ಬೆಂಗಳೂರು, 12 ಜನವರಿ 2023: ನಮ್ಮ ದೇಶದಲ್ಲಿ ಅನೇಕ ಮತ ಪಂಥ ವಿಚಾರಗಳು ನಿರಂತರವಾಗಿ ಬೆಳೆದು ಬಂದಿವೆ. ಅವುಗಳ ನೇತೃತ್ವವನ್ನು ವಹಿಸಿದಂತಹ ಹಲವಾರು ಧಾರ್ಮಿಕ ಪುರುಷರು ಆದರ್ಶಪ್ರಾಯರಾಗಿದ್ದಾರೆ. ಆದರೆ ಅಂತಹ ಅಸಂಖ್ಯಾತ ವ್ಯಕ್ತಿಗಳ ಮಧ್ಯೆಯೂ ಇಂದಿನ ಯುವಜನತೆಯ ಹೃದಯ ಸಿಂಹಾಸನದಲ್ಲಿ ಆಸೀನರಾಗಿರುವ ಆದರ್ಶ ವ್ಯಕ್ತಿ ಸ್ವಾಮಿ ವಿವೇಕಾನಂದರು ಎಂದು ನೃಪತುಂಗ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಶ್ರೀನಿವಾಸ್ ಬಳ್ಳಿ ಹೇಳಿದರು.

ಅವರು ಸಮರ್ಥ ಭಾರತ ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾಲಯದ ಎನ್ ಎಸ್ ಎಸ್ ಘಟಕದ ವತಿಯಿಂದ ಆಯೋಜಿಸಲಾದ  10ನೇ ವರ್ಷದ “ವಿವೇಕಾನಂದ ಜಯಂತಿ” ಹಾಗೂ “ರಾಷ್ಟ್ರೀಯ ಯುವದಿನ” ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾಮಿ ವಿವೇಕಾನಂದರು ಎಲ್ಲರಂತಾಗಿರಲಿಲ್ಲ.ಅವರ ಆಲೋಚನೆ, ಚಿಂತನೆ ಎಲ್ಲವೂ ಯುವಕರ ಕೇಂದ್ರಿತವಾಗಿತ್ತು. ತಮ್ಮ ಜ್ಞಾನದ ಜೊತೆಗೆ ಎಲ್ಲರೊಂದಿಗೂ ಆತ್ಮೀಯ ಭಾವನೆಯನ್ನು ಹೊಂದಿದ ಇವರಿಗೆ ಅನೇಕ ವಿದ್ವಾಂಸರು ಮಾರು ಹೋಗಿದ್ದರು. ಸಮರ್ಥ ಭಾರತ ಕಟ್ಟಲು ಸಮರ್ಥ ಯುವಕರು ಬೇಕು ಎನ್ನುವುದಕ್ಕೆ ನೈಜ ಉದಾಹರಣೆ ಸ್ವಾಮಿ ವಿವೇಕಾನಂದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಲ್.ಗೋಮತಿದೇವಿ ಮಾತನಾಡಿ, ಸಕಲ ಧರ್ಮ, ಮತ, ಪಂಥಗಳಿಂದ ಒಳಿತುಗಳನ್ನೊಳಗೊಂಡ  ವಿಶ್ವಧರ್ಮದ ಕಲ್ಪನೆಯನ್ನು ವಿದೇಶಿ ನೆಲದಲ್ಲಿ ಪ್ರಚಾರ ಮಾಡಿದವರು ಸ್ವಾಮಿ ವಿವೇಕಾನಂದರು. ಸ್ವಾಮೀಜಿ ಅವರ ವಿಶ್ವಧರ್ಮದ ಕುರಿತಾದ ವಿಚಾರಗಳನ್ನು ನಾವು ಅರಿತುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ನರಸಿಂಹ ಮೂರ್ತಿ ಮಾತನಾಡಿ,ನಮ್ಮ ಸಮಾಜದ ಮೇರು ಪರ್ವತದಂತಿದ್ದವರು ಸ್ವಾಮಿ ವಿವೇಕಾನಂದರು. ಬದುಕಿದ್ದು ಕೇವಲ 39 ವರ್ಷಗಳಾದರೂ ಭಾರತದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಪಾರ ಮತ್ತು ಚಿಂತನೆಗಳು  ಸ್ಪೂರ್ತಿದಾಯಕ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮರ್ಥ ಭಾರತದ ಮಾರ್ಗದರ್ಶಕ ಎನ್.ತಿಪ್ಪೇಸ್ವಾಮಿ ಮಾತನಾಡಿ,ಯುವಕರಿಗೆ ಆದರ್ಶ ವ್ಯಕ್ತಿಯಾಗಿ, ತಮ್ಮ ಇಡೀ ಜೀವನವನ್ನು ಸಮಾಜಕ್ಕಾಗಿ ಅರ್ಪಿಸಿ, ಯುವಕರಲ್ಲಿ ಭರವಸೆ ಮೂಡಿಸುವ ಕೆಲಸಗಳನ್ನು ಮಾಡುತ್ತಿದ್ದವರು ಸ್ವಾಮಿ ವಿವೇಕಾನಂದರು. ಒಬ್ಬ ಪರಿಪೂರ್ಣ ವ್ಯಕ್ತಿಯಾಗಬೇಕಿದ್ದರೆ ಕಲಿಕೆ ಮಾತ್ರ ಸಾಲದು, ಅದರ ಹೊರತಾಗಿ ಎಲ್ಲಾ ವಿಷಯಗಳನ್ನೂ ಅರಿತುಕೊಳ್ಳುವ ಆಸಕ್ತಿವಿರಬೇಕು ಎನ್ನುವುದಕ್ಕೆ ಸ್ವಾಮಿ ವಿವೇಕಾನಂದರು ಆದರ್ಶ ಎಂದು ಹೇಳಿದರು.

ನಮ್ಮ ರಾಷ್ಟ್ರ, ನಮ್ಮ ಗ್ರಾಮ ಎಂಬ ಹೆಮ್ಮೆ ನಮಗಿರಬೇಕು ಮತ್ತು ಅವುಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಕಾರ್ಯನಿರ್ವಹಿಸಬೇಕು‌. ಇವೆಲ್ಲದಕ್ಕೂ. ನಿರಂತರವಾದ ಪರಿಶ್ರಮ ನಮ್ಮಲ್ಲಿರಬೇಕು ಆಗ ಮಾತ್ರ ನಮ್ಮ ಸಮಾಜವನ್ನು ಸಮರ್ಥ ಭಾರತವನ್ನಾಗಿಸಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮರ್ಥ ಭಾರತ ಟ್ರಸ್ಟಿ ರಾಜೇಶ್ ಪದ್ಮಾರ್ ಪ್ರಸ್ತಾವನೆಗೈದು ಸ್ವಾಗತಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.