Dr. Ambedkar, Founder and Chairman, the Peple's Education Society; in his office at Siddharth College, Anand Bhawan, Fort, Mumbai in 1946.

ನವರಿ ೧೫ ೨೦೧೮ ರ ಪುಂಗವ ಪಾಕ್ಷಿಕದಲ್ಲಿ ಪ್ರಕಟವಾದ ದೀರ್ಘ ಲೇಖನವನ್ನು ಇಲ್ಲಿ ಪ್ರಕಟಿಸಲಾಗಿದೆ. ಸೆಕ್ಯುಲರಿಸಂ ಸಿದ್ದಾಂತದ ಉದ್ಭವ ಹಾಗೂ ನಮ್ಮ ದೇಶದಲ್ಲಿ ಅದು ಹೊಕ್ಕಿ ರಾಜಕೀಯ ದಾಳವಾಗಿ ಕೆಲಸ ಮಾಡುತ್ತಿರುವ ಬಗ್ಗೆ, ಜನರ ನಡುವೆ ತಂದೊಡ್ಡಿರುವ ಸಮಸ್ಯೆಗಳ ಕುರಿತಾಗಿ ಈ ಲೇಖನ

ಕೆಲವು ದಿನಗಳ ಹಿಂದೆ ಲೋಕಸಭೆಯ ಅಧಿವೇಶನದಲ್ಲಿ ಸಂವಿಧಾನ, ಸೆಕ್ಯುಲರಿಸಂ ಮತ್ತು ಡಾ| ಬಿ. ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಕೆಲವು ದಿನಗಳ ಕಾಲ ಗದ್ದಲವುಂಟಾಗಿತ್ತು. ಕೇಂದ್ರದ ಮಂತ್ರಿಯೊಬ್ಬರು ಸಮಾರಂಭವೊಂದರಲ್ಲಿ ಮಾಡಿದ ಭಾಷಣವೇ ಲೋಕಸಭೆಯಲ್ಲಿನ ಗದ್ದಲಕ್ಕೆ ವಿಷಯವಾಯಿತು. ಸೆಕ್ಯುಲರಿಸಂ ಎಂಬುದು ವ್ಯಕ್ತಿಯ ಒಂದು ಗುರುತು ಅಥವಾ ಕುಲವಾಗಲು ಸಾಧ್ಯವಿಲ್ಲ. ನಮ್ಮ ಧರ್ಮ, ಜಾತಿ ಅಥವಾ ರಿಲಿಜನ್‍ಗಳೇ ನಮ್ಮ ಅಸ್ಮಿತೆ (ಐಡೆಂಟಿಟಿ). ಹಾಗೆಯೇ ಸೆಕ್ಯುಲರಿಸಂ ಎನ್ನುವುದು ಸಂವಿಧಾನದಲ್ಲಿದೆ ಎಂದ ಮಾತ್ರಕ್ಕೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎನ್ನುವುದು ಸರಿಯಲ್ಲ. ನಮ್ಮ ದೇಶಕ್ಕೆ ಸರಿಹೊಂದದ ಮತ್ತು ಇಲ್ಲಿ ಅಪಾರ್ಥಕ್ಕೊಳಗಾಗಿ ಅನರ್ಥಗಳನ್ನು ಸೃಷ್ಟಿಸುತ್ತಿರುವ ಸೆಕ್ಯುಲರಿಸಂ ನಮಗೆ ಬೇಕೇ ಎಂಬುದು ಪ್ರಶ್ನಾರ್ಹ. ಅಗತ್ಯ ಇದ್ದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರಬಹುದು, ಇಂತಹ ಅನೇಕ ತಿದ್ದುಪಡಿಗಳು ಈಗಾಗಲೇ ನಮ್ಮ ಸಂವಿಧಾನದಲ್ಲಿ ಆಗಿವೆ. – ಇವಿಷ್ಟು ಅವರ ಮಾತಿನ ತಾತ್ಪರ್ಯ. ಇದನ್ನೇ ದಾಳವಾಗಿಟ್ಟುಕೊಂಡು ಆ ಸಚಿವರು ರಾಜೀನಾಮೆ ಕೊಡಬೇಕು ಎಂಬುದು ವಿರೋಧ ಪಕ್ಷಗಳ ಆಗ್ರಹವಾಗಿತ್ತು.

