ವಿಜಯಪುರ : ‘ವಸುಧೈವ ಕುಟುಂಬಕಂ’ ಎನ್ನುವುದು ಭಾರತೀಯ ಸಂಸ್ಕೃತಿಯ ಮೂಲಾಧಾರ, ಈ ಉಕ್ತಿಯನ್ನು ಜೀವನದ ಉಸಿರಾಗಿಸಿಕೊಂಡು ಎಲ್ಲರೂ ಒಂದೇ ಕುಟುಂಬದ ಸದಸ್ಯರು ಎಂಬ ಭಾವನೆ ಬೆಳೆಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಕರೆ ನೀಡಿದರು.


ವಿಜಯಪುರದ ಮಹಾತ್ಮಾ ಗಾಂಧಿ ಕಾಲೋನಿಯಲ್ಲಿ ಸೇವಾ ಭಾರತಿ ಹಾಗೂ ಲೋಕಹಿತ ಟ್ರಸ್ಟ್ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ‘ಸಂವೇದನಾ’ ಎನ್ನುವ ಸೇವಾ ಪ್ರಕಲ್ಪ, ನಿತ್ಯ ಅನ್ನದಾಸೋಹ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ‌ ಸಂದೇಶ ನೀಡಿದ ಅವರು, ಜಗತ್ತೇ ಒಂದು ಕುಟುಂಬ, ಇಡೀ ವಿಶ್ವವೇ ಒಂದು‌ ಮನೆ, ಇಡೀ ತ್ರಿಲೋಕವೇ ಒಂದು ದೇಶ ಎಂಬ ಉದಾತ್ತ ಭಾವನೆಯ ಪ್ರತಿರೂಪವೇ ನಮ್ಮ ಭಾರತೀಯ ಸಂಸ್ಕೃತಿ ಎಂದರು. ಎಲ್ಲರಿಗೂ ಕಷ್ಟ, ಸುಖಗಳು ಬರುವುದು ಸಾಮಾನ್ಯ, ಕಷ್ಟಗಳು ಬಂದಾಗ ಕಷ್ಟದಲ್ಲಿರುವವರು ನಮ್ಮ ಕುಟುಂಬ ಸದಸ್ಯರೇ ಎಂದು ತಿಳಿದು ಅವರ ಸಂಕಷ್ಟಗಳಿಗೆ ಸ್ಪಂದಿಸಬೇಕು, ಅಭಯ ನೀಡಬೇಕು ಎಂದು ಕರೆ ನೀಡಿದರು.

ಶಂಕರ ಎಂದರೆ ಶಿವ, ಶಿವ ಇಡೀ ಜಗತ್ತಿಗೆ ತಂದೆ, ಹೀಗಾಗಿ ಶಿವ ಭಕ್ತರೆಲ್ಲ ಬಂಧುಗಳೇ, ಇಡೀ ತ್ರಿಲೋಕವೇ ನಮ್ಮ ದೇಶ, ಇದು ಭಾರತೀಯರ ಕಲ್ಪನೆ ಎಂದರು. ಸೇವೆ ಜೀವನದ ಭಾಗವಾಗಬೇಕು, ಸೇವೆ ಎಂದರೆ ಒಂದು ಕರ್ತವ್ಯ, ರೋಗಿ ನಮ್ಮ ಮನೆಯಲ್ಲಿದ್ದರೆ ನಾವು ಆರೈಕೆ ಮಾಡುವುದಿಲ್ಲವೇ? ಹಾಗೆಯೇ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಪ್ರತಿಯೊಬ್ಬರನ್ನೂ ಕುಟುಂಬ ಸದಸ್ಯರೆಂದು ತಿಳಿದು ಆರೈಕೆ ಮಾಡಬೇಕು ಎಂದರು.

ಅನಾಥ ಮಕ್ಕಳ ಸೇವೆ ಪ್ರತಿಯೊಬ್ಬರ ಕರ್ತವ್ಯ, ಯಾವ ಅನಾಥ ಮಕ್ಕಳಿಗೂ ತಾವು ಅನಾಥರು ಎಂಬ ಭಾವನೆ ಬರದಂತೆ ಸಮಾಜ ಅವನನ್ನು ಅಕ್ಕರೆಯಿಂದ ಕಾಣಬೇಕು, ಅವರ ಜೀವನ ರೂಪಿಸಬೇಕು ಎಂದು ಕರೆ ನೀಡಿದರು.
ನಾವೆಲ್ಲರೂ ಒಂದೇ ಎಂಬ ಭಾವನೆ ಹೃದಯದಿಂದ ಬರಬೇಕು, ಹೃದಯದಿಂದ ಸೇವೆ ಮಾಡಬೇಕು, ಒಬ್ಬರಿಗೊಬ್ಬರು ಸಹಾಯ, ಸಹಕಾರ, ಸಹಯೋಗ ನೀಡುತ್ತಾ ಜೀವನದಲ್ಲಿ ಮುನ್ನಡೆಯಬೇಕು ಈ ಸೇವಾ ಕಾರ್ಯವನ್ನೇ ಸಂಘವು ತನ್ನ ಧ್ಯೇಯವಾಗಿಸಿಕೊಂಡಿದೆ ಎಂದರು.

