Dr. Mohan Bhagwat, Sarsanghachalak, RSS

ಸರಿತಪ್ಪುಗಳನ್ನು ವಿಮರ್ಶೆ ಮಾಡುತ್ತಾ ಪರಸ್ಪರ ಆರೋಪ ಮಾಡುತ್ತಾ ಕೂರುವ ಕಾಲವಿದಲ್ಲ, ಬದಲಿಗೆ ಎಲ್ಲರೂ ಪರಸ್ಪರ ಭೇದ ಮರೆತು ಒಟ್ಟಾಗಿ ಕೆಲಸ ಮಾಡಬೇಕಾದ್ದು ಇಂದಿನ ಅಗತ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು. ಪಾಸಿಟಿವಿಟಿ ಅನ್ಲಿಮಿಟೆಡ್ ಉಪನ್ಯಾಸ ಮಾಲಿಕೆಯ ಐದನೆಯ ಹಾಗೂ ಕಡೆಯ ದಿನದಂದು ಅವರು ಮಾತನಾಡುತ್ತಿದ್ದರು.

ಪುಣೆಯಲ್ಲಿ ಉದ್ಯಮಿಗಳು, ವೈದ್ಯರು, ರಾಜಕಾರಣಿಗಳು, ಸರ್ಕಾರಿ ಆಡಳಿತ ಯಂತ್ರ ಎಲ್ಲರೂ ಸೇರಿ ಒಂದು ತಂಡ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ. ಅಂತಹ ಪ್ರಯತ್ನಗಳು ಎಲ್ಲೆಡೆ ನಡೆಯಲಿ ಎಂದು ಅವರು ಆಶಿಸಿದರು.

ಅನೇಕ ಕುಟುಂಬಗಳು ತಮ್ಮವರನ್ನು ಕಳೆದುಕೊಂಡ ದುಃಖದಲ್ಲಿವೆ. ಹಲವು ಕಡೆಗಳಲ್ಲಿ ದುಡಿಯುವ ಕೈಗಳೇ ಇಲ್ಲವಾಗಿವೆ. ಇಂತಹ ಕುಟುಂಬಗಳಿಗೆ ಸಾಂತ್ವನ ಹೇಳಬೇಕಾದ್ದು ನಮ್ಮೆಲ್ಲರ ಮೊದಲ ಜವಾಬ್ದಾರಿ. ಕೊರೊನಾ ಬಹಳ ದೊಡ್ಡ ಸವಾಲು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಅದರ ಬಗ್ಗೆ ಚಿಂತಿಸುತ್ತಾ ನಾವು ಮಾನಸಿಕವಾಗಿ ದುರ್ಬಲರಾಗಬಾರದು. ನಿರಾಶಾದಾಯಕವಾದ ಪರಿಸ್ಥಿತಿ ಇಂದು ನಮ್ಮ ಮುಂದಿಲ್ಲ. ಆದರೆ, ಸವಾಲಿನ ಸಂದರ್ಭವಿದೆ. ಅದನ್ನು ನಾವು ಒಟ್ಟಾಗಿ ಎದುರಿಸಿ ಮುನ್ನಡೆಯಬೇಕು ಎಂದರು.

ಈ ತರಹದ ಸಾಂಕ್ರಾಮಿಕಗಳು ಈ ಮೊದಲೂ ನಮ್ಮನ್ನು ಬಾಧಿಸಿವೆ. ಸಂಘ ಸ್ಥಾಪಕರಾದ ಡಾ. ಹೆಡಗೇವಾರ್ ಅವರ ಬಾಲ್ಯದಲ್ಲಿಯೇ ಅವರ ತಂದೆತಾಯಿಯರು ಪ್ಲೇಗ್ ರೋಗಕ್ಕೆ ಬಲಿಯಾದರು. ಆದರೆ, ಇದರಿಂದ ಅವರ ಮನಸ್ಸು ದೃಢವಾಯಿತು. ಈ ಸಮಾಜದ ಬಗ್ಗೆ ಕಹಿ ಭಾವನೆ ಅವರಲ್ಲಿರಲಿಲ್ಲ. ಅವರು ಅತ್ಯಂತ ಸ್ನೇಹಮಯ ವ್ಯಕ್ತಿತ್ವವುಳ್ಳವರಾಗಿ ಬೆಳೆದರು. ಸಮಾಜಸೇವೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡರು ಎಂದು ಈ ಮೊದಲಿನ ಪ್ಲೇಗ್ ಸಾಂಕ್ರಾಮಿಕದ ಬಗ್ಗೆ ನೆನಪಿಸಿದರು.

