ಚಿತ್ರದುರ್ಗದಲ್ಲಿ ಕೇಂದ್ರ ಸರ್ಕಾರದ ಹಿಂದು ವಿರೋಧಿ ಧೊರಣೆ ಖಂಡಿಸಿ ಬೃಹತ್ ಪ್ರತಿಭಟನಾ ಧರಣಿ
ಚಿತ್ರದುರ್ಗ: ಕೇಂದ್ರ ಸರ್ಕಾರದ ಹಿಂದೂ ವಿರೋಧಿ ಧೋರಣೆಯನ್ನು ಖಂಡಿಸಿ, ಹಾಗೂ ದೇಶಭಕ್ತ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಭಯೋತ್ಪಾದನೆಯ ಜೊತೆಗೆ ತಳುಕು ಹಾಕುತ್ತಿರುವ ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ಚಿತ್ರದುರ್ಗದ ಜಿಲ್ಲಾಧಿಕಾರಿ ಕಛೇರಿ ಸಮೀಪದ ಒನಕೆ ಓಬವ್ವ ವೃತ್ತದಲ್ಲಿ ಸುಮಾರು ೫೦೦ ಕ್ಕೂ ಸ್ವಯಂಸೇವಕರು ಭಾಗವಹಿಸಿ ಕೇಂದ್ರದ ವಿರುದ್ಧ ಪ್ರತಿಭಟನಾ ಧರಣಿ ನಡೆಸಲಾಯಿತು.
ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಶಿವಮೊಗ್ಗ ವಿಭಾಗದ ವಿಭಾಗ ಕಾರ್ಯವಾಹ ಶ್ರೀ ದಿನೇಶ್ ಭಾರತೀಪುರ ಅವರು ಧರಣಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಧರಣಿಯ ಕುರಿತು ಪ್ರಾಸ್ತಾವಿಕವಾಗಿ ಶಿವಮೊಗ್ಗ ವಿಭಾಗ ವ್ಯವಸ್ಥಾ ಪ್ರಮುಖ್ ಶ್ರೀ ರುದ್ರಯ್ಯ ಮಾತನಾಡುತ್ತಾ ಈ ರೀತಿಯ ಪ್ರತಿಭಟನೆಗಳಲ್ಲಿ ನಮಗೆ ನಮಗೆ ನಂಬಿಕೆಯಿಲ್ಲ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಆ ಕೆಲಸ ಮಾಡಲು ನಾವು ತಯಾರಿಲ್ಲ ಎಂದು ಹೇಳಿದರು.
ಇದಲ್ಲದೇ ಜಗತ್ತಿನಾದ್ಯಂತ ತಮ್ಮ ಅನುಯಾಯಿಗಳನ್ನು, ಭಕ್ತರನ್ನು ಹೊಂದಿರುವ ಹಿಂದೂ ಸಾಧು ಸಂತರ ತೇಜೊವಧೆ ಮಾಡಲಾಗುತ್ತಿದೆ. ಮಾತಾ ಅಮೃತಾನಂದಮಯಿ, ರವಿಶಂಕರ್ ಗುರೂಜಿ, ಬಾಬಾ ರಾಮ್ದೇವ್ಜೀ ಸೇರಿದಂತೆ ಅನೇಕ ಸಾಧು ಸಂತರ ತೇಜೊವಧೆಗೆ ಅನೇಕರು ಹವಣಿಸುತ್ತಿದ್ದಾರೆ. ಇಂಥಹ ಸಂದರ್ಭದಲ್ಲಿ ಹಿಂದು ಸಮಾಜ ಜಾಗೃತವಾಗದಿದ್ದಲ್ಲಿ ಈ ದೇಶಕ್ಕೆ ಉಳಿಗಾಲವಿಲ್ಲ ಎಂದು ಅವರು ಸ್ಪಸ್ಟಪಡಿಸಿದರು.
ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ್ದ ವಿಭಾಗ ಕಾರ್ಯವಾಹ ದಿನೇಶ್ ಭಾರತೀಪುರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತಾ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಕೂಡಾ ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿಲ್ಲ. ಹಾಗೂ ಹಿಂದು ಎಂದಿಗೂ ಒಬ್ಬ ಭಯೋತ್ಪಾಧಕನಾಗಲಾರ. ಹಾಗೊಂದು ವೇಳೆ ಹಿಂದು ಭಯೋತ್ಪಾಧಕನಾದರೆ ಈ ದೇಶದಲ್ಲಿ ಬೇರೆ ಭಯೋತ್ಪಾಧಕರಿಗೆ ಜಾಗವಿರುವುದಿಲ್ಲ ಎಂದರು.