ಸೆಕ್ಯುಲರಿಸಂನ ಮೂಲ ಯಾವುದು?
ಇದರ ಸುತ್ತ ನಡೆದ ರಾಜಕೀಯವೆಲ್ಲವನ್ನು ಬದಿಗಿಟ್ಟು, ಜವಾಬ್ದಾರಿಯುತ ನಾಗರಿಕರಾಗಿ ಇದನ್ನು ನಾವು ಅವಲೋಕಿಸೋಣ. ಈ ಸೆಕ್ಯುಲರಿಸಂ ಎನ್ನುವುದು ಹೇಗೆ ಉಗಮವಾಯಿತು ಮತ್ತು ಅದು ನಮ್ಮ ದೇಶಕ್ಕೆ ಹೇಗೆ ಬಂತು ಎನ್ನುವುದರ ಇತಿಹಾಸವನ್ನು ನಾವು ಸ್ವಲ್ಪ ಗಮನಿಸಬೇಕು. ಯುರೋಪಿನಲ್ಲಿ ಸರ್ಕಾರದ ಮೇಲೆ ಚರ್ಚಿನ ನಿಯಂತ್ರಣ ಹೆಚ್ಚಾದಾಗ ಅಲ್ಲಿನ ಚಿಂತಕರು ಅದನ್ನು ತಪ್ಪಿಸುವುದಕ್ಕೋಸ್ಕರ ಪ್ರಸ್ತುತಪಡಿಸಿದ ಚಿಂತನೆಯೇ ಸೆಕ್ಯುಲರಿಸಂ. ಸರ್ಕಾರದ ಮೇಲೆ ಯಾವುದೇ ರಿಲಿಜನ್ನಿನ (ಅಂದರೆ ಚರ್ಚಿನ) ನಿಯಂತ್ರಣ ಇರಬಾರದು, ಸರ್ಕಾರ ಮತ್ತು ರಿಲಿಜನ್‍ಗಳು ಪ್ರತ್ಯೇಕವಾಗಿರಬೇಕು, ಸರ್ಕಾರ ಯಾವುದೇ ರಿಲಿಜನ್ನನ್ನು ದೇಶದ ಅಧಿಕೃತ ರಿಲಿಜನ್ನು ಎಂದು ಘೋಷಿಸಬಾರದು ಎನ್ನುವುದು ಈ ಚಿಂತನೆಯ ಸಾರ. ಅಲ್ಲಿನ ಸಮಾಜಕ್ಕೆ ಅಂದು ತುರ್ತಾಗಿ ಬೇಕಾಗಿದ್ದ ಚಿಂತನೆ ಇದು. ಪ್ರತಿಯೊಂದರಲ್ಲೂ ಚರ್ಚು ಮೂಗು ತೂರಿಸುವುದನ್ನು ನೋಡಿ ಜನರಿಗೂ ಒಂದು ರೀತಿಯಲ್ಲಿ ಸಾಕಾಗಿಹೋಗಿದ್ದರಿಂದ, ಸೆಕ್ಯುಲರಿಸಂ ಯುರೋಪಿನಲ್ಲಿ ಬಹಳ ಬೇಗ ಜನಪ್ರಿಯವಾಯಿತು. 19ನೇ ಶತಮಾನದಲ್ಲಿ ನಡೆದ ಕತೆ ಇದು. ಭಾರತದಲ್ಲಿ ಆಳ್ವಿಕೆ ನಡೆಸಿದ ಬ್ರಿಟಿಷರೂ ಕೂಡ ತಮ್ಮದು ಸೆಕ್ಯುಲರ್ ಸರ್ಕಾರ ಎಂದು ಎಂದೂ ಹೇಳಿಕೊಂಡಿರಲಿಲ್ಲ. ಕ್ರಿಶ್ಚಿಯಾನಿಟಿಗೆ ರಾಜಾರೋಷವಾಗಿಯೇ ಅವರು ಪ್ರೋತ್ಸಾಹಿಸುತ್ತಿದ್ದುದು ನಮಗೆ ಗೊತ್ತೇ ಇದೆ.

