ಇಂದು ಪುಣ್ಯಸ್ಮರಣೆ

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಚ್ಚಳಿಯದ ಹೆಸರು ಚಂದ್ರಶೇಖರ್ ಆಜಾದ್. ಕ್ರಾಂತಿ ಮಾರ್ಗದ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದ ಸ್ವಾತಂತ್ರ್ಯ ಸೇನಾನಿ.“ಮೇ ಆಜಾದ್ ಹು ಔರ್ ಆಜಾದ್ ಹಿ ರಹೂಂಗಾ” ಎಂಬ ತನ್ನ ಶಪಥದಂತೆ ಬದುಕಿದ ಸ್ವಾಭಿಮಾನಿ. ತಮ್ಮ ಇಡೀ ಜೀವನವನ್ನೇ ದೇಶಕ್ಕಾಗಿ ಮುಡಿಪಾಗಿಟ್ಟಿದ್ದರು ಚಂದ್ರಶೇಖರ್ ಆಜಾದ್ ಅವರ ಪುಣ್ಯಸ್ಮರಣೆ ಇಂದು.

ಪರಿಚಯ
ಚಂದ್ರಶೇಖರ್‌ ಆಜಾದ್‌ ಅವರು ಜುಲೈ 23, 1906 ರಲ್ಲಿ ಮಧ್ಯಪ್ರದೇಶದ ಭಾಬ್ರಾ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಪಂಡಿತ್‌ ಸೀತಾರಾಮ್ ಹಾಗೂ ತಾಯಿ ಜಗರಾಣಿ ದೇವಿ.‌ ತನ್ನ ಮಗ ಸಂಸ್ಕೃತ ಪಂಡಿತನಾಗಬೇಕು ಎಂದು ಇಚ್ಛಿಸಿದ್ದ ಜಗರಾಣಿ ದೇವಿ ತನ್ನ ಗಂಡನ ಮನವೊಲಿಸಿ ಕಾಶಿ ವಿದ್ಯಾಪೀಠಕ್ಕೆ ಸೇರಿಸಲು ಒಪ್ಪಿಸಿದ್ದರು.

ಚಂದ್ರಶೇಖರ ತನ್ನ 15ನೇ ವಯಸ್ಸಿನಲ್ಲಿ ಗಾಂಧೀಜಿ ಅವರು ಆರಂಭಿಸಿದ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದನು. ಅದರ ಫಲವಾಗಿ ಆತನನ್ನು ಬಂಧಿಸಲಾಯಿತು. ಕೆಲವು ದಿನಗಳ ನಂತರ ನ್ಯಾಯಾಧೀಶರಾದ ಎಂ ಪಿ ಖರೆಘಾಟ್ ಅವರ ಮುಂದೆ ನಿಲ್ಲಿಸಿದಾಗ ತನ್ನ ಹೆಸರು ಆಜಾದ್, ತನ್ನ ತಂದೆಯ ಹೆಸರು ಸ್ವತಂತ್ರತೆ, ಮನೆ ಸೆರೆಮನೆ ಎಂದು ಉತ್ತರಿಸಿದ್ದ. ಸಿಟ್ಟುಗೊಂಡ ನ್ಯಾಯಾಧೀಶರು ಬಾಲಕ ಚಂದ್ರಶೇಖರನಿಗೆ 15 ಚಡಿ ಏಟಿನ ಶಿಕ್ಷೆ ವಿಧಿಸಿದರು. ಪ್ರತಿ ಚಡಿ ಏಟನ್ನು ಪಡೆಯುವಾಗಲೂ ಬಾಲಕ ಚಂದ್ರಶೇಖರನ ಬಾಯಿಂದ ಮೊಳಗಿದ್ದು ವಂದೇ ಮಾತರಂ ಘೋಷವಾಕ್ಯ.