ದೇಶದಲ್ಲಿ ಸೃಷ್ಟಿಯಾದ ಪ್ರವಾಹ ಸುನಾಮಿ. ನೆರೆಗಳಂತಹ ಸಂದರ್ಭದಲ್ಲಿ ಸಂಘ ಯಾವುದೇ ಪ್ರತಿಫಲಾಕ್ಷೆಯಿಲ್ಲದೇ ತನ್ನದೆಲ್ಲವ್ನ್ನು ಬಿಟ್ಟು ಸೇವೆಗೆ ಮುಂದಾಗುತ್ತದೆ. ಭಾರತ ಚೀನಾ ಯುದ್ಧದ ಸಂದರ್ಭದಲ್ಲಿ ಸಂಘದ ಸ್ವಯಂಸೇವಕರು ತೋರಿದ ಅಪ್ರತಿಮ ಧೈರ್ಯವನ್ನು ಹಾಗೂ ಮಾಡಿದ ಸೇವೆಯನ್ನು ನೆನಪಿಸಿಕೊಟ್ಟರು. ಹಾಗೂ ಇದೇ ಸಂದರ್ಭದಲ್ಲಿ ಆಗಿನ ಪ್ರಧಾನಿ ಪಂಡಿತ್ ನೆಹರುರವರು ಸಂಘದ ಸ್ವಯಂಸೇವಕರು ಗಣರಾಜ್ಯೋತ್ಸವದ ಪೆರೇಡ್ನಲ್ಲಿ ಭಾಗವಹಿಸುವಂತೆ ಕರೆ ಕೊಟ್ಟಿದ್ದನ್ನು ಹೇಳಿ ಸಂಘದ ಹಿನ್ನೆಲೆಯನ್ನು ತಿಳಿಸಿದರು.
೧೯೭೫ ರಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಸಂಘದ ಮೇಲೆಯು ಕೂಡಾ ನಿಷೇಧವನ್ನು ಹೇರಿದ್ದರು. ಆದರೆ ನಂತರದ ದಿನಗಳಲ್ಲಿ ಅವರು ಸಂಘದ ಮೇಲೆ ನಿಷೇಧ ಹೇರಿದ್ದಕ್ಕಾಗಿ ಪಶ್ಚಾತಪ ಪಟ್ಟಿದ್ದನ್ನು ಭಾರತೀಪುರ ನೆನಪಿಸಿಕೊಂಡರು.
ಸಂಘ ಇಂದು ವಿವಿಧ ಕ್ಷೇತ್ರಗಳಾಗಿ ಕವಲೊಡೆದು ನಾನಾ ಮುಖಗಳಲ್ಲಿ ಸೇವೆಯಲ್ಲಿ ತೊಡಗಿಕೊಂಡಿದೆ. ದೇಶದ ಗಂಭೀರ ಸಮಸ್ಯೆಯಾದ ಅಕ್ರಮ ಒಳ ನುಸುಳುವಿಕೆಯನ್ನು ದೇಶದ ಗಮನಕ್ಕೆ ತಂದಿದ್ದು ಹಾಗೂ ಸರ್ಕಾರದ ಮುಂದಿಟ್ಟಿದ್ದು ಸಂಘ. ಈ ಬಗ್ಗೆ ಹೋರಾಟವನ್ನು ಮಾಡುತ್ತಿರುವ ಸಂಘಟನೆ ಆರೆಸ್ಸೆಸ್ಸ್ ಎಂದು ಹೇಳಿದರು. ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ, ಉತ್ತರಾಂಚಲದಿಂದ ಪೂರ್ವಾಂಚಲದವರೆಗೆ ನಡೆಯುತ್ತಿರುವ ಭಯೋತ್ಪಾಧನೆ ಬಾಂಬ್ ಸ್ಪೋಟಗಳಂತಹ ದುಷ್ಟ ಶಕ್ತಗಳ ವಿರುದ್ಧ ಸಂಘ ನಿರಂತರ ಹೋರಾಟ ನಡೆಸುತ್ತಿದೆ ಇಂಥಹ ಒಂದು ಸಂಘಟನೆ ಭಯೋತ್ಪಾಧನೆಯಲ್ಲಿ ತೊಡಗಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಸಂಘದ ಅಖಿಲ ಭಾರತೀಯ ಅಧಿಕಾರಿ ಶ್ರೀ ಇಂದ್ರೇಶ್ ಕುಮಾರ್ಜೀ ಅವರ ವಿರುದ್ಧ ಅಜ್ಮೀರ್ ಸ್ಪೋಟದ ಕುರಿತು ೮೦೬ ಪುಟಗಳ ಚಾರ್ಜ್ಶೀಟ್ ತಯಾರಿಸಿರುವುದರಲ್ಲಿ ರಾಜಕೀಯ ಪಿತೂರಿ ಅಡಗಿದೆ. ಸಂಘವನ್ನು ವ್ಯವಸ್ಥಿತವಾಗಿ ಮುಗಿಸುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ದಿನೇಶ್ ಭಾರತೀಪುರ ಹೇಳಿದರು.