ಭಾರತೀಯರಾದ ನಮಗೆ ಜನನ ಮರಣ ಪುನರ್ಜನ್ಮಗಳು ಸಹಜವೇ. ಎಲ್ಲರೂ ಒಂದು ದಿನ ಹೋಗುವವರೇ. ಹಾಗಾಗಿ, ನಮ್ಮವರನ್ನು ಕಳೆದುಕೊಂಡೆವೆಂದು ನಿರಾಶರಾಗಿ ಕುಳಿತುಕೊಳ್ಳುವುದು ಸರಿಯಲ್ಲ. ಬ್ರಿಟನ್ನಿನ ಪ್ರಧಾನಿಯಾಗಿದ್ದ ಚರ್ಚಿಲ್ ಅವರ ಕಚೇರಿಯಲ್ಲಿ ಒಂದು ಫಲಕವಿತ್ತಂತೆ. ‘ನಿರಾಶಾವಾದಕ್ಕೆ ಇಲ್ಲಿ ಅವಕಾಶವಿಲ್ಲ. ಸೋಲಿನ ಸಾಧ್ಯತೆಗಳ ಬಗ್ಗೆ ನಮಗೆ ಆಸಕ್ತಿಯಿಲ್ಲ. ಅಂತಹ ಸಾಧ್ಯತೆಯೇ ಇಲ್ಲ’ ಎಂದು ಅದರಲ್ಲಿ ಬರೆದಿತ್ತಂತೆ. ಹಾಗೆಯೇ, ನಾವು ಗೆಲ್ಲುವವರೇ ಎಂಬ ವಿಶ್ವಾಸವನ್ನು ಇಡೀ ರಾಷ್ಟ್ರದಲ್ಲಿ ಅವರು ತುಂಬಿದರು. ಅತ್ಯಂತ ಕಷ್ಟಕರವಾದ ಪರಿಸ್ಥಿತಿಯಲ್ಲೂ ಎರಡನೇ ಮಹಾಯುದ್ಧದಲ್ಲಿ ಇಂಗ್ಲೆಂಡ್ ಗೆದ್ದಿತು. ದೇಶವನ್ನು ಒಂದುಗೂಡಿಸಿ ವಿಶ್ವಾಸ ತುಂಬಲು ಮಹಾಯುದ್ಧವನ್ನು ಒಂದು ಅವಕಾಶವಾಗಿ ಅವರು ಬಳಸಿಕೊಂಡರು. ನಾವೂ ಕೂಡಾ ಇದನ್ನೊಂದು ಅವಕಾಶವೆಂದು ಬಳಸಿಕೊಂಡು ಒಂದಾಗಬೇಕಿದೆ ಎಂದು ಇತಿಹಾಸದ ಉದಾಹರಣೆ ನೀಡಿದರು.

ಸಮುದ್ರಮಥನ ಮಾಡುವಾಗ ಅನೇಕ ರತ್ನಗಳು ಸಿಕ್ಕಿದವು ಎಂದು ತೃಪ್ತರಾಗಿ ಮಥನವನ್ನು ನಿಲ್ಲಿಸಲಿಲ್ಲ. ಹಾಲಾಹಲ ವಿಷಕ್ಕೆ ಹೆದರಲೂ ಇಲ್ಲ. ಅಮೃತ ಬರುವವರೆಗೆ ಮಥನವನ್ನು ಮುಂದುವರಿಸಿದರು. ಕೊನೆಗೂ ದೇವತೆಗಳಿಗೆ ಅಮೃತ ಸಿಕ್ಕಿತು. ಹಾಗೆಯೇ, ಧೈರ್ಯಶಾಲಿಗಳಿಗೆ ಅಂತಿಮ ಜಯ ಸಿಗುವವರೆಗೆ ವಿಶ್ರಾಂತಿಯಿಲ್ಲ ಎಂದರು.