ಆಜಾದ್‌ ಅವರ ಕ್ರಾಂತಿಕಾರಿ ಚಟುವಟಿಕೆಗಳು

ಗಾಂಧೀಜಿ ಅವರ ಅಸಹಕಾರ ಚಳವಳಿ ಚೌರಿಚೌರಾ ಘಟನೆಯ ಬಳಿಕ ಮೊಟಕುಗೊಳಿಸಿದ್ದರಿಂದ ನಿರಾಸೆಗೊಂಡ ಚಂದ್ರಶೇಖರ್ ಯುವಕ್ರಾಂತಿಕಾರಿ ಮನ್ಮಥನಾಥ ಗುಪ್ತ ಅವರ ಮೂಲಕ ಕ್ರಾಂತಿಕಾರಿ ರಾಮಪ್ರಸಾದ್ ಬಿಸ್ಮಿಲ್ ಅವರನ್ನು ಭೇಟಿಯಾದರು. ರಾಮ್ ಪ್ರಸಾದ್ ಬಿಸ್ಮಿಲ್, ಜೋಗೇಶ್ ಚಂದ್ರ ಚಟರ್ಜಿ, ಸಚೀಂದ್ರ ನಾಥ್ ಸನ್ಯಾಲ್, ಶಚೀಂದ್ರ ನಾಥ್ ಬಕ್ಷಿ ಮತ್ತು ಅಶ್ಫಾಕುಲ್ಲಾ ಖಾನ್ 1923 ರಲ್ಲಿ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ ಅನ್ನು ರಚಿಸಿದ್ದರು. ಚಂದ್ರಶೇಖರ್ ಈ ತಂಡದ ಸದಸ್ಯರಾದರು. ನಂತರ HRA ಯ ಸಕ್ರಿಯ ಸದಸ್ಯರಾಗಿ ಸಂಘಟನೆಗಾಗಿ ಹಣಸಂಗ್ರಹದಲ್ಲಿ ತೊಡಗಿಸಿಕೊಂಡರು. ಬಹುತೇಕ ಹಣ ಸಂಗ್ರಹ ಭಾರತೀಯರನ್ನು ಶೋಷಿಸಿ ಸಂಗ್ರಹಿಸಿದ ಕಂಪೆನಿ ಸರ್ಕಾರದ ತೆರಿಗೆ ಹಣವೇ ಆಗಿತ್ತು. ಇದಕ್ಕೆ ಉತ್ತಮ ನಿದರ್ಶನ ಕಾಕೋರಿ ಘಟನೆ.

ಕಾಕೋರಿ ಘಟನೆಯ ನಂತರ HRAಯ ಪ್ರಮುಖರಾದ ರಾಮಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್, ಠಾಕೂರ್ ರೋಶನ್ ಸಿಂಗ್ ಮತ್ತು ರಾಜೇಂದ್ರ ನಾಥ್ ಲಾಹಿರಿ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಮರಣದಂಡನೆ ವಿಧಿಸಲಾಯಿತು. ಆದರೆ ಆಜಾದ್‌ ಮತ್ತು ಕೇಶವ ಚಕ್ರವರ್ತಿ ಮತ್ತು ಮುರಾರಿ ಶರ್ಮಾ ಬಂಧನದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು.


ಇದರ ನಂತರ ಚಂದ್ರಶೇಖರ್‌ ಆಜಾದ್‌ ಅವರು ಹಿಂದೂಸ್ತಾನ್‌ ಸೋಶಿಯಲಿಸ್ಟ್ ರಿಪಬ್ಲಿಕ್ ಆರ್ಮಿ ಎಂಬ ಸಂಘಟನೆಯನ್ನು ಪ್ರಾರಂಭಿಸಿದರು. ಈ ಸಂಘಟನೆಯ ಮೂಲಕ  ಆಜಾದ್‌ ಅವರು ಭಗತ್‌ ಸಿಂಗ್‌, ಸುಖ್‌ ದೇವ್‌ , ಬುಟಕೇಶ್ವರ್‌ ದತ್‌ ಮತ್ತು ರಾಜ್‌ ಗುರು ಎಂಬ ಕ್ರಾಂತಿಕಾರಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು.