ಪ್ರತಿಭಟನಾ ಧರಣಿಯ ಮಧ್ಯದಲ್ಲಿ ಚಿತ್ರದುರ್ಗದ ಕಬಿರಾನಂದ ಆಶ್ರಮದ ಶ್ರೀಗಳಾದ ಶಿವಲಿಂಗಾನಂದ ಸ್ವಾಮೀಜಿ ಹಾಗೂ ಮಡಿಕೇರಿಯ ಮಹಾಂತ ಸ್ವಾಮೀಜಿಗಳು ಧರಣಿಗೆ ಆಗಮಿಸಿ ಬೆಂಬಲ ಸೂಚಿಸಿದರು. ಇದೇ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಕಬೀರಾನಂದ ಆಶ್ರಮದ ಸ್ವಾಮೀಜಿ ಹಿಂದು ಈ ದೇಶದ ಆತ್ಮ. ಅವನಿಗೆ ನೋವಾದರೆ ಈ ದೇಶದ ಅಂತರಂಗಕ್ಕೆ ನೋವಾಗುತ್ತದೆ. ಹಿಂದುವಿಗೆ ಸಮಸ್ಯೆಯಾದರೆ ಈ ದೇಶಕ್ಕೆ ಸಮಸ್ಯೆಯಾದಂತೆ ಎಂದು ಹೇಳಿದರು. ದೇಶವನ್ನು ಉಳಿಸುವ ಕಾರ್ಯದಲ್ಲಿ ಮುಂದಾಗಿ ಸಂಘ ಪರಿವಾರದ ಕಾರ್ಯಕರ್ತರೆಲ್ಲರೂ ಇಲ್ಲಿ ಸೇರಿದೀರಿ ನಿಮಗೆ ಯಶಸ್ಸು ಸಿಗುತ್ತದೆ. ನಿಮಗೆ ನಮ್ಮ ಬೆಂಬಲವಿದೆ. ಸ್ರೀಮಠದ ಬೆಂಬಲವಿದೆ ಎಂದು ಘೋಷಿಸಿದರು. ಇದೇ ಸಂದರ್ಭದಲ್ಲಿ ಸ್ವಾಮೀಜಿಯವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ನಿರ್ವಾಣಪ್ಪ ಅವರಿಗೆ ಮನವಿಯ ಪ್ರತಿಯನ್ನು ಓದಿ ಸಲ್ಲಿಸಲಾಯಿತು.
೧೧ ಗಂಟೆಗೆ ಆರಂಭವಾದ ಪ್ರತಿಭಟನಾ ಧರಣಿ ಘೊಷಣೆಗಳೊಂದಿಗೆ, ದೇಶಭಕ್ತಗೀತೆಗಳೊಂದಿಗೆ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರಗಳೊಂದಿಗೆ ರಂಗೇರುತ್ತಿತ್ತು. ಪ್ರತಿಭಟನಾ ಧರಣಿಯಲ್ಲಿ ಸಂಘದ ಜಿಲ್ಲಾ ಕಾರ್ಯವಾಹ ರಾಜಕುಮಾರ್ ಸೇರಿದಂತೆ ಪರಿವಾರದ ಎಲ್ಲ ಸಂಘಟನೆಗಳ ಪ್ರಮುಖರು ಕಾರ್ಯಕರ್ತರು, ಮಾತೆಯರು ವಿಧಾನ ಪರಿಷತ್ ಸದಸ್ಯ ಜಿ.ಹೆಚ್. ತಿಪ್ಪಾರೆಡ್ಡಿ ಭಾಗವಹಿಸಿದ್ದರು.