ಜಾಗ್ರತೆ ಮತ್ತು ಸಕ್ರಿಯತೆ ಇವೆರಡೂ ಬಹಳ ಮುಖ್ಯ. ಯೋಗ, ಪ್ರಾಣಾಯಾಮ, ಓಂಕಾರ ಇವನ್ನೆಲ್ಲ ಅಭ್ಯಾಸ ಮಾಡುತ್ತಾ ನಮ್ಮನ್ನು ನಾವು ಸದೃಢವಾಗಿಟ್ಟುಕೊಳ್ಳಬೇಕು. ಆರೋಗ್ಯಕರ ಆಹಾರವನ್ನು ಸೇವಿಸೋಣ. ವೈಜ್ಞಾನಿಕ ಮಾನಸಿಕತೆಯ ಅಗತ್ಯವೂ ಇಂದು ಇದೆ. ಯಾವುದೇ ಔಷಧಿ ತೆಗೆದುಕೊಳ್ಳುವ ಮುನ್ನ ಅದರ ಬಗ್ಗೆ ತಜ್ಞರನ್ನು ಕೇಳಿ ತಿಳಿದು ನಿರ್ಣಯಿಸಬೇಕು. ಸುಮ್ಮನೆ ಯಾರೋ ಹೇಳಿದರು ಎಂದು ಪರಾಮರ್ಶೆ ಮಾಡದೇ ತೆಗೆದುಕೊಳ್ಳಬಾರದು. ಹಳೆಯದೆಲ್ಲ ಒಳ್ಳೆಯದು, ಹೊಸದೆಲ್ಲ ಕೆಟ್ಟದ್ದು ಎಂಬುದೂ ಸರಿಯಲ್ಲ. ಅಥವಾ ಹೊಸದನ್ನು ಸ್ವೀಕರಿಸುತ್ತಾ, ಹಳೆಯದನ್ನು ತ್ಯಜಿಸುವುದೂ ಸರಿಯಲ್ಲ. ಇವತ್ತಿನ ಸಂದರ್ಭಕ್ಕೆ ಯಾವುದು ಸೂಕ್ತ ಎಂದು ಯೋಚಿಸಿ ಅಂತಹದ್ದನ್ನು ಸ್ವೀಕರಿಸುವ ವಿವೇಕ ನಮ್ಮಲ್ಲಿರಬೇಕು. ವ್ಯಕ್ತಿಗತ ಅಂತರ, ಮಾಸ್ಕ್ ಧಾರಣೆ, ಸ್ವಚ್ಛತೆ ಇವನ್ನೆಲ್ಲ ಸದಾ ಪಾಲಿಸುವ ಜಾಗ್ರತೆ ಯಾವಾಗಲೂ ಇರಲಿ. ಒಂದು ವೇಳೆ ಸೋಂಕು ತಗುಲಿದರೆ ಔಷಧೋಪಚಾರ ಮಾಡಲು ತಡ ಮಾಡಬಾರದು. ಆಸ್ಪತ್ರೆಯ ವಾತಾವರಣಕ್ಕೆ ಹೆದರಿ ಮನೆಯಲ್ಲೇ ಉಳಿಯುವುದೂ ಅಪಾಯಕರವಾದೀತು. ಅಥವಾ ವಿಪರೀತ ಜಾಗ್ರತೆ ಮಾಡಿ, ಆಸ್ಪತ್ರೆಯ ಅಗತ್ಯವಿಲ್ಲದಿರುವವರೂ ಆಸ್ಪತ್ರೆಗೆ ದಾಖಲಾದರೆ, ನಿಜವಾಗಿ ಅಗತ್ಯವಿರುವ ರೋಗಿಗಳಿಗೆ ಜಾಗ ಸಿಗದಿರಬಹುದು. ಇವನ್ನೆಲ್ಲ ಯೋಚಿಸಿ ವೈದ್ಯರ ಸಲಹೆಯ ಮೇರೆಗೆ ನಡೆದುಕೊಳ್ಳೋಣ.

ನಾವು ಇದನ್ನೆಲ್ಲ ಮಾಡುವುದು ಮಾತ್ರವಲ್ಲ, ಜನರಲ್ಲಿ ಈ ಬಗ್ಗೆ ಜಾಗೃತಿ ಮಾಡುವುದೂ ಅತಿ ಮುಖ್ಯ. ಜನರಿಗೆ ಬೇಕಾದ ಆಸ್ಪತ್ರೆ, ಆಕ್ಸಿಜನ್ ಇತ್ಯಾದಿ ಸೌಲಭ್ಯ ಒದಗಿಸುವಲ್ಲಿ ಅನೇಕರು ತೊಡಗಿದ್ದಾರೆ. ಅವರೊಂದಿಗೆ ನಾವೂ ಸೇರಿಕೊಳ್ಳೋಣ.