1928ರ ಸೈಮನ್ ಕಮಿಷನ್ ವಿರುದ್ಧದ ಪ್ರತಿಭಟನೆಯಲ್ಲಿ ನಿರತರಾಗಿದ್ದ ಲಾಲ ಲಜಪತ್ ರಾಯರ ಮೇಲೆ ಸ್ಕಾಟ್ ಎಂಬ ಅಧಿಕಾರಿ ಮಾರಣಾಂತಿಕ ಹಲ್ಲೆ ಮಾಡಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡ ಲಾಲಾಜಿ ಕೆಲವು ದಿನಗಳ ನಂತರ ಮರಣ ಹೊಂದಿದರು. ಇದರ ಸೇಡನ್ನು ತೀರಿಸಿಕೊಳ್ಳಲು ಆಜಾದ್ ಮತ್ತವರ ತಂಡ ಸಿದ್ಧವಾಯಿತು. ಸ್ಕಾಟ್ ಹತ್ಯೆಗೆ ಸಂಚು ರೂಪಿಸಲಾಯಿತು. ಆದರೆ ದುರದೃಷ್ಟವಶಾತ್ ಸ್ಕಾಟ್ ಬದಲು ಮತ್ತೋರ್ವ ಅಧಿಕಾರಿ ಸ್ಯಾಂಡರ್ಸ್ ಬಲಿಯಾದನು. ಸ್ಯಾಂಡರ್ಸ್ ಗೆ ಗುಂಡಿಕ್ಕಿ ಹೊರಟ ಭಗತ್ ಸಿಂಗ್ ಮತ್ತು ರಾಜಗುರು ಅವರನ್ನು ಬೆನ್ನತ್ತಿದ ಚನ್ನನ್ ಸಿಂಗ್ ಎಂಬ  ಅಧಿಕಾರಿಯನ್ನು ಆಜಾದ್ ಗುಂಡಿಟ್ಟು ಹೊಡೆದುರುಳಿಸಿದರು.


ಚಂದ್ರಶೇಖರ್‌ ಆಜಾದ್‌ ತಮ್ಮ ಒಂದಿಲ್ಲೊಂದು ಕ್ರಾಂತಿಕಾರಿ ಚಟುವಟಿಕೆಯಿಂದ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಹೀಗಾಗಿ ಅವರನ್ನು ಹಿಡಿಯಲು ಮಾಹಿತಿದಾರರನ್ನು ನೇಮಕ ಮಾಡಲಾಗಿತ್ತು. 1931 ಫೆಬ್ರವರಿ 27ರಂದು ಅಲಹಬಾದ್‌ನ ಆಲ್‌ಫ್ರೆಡ್‌ ಪಾರ್ಕ್‌ನಲ್ಲಿ ತಮ್ಮ ಸಂಗಡಿಗರ ಭೇಟಿಗೆ ಬಂದಾಗ ಬ್ರಿಟಿಷ್ ಪೊಲೀಸರು ಪಾರ್ಕ್‌ನ್ನು ಸುತ್ತುವರಿದು ಶರಣಾಗುವಂತೆ ಆಜಾದ್‌ಗೆ ಆದೇಶಿಸಿದ್ದರು. ಆದರೆ ಬ್ರಿಟೀಷರ ಎಚ್ಚರಿಕೆಗೆ ಮಣಿಯದ ಆಜಾದ್‌ ವೀರನಂತೆ ಹೋರಾಡಿದರು. ತನ್ನ ಬಾಲ್ಯದ ಶಪಥದಂತೆ ಬ್ರಿಟಿಷರಿಗೆ ಸಿಗದೆ ತಾನೇ ಗುಂಡು ಹಾರಿಸಿಕೊಂಡು ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.