಿತ್ಸಕ ಅಂಬೇಡ್ಕರ್’ ಪುಸ್ತಕವು ಬಾಬಾಸಾಹೇಬರ ಸಮಾಜಪ್ರೇಮವನ್ನು ಚಿತ್ರಿಸುವಲ್ಲಿ ಸಫಲವಾಯಿತು.   
ಸ್ವತಂತ್ರ ಕೃತಿಗಳ ಲೇಖಕರು, ಅನುವಾದಕರು ಮತ್ತು ಸಹ ಲೇಖಕರು ಹೀಗೆ ಚಂದ್ರುರವರಿಂದ ಮೂಡಿಬಂದ ಕೃತಿಗಳು ನಲವತ್ತರ ಗಡಿ ಸಮೀಪಿಸಿದೆ.

ಚಂದ್ರುಜಿ ನಮ್ಮ ರಾಜ್ಯದಲ್ಲಿ ಸಂಘ ಬೆಳೆದು ಬಂದ ದಾರಿಯನ್ನು ಅಧಿಕೃತವಾಗಿ ದಾಖಲಿಸಿದ ಸಂಘದ ಚರಿತ್ರಕಾರರೂ ಹೌದು. ‘ಕಡಲತಡಿಯ ಸಂಘವಟ’, ‘ವಿದ್ಯಾರಣ್ಯರ ಭೂಮಿಯಲ್ಲಿ ಶ್ರೀ ಮಾಧವ’, ‘ಕರ್ನಾಟಕದಲ್ಲಿ ಸಂಘ’ ಈ ಕೃತಿಗಳು ಸಂಘದ ಇತಿಹಾಸವನ್ನು ತರುಣ ಪೀಳಿಗೆಯ ಮುಂದಿಟ್ಟಿವೆ. 

‘1857ರ ಸಮರ’, ‘ನಾನಾನಿಂದ ನೇತಾಜಿಯವರೆಗೆ’ ಹೀಗೆ ಸ್ವಾತಂತ್ರ್ಯ ಹೋರಾಟದ ಅನೇಕ ಮಜಲುಗಳನ್ನು ಪರಿಚಯಿಸುವ ಕೃತಿಗಳು ಸಹ ಇವರಿಂದ ಬೆಳಕು ಕಂಡಿವೆ. ‘ಕಾರ್ಗಿಲ್ ಕಂಪನ’ದಂತಹ ಪುಸ್ತಕಗಳು ಸಮಕಾಲೀನ ಪ್ರಸಂಗಗಳನ್ನೂ ಇತಿಹಾಸ ಭಾಗವಾಗಿ ಗುರುತಿಸುವಂತೆ ಮಾಡಿವೆ.

ಚಂದ್ರುಜಿಯವರು ಅನುವಾದ ಸಾಹಿತ್ಯಕ್ಕೊಂದು ಮಾದರಿಯನ್ನು ಸೃಷ್ಟಿಸಿದವರು ಎಂದರೂ ತಪ್ಪಲ್ಲ. ವಿವಿಧ ಭಾಷೆಗಳಲ್ಲಿರುವ ಉತ್ತಮ ಬರೆಹಗಳನ್ನು ಕನ್ನಡಕ್ಕೆ ತರುವಲ್ಲಿ ಇವರ ಪಾತ್ರ ಮಹತ್ವದ್ದು. ದತ್ತೋಪಂತ ಠೇಂಗಡಿಯವರು ರಚಿಸಿದ ಡಾ. ಅಂಬೇಡ್ಕರ್ ಕುರಿತ ಕೃತಿಯನ್ನು ‘ಸಾಮಾಜಿಕ ಕ್ರಾಂತಿ ಸೂರ್ಯ ಬಾಬಾಸಾಹೇಬ್ ಅಂಬೇಡ್ಕರ್’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದರು. ಸಾಮಾಜಿಕ ವಲಯದಲ್ಲಿ ಸಂಚಲನ ಸೃಷ್ಠಿಸಿದ ಈ ಅಭೂತಪೂರ್ವ ಕೃತಿಯನ್ನು ಕುವೆಂಪು ಭಾಷಾ ಭಾರತಿಯು 2011ನೇ ಸಾಲಿನ ಅನುವಾದ ಸಾಹಿತ್ಯ ವಿಭಾಗದ ಅತ್ಯುತ್ತಮ ಕೃತಿಯೆಂದು ಪ್ರಶಸ್ತಿ ನೀಡಿ ಗೌರವಿಸಿತು.

ಸಂಘದ ಸ್ಥಾಪಕರಾದ ಹೆಡಗೆವಾರ್ ಮತ್ತು ಗೋಳ್ವಾಲ್ಕರ್ ಅವರ ಜೀವನ, ವಿಚಾರಗಳನ್ನು ಜನರಿಗೆ ತಲುಪಿಸುವ ಸಾಹಿತ್ಯದ ಜೊತೆಗೆ ಸ್ವತಃ ತಾವೇ ಅತಿ ಹತ್ತಿರದಿಂದ ಕಂಡಂತಹ ಮತ್ತು ಕರ್ನಾಟಕದಲ್ಲಿ ಸಂಘಕಾರ್ಯದ ಬೆಳವಣಿಗೆಗೆ ಕಾರಣಪುರುಷರಾದಂತಹ ಸ್ವರ್ಗೀಯ ಯಾದವ್ ರಾವ್ ಜೋಶೀ ಮತ್ತು ನ.ಕೃಷ್ಣಪ್ಪನವರ ಧ್ಯೇಯ ಸಮರ್ಪಿತ ಬದುಕನ್ನು ಮುಂದಿನ ಪೀಳಿಗೆಯ ಕಾರ್ಯಕರ್ತರಿಗೆ ಕಟ್ಟಿಕೊಡುವ ಉದ್ದೇಶದಿಂದ ಪುಸ್ತಕರೂಪದಲ್ಲಿ ಹೊರತಂದರು. 

ಅನೇಕ ವೈಚಾರಿಕ ಕೃತಿಗಳಿಗೆ ಪ್ರಧಾನ ಲೇಖನ ಬರೆದು, ಭಾಷಾಂತರ ಮಾಡಿ ಕನ್ನಡದ ಓದುಗರಿಗೆ ನೀಡಿರುವುದು ಉಲ್ಲೇಖನೀಯ. ಹೊ.ವೆ ಶೇಷಾದ್ರಿಗಳ ಸಂಕಲನದಲ್ಲಿ ಮೂಡಿ ಬಂದಿದ್ದ ಸಂಘದ ಸ್ವಯಂಸೇವಕರು ನಡೆಸುತ್ತಿರುವ ಸೇವಾ ಕಾರ್ಯಗಳ ಕುರಿತ ಬೃಹತ್ ಕೃತಿ ‘ಕೃತಿರೂಪ ಸಂಘದರ್ಶನ’ವನ್ನು ಚಂದ್ರು ಜೀಯವರು ಹಲವರ್ಷಗಳ ನಂತರ ಮತ್ತೊಮ್ಮೆ ಸಮಕಾಲೀನಗೊಳಿಸಿದರು.

ಆಯಾಕಾಲಘಟ್ಟದ ಸಂಘಟನೆಯ ಅವಶ್ಯಕತೆಗಳಿಗೆ ಅನುಸಾರವಾಗಿ ವಿವಿಧ ಪ್ರಚಾರ ಸಾಹಿತ್ಯಗಳು, ಸಣ್ಣಗಾತ್ರದ ಆದರೆ ಮಹತ್ವದ ವಿಷಯವನ್ನು ಚರ್ಚಿಸುವ ಪುಸ್ತಕಗಳು ಪ್ರಕಟಗೊಂಡು ಲಕ್ಷಾಂತರ ಮನೆ, ಓದುಗರನ್ನು ತಲುಪಿದವು. ಅನೇಕ ವಿಷಯಗಳ ಕುರಿತ ಜಾಗರಣ ಪುಸ್ತಕಗಳು ಇವರ ಬತ್ತಳಿಕೆಯಿಂದ ಹೊರಬಂದವು. ಡಂಕೆಲ್ ಪ್ರಸ್ತಾವನೆಗಳು, ಅಯೋಧ್ಯೆಯ ಕರಸೇವೆ, ಗೋಧ್ರಾ ದುರಂತ ಹೀಗೆ ಹತ್ತು ಹಲವು ವಿಷಯಗಳ ಕುರಿತ ಹೊತ್ತಿಗೆಗಳನ್ನು ಚಂದ್ರು ಜೀ ಸಿದ್ಧಗೊಳಿಸಿದರು.

ಕನ್ನಡ ನಾಡಿನ ಸಣ್ಣಪತ್ರಿಕೆಗಳಿಗೆ ಸುದ್ಧಿಮೂಲವಾಗಿ ಕಾರ್ಯವೆಸಗುವ ‘ಆಪ್ತಸಂವಾದ’ ಸಾಪ್ತಾಹಿಕ ವಾರ್ತಾಪತ್ರವು ಇವರ ಸಂಪಾದಕತ್ವದಲ್ಲಿ ಹೊರಬರುತ್ತಿತ್ತು. ರಾಜ್ಯದ ವಿವಿಧೆಡೆಗಳಿಂದ ಪ್ರಕಟಗೊಳ್ಳುತ್ತಿದ್ದ ಜಿಲ್ಲಾ ಮಟ್ಟದ ಅನೇಕ ಪತ್ರಿಕೆಗಳಿಗೆ ಇದರಿಂದ ಅನುಕೂಲವಾಯಿತು. ರಾಷ್ಟ್ರೀಯ ವಿಚಾರ ಹೊಸ ಮಾಧ್ಯಮಗಳ ಮೂಲಕ ಹೆಚ್ಚು ಜನರನ್ನು ತಲುಪುವಂತಾಯಿತು.

ಸಂಘದ ಶಾಖೆಗಳಲ್ಲಿ ನಡೆಯುತ್ತಿದ್ದ ಸಮಾಚಾರ ಸಮೀಕ್ಷೆಗೆಂದು ಟಿಪ್ಪಣಿಗಳನ್ನು ನಿಯಮಿತವಾಗಿ ತಯಾರಿಸುವ ಸಣ್ಣ ತಂಡಕ್ಕೆ ಚಂದ್ರುಜಿಯವರದೇ ನೇತೃತ್ವ. ಪ್ರಚಲಿತ ವಿದ್ಯಮಾನಗಳ ಕುರಿತು ಸ್ವಯಂಸೇವಕರಲ್ಲಿ ಮೂಡುತ್ತಿದ್ದ ಗೊಂದಲಗಳಿಗೆ ತೆರೆಯೆಳೆದು ಸ್ಪಷ್ಟತೆಯನ್ನು ನೀಡುವಲ್ಲಿ ಈ ಟಿಪ್ಪಣಿಗಳು ಇಂದಿಗೂ ಸಹಾಯಕವಾಗಿವೆ.

ಸಂಖ್ಯೆಯಲ್ಲಿ ಹೆಚ್ಚಿಲ್ಲದಿದ್ದರೂ ಸಾಹಿತ್ಯಿಕವಾಗಿ, ಭಾವನಾತ್ಮಕವಾಗಿ ಕೇಳುಗರನ್ನು ಹಿಡಿದಿಡುವ ‘ವಂದಿಸುವೆ ಭಗವಾಗುಡಿ’, ‘ಧರೆಗವತರಿಸಿದ ಸ್ವರ್ಗದ ಸ್ಫರ್ಧಿಯು’ ಇಂತಹ ಸುಮಧುರ ದೇಶಭಕ್ತಿಗೀತೆಗಳ ರಚನೆಯನ್ನೂ ಭಂಡಾರಿಯವರು ಮಾಡಿದ್ದಾರೆ.  

ಕನ್ನಡದ ಸಾರ ಸಂಸ್ಕೃತಿಯನ್ನು ದೇಶಕ್ಕೆ ಪರಿಚಯಿಸಲು ಹಿಂದಿಭಾಷೆಯಲ್ಲಿಯೂ ಪ್ರಬಂಧಗಳನ್ನು ಬರೆದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ನ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪ್ರಸ್ತುತ ಪಡಿಸಿರುವುದು ಒಂದು ಸಾಧನೆಯೇ ಆಗಿದೆ.

