ಬೆಂಗಳೂರು, 12, ಜನವರಿ, 2024: ಸ್ವಾಮಿ ವಿವೇಕಾನಂದರು ವಿಶ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿದ ನಂತರ ಬದುಕಿದ್ದು ಕೇವಲ 9 ವರ್ಷಗಳು ಮಾತ್ರ. ಆದರೆ ವೈಚಾರಿಕ ಜಗತ್ತಿನಲ್ಲಿ ಅವರು ಬೀರಿರುವ ಪರಿಣಾಮ ಅತ್ಯಂತ ಮಹತ್ವವಾದದ್ದು. ಅವರು ತಮ್ಮ ಭಾರತಭಕ್ತಿಯಿಂದ ಕೋಟ್ಯಾಂತರ ಭಾರತೀಯ ತರುಣರಲ್ಲಿ ಪ್ರೇರಣೆಯ ದೀಪವಾಗಿ ಪ್ರಜ್ವಲಿಸುತ್ತಾರೆ ಎಂದು ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಸಹ ಸಂಯೋಜಕ ರಘುನಂದನ ಹೇಳಿದರು.
ಸಮರ್ಥ ಭಾರತದ ವತಿಯಿಂದ ನಡೆಯುತ್ತಿರುವ ‘ಬಿ ಗುಡ್ ಡು ಗುಡ್’ ಅಭಿಯಾನದ ಆನ್ ಲೈನ್ ಉಪನ್ಯಾಸ ಸರಣಿಯ ಎರಡನೇ ದಿನ ಅವರು ಮಾತನಾಡಿದರು.
ಭಾರತದಲ್ಲಿ ವೇದಾಂತ ಹೊಸತಲ್ಲ. ಆದರೆ ಅವುಗಳನ್ನು ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಹೋರಾಟದ, ಸಕ್ರಿಯತೆಯ ಚೈತನ್ಯವಾಗಿ ಬಳಸುವ ಅಗತ್ಯವಿದೆ. ಭಾರತ ದಾಸ್ಯದ ಸಂಕೋಲೆಯಿಂದ ಬಿಡುಗಡೆ ಹೊಂದಬೇಕಾದರೆ ಬೇರೆ ದೇವರುಗಳನ್ನೆಲ್ಲಾ ಗಂಟು ಮೂಟೆ ಕಟ್ಟಿ ಹಾಕಿ, ಮುಂದಿನ 50 ವರ್ಷ ಭಾರತ ಮಾತೆಯನ್ನು ಪೂಜಿಸುವ ಸಮಾಜದ ನಿರ್ಮಾಣವಾಗಬೇಕು. ಅದಕ್ಕಾಗಿ ಸದೃಢವಾದ ಶರೀರ, ಸಕ್ರಿಯವಾದ ಮನಸ್ಸುಳ್ಳ ಯುವಕರು ಬೇಕು ಎನ್ನುವುದನ್ನು ವಿವೇಕಾನಂದರು ತಿಳಿಸಿದ್ದರು ಎಂದರು.
ನಾಡಿನ ಯುವಕರು ಸಮಸ್ಯೆಗಳಿಗೆ ಗೊಣಗದೆ, ಭಾರತವೆಂಬ ಹಡಗನ್ನು ಮತ್ತೊಮ್ಮೆ ಸುಸ್ಥಿತಿಗೆ ತಂದು, ಮಾನವತೆಯ ಕಲ್ಯಾಣವಾಗಲು ಸಿದ್ಧರಾಗಬೇಕು. ಭಾರತದ ಕೆಲಸ ದೇವರ ಕೆಲಸವೆಂಬಂತೆ ಶ್ರಮವಹಿಸಬೇಕು. ಭಾರತದ ತತ್ತ್ವಜ್ಞಾನ, ಸಂಸ್ಕೃತಿ, ಪ್ರಾಚೀನ ವಿಜ್ಞಾನದ ಬಗ್ಗೆ ತಿಳಿದುಕೊಂಡು, ಅವುಗಳಲ್ಲಿರುವಂತೆ ನಡೆಯಬೇಕು. ಭಾರತದ ಕುರಿತು ಕಲಿತಿದ್ದನ್ನು ಇತರರಿಗೆ ತಿಳಿಸಿ, ಭಾರತದ ಸಮಸ್ಯೆಯನ್ನು ತಮ್ಮ ಪರಿವಾರದ ಸಮಸ್ಯೆಯೆಂಬಂತೆ ಭಾವಿಸಿ ಅವುಗಳಿಗೆ ಪರಿಹಾರವನ್ನು ಹುಡುಕುವ ಗುಣಗಳನ್ನು ಯುವಕರು ರೂಢಿಸಿಕೊಳ್ಳಬೇಕೆಂದು ಸ್ವಾಮಿ ವಿವೇಕಾನಂದರು ಅಪೇಕ್ಷಿಸಿದ್ದರು ಎಂದು ತಿಳಿಸಿದರು.
ಭಾರತ ಜಗತ್ತಿನ ಸಮಸ್ಯೆಗಳಿಗೆ ಅಲಿಪ್ತವಾಗಿರದೆ ಅವುಗಳನ್ನು ಬಗೆಹರಿಸಲು ಎಲ್ಲಾ ರೀತಿಯ ಶಕ್ತಿಯನ್ನು ಗಳಿಸಬೇಕು. ಇತ್ತೀಚೆಗಿನ ದಿನಗಳಲ್ಲಿ ಭಾರತ ಅಭಿವೃದ್ಧಿಯತ್ತ ಇಟ್ಟಿರುವ ಮೊದಲ ಹೆಜ್ಜೆ, ಮುಂದೆ ದೃಢವಾದ ಹೆಜ್ಜೆಯಾಗಬೇಕು. ಇದಕ್ಕೆ ಭಾರತದ ಯುವಕರ ಬಗ್ಗೆ ವಿಶ್ವಾಸವಿರಬೇಕು. ಯುವಕರು ಸೇವೆ ಮಾಡುವುದನ್ನು ತಮ್ಮ ಸೌಭಾಗ್ಯವೆಂದು ಭಾವಿಸಬೇಕು. ಸಾಮಾಜಿಕ ಜಾಲತಾಣಗಳನ್ನು ಉತ್ತಮ ವಿಚಾರಗಳನ್ನು ಹಂಚಲು ಬಳಸಬೇಕು. ಜನರ ನಡುವೆ ಕೆಲಸ ಮಾಡಲು ತಿಳಿದಿರಬೇಕು. ತ್ವರಿತವಾಗಿ ಬರುವ ವಿಷಯಗಳನ್ನು ಸ್ವೀಕರಿಸಬೇಕು ಎಂದು ಅಭಿಪ್ರಾಯಪಟ್ಟರು.