ಭಾರತಕ್ಕೆ ಸೆಕ್ಯುಲರಿಸಂ ಬಂದುದು ಹೇಗೆ?
1950ರಲ್ಲಿ ನಮ್ಮದೇ ಸಂವಿಧಾನ ಬಂತಷ್ಟೇ. ಆಗಲೂ ಭಾರತದ ಸಂವಿಧಾನದಲ್ಲಿ ಸೆಕ್ಯುಲರಿಸಮ್ಮಿನ ಉಲ್ಲೇಖವೇ ಇರಲಿಲ್ಲ.

1946ರಲ್ಲಿಯೇ ಸಂವಿಧಾನ ರಚನಾ ಸಮಿತಿಯಲ್ಲಿದ್ದ ಪ್ರೊ| ಕೆ. ಟಿ. ಷಾ ಎಂಬುವವರು ನಮ್ಮ ದೇಶವನ್ನು `ಸೋಷಿಯಲಿಸ್ಟ್, ಸೆಕ್ಯುಲರ್, ಫೆಡರಲ್‘ ಗಣರಾಜ್ಯವೆಂದು ನಮ್ಮ ಸಂವಿಧಾನದಲ್ಲಿ ಘೋಷಿಸಬೇಕೆಂದು ವಾದ ಮಂಡಿಸಿದ್ದರು. ಆದರೆ, ಅದನ್ನು ಡಾ| ಬಿ. ಆರ್. ಅಂಬೇಡ್ಕರ್ ತಿರಸ್ಕರಿಸಿದರು.ನಮ್ಮ ಸಂವಿಧಾನದ ಕರಡಿನಲ್ಲಿ ಜಾತ್ಯತೀತ ಮತ್ತು ಸರ್ವಮತಧರ್ಮ ಸಮಭಾವದ ಕಲ್ಪನೆಗಳು ಈಗಾಗಲೇ ಇವೆ. ಹಾಗೆಯೇ, ಪ್ರತಿ ಪ್ರಜೆಗೂ ಮತೀಯ ಸ್ವಾತಂತ್ರ್ಯವನ್ನು ಕೊಡಲಾಗಿದೆ. ಸರ್ಕಾರ ಯಾವುದೇ ಮತಪ್ರಸಾರ ಮಾಡುವ ಸಂಸ್ಥೆಗಳಿಗೆ ಅನುದಾನ ನೀಡಬಾರದು ಎಂಬ ಅಂಶಗಳೂ ಇವೆ. ಮತ್ತು, ಸೆಕ್ಯುಲರಿಸಂ ಎಂಬುದು ಯುರೋಪಿನಲ್ಲಿ ಚರ್ಚು ಮತ್ತು ಸರ್ಕಾರದ ನಡುವಿನ ಸಂಬಂಧವನ್ನು ನಿಗದಿಪಡಿಸುವ ಸಿದ್ಧಾಂತ; ನಮ್ಮಲ್ಲಿ ಸರ್ಕಾರದ ಆಡಳಿತದಲ್ಲಿ ಚರ್ಚು ಮಧ್ಯಪ್ರವೇಶ ಮಾಡುವ ಸಮಸ್ಯೆ ಇಲ್ಲವಾದ್ದರಿಂದ ನಮಗೆ ಸೆಕ್ಯುಲರಿಸಂ ಸಿದ್ಧಾಂತ ಅಗತ್ಯವಿಲ್ಲವೆಂಬುದು ಡಾ| ಬಿ. ಆರ್. ಅಂಬೇಡ್ಕರ್ ಮತ್ತು ಸಂವಿಧಾನ ರಚನಾ ಸಮಿತಿಯ ಹೆಚ್ಚಿನವರ ಅಭಿಪ್ರಾಯವಾಗಿತ್ತು.