ಚಂದ್ರುಜಿಯವರು ಬರೆದ ಲೇಖನಗಳ ವ್ಯಾಪ್ತಿಯೂ ದೊಡ್ಡದೇ. ಬಹುಪಾಲು ಎಲ್ಲಾ ರಾಷ್ಟ್ರೀಯ ವಿದ್ಯಮಾನಗಳ ಕುರಿತು ಇವರು ಬರೆದಿದ್ದಾರೆ. ಕಾಶ್ಮೀರ, ಅಯೋಧ್ಯೆ, ಪ್ರಜಾಪ್ರಭುತ್ವ, ಕುಟುಂಬ, ಗ್ರಾಹಕ ಸಂಸ್ಕೃತಿ, ಕನ್ನಡ ಭಾಷೆ ಹೀಗೆ ಚಂದ್ರುಜಿಯವರು ಸ್ಪರ್ಶಿಸದ ವಿಷಯಗಳೇ ಇಲ್ಲವೆನ್ನುವಷ್ಟರ ಮಟ್ಟಿಗೆ ಇವರ ಬರೆಹಗಳು ವೈವಿದ್ಯಮಯವಾಗಿದೆ.

ವಿಕ್ರಮ, ಹೊಸದಿಗಂತ, ಉತ್ಥಾನ, ಪುಂಗವ, ಅಸೀಮಾ ಇನ್ನಿತರ ಪತ್ರಿಕೆಗಳಿಗೆ ವೈಚಾರಿಕ ಲೇಖನಗಳನ್ನು ಬರೆಯುವ ಕಾರ್ಯ ನಿರಂತರ ಸಾಗಿತ್ತು. ನಿಯಮಿತ ಅಂಕಣ ಮತ್ತು ಅನೇಕ ಲೇಖನಗಳ ಮೂಲಕ ಸಂಘ ಮತ್ತು ಸಮಾಜ ಸಮರ್ಪಿತ ವ್ಯಕ್ತಿಗಳ ಜೀವನಾದರ್ಶನದ ಕ್ಷಣಗಳನ್ನು ಅಕ್ಷರಗಳ ಮೂಲಕ ಸೆರೆ ಹಿಡಿದಿಡುವ ಇವರ ಕಾಯಕ ತರುಣ ಜನಾಂಗಕ್ಕೊಂದು ವರವೇ ಸರಿ. 

ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕನಾಗಿ ಜವಾಬ್ದಾರಿಯನ್ನು ನಿರ್ವಹಿಸಲು ನಾನು ತಾಂಜಾನಿಯಾಗೆ ಹೋಗುವ ಮೊದಲು 2019ರ ಜನವರಿಯಲ್ಲಿ ಸಂಘದ ಹಿರಿಯರ ಅಪೇಕ್ಷೆಯಂತೆ ಚಂದ್ರು ಜಿಯವರ ಸಾಹಿತ್ಯದ ಕುರಿತು ಒಂದು ದಿನದ ವಿಚಾರಗೋಷ್ಠಿ ಮತ್ತು ಸಂಜೆ ಅಭಿನಂದನಾ ಸಮಾರಂಭದ ಆಯೋಜನೆಯ ಹಿನ್ನಲೆಯಲ್ಲಿ ಚಂದ್ರು ಜಿಯವರೊಂದಿಗೆ ಮತ್ತಷ್ಟು ಹೆಚ್ಚು ಸಮಯ ಕಳೆದದ್ದು ನನ್ನ ಸುಕೃತ. ʼಸಂಘದ ಸ್ವಯಂಸೇವಕನಾಗಿ ನನಗೆ ವಹಿಸಿದ ಹೊಣೆಯನ್ನು ನಿರ್ವಹಿಸಿದ್ದೇನೆಯೇ ಹೊರತು ಗುರುತಿಸಿ ಸನ್ಮಾನ ಮಾಡಿಸಿಕೊಳ್ಳುವ ಯಾವ ಕಾರ್ಯವನ್ನೂ ಮಾಡಿಲ್ಲʼ ಎಂಬ ಪ್ರಚಾರಕ್ಕೆ, ಪ್ರಸಿದ್ಧಿಗೆ ವಿಮುಖರಾಗುವ ಮಾತುಗಳನ್ನು ಆ ಸಂಧರ್ಭದಲ್ಲಿ ಪುನಃಪುನಃ ಚಂದ್ರು ಜಿ ಉಚ್ಚರಿಸಿದ್ದರು. ಸಮಾರಂಭದ ದಿನವೂ ಸಂಘದ ಹಿರಿಯರ ಸೂಚನೆಯ ಮೇರೆಗೆ ವಿನಮ್ರ ಸ್ವಯಂಸೇವಕನಾಗಿ ಹಾರಕ್ಕೆ ತಲೆಯೊಡ್ಡಿದ್ದರು, ಶಾಲನ್ನು ಸ್ವೀಕರಿಸಿದ್ದರು.

ತನ್ನದೆಲ್ಲವನ್ನೂ ಶ್ರೇಷ್ಠವಾದ ಧ್ಯೇಯಕ್ಕೆ ಸಮರ್ಪಿಸಿದ ದಿವ್ಯ ನಿಸ್ಪೃಹ ವನಸುಮದ ಭಾವದಲ್ಲೇ ಜೀವಿಸಿದ ಚಂದ್ರುಜೀಯವರ ವೈಚಾರಿಕ ಸುಗಂಧ ಅವರ ಸಾಹಿತ್ಯ ಕೃತಿಗಳ ರೂಪದಲ್ಲಿ ಚಿರಕಾಲ ತರುಣರ ಹೃನ್ಮನಗಳಿಗೆ ಸ್ಫೂರ್ತಿಯ ಸಿಂಚನ ಮಾಡುತ್ತಲೇ ಇರುತ್ತದೆ.   

ರಾಜಕೀಯ, ಜಾತೀಯತೆ, ಪ್ರಶಸ್ತಿ, ಆಮೀಷಗಳಿಂದ ದೂರವೇ ಉಳಿದಿದ್ದ ಚಂದ್ರುಜಿಯವರಂತಹ ಸಂಘ ಸಮರ್ಪಿತ ಸಾಹಿತ್ಯ ಜೀವಿಗಳು ಈಗಿನ ಕಾಲಘಟ್ಟದಲ್ಲಿ ಅಪರೂಪವೇ ಸರಿ. ಎಂಭತ್ತೈದರ ಪ್ರಾಯದಲ್ಲೂ ವೈಚಾರಿಕ, ಬೌದ್ಧಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕ್ರಿಯಾಶೀಲ ಜೀವನ ನಡೆಸುತ್ತಿದ್ದ ಉತ್ಸಾಹಿ ಶ್ರೀ ಚಂದ್ರಶೇಖರ ಭಂಡಾರಿಯವರು ಇನ್ನೀಗ ನೆನಪು ಮಾತ್ರ.

ಕಾಲದ ಅವಶ್ಯಕತೆಗೆ ತಕ್ಕಂತೆ ಅನೇಕ ಬೌದ್ಧಿಕ ಕ್ಷತ್ರಿಯರ ನಿರ್ಮಿತಿಗೆ ಆಕರವೇ ಆಗಿದ್ದ ಚಂದ್ರು ಜೀ ಅವರ ಆತ್ಮಕ್ಕೆ ಚಿರಶಾಂತಿಯನ್ನು ಭಗವಂತ ಕರುಣಿಸಲೆಂಬ ಪ್ರಾರ್ಥನೆ.

ದು.ಗು ಲಕ್ಷ್ಮಣ, ಹಿರಿಯ ಪತ್ರಕರ್ತರು

ಮೌನಕ್ಕೆ ಜಾರಿದ ಮಹಾನ್‌ ಮೌನ ಸಾಧಕ

ಅದು ೧೯೬೮.  ಕಾರ್ಕಳದಲ್ಲಿ ಆರೆಸ್ಸೆಸ್‌ ನ ಆಗಿನ ಸರಸಂಘಚಾಲಕರಾಗಿದ್ದ ಶ್ರೀ ಗುರೂಜಿಯವರ ಕಾರ್ಯಕ್ರಮ.  ಮಂಗಳೂರು ವಿಭಾಗದ (ಆಗ ಶಿವಮೊಗ್ಗ ಜಿಲ್ಲೆ ಕೂಡ ಮಂಗಳೂರು ವಿಭಾಗಕ್ಕೆ ಸೇರಿತ್ತು.)  ಕಾರ್ಯಕರ್ತರಿಗೆ ಎರಡು ದಿನಗಳ ಶಿಬಿರ. ಆ ಶಿಬಿರಕ್ಕೆ ನಾನೂ ಶಿವಮೊಗ್ಗದಿಂದ ಹೋಗಿದ್ದೆ. ಸಂಘದ ಪದ್ಧತಿಯಂತೆ ಶಿಬಿರಾರ್ಥಿಗಳಿಗೆಲ್ಲ ಗುರುತಿನ ಚೀಟಿಯಾಗಿ ‘ಪ್ರವೇಶಿಕಾ’ ಕೊಟ್ಟಿದ್ದರು.  ನಾನಿನ್ನೂ ಸಂಘಕ್ಕೆ ಹೊಸಬ. ಸಂಘದ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದುದೂ ಅದೇ ಮೊದಲು. ಮಧ್ಯಾಹ್ನ ಊಟದ ವೇಳೆ ಉಪ್ಪನ್ನು ಪ್ರವೇಶಿಕಾ (ಗುರುತಿನ ಚೀಟಿ)ದ ಮೇಲಿಟ್ಟು ಊಟ ಮಾಡುತ್ತಿದ್ದೆ.  ತೆಳ್ಳಗಿನ ಎತ್ತರವಿರುವ ವ್ಯಕ್ತಿಯೊಬ್ಬರು ಊಟ ಮಾಡುತ್ತಿದ್ದ ಶಿಬಿರಾರ್ಥಿಗಳನ್ನೆಲ್ಲ ಅವಲೋಕಿಸುತ್ತಾ ಬಂದರು.  ನನ್ನ ಬಳಿ ಬಂದ ಕೂಡಲೇ ಗಕ್ಕನೆ ನಿಂತರು.  ನನಗೋ ಭಯ, ಆತಂಕ, ಪ್ರವೇಶಿಕಾದ ಮೇಲೆ ಉಪ್ಪು ಹಾಕಿರುವುದನ್ನು ಗಮನಿಸಿದ ಆ ಎತ್ತರದ ವ್ಯಕ್ತಿ ʼನೋಡಪ್ಪಾ, ಪ್ರವೇಶಿಕಾದ ಮೇಲೆ ಉಪ್ಪು ಹಾಕಬಾರದು.  ಪ್ರವೇಶಿಕಾ ಇರುವುದು ನಮ್ಮ ಗುರುತಿಗಾಗಿ.  ಅದು ನಾವು ಶಿಬಿರಾರ್ಥಿ ಎಂದು ಮಾನ್ಯತೆ ನೀಡುವ ಒಂದು ಪವಿತ್ರ ಸಂಕೇತ.  ಅದರ ದುರುಪಯೋಗ ಸಲ್ಲದುʼ ಎಂದು ನಯವಾಗಿಯೇ ಹೇಳಿದರು.  ನಾನು ತಕ್ಷಣ ಉಪ್ಪನ್ನು ತಟ್ಟೆಗೆ ಸುರಿದು ಪ್ರವೇಶಿಕಾವನ್ನು ಜೇಬಿನೊಳಗೆ ಇಟ್ಟುಕೊಂಡೆ.  ಮತ್ತೆಂದೂ ಆ ತಪ್ಪು ಮಾಡಲಿಲ್ಲ.  ಸಂಘದಲ್ಲಿ ಮೊದಲು ನಾನು ಕಲಿತ ಪಾಠ ಅದು.  ಆ ಪಾಠ ಕಲಿಸಿದವರು ಆಗ ಮಂಗಳೂರು ಜಿಲ್ಲಾ ಪ್ರಚಾರಕರಾಗಿದ್ದ ಶ್ರೀ ಚಂದ್ರಶೇಖರ ಭಂಡಾರಿಯವರು.

