
ಸುದ್ದಿಯಾಗದ್ದು… ಆಗಬೇಕಾದ್ದು!
– ಹರ್ಷವರ್ಧನ್ ಶೀಲವಂತ, ಪತ್ರಕರ್ತರು, ಪತ್ರಿಕೋದ್ಯಮ ಪ್ರಾಧ್ಯಾಪಕರು, ಧಾರವಾಡ.
ವ್ಯವಸ್ಥೆ ಬಗ್ಗೆ ರೇಜಿಗೆ ಹುಟ್ಟಿ, ಇದ್ದವರಿಗೆ, ಉಳ್ಳವರಿಗೆ ಎಲ್ಲ ಇದೆ ಎಂಬ ಖಾತ್ರಿ ಅಣಕವಾಡುತ್ತಿರುವಾಗ, ಧಾರವಾಡದಲ್ಲಿ ನನ್ನ ಕೆಲ ಮಿತ್ರರು ಜೀವವೊಂದನ್ನು ಸಾವಿನ ದವಡೆಯಿಂದ ಪಾರು ಮಾಡಿದ ಸುದ್ದಿ, ಜೀವನ ಒರತೆಯನ್ನು ಜೀವಂತವಾಗಿಟ್ಟ ಸಮಾಧಾನ ನಾನು ಅನುಭವಿಸಿದೆ.
ಮಿತ್ರರಾದ ಸಂತೋಷ ಪೂಜಾರಿ, ಸೋಮೇಶ ಪಟ್ಟಣಕೋಡಿ, ಮಂಜುನಾಥ ಮಕ್ಕಳಗೇರಿ, ಗಣೇಶ್ ಭೋಸ್ಲೆ, ಲಿಂಗರಾಜ ನಾಯ್ಕರ್, ನಾಗರಾಜ ಬೈಲ್ ಗಾಣಗೇರ, ಹನುಮಂತ ಕಡೇಮನಿ ಹಾಗೂ ಗುರುಶಾಂತಯ್ಯ ಹಿರೇಮಠ ಸೇರಿ, ಸಂಗೊಳ್ಳಿ ರಾಯಣ್ಣನಗರದಲ್ಲಿ ೬೧ ವರ್ಷದ ನಾಗರಾಜ ಸಜ್ಜನ ಎಂಬ ವ್ಯಕ್ತಿ ಕೋವಿಡ್ ಸೋಂಕಿಗೆ ತುತ್ತಾಗಿ ಮೃತಪಟ್ಟು, ೩ ದಿನಗಳಾಗಿವೆ! ಎಂಬ ಹೃದಯವಿದ್ರಾವಕ ಮಾಹಿತಿ ಬೆನ್ನು ಹತ್ತಿ ಖಾತ್ರಿ ಪಡಿಸಿಕೊಳ್ಳಲು ಅಲ್ಲಿಗೆ ತೆರಳುತ್ತಾರೆ.
ಅಕ್ಕಪಕ್ಕದವರ ಪ್ರಕಾರ, ಪಾಳು ಬಿದ್ದ ಶೆಡ್ ನಲ್ಲಿ ಕಳೆದ ಹಲವಾರು ವರ್ಷಗಳಿಂದ ಬದುಕುತ್ತಿರುವ ನಾಗರಾಜ್, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಅಕ್ಕಪಕ್ಕದವರು ನೀಡುವ ತಿಂಡಿ, ಊಟ ಉಂಡು ತನ್ನ ಪಾಡಿಗೆ ತಾನು ಇದ್ದವರು. ಇತ್ತೀಚೆಗೆ ಚಿತ್ತ ಭ್ರಮಣೆ ಆದಂತೆ ವರ್ತಿಸಲು ಆರಂಭಿಸಿದ್ದರಂತೆ. ಮನೆಯಿಂದ ಆಚೆ ಬರದೇ ಇದ್ದುದರಿಂದ, ದುರ್ವಾಸನೆ ಬರಲಾರಂಭಿಸಿದ ಹಿನ್ನೆಲೆ, ‘ಸತ್ತೇ ಹೋದ’ ಎಂದು ಮಾಹಿತಿ ನೀಡಿದ್ದರು!
ಮನೆ ಬಾಗಿಲು ತೆರೆದು ಒಳ ಹೋದ ನನ್ನ ಗೆಳೆಯಂದಿರಿಗೆ ಕಂಡದ್ದು, ಜೀವಂತ ವ್ಯಕ್ತಿಯ ಪಶು ಸದೃಷ ಜೀವನ. ಬೆತ್ತಲೆಯಾಗಿ ಮಲಗಿ, ಅನ್ನ-ನೀರಿಲ್ಲದೇ ಸಾವಿನ ಮನೆಯ ಕದ ಹಂತಹಂತವಾಗಿ ತಟ್ಟುತ್ತ ಬಂದಿದ್ದ ನಾಗರಾಜ ಸಜ್ಜನ ಕಂಡರು.
