ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರು ಇತ್ತೀಚೆಗೆ ನಿಧನರಾದ ಸುಪ್ರಸಿದ್ಧ ಗಮಕ ಕಲಾವಿರು, ಪದ್ಮಶ್ರೀ ಪುರಸ್ಕೃತ ಹಿರಿಯ ವಿದ್ವಾಂಸರಾದ ಹೊಸಹಳ್ಳಿ ಕೆ.ಆರ್.ಕೇಶವಮೂರ್ತಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆಗೆ ಆತ್ಮೀಯ ಒಡನಾಟ ಹೊಂದಿದ್ದ ಅವರು ಈ ಹಿಂದೆ ಕರ್ನಾಟಕದ ಪ್ರವಾಸದಲ್ಲಿದ್ದ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್ ಅವರೊಂದಿಗೆ ವೇದಿಕೆ ಹಂಚಿಕೊಂಡು ಮಾತನಾಡಿದ್ದರು.

ಸಂತಾಪ ಸಂದೇಶ.

ಸುಪ್ರಸಿದ್ಧ ಗಮಕ ಕಲಾವಿದ, ಪದ್ಮಶ್ರೀ ಪುರಸ್ಕೃತ ಹಿರಿಯ ವಿದ್ವಾಂಸರಾದ ಶಿವಮೊಗ್ಗದ ಹೊಸ‌ಹಳ್ಳಿಯ ಶ್ರೀ ಕೆ.ಆರ್. ಕೇಶವಮೂರ್ತಿಗಳ ನಿಧನದ ಸುದ್ದಿ ಅತೀವ ದುಃಖಕರ.

ಭಾರತೀಯ ಪರಂಪರಾಗತ ಗಮಕ ಕಲೆಯನ್ನು ಜೀವನದ ಉ‌ಸಿರಾಗಿಸಿಕೊಂಡಿದ್ದ ಕೇಶವಮೂರ್ತಿಯವರದ್ದು ಓರ್ವ ಕಲಾತಪಸ್ವಿಯ ಬದುಕು‌. ಗಮಕ ಕಲೆಯ ಮೂಲಕ ನಾಡಿನ ವಿದ್ವತ್ ಪರಂಪರೆ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿದ ಅಧ್ವರ್ಯು. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಮೇರು ಸಾಧಕ. ಈ ವರ್ಷದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು‌.

ಅವರ ವಿದ್ವತ್ತು, ಜೀವನಾನುಭವ, ತ್ಯಾಗ, ಪ್ರಾಣಿಮಾತ್ರದಲ್ಲಿ ಅವರಿಗಿದ್ದ ಪ್ರೀತಿ ಹಾಗೂ ಕರುಣೆ, ಸಮಾಜೋನ್ನತಿಯ ಬಗೆಗಿನ ಕಳಕಳಿ ಇವುಗಳನ್ನು ದೇಶ ಗುರುತಿಸಿದೆ. ಅವುಗಳು ಮುಂದಿನ ಪೀಳಿಗೆಗೆ ಆದರ್ಶದ ಉದಾಹರಣೆಯಾಗಲಿ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆಗೆ ಅನ್ಯೋನ್ಯ ಸಂಬಂಧ ಹೊಂದಿದ್ದ ಕೇಶವಮೂರ್ತಿಗಳು ಅನೇಕ ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕದಲ್ಲಿದ್ದರು. ನಮ್ಮ ಕಾರ್ಯದ ಮೇಲೆ ಸದಾ ಸ್ನೇಹಾಶೀಷಗಳನ್ನು ಧಾರೆಯೆರೆಯುತ್ತಿದ್ದರು. ಅವರ ಅಗಲಿಕೆ ನಮ್ಮೆಲ್ಲರಿಗೆ ದುಃಖ ತಂದಿದೆ.

ಅವರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ನೀಡಲಿ, ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರಿಗೆ, ಶಿಷ್ಯಕೋಟಿಗಳಿಗೆ, ಅಪಾರ ಅಭಿಮಾನಿಗಳಿಗೆ ಭಗವಂತನು ನೀಡಲಿ ಎಂದು ಸವಿನಯ ಪ್ರಾರ್ಥನೆ.

ದತ್ತಾತ್ರೇಯ ಹೊಸಬಾಳೆ.
ಸರಕಾರ್ಯವಾಹರು

ವಿ. ನಾಗರಾಜ್
ಕ್ಷೇತ್ರೀಯ ಸಂಘಚಾಲಕರು
ರಾಷ್ಟ್ರೀಯ ಸ್ವಯಂಸೇವಕ ಸಂಘ

ಬೆಂಗಳೂರು
21.12.2022

Leave a Reply

Your email address will not be published.

This site uses Akismet to reduce spam. Learn how your comment data is processed.