ಚಂದ್ರಶೇಖರ ಭಂಡಾರಿ ಎಂಬ ಅಷ್ಟುದ್ದದ ಹೆಸರನ್ನು ಹೇಳಿದರೆ ಅವರು ಯಾರೆಂದು ಈಗಿನವರಿಗೆ ಅರ್ಥವಾಗುವುದಿಲ್ಲ.  ಚಂದ್ರು ಅವರು ಅಥವಾ ಚಂದ್ರೂಜಿ ಎಂದರೆ ಮಾತ್ರ ಅವರಾರೆಂದು ಗೊತ್ತಾಗಬಹುದು.  ಮೊದಲಿನಿಂದಲೂ ಸಣಕಲು ಶರೀರ, ಮೆದು ಮಾತು.  ಜೋರಾಗಿ ಮಾತಾಡಿದ್ದೇ ನಾನು ಕೇಳಿಲ್ಲ.  ಶರೀರ ಸಣಕಲು, ಆದರೆ ಮನಸ್ಸು, ಬುದ್ಧಿ ಮಾತ್ರ ಖಡ್ಗದಷ್ಟು ಹರಿತ.  ಈ ಮಾತಿಗೆ ಚಂದ್ರು ಅವರು ಕಳೆದ ೬೦ ವರ್ಷಗಳಿಂದ ನಿರಂತರವಾಗಿ ಸದ್ದಿಲ್ಲದೆ ರಚಿಸಿದ ಸಂಘ ಸಾಹಿತ್ಯರಾಶಿಯೇ ನಿದರ್ಶನ.  ಸಂಘದ ಜಾಗರಣ ಪ್ರಕಾಶನ, ಸಾಹಿತ್ಯ ಸಿಂಧು, ರಾಷ್ಟ್ರೋತ್ಥಾನ ಪರಿಷತ್‌, ವಿಕ್ರಮ ವಾರಪತ್ರಿಕೆ, ಹೊಸದಿಗಂತ ದೈನಿಕ, ಉತ್ಥಾನ ಮಾಸಪತ್ರಿಕೆ, ಕಲಾದರ್ಶನ, ಧ್ಯೇಯಕಮಲ ಮತ್ತಿತರ ಹಲವಾರು ಪ್ರಕಾಶನ, ಪತ್ರಿಕೆಗಳಿಗೆ ಅವರು ಬರೆದ ಪ್ರಚಲಿತ, ಸಾಮಯಿಕ, ವೈಚಾರಿಕ  ಮಾಹಿತಿಯುಕ್ತ ಲೇಖನಗಳು ಬೆಟ್ಟದಷ್ಟು.  ಹಿಂದಿ, ಇಂಗ್ಲಿಷ್‌ ಭಾಷೆಗಳಿಂದ ಕನ್ನಡಕ್ಕೆ ತರ್ಜುಮೆ ಮಾಡಿದ ಕೃತಿಗಳು ಲೆಕ್ಕವಿಲ್ಲದಷ್ಟು.  ಕದಡಿದ ಪಂಜಾಬ್‌, ಒಪ್ಪಂದದ ಉರುಳು, ಸತ್ಯವು ಸುಳ್ಳಾದಾಗ, ಕಾಶ್ಮೀರದ ದೇವಸ್ಥಾನಗಳ ವಿಧ್ವಂಸದ ನೈಜಕತೆ (೧೯೮೪ ರಲ್ಲಿ); ನಾವೆಲ್ಲ ಕಾರಸೇವಕರೇ, ಮತಾಂತರ: ಒಂದು ಸಂವಾದ (ಪ್ರಶ್ನೋತ್ತರ, ರಾ.ಸ್ವ.ಸಂಘ: ನವದಿಗಂತದತ್ತ (೧೯೯೨-೯೩), ತುಷ್ಟೀಕರಣದ ಪ್ರಣಾಳಿಕೆಗಳು (೧೯೮೮-೮೯),ಸಾಮಾಜಿಕ ಕ್ರಾಂತಿಸೂರ್ಯ ಅಂಬೇಡ್ಕರ್‌, ರಾಷ್ಟ್ರತಪಸ್ವಿ ಶ್ರೀ ಗುರೂಜಿ(೨೦೨೨)…. ಹೀಗೆ ಚಂದ್ರಶೇಖರ ಭಂಡಾರಿ ಅನುವಾದಿಸಿದ ಕೃತಿಗಳು ಅಸಂಖ್ಯ.  ಅವರ ಹೆಸರು ಭಂಡಾರಿ.ಅವರ ಕೃತಿಗಳದ್ದೂ ಒಂದು ದೊಡ್ಡ ಭಂಡಾರವೇ.  ಎಸ್.ಗುರುಮೂರ್ತಿ, ಎಂ.ವಿ.ಕಾಮತ್‌, ಮುಜಫರ ಹುಸೇನ್‌, ಪ್ರಫುಲ್ಲ ಗೊರಾಡಿಯಾ ಜಗತ್‌ ಮೋಹನ್‌ ಝಾ, ಡಾ.ಡೇವಿಡ್‌ ಫ್ರಾಲಿ, ದತ್ತೋಪಂತ ಠೇಂಗಡಿ, ರಂಗಾಹರಿ, ಕು.ಸೀ.ಸುದರ್ಶನ್‌, ಶ್ರೀ ಗುರೂಜಿ, ಸ್ವಪನ್‌ ದಾಸ್‌ ಗುಪ್ತಾ ಮೊದಲಾದ ದಿಗ್ಗಜ ಲೇಖಕರ ಲೇಖನಗಳನ್ನು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದ ಹಿರಿಮೆ ಚಂದ್ರು ಅವರದು. 

ಜಾಗರಣ ಪ್ರಕಾಶನ, ಆಪ್ತ ಸಂವಾದ, ಸಮಾಚಾರ ಸಮೀಕ್ಷೆ, ವಿಶ್ವಸಂವಾದ ಕೇಂದ್ರ,ಕರ್ನಾಟಕ ಮೊದಲಾದ ಪರಿಕಲ್ಪನೆಗಳಿಗೆ ಮೂಲ ಪ್ರೇರಣಾಸ್ರೋತವಾಗಿದ್ದವರು ನಮ್ಮ ಚಂದ್ರು ಅವರು.  ಅವರ ಸಾಮಾಜಿಕ ಕ್ರಾಂತಿಸೂರ್ಯ ಅಂಬೇಡ್ಕರ್‌ ಕೃತಿಗೆ ಕುವೆಂಪು ಭಾಷಾಭಾರತಿ ಸಂಸ್ಥೆಯ ಪಾರಿತೋಷಕ ಕೂಡ ದೊರೆತಿರುವುದು ಚಂದ್ರು ಅವರ ಅನುವಾದ ಸಾಮರ್ಥ್ಯಕ್ಕೊಂದು ನಿದರ್ಶನ.

ನಾನು ಹೊಸ ದಿಗಂತ, ವಿಕ್ರಮ ಪತ್ರಿಕೆಗಳ ಸಂಪಾದಕನಾಗಿದ್ದಾಗ ವಿಜಯದಶಮಿ, ದೀಪಾವಳಿ, ಯುಗಾದಿ ವಿಶೇಷಾಂಕಗಳಿಗೆ ತಪ್ಪದೆ ಅವರಿಂದ ಒಂದು ವಿಶೇಷ ಲೇಖನ ಬರೆಸುತ್ತಿದ್ದೆ.  ಮೊದಮೊದಲು ʼನನಗೆ ಆಗೋಲ್ಲʼಎಂದು ನಿರಾಕರಣೆ.  ಆಮೇಲೆ ಪರಿಪರಿಯಾಗಿ ನಾನು ಕಾಡಿದ ಬಳಿಕ ʼನೋಡೋಣʼ ಎಂದಷ್ಟೇ ಪ್ರತಿಕ್ರಿಯೆ.  ಒಂದೆರಡು ದಿನಗಳಾದ ಮೇಲೆ ನನಗೆ ದೂರವಾಣಿ ಕರೆ ಮಾಡಿ ʼಲಕ್ಷ್ಮಣ, ಲೇಖನ ಸಿದ್ಧವಾಗಿದೆ, ಬಂದು ತೆಗೆದುಕೊಂಡು ಹೋಗಿʼ ಎನ್ನುತ್ತಿದ್ದರು.  ಬೇರೆಲ್ಲ ಲೇಖಕರಿಗಿಂತ ಮೊದಲು ನನ್ನ ಕೈ ಸೇರುತ್ತಿದ್ದ ಲೇಖನ ಅವರದೇ ಆಗಿರುತ್ತಿತ್ತು.  ಅಕ್ಕಿ ಕಾಳಿನಂತಹ ʼಸುಂದರʼ ಮೋಡಿ ಅಕ್ಷರದ ಆ ಲೇಖನವನ್ನು ನಾನೇ ಮುತುವರ್ಜಿವಹಿಸಿ ಡಿಟಿಪಿ ಮಾಡಿಸುತ್ತಿದ್ದೆ.  ಲೇಖನ ಬರೆದ ಮೇಲೆ ಅವರ ಷರತ್ತೆಂದರೆ: ೧. ಮೊದಲ ಪ್ರೂಫ್‌ ತೋರಿಸಬೇಕು  ೨. ಫೈನಲ್‌ ಕಾಪಿ ಕೊಡಬೇಕು. 

ಚಂದ್ರು ಕೇವಲ ಒಬ್ಬ ಅನುವಾದಕ, ಲೇಖಕ ಮಾತ್ರ ಆಗಿರಲಿಲ್ಲ.  ಅವರೊಳಗೊಬ್ಬ ಕವಿಯೂ ಇದ್ದ.  “ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯುʼ, ʼವಂದಿಸುವೆ ಭಗವಾಗುಡಿʼ, ʼಶತಶತಮಾನದ ಕುಲಷವ ಗುಡಿಸುತ ಬನ್ನಿ ತಾಯ ಉಡಿಗೆʼ ಮೊದಲಾದ ಅದ್ಭುತ, ಜನಪ್ರಿಯ ದೇಶಭಕ್ತಿ ಗೀತೆಗಳು ಅವರ ಲೇಖನಿಯಿಂದ ಹೊಮ್ಮಿವೆ.  “ಧರೆಗವತರಿಸಿದೆ ಸ್ವರ್ಗದಸ್ಪರ್ಧಿಯುʼ ಎಂಬ ಗೀತೆ ಕಾಸರಗೋಡು ಕನ್ನಡ ಶಾಲೆಗಳ ಪಠ್ಯದಲ್ಲಿ ಸೇರ್ಪಡೆಯಾಗಿತ್ತು.  ಆಕಾಶವಾಣಿಯಲ್ಲೂ ಆ ಹಾಡು ಜನಪ್ರಿಯವಾಗಿ ಮೊಳಗಿತ್ತು.  ಕನ್ನಡ ಗೀತೆಗಳ ಜೊತೆಗೆ “Come O bulky stomach Ganapathy O Lord the son of Shiva Parvathi”  ಎಂಬ ಗಣಪತಿ ಕುರಿತ ಸ್ವಾರಸ್ಯಕರ ಇಂಗ್ಲಿಷ್‌ ಭಜನೆಯನ್ನು  ಅವರು ಬರೆದಿರುವುದು ಹಲವರಿಗೆ ಗೊತ್ತಿಲ್ಲ.  ೧೯೭೧ರ ಸೋಮನಹಳ್ಳಿ ಶಿಬಿರದಲ್ಲಿ ಶ್ರೀ ಗುರೂಜಿಯವರ ಎದುರು ಈ ಹಾಡು ಮೊಳಗಿದಾಗ ಗುರೂಜಿಯವರು “ಈ ಹಾಡನ್ನು ನೀನು ೩೦ ವರ್ಷದ ಮೊದಲೇ ಬರೆಯಬೇಕಿತ್ತು” ಎಂದು ಉದ್ಗರಿಸಿದ್ದರಂತೆ!  (ಆ ಹಾಡಿನಲ್ಲಿ ನಡುವೆ  Liberate us from all difficulties ಎಂಬ ಸಾಲೊಂದು ಬರುತ್ತದೆ)

ಹಾಗೆ ನೋಡಿದರೆ ಚಂದ್ರು  ಅವರು ಸಾಹಿತಿಯಾಗಬೇಕು, ಲೇಖಕರಾಗಬೇಕು ಎಂಬ ಹಂಬಲದಿಂದ ಬರೆದವರಲ್ಲ.  ಸಾಹಿತಿಯಾಗಬೇಕೆಂಬ ಕಿಂಚಿತ್‌ ಆಸೆಯೂ ಅವರಿಗಿರಲಿಲ್ಲ.  ಆದರೆ ಸಂಘಕಾರ್ಯಕ್ಕೆ ಬರವಣಿಗೆ ಪೂರಕ, ಅನಿವಾರ್ಯ ಎನಿಸಿದ್ದರಿಂದ ಬರೆದರು, ಅನುವಾದಿಸಿದರು, ಗೀತೆ ರಚಿಸಿದರು.  ೮೭ರ ಇಳಿ ವಯಸ್ಸಿನಲ್ಲೂ  ಅವರದು ಬತ್ತದ ಲೇಖನಸ್ರೋತ.  ರಂಗಾಹರಿ ಅವರ ʼರಾಷ್ಟ್ರತಪಸ್ವಿ ಶ್ರೀ ಗುರೂಜಿʼ ಚಂದ್ರು ಅವರು ಅನುವಾದಿಸಿದ ಕೊನೆಯ ಕೃತಿ.  ಅದೊಂದು ಅನುವಾದವಾಗಿರದೆ ಸ್ವತಂತ್ರ ಕೃತಿ ಎನಿಸುವ ಮಟ್ಟಿಗೆ ಅತ್ಯಂತ ಸೊಗಸಾಗಿದೆ.  ಈಗ ಒಂದೆರಡು ವರ್ಷಗಳಿಂದ ಅವರ ಅರೋಗ್ಯ ತೀರ ಹದಗೆಟ್ಟು ಹೋಗಿತ್ತು.  ಕಿವಿ ಕೇಳಿಸುತ್ತಿರಲಿಲ್ಲ. ಶರೀರಕ್ಕೆ ಸ್ಥಿರತೆ ಇರಲಿಲ್ಲ. ಆತ್ಮೀಯರು ಸಿಕ್ಕಿದಾಗ  ‘Mind wills but the flesh is weak’        ಎಂದು ತಮ್ಮ ಸಂಕಟವನ್ನು ತಮಾಷೆಯಾಗಿ ಹೇಳುತ್ತಿದ್ದರು.  ಶರೀರ ದುರ್ಬಲವಾಗಿದ್ದರೂ ಅವರ ಇಚ್ಛಾಶಕ್ತಿ ಪ್ರಖರವಾಗಿತ್ತು. 