ಮಕ್ಕಳ ಶಿಕ್ಷಣ ಈ ವರ್ಷವೂ ಸ್ವಲ್ಪ ಏರುಪೇರಾಗಬಹುದು. ಪರೀಕ್ಷೆ, ಅಂಕಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮನೆಯಲ್ಲೇ ಅವರಿಗೆ ಸಾಧ್ಯವಾದಷ್ಟು ಶಿಕ್ಷಣ ಕೊಡೋಣ. ಅನೇಕರಿಗೆ ಉದ್ಯೋಗಕ್ಕೆ ತೊಂದರೆಯಾಗಿದೆ. ಇದರಿಂದ ನಮ್ಮ ಆರ್ಥಿಕತೆಗೆ ತೊಂದರೆಯಾಗಲಿದೆ. ಉದ್ಯೋಗದ ಅಗತ್ಯವಿರುವವರಿಗೆ ಕೌಶಲ್ಯ ತರಬೇತಿ ಕೊಡುವ ಮೂಲಕ, ಆರ್ಥಿಕ ಸಂಕಷ್ಟಕ್ಕೊಳಗಾದವರಿಂದ ಖರೀದಿ ಮಾಡುವ ಮೂಲಕ ನಮ್ಮ ಆರ್ಥಿಕತೆಗೆ ಬಳ ತುಂಬಬಹುದು ಎಂದರು.

ಇಂದು ನಮ್ಮೆದುರಿರುವ ಕೋವಿಡ್ ಸವಾಲು ನಮ್ಮಲ್ಲಿನ ಗುಣದೋಷಗಳನ್ನು ಎತ್ತಿ ತೋರಿಸುತ್ತದೆ. ಸದ್ಗುಣಗಳನ್ನು ಪ್ರಕಟಿಸುತ್ತಾ, ದೋಷಗಳನ್ನು ಸರಿಪಡಿಸಿಕೊಳ್ಳುತ್ತಾ ಮುನ್ನಡೆಯಲು ಇದೊಂದು ಅವಕಾಶ. ಇದು ನಮ್ಮ ಧೈರ್ಯದ ಪರೀಕ್ಷೆ ಅಷ್ಟೇ. ತಾತ್ಕಾಲಿಕ ಅಡೆತಡೆಗಳಿಂದ ನಿರಾಶರಾಗದೇ ಮುನ್ನುಗ್ಗುವ ಧೈರ್ಯವನ್ನು ನಾವು ತೋರಬೇಕಾಗಿದೆ. ಈ ಉಪನ್ಯಾಸ ಸರಣಿಯಲ್ಲಿ ಮಾತನಾಡಿದ ಸಮಾಜದ ಹಿರಿಯರೂ ಇದೇ ಮಾತನ್ನು ಹೇಳಿದ್ದಾರೆ. ಅಂತಿಮ ವಿಜಯ ನಮ್ಮದೇ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದರಲ್ಲಿ ವಿಶ್ವಾಸವಿಟ್ಟು ಮುನ್ನಡೆಯೋಣ ಎಂದು ಡಾ. ಭಾಗವತ್ ಹೇಳಿದರು.

ಅನೇಕ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿರುವ ಕೊರೊನಾ ರೆಸ್ಪಾನ್ಸ್‌ ಟೀಮ್‌ ಆಶ್ರಯದಲ್ಲಿ ನಡೆದ ಐದು ದಿನಗಳ “ಪಾಸಿಟಿವಿಟಿ ಅನ್‌ಲಿಮಿಟೆಡ್‌ – ನಾವು ಗೆದ್ದೇ ಗೆಲ್ಲುತ್ತೇವೆ” ಉಪನ್ಯಾಸ ಸರಣಿಯಲ್ಲಿ ಸದ್ಗುರು ಜಗ್ಗಿ ವಾಸುದೇವ್‌, ಆರ್ಟ್ ಆಫ್‌ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್‌ಜೀ, ಕಾಂಚಿ ಮಠದ ಪೂಜ್ಯ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಸ್ವಾಮಿಗಳು, ಉದ್ಯಮಿ ಅಝಿಮ್‌ ಪ್ರೇಮ್‌ಜೀ, ಸಾಧ್ವಿ ರಿತಂಬರಾ ಮೊದಲಾದ ಗಣ್ಯರು ಸಮಾಜದಲ್ಲಿ ಧನಾತ್ಮಕತೆ ಬೀರುವ ಸಂದೇಶಗಳನ್ನು ನೀಡಿದ್ದಾರೆ.

Leave a Reply

Your email address will not be published.

This site uses Akismet to reduce spam. Learn how your comment data is processed.