ಕೂಡಲೇ ಅವರನ್ನು ಉಪಚರಿಸಿ, ಬಟ್ಟೆ ತೊಡಿಸಿ, ಸಂಬಂಧಿಕರ ಮಾಹಿತಿ ಪಡೆದು ಸಂಪರ್ಕಿಸಿದರೆ, ಹುಬ್ಬಳ್ಳಿಯಲ್ಲಿರುವ ಅವರ ತಮ್ಮ ಸಿಕ್ಕರು. ಸಂಬಂಧಿಕರ ಆಸ್ತಿಯಲ್ಲಿ ಬದುಕುತ್ತಿರುವ ಅಣ್ಣನ ವೃತ್ತಾಂತ ಅವರೇ ವಿವರಿಸಿದರು. ಕೂಡಲೇ ಆಂಬುಲೆನ್ಸ್ ತಂದು, ಅವರನ್ನು ಹತ್ತಿಸಿಕೊಂಡು, ಸಿವಿಲ್ ಆಸ್ಪತ್ರೆಗೆ ತಂದು ಕೋವಿಡ್ ಸೋಂಕು ಖಾತ್ರಿ ಪಡಿಸಿಕೊಳ್ಳಲು ಪರೀಕ್ಷೆಗಳನ್ನು ನಡೆಸಿ, ಸಕಾಲಿಕ ಔಷಧಿ, ಗ್ಲುಕೋಸ್, ಸಲೈನ್ ಒದಗಿಸಿದರು.
ಬಳಿಕ ಧಾರವಾಡದ ಮಾನಸಿಕ ಆರೋಗ್ಯ ಚಿಕಿತ್ಸೆ ಆಸ್ಪತ್ರೆಗೆ ಕರೆ ತಂದು, ದಾಖಲಿಸಿ, ಸಂಬಂಧಿಕರಿಗೆ ಮಾಹಿತಿ ನೀಡಿ, ಚಿಕಿತ್ಸೆ, ಆಪ್ತ ಸಮಾಲೋಚನೆ ಫಾಲೋ ಅಪ್ ವ್ಯವಸ್ಥೆ ಮಾಡುವಂತೆ ತಿಳಿಸಿ, ನಿತ್ಯ ಒಂದು ಬಾರಿ ತಾವೂ ಸ್ವತಃ ಅವರ ಆರೋಗ್ಯದ ಸ್ಥಿತಿ-ಗತಿ ಮೇಲೆ ನಿಗಾವಹಿಸಿದ್ದಾರೆ.


ಎರಡನೇ ದಿನವಾದ ಇಂದು ನಾಗರಾಜ ಅವರ ಆರೋಗ್ಯ ಸ್ಥಿರವಾಗಿದೆ. ಚೇತರಿಸಿಕೊಂಡಿದ್ದಾರೆ. ಕೋವಿಡ್ -೧೯ ಮ್ಯೂಟೇಷನ್ ವೈರಸ್ ಮತ್ತು ಬ್ಲ್ಯಾಕ್ ಮ್ಯೂಕಸ್ ಕೂಡ ಹಬ್ಬಿ, ಹರಡುತ್ತಿರುವ ಈ ಕಾಲ ಘಟ್ಟದಲ್ಲಿ ತಮ್ಮ ವಯಕ್ತಿಕ ಆರೋಗ್ಯ, ಕುಟುಂಬದ ಭವಿಷ್ಯ ಕೂಡ ಲೆಕ್ಕಿಸದೇ ಮನುಷ್ಯತ್ವ ಬದುಕಿಸುವ ಕೆಲಸ ಮಾಡುತ್ತಿದ್ದಾರೆ. “ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ” ಎಂಬ ಮಾತನ್ನು ಚರ್ಮವಾಗಿಸಿಕೊಂಡವರು, ಇವರು ಧಾರವಾಡದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು.
ಇಲ್ಲಿಯ ವರೆಗೆ ಧಾರವಾಡ ನಗರ ಮತ್ತು ಗ್ರಾಮೀಣ ಸೇರಿ ಕಳೆದ ೭ ದಿನಗಳಲ್ಲಿ, ೧೭ ಶವಗಳಿಗೆ ಈ ತಂಡ ಮುಕ್ತಿ ದೊರಕಿಸಿದೆ. ಆ ಪೈಕಿ, ೪ ಜನ ಕೋವಿಡ್ ಸೋಂಕಿತರು. ಇವರು, ತಮ್ಮ ನಡೆಯಿಂದ ಸಾವಿಗೊಂದು ಘನತೆ ಇದೆ ಎಂದು ತೋರಿಸಿದವರು. ಇಹದ ವ್ಯಾಪಾರ ಮುಗಿಸಿದ ಆತ್ಮಗಳಿಗೆ ಸದ್ಗತಿ, ಅವರ ಕುಟುಂಬಕ್ಕೆ ನೆಮ್ಮದಿ ಕರುಣಿಸಿದ, ಕೋವಿಡ್ ಕೋವಿದರು. ತಮ್ಮ ವೃತ್ತಿ, ವ್ಯಾಪಾರ, ವ್ಯವಸಾಯ ಎಲ್ಲ ಬದಿಗೊತ್ತಿ, ಜೀವ ಒತ್ತೆ ಇಟ್ಟು, ಈ ಮಿತ್ರರು ಮನುಷ್ಯತ್ವದಲ್ಲಿ ನಮ್ಮ ನಂಬಿಕೆ ಉಳಿಸಿದ್ದಾರೆ. ಅವರಿಗೆ ಭಗವಂತ ಆಯುರಾರೋಗ್ಯ ಭಾಗ್ಯ ಅಕ್ಷಯವಾಗಿಸಲಿ..
ನಮ್ಮ ಲೋಕ ಸಂಸಾರವನ್ನು ಬೆಳಗಿಸುವ ಇಂತಹ ಸಮಾಜವೊಂದಿಗರಾದ ಹನುಮನ ನಿಷ್ಠೆಯ ದೀಪಗಳೇ ನಮ್ಮ ನಾಳೆಗಳ ಭರವಸೆ. ಭಗವಂತನ ಸ್ವಂತದ ಜನ!