೧೯೬೧ರಿಂದಲೂ ಸಂಘದ ಪ್ರಚಾರಕರಾಗಿದ್ದ ಚಂದ್ರಶೇಖರ ಭಂಡಾರಿಯವರಂಥ ಧ್ಯೇಯನಿಷ್ಠ, ಪ್ರಾಮಾಣಿಕ, ಪಾರದರ್ಶಕ ಪ್ರಚಾರಕರ ಸಂಖ್ಯೆ ವಿರಳವೆಂದೇ ಹೇಳಬಹುದು.  ಕೆಲವು ವರ್ಷಗಳ ಹಿಂದೆ ಅಖಿಲ ಭಾರತ ಪ್ರತಿನಿಧಿ ಸಭಾ ಬೈಠಕ್‌ ಮುಗಿಸಿಕೊಂಡು ಅವರೊಡನೆ ನಾನು ದೆಹಲಿಯ ರಾಜೆಂದ್ರ ನಗರದಲ್ಲಿರುವ ಜಿ.ಎಸ್.ಬಿಅತಿಥಿಗೃಹದಲ್ಲಿ ಉಳಿದುಕೊಂಡಿದ್ದೆ.  ಮರುದಿನ ನಾನು ತುರ್ತಾಗಿ ಬೆಂಗಳೂರಿಗೆ ಹೋಗಬೇಕಾಗಿತ್ತು (ಹೊಸದಿಗಂತದ ವಿಶೇಷಾಂಕದ ತುರ್ತು ಕೆಲಸವಿತ್ತು).  ಹಾಗಾಗಿ ನಾನು ದೆಹಲಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ಹೊರಟಿದ್ದೆ.  ಚಂದ್ರು ಅವರಿಗೆ ಆಗಲೇ ೭೦ ದಾಟಿತ್ತು.  ನನ್ನ ಜೊತೆಗೆ ಅವರನ್ನೂ ವಿಮಾನದಲ್ಲಿ ಬೆಂಗಳೂರಿಗೆ ಕಳಿಸಬೇಕೆಂದು ಕಾರ್ಯಕರ್ತರು ಯೋಚಿಸಿದ್ದರು.  ಆದರೆ ಚಂದ್ರು ಅವರು ಆ ಯೋಜನೆಗೆ ಸುತರಾಂ ಒಪ್ಪಲಿಲ್ಲ.  “ನನಗೇನೂ ಅಂಥ ತುರ್ತು ಕೆಲಸಗಳಿಲ್ಲ, ನಾನು ರೈಲಿನಲ್ಲೇ ಬೆಂಗಳೂರಿಗೆ ಹೋಗುವೆ” ಎಂದರು.  ಹಾಗೆಯೇ ಮಾಡಿದರು.  ಯಾವ ಆಸೆ, ಆಮಿಷ, ಆಕರ್ಷಣೆಗೂ ಒಳಗಾಗದಂತೆ ತಮ್ಮನ್ನು ಪರಿಶುದ್ಧ ಸ್ಥಿತಿಯಲ್ಲಿ ಅವರು ಕಾಪಿಟ್ಟುಕೊಂಡಿದ್ದರು.  “ಮಣಿಯದಿಹ ಮನವೊಂದು/ ಸಾಧಿಸುವ ಹಠವೊಂದು /ನಿಜದ ನೇರಕೆ ನಡೆವ ನಿಶ್ಚಲತೆಯೊಂದು/ಮರುಕಕ್ಕೆ ಪ್ರೇಮಕ್ಕೆ ಚಿರತೆರೆದ ಎದೆಯೊಂದು/ ಅನ್ಯಾಯಕೆಂದೆಂದು ಬಾಗದೆಚ್ಚರವೊಂದು” ಎಂಬ ವೀ.ಸೀ. ಅವರ ಕವನದ ಸಾಲುಗಳಿಗೆ ಚಂದ್ರು ಅವರ ಬದುಕು ಅನ್ವರ್ಥಕವಾಗಿತ್ತು. 

ಅನುಪಮ ಸಮಾಜ ಸೇವಕ, ಲೇಖಕ, ಕವಿ, ಸಾಹಿತಿ, ಚಿಂತಕರಾಗಿದ್ದ ಚಂದ್ರಶೇಖರ ಭಂಡಾರಿ ಅವರ ಇಂದು ನಮ್ಮೊಂದಿಗಿಲ್ಲ (ನಿಧನ: ೩೦-೧೦-೨೦೨೨).  ಆದರೆ ಅವರು ಬಿಟ್ಟುಹೋದ ಆದರ್ಶ, ಉಜ್ವಲ ಮೇಲ್ಪಂಕ್ತಿ, ಸಾಧಿಸುವ ಹಠ, ಅನ್ಯಾಯಕ್ಕೆ ಎಂದಿಗೂ ಬಾಗದೆಚ್ಚರದ ನಡವಳಿಕೆ, ಮರುಕಕ್ಕೆ, ಪ್ರೇಮಕ್ಕೆ ಚಿರತೆರೆದ ಎದೆ-ಸಂಘದ ಸ್ವಯಂಸೇವಕರೆಲ್ಲರಿಗೂ ದಾರಿದೀಪ, ಧ್ಯೇಯದೀಪ.

ಸಂಘದ ಭದ್ರವಾದ ಹಳೆಯ ಕೊಂಡಿಯೊಂದು ಕಳಚಿಹೋಯಿತಲ್ಲ ಎಂಬ ದುಃಖವನ್ನು ಅರಗಿಸಿಕೊಳ್ಳುವುದು ಮಾತ್ರ ಅಷ್ಟು ಸುಲಭದ ಮಾತಲ್ಲ.

ನಾರಾಯಣ ಶೇವಿರೆ, ಅಖಿಲ ಭಾರತೀಯ ಸಾಹಿತ್ಯ ಪರಿಷತ್

ಸಂಘಟಕನೂ ಲೇಖಕನೂ

ರಾಷ್ಟ್ರೀಯ ಸ್ವಯಂಸೇವಕ ಸಂಘದ ವಲಯದಲ್ಲಿ ಚಂದ್ರೂಜೀ ಎಂದೇ ಗೌರವಕ್ಕೆ ಪಾತ್ರರಾಗಿ ಸಂಘದ ಪ್ರಚಾರಾಕರಾಗಿದ್ದ ಚಂದ್ರಶೇಖರ ಭಂಡಾರಿಯವರು ಸಂಘಟಕರಾಗಿ, ಲೇಖಕರಾಗಿ ಸಂಘಕಾರ್ಯವನ್ನು ಕರ್ನಾಟಕದಲ್ಲಿ ಬೆಳೆಸಿದವರು.

ತಮ್ಮ ಬದುಕಿನ ಅಂತಿಮ ಘಟ್ಟದಲ್ಲಿ ಅವರು ನಿರ್ವಹಿಸಿದ ಜವಾಬ್ದಾರಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನದು. ಆಗಲೇ ಅವರು ಹೆಚ್ಚು ಪ್ರವಾಸ ಮಾಡಲಾಗದ ಶಾರೀರಿಕ ಮಿತಿಯನ್ನುಳ್ಳವರಾಗಿದ್ದರು. ಹಾಗಿದ್ದೂ ಸಂಘ ಸೂಚಿಸಿದ ಏಕೈಕ ಕಾರಣಕ್ಕಾಗಿ ಅವರು; ಎಲ್ಲರ ಕೈಯಲ್ಲೂ ಚಲದೂರವಾಣಿ ಇದ್ದಂಥ ಸನ್ನಿವೇಶದಲ್ಲಿ ಅದಿಲ್ಲದೆಯೇ ಎರಡು ಬಾರಿ ‘ಅಭಾಸಾಪ’ದ ಬೈಠಕ್ ಮತ್ತು ಕಾರ್ಯಕ್ರಮ ನಿಮಿತ್ತ ಭಾರತದ ಉತ್ತರಕ್ಕೆ ಪ್ರವಾಸ ಮಾಡಿದ್ದರು.

ಕಷ್ಟಸಾಧ್ಯ ಸಂದರ್ಭದಲ್ಲಿಯೂ ನೀಡಲ್ಪಟ್ಟ ಜವಾಬ್ದಾರಿಯನ್ನು ಯಾವ ಸ್ಫೂರ್ತಿಯಿಂದ ನಿರ್ವಹಿಸಬೇಕೆಂಬುದಕ್ಕೆ ಚಂದ್ರೂಜೀ ಒಂದು ಉತ್ತಮ ದೃಷ್ಟಾಂತವಾಗಬಲ್ಲರು. *ಮೊದಲ ಘಟಕ*

‘ಅಭಾಸಾಪ’ದ ಮೊದಲ ಘಟಕ ಪ್ರಾರಂಭವಾದುದು 2014ರ ವ್ಯಾಸಹುಣ್ಣಿಮೆಯ ಸಂದರ್ಭದಲ್ಲಿ, ಬೆಂಗಳೂರಿನಲ್ಲಿ. ಅಂದು ಶೇಷಾದ್ರಿಪುರಂನಲ್ಲಿರುವ ಯಾದವಸ್ಮೃತಿಯಲ್ಲಿ ಹತ್ತಾರು ಸಹೃದಯರ ನಡುವೆ ನ. ಕೃಷ್ಣಪ್ಪನವರಿಂದ ಉದ್ಘಾಟನೆಯಾದ ಈ ಘಟಕದ ಅಧ್ಯಕ್ಷರಾಗಿ ನಿಯುಕ್ತರಾದವರು ಆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿಗಳಾದ ಬಾಬು ಕೃಷ್ಣಮೂರ್ತಿ ಅವರು. ಕರ್ನಾಟಕದ ‘ಅಭಾಸಾಪ’ದ ಮಟ್ಟಿಗೆ ಐತಿಹಾಸಿಕ ಎನ್ನಬಹುದಾದ ಈ ಮೊದಲ ಘಟಕದ ಉದ್ಘಾಟನಾ ಕಾರ್ಯಕ್ರಮದ ಹಿಂದಿದ್ದ ಪ್ರೇರಕಶಕ್ತಿ ಚಂದ್ರುಜಿಯವರೇ. ಆಗ ಅವರಿಗೆ ಸಹಾಯಕರಾಗಿ ಇದ್ದವರು ಶಾಂತಾರಾಮ್ ಅವರು.

ಮುಂದೆ ಆ ಜವಾಬ್ದಾರಿಯಿಂದ ಮುಕ್ತಿ ಸಿಕ್ಕಿದ ಬಳಿಕ ಅದನ್ನು ಅತಿಶೀಘ್ರವಾಗಿ ತಮ್ಮ ಉತ್ತರಾಧಿಕಾರಿಯ ಹೆಗಲಿಗೇರಿಸಿ, ಸಂಬಂಧಿಸಿದ ಕಾಗದಪತ್ರಗಳು, ಪುಸ್ತಕಗಳು ಇತ್ಯಾದಿ ಎಲ್ಲವನ್ನೂ ಹಸ್ತಾಂತರಿಸಿ ತಾವು ನಿರಾಳವಾದಾಗ ಅವರ ಮುಖದಲ್ಲಿ ಭಾರ ಇಳಿಸಿಕೊಂಡ ಒಂದು ಭಾವ ಎದ್ದುಕಾಣುತ್ತಿತ್ತು.