ಹಾಗೆಯೇ ಸೋಷಿಯಲಿಸಂ ಎಂಬುದು ಸಮಾಜದ ರಚನೆ ಹೇಗಿರಬೇಕು ಎಂಬ ವಿಷಯವಾದ್ದರಿಂದ ಅದು ಸಂವಿಧಾನದ ವ್ಯಾಪ್ತಿಗೆ ಬರುವುದಿಲ್ಲ; ಸಾಮಾಜಿಕ ರಚನೆ ಹೇಗಿರಬೇಕು ಎನ್ನುವುದನ್ನು ಕಾಲಕಾಲಕ್ಕೆ ಬರುವ ಸಾಮಾಜಿಕ ಚಿಂತಕರು ನಿರ್ಧರಿಸಿ ಮಾರ್ಗದರ್ಶನ ಮಾಡಬೇಕೇ ಹೊರತು, ಸಂವಿಧಾನದಲ್ಲಿ ಹೇಳಬೇಕಾದ ವಿಷಯವಲ್ಲ; ಸಂವಿಧಾನವೆನ್ನುವುದು ಕೇವಲ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕಾರ್ಯಕಲಾಪಗಳನ್ನು ನಿಯಂತ್ರಿಸುವ ಮಾರ್ಗಸೂಚಿಯೇ ಹೊರತು ಸಮಾಜವನ್ನು ನಿಯಂತ್ರಿಸುವ ಮಾರ್ಗಸೂಚಿಯಲ್ಲ ಎಂದು ಅಂಬೇಡ್ಕರ್ ಅವರು ಸ್ಪಷ್ಟವಾಗಿ ಹೇಳಿದ್ದರು. ಹಾಗಾಗಿ, `ಸೋಷಿಯಲಿಸ್ಟ್, ಸೆಕ್ಯುಲರ್ ಮತ್ತು ಫೆಡರಲ್’ ಎಂಬ ಶಬ್ದಗಳನ್ನು ನಮ್ಮ ಸಂವಿಧಾನದಲ್ಲಿ ಸೇರಿಸಲಿಲ್ಲ.
ಹಾಗಾದರೆ, ನಮ್ಮ ಸಂವಿಧಾನದಲ್ಲಿ ಸೋಷಿಯಲಿಸ್ಟ್ ಮತ್ತು ಸೆಕ್ಯುಲರ್ ಶಬ್ದಗಳು ಬಂದಿದ್ದು ಯಾವಾಗ ಎನ್ನುವುದು ಒಂದು ಪ್ರಶ್ನೆ.

1975ರಲ್ಲಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಹೇರಿದ್ದರಷ್ಟೇ. ಆಗ, ಸಂವಿಧಾನಕ್ಕೆ 42ನೇ ತಿದ್ದುಪಡಿಯನ್ನು ತರಲಾಯಿತು. ಇಡೀ ಸಂವಿಧಾನದ ಮೂಲಸ್ವರೂಪವನ್ನೇ ಬದಲಾಯಿಸಿ ಸರ್ಕಾರಕ್ಕೆ ಸರ್ವಾಧಿಕಾರ ಕೊಡುವಂತಹ, ಜನರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವಂತಹ ಅನೇಕ ಬದಲಾವಣೆಗಳನ್ನು 42ನೇ ತಿದ್ದುಪಡಿಯಲ್ಲಿ ಮಾಡಲಾಯಿತು. ಅದರಲ್ಲಿ ಭಾರತ `ಸೋವೆರಿನ್ ಸೋಷಿಯಲಿಸ್ಟ್ ಸೆಕ್ಯುಲರ್ ಡೆಮಾಕ್ರಟಿಕ್ ರಿಪಬ್ಲಿಕ್’ ಎಂಬ ತಿದ್ದುಪಡಿಯೂ ಒಂದು. ಭಾರತದ ಸಂದರ್ಭದಲ್ಲಿ ಸೆಕ್ಯುಲರ್ ಎನ್ನುವುದಕ್ಕೆ ಏನು ಅರ್ಥ ಎಂಬ ವಿವರಣೆಗಳು ನಮ್ಮ ಸಂವಿಧಾನದಲ್ಲಿ ಎಲ್ಲಿಯೂ ಇಲ್ಲ!

ಯುರೋಪಿನ ಸೆಕ್ಯುಲರಿಸಂ ಯಾವ ಸಮಸ್ಯೆಯನ್ನು ಪರಿಹರಿಸಿತೋ ಆ ಸಮಸ್ಯೆ ಇಲ್ಲಿ ಇರಲೇ ಇಲ್ಲ. ಹಾಗಾದರೆ, ಸೆಕ್ಯುಲರಿಸಂ ಅನ್ನು ಏಕೆ ಇಲ್ಲಿ ತುರುಕಲಾಯಿತು ಎನ್ನುವುದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಅದಕ್ಕೆ `ಜಾತ್ಯತೀತ’ ಎನ್ನುವುದೇ ಅರ್ಥವಾದರೆ, ನಮ್ಮ ಸಂವಿಧಾನದಲ್ಲಿ ಅದು ಮೊದಲೇ ಇತ್ತು. ಹಾಗಾಗಿ, ಸೆಕ್ಯುಲರಿಸಂ ಎಂಬ ಹೊಸ ಸಿದ್ಧಾಂತದ ಅಗತ್ಯವಿರಲಿಲ್ಲ. ಹೀಗೆ ಈ ಶಬ್ದವನ್ನು ಸೇರಿಸಿ ನಮ್ಮ ರಾಜಕೀಯದಲ್ಲಿ ಇನ್ನಷ್ಟು ಗೊಂದಲ ಸೃಷ್ಟಿ ಮಾಡಿತು ಇಂದಿರಾ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಸರ್ಕಾರ. ಅಲ್ಲಿಂದ ಮುಂದೆ, ರಾಜಕೀಯ ಪಕ್ಷಗಳು ತಮಗೆ ಬೇಕಾದ ಹಾಗೆ ಇದನ್ನು ಅರ್ಥೈಸಿ, ಅದನ್ನು ತಮ್ಮ ದಾಳವಾಗಿ ಉಪಯೋಗಿಸಿಕೊಂಡು ಬಂದಿದ್ದನ್ನು ನಾವು ನೋಡಿದ್ದೇವೆ.
ಹೀಗೆ ವಿವಿಧ ಜನರ ಮನದಲ್ಲಿ ವಿವಿಧ ಅರ್ಥಗಳನ್ನು ಪಡೆಯುತ್ತಾ ಇಂದು `ಸೆಕ್ಯುಲರಿಸಂ’ ಎಂದರೆ ಅಲ್ಪಸಂಖ್ಯಾತ ತುಷ್ಟೀಕರಣ ಎಂಬಲ್ಲಿಗೆ ಅದು ಬಂದು ನಿಂತಿದೆ. ಸೆಕ್ಯುಲರ್ ಎಂದು ಹೇಳಿಕೊಳ್ಳುವ ಎಲ್ಲ ರಾಜಕೀಯ ಪಕ್ಷಗಳೂ, ಬುದ್ಧಿಜೀವಿಗಳೂ ಅದರ ಹೆಸರಿನಲ್ಲಿ ಮಾಡುತ್ತಿರುವುದು ಮಾತ್ರ ಅಲ್ಪಸಂಖ್ಯಾತ ತುಷ್ಟೀಕರಣ ಮತ್ತು ಹಿಂದುಗಳ ದಮನ. ಹೋಗಲಿ, ಅದಕ್ಕೆ ಜಾತ್ಯತೀತ ಎಂಬ ಅರ್ಥ ಕೊಟ್ಟರೂ ಅದು ಆಚರಣೆಯಲ್ಲಿ ಎಲ್ಲೂ ಕಾಣಿಸುತ್ತಿಲ್ಲ. ಸೆಕ್ಯುಲರ್ ಎಂದು ಹೇಳಿಕೊಳ್ಳುವ ಹೆಚ್ಚಿನವರು ಜಾತಿ ರಾಜಕೀಯದಲ್ಲಿ ತೊಡಗಿರುವುದನ್ನೂ, ಒಂದು ಜಾತಿಯನ್ನು ಇನ್ನೊಂದು ಜಾತಿಯ ವಿರುದ್ಧ ಎತ್ತಿ ಕಟ್ಟುತ್ತಿರುವುದನ್ನೂ ನಾವು ನೋಡುತ್ತಿದ್ದೇವೆ. ಸೆಕ್ಯುಲರಿಸಂ ಅನ್ನು ಹೀಗೆಯೇ ಅರ್ಥೈಸಿ ಆಚರಿಸುವುದಾದರೆ, ಅದು ಬೇಕೆಂದು ಯಾರು ತಾನೇ ಹೇಳಿಯಾರು? ಹಾಗಾಗಿ, ಅದು ಹೋಗುವುದೇ ಸರಿ ಎನ್ನುವ ಅಭಿಪ್ರಾಯ ಹೆಚ್ಚಿನ ಜನರದ್ದಾಗಿದೆ ಎನ್ನುವುದು ನಮ್ಮೆಲ್ಲರಿಗೂ ಗಮನಕ್ಕೆ ಬಂದಿರುವ ವಿಷಯವೇ.

