ಕಣ್ಣು ರಾಷ್ಟ್ರೀಯ ಆಸ್ತಿಯೆಂದು ಘೋಷಿತ ವಾಗಲಿ:
ಡಾ. ಸುಧೀರ್ ಪೈ

25 ಆಗಸ್ಟ್ 2019, ಬೆಂಗಳೂರು: ನಗರದ ಸಕ್ಷಮ ಘಟಕ ಮತ್ತು ಮಿಂಟೋ ಆಸ್ಪತ್ರೆ ಜಂಟಿಯಾಗಿ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ನೇತ್ರದಾನ ಜಾಗೃತಿ ಪಾಕ್ಷಿಕ 2019ರ ಉದ್ಘಾಟನಾ ಕಾರ್ಯಕ್ರಮದಲ್ಲಿ “ಕಾರ್ನಿಯಾ ಅಂಧತ್ವ ಮುಕ್ತ ಭಾರತ ಅಭಿಯಾನ ಮತ್ತು ರಾಷ್ಟ್ರೀಯ ನೇತ್ರದಾನ ಜಾಗೃತಿ ಪಾಕ್ಷಿಕದ ಉದ್ಘಾಟನೆ” ನೆರವೇರಿಸಿ ಮಾತನಾಡಿದ ಸಕ್ಷಮ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಡಾ. ಸುದೀರ ಪೈ ಅವರು ಕೇಂದ್ರ ಸರಕಾರ “ಕಣ್ಣನ್ನು ರಾಷ್ಟ್ರೀಯ ಆಸ್ತಿ “ಎಂದು ಘೋಷಣೆ ಮಾಡುವುದರ ಮೂಲಕ ಕಾರ್ನಿಯಾ ಸಂಬಂಧಿತ ಕುರುಡನ್ನು ದೇಶದಿಂದ ತೆಗೆದುಹಾಕಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಹೊಸ ಪರಿಕಲ್ಪನೆಯಾದ ಜುಂಬಾ ನೃತ್ಯದ ವ್ಯಾಯಾಮದ ಮೂಲಕ ಕಾಲೇಜು ವಿದ್ಯಾರ್ಥಿಗಳು ಆಸಕ್ತಿದಾಯಕವಾಗಿ ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆಯಿತು. ಮುಖ್ಯ ಅತಿಥಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಭಾರತದ ಅಂಧರ ಕ್ರಿಕೆಟ್ ನ ತಂಡದ ನಾಯಕ ಶ್ರೀ ಶೇಖರ್ ನಾಯಕ್ ತಾನು ಅಂಧತ್ವವನ್ನು ಸವಾಲಾಗಿ ಸ್ವೀಕರಿಸಿದ‌್ದರಿಂದ ಕ್ರಿಕೆಟ್ ನಲ್ಲಿ ಮುನ್ನುಗ್ಗಲು ಸಾಧ್ಯವಾಯಿತು; ನಿರಾಶೆ ಬದಲಿಗೆ ಛಲದಿಂದ ಏನನ್ನಾದರೂ ಸಾಧಿಸಲು ಸಾಧ್ಯವಿದೆ ಎಂದು ಉದಾಹರಣೆಯನ್ನ ಮುಂದಿಡುತ್ತಾ ಯುವಕರನ್ನು ಹುರಿದುಂಬಿಸಿದರು.
ಮಿಂಟೋ ಆಸ್ಪತ್ರೆಯ ವೈದ್ಯರಾದ ಡಾ. ಶ್ರೀನಿವಾಸ್ ದೇಶದ ಕಾರ್ನಿಯಾ ಅವಶ್ಯಕತೆ ಮತ್ತು ಅದರ ಸಮಸ್ಯೆ ಮತ್ತು ಪರಿಹಾರದ ಕುರಿತಾಗಿ ಮಾತನಾಡಿ ಶ್ರೀಲಂಕಾ ಹಾಗೂ ಯುರೋಪಿಯನ್ ರಾಷ್ಟ್ರಗಳು, ವ್ಯಕ್ತಿಗಳು ಮರಣ ಹೊಂದಿದ ನಂತರ ಕಣ್ಣನ್ನು ರಾಷ್ಟ್ರೀಯ ಆಸ್ತಿ ಎಂದು ಘೋಷಿಸಿದ್ದಾರೆ ಆದರೆ ಭಾರತ ಮಾತ್ರ ಈ ವಿಷಯದಲ್ಲಿ ಹಿಂದುಳಿದಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ನೇತ್ರದಾನಿಗಳ ಕುಟುಂಬದ ಸದಸ್ಯರನ್ನು ಗೌರವಿಸಲಾಯಿತು ಹಾಗೂ ಆ ನೇತ್ರದಾನದ ಕುಟುಂಬ ಸದಸ್ಯರಿಗೆ ಒಂದು ಸಸಿಯನ್ನು ದಾನಿಗಳ ಹೆಸರಿನಲ್ಲಿ ನೀಡುವುದರ ಮೂಲಕ ಇಹ ಲೋಕದಲ್ಲಿರುವ ತಮ್ಮ ಹಿರಿಯರನ್ನು ಮತ್ತೆ ಪಡೆದಷ್ಟೇ ಸಂತೋಷವಾಗಿತ್ತು. ಸೇವಾ ಇನ್ ಆಕ್ಷನ್ ಸಂಸ್ಥೆಯ ಸದಸ್ಯರು ಸಮವಸ್ತ್ರದಲ್ಲಿ ಭಾಗವಹಿಸಿ ಎಲ್ಲರ ಜೊತೆ ಎರಡು ಕಿಲೋಮೀಟರ್ ಕಣ್ಣುಕಟ್ಟಿ ನಡಿಗೆಯಲ್ಲಿ ಪಾಲ್ಗೊಂಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತು. ಕಾರ್ನಿಯಾ ಜೋಡಿಸಿ ಹೊಸದಾಗಿ ದೃಷ್ಟಿ ಪಡೆದ ವ್ಯಕ್ತಿಗಳಿಂದ ಅನುಭವ ಹಂಚಿಕೊಂಡಾಗ ಸಭೆಯಲ್ಲಿ ಒಂದು ಕ್ಷಣ ಭಾವುಕತೆಯ ಸನ್ನಿವೇಶ ನಿರ್ಮಾಣವಾಯಿತು. ಬೆಂಗಳೂರಿನ ವಿವಿಧ ಕಾಲೇಜುಗಳಿಂದ ಎನ್ಎಸ್ಎಸ್, ಎನ್ಸಿಸಿ ತಂಡಗಳು ಸೇರಿದಂತೆ 1015 ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು blindfold walk ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ಎರಡು ಕಿಲೋಮೀಟರ್ ನಡಿಗೆಯಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಬದುಕಿನುದ್ದಕ್ಕೂ ರಕ್ತದಾನ ಬದುಕಿನ ನಂತರ ನೇತ್ರದಾನ ಎಂಬ ಘೋಷಣೆಯೊಂದಿಗೆ ನೇತ್ರದಾನದ ಜೊತೆಗೆ ರಕ್ತದಾನದ ಜಾಗೃತಿಯ ಸಂದೇಶವನ್ನು ಮೊಳಗಿಸಿದರು. ಆರಂಭದಲ್ಲಿ ನಿನ್ನೆ ಅಗಲಿದ ಭಾರತದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಕೂಡ ನಮ್ಮ ಈ ಕಾಲ್ನಡಿಗೆಯಲ್ಲಿ ಪಾಲ್ಗೊಂಡಿದ್ದು ಬಹಳ ವಿಶೇಷವಾಗಿತ್ತು . ಹಾಗೂ ನಮ್ಮ ಕಾರ್ಯಕರ್ತರು ಸಾರ್ವಜನಿಕರ ಬಳಿಗೆ ಹೋಗಿ ನೇತ್ರದಾನ ಜಾಗೃತಿಯ ಬಗ್ಗೆ ಮಾಹಿತಿ ನೀಡಿದ್ದು ತುಂಬಾ ಫಲಪ್ರದದಾಯಕವಾಗಿತ್ತು. ಕಣ್ಣುಕಟ್ಟಿ ನಡಿಗೆಯ ಕಂಠೀರವ ಕ್ರೀಡಾಂಗಣದ ಮುಖ್ಯದ್ವಾರದ ಮೂಲಕ ಪ್ರಾರಂಭವಾಗಿ ಹಡ್ಸನ್ ವೃತ್ತವನ್ನು ಬಳಸಿಕೊಂಡು ಎರಡು ಕಿಲೋಮೀಟರ್ ನಡೆದು ಪುನಃ ಕಂಡಿರುವ ಕ್ರೀಡಾಂಗಣದಲ್ಲೇ ಸಮಾಪ್ತಿಯಾಯಿತು. ಪ್ರಸ್ತಾವಿಕ ನುಡಿಯಲ್ಲಿ ಸಕ್ಷಮ ಸಂಘಟನೆ, CAMBA (ಕಾಂಬ) ಕುರಿತಾಗಿ ಸಂಘಟನಾ ಕಾರ್ಯದರ್ಶಿ ಶ್ರೀ ಜಯರಾಮ್ ಬೊಳ್ಳಾಜೆ ಮಾತನಾಡಿದರು. ಕಾರ್ಯಕ್ರಮಕ್ಕೆ ವಸಂತನಗರದ ಬಿಜೆಪಿ ಕಾರ್ಪೊರೇಟರ್ ಶ್ರೀ ಸಂಪತ್ ಕುಮಾರ್ ಅವರು ಹಾಗೂ ಬೆಂಗಳೂರು ನಗರದ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷರು ಸಪ್ತಗಿರಿ ಎ ಆರ್ ಅವರು ಆಗಮಿಸಿದ್ದರು. ಸಕ್ಷಮ ಬೆಂಗಳೂರು ನಗರ ಕಾರ್ಯದರ್ಶಿ ರವಿಕುಮಾರ್ ವಿ ಕಾರ್ಯಕ್ರಮನ್ನು ನಿರೂಪಿಸಿದರು, ಹಾಗು ಪ್ರಾಂತ ಸಹ ಕಾರ್ಯದರ್ಶಿ ಹರಿಕೃಷ್ಣ ರೈ ವಂದಿಸಿದರು . ಪ್ರಾಂತ ಕಾರ್ಯದರ್ಶಿ ವಸಂತಮಾಧವ, ಕಾ೦ಬದ ಸಂಯೋಜಕ ಯೋಗೇಶ್, ಶ್ರೀಮತಿ ಲಕ್ಷ್ಮಿ ,ಶ್ರೀಮತಿ ವರದಾ ಹೆಗಡೆ , ಜಯದೇವ ಕಾಮತ್ , ರಮೇಶ್ ಪ್ರಭು. ಅರುಣ್ ಕೊಯ್ತಿಯಾರ್, ವಿಕ್ರಂ, ಉಜ್ವಲ ಸೇರಿದಂತೆ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

 

Leave a Reply

Your email address will not be published.

This site uses Akismet to reduce spam. Learn how your comment data is processed.