ಜವಾಬ್ದಾರಿ ನಿಭಾಯಿಸಲೂ ಸಿದ್ಧ, ಅದರಿಂದ ಮುಕ್ತವಾಗುವ ಸಂದರ್ಭ ಬಂದಾಗ ಕಳಚಿಕೊಳ್ಳಲೂ ಸಿದ್ಧ ಎಂಬ ಯೋಗದ ಸ್ಫೂರ್ತಿಯಂಥದ್ದೊಂದು ಅವರ ನಿಲುವಿನಲ್ಲಿ ಹಾಗೇ ಹಾದುಹೋದಂತೆ ಕಾಣಸಿಕ್ಕರೆ ಅಚ್ಚರಿಪಡಬೇಕಿಲ್ಲ. *ಕೈದೀವಿಗೆ*

ಈಗ ಹರಿಹರಪುರದ ಪ್ರಬೋಧಿನೀ ಗುರುಕುಲದ ವ್ಯವಸ್ಥಾಪಕರಾಗಿರುವ ಉಮೇಶರು ‌ಹಿಂದೊಮ್ಮೆ ಕಡೂರಿನ ವಿಶ್ವಭಾರತೀ ಶಾಲೆಯ ಆಡಳಿತಾಧಿಕಾರಿಯಾಗಿ ಒಂದಷ್ಟು ಕಾಲ ಕಾರ್ಯನಿರ್ವಹಿಸಿದ್ದರು. 1994ರಲ್ಲಿ ಅಲ್ಲಿಯ ಏಳನೆಯ ತರಗತಿಯ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಬೇಕಿತ್ತು. ಬೆಂಗಳೂರಿಗೆ ಬಂದಿದ್ದಾಗ ಈ ವಿಷಯವನ್ನು ಅರುಹಿ, ಮಕ್ಕಳಿಗೆ ಏನು ಮಾರ್ಗದರ್ಶನ ಮಾಡಬಹುದೆಂದು ಅವರು ಚಂದ್ರೂಜಿಯವರನ್ನು ಕೇಳಿದರು. ಅದಕ್ಕೆ ಸೂಕ್ತ ಸಲಹೆಗಳನ್ನು ನೀಡಿ ಏನೇನು ವಿಷಯಗಳನ್ನು ಪ್ರಸ್ತಾಪಿಸಬಹುದೆಂದು ವಿವರಿಸಿ ಒಂದು ಸಣ್ಣ ಉಪನ್ಯಾಸವನ್ನೇ ಚಂದ್ರೂಜೀ ನೀಡಿದ್ದರು. ಅಂದು ಅವರು ಉಲ್ಲೇಖಿಸಿದ ಅಂಶಗಳನ್ನು ಇಲ್ಲೀಗ ಸಂಕ್ಷಿಪ್ತವಾಗಿ ಉಲ್ಲೇಖಿಸುವುದಾದರೆ; ‘ಶಾಲೆಯಲ್ಲಿ ಅಧ್ಯಾಪಕರು ಕೈಮರ ಇದ್ದಂತೆ. ಶಿಷ್ಯರ ಬದುಕಿಗೆ ಅವರು ಕೈದೀವಿಗೆ ರೀತಿಯಲ್ಲಿ ಇರುತ್ತಾರೆ. ಜೀವನಪೂರ್ತಿ ಕೈಹಿಡಿದು ನಡೆಸುವ ಬದಲು ಕೈತೋರಿ ಮಾರ್ಗದರ್ಶನ ಮಾಡುತ್ತಾರೆ. ಶಾಲೆಯಲ್ಲಿ ಅಧ್ಯಾಪಕರು ಕಲಿಸುವುದರ ಜತೆಗೆ ಜೋರುಮಾಡಿರಬಹುದು, ವಾತ್ಸಲ್ಯ ತೋರಿರಬಹುದು, ಇವೆಲ್ಲವೂ ಶಿಷ್ಯರ ವಿಕಾಸಕ್ಕಾಗಿಯೇ ಎಂದು ಭಾವಿಸಬೇಕು.’

ಅಧ್ಯಾಪಕರ ಕೈದೀವಿಗೆಯಂತೆ; ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕಾದ ಉಮೇಶರಿಗೆ ಚಂದ್ರು ಅವರ ಒಂದು ಕೈದೀವಿಗೆ ಒದಗಿತ್ತು. ಅಂದಹಾಗೆ ಚಂದ್ರು ಅವರು ಪ್ರಚಾರಕರಾಗಿ ಹೊರಡುವ ಮುನ್ನ ಶಾಲಾ ಅಧ್ಯಾಪಕರಾಗಿದ್ದರು.

ಕೆಲವೊಮ್ಮೆ ಅವರ ಕಾರ್ಯದ ಶೈಲಿಯಲ್ಲಿ ಒಬ್ಬ ಕೈಹಿಡಿದು ನಡೆಸುವ ಅಧ್ಯಾಪಕರು ಇರುತ್ತಿದ್ದರು, ಕೆಲವೊಮ್ಮೆ ವಿಚಾರಿಸಿ ತಿಳಿಹೇಳುವ ಮುಖ್ಯೋಪಾಧ್ಯಾಯರು ಇರುತ್ತಿದ್ದರು.

ಕಾಳಜಿಯ ವಿಚಾರಣೆ

ತಮ್ಮ ಬಳಿಗೆ ಬಂದವರನ್ನು ಗುರುತು ಹಿಡಿದು ಮಾತಾಡಿಸಿ ವಿಚಾರಿಸುವ ಅವರದೇ ಒಂದು ವಿಶಿಷ್ಟ ಶೈಲಿ ಇತ್ತು. ಎಲ್ಲರಿಗೂ ಆಪ್ತವೆನಿಸುವ ಶೈಲಿ. ಈಚೆಗೆ ಅವರ ಅನಾರೋಗ್ಯದ ದಿನಗಳಲ್ಲಿ ಒಮ್ಮೆ ಉಮೇಶರು ಅವರನ್ನು ಭೇಟಿಯಾಗಲೆಂದು ಹೋಗಿದ್ದರು. ‘ಗುರುಕುಲ ಹೇಗೆ ನಡೆದಿದೆ, ಗುರುಕುಲದ ಮಕ್ಕಳು ಹೇಗಿದ್ದಾರೆ’ ಎಂದೆಲ್ಲ ಅವರನ್ನು ವಿಚಾರಿಸಿದರು.

ಅಂಥ ತೊಂಭತ್ತರ ಇಳಿವಯಸ್ಸಿನಲ್ಲಿಯೂ ಯಾರ಼್ಯಾರ ಜವಾಬ್ದಾರಿ ಏನೇನು ಇತ್ಯಾದಿಗಳನ್ನು ತಿಳಿದಿದ್ದ ಅವರ ನೆನಪಿನಶಕ್ತಿ ಅಚ್ಚರಿಯದಾಗಿತ್ತು ಮತ್ತು ಎಲ್ಲರನ್ನೂ ವಿಚಾರಿಸಿಕೊಳ್ಳುವ ಅವರ ಕಾಳಜಿ ಅನುಕರಣೀಯವಾಗಿತ್ತು.

ಕೇಶವಕೃಪಾದ ವಾಚನಾಲಯಕ್ಕೆ ಬಂದು ಪತ್ರಿಕೆಗಳನ್ನು ಓದುವ ಸಂದರ್ಭದಲ್ಲಿ ಅಲ್ಲಿರುವ ಹೊಸಬರನ್ನು ಪರಿಚಯಿಸಿಕೊಂಡು ಅವರೆಲ್ಲರನ್ನು ಕಾಳಜಿಯಿಂದ ಮಾತನಾಡಿಸುವ ಅವರ ಸ್ವಭಾವ ನಮಗೆಲ್ಲರಿಗೂ ಮೇಲ್ಪಂಕ್ತಿಯಂತೆ ಇತ್ತು.

ಸೃಷ್ಟಿಶೀಲ ಅನುವಾದಕ

ಬರವಣಿಗೆಯಲ್ಲಿ ಅವರದೇ ಆದ ಒಂದು ಶೈಲಿ ಸಿದ್ಧಗೊಂಡಿತ್ತು. ಎಲ್ಲರಿಗೂ ಅವರದೇ ಆದ ಒಂದು ಶೈಲಿ ಇದ್ದೇ ಇರುತ್ತದೆ ಅನ್ನಿ. ಆದರೆ ಚಂದ್ರೂಜಿಯವರ ಶೈಲಿ ಎಷ್ಟು ಸರಳವೋ ಅಷ್ಟೇ ಗಂಭೀರವೂ ಆಗಿ ತೀರಾ ವಿಶಿಷ್ಟವೆನಿಸುವ ಬಗೆಯದು. ಯಾವುದೇ ಕಠಿನ ಪದಗಳ ಬಳಕೆ ಅತಿಯಾಗಿಲ್ಲದೆ ಅದು ಎಲ್ಲರಿಗೂ ಅರ್ಥವಾಗುವಷ್ಟು ಸರಳ. ವ್ಯಾಕರಣನಿಷ್ಠ ಪದಬಳಕೆ ವಾಕ್ಯರಚನೆಗಳಿಂದಾಗಿ ತೀರಾ ಹಗುರವೆನಿಸದೆ ವಿಷಯದ ಗಾಂಭೀರ್ಯಕ್ಕೆ ಭಂಗಬರದಂಥ ಗಂಭೀರತೆ. ಗಂಭೀರ ವಿಷಯದ ಓದುಗನಿಗೆ ಖುಷಿ ನೀಡುವ ಸೊಗಸಾದ ಓದು ಅವರ ಬರಹಗಳಿಂದ ಲಭ್ಯಸಾಧ್ಯ. ಅದೇ ಸಮಯದಲ್ಲಿ ಒಬ್ಬ ಸಾಮಾನ್ಯ ಓದುಗನನ್ನು ಗಂಭೀರ ವಿಚಾರದೆಡೆಗೆ ಕೊಂಡೊಯ್ಯುವ ಕಾರ್ಯವನ್ನು ಅವರ ಬರವಣಿಗೆ ಸಹಜವಾಗಿ ಸಾಧಿಸಿಬಿಡುತ್ತದೆ.

ಅವರು ಎಷ್ಟರ ಮಟ್ಟಿಗೆ ಸ್ವತಂತ್ರ ಲೇಖಕರೋ ಅಷ್ಟರ ಮಟ್ಟಿಗೆ ಅನುವಾದಕರೂ ಕೂಡಾ. ಅವರ ಅನುವಾದವನ್ನು ಕೇವಲ ಅನುವಾದವೆಂದು ಓದುವುದರಲ್ಲಿಯೇ ಒಂದು ಸೊಗಸಿದೆ. ಜತೆಜತೆಗೆ ಒಂದು ಮೂಲ ಓದಿನ ಖುಷಿಯೂ ಆಗುತ್ತಹೋಗುತ್ತದೆ. ಅಷ್ಟರ ಮಟ್ಟಿಗೆ ಅವರು ಅನುವಾದದಲ್ಲಿಯೂ ಸೃಷ್ಟಿಶೀಲರು.

ವಿಮರ್ಶೆಯ ಭಾಷ್ಯ

ಅವರೊಳಗೊಬ್ಬ ಉತ್ತಮ ವಿಮರ್ಶಕ ಮನೆಮಾಡಿದ್ದ. ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದು ತಿನ್ನಿಸುವ ಬಗೆಯಲ್ಲಿ ಆತ ಓದುಗನಲ್ಲಿ ಒಂದು ಅರಿವಿನ ಭಾವವನ್ನು ಉಂಟುಮಾಡುತ್ತಿದ್ದ.

‘ಕಾರ್ಗಿಲ್ ಕಂಪನ’ ಪುಸ್ತಕದಲ್ಲಿ ಅವರ ವಿಮರ್ಶಾಸಾಮರ್ಥ್ಯ ಎಂತಹುದೆಂಬ ಒಂದು ಆಮೂಲಾಗ್ರ ಚಿತ್ರಣ ಲಭಿಸುತ್ತದೆ. ಅದು ಹೇಳಿಕೇಳಿ ಸಮಸಾಮಯಿಕವಾದ ಒಂದು ಮಾಹಿತಿಪೂರ್ಣ ಪುಸ್ತಕ. ಯುದ್ಧದ ವಾರ್ತೆ ರಮ್ಯವೇ. ಆ ಪುಸ್ತಕದ ಓದು ಅದಕ್ಕಾಗಿ ಖುಷಿಕೊಡುತ್ತದೆ. ಆದರೆ ಅದರಲ್ಲಿರುವ ಚಂದ್ರೂಜಿಯವರ ಸುದೀರ್ಘ ಲೇಖನ ಬೇರೆಯದೇ ಆದ ಒಂದು ಓದಿನ ಖುಷಿಯನ್ನು ಕೊಡುತ್ತಹೋಗುತ್ತದೆ. ಅದರಲ್ಲಿ ಮಾಹಿತಿಯನ್ನು ವಿಮರ್ಶಿಸುತ್ತ ಹೋಗುವ ಪರಿ ಅಂಥದ್ದಿದೆ. ಎಲ್ಲಿಯೂ ಸಂತುಲನ ತಪ್ಪದ, ಯುದ್ಧದಂಥ ವಿಷಯವೇ ಆದರೂ ಇನಿತೂ ಉದ್ವೇಗಕ್ಕೆ ಒಳಗಾಗದ ವಿಮರ್ಶೆ. ವಿಮರ್ಶೆಗೇ ಒಂದು ಭಾಷ್ಯ ಬರೆದಂತಿರುವ ವಿಮರ್ಶೆ.