ಕೋವಿಡ್ ಕಾಲಘಟ್ಟದಲ್ಲಿ ಅನೇಕ ನೋವುಗಳನ್ನು‌ ನೋಡಿದ್ದೇವೆ, ಅದೇ ಸಮಯದಲ್ಲಿ ಲಕ್ಷಾಂತರ ಜನರ ನಿಸ್ವಾರ್ಥ, ಅಪರ್ಣಾ ಮನೋಭಾವದ ಸೇವೆಯನ್ನೂ ನಾವು ಗಮನಿಸಿದ್ದೇವೆ, ಈ ಸೇವೆ ನಮಗೆ ಸ್ಪೂರ್ತಿಯಾಗಲಿ, ಸೇವೆ ಮಾಡುತ್ತಾ ಮುನ್ನಡೆಯಿರಿ ಎಂದು ಸ್ಪೂರ್ತಿದಾಯಕ ಮಾತುಗಳನ್ನು ಹೇಳಿದರು. ಪ್ರಾಸ್ತಾವಿಕವಾಗಿ ಕಾಲೋನಿಯ ಶಿವಾನಂದ ನೇಕಾರ ಅವರು ಈ ಕುಷ್ಠರೋಗ ಬಂಧುಗಳ ಕಾಲೋನಿಯಲ್ಲಿ ಅನ್ನ ನೀಡುವ ಸೇವಾ ಕಾರ್ಯ ಪ್ರಾರಂಭಿಸಿದ್ದಕ್ಕೆ ಸಂತಸ‌ ವ್ಯಕ್ತಪಡಿಸಿದರು.

98ರ ದಶಕದಿಂದಲೂ ಈ ಕಾಲೋನಿಯ ಕುಷ್ಠರೋಗಿ ಬಂಧುಗಳ ಸಲುವಾಗಿ ದಿ. ವೆಂಕಟೇಶ ಗುರುನಾಯಕರವರು ನಮಗೆಲ್ಲಾ ಜೀವನ‌ ನೀಡಿದ ಪುಣ್ಯಾತ್ಮರು ಎಂದರು.

ಕುಷ್ಠರೋಗಿ ಬಂಧುಗಳ ಜೊತೆಗೆ ಸರಕಾರ್ಯವಾಹರಾದ ದತ್ತಾತ್ರೆಯ ಹೋಸಬಾಳೆಯವರು ಸಹಪಂಕ್ತಿ ಭೋಜನ ಮಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರೀಯಸಂಘಚಾಲಕ ವಿ.ನಾಗರಾಜ, ಕ್ಷೇತ್ರಿಯ ಕಾರ್ಯವಾಹ ನಾ.ತಿಪ್ಪೆಸ್ವಾಮಿ, ಪ್ರಾಂತ‌ಕಾರ್ಯವಾಹ ರಾಘವೇಂದ್ರ ಕಾಗವಾಡ, ಪ್ರಾಂತ ಪ್ರಚಾರಕ ನರೇಂದ್ರ ಲೋಕಹಿತ ಟ್ರಸ್ಟನ ಶ್ರೀಧರ ನಾಡಗೀರ ವಿಭಾಗಸಂಘಚಾಲಕ ಚಿದಂಬರ ಕರಮರಕರ, ಜಿಲ್ಲಾ ಸಂಘ ಚಾಲಕ‌ ಡಾ ಸತೀಶ ಜಿಗಜಿನ್ನಿ ಸೇವಾ ಭಾರತಿ ಟ್ರಸ್ಟ ಅಧ್ಯಕ್ಷ ಬಾಬುರಾವ, ಟ್ರಸ್ಟಿ ಚಂದ್ರಶೇಖರ ಗೋಕಾಕ, ರಮೇಶ,‌ಪ್ರಾಂತ ಸಂಯೋಜಕ ಶಂಕರ ಗುಮಾಸ್ತೆ, ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.