ಹಿಂದು ಚಿಂತನೆಯಲ್ಲಿ ಜಾತ್ಯತೀತತೆ
ಭಾರತ ಹಿಂದುರಾಷ್ಟ್ರ. ಬ್ರಿಟಿಷರು ಇಲ್ಲಿಗೆ ಬರುವ ಮೊದಲಿನಿಂದಲೂ ಇಲ್ಲಿನ ಆಡಳಿತದಲ್ಲಿ ಜಾತಿ ಆಧರಿತ ಭೇದ ಅಥವಾ ರಿಲಿಜನ್ ಆಧರಿತ ಭೇದ ಇರಲೇ ಇಲ್ಲ. ಹಿಂದು ರಾಜರು ಯಾವತ್ತೂ ಜೆಜಿಯಾದಂತಹ ತಲೆಗಂದಾಯ ಹೇರಿದ ಉದಾಹರಣೆಗಳಿಲ್ಲ. ಜಾತಿ ಜಾತಿಗಳ ನಡುವೆ ಭೇದ ಮತ್ತು ಅಸ್ಪೃಶ್ಯತೆಗಳಂತಹ ಆಚರಣೆಗಳಿದ್ದವಾದರೂ, ಜಾತಿಯ ಆಧಾರದ ಮೇಲೆ ಸರ್ಕಾರದ ಕಾನೂನು ಒಬ್ಬೊಬ್ಬರಿಗೆ ಒಂದೊಂದು ತರಹ ಇದ್ದ ಉದಾಹರಣೆಗಳಿಲ್ಲ. ರಿಲಿಜನ್, ಸಂಪ್ರದಾಯ, ನಂಬಿಕೆ, ಪೂಜಾಪದ್ಧತಿಗಳೆಲ್ಲ ಪ್ರತಿ ವ್ಯಕ್ತಿಯ ಸ್ವಾತಂತ್ರ್ಯ ಎನ್ನುವುದು ಹಾಗೂ ಅಂತಹ ವಿವಿಧ ಸಂಪ್ರದಾಯ, ಪೂಜಾಪದ್ಧತಿಗಳನ್ನು ಗೌರವಿಸುವುದು ಹಿಂದು ವಿಚಾರ. ಹಾಗಾಗಿ, ಸರ್ವಮತಸಮಭಾವವೆನ್ನುವುದು ಹಿಂದುವಿಗೆ ತನ್ನ ರಕ್ತದಲ್ಲೇ ಬಂದಿರುವ ಸ್ವಭಾವ. ಈ ದೃಷ್ಟಿಯಲ್ಲಿ ಹಿಂದುಗಳು ಸಹಜವಾಗಿಯೇ ಜಾತ್ಯತೀತರು.