ಅವರ ಬೌದ್ಧಿಕ ಭಾಷಣಗಳು ಕೂಡಾ ಎಲ್ಲರನ್ನೂ ಚಿಂತನೆಗೆ ಹಚ್ಚುವಂತೆ ವಿಮರ್ಶೆಯಿಂದ ಕೂಡಿರುತ್ತಿದ್ದುವು.

ವಿಮರ್ಶಕನ ಕಾರ್ಯ

ಒಮ್ಮೆ ಮೂಡುಬಿದಿರೆಯಲ್ಲಿ ನಡೆದ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಶಿಕ್ಷಾ ವರ್ಗವೊಂದರಲ್ಲಿ ‘ವಂದೇಮಾತರಂ’ ವಿಷಯದ ಮೇಲೆ ಉಪನ್ಯಾಸವಿತ್ತು. ಸಾಮಾನ್ಯವಾಗಿ ಈ ವಿಷಯದ ಮೇಲೆ ಮಾತಾಡುವವರು ಭಾವನೆಗಳನ್ನು ವಿಕಸಿಸುವ ಬಗೆಯಲ್ಲೇ ಮಾತಾಡುತ್ತಾರೆ. ಅದು ಬೇರೆ ಅಂಥದ್ದೇ ವಿಷಯವೆನ್ನಿ. ಅಂದು ಉಪನ್ಯಾಸವಿದ್ದುದು ಚಂದ್ರು ಅವರದು. ಅವರಂತೂ ಭಾವನಾತ್ಮಕವಾಗಿ ಮಾತಾಡುವವರಲ್ಲ. ಅವರು ಈ ವಿಷಯದ ಮೇಲೆ ಏನು ಮಾತಾಡಬಹುದು ಎಂಬ ಕುತೂಹಲವೂ ಇತ್ತು, ಬರಿಯ ಇತಿಹಾಸ ಹೇಳಿ ಎಲ್ಲಿ ರಸಹೀನವಾಗುವುದೋ ಎಂಬ ಆತಂಕವೂ ಇತ್ತು. ಆದರೆ ಈಯೆಲ್ಲ ಊಹೆಗಳನ್ನು ಧೂಳೀಪಟಗೊಳಿಸಿದ ಅವರ ಉಪನ್ಯಾಸವು ಯಾವುದೇ ಭಾವುಕತೆಯ ಹಿಂದೂ ಓಡದೆ, ಯಾವುದೇ ಬಗೆಯಲ್ಲಿ ಮಾಹಿತಿಗಳಿಂದ ಒಣಒಣವೆನಿಸದೆ ತರುಣರೂ ಆಲಿಸುವಂತೆ ಸೊಗಸಾದ ವಿಮರ್ಶೆಯೊಂದಿಗೆ ಮೂಡಿಬಂದು ಎಲ್ಲರನ್ನೂ ಚಿಂತನೆಗೆ ಹಚ್ಚುವ ಕೆಲಸವನ್ನು ಯಶಸ್ವಿಯಾಗಿ ಮಾಡಿತು.

ಸಂಘದ ಶಾಖೆಗಳಲ್ಲಿ ತಿಂಗಳಿಗೊಮ್ಮೆ ‘ಸಮಾಚಾರ ಸಮೀಕ್ಷೆ’ ಎಂಬ ಒಂದು ಸುದ್ದಿವಿಶ್ಲೇಷಣೆಯ ಕಾರ್ಯಕ್ರಮ ಇರುತ್ತದೆ. ಆಯಾ ಸಂದರ್ಭದ ರಾಷ್ಟ್ರೀಯ ಇಲ್ಲವೇ ಸಾಮಾಜಿಕ ಮಹತ್ತ್ವದ ಸುದ್ದಿಯೊಂದನ್ನು ಆಯ್ಕೆಮಾಡಿ ಅದರ ಕುರಿತಾದ ಸ್ವಯಂಸೇವಕರ ಅರ್ಥಾತ್ ರಾಷ್ಟ್ರೀಯರ ದೃಷ್ಟಿಕೋನ ಹೇಗಿರಬೇಕು ಎಂಬುದನ್ನು ಚರ್ಚೆ ಇಲ್ಲವೇ ಕಿರುಉಪನ್ಯಾಸದ ಸ್ವರೂಪದಲ್ಲಿ ಸ್ಪಷ್ಟಪಡಿಸಿಕೊಳ್ಳುವ ಬಗೆಯ ಕಾರ್ಯಕ್ರಮ ಅದು. ಚಂದ್ರೂಜಿಯವರು ಪ್ರಚಾರಪ್ರಮುಖರಾದ ಬಳಿಕ ಈ ಕಾರ್ಯಕ್ರಮಕ್ಕೆ ಒಂದು ಸಿದ್ಧಸ್ವರೂಪವನ್ನೂ ಎಲ್ಲರೂ ಒಂದೇ ಸುದ್ದಿ ಹಾಗೂ ಸಮಾನ ದೃಷ್ಟಿಕೋನವುಳ್ಳ ವಿಚಾರವನ್ನೂ ನೀಡುವ ಸಲುವಾಗಿ ಎಲ್ಲ ಶಾಖೆಗಳಿಗೆ ‘ಸಮಾಚಾರ ಸಮೀಕ್ಷೆ’ ಎಂಬ ಶೀರ್ಷಿಕೆಯಲ್ಲಿ ವಿವರಗಳನ್ನು ನೀಡಲು ಉದ್ಯುಕ್ತರಾದರು. ಅದನ್ನು ಸಿದ್ಧಪಡಿಸಲು ಮೂರ್ನಾಲ್ಕು ಕಾರ್ಯಕರ್ತರ ಒಂದು ಟೋಳಿ. ಅವರು ತಿಂಗಳಿಗೊಮ್ಮೆ ಸೇರಿ ಸುದ್ದಿಯ ಕುರಿತು ಚರ್ಚಿಸಿ ಅದರ ಆಧಾರದಲ್ಲಿ ಒಬ್ಬರು ಅದನ್ನು ಸಮೀಕ್ಷೆಯಾಗಿ ಬರಹರೂಪಕ್ಕಿಳಿಸುತ್ತಾರೆ. ಆ ಬರೆಹ ಮತ್ತೊಮ್ಮೆ ಚಂದ್ರೂಜಿಯವರಿಂದ ಒಪ್ಪಿಗೆ ಪಡಕೊಂಡು ನೂರಾರು ಪ್ರತಿಗಳಾಗಿ ಎಲ್ಲ ಜಿಲ್ಲೆಗಳಿಗೆ ಹೋಗಿ ಚರ್ಚೆಯ ಸ್ವರೂಪದಲ್ಲಿ ಪ್ರತಿ ಸ್ವಯಂಸೇವಕನನ್ನೂ ತಲಪುತ್ತದೆ. ಇದು ವ್ಯವಸ್ಥೆ.

ಅವರೊಳಗಿದ್ದ ವಿಮರ್ಶಕ ಎಲ್ಲರೊಳಗಿದ್ದ ವಿಮರ್ಶಕನನ್ನು ಬಡಿದೆಬ್ಬಿಸಿದ ಪರಿ ಹೀಗೆ!

ಭಾವಜೀವಿ

ಹಾಗೆಂದು ಅವರನ್ನು ಭಾವುಕರಲ್ಲದ ಜೀವಿ ಎಂದು ಪರಿಗಣಿಸಿದರೆ ತಪ್ಪಾಗುತ್ತದೆ. ಅವರೊಳಗೊಬ್ಬ ವಿಮರ್ಶಕ ಇದ್ದಂತೆ ಒಬ್ಬ ಭಾವಜೀವಿಯೂ ಸಕ್ರಿಯನಿದ್ದ. ಈ ಭಾವಜೀವಿ ನಾನಾ ಬಗೆಗಳಲ್ಲಿ ತೆರೆದುಕೊಳ್ಳುತ್ತಿದ್ದ. ಅಪರೂಪಕ್ಕೆ ಆತ ಕವಿಯಾಗಿ ಪ್ರಕಟಗೊಳ್ಳುತ್ತಿದ್ದ. ಅದರ ಪರಿಣಾಮವಾಗಿ ಅವರಿಂದ ಬೆರಳೆಣಿಕೆಯದೇ ಆದರೂ ಉತ್ಕೃಷ್ಟ ಕವಿತೆಗಳು ಹೊರಹೊಮ್ಮಿವೆ. ಆ ಭಾವಜೀವಿ ಕೆಲವೊಮ್ಮೆ ಕಥೆಗಾರನಾಗಿ ಪ್ರಕಟಗೊಳ್ಳುತ್ತಿದ್ದ. ಶಾಖೆಗಳಲ್ಲಿ ಅವರು ಮಕ್ಕಳಿಗೆ ಹೇಳುವ ಕಥೆಯ ಸೊಗಸೇ ಬೇರೆ ಬಿಡಿ. ಅಷ್ಟು ಉತ್ತಮವಾಗಿ ಕಥೆಹೇಳುವವರು ಅವರು. ಅಂಬೇಡ್ಕರ್ ಬಗ್ಗೆ ವಿಮರ್ಶೆಯನ್ನೂ ಬರೆದಿದ್ದಾರೆ, ಕಥೆಯನ್ನೂ ಬರೆದಿದ್ದಾರೆ. ಭಾರತ ಭಾರತಿ ಪುಸ್ತಕ ಸರಣಿಗೂ ಬರೆದಿದ್ದಾರೆ.

ಕೆಲವೊಮ್ಮೆ ಅವರೊಳಗಿನ ಭಾವಜೀವಿ ಹಾಸ್ಯಗಾರನಾಗಿ ಅಭಿವ್ಯಕ್ತಗೊಳ್ಳುತ್ತಿದ್ದ!

ಕೇಶವಕೃಪಾದಲ್ಲಿ ಒಮ್ಮೆ ಇಬ್ಬರು ಪ್ರಚಾರಕರು ಊಟಮಾಡುತ್ತ ಪರಸ್ಪರ ಪರಿಚಯಮಾಡಿಕೊಂಡು ಮಾತನಾಡಿಕೊಳ್ಳುತ್ತಿದ್ದರು. ಒಬ್ಬರು ಹೊಸದಾಗಿ ಪ್ರಚಾರಕರಾದವರು. ಮತ್ತೊಬ್ಬರು ಹಳಬರು. ಮೊದಲ ಭೇಟಿ. ಮಾತಾಡುತ್ತ ಊರು ಇತ್ಯಾದಿಗಳನ್ನು ಕೇಳುತ್ತ ಅವರಿಬ್ಬರಿಗೂ ತಾವು ಸಂಬಂಧಿಕರೆಂದು ಗೊತ್ತಾಯಿತು. ಅವರಿಬ್ಬರ ಮಾತುಕತೆಯು ಎದುರುಗಡೆ ಊಟಮಾಡುತ್ತಿದ್ದ ಚಂದ್ರು ಅವರ ಕಿವಿಗೂ ಬೀಳುತ್ತಿತ್ತು. ಆಗ ಅವರೇನೂ ಪ್ರತಿಕ್ರಿಯೆ ನೀಡಿರಲಿಲ್ಲ. ಆಮೇಲೆ ಅನೌಪಚಾರಿಕವಾಗಿ ಸೇರುವಾಗ “ಇವರಿಬ್ಬರು ಸಂಘದ ಪ್ರಚಾರಕರಾದ ಮೇಲೆ ಸಂಬಂಧಿಕರಾದರು” ಎಂದು ಹಾಸ್ಯದ ಧಾಟಿಯಲ್ಲಿ ಹೇಳಿ ಅವರು ಎಲ್ಲರನ್ನೂ ನಗಿಸಿದ್ದೇ ನಗಿಸಿದ್ದು.

ಅವರ ಹಾಸ್ಯವೂ ವೈಶಿಷ್ಟ್ಯವುಳ್ಳದ್ದೇ. ಅದರಲ್ಲಿ ಒಂದು ಚಂದ್ರೂಜಿ ಛಾಪು ಇದ್ದೇ ಇರುತ್ತಿತ್ತು.

ಹೀಗೆ ಚಂದ್ರೂಜೀ ಬಗ್ಗೆ ಹೇಳಿದಷ್ಟು ಅವರ ಕುರಿತ ವೈಶಿಷ್ಟ್ಯಗಳ ಮಾಹಿತಿ ಒರತೆಯಂತೆ ಒಸರುತ್ತಿರುತ್ತದೆ. ಅವರೊಬ್ಬ ಹಲವು ವೈಶಿಷ್ಟ್ಯಗಳ ಮೂಟೆಯೇ ಹೌದು.

