ಬೆಂಗಳೂರು: ಭಾರತ ಮತ್ತು ಇಂದಿನ ಯುವಕರು ಜೊತೆಯಾಗಿ ಬೆಳೆಯುವ ಒಂದು ಸುವರ್ಣ ಕಾಲದಲ್ಲಿ ನಾವಿದ್ದೇವೆ. ಮುಂದಿನ 25 ವರ್ಷಗಳು ಭಾರತಕ್ಕೆ ಅತ್ಯಂತ ಅಮೂಲ್ಯವಾದದ್ದು. ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿ, ನಾಗರಿಕತೆಯಲ್ಲಿ ಭಾರತ ಈಗಾಗಲೇ ಜಗತ್ತಿನಲ್ಲೇ ಮುಂದುವರಿದ ರಾಷ್ಟ್ರವಾಗಿದೆ. ಆದರೆ ಆರ್ಥಿಕವಾಗಿ ಭಾರತವನ್ನು ನಂಬರ್ 1 ರಾಷ್ಟ್ರ ಮಾಡುವ ಅವಕಾಶ ಯುವಕರಿಗೆ ಇದೆ ಎಂದು ತಮಿಳುನಾಡು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು.

ಥಿಂಕರ್ಸ್ ಫೋರಮ್ ವಿಜಯನಗರದ ವತಿಯಿಂದ ಆಯೋಜಿಸಲಾದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ಯುವಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಬುಧವಾರ ಮಾತನಾಡಿದರು.

ನಮ್ಮ ರಾಷ್ಟ್ರದ ಇತಿಹಾಸವನ್ನು ಅರಿಯುವ ಜವಾಬ್ದಾರಿ ಯುವಕರ ಮೇಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಯುವಕರಿಗೆ ಪ್ರಾದೇಶಿಕ ಇತಿಹಾಸ ಜ್ಞಾನ ಎಲ್ಲಾ ಹಂತದಲ್ಲೂ ಸಹಕಾರಿಯಾಗುತ್ತದೆ. ನಮ್ಮ ಶಿಕ್ಷಣ ವ್ಯವಸ್ಥೆ ಸರಿಯಾಗಿದ್ದಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ತಯಾರಿ ಇಲ್ಲದೇ ಬರೆದು ಪಾಸಾಗಬಹುದು. ಆದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮ ಇತಿಹಾಸವನ್ನು ತಿಳಿಸುವ ಹೊರತಾಗಿ ಬೇರೆಯ ಸಂಗತಿಗೆ ಪ್ರಾಧಾನ್ಯತೆ ನೀಡಿದ ಕಾರಣ ನಾಗರಿಕ ಸೇವಾ ಪರೀಕ್ಷೆಯೇ ಒಂದು ಪದವಿ ಕೋರ್ಸ್ನಂತಾಗಿದೆ. ಹಾಗಾಗಿ ಪರೀಕ್ಷೆಗಾಗಿ ಓದುವ ಪ್ರವೃತ್ತಿ ಹೆಚ್ಚಾಗಿ ಯುವಕರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಆದರೆ ಯಾವಾಗ ನನ್ನ ದೇಶದ ಕುರಿತು ತಿಳಿದುಕೊಳ್ಳಬೇಕು ಎಂಬ ಉತ್ಸಾಹದಿಂದ ಅಧ್ಯಯನ ಮಾಡಲಾಗುತ್ತದೆಯೋ ಆಗ ಸ್ಪರ್ಧಾತ್ಮಕ ಪರೀಕ್ಷೆಯ ಹಾದಿ ಅತ್ಯಂತ ಸುಖಕರವಾಗಿರುತ್ತದೆ ಎಂದು ಅಭಿಪ್ರಾಯ ಪಟ್ಟರು.

ಸ್ಪರ್ಧಾತ್ಮಕ ಪರೀಕ್ಷೆಗಾಗಿ ನಡೆಸುವ ತಯಾರಿ ನಮ್ಮ ವ್ಯಕ್ತಿತ್ವವನ್ನು ಉತ್ತಮಗೊಳಿಸುತ್ತದೆ. ರಾಷ್ಟ್ರದ ಯಾವುದೇ ಭಾಗಕ್ಕೆ ಹೋದರೂ ಅಲ್ಲಿನ ಪ್ರಾದೇಶಿಕತೆಗೆ ಒಗ್ಗಿಕೊಳ್ಳುವುದಕ್ಕೆ ನಮ್ಮ ಅಧ್ಯಯನ ಸಹಕಾರಿಯಾಗುತ್ತದೆ. ರಾಷ್ಟ್ರದ ಕುರಿತಾದ ಆಳವಾದ ಅಧ್ಯಯನ ಪಠ್ಯಪುಸ್ತಕದಲ್ಲಿರದ ನಮ್ಮ ನಾಡಿನ ಗತವೈಭವವನ್ನು, ಸಾಧನೆಗಳನ್ನು ತಿಳಿಯುವಲ್ಲಿ ಸಹಕಾರಿಯಾಗುತ್ತದೆ. ಇಷ್ಟಪಟ್ಟು ಕಲಿಯುವುದಕ್ಕೆ ಯುವಕರು ಮುಂದಾಗುತ್ತಾರೆಂದರೆ ನಾಗರಿಕ ಸೇವಾ ಪರೀಕ್ಷಾ ತಯಾರಿ ಒಂದು ವರ. ಇದರ ಸಹಾಯ ನೀವು ಅಧಿಕಾರಿ ಆಗದಿದ್ದರೂ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುತ್ತೀರಿ ಎಂದರು.