ಇಂದು ರಾಜಕೀಯ ಪಕ್ಷಗಳು ಜಾತಿಪ್ರಜ್ಞೆಯನ್ನು ಜಾಗೃತಗೊಳಿಸಿ ಅದರ ಆಧಾರದಲ್ಲಿ ರಾಜಕೀಯ ಮಾಡುತ್ತಿರುವುದು ತಮ್ಮ ಸ್ವಾರ್ಥಕ್ಕಾಗಿಯೇ ಹೊರತು, ಅದು ಹಿಂದುವಿನ ಸಹಜ ಸ್ವಭಾವವಲ್ಲ. ಇಲ್ಲಿ ಆಡಳಿತ, ಶಿಕ್ಷಣ, ವ್ಯಾಪಾರ, ಕೃಷಿ, ಕೈಗಾರಿಕೆ ಇವೆಲ್ಲ ಬೇರೆ ಬೇರೆ ಜಾತಿಯವರ ವೃತ್ತಿಗಳಾಗಿದ್ದವೇ ಹೊರತು ಎಲ್ಲವನ್ನೂ ಒಂದೇ ವರ್ಣ ಅಥವಾ ಜಾತಿಯವರು ಮಾಡುತ್ತಿದ್ದ ಉದಾಹರಣೆಗಳು ಇಲ್ಲವೇ ಇಲ್ಲ. ಎಲ್ಲ ಜಾತಿಗಳಲ್ಲಿ ಸಾಮರಸ್ಯವಿತ್ತು, ಸಹಕಾರವಿತ್ತು. ಜಾತಿದ್ವೇಷವಿರಲಿಲ್ಲ. ಅಷ್ಟಕ್ಕೂ, ಎಲ್ಲರೂ, ಎಲ್ಲವೂ ದೇವರೇ; ಎಂಬ ಅದ್ವೈತ ಸಿದ್ಧಾಂತವನ್ನು ಹೇಳಿದ ಹಿಂದು ಧರ್ಮದಲ್ಲಿ ಮನುಷ್ಯ ಮನುಷ್ಯ ನಡುವೆ ಭೇದಕ್ಕೆ ಅವಕಾಶವಾದರೂ ಎಲ್ಲಿದೆ?
ಒಟ್ಟಿನಲ್ಲಿ, ಡಾ| ಬಿ. ಆರ್. ಅಂಬೇಡ್ಕರ್ ಬೇಡವೆಂದು ಹೇಳಿದ್ದ ಸೆಕ್ಯುಲರಿಸಂ ಅನ್ನು ನಮ್ಮ ಸಂವಿಧಾನದಲ್ಲಿ ಸೇರಿಸಿದರೆ ಅವರಿಗೆ ಅಪಮಾನ ಮಾಡಿದ ಹಾಗೋ ಅಥವಾ ಅದನ್ನು ತೆಗೆದು ಆದ ತಪ್ಪನ್ನು ಸರಿಪಡಿಸಿದರೆ ಅವರಿಗೆ ಅಪಮಾನ ಮಾಡಿದ ಹಾಗೋ ಎನ್ನುವುದು ಯೋಚಿಸಬೇಕಾದ ವಿಷಯ. ಹಾಗೆಯೇ, ಸೆಕ್ಯುಲರಿಸಂನಿಂದ ನಮಗೆ ಲಾಭವಾಗಿದೆಯೇ ಅಥವಾ ನಷ್ಟವಾಗಿದೆಯೇ ಎನ್ನುವುದೂ ಕೂಡ ಚರ್ಚೆಯಾಗಬೇಕಾದ ವಿಷಯ. ಸೆಕ್ಯುಲರಿಸಂ ಎಂದರೆ ಕೇವಲ ಜಾತ್ಯತೀತತೆಯಾಗಿ ಇಂದು ಉಳಿಯದೇ, ಅದು ಅಲ್ಪಸಂಖ್ಯಾತ ತುಷ್ಟೀಕರಣವಾಗಿದೆ ಎನ್ನುವುದೂ ಈ ಚರ್ಚೆ ನಡೆಯುವಾಗ ನಮ್ಮ ಗಮನದಲ್ಲಿರಬೇಕಾದ ವಿಷಯ.

Leave a Reply

Your email address will not be published.

This site uses Akismet to reduce spam. Learn how your comment data is processed.