ಅಜ್ಜಂಪುರ ಮಂಜುನಾಥ್‌,ಹಿರಿಯ ಲೇಖಕರು,ಅನುವಾದಕರು

ಇತಿಹಾಸಕಾರ ಸತ್ಯಕ್ಕೆ ನಿಷ್ಠನಾಗಿರಬೇಕು ಎನ್ನುತ್ತಿದ್ದ ಚಂದ್ರಶೇಖರ ಭಂಡಾರಿ

ಚಂದ್ರಶೇಖರ ಭಂಡಾರಿಯವರು ಇನ್ನಿಲ್ಲ. ಮುಗ್ಧ ಮಗುವಿನ ನಗೆಯ, ಸರಳ ವ್ಯಕ್ತಿತ್ವದ ಭಂಡಾರಿಯವರು ಇದೀಗ ಕಾಲವಶರಾಗಿದ್ದಾರೆ. ಮತ್ತೊಬ್ಬ ಭಂಡಾರಿಯವರು ಸಿಕ್ಕುವುದಿಲ್ಲವಲ್ಲಾ, ಇಂತಹವರ replacement ಇಲ್ಲವಲ್ಲಾ, ಎನಿಸಿ ಮನಸ್ಸು ಹೃದಯಗಳು ಭಾರವಾಗುತ್ತವೆ. ಅವರ ಸಾವಿಗಿಂತ ಈ ಸಂಗತಿಯೇ ಹೆಚ್ಚು ದುಃಖ ತರುತ್ತದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು “ಆರೆಸ್ಸೆಸ್” ಎಂದು ಕರೆದರೆ ಅದೇಕೋ ಸಮಾಧಾನವೇ ಆಗುವುದಿಲ್ಲ. “ಸಂಘ” ಎಂದರೆ ಮಾತ್ರ ಸಮಾಧಾನ. ಈ ಕಾರಣಕ್ಕೋ ಏನೋ ಸಂಘವನ್ನು ದೂರದಿಂದ ನೋಡಿದ, ನೋಡುವ ಪತ್ರಕರ್ತರಿಗೆ (ಕುರುಡರು ಆನೆಯನ್ನು ಮುಟ್ಟಿ ವರ್ಣಿಸಿದ ಕತೆಯ ಹಾಗೆ) ಸಂಘವನ್ನು – ಸಂಘದ ಪ್ರಚಾರಕರನ್ನು ಚಿತ್ರಿಸಲು ಆಗುವುದೇ ಇಲ್ಲ. ಏನೇ ಆಗಲಿ, ಶಾಖೆಗೆ ಹೋಗಿ, ಶಿಬಿರಗಳಿಗೂ ಹೋಗಿ, ಸ್ವಯಂಸೇವಕನಾಗಿ- ಕಾರ್ಯಕರ್ತನಾಗಿ ಕೆಲಸ ಮಾಡಿದವರಿಗೆ ಮಾತ್ರ ಸಂಘದ ಆತ್ಮದ ಅರಿವು ಉಂಟಾಗುತ್ತದೆ. ತುಂಬ ಜನ ಪ್ರತಿಭಾವಂತರೂ, ಬಹಳ ಒಳ್ಳೆಯ ಬರೆಹಗಾರರೂ ಆದ ಪತ್ರಕರ್ತರು ಸಂಘವನ್ನು ಸಂಘದ ಪ್ರಚಾರಕರನ್ನು ಕುರಿತು ಬರೆದಿರುವುದನ್ನು ನೋಡಿದ್ದೇನೆ, ಓದಿದ್ದೇನೆ. ಅವೆಲ್ಲವೂ ಅಪೂರ್ಣವೇ. ಅವೆಲ್ಲವೂ ಕುರುಡರ ಕತೆಯ ವರ್ಣನೆಗಳೇ. ಅಂತಹ ಪತ್ರಕರ್ತರ ಬಳಿ ನಾನು ಭಗವದ್ಗೀತೆಯ “ಅನುಚ್ಛಿಷ್ಟಃ” ಪರಿಕಲ್ಪನೆಯನ್ನು ಓದಿ, ಅರ್ಥ ಮಾಡಿಕೊಂಡು ಅನಂತರ ಬಂದು ಸಂಘದ ಬಗೆಗೆ, ಪ್ರಚಾರಕರ ಬಗೆಗೆ ಬರೆಯಿರಿ, ಎಂದು ಹಾಸ್ಯ ಮಾಡುತ್ತಿದ್ದೆ.

ಹೌದು. ಸಂಘದ ವಿಷಯವು ಹಾಗೆಯೇ, ಪ್ರಚಾರಕರ ವಿಷಯವೂ ಹಾಗೆಯೇ.

ಭಂಡಾರಿಯವರು ಇಲ್ಲ, ಎಂಬ ಸುದ್ದಿ ಕೇಳಿದ ತಕ್ಷಣ ನನ್ನ ಮನಸ್ಸು, ತಲೆಗಳು ಖಾಲಿ ಆದಂತಾದವು. ಒಂದು ನಿರ್ವಾತ-ಭಾವ ತುಂಬಿಕೊಂಡಿತು. ಹೊ.ವೆ.ಶೇಷಾದ್ರಿಗಳಂತಹ ಚಿಂತಕರು, ಅನುಪಮ ಅಂತಃಕರಣದ ನ.ಕೃಷ್ಣಪ್ಪನವರು, ಅದ್ಭುತ ವಾಗ್ಮಿ ವಿದ್ಯಾನಂದ ಶೆಣೈ, ಪ್ರಚಾರಕರೆಂದರೆ ಹೀಗಿರಬೇಕು ಎನ್ನುವಂತಹ ಕೃ.ಸೂರ್ಯನಾರಾಯಣ ರಾಯರು… ಎಲ್ಲರ ಚಿತ್ರಗಳು ಮನೋಪಟಲದ ಮುಂದೆ ಹಾದುಹೋದವು. ಅಂತಹ ವ್ಯಕ್ತಿಗಳೂ ಇಲ್ಲ, ಅಂತಹ ವ್ಯಕ್ತಿತ್ವಗಳೂ ಇಲ್ಲ. ಈ ಸಾಲಿಗೆ ಸರಳತೆಯ ಸಾಕಾರ ಎಂಬಂತಹ ಭಂಡಾರಿಯವರೂ ಸೇರುತ್ತಾರೆ.

ಭಂಡಾರಿಯವರನ್ನು, ಅಂತಹವರನ್ನು ಚಿತ್ರಿಸಲು ನನ್ನಂತಹವರ ಲೇಖನಿ ಸೋಲುತ್ತದೆ. ಅಂತಹ ಪ್ರಚಾರಕರು ಸಂಘವೇ ಆಗಿಹೋಗಿರುತ್ತಾರೆ. ಸಾಮಾನ್ಯ ಮನುಷ್ಯರ ಜೀವನದಲ್ಲಿ ಕಾಣುವ ಘಟನಾವಳಿಯೇ ಅಲ್ಲಿರುವುದಿಲ್ಲ. ಇದು ನನಗೆ ಅನುಭವವೇದ್ಯವಾದುದು 2007ರಲ್ಲಿ, ಹೊ.ವೆ.ಶೇಷಾದ್ರಿಯವರ ಜೀವನ-ದರ್ಶನ “ಧ್ಯೇಯಯಾತ್ರಿ” ಕೃತಿರಚನೆಯಲ್ಲಿ ತೊಡಗಿದ್ದಾಗ. ನಾಲ್ಕಾರು ಸಾಲುಗಳ ಬಾಲ್ಯದ ವಿವರ, ಶಿಕ್ಷಣ, ಇತ್ಯಾದಿ ಬಿಟ್ಟರೆ, ಇಂತಹವರ ಜೀವನವೆಲ್ಲ ಬರೀ ಸಂಘವೇ. ಇಂತಹ ಮಹಾನ್ ವ್ಯಕ್ತಿತ್ವಗಳ ಬಗೆಗೆ ಓದುವಾಗ- ತಿಳಿಯುವಾಗ- ಬರೆಯುವಾಗ ಆಗುವ ದಿವ್ಯಾನುಭೂತಿಯ ಆಯಾಮವೇ ಬೇರೆ.

“ಧ್ಯೇಯಯಾತ್ರಿ” ಕೃತಿರಚನೆಯ ಪೂರ್ವಸಿದ್ಧತೆಯ ಸಮಯದಲ್ಲಿ ಭಂಡಾರಿಯವರೊಂದಿಗೆ ಮಂಗಳೂರಿಗೆ ಹೋಗಿದ್ದೆ. ಮಾನನೀಯ ನ.ಕೃಷ್ಣಪ್ಪನವರು ಆಗ ಅಲ್ಲಿದ್ದರು. ಅವರದ್ದೇ ಬೈಠಕ್. ತುಂಬ ದೊಡ್ಡ ಬರೆಹಗಾರರಾದರೂ, ತುಂಬಾ ಸೀನಿಯರ್ ಆದರೂ, ಭಂಡಾರಿಯವರು ಹೊಸದಾಗಿ ಕಾರ್ಯಕರ್ತನಾದ ಹುಡುಗನಂತೆ ಎಲ್ಲ ಸೂಚನೆಗಳನ್ನು ಬರೆದುಕೊಳ್ಳುತ್ತಿದ್ದರು, ಮಾಹಿತಿಗಳನ್ನು ಇಂತೇದಿಸುತ್ತಿದ್ದರು (updating), ಆಗಬೇಕಾದ ಕೆಲಸದ ರೂಪರೇಖೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದರು. ಪೆನ್ನು, ಪುಸ್ತಕ ಹಿಡಿದುಕೊಂಡೇ ಹುಟ್ಟಿದ ನಾನು ಸಹ ಭಂಡಾರಿಯವರಿಂದ ಕಲಿತದ್ದು ತುಂಬ.

ಭಂಡಾರಿಯವರ ಕೃತಿಗಳು ಇಂದು ಭಂಡಾರಿಯವರ ಸ್ಮಾರಕಗಳಾಗಿವೆ. ಅವೇ ಅವರ ದ್ಯೋತಕಗಳಾಗಿವೆ. ಪ್ರಚಾರಕರು ಅರಿಷಡ್ವರ್ಗಗಳನ್ನು ಗೆದ್ದು ವೈರಾಗ್ಯ, ಸೇವೆ, ಸಂಘಕಾರ್ಯಗಳಿಂದಲೇ ತಮ್ಮ ಛಾಪು ಮೂಡಿಸಿರುತ್ತಾರೆ. ಸಂಘದ ವಿಷಯವೂ ಅಂತೆಯೇ, ಹಾಗೆಯೇ. ಸಂಘದ ಇತಿಹಾಸವೇ ಎಲ್ಲೂ ಸಿಕ್ಕುವುದಿಲ್ಲ. ಈ ಪರಿಪ್ರೇಕ್ಷ್ಯದಲ್ಲಿ ಸಂಘದ ಅದರಲ್ಲೂ ವಿಶೇಷವಾಗಿ ಕರ್ನಾಟಕದ ಇತಿಹಾಸವನ್ನು ದಾಖಲಿಸಿರುವ ಭಂಡಾರಿಯವರು ಅಪೂರ್ವವಾದ ಕೃತಿಯನ್ನೇ ನಮ್ಮ ಕೈಗಿಟ್ಟುಹೋಗಿದ್ದಾರೆ. “ಕಡಲ ತಡಿಯ ಸಂಘವಟ” (ಮಂಗಳೂರಿನಲ್ಲಿ ಸಂಘ ಬೆಳೆದ ಬಗೆ) ಅಂತಹ ಕೃತಿಗಳು ಅಚ್ಚರಿ ಮೂಡಿಸುತ್ತವೆ. ಹಿರಿಯ ಕಾರ್ಯಕರ್ತರು, ಪ್ರಚಾರಕರು ಸಹ ಇಷ್ಟೆಲ್ಲಾ ವಿಷಯಗಳು ನಮಗೇ ಗೊತ್ತಿರಲಿಲ್ಲ, ಎಂದಿದ್ದಾರೆ. ನಿಜ. ಸಹಜ. ಸಾಕ್ಷ್ಯಾಧಾರಗಳನ್ನು ಬಿಟ್ಟುಹೋಗುವುದಕ್ಕಿಂತ ಒಟ್ಟು ಮಾಡುವುದಕ್ಕಿಂತ, ಸಂಘಕ್ಕೆ ಸಮಾಜಕಾರ್ಯವೇ ಮುಖ್ಯ. ಈ ಹಿನ್ನೆಲೆಯಲ್ಲಿ ಭಂಡಾರಿಯವರ ಈ ಬಗೆಯ, ಅಂದರೆ ಐತಿಹಾಸಿಕ ಹೆಜ್ಜೆಗುರುತುಗಳನ್ನು ಗ್ರಂಥರೂಪದಲ್ಲಿ ದಾಖಲಿಸುವ ಸುಕಾರ್ಯವು ಸ್ವತಃ ಒಂದು ದಾಖಲೆಯಾಗಿದೆ. ಒಂದಂತೂ ನಿಜ, ಭಂಡಾರಿಯವರ ಹೊರತಾಗಿ ಬೇರಾರಿಗೂ ಇದು, ಇಂತಹುದು ಸಾಧ್ಯವಿರಲಿಲ್ಲ.