ನೀವು ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಅಧಿಕಾರಿಗಳಾದರೆ ಸಂತೋಷ. ಪರೀಕ್ಷೆಯನ್ನು ಪಾಸಾಗುವುದರಲ್ಲಿ ಸಫಲವಾಗದಿದ್ದರೆ ಇರುವ ಹಲವು ಅವಕಾಶಗಳ ಕುರಿತು ಗಮನವಹಿಸಬೇಕಿದೆ. ಕರ್ನಾಟಕದಲ್ಲೇ ಇರುವ ಅವಕಾಶಗಳ ಕುರಿತು ತಿಳಿಸುವುದಾದರೆ ಮೆಗಾ ಕರ್ನಾಟಕ ಯೋಜನೆಯಡಿಯಲ್ಲಿ ರಾಜ್ಯ ಮಾಡಿಕೊಂಡ ಒಪ್ಪಂದಗಳಲ್ಲಿ ಶೇ.90 ರಷ್ಟು ಅಭಿವೃದ್ಧಿ ಕಾರ್ಯಗಳು ಬೆಂಗಳೂರಿನ ಹೊರಗಡೆ ನಡೆಯಲಿದೆ. 2 ಟೈಯರ್ ಮತ್ತು 3 ಟೈಯರ್ ನಗರಗಳಲ್ಲಿ ಅಭಿವೃದ್ಧಿಯ ವೇಗ ಹೆಚ್ಚುತ್ತಿದೆ. ಪ್ರತಿ ನಾಡು ಅಭಿವೃದ್ಧಿ ಹೊಂದುವುದರಲ್ಲಿ ಯುವಕರ ಪಾತ್ರ ಹೆಚ್ಚಿದೆ ಎಂದು ನುಡಿದರು.

ಶತಮಾನಗಳ ಹಿಂದೆ ಅತ್ಯಂತ ಗೌರವಾನ್ವಿತರು ರಾಜಕೀಯದಲ್ಲಿ ಭಾಗವಹಿಸುತ್ತಿದ್ದರು. ಆದರೆ ಕಾರಣಾಂತರಗಳಿಂದ ರಾಜಕೀಯ ಕ್ಷೇತ್ರದ ಕುರಿತು ಋಣಾತ್ಮಕ ಭಾವನೆ ಇದೆ. ಯುವಕರು ಅತ್ಯಂತ ಸಕ್ರಿಯವಾಗಿ ರಾಜಕೀಯದಲ್ಲಿ ಭಾಗವಹಿಸುವ ಮೂಲಕ ಈ ಕ್ಷೇತ್ರವನ್ನು ಉತ್ತಮಗೊಳಿಸಬೇಕಿದೆ. ಸ್ವಲ್ಪ ಸಮಯವನ್ನು ಕೊಟ್ಟು ಎಲ್ಲಾ ಪಕ್ಷವನ್ನು, ಅಭ್ಯರ್ಥಿಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಯುವಕರು ಮಾಡಬೇಕು. ಅಭಿವೃದ್ಧಿಯ ದೃಷ್ಟಿಯಿಂದ ವ್ಯಕ್ತಿಗಿಂತ ಪಕ್ಷ ಮುಖ್ಯ ಎನ್ನುವುದನ್ನು ಅರಿಯಿರಿ. ತಪ್ಪದೇ ಮತದಾನ ಮಾಡಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಲವು ನಾಗರಿಕ ಸೇವಾ ಪರೀಕ್ಷಾ ತರಬೇತಿ ಕೇಂದ್ರಗಳ ವಿದ್ಯಾರ್ಥಿಗಳು, ತರಬೇತುದಾರರು, ಶಿಕ್ಷಣ ತಜ್ಞರು ಹಾಗೂ ಚಿಂತಕರು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.