ಬಂಟ್ವಾಳ: ತ್ಯಾಗ ಮತ್ತು ಸೇವೆ ಭಾರತದ ಎರಡು ಆದರ್ಶಗಳು. ತ್ಯಾಗಕ್ಕೆ ನಿದರ್ಶನವಾಗಿ ಅಸಂಖ್ಯಾತ ಮಂದಿ ಗುರುತಿಸಲ್ಪಟ್ಟರೆ, ಅಗಣಿತ ಸಂಘ ಸಂಸ್ಥೆಗಳು ಸೇವೆಯನ್ನೇ ಧ್ಯೇಯವನ್ನಾಗಿಸಿಕೊಂಡು ನಿರಂತರವಾಗಿ ಶ್ರಮಸುತ್ತಿವೆ. ವಿಶ್ವ ಹಿಂದೂ ಪರಿಷತ್ ಬಜರಂಗದಳ ಅಂತಹ ಸೇವಾ ಕಾರ್ಯವೊಂದರ ಮೂಲಕ ಮಾದರಿಯಾಗಿದೆ.
ಮಂಗಳೂರಿನ ಬಂಟ್ವಾಳ ತಾಲೂಕಿನ ಮಂಚಿ ಘಟಕದ ವಿಶ್ವ ಹಿಂದೂ ಪರಿಷದ್ ಬಜರಂಗದಳದ ಕಾರ್ಯಕರ್ತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಒಂದು ಕುಟುಂಬವನ್ನು ದತ್ತು ತೆಗೆದುಕೊಂಡು ಕಳೆದ ಐದು ವರ್ಷಗಳಿಂದ ಆ ಮನೆಯ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸುತ್ತಿದ್ದರು. ಇದೀಗ ಅದೇ ಕುಟುಂಬದ ಹಿರಿಯ ಹೆಣ್ಣು ಮಗಳ ವಿವಾಹಕ್ಕೆ ನೆರವಾಗುವ ಮೂಲಕ ಶ್ಲಾಘನೀಯ ಸೇವಾ ಕಾರ್ಯವನ್ನು ಮಾಡಿದ್ದಾರೆ.
ವಿವಾಹ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಡಾ|ಕಲ್ಲಡ್ಕ ಪ್ರಭಾಕರ ಭಟ್, ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಹಾಗೂ ಇನ್ನಿತರ ಸಂಘಟನೆಯ ಪ್ರಮುಖರು ಭಾಗವಹಿಸಿದರು.
ತಮ್ಮ ಮನೆಯ ಮಗಳ ಮದುವೆಯಂತೆ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು, ವಿವಾಹ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಭ್ರಮದಿಂದ ನೆರವೇರಿಸಿಕೊಟ್ಟ ಕಾರ್ಯಕರ್ತರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.