ನಾನು ವೈಯಕ್ತಿಕವಾಗಿ ನೂರಾರು ಜೀವನ-ವೃತ್ತಾಂತಗಳನ್ನು, ಜೀವನಚರಿತ್ರೆಗಳನ್ನು, ಆತ್ಮಕತೆಗಳನ್ನು, ಓದಿದ್ದೇನೆ. ಭಂಡಾರಿಯವರ “ನಿರ್ಮಾಲ್ಯ”, “ಜನಮನಶಿಲ್ಪಿ” ಕೃತಿಗಳು ನಭೂತೋ ಎನ್ನುವಂತೆಯೇ ಇವೆ. ಮತ್ತೊಮ್ಮೆ ಹೇಳುವುದಾದರೆ, ಭಂಡಾರಿಯವರ ಹೊರತಾಗಿ ಬೇರಾರಿಗೂ ಇವು, ಇಂತಹವು ಸಾಧ್ಯವಿರಲಿಲ್ಲ.

ನನಗೆ ನ. ಕೃಷ್ಣಪ್ಪನವರ ಮಹಾನ್ ವ್ಯಕ್ತಿತ್ವದ ಪರಿಚಯವಾದುದು 1967ರಲ್ಲಿ. ನನ್ನ ಜೀವನಕ್ಕೊಂದು ದಿಕ್ಕು- ಗತಿ ತೋರಿದವರೇ ಅವರು. ಅವರ ಬಗೆಗೆ ಭಂಡಾರಿಯವರು ರಚಿಸಿದ “ನಿರ್ಮಾಲ್ಯ” ಒಂದು ಅಪರೂಪದ ಹೃದಯಂಗಮ ಕಥಾನಕ. ಅಲ್ಲಿನ ವಿವರಗಳ ಅಧಿಕೃತತೆಗೆ, ಖಾಚಿತ್ಯಕ್ಕೆ ಭಂಡಾರಿಯವರು ವಹಿಸಿದ ಎಚ್ಚರ, ಪಟ್ಟ ಶ್ರಮ ಮತ್ತು ಮತ್ತೆಮತ್ತೆ ಎಲ್ಲ ಸಂಗತಿಗಳನ್ನು ಪರಿಷ್ಕರಿಸಿದ್ದು ಮಹತ್ತರ ಕಾರ್ಯವೇ ಸರಿ. “ನಿರ್ಮಾಲ್ಯ” ಕೃತಿರಚನೆಯ ಈ ಇತಿಹಾಸವೂ ಮಹತ್ತ್ವದ್ದೇ.

ಕರ್ನಾಟಕದಲ್ಲಿ ಸಂಘಕಾರ್ಯವನ್ನು ಪ್ರಾರಂಭಿಸಿದ ಯಾದವರಾವ್ ಜೋಶಿಯವರು ಬಹಳ ದೊಡ್ಡವರು. ಅವರನ್ನು ನಾನು ನೋಡಿದ್ದೆನಾದರೂ ಅವರ ಅಪಾರ ಸಾಧನೆಯ ಪರಿಚಯವಾದುದು “ಜನಮನಶಿಲ್ಪಿ” ಕೃತಿಯಿಂದ. ಅದು ಅದೆಷ್ಟು ಚಂದದ ಪುಸ್ತಕವೆಂದರೆ, ಪ್ರತಿ ಬಾರಿ ಯಾದವರಾವ್ ಜೋಶಿಯವರ ನೆನಪಾದಾಗಲೆಲ್ಲಾ, ಉಲ್ಲೇಖವಾದಾಗಲೆಲ್ಲಾ ಭಂಡಾರಿಯವರ ಪುಸ್ತಕವೇ ಕಣ್ಮುಂದೆ ಬರುತ್ತದೆ.

“ಕರ್ನಾಟಕದಲ್ಲಿ ಸಂಘ” ಕೃತಿಯೂ ಅಂತೆಯೇ. ಸಂಘದ ಬೆಳವಣಿಗೆಯ ಮಹತ್ತ್ವದ ವಿವರಗಳನ್ನು ದಾಖಲಿಸಿದೆ. ಗುರೂಜಿ ಎಂದೇ ಖ್ಯಾತರಾದ ಮಾಧವ ಸದಾಶಿವ ಗೋಳವಲಕರ್ ಅವರು 1940ರಿಂದ 1973ರವರೆಗೆ ಸರಸಂಘಚಾಲಕರಾಗಿ ಸಂಘವನ್ನು, ಹಿಂದೂ ಸಮಾಜವನ್ನು ಮುನ್ನಡೆಸಿದವರು. ಅವರು ಹಿಂದೂ ಸಮಾಜದ ಸಂಘಟನೆಗಾಗಿ ಅದೆಷ್ಟು ಬಾರಿ ಭಾರತಾದ್ಯಂತ ಪ್ರವಾಸ ಮಾಡಿದರೋ? ಅವರ ಕರ್ನಾಟಕದ ಭೇಟಿಯ ಐತಿಹಾಸಿಕ ಮಹತ್ತ್ವದ ಸಂಗತಿಗಳನ್ನು ಭಂಡಾರಿಯವರು ತಮ್ಮ “ವಿದ್ಯಾರಣ್ಯರ ಭೂಮಿಯಲ್ಲಿ ಶ್ರೀಮಾಧವ” ಕೃತಿಯಲ್ಲಿ ದಾಖಲಿಸಿದ್ದಾರೆ.

ಭಂಡಾರಿಯವರು ರಚಿಸಿರುವ ಕೃತಿಗಳ ಸಂಖ್ಯೆ ದೊಡ್ಡದಿದೆ. ಅನುವಾದವನ್ನೂ ಮಾಡಿದ್ದಾರೆ. ಪ್ರಶಸ್ತಿಗಳೂ ಅವರನ್ನು ಗೌರವಿಸಿವೆ. ಅವರ ಎಲ್ಲ ಪುಸ್ತಕಗಳನ್ನು ಕಣ್ಮುಂದೆ ತಂದುಕೊಂಡಾಗ ಭಂಡಾರಿಯವರಿಂದಲ್ಲದೆ, ಬೇರಾರಿಂದಲೂ ಈ ಕೊಡುಗೆ, ಇಂತಹ ಕೊಡುಗೆ ಸಾಧ್ಯವಿರುತ್ತಿರಲಿಲ್ಲ, ಎನಿಸುತ್ತದೆ. ಅದು ಅವರು ಬಿಟ್ಟುಹೋದ ಬೆಳಕು.

ನಿಜ-ಇತಿಹಾಸದ, ಇತಿಹಾಸರಚನಶಾಸ್ತ್ರದ ಪರಿಕಲ್ಪನೆಗಳನ್ನು ಕನ್ನಡದಲ್ಲಿ ಪರಿಚಯಿಸುವ ರಾಷ್ಟ್ರೀಯ ಮಹತ್ತ್ವದ ನಮ್ಮ “ವಾಯ್ಸ್ ಆಫ್ ಇಂಡಿಯಾ” ಗ್ರಂಥ ಸರಣಿಗಾಗಿ, ಹಮೀದ್ ದಲವಾಯಿ ಅವರ “ಸೆಕ್ಯುಲರ್ ಭಾರತದಲ್ಲಿನ ಮುಸ್ಲಿಂ ರಾಜಕಾರಣ” ಕೃತಿಯನ್ನು ಭಂಡಾರಿಯವರು ಕನ್ನಡದಲ್ಲಿ ಅನುವಾದಿಸಿಕೊಟ್ಟರು. ಆ ದಿನಗಳಲ್ಲಿ ಅವರ ಸಹಯೋಗ ನನಗೆ ಬಹಳ ಒಳ್ಳೆಯ ಶಿಕ್ಷಣವೇ ಆಯಿತು. ಕೆಲವು ವ್ಯಕ್ತಿಗಳು ಮೂಡಿಸುವ ಛಾಪು ವಿಶಿಷ್ಟವಾದುದು. ಅನುವಾದಕ್ಕೆ ಸಂಭಾವನೆ ಕೊಡುವ ವಿಷಯ ಬಂದಾಗ, “ನಾವು ಪ್ರಚಾರಕರು, ಯಾವ ಸಂಭಾವನೆಯೂ ಬೇಡ” ಎಂದು ಒಂದೇ ಮಾತಿನಲ್ಲಿ ಹೇಳಿ, ವಿಷಯಾಂತರ ಮಾಡಿದರು.

ಬೆಳಕು ನೀಡುವ ಅನೇಕ ಕೃತಿಗಳನ್ನು ಕೊಟ್ಟುಹೋಗಿರುವ ಭಂಡಾರಿಯವರ ಪುಸ್ತಕಗಳೇ ಅವರ ಸ್ಮಾರಕಗಳು.

ತನ್ಮಯಿ ಪ್ರೇಮ್‌ಕುಮಾರ್, ವಿಶ್ವ ಸಂವಾದ ಕೇಂದ್ರ

ಪ್ರೇರಣೆಯ ಲೇಖನಿಯಲಿ
ರಾಷ್ಟ್ರಹಿತದ ಶಾಹಿ ತುಂಬಿ
ಸಮಾಜದ ಹಾಳೆಯಲಿ
ಜೀವ,ಜೀವನದ ತುಂಬಾ,
ಬರೆಬರೆದು ಹಾಡಿದರೋ,
ತಾಯಿಭಾರತಿಯ ಚರಿತೆಯನು!

ಸ್ಪೂರ್ತಿಯಾ ಬುಗ್ಗೆಯನೆ
ನಾಚಿ ನಿಲ್ಲಿಸುತೆ ಪಣವಿಟ್ಟು
ಸೋಲಿಸಿ ಅಪ್ಪಿದವರು!
ರಾಷ್ಟ್ರಕಾರ್ಯಕೆ ಕಾಯ
ಎಂದೆನುತ ಅಡಿಯಿಟ್ಟು
ಸ್ವಾರ್ಥವನು ತಪ್ಪಿದವರು!

ಸೇವೆಗರ್ಪಿತ ಬದುಕು
ಮಂದಸ್ಮಿತದ ಮೆಲುಕು!
ದಿನ,ವರುಷ, ದಶಕಗಳನೆಲ್ಲ
ಪಾಮರರು ನಾವೆಣಿಸಬಹುದು,
ಸಂಘಸಸಿಯ ಸಂಪಿಗೆಯ
ಪರಿಮಳವನೆಣಿಸಬಹುದೆ?

ಬರೆದ ಪದ್ಯಗಳು ಒಂದೊಂದೂ
ಹೃದಯಕು ಮನಸಿಗು ಬಂಧು!
ಕೋಟಿ ಪ್ರಾಣವಾಯುವಿನಿಂದ
ಭಾರತವನರ್ಚಿಸುವ ಸಿಂಧು!
ಅದೆನೆಲ್ಲ ಮನದುಂಬಿ ಹಾಡುವಾಗ
ಇವರ ನೆನಪಾಗಿದ್ದು ಎಂದು?

ಜ್ಞಾನ,ತೇಜ,ಮಹತ್ತುಗಳ
ಭಂಡಾರವನೆ ಸೂರೆ ಹೊಡೆದ
ಅವರು ಭಂಡಾರಿಗಳೇ!!
ವಾದಗಳ ಮಾತೆಲ್ಲಿ ಬಂತು
ಸಂವಾದವಿರುವಾಗ?
ಹೆಗಲಿಗೆ ಹೆಗಲು,ಭುಜಕ್ಕೆ ಭುಜ!

ನಿಷ್ಕಾಮ ಬದುಕದುವು
ಕಾಣೆಯಾಗುತಲಿರುವಾಗ
ನಿಜದ ನೇರಕೆ ನಡೆದು ನಿಶ್ಚಲದಿ,
ನಿಲದೆ ಸ್ಥಾಯಿಯಾಗುಳಿದವರ
ದಾರಿಗೆಮ್ಮ ಗಮನ!
ಬದುಕಿಗೆಮ್ಮ ನಮನ!

Leave a Reply

Your email address will not be published.

This site uses Akismet to reduce spam. Learn how